|
ಡಾ. ಯು. ಆರ್ ಅನಂತಮೂರ್ತಿ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ |
ಬ್ರಿಟಿಷ್ ಭಾರತದ ಸಂದರ್ಭದಲ್ಲಿ ಭಾರತೀಯ ಬೇರೆ- ಬೇರೆ ಭಾಷೆಗಳ ಸಾಹಿತ್ಯದ ನಡುವಿನ ಸಂಬಂಧ ಈಗಿನದಕ್ಕಿಂತ ಭಿನ್ನವಾಗಿತ್ತು. ರಾಜಕೀಯವಾಗಿ ನಾವು ಬ್ರಿಟಿಷರ ನಿಯಂತ್ರಣದಲ್ಲಿದ್ದರೂ ಸಾಂಸ್ಕೃತಿಕವಾಗಿ ನಮ್ಮದೇ ಆದ ಅವಕಾಶವನ್ನು ನಾವು ಪಡೆದಿದ್ದೆವು. ಬೇರೆ- ಬೇರೆ ಭಾಷೆಗಳ ಸಾಹಿತ್ಯವನ್ನು ಜನ ಓದುವ, ಆ ಲೇಖಕರ ಬಗ್ಗೆ ಚರ್ಚಿಸುವ ಮನಸ್ಥಿತಿ ಎಲ್ಲಾ ಭಾಷೆಗಳಲ್ಲೂ ಇತ್ತು. ಬಂಗಾಳಿ ಭಾಷೆ ಕೃತಿಗಳ ಬಗ್ಗೆಯಂತೂ ಎಲ್ಲಾ ಭಾರತೀಯರು ಆಸಕ್ತರಾಗಿದ್ದರು. ಆದರೆ, ಕ್ರಮೇಣ ಆ ಅವಕಾಶದಿಂದ ನಾವು ದೂರವಾದೆವು.
ಬ್ರಿಟಿಷರ ಕಾಲದಲ್ಲಿ ಬಂಗಾಳದ ಒಬ್ಬ ಶರತ್‌ಚಂದ್ರ ಚಟರ್ಜಿಯನ್ನು ಇಡೀ ದೇಶ ಓದುತ್ತಿತ್ತು. ನನಗೆ ಗೊತ್ತಿರುವಂತೆ ಕರ್ನಾಟಕದಲ್ಲಿ ಶರತ್‌ಚಂದ್ರ ಚಟರ್ಜಿಯನ್ನು ಬಂಗಾಳಿಯಿಂದ ನೇರವಾಗಿ ಕನ್ನಡಕ್ಕೆ ಭಾಷಾಂತರಿಸುವವರು ಇದ್ದರು. ಹಳ್ಳಿ- ಹಳ್ಳಿಯಲ್ಲಿ ಶರತ್ ಬಾಬು ಅವರ ಕಾದಂಬರಿಗಳು ಸಿಕ್ಕುತ್ತಿದ್ದವು. ಎಷ್ಟರಮಟ್ಟಿಗೆ ಎಂದರೆ ಆಂಧ್ರಪ್ರದೇಶದಲ್ಲಿಯಂತೂ ಶರತ್‌ಚಂದ್ರ ಚಟರ್ಜಿಯವರನ್ನು ಒಬ್ಬ ತೆಲುಗು ಲೇಖಕ ಎಂದೇ ಬಹಳ ಮಂದಿ ತಿಳಿದುಕೊಂಡಿದ್ದರಂತೆ.
ಸ್ವಾತಂತ್ರ್ಯಪೂರ್ವದ ಕಾಲದಲ್ಲಿ ಒಬ್ಬ ರವೀಂದ್ರನಾಥ್ ಠ್ಯಾಗೋರ್ ಎನ್ನುವವರು ಇಡೀ ಭಾರತದ ಪ್ರತಿನಿಧಿ ಎನ್ನುವ ಭಾವನೆ ನಮಗಿತ್ತು. ಠ್ಯಾಗೋರ್ ಬರೀತಾ ಇದ್ದದ್ದು ಬಂಗಾಳಿಯಲ್ಲಿ, ಬಂಗಾಳಿ ಭಾಷೆ ತಮಿಳಿನಷ್ಟು ಪ್ರಾಚೀನವೂ ಅಲ್ಲ, ಹಿಂದಿಯಷ್ಟು ವಿಶಾಲವೂ ಅಲ್ಲ. ಆದರೂ ಕೂಡ ಬಂಗಾಳಿ ಭಾಷೆಯಲ್ಲಿ ಬರೆಯುತ್ತಿದ್ದ ಒಬ್ಬ ಲೇಖಕ ಇಡೀ ರಾಷ್ಟ್ರದ ಸಾಹಿತ್ಯಪ್ರಿಯರ ಪ್ರೀತಿಯ ಸ್ಥಾನವನ್ನು ಗಳಿಸಿದ್ದರು. ಭಾರತ ಸ್ವತಂತ್ರವಾದ ನಂತರ ಇದೆಲ್ಲಾ ಬದಲಾಯಿತು. ಈಗ ಭಾರತದ ಪ್ರತಿಯೊಂದು ಭಾಗದ, ಭಾಷೆಯ ಲೇಖಕರು ಕೂಡ ಉಳಿದ ಭಾರತೀಯ ಲೇಖಕರನ್ನು ಮಾದರಿಯಾಗಿಯೂ ತೆಗೆದುಕೊಳ್ಳುವುದಿಲ್ಲ, ಅನುಭವವಾಗಿಯೂ ಸ್ವೀಕರಿಸುವುದಿಲ್ಲ. ಎಲ್ಲರೂ ಪಾಶ್ಚಾತ್ಯ ಸಾಹಿತ್ಯವನ್ನು ಓದುತ್ತಾರೆ. ಎರಡನೆಯ ದರ್ಜೆಯ ಕೃತಿಗಳನ್ನೂ ಮಾದರಿಯಾಗಿ ಸ್ವೀಕರಿಸುತ್ತಾರೆ.
ಇತ್ತೀಚೆಗಂತೂ ಇಂಗ್ಲಿಷ್ ಎಲ್ಲೆಡೆಗೂ ಹೆಚ್ಚು ಪ್ರಚಾರವಾಗುವುದಕ್ಕೆ ಹೋಗಿ ಅಮೆರಿಕ ದೇಶದ ಮೂರನೇ ದರ್ಜೆಯ ಕಾದಂಬರಿಗಳನ್ನು ಓದುವುದೇ ಹೆಚ್ಚಾಗಿದೆ. ಅದ್ಯಾವತ್ತೋ ಒಂದು ದಿನ ನಮ್ಮ ಭಾರತೀಯ ಭಾಷೆಗಳಿಗೆ ಈ ಮೂರನೇ ದರ್ಜೆಯ ಕಾದಂಬರಿಗಳೇ ಭಾಷಾಂತರವಾಗುವ ಸಂದರ್ಭ ಕೂಡ ಬರಬಹುದು. ಕೊರಿಯಾ ದೇಶದಲ್ಲಿ ಮೂರನೇ ದರ್ಜೆಯ ಅಮೆರಿಕನ್ ಕಾದಂಬರಿಗಳು ಕೊರಿಯನ್ ಭಾಷೆಗೆ ಕೆಲವು ತಿಂಗಳುಗಳ ಒಳಗೇನೇ ಭಾಷಾಂತರವಾಗಿ ಕೊರಿಯಾ ಭಾಷೆಗಳಲ್ಲಿ ಬರೆಯುವ ಪ್ರಮುಖ ಲೇಖಕರಿಗೇನೇ ಅಲ್ಲಿನ ಪುಸ್ತಕದ ಅಂಗಡಿಗಳಲ್ಲಿ ಜಾಗವಿಲ್ಲದ ಹಾಗೆ ಆಗಿದೆ. ಹೀಗೆ ಇಂಗ್ಲಿಷ್ ಎಲ್ಲಾ ಕಡೆ ಆಕ್ರಮಿಸಿಕೊಂಡಿದೆ. ಭಾರತದ ಸ್ವಾತಂತ್ರ್ಯಪೂರ್ವದ ಕಾಲದಲ್ಲೂ ಇಂಗ್ಲಿಷ್ ನಮಗೆ ಇತ್ತು. ಆದರೆ, ಆ ಇಂಗ್ಲಿಷ್ ಶೇಕ್ಸ್‌ಪಿಯರ್ ಆಗಿ ಬಂತು, ಮಿಲ್ಟನ್ ಆಗಿ ಬಂತು, ವರ್ಡ್ಸ್‌ವರ್ತ್ ಆಗಿ ಬಂತು. ಅಥವಾ ಇಂಗ್ಲಿಷ್ ಮುಖಾಂತರವಾಗಿ ಟಾಲ್ಸ್‌ಸ್ಟಾಯ್ ಬಂದ, ದಾಸ್ತೋವಸ್ಕಿ ಬಂದ, ಫ್ರೆಂಚ್‌ನಿಂದ ರೊಮೆರೋಲ್ಲಾ ಬಂದ.
ಇವೆಲ್ಲಾ ಹಳೆಯಕಾಲದ ಮಾತುಗಳಾಗಿವೆ ಈಗಿನವರಿಗೆ.. ಈಗ ನಮ್ಮ ಮನಸ್ಸಲ್ಲಿ ಮೂಡುವ ಆತಂಕವೇನೆಂದರೆ ಅಂತಹ ಕೊಡು-ಕೊಳ್ಳುವ ಪ್ರಕ್ರಿಯೆ ಉಳಿದಿಲ್ಲ ಎಂಬುದು. ಇದು ಸ್ವಾತಂತ್ರ್ಯೋತ್ತರ ಭಾರತದ ಸ್ಥಿತಿ. ಸ್ವಾತಂತ್ರ್ಯಪೂರ್ವ ಭಾರತದ ಸ್ಥಿತಿಯಲ್ಲಿ, ಸಾಂಸ್ಕೃತಿಕವಾಗಿ ನಾವು ಇನ್ನೂ ಹೆಚ್ಚು ಸ್ವತಂತ್ರರಾಗಿದ್ದೆವು ಎನ್ನುವುದು ಒಂದು ವಿಪರ್ಯಾಸ.
ಒಟ್ಟಿನಲ್ಲಿ ನಾನು ಮೇಲೆ ಹೀಗೆ ಹೇಳಿದರೂ ಕೂಡ, ಇದಕ್ಕೆ ಕೆಲವು ವಿನಾಯ್ತಿಗಳು ಇದ್ದಾವೆ. ಉದಾಹರಣೆಗೆ ಇವತ್ತು ಕೇರಳದಲ್ಲಿ ಎಲ್ಲಾ ಭಾಷೆಯ ಲೇಖಕರನ್ನೂ ಅವರು ಭಾಷಾಂತರದಲ್ಲಿ ಓದುತ್ತಾರೆ. ಅವರ ದಿನಪತ್ರಿಕೆಗಳಲ್ಲಿ ಬೇರೆಯ ಭಾಷೆಯ ಒಳ್ಳೆಯ ಸಾಹಿತ್ಯ ಧಾರಾವಾಹಿ ರೂಪದಲ್ಲಿ ಪ್ರಕಟವಾಗುತ್ತದೆ; ಒಳ್ಳೆಯ ಸಾಹಿತ್ಯ, ಬರಿ ಜನಪ್ರಿಯ ಅಲ್ಲ. ನನಗೆ ಗೊತ್ತಿದ್ದ ಹಾಗೆ ಕೇರಳದ ಬಹಳ ಜನ ಲೇಖಕರಿಗೆ ಬಹಳ ಪ್ರಿಯನಾದ ಲೇಖಕ ನಮ್ಮ ಆಲನಹಳ್ಳಿ ಕೃಷ್ಣ ಆಗಿದ್ದರು. ನನ್ನ ಕೃತಿಗಳು ಕೇರಳದಲ್ಲಿ, ಕರ್ನಾಟಕದಲ್ಲಿ ಖರ್ಚಾದಷ್ಟೇ ಆಗುತ್ತ್ತ ಇವೆ. ಹಲವು ಮುದ್ರಣಗಳನ್ನು ಕಂಡಿವೆ.
ಅಂದರೆ, ಬೇರೆ ಭಾಷೆಯ ಸಾಹಿತ್ಯಕ್ಕೆ (ಯುರೋಪಿಯನ್ ಕೂಡಿದಂತೆ) ಅವಕಾಶವಿರುವುದು ಮಲಯಾಳಂನಲ್ಲಿ. ಅಚ್ಚರಿಯೆಂದರೆ ಹಿಂದಿಯಲ್ಲಿ ಕೂಡ. ಆದರೆ, ಬಹಳ ಉತ್ತಮವಾದ ಅನುವಾದ ಬರುತ್ತಿಲ್ಲ ಎಂದು ಹಿಂದಿಯವರು ಹೇಳುತ್ತಾರಂತೆ. ಅತ್ಯಂತ ಬಡ ರಾಜ್ಯವೆಂದು ನಾವು ತಿಳಿದಿರುವ ಬಿಹಾರ್‌ನ ಜನರು ಓದುವಷ್ಟು ಸಾಹಿತ್ಯವನ್ನು ದೆಹಲಿಯ ಹಿಂದಿಯವರು ಓದುವುದಿಲ್ಲ.
ದಾರಿದ್ರ್ಯ ಎಂದು ಕರೆಯಲಾಗದ ಬಡತನ ಎಂಬ ಒಂದು ಸ್ಥಿತಿ ಭಾರತದಲ್ಲಿ ಎಲ್ಲೆಲ್ಲೂ ಇದೆ. ಈ ಬಗೆಯ 'ದಾರಿದ್ರ್ಯ' ಎಂದು ನಾವು ಕರೆಯಲಾಗದ ಬಡತನದಲ್ಲಿ ಸಾಂಸ್ಕೃತಿಕ ಪ್ರೇರಣೆಗಳು ಹೆಚ್ಚು ಜೀವಂತವಾಗಿರುವುದನ್ನು ನಾವು ಅಚ್ಚರಿಯಿಂದ ಗಮನಿಸಬೇಕು. ಆದರೆ ಅದೃಷ್ಟವಂತವಾದ ನಮ್ಮ ಮಧ್ಯಮ ವರ್ಗ ಶ್ರೀಮಂತ ವರ್ಗವಾಗುತ್ತಾ ಹೋದಂತೆ ಅದು ಸಾಂಸ್ಕೃತಿಕ ವಿಷಯಗಳಿಂದ ದೂರವಾಗುತ್ತದೆ. ಬೀದಿ ಬದಿಯ ಜೀವನ ಮರೆತವರು ಸಾಮಾನ್ಯ ಖುಷಿಗಳಿಂದ ವಂಚಿತರಾಗುತ್ತ ಮಾರುಕಟ್ಟೆಯ ದಾಸರಾಗುತ್ತಾರೆ.
******
ಈಗ ಮಧ್ಯಪ್ರದೇಶದಲ್ಲಿ ಇಡೀ ಭಾರತದಲ್ಲಿ ಯಾವ ಲೇಖಕನಿಗಾದರೂ ಕೊಡಬಲ್ಲ 'ಕಬೀರ್ ಸಮ್ಮಾನ್' ಪುರಸ್ಕಾರವಿದೆ. ದೆಹಲಿಯಲ್ಲಿ ಜ್ಞಾನಪೀಠ ಇದೆ. ನಾವು ಕನ್ನಡದಲ್ಲಿ ಕನ್ನಡೇತರ ಸಾಹಿತಿಗಳನ್ನು ಗುರುತಿಸುವ ಇಂತಹ ಒಂದು ದೊಡ್ಡ ಪುರಸ್ಕಾರವನ್ನೂ ಹೊಂದಿಲ್ಲ. ಕೇರಳದಲ್ಲಿ ಬಹಳ ಕಾಲದ ತನಕ 'ಕುಮಾರನ್ ಆಶಾನ್' ಅವರ ಹೆಸರಿನಲ್ಲಿ ಜಗತ್ತಿನ ಯಾವ ಭಾಷೆಯ ಲೇಖಕರಿಗಾದರೂ ನೀಡುವ ಒಂದು ಪುರಸ್ಕಾರ ಇಟ್ಟಿದ್ದರು. ಲ್ಯಾಟಿನ್ ಅಮೆರಿಕನ್ ಸಾಹಿತಿಗಳು, ದಕ್ಷಿಣ ಆಫ್ರಿಕಾ ಸಾಹಿತಿಗಳಿಗೂ ಆ ಪುರಸ್ಕಾರವನ್ನು ಕೊಟ್ಟಿದ್ದಾರೆ. ಅಂದರೆ, ನಾವು ಮಾತಾಡುವ ನಮ್ಮ ಭಾಷೆಯಲ್ಲಿ ಜಗತ್ತನ್ನು ಕಾಣುತ್ತೇವೆ; ಅಂತೆಯೇ, ಜಗತ್ತಿನೊಳಗೆ ನಮ್ಮನ್ನು ಕಂಡುಕೊಳ್ಳುತ್ತೇವೆ ಅನ್ನುವ ಕವಿರಾಜಮಾರ್ಗಕಾರನ 1000 ವರ್ಷಗಳ ನಂಬಿಕೆಯನ್ನು ಇವತ್ತು ನಾವು ಕಳೆದುಕೊಂಡಿದ್ದೇವೆ. ಈಗ ನಾವು 'ಬಸವ'ನ ಹೆಸರಿನಲ್ಲಿ ಮೂರನೇ ಜಗತ್ತಿನ ಕ್ರಿಯಾಶೀಲನಾದ ಒಬ್ಬ ಲೇಖಕನಿಗೆ ಪುರಸ್ಕಾರವನ್ನು ಕೊಡಬೇಕಾಗಿತ್ತು. ಆಫ್ರಿಕನ್ ಲೇಖಕನಿಗೋ, ಲ್ಯಾಟಿನ್ ಅಮೆರಿಕನ್ ಲೇಖಕನಿಗೋ, ಫ್ರೆಂಚ್ ಲೇಖಕನಿಗೋ ಕೊಡಬಹುದಾಗಿತ್ತು. ನಾವು ಅದನ್ನು ಮಾಡುತ್ತಿಲ್ಲ. ಅಂದರೆ ನಾವು ಕ್ರಮೇಣ ಕೂಪಮಂಡೂಕಗಳಾಗುತ್ತಿದ್ದೇವೆ. ಈ ಸ್ಥಿತಿ ಒಂದು ಸಾಂಸ್ಕೃತಿಕ ದುರಂತವೆಂದೇ ನಾನು ತಿಳಿಯುತ್ತೇನೆ.
ಕವಿರಾಜಮಾರ್ಗಕಾರನ ಆಶಯಕ್ಕೆ ತಕ್ಕಹಾಗೆ ಪ್ರಪಂಚ ನಮ್ಮ ಭಾಷೆಯೊಳಗೆ ಇದೆ, ಮತ್ತು ಪ್ರಪಂಚದಲ್ಲಿ ನಮ್ಮ ಭಾಷೆ ಇದೆ ಎಂದು ನಾವು ತಿಳಿದವರಾದರೆ, ಕುವೆಂಪುರವರ ಕಾದಂಬರಿಗಳು, ಕಾರಂತರ ಕಾದಂಬರಿಗಳು ನೋಬೆಲ್ ಪ್ರಶಸ್ತಿಗೆ ಅರ್ಹವಾದ ಸಾಹಿತ್ಯವೆಂದೂ, ಜಗತ್ತಿನ ಶ್ರೇಷ್ಠ ಕವಿಗಳಲ್ಲಿ ಬೇಂದ್ರೆ ಮತ್ತು ಅಡಿಗರು ಇದ್ದಾರೆಂದೂ ನಾವು ಭಾವಿಸಬಹುದಿತ್ತು...
ಆದರೆ, ಈ ಲೇಖಕರ ಗುಣಮಟ್ಟವನ್ನು ಜಗತ್ತು ತಿಳಿದಿಲ್ಲ ಎಂದರೆ, ಅವರಿಗೆ ತಿಳಿಯಲು ಸಾಧ್ಯವಾಗಿಲ್ಲ ಎಂದು ಮಾತ್ರ ಅರ್ಥ. ಆ ಗುಣಮಟ್ಟ ಇಲ್ಲ ಎಂದು ಅರ್ಥವಲ್ಲ. ನಾವು ಭಾಷೆಗಳನ್ನು ಕಲಿಯುವಾಗ ನಮ್ಮದಲ್ಲದ ಇನ್ನೊಂದು ಭಾರತೀಯ ಭಾಷೆಯನ್ನು ಕೆಲವೇ ಕೆಲ ವಿದ್ವಜ್ಜನರು ಸೃಜನಶೀಲ ಕಾರಣಕ್ಕಾಗಿ ಕಲಿಯುವುದು ಸಾಧ್ಯವಾದರೆ ಹೆಚ್ಚು ಅರ್ಥಪೂರ್ಣವಾದ ಭಾಷಾಂತರಗಳು ಬರುತ್ತಿದ್ದವು. ಇವತ್ತು ನೀವು ಯುರೋಪಿಗೆ ಹೋದರೆ, ಫ್ರಾನ್ಸ್ ದೇಶದಲ್ಲಿ ಐರ್ಲೆಂಡಿನ ಜಾಯ್ಸ್ ಬಗ್ಗೆ ಅಗಾಧವಾದ ಅರಿವುಳ್ಳ, ಜ್ಞಾನವುಳ್ಳ ಪಂಡಿತನೊಬ್ಬ ಇರುವುದು ಆಶ್ಚರ್ಯದ ವಿಷಯವೇನಲ್ಲ. ಲ್ಯಾಟಿನ್ ಅಮೆರಿಕನ್ ಕೃತಿಗಳನ್ನು ಅಭ್ಯಾಸ ಮಾಡಿ ಭಾಷಾಂತರಿಸಬಲ್ಲ ಹಲವು ಯುರೋಪಿಯನ್ ಲೇಖಕರು ಇದ್ದಾರೆ. ಆದರೆ, ಭಾರತ ಸ್ವಾತಂತ್ರವಾಗಿ ಅರವತ್ತು ವರ್ಷಗಳಾದ ಮೇಲೂ ಉತ್ತರ ಪ್ರದೇಶದ ಒಂದು ವಿಶ್ವವಿದ್ಯಾನಿಲಯದಲ್ಲಿ ಕಾರಂತರನ್ನಾಗಲೀ, ಕುವೆಂಪು ಅವರನ್ನಾಗಲಿ, ಮಾಸ್ತಿಯವರನ್ನಾಗಲಿ ಆಳವಾಗಿ ಅರ್ಥಮಾಡಿಕೊಂಡ ಒಬ್ಬನೇ ಒಬ್ಬ ಪಂಡಿತ ನಮಗೆ ಸಿಗಲಾರ. ಅಧ್ಯಾಪಕರನ್ನು ಸಂದರ್ಶಕ ಅಧ್ಯಾಪಕರಾಗಿ ಬೇರೆ-ಬೇರೆ ವಿಶ್ವವಿದ್ಯಾನಿಲಯಗಳಲ್ಲಿ ಬಳಸಿಕೊಳ್ಳುವುದು ಸಾಧ್ಯವಿರುವ ಈ ಸಂದರ್ಭದಲ್ಲಿ ಆಯಾ ಭಾಷೆಯ ಸಾಹಿತಿಗಳನ್ನು ಅಭ್ಯಾಸ ಮಾಡಿ ಭಾಷಾಂತರಿಸಲು ಶಕ್ತರಾದವರನ್ನು ಅಗತ್ಯ ಶಿಕ್ಷಣದ ಮೂಲಕ ತಯಾರು ಮಾಡಬಲ್ಲಂತಹ ಯಾವ ಕ್ರಮವನ್ನೂ ನಾವು ಈವರೆಗೆ ತೆಗೆದುಕೊಂಡಿಲ್ಲ. ನಾನು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾಗಿದ್ದಾಗ ಯುಜಿಸಿಗೆ ಹಲವು ಕಾಗದಗಳನ್ನು ಬರೆದು ಕೋರಿದ್ದೆ. ಉದಾಹರಣೆಗೆ ಅಸ್ಸಾಂನಲ್ಲಿರುವ ಒಬ್ಬ ಯುವ ಕ್ರಿಯಾಶೀಲ ಬರಹಗಾರನನ್ನು ಕರ್ನಾಟಕಕ್ಕೆ 3ವರ್ಷಗಳ ಕಾಲದ ಫೆಲೋಶಿಪ್ ಕೊಟ್ಟು ಕಳುಹಿಸಿಕೊಡಿ. ಹೀಗೆ ಬಂದಿರುವ ವಿದ್ಯಾರ್ಥಿ ಕನ್ನಡವನ್ನು ಗ್ರಹಿಕೆಗಾಗಿ ಕಲಿತು ಯಾವುದಾದರೂ ಕೃತಿಯನ್ನು ತನ್ನ ಭಾಷೆಗೆ ಅನುವಾದ ಮಾಡಿ ಡಾಕ್ಟರೇಟ್ ಪದವಿ ಪಡೆದು ತನ್ನ ನಾಡಿಗೆ ಮರಳಿ ಅಲ್ಲಿನ ವಿದ್ಯಾರ್ಥಿಗಳಿಗೆ ಕೆಲವು ಪಠ್ಯಗಳನ್ನಾದರೂ ಪರಿಚಯಿಸುವುದು ಸಾಧ್ಯ. ಇದರಿಂದ ಭಾರತದ ಒಳಗೆ ತೌಲನಿಕ (ಕಂಪ್ಯಾರೆಟಿವ್) ಸಾಹಿತ್ಯ ಎಂಬುದು ಕ್ರಮೇಣ ಆಳವಾದ ಅಧ್ಯಯನದ ವಿಷಯವಾಗುತ್ತದೆ. ಯುರೋಪಿನಲ್ಲಿ ಇದು ಸಾಧ್ಯವಿದ್ದಾಗ ಭಾರತದಲ್ಲಿ ಏಕೆ ಸಾಧ್ಯವಾಗಬಾರದು?
ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾಗಿ ನಾನು ಒಂದೆರೆಡು ಹೆಜ್ಜೆಗಳನ್ನು ಈ ನಿಟ್ಟಿನಲ್ಲಿ ಇಟ್ಟಿದ್ದೆ. ಭಾರತದ ಇತರ ಭಾಷೆಗಳ ಬಗ್ಗೆ ನಿರಾಸಕ್ತರಾದ ಬಂಗಾಳಿಗಳಿಗೆ ಕೇರಳದ ವೈಕಂ ಮಹಮದ್ ಬಷೀರ್ ಅವರನ್ನು ಅಧ್ಯಯನ ಮಾಡಿ ಒಂದು ವಿಚಾರ ಸಂಕಿರಣವನ್ನು ನಡೆಸುವುದು ಸಾಧ್ಯವಾಗುವಂತೆ ಮಾಡಿದ್ದೆ. ಹೀಗೆ ಬೇರೆ ಭಾಷೆಯ ಲೇಖಕರನ್ನು ನಮ್ಮ ಭಾಷೆಯವರೂ, ನಮ್ಮ ಭಾಷೆಯ ಲೇಖಕರನ್ನು ಬೇರೆಯವರೂ ಅಧ್ಯಯನ ಮಾಡುವ ಒಂದು ಚಳವಳಿಯೇ ಈ ದೇಶದಲ್ಲಿ ನಡೆಯಬೇಕು. ಈ ಮೂಲಕ ನಾವು ಸಾಂಸ್ಕೃತಿಕ ವಿಷಯದಲ್ಲಿ ಸ್ವತಂತ್ರವಾಗಿ ಯೋಚಿಸಬಲ್ಲವರಾಗಬೇಕು. ಆದರೆ, ಜಾಗತೀಕರಣ ಇಡೀ ಜಗತ್ತು ನಮ್ಮದೆನ್ನಿಸುವಂತೆ ಮಾಡುವುದರ ಬದಲಾಗಿ ಅಮೆರಿಕವನ್ನು ಇಡೀ ಪ್ರಪಂಚಕ್ಕೆ ಮಾರುಕಟ್ಟೆಯ ದೃಷ್ಟಿಯಿಂದ ಮಾದರಿಯಾಗಿಸಲು ಹೊರಟಿದೆ. ಅದರ ವಿರುದ್ಧವಾಗಿ ನಮ್ಮ ಸೃಜನಶೀಲತೆ ಜಾಗೃತವಾಗಬೇಕು ಎಂಬುದು ನನ್ನ ಒಂದು ಕನಸು.
ಟಿಎಸ್‌ಐ
|