|
ಡಾ. ಚಂದ್ರಶೇಖರ ಕಂಬಾರ
ಹಿರಿಯ ಸಾಹಿತಿ ಮತ್ತು ವಿಧಾನ ಪರಿಷತ್ ಸದಸ್ಯ
|
ಕನ್ನಡ ಭಾಷೆ ಉಳೀಬೇಕು, ಬೆಳೀ ಬೇಕು ಎನ್ನುವ ವಿಚಾರದ ಬಗೆಗೆ ನಾವೆಲ್ಲಾ ತುಂಬಾ ಮಾತನಾಡುತ್ತೇವೆ. ಆದರೆ ಮಾತಿನಂತೆ ಕೆಲಸ ನಡೆಯುತ್ತಿಲ್ಲ. ಕನ್ನಡ ಭಾಷೆ ನಿಜಕ್ಕೂ ಉಳೀಬೇಕಾದರೆ ಅದು ತಾಂತ್ರಿಕವಾಗಿ ಉಳಿಯಬೇಕು. ಅಂದರೆ ಕನ್ನಡ ಸಾಫ್ಟ್‌ವೇರ್, ಆಪರೇಟಿಂಗ್ ಸಿಸ್ಟಮ್ ಬೆಳೆದು ಬರಬೇಕು. ಇಂದು ಚೀನಾದಂತಹ ಸಾಂಪ್ರದಾಯಿಕ ದೇಶ ಕೂಡಾ ಅಷ್ಟು ಧಾವಂತದಿಂದ ಇಂಗ್ಲಿಷ್ ಕಲಿಯುತ್ತಿದೆ ಎಂದರೆ ಅದಕ್ಕೆ ಕಾರಣ ಇಂಗ್ಲಿಷ್ ಭಾಷೆ 'ತಂತ್ರಜ್ಞಾನ ಸ್ನೇಹಿ' ಆಗಿರುವುದು. ಆದರೆ ನಮ್ಮ ಭಾಷೆ ತಂತ್ರಜ್ಞಾನದ ಹಾದಿಯಲ್ಲಿ ತುಂಬಾ ಹಿಂದೆ ಬಿದ್ದಿದೆ. ಹಾಗೆ ನೋಡಿದರೆ ಕನ್ನಡ ನಾಡು ವಿಶ್ವಕ್ಕೆ ಅತಿಶ್ರೇಷ್ಠ ಸಾಫ್ಟ್‌ವೇರ್ ಎಂಜಿನಿಯರ್‌ಗಳ ಕೊಡುಗೆ ನೀಡುತ್ತಿದೆ. 'ಸಿಲಿಕಾನ್ ವ್ಯಾಲಿ' ಎಂಬ ಹೆಸರನ್ನೂ ಪಡೆದಿದೆ. ಇನ್ಫೋಸಿಸ್ ಮತ್ತು ವಿಪ್ರೋದಂತಹ ವಿಶ್ವ ಪ್ರಸಿದ್ಧ ಸಾಫ್ಟ್‌ವೇರ್ ಕಂಪನಿಗಳನ್ನು ಹೊಂದಿದೆ. ಆದರೆ ಕನ್ನಡ ಭಾಷೆಯ ತಂತ್ರಾಂಶದ ಅಭಿವೃದ್ಧಿಗೆ ಈ ಯಾವ ಹೆಗ್ಗಳಿಕೆಯೂ ನೆರವಾಗುತ್ತಿಲ್ಲ.
ಹಿಂದೆ ಕಲಿಯುಗ, ತ್ರೇತಾಯುಗ ಅನ್ನುತ್ತಿದ್ದರಲ್ಲ; ಕಂಪ್ಯೂಟರ್ ಲೋಕದಲ್ಲಿ ಮೂರು ವರ್ಷಗಳಿಗೆ ಒಂದು ಯುಗವಂತೆ. ಅಷ್ಟು ವೇಗದ ಯುಗ ಇದು. ನಮ್ಮ ನೆರೆಯ ತಮಿಳು ಭಾಷಾ ತಂತ್ರಾಂಶ ಎಷ್ಟು ಪ್ರಗತಿ ಸಾಧಿಸಿದೆ ಎಂದರೆ ನಾವು ಅದಕ್ಕಿಂತ ಐದು ಯುಗಗಳಷ್ಟು ಹಿಂದಿದ್ದೇವೆ.
ನಮ್ಮ ರಾಜಕಾರಣಿಗಳೆಲ್ಲಾ ಕನ್ನಡ ಭಾಷೆಯ ಬಗ್ಗೆ ಬರೀ ಮಾತನಾಡುತ್ತಾರಷ್ಟೆ. ಅಂತರಂಗದಲ್ಲಿ ನಿಜವಾಗಿ ಅವರಿಗೆ ಕನ್ನಡ ಪ್ರೇಮ ಇಲ್ಲ. ಇದ್ದಿದ್ದರೆ ಕನ್ನಡ ಭಾಷಾ ತಂತ್ರಾಂಶ ಅಭಿವೃದ್ಧಿಯನ್ನು ಅಷ್ಟು ನಿರ್ಲಕ್ಷ್ಯ ಮಾಡುತ್ತಿರಲಿಲ್ಲ. ಹಿಂದೆ ಕನ್ನಡದ ಬಗ್ಗೆ ಅಭಿಮಾನವಿದ್ದ ೨೭ ಎಂಜಿನಿಯರ್‌ಗಳು ಕನ್ನಡ ತಂತ್ರಾಂಶದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದರು. ಆದರೆ ಎರಡೂವರೆ ಕೋಟಿ ರೂ. ವ್ಯವಹಾರ ನಡೆಸುವ ಸಂಸ್ಥೆಯಾಗಿದ್ದರಷ್ಟೇ ಅವರ ತಂತ್ರಾಂಶ ಕೊಳ್ಳುವುದಾಗಿ ಸರ್ಕಾರ ಹೇಳಿತು. ಸರ್ಕಾರವೇ ಅವರ ಗಿರಾಕಿಯಾಗಿದ್ದಾಗ ಈ ಮಿತಿಗಳೆಲ್ಲಾ ಏಕೆ ಬೇಕಿತ್ತು? ಅಷ್ಟೇ ಅಲ್ಲ ಅವರ ವ್ಯವಹಾರದ ಮೇಲೆ ಶೇ. 4ರಷ್ಟು ತೆರಿಗೆ ವಿಧಿಸಿತು. ವಿಪ್ರೋ, ಇನ್ಫೋಸಿಸ್‌ನಂತಹ ಸಂಸ್ಥೆಗಳಿಗೆ ತೆರಿಗೆ ವಿನಾಯಿತಿ. ಆದರೆ ಕನ್ನಡ ತಂತ್ರಾಂಶ ಅಭಿವೃದ್ಧಿ ಕೆಲಸ ಮಾಡಿದರೆ ತೆರಿಗೆ! ಇದು ಯಾವ ನ್ಯಾಯ? ಸುದೈವವಶಾತ್ ಅಂದಿನ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಯಪ್ರಜ್ಞೆ ಮೆರೆದು ಈ ತೆರಿಗೆ ರದ್ದುಪಡಿಸಿದರು.
ಕಂಪ್ಯೂಟರ್ ತಂತ್ರಜ್ಞಾನ, ಭಾಷಾ ತಂತ್ರಾಂಶ ಇವುಗಳಲ್ಲೆಲ್ಲಾ ನನಗೂ ಅಷ್ಟು ಅರಿವು ಇರಲಿಲ್ಲ. ಆದರೆ ತೇಜಸ್ವಿ ನನ್ನ ತಲೆಕೆಡಿಸಿದ! ಆತ ತುಂಬಾ ಹಿಂದೆಯೇ ಕಂಪ್ಯೂಟರ್ ಬಳಕೆ ಮಾಡಿಕೊಂಡಿದ್ದ. ಕನ್ನಡ ತಂತ್ರಾಂಶ ಅಭಿವೃದ್ಧಿಯ ಬಗ್ಗೆ ಆತ ಸರ್ಕಾರಕ್ಕೆ ಹಲವಾರು ಸಲಹೆ ನೀಡಿದ್ದ. ಆದರೆ ರಾಜ್ಯ ಸರ್ಕಾರ ಅವುಗಳನ್ನು ಗಂಭೀರವಾಗಿ ಪರಿಗಣಿಸಲಿಲ್ಲ.
ಈಗ ಸರ್ಕಾರ ಕನ್ನಡ ತಂತ್ರಾಂಶ ಅಭಿವೃದ್ಧಿ ಕೆಲಸವನ್ನು ಮೈಕ್ರೋಸಾಫ್ಟ್ ಸಂಸ್ಥೆಗೆ ಒಪ್ಪಿಸಿದೆ. ಆ ಸಂಸ್ಥೆ ಯಾರಿಗೂ 'ಸೋರ್ಸ್ ಕೋಡ್' ನೀಡುವುದಿಲ್ಲ. ಹೀಗಾಗಿ ಭವಿಷ್ಯದಲ್ಲಿ ತಂತ್ರಾಂಶ ಅಭಿವೃದ್ಧಿಗೆ ನಾವು ಅದೇ ಸಂಸ್ಥೆಯನ್ನು ಆಶ್ರಯಿಸಬೇಕಾಗುತ್ತದೆ. ಕಾಲಕಾಲಕ್ಕೆ ಅಪ್‌ಡೇಟ್ ಆಗುವುದು ಕಷ್ಟವಾಗುತ್ತದೆ. ನಮ್ಮ ಹಿಂದಿನ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರು ಮೈಕ್ರೋಸಾಫ್ಟ್ ಸಂಸ್ಥೆಯ ಮುಖ್ಯಸ್ಥ ಬಿಲ್‌ಗೇಟ್ಸ್‌ನ ಮುಖ ಕೂಡಾ ನೋಡಲು ಬಯಸದೆ ಬಹಿಷ್ಕಾರ ಹಾಕಿದ್ದರು. ಅಂತಹ ವ್ಯಕ್ತಿಯ ಜೊತೆ ನಮ್ಮ ರಾಜ್ಯ ಸರ್ಕಾರ ವ್ಯವಹಾರಕ್ಕೆ ಮುಂದಾಗುತ್ತದೆ. ಇದಕ್ಕೆಲ್ಲಾ ಐಎಎಸ್ ಲಾಬಿಯೇ ಮೂಲ. ಕನ್ನಡ ಕಾಳಜಿ ಇಲ್ಲದ ಈ ಐಎಎಸ್ ಅಧಿಕಾರಿ ವರ್ಗ ರಾಜಕಾರಣಿಗಳ ಕಿವಿ ಊದಿ ಅವರ ದಿಕ್ಕು ತಪ್ಪಿಸುತ್ತಿದೆ.
ಇಂದು ಬಯೋಟೆಕ್ನಾಲಜಿ, ಕಂಪ್ಯೂಟರ್ ಟೆಕ್ನಾಲಜಿ ಇತ್ಯಾದಿ ಕ್ಷೇತ್ರಗಳು ಎಷ್ಟು ವೇಗವಾಗಿ ಬೆಳೆಯುತ್ತಿವೆ ಎಂದರೆ ಇವುಗಳ ಪಾರಿಭಾಷಿಕ ಪದಗಳನ್ನು ಕನ್ನಡದಲ್ಲಿ ಬಳಸಲು ಕೂಡಾ ಸಾಧ್ಯವಾಗುತ್ತಿಲ್ಲ. ಈ ಪದಗಳ ಅನುವಾದಗಳೂ ಕಠಿಣ ಆಗಿಬಿಟ್ಟಿವೆ. ಹೀಗಿರುವಾಗ ನಮಗೆ ಇಂಗ್ಲಿಷ್ ಪದಗಳ ಬಳಕೆ ಅನಿವಾರ್ಯವಾಗಿಬಿಡುತ್ತದೆ. ಇಂದು ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಪಟ್ಟ ಪದಗಳನ್ನು ಉಚ್ಚರಿಸುವಾಗ, ಬರೆಯುವಾಗ ಇಂಗ್ಲಿಷ್ ಬೇಕೆ ಬೇಕು ಎನ್ನುವಂತಹ ಸ್ಥಿತಿ ಇದೆ. ಇದಕ್ಕಾಗಿಯೇ ತಂತ್ರಜ್ಞಾನ ಕುರಿತ ಒಂದು ಕನ್ನಡ ಪದಕೋಶ ರಚನೆಯಾಗಬೇಕು. ಇದು ಅತ್ಯಂತ ಜರೂರು. ಆದರೆ ಇದನ್ನು ಕನ್ನಡ ಪುಸ್ತಕ ಪ್ರಾಧಿಕಾರವಾಗಲೀ, ಪರಿಷತ್ತಾಗಲೀ, ಕನ್ನಡ ವಿಶ್ವವಿದ್ಯಾಲಯವಾಗಲೀ ಮಾಡುತ್ತಿಲ್ಲ.
ದೇಶ ಭಾಷೆಯಲ್ಲಿ ತಂತ್ರಜ್ಞಾನ ತರುವುದು ಎಷ್ಟು ಮುಖ್ಯವೋ ನಮ್ಮ ಭಾಷೆಯನ್ನು ಸಶಕ್ತಗೊಳಿಸುವುದು, ಜಾಗತೀಕರಣದ ಪ್ರವಾಹದಿಂದ ಉಳಿಸಿಕೊಳ್ಳುವುದು ಕೂಡಾ ಅಷ್ಟೇ ಮುಖ್ಯ. ನಾನು ಚೀನಾ ಪ್ರವಾಸದ ವೇಳೆ ಜಾಗತೀಕರಣದ ಪ್ರವಾಹದ ವೇಗ ಕಂಡು ದಿಗ್ಭ್ರಮೆಗೊಂಡೆ. ಅಲ್ಲಿನ ಯುವಜನರೆಲ್ಲಾ ಇಂಗ್ಲಿಷ್ ಕಲಿಯಲು ನಾಗಾಲೋಟದಿಂದ ಮುನ್ನುಗ್ಗುತ್ತಿದ್ದಾರೆ. ಇಂಗ್ಲಿಷ್ ಭಾಷೆಯನ್ನು ಪ್ರಚುರಪಡಿಸುವಂತೆ ಅಲ್ಲಿನ ದಿನಪತ್ರಿಕೆಗಳಿಗೆ ಸರ್ಕಾರ ಆದೇಶ ನೀಡಿದೆ. ಪತ್ರಿಕೆಗಳಲ್ಲಿ ಒಂದೆರಡು ಸಾಲು ಇಂಗ್ಲಿಷ್ ವಾಕ್ಯವನ್ನಾದರೂ ಪ್ರಕಟಿಸುವುದು ಕಡ್ಡಾಯ. ಅಷ್ಟೇ ಅಲ್ಲ, ಅತ್ಯಂತ ಅಧೋಗತಿಯ ವಿಚಾರವೆಂದರೆ ಅಲ್ಲಿನ ಪ್ರತಿಯೊಬ್ಬರೂ ತಮ್ಮ ಚೀನೀ ಹೆಸರಿನ ಜೊತೆಗೆ ಒಂದು ಇಂಗ್ಲಿಷ್ ಹೆಸರನ್ನೂ ಇಟ್ಟುಕೊಳ್ಳುತ್ತಿದ್ದಾರೆ. ಚೀನೀ ಭಾಷೆಯ ಹೆಸರು ಉಚ್ಚರಿಸಲು ಇಂಗ್ಲಿಷ್ ಭಾಷಿಕರಿಗೆ ಕಷ್ಟ ಎಂದು ಈ ಕ್ರಮ. ಅಂದರೆ ಅವರು ತಮ್ಮ ದೇಸಿ 'ಐಡೆಂಟಿಟಿ'ಯನ್ನೇ ಮರೆಮಾಚುತ್ತಿದ್ದಾರೆ. ಅಂಕಿತನಾಮ ಅನುವಾದಗೊಳ್ಳಬಾರದು ಎಂಬುದು ವ್ಯಾಕರಣದ ನಿಯಮ. ಆದರೆ ಅಲ್ಲಿ ಹೆಸರುಗಳೂ ಇಂಗ್ಲೀಷೀಕರಣಗೊಳ್ಳುತ್ತಿದೆ.
ಒಂದು ಕಾಲದಲ್ಲಿ ಅಮೆರಿಕದ ಮಾದರಿಯಲ್ಲಿ ಜೀನ್ಸ್, ಟಿ-ಶರ್ಟ್ ಬಳಸುತ್ತಿದ್ದ ಚೀನೀ ವಿದ್ಯಾರ್ಥಿಗಳನ್ನು ಮಾವೋ ಸರ್ಕಾರ ಗುಂಡಿಕ್ಕಿ ಭೀಕರವಾಗಿ ಹತ್ಯೆ ಮಾಡಿತ್ತು. ಅಂತಹ ಚೀನಾ ಈಗ ಅಮೆರಿಕನ್ ಸಂಸ್ಕೃತಿಯನ್ನೇ ಗಾಢವಾಗಿ ಅಪ್ಪಿಕೊಳ್ಳುತ್ತಿದೆ. ಕಾಲ ಎಂತಹ ಏರಿಳಿತಗಳನ್ನು ಮನುಕುಲದ ಎದುರಿಗಿಡುತ್ತದೆ ನೋಡಿ!
ನಮ್ಮ ದೇಶದ ಸಂಸ್ಕೃತಿ, ಭಾಷೆಗಳೂ ಕೂಡಾ ಇದೇ ಭೀತಿಯನ್ನೇ ಎದುರಿಸುತ್ತಿವೆ. ನಮ್ಮದು ಬಹುಸಂಸ್ಕೃತಿಯ ದೇಶ. ಆದರೆ ಈಗ 'ಬಹು' ಮಸುಕಾಗುತ್ತಾ 'ಏಕ' ಪ್ರವರ್ಧಮಾನಕ್ಕೆ ಬರುತ್ತಿದೆ. ಎಲ್ಲಾ ಕಡೆ ಏಕ ಸಂಸ್ಕೃತಿ, ಏಕ ಜನಾಂಗ ಇದ್ದರೆ ಅದು ಏನು ಚೆನ್ನ ಹೇಳಿ? ಅಂಥ ವಾತಾವರಣದಲ್ಲಿ ಕೇವಲ ಆತ್ಮಹತ್ಯೆ ಮಾಡಿಕೊಳ್ಳಬಹುದಷ್ಟೆ. ಅದು ಖಂಡಿತಾ ರಕ್ತ-ಮಾಂಸವುಳ್ಳ ಮನುಷ್ಯರ ಯುಗವಲ್ಲ. ಬದಲಿಗೆ ರೋಬೋಟ್‌ಗಳ ಯಂತ್ರ ಯುಗ. ಹೀಗಾಗಿ ಭವಿಷ್ಯದ ತಲೆಮಾರಿನ ಸ್ಥಿತಿಗತಿಯ ಬಗೆಗೆ ನನಗೆ ತುಂಬಾ ಮರುಕ ಉಂಟಾಗುತ್ತದೆ. ಆದರೂ ಜಾಗತೀಕರಣಗೊಳ್ಳುವ ಪ್ರಕ್ರಿಯೆಯಲ್ಲಿ ಭಾರತ ಕೊನೆಯ ದೇಶವಾಗಲಿದೆ ಎಂಬ ಭರವಸೆ ನನ್ನಲ್ಲಿದೆ.
ಭಾಷೆಯ ಕುರಿತು ಮಾತನಾಡುವಾಗ ಜಾನಪದದ ಬಗ್ಗೆ ಮಾತನಾಡಲೇಬೇಕು. ಜನಪದ ಕಲೆ ಮತ್ತು ಸಾಹಿತ್ಯ ಕೂಡಾ ಭಾಷೆಯ ಜೊತೆಗೆ ತಳುಕು ಹಾಕಿಕೊಂಡಂಥವು. ನಮ್ಮ ದೇಸಿ ಭಾಷೆಗಳೆಲ್ಲಾ ತುಂಬಾ ಶಕ್ತವಾದವು. ಇವಕ್ಕೆಲ್ಲಾ ತನ್ನದೇ ಆದ ದೇಸಿ ಸೊಗಡು ಇದೆ. ಈ ಸೊಗಡು ಸದಾ ಬದಲಾಗುತ್ತಿರುತ್ತದೆ. ಈ ಚಲನಶೀಲತೆ ಇರಬೇಕಾದದ್ದೇ ಮತ್ತು ಯಾವುದೇ ಸಂಸ್ಕೃತಿ ಅಥವಾ ಭಾಷೆಯ ಉಳಿವಿಗೆ ಇಂತಹ ಚಲನಶೀಲತೆ ಅಗತ್ಯ. ಆದರೆ ಇದರಿಂದ ಭಾಷೆಯ ಬಳಕೆ ನಿಲ್ಲಬಾರದು. ಯಾವುದೇ ಭಾಷೆಗೆ ಒಂದು 'ರಿದಂ' ಇರುತ್ತದೆ. ಆ ರಿದಂ ಉಳಿದರೆ ಭಾಷೆ ಕೂಡಾ ಉಳಿಯುತ್ತದೆ. ನಮ್ಮ ರಾಜ್ಯ ಸರ್ಕಾರ ಈಚೆಗೆ ಜಾನಪದ ಮೇಳಗಳನ್ನು ಆಯೋಜಿಸುವ ಕಾರ್ಯಕ್ರಮ ಹಾಕಿಕೊಂಡಿದ್ದರಿಂದ ಹಲವಾರು ಕಲಾವಿದರಿಗೆ ಸ್ವಲ್ಪ ನೆರವಾಗಿದ್ದು ನಿಜ. ಆದರೆ ನಿಜ ಹೇಳಬೇಕೆಂದರೆ ಜನಪದ ಕಲೆಗಳನ್ನು ಉಳಿಸುವ ಕ್ರಮ ಬೇರೆ. ಕಾಲೇಜು ಹುಡುಗರಿಗೆ ಜನಪದ ಕಲೆ ಕಲಿಸಿ ಪ್ರದರ್ಶಿಸುವುದಲ್ಲ. ಬದಲಾಗಿ ಜನಪದದ ನಿಜವಾದ ಕಲಾವಿದರಿಗೆ ನೆರವಾಗಬೇಕು. ಕಲೆಯನ್ನೇ ಜೀವನವನ್ನಾಗಿಸಿ ಬದುಕುತ್ತಿರುವವರಿಗೆ ಬೆಂಬಲ ನೀಡಬೇಕು. ರಾಜ್ಯದ ಹಲವು ಭಾಗಗಳಲ್ಲಿ ಒಂದಷ್ಟು ಕಲಾತಂಡಗಳಿಗೆ ರೆಪರ್ಟರಿ ಮಾದರಿಯಲ್ಲಿ ಪ್ರೋತ್ಸಾಹ ನೀಡಬೇಕು. ಆ ತಂಡಗಳಿಗೆ ಕಲಾ ಪ್ರದರ್ಶನಕ್ಕಾಗಿ ನಿಯಮಿತವಾಗಿ ವೇದಿಕೆ, ಸಂದರ್ಭ ಒದಗಿಸಬೇಕು. 'ಇಂಥಾ ದಿನದಲ್ಲಿ ನನ್ನ ಕಲಾ ಪ್ರದರ್ಶನಕ್ಕೆ ಒಂದು ಕರೆ ಬರುತ್ತದೆ' ಎಂದು ಆ ಕಲಾವಿದನಿಗೆ ಗೊತ್ತಿರಬೇಕು. ಆಗ ಮಾತ್ರ ಆತ ತನ್ನ ಕಲೆಯನ್ನು ಉಳಿಸಿಕೊಳ್ಳಲು ಮುತುವರ್ಜಿ ವಹಿಸುತ್ತಾನೆ. ಹಾಗೆಯೇ ನಮ್ಮ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಬರುವ ವಿದೇಶಿ ಪ್ರವಾಸಿಗರಿಗೂ ಜಾನಪದ ಕಲೆ ವೀಕ್ಷಿಸುವ ಅವಕಾಶ ಒದಗಿಸಬೇಕು. ಇದರಿಂದ ಕಲೆ ಹಾಗೂ ಕಲಾವಿದ ಇಬ್ಬರೂ ಉಳಿಯುತ್ತಾರೆ. ಈ ಕುರಿತು ಯಾವುದೇ ಸರ್ಕಾರ ಗಂಭೀರವಾಗಿ ಚಿಂತಿಸಬೇಕು.
ಭಾಷೆಯ ಬಗ್ಗೆ ಹೀಗೆ ಚಿಂತಿಸುವಾಗ ನಮ್ಮ ಕಿರುತೆರೆ ವಾಹಿನಿಗಳಲ್ಲಿ ಬರುವ ವಿದೇಶೀ ಸರಕಿನ ಅಸಹ್ಯದ ಬಗ್ಗೆ ಹೇಳಲೇಬೇಕು. ಅದೇನು ಹೊಲಸು ಕಾರ್ಯಕ್ರಮಗಳು ಅವು. ಅದನ್ನು ನೋಡಿದವರಿಗೆ ನಾಚಿಕೆಯಾಗಬೇಕೇ ವಿನಾ ಆ ವಾಹಿನಿಗಳಿಗಂತೂ ನಾಚಿಕೆ ಆಗುವುದಿಲ್ಲ. ಸರ್ಕಾರ ಕೂಡಲೇ ಕಿರುತೆರೆಗೆ ಒಂದು ಸೆನ್ಸಾರ್ ಮಂಡಳಿ ಸ್ಥಾಪಿಸಬೇಕು. ತಮಿಳಿನಲ್ಲಿ ಇಂತಹ ಮಂಡಳಿ ಇದೆ. ನಿಜಕ್ಕೂ ತಮಿಳಿನವರ ಭಾಷಾಭಿಮಾನ ಮೆಚ್ಚತಕ್ಕದ್ದು. ಏನನ್ನೇ ಕೊಟ್ಟರೂ ತಮಿಳಿನಲ್ಲಿ ಕೊಡಿ ಎನ್ನುತ್ತಾರೆ ಅವರು. ಇಂಗ್ಲಿಷ್ ಭಾಷೆಯನ್ನು ತುಂಬಾ ಚೆನ್ನಾಗಿ ಬಲ್ಲ ನನ್ನ ಹಲವು ತಮಿಳು ಸ್ನೇಹಿತರನ್ನು ನಾನು ಕೇಳಿದ್ದೇನೆ. "ಅದೆಷ್ಟೇ ಇಂಗ್ಲಿಷ್ ಪ್ರಭುತ್ವ ಇದ್ದರೂ ನಮ್ಮ ತಮಿಳಿನಲ್ಲಿ ಕೇಳಿದಾಗಷ್ಟೇ ನಮ್ಮ ಮನಕ್ಕೆ ನಾಟುತ್ತದೆ" ಎನ್ನುತ್ತಾರೆ ಅವರು. ಪ್ರೇಕ್ಷಕರ ಈ ಹಪಹಪಿಯಿಂದಲೇ ವಿದೇಶೀ ವಾಹಿನಿಗಳ ಕಾರ್ಯಕ್ರಮಗಳೂ ತಮಿಳಿನಲ್ಲಿ ಡಬ್ ಆಗುತ್ತವೆ. ಹೀಗೆ ಡಬ್ ಆಗುವಾಗ ಅಸಹ್ಯ ನುಡಿಗಟ್ಟುಗಳಿಗೆ ಕತ್ತರಿ ಬೀಳುತ್ತದೆ.
ಇನ್ನು ಶಾಸ್ತ್ರೀಯ ಭಾಷೆಯ ವಿಚಾರಕ್ಕೆ ಬಂದರೆ, ತಮಿಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಿದಾಗಲೇ ಕನ್ನಡಕ್ಕೂ ನೀಡಬೇಕಿತ್ತು. ತಮಿಳಿನ 'ಸಂಗಮ್ ಸಾಹಿತ್ಯ' ಯುಗದಲ್ಲಿದ್ದ ಹಲವಾರು ಕನ್ನಡ ಕವಿಗಳ ಬಗ್ಗೆ ಇತ್ತೀಚೆಗೆ ಸಂಶೋಧನೆಯಾಗಿದೆ. ಕನ್ನಡ ಪ್ರಾಚೀನವಾದ ಅತಿ ಶ್ರೀಮಂತ ಭಾಷೆ. ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಿದಾಕ್ಷಣ ಅದಕ್ಕೆ ಎರಡು ಕೋಡೇನೂ ಮೂಡುವುದಿಲ್ಲ ಎನ್ನಿ. ಆದರೆ ನಮ್ಮಲ್ಲಿ ಒಂದು ಆತ್ಮವಿಶ್ವಾಸ ಮೂಡುತ್ತದೆ. ಕೇಂದ್ರ ಸರ್ಕಾರ ಇತ್ತ ಗಮನಹರಿಸಬೇಕು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡುವ ವಿಚಾರದಲ್ಲಿ ಅದೇಕೆ ಇನ್ನೂ ವಿಳಂಬನೀತಿ ಅನುಸರಿಸಲಾಗುತ್ತಿದೆಯೋ ಗೊತ್ತಿಲ್ಲ.
ಟಿಎಸ್‌ಐ
|