|
ಡಾ. ಬರಗೂರು ರಾಮಚಂದ್ರಪ್ಪ
ಹಿರಿಯಸಾಹಿತಿಗಳು
|
ಕನ್ನಡ ಸಾಹಿತ್ಯ ಪರಿಷತ್ತು ವ್ಯವಸ್ಥೆಗೊಳಿಸುವ 'ಕನ್ನಡ ಸಾಹಿತ್ಯ ಸಮ್ಮೇಳನ'ಗಳ ಬಗ್ಗೆ ಒಂದಲ್ಲಾ ಒಂದು ವಿವಾದವೇಳುವುದು ಇತ್ತೀಚೆಗೆ ಸಹಜ ಕ್ರಿಯೆ ಎಂಬಂತಾಗಿದೆ. ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯೆಂದು ಬಿಂಬಿಸಿರುವುದೂ ಇದಕ್ಕೆ ಒಂದು ಕಾರಣ. ಸಾಮಾನ್ಯವಾಗಿ ಸರ್ಕಾರ ಮತ್ತು ಸರ್ಕಾರದ ಅಂಗ ಸಂಸ್ಥೆಗಳ ಬಗ್ಗೆ ವಿವಾದಗಳನ್ನುಂಟು ಮಾಡುವ ಪ್ರವೃತ್ತಿ ನಮ್ಮಲ್ಲಿದೆ. ಆದರೆ ಯಾವುದೇ ಖಾಸಗಿ ಸಂಸ್ಥೆಯು ಕೊಡುವ ಪ್ರಶಸ್ತಿ ಮತ್ತು ಒಳಗೊಳ್ಳುವ ಆಡಳಿತಾತ್ಮಕ ಸ್ವರೂಪದ ಬಗ್ಗೆ ಸಾಮಾಜಿಕ-ಪ್ರಾದೇಶಿಕ ನ್ಯಾಯದ ಪ್ರಶ್ನೆಗಳನ್ನು ಎತ್ತುವುದಿಲ್ಲ. ಹಾಗೇ 1915ರಲ್ಲಿ ಸ್ಥಾಪಿತವಾದ ಕನ್ನಡ ಸಾಹಿತ್ಯ ಪರಿಷತ್ತನ್ನು ಅಧಿಕೃತವಾಗಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯೆಂದು ಬಿಂಬಿಸಿದ್ದು, ಜನರು ಹಾಗೆಯೇ ಭಾವಿಸಿದ್ದು ಮತ್ತು ಸಾಹಿತ್ಯ ಪರಿಷತ್ತು ಮತ್ತು ಅದರ ಸಮ್ಮೇಳನಗಳು ಸರ್ಕಾರದ ಸಹಾಯವನ್ನು ಅವಲಂಬಿಸಿದ್ದು ಪ್ರಶ್ನೆಗಳನ್ನು ಎತ್ತಲು ಒಂದು 'ತಾತ್ವಿಕ ತರ್ಕ'ವನ್ನು ಒದಗಿಸಿದೆ.
ಸಮ್ಮೇಳನಗಳ ಕುರಿತ ವಿವಾದಗಳು ಎಲ್ಲ ಸಂದರ್ಭದಲ್ಲೂ ತಾತ್ವಿಕ ನೆಲೆಯನ್ನು ಪಡೆದಿರುತ್ತವೆಯೆಂದು ಭಾವಿಸಬೇಕಾಗಿಲ್ಲ. ಒಂದೊಂದು ಸಾರಿ ಒಂದೊಂದು ಕಾರಣಕ್ಕೆ ವಿವಾದಗಳೆದ್ದಿವೆ. ಕೆಲವೊಮ್ಮೆ ವೈಯಕ್ತಿಕ; ಕೆಲವೊಮ್ಮೆ ತಾತ್ವಿಕ. ಕನ್ನಡ ಸಾಹಿತ್ಯ ಸಮ್ಮೇಳನಗಳ ಬಗ್ಗೆ ಎದ್ದಿರುವ ವಿವಾದಗಳು ಪ್ರಮುಖವಾಗಿ ಸಮ್ಮೇಳನಾಧ್ಯಕ್ಷರ ಆಯ್ಕೆ, ವಿಚಾರಗೋಷ್ಠಿಗಳ ಸ್ವರೂಪ ಮತ್ತು ವ್ಯಕ್ತಿಗಳ ಆಯ್ಕೆ, ತಾತ್ವಿಕ ಭಿನ್ನಾಭಿಪ್ರಾಯಗಳ ಬಗ್ಗೆಯೇ ಆಗಿವೆ.
ಸಮ್ಮೇಳನದ ಅಧ್ಯಕ್ಷರ ಆಯ್ಕೆ ಮತ್ತು ಅಸಮಾಧಾನ- ಎರಡೂ ಈಗ ಒಟ್ಟಿಗೇ ಬೆಸೆದುಕೊಂಡಿವೆ. ಸಾಹಿತ್ಯ ಪರಿಷತ್ತು 'ಸರ್ವಾನುಮತ' ಅಥವಾ 'ಬಹುಮತ'ಗಳ ಆಧಾರದಲ್ಲಿ ಅಧ್ಯಕ್ಷರನ್ನು ಆಯ್ಕೆ ಮಾಡುವಾಗ ಅನೇಕ ಅಂಶಗಳು ಪರಿಗಣಿತವಾಗುವುದು ಗುಟ್ಟಿನ ವಿಷಯವೇನೂ ಅಲ್ಲ. ಇಲ್ಲಿಯವರೆಗೆ ಆಯ್ಕೆಯಾದ ಬಹುಪಾಲು ಅಧ್ಯಕ್ಷರು ಅರ್ಹರಲ್ಲ ಎಂದು ಹೇಳುವಂತಿಲ್ಲವಾದರೂ ಎಷ್ಟು ಜನ ಮಹಿಳೆಯರಿಗೆ, ಅಲ್ಪಸಂಖ್ಯಾತರಿಗೆ, ತುಳಿತಕ್ಕೊಳಗಾದ ಸಾಮಾಜಿಕ ಸ್ತರದಿಂದ ಬಂದವರಿಗೆ, ಅರ್ಹತೆಯ ಆಧಾರವನ್ನು ಪರಿಗಣಿಸಿಯೂ ಅಧ್ಯಕ್ಷರಾಗುವ ಅವಕಾಶ ಲಭ್ಯವಾಗಿದೆ ಎಂಬ ಪ್ರಶ್ನೆ ಜೀವಂತವಾಗಿಯೇ ಇದೆ. ವಿಶೇಷವಾದ ತಾತ್ವಿಕ ನೆಲೆಯಿಲ್ಲದಿದ್ದರೂ ಅಧ್ಯಕ್ಷರ ಆಯ್ಕೆ ವಿವಾದಾಸ್ಪದವಾದ ಸಂದರ್ಭಗಳೂ ನಮ್ಮಲ್ಲಿವೆ. ಈ ಸಂಬಂಧದ ಒಂದು ನಿದರ್ಶನ, ಕನ್ನಡ ಸಾಹಿತ್ಯ ಪರಿಷತ್ತಿನ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ. ಆಗ ಡಾ.ದೇ. ಜವರೇಗೌಡರು ಸಮ್ಮೇಳನದ ಅಧ್ಯಕ್ಷರಾದರು. ಪರಿಷತ್ತಿನ ಅಧ್ಯಕ್ಷರಾಗಿದ್ದ ಜಿ. ನಾರಾಯಣ ಅವರು 'ದೇಜಗೌ' ಅವರ ಆಯ್ಕೆಯ ರೂವಾರಿ ಎಂದೇ ಆಗ ಜನಜನಿತವಾಗಿತ್ತು. ಈ ಸಮ್ಮೇಳನದ ಬಗ್ಗೆ ಎರಡು ವಿವಾದಗಳು ಎದ್ದವು. ಒಂದು-ಸುವರ್ಣ ಮಹೋತ್ಸವ ಸಮ್ಮೇಳನದ ಹೆಸರಿನಲ್ಲಿ ಕಟ್ಟಡ ನಿರ್ಮಾಣದಂತಹ ಕೆಲಸದ ಹೊರತಾಗಿ ದುಂದುವೆಚ್ಚ ಮಾಡಲಾಗುತ್ತದೆ ಎಂಬ ಆಕ್ಷೇಪ. ಎರಡನೇ ಅಂಶ ಸಮ್ಮೇಳನಾಧ್ಯಕ್ಷರಿಗೆ ಸಂಬಂಧಿಸಿದ್ದು. ದೇಜಗೌ ಚಿಕ್ಕ ವಯಸ್ಸಿನಲ್ಲೇ ಅಧ್ಯಕ್ಷರಾಗಿದ್ದರೆಂಬ ಗುಸುಗುಸುವಿನ ಜೊತೆಗೆ ಗೋಪಾಲಕೃಷ್ಣ ಅಡಿಗರು ಬಹಿರಂಗವಾಗಿ ಗುಟುರು ಹಾಕಿದರು. ನವ್ಯ ಸಾಹಿತಿಗಳಲ್ಲಿ ಕೆಲವರು ಅಡಿಗರ ಬೆಂಬಲಕ್ಕೆ ನಿಂತರು. ಆದರೆ ಅಡಿಗರ ನಿಲುವು ತಾತ್ವಿಕವೇ, ವೈಯಕ್ತಿಕವೇ ಎಂಬ ಅನುಮಾನಕ್ಕೆ ಅವಕಾಶವಿದೆ. ಕವಿಗೋಷ್ಠಿಯ ಅಧ್ಯಕ್ಷತೆಗೆ ಮೊದಲು ಒಪ್ಪಿಕೊಂಡು, ದೇಜಗೌ ಅವರು ಅಧ್ಯಕ್ಷರಾಗಿ ಆಯ್ಕೆಯಾದ ನಂತರ ನಿರಾಕರಿಸಿದ್ದಲ್ಲದೆ ಸಾಹಿತ್ಯ ಪರಿಷತ್ತಿನ ಪ್ರಸ್ತುತತೆಯನ್ನೇ ಪ್ರಶ್ನಿಸಿದ್ದನ್ನು ಗಮನಿಸಿದಾಗ, ಪ್ರಸ್ತುತ-ಅಪ್ರಸ್ತುತ ವಿಷಯಕ್ಕೂ ದೇಜಗೌ ಆಯ್ಕೆಗೂ ಸಂಬಂಧವಿರುವುದು ಸ್ಪಷ್ಟವಾಗುತ್ತದೆ. ಮುಂದೆ 1979ರಲ್ಲಿ ಧರ್ಮಸ್ಥಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನಕ್ಕೆ ಅಡಿಗರು ಅಧ್ಯಕ್ಷರಾದಾಗ ಪ್ರಸ್ತುತತೆಯ ಪ್ರಶ್ನೆ ಅಪ್ರಸ್ತುತವಾದದ್ದು ಈಗ ಇತಿಹಾಸ!
ತುಮಕೂರಿನಲ್ಲಿ ನಡೆದ 69ನೇ ಸಾಹಿತ್ಯ ಸಮ್ಮೇಳನಕ್ಕೆ ಡಾ.ಯು.ಆರ್. ಅನಂತಮೂರ್ತಿಯವರು ಅಧ್ಯಕ್ಷರಾಗಿ ಆಯ್ಕೆಯಾದಾಗ ಅಪಸ್ವರದ ಅಬ್ಬರ ಕೇಳಿಸಿತು. ಅನಂತಮೂರ್ತಿಯವರ ಕೆಲವು ಅಭಿಪ್ರಾಯ ಹಾಗೂ ನಡವಳಿಕೆಗಳ ಬಗ್ಗೆ ಆಕ್ಷೇಪಗಳಿವೆಯಾದರೂ ಸಮ್ಮೇಳನದ ಅಧ್ಯಕ್ಷರಾಗಲು ಅವರೂ ಅರ್ಹರಲ್ಲಿ ಒಬ್ಬರು ಎಂದು ನನ್ನ ಭಾವನೆ. ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಅನಂತಮೂರ್ತಿ ಯವರ ಬಗ್ಗೆ ಆಕ್ಷೇಪವೆತ್ತಿದವರು ಮುಂದಿನ ಸಮ್ಮೇಳನಕ್ಕೆ ಪ್ರಧಾನವಾಗಿ ಪತ್ರಕರ್ತರಾದ ಪಾಟೀಲ ಪುಟ್ಟಪ್ಪನವರು ಆಯ್ಕೆಯಾದ ಬಗ್ಗೆ ವಿವಾದವುಂಟು ಮಾಡಲಿಲ್ಲವೆನ್ನುವುದು ಅನೇಕ ಸಂಗತಿಗಳನ್ನು ಸ್ವಯಂವೇದ್ಯ ಗೊಳಿಸುತ್ತದೆ.
ಇನ್ನು ಸಾಹಿತ್ಯ ಸಮ್ಮೇಳನಗಳ ಗೋಷ್ಠಿಗಳ ವಿಷಯ ಮತ್ತು ವ್ಯಕ್ತಿಗಳ ಆಯ್ಕೆ ಕುರಿತ ಅಸಮಾಧಾನ ಯಾವಾಗಲೂ ಇರುತ್ತದೆ. ಬಹಳಷ್ಟು ಸಾರಿ ಸಾಹಿತ್ಯೇತರ ಮತ್ತು ಸಾಂಸ್ಕೃತಿಕೇತರ ವಿಷಯ ಮತ್ತು ವ್ಯಕ್ತಿಗಳ ಪರವೇ ಒತ್ತಾಯಗಳಿರುತ್ತವೆ. 1979ರಲ್ಲಿ ಅಡಿಗರ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನಕ್ಕೆ ಮುಂಚೆ ಸದರಿ ಸಮ್ಮೇಳನದಲ್ಲಿ ದಲಿತ ಗೋಷ್ಠಿ (ವಿಶೇಷವಾಗಿ ಸಾಹಿತ್ಯಕ್ಕೆ ಸಂಬಂಧಿಸಿ) ಇರಬೇಕೆಂದು ಚೆನ್ನಣ್ಣ ವಾಲೀಕಾರ ಮತ್ತಿತರ ಸ್ನೇಹಿತರು ಒತ್ತಾಯ ಮಾಡಿದರು. ಆಗ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಡಾ. ಹಂಪನಾ ಅವರು 'ಸಾಹಿತ್ಯದಲ್ಲಿ ದಲಿತ, ಬಲಿತ, ಕಲಿತ ಎಂಬುದಿಲ್ಲ' ಎಂದು ಪ್ರಾಸಬದ್ಧವಾದ ಲಘು ಪ್ರತಿಕ್ರಿಯೆ ನೀಡಿದರು. ಅದು ಗುರುತರ ಚರ್ಚೆಗೆ ಕಾರಣವಾಯಿತು. ದಲಿತ ಮತ್ತು ಪ್ರಗತಿಪರ ಸಾಹಿತಿಗಳು- ವಿಶೇಷವಾಗಿ ಅಂದಿನ ಯುವ ಸಾಹಿತಿಗಳು- ಪರಿಷತ್ತಿನ ಧೋರಣೆಯನ್ನು ಖಂಡಿಸಿದರು. 2ನೇ ಪ್ರಸಂಗ-ಶಿವಮೊಗ್ಗದಲ್ಲಿ ನಡೆದ ಹಿಂದಿನ ವರ್ಷದ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದ್ದು. ಒಂದು ಗೋಷ್ಠಿಗೆ ಗೌರಿ ಲಂಕೇಶ್, ವಿಠ್ಠಲ ಹೆಗಡೆ ಮುಂತಾದವರನ್ನು ಆಹ್ವಾನಿಸಲಾಗಿತ್ತು. ಇವರು ನಕ್ಸಲಿಸಂ ಪರವಾದವರೆಂದು ಆರೋಪಿಸಿದ ಸಂಘ ಪರಿವಾರದ 'ಶ್ರೇಷ್ಠರು' ವೇದಿಕೆಗೆ ನುಗ್ಗಿ ಗದ್ದಲ ಮಾಡಿದರು. ಲಾಠಿ ಚಾರ್ಜಿಗೆ ಕಾರಣವಾದ ಗೋಷ್ಠಿಯ ಆಯೋಜನೆ ಮತ್ತು ಅತಿಥಿಗಳ ಆಯ್ಕೆಯನ್ನು ಚಂದ್ರಶೇಖರ ಪಾಟೀಲರು ಬಲವಾಗಿ ಸಮರ್ಥಿಸಿಕೊಂಡರು.
ತಾತ್ವಿಕವಾಗಿ ಭಿನ್ನ ನೆಲೆ-ನಿಲುವುಗಳಿಂದಾಗಿ ಸಾಹಿತ್ಯ ಪರಿಷತ್ತಿನ ಸಮ್ಮೇಳನಗಳಿಗೆ ಪರ್ಯಾಯ ನೆಲೆಗಳು ಹುಟ್ಟಿಕೊಂ ಡದ್ದು, ಬೆಳೆದದ್ದು ಗಮನಿಸಲೇಬೇಕಾದ ಸಂಗತಿಯಾಗಿದೆ. ತಾತ್ವಿಕ ಭಿನ್ನ ನೆಲೆಗಳ ಕ್ರಿಯೆ ಕೇವಲ ಇತ್ತೀಚಿನದ್ದಲ್ಲ. ದ.ರಾ. ಬೇಂದ್ರೆಯವರ ಅಧ್ಯಕ್ಷತೆಯಲ್ಲಿ 1943ರಲ್ಲಿ ಶಿವಮೊಗ್ಗದಲ್ಲಿ ನಡೆದ 27ನೇ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಪ್ರಗತಿಶೀಲ ಲೇಖಕರು ಒಗ್ಗೂಡಿ 'ಪ್ರಗತಿಶೀಲ ಲೇಖಕರ ಒಕ್ಕೂಟ' ರಚಿಸಿಕೊಂಡರು. ಬೇಂದ್ರೆಯವರ ಬಗ್ಗೆ ಭಿನ್ನಾಭಿಪ್ರಾಯವಿರಲಿಲ್ಲ. ಸಾಹಿತ್ಯ ಪರಿಷತ್ತಿನ ನೆಲೆ-ನಿಲುವುಗಳಿಗೆ ಭಿನ್ನವಾಗಿ ಪ್ರಗತಿಪರ ಚಿಂತನೆಯ ಲೇಖಕರು ಒಂದಾಗಿ ಕ್ರಿಯಾಶೀಲರಾಗಬೇಕೆಂಬ ಹಂಬಲದಿಂದ ಹುಟ್ಟಿದ ಒಕ್ಕೂಟದಲ್ಲಿ ಶ್ರೀರಂಗ, ಅನಕೃ, ನಿರಂಜನ, ಬಸವರಾಜ ಕಟ್ಟೀಮನಿ, ಕೃಷ್ಣಕುಮಾರ ಕಲ್ಲೂರ, ಇನಾಂದಾರ್ ಮುಂತಾದ ಅನೇಕ ಪ್ರಸಿದ್ಧರು ಇದ್ದರು.
ಮುಂದೆ 1979ರಲ್ಲಿ ಗೋಪಾಲಕೃಷ್ಣ ಅಡಿಗರ ಅಧ್ಯಕ್ಷತೆಯಲ್ಲಿ ಧರ್ಮಸ್ಥಳದಲ್ಲಿ ನಡೆದ ಸಮ್ಮೇಳನದ ದಿನಗಳಂದೇ ಬೆಂಗಳೂರಿನಲ್ಲಿ ಬಂಡಾಯ ಸಾಹಿತ್ಯ ಸಮ್ಮೇಳನ ನಡೆಯಿತು. 70ರ ದಶಕದಲ್ಲಿ ಕನ್ನಡ ಸಾಹಿತ್ಯ ಬೆಳೆಯುತ್ತಾ ಬಂದ ಎಡಪಂಥೀಯ, ಪ್ರಗತಿಪರ, ಪ್ರಜಾಸತ್ತಾತ್ಮಕ ನಿಲುವುಗಳಿಗೆ ಸಂಘಟನೆಯ ನೆಲೆ ಒದಗಿಸಲು ಧರ್ಮಸ್ಥಳ ಸಮ್ಮೇಳನ ಒಂದು ಸನ್ನಿವೇಶವನ್ನು ಒದಗಿಸಿತು. ಆಗಲೇ ಅಡಿಗರು ರಾಜಕೀಯವಾಗಿ ಸಂಘ ಪರಿವಾರದವರಾಗಿದ್ದರು. ಹಂಪನಾ ಅವರು ಸಮ್ಮೇಳನವನ್ನು 'ಧರ್ಮಸ್ಥಳ'ಕ್ಕೆ ಕೊಂಡೊಯ್ದರು. ಕರ್ನಾಟಕದಲ್ಲಿ ದಲಿತ ಸಂಘರ್ಷ ಸಮಿತಿ, 'ಸಮುದಾಯ'ದಂತಹ ಆಂದೋಲನಾತ್ಮಕ ಸಂಘಟನೆಗಳು ಕ್ರಿಯಾಶೀಲವಾಗಿದ್ದವು.
ತಾತ್ವಿಕ ವಿವಾದದ ಕಾರಣ ಹೇಳಿ ಹುಟ್ಟಿದ ಇನ್ನೊಂದು ಸಮ್ಮೇಳನ (ಸಂಘಟನೆಯಲ್ಲ) 'ಜಾಗೃತ ಸಾಹಿತ್ಯ ಸಮ್ಮೇಳನ'. 1990ರ ಫೆಬ್ರವರಿಯಲ್ಲಿ ಹುಬ್ಬಳ್ಳಿಯಲ್ಲಿ ನಡೆದ 'ಕನ್ನಡ ಸಾಹಿತ್ಯ ಸಮ್ಮೇಳನ'ಕ್ಕೆ ಪ್ರತಿಯಾಗಿ ಅಥವಾ ಪರ್ಯಾಯವಾಗಿ ಬೆಂಗಳೂರಿನಲ್ಲಿ 'ಜಾಗೃತ ಸಾಹಿತ್ಯ ಸಮ್ಮೇಳನ' ನಡೆಯಿತು. 1990ರ 59ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಡಾ.ಆರ್.ಸಿ. ಹಿರೇಮಠ ಅವರು ಅಧ್ಯಕ್ಷರಾಗಿ ಆಯ್ಕೆಯಾದಾಗ ವಿವಾದಗಳೆದ್ದವು. ಕೆಲವರು ಶ್ರೇಷ್ಠತೆಯ ಪ್ರಶ್ನೆಯನ್ನೇ ಎತ್ತಿದರು ಮತ್ತು ಶ್ರೇಷ್ಠತೆಯ ವಾದವನ್ನು ಬೆಳೆಸಿದರು. 'ಜಾಗೃತ ಸಾಹಿತ್ಯ ಸಮ್ಮೇಳನ'ದಲ್ಲಿ ಭಾಗವಹಿಸಿದ ಕೆ.ವಿ. ಸುಬ್ಬಣ್ಣನವರು ಬರೆದ 'ಶ್ರೇಷ್ಠತೆಯ ವ್ಯಸನ' ಎಂಬ ಲೇಖನವನ್ನು ಇಲ್ಲಿ ನೆನೆಯಬಹುದು.
ಈಗ 74ನೇ ಕನ್ನಡ ಸಾಹಿತ್ಯ ಸಮ್ಮೇಳನವು ಉಡುಪಿಯಲ್ಲಿ ನಡೆಯುವಾಗ ಸಂಘ- ಪರಿವಾರದ ಸಂಬಂಧವುಳ್ಳವರೆಂದು ಭಾವಿಸಲಾದ ಪ್ರೊ.ಎಲ್.ಎಸ್. ಶೇಷಗಿರಿರಾಯರು ಅಧ್ಯಕ್ಷರಾಗಿರುವುದು ಮತ್ತು ಸಮ್ಮೇಳನ ವ್ಯವಸ್ಥೆಯ ಮುಂಚೂಣಿಯಲ್ಲಿ ಸಂಘ- ಪರಿವಾರದವರೇ ತುಂಬಿರುವುದು ತಮ್ಮ ತಾತ್ವಿಕ ವಿರೋಧಕ್ಕೆ ಕಾರಣವೆಂದು ಪ್ರತಿಪಾದಿಸಿರುವ ಕೋಮು ಸೌಹಾರ್ದ ವೇದಿಕೆ ಗೆಳೆಯರು ಇತರೆ ಪ್ರಗತಿಪರರ ಜೊತೆ ಸೇರಿ ಉಡುಪಿಯಲ್ಲಿ 'ಸೌಹಾರ್ದ ಸಾಹಿತ್ಯ ಸಮ್ಮೇಳನ' ಏರ್ಪಡಿಸಿದ್ದಾರೆ. ಶಿವಮೊಗ್ಗ ಸಾಹಿತ್ಯ ಸಮ್ಮೇಳನದಲ್ಲಿ ಕೋಮು ಸೌಹಾರ್ದ ವೇದಿಕೆ ಪರವಾಗಿದ್ದ ಚಂದ್ರಶೇಖರ ಪಾಟೀಲರು ಅದೇ ವೇದಿಕೆಯವರ ಪ್ರತಿರೋಧವನ್ನು ಎದುರಿಸಬೇಕಾದದ್ದು ವಿಪರ್ಯಾಸ! ಆದರೆ ಕೋಮು ಸೌಹಾರ್ದ ವೇದಿಕೆಯ ಜೊತೆ ಉಡುಪಿಯ ಪ್ರಗತಿಪರರು (ಉದಾ: ಜಿ. ರಾಜಶೇಖರ ಮುಂತಾದವರು) ಸೇರಿದ ಮೇಲೆ ಸೌಹಾರ್ದ ಸಮ್ಮೇಳನವು 'ಪರ್ಯಾಯ ಸಮ್ಮೇಳನ'ವಲ್ಲ ಎಂದು ತಿಳಿಸಲಾಗಿದೆ. ಆದರೂ ತಾತ್ವಿಕ ಭಿನ್ನತೆ ಇದ್ದೇ ಇದೆ. ಹೀಗಾಗಿ ಸೌಹಾರ್ದ ಸಾಹಿತ್ಯ ಸಮ್ಮೇಳನವು ಧಾರ್ಮಿಕ ಮೂಲಭೂತವಾದಕ್ಕೆ ಪ್ರತಿರೋಧಿಯಾದ ಸಮ್ಮೇಳನವಾಗಲಿದೆ. ಚಂಪಾ ಅವರು ಈ ಸಮ್ಮೇಳನದಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ.
ಈ ತಾತ್ವಿಕ ಭಿನ್ನಮತದ ಘಟನೆಗಳು ಸಾಹಿತ್ಯ ಪರಿಷತ್ತಿನಂತಹ ಸಂಸ್ಥೆಗಳ ಇತಿಮಿತಿಯನ್ನು ತೋರಿಸುತ್ತವೆ. ಯಾವುದೇ ನಿರ್ದಿಷ್ಟ ತಾತ್ವಿಕತೆಗೆ ಬದ್ಧವಾಗಿ ಕೆಲಸಮಾಡುವ ಸ್ವರೂಪಕ್ಕೆ ಸಾಹಿತ್ಯ ಪರಿಷತ್ತಿನ ಆಶಯದಲ್ಲಿ ಅವಕಾಶವಿಲ್ಲ. ಇದರ ನೇತೃತ್ವ ವಹಿಸಿದವರು ಒಟ್ಟಾರೆ ಪ್ರಗತಿಪರ ಸ್ವರೂಪವನ್ನು ಪರಿಷತ್ತಿನ ವ್ಯಾಪ್ತಿಯಲ್ಲೇ ನೀಡಲು ಪ್ರಯತ್ನಿಸಬಹುದೆಂಬುದು ನಿಜವಾದರೂ ಅದು ತಾತ್ವಿಕವಾಗಿ ನಿರ್ದಿಷ್ಟ ಸಾಮಾಜಿಕ, ರಾಜಕೀಯ ಬದ್ಧತೆ ತೋರುವುದು ಕಷ್ಟವೆಂದು ಇಲ್ಲಿಯವರೆಗಿನ ಬೆಳವಣಿಗೆಗಳು ತೋರಿಸಿವೆ. ಹೀಗಾಗಿ ತಾತ್ವಿಕ ವಿವಾದಗಳು ಹುಟ್ಟುತ್ತಲೇ ಇರುತ್ತವೆ.
ಟಿಎಸ್‌ಐ
|