|
ಅಕ್ಷರ ಗಂಗೆ ಮಂದ್ರವಾಗಿ ಹರಿಯುತ್ತಿದ್ದಾಗಲೇ ಧುತ್ತನೆ ವಿವಾದದ ಜಲಪಾತಗಳು ಸೃಷ್ಟಿಯಾಗುವುದು ಸಾಹಿತ್ಯ ಲೋಕದಲ್ಲಿ ತೀರಾ ಸಾಮಾನ್ಯ. ಕನ್ನಡ ಶಾರದೆ ಕೂಡಾ ಇದಕ್ಕೆ ಹೊರತಲ್ಲ. ಇಲ್ಲಿ ಸಾಹಿತ್ಯ ಸಮ್ಮೇಳನದಂತಹ ಬೃಹತ್ ಕಾರ್ಯಕ್ರಮಗಳಲ್ಲೇ ವಿವಿಧ ಸಾಹಿತಿಗಳು, ಸಂಘಟನೆಗಳು ಹುಟ್ಟುಹಾಕಿದ ವಾಗ್ವಾದ, ಗಲಭೆಗಳು ತಾರಕಕ್ಕೇರಿದ ಸಂಗತಿಗಳಿಂದ ಹಿಡಿದು ಕೃತಿಯೊಂದರ ಶ್ರೇಷ್ಠತೆಯ ಕುರಿತ ಬಿಸಿ ಬಿಸಿ ಚರ್ಚೆಯವರೆಗೆ ಹಲವು ವಿವಾದಗಳು ಹೆಡೆ ಬಿಚ್ಚಿವೆ. ಕೆಲವು ಸಾಹಿತ್ಯದ ಸ್ಥಿತ್ಯಂತರಕ್ಕೆ, ಹೊಸ ಸಂಶೋಧನೆಗೆ ದಾರಿ ಮಾಡಿಕೊಟ್ಟಿದ್ದರೆ ಮತ್ತೆ ಕೆಲವು ಸಚಿವ ಸ್ಥಾನಕ್ಕೇ ಕುತ್ತು ತಂದಿವೆ. ಇತಿಹಾಸದ ವಿಷಯ ತೆಗೆದುಕೊಂಡಾಗಲಂತೂ ಚಳವಳಿ ನಡೆದು ಕೃತಿಗೆ ನಿಷೇಧ ಹೇರುವಷ್ಟರ ಮಟ್ಟಿಗೆ ವಿವಾದಗಳು ಗಿರಕಿ ಹೊಡೆದಿವೆ.
ಇಂತಹ ಚರ್ಚೆ, ವಿವಾದಗಳನ್ನು ತುಂಬಿಕೊಂಡ ಸಾಹಿತ್ಯ ಪರಂಪರೆಯ ಜಾಡಿನತ್ತ ಒಂದು ನೋಟ:
ಕವಿರಾಜಮಾರ್ಗ: ಹಾಗೆ ನೋಡಿದರೆ ಕನ್ನಡದ ಪ್ರಪ್ರಥಮ ಲಭ್ಯ ಕೃತಿ 'ಕವಿರಾಜಮಾರ್ಗ'ದಿಂದಲೇ ವಿವಾದದ ದಾರಿಗೆ ಬೆಳಕು ಹಾಯಿಸಬಹುದು. ತೀರಾ ಇತ್ತೀಚಿನವರೆಗೆ ದೊರೆ ನೃಪತುಂಗನೇ ಕವಿರಾಜಮಾರ್ಗದ ಕರ್ತೃ ಎಂಬ ವಾದ ಇತ್ತು. 'ನೃಪತುಂಗದೇವಾನುಮತಮಪ್ಪ ಕವಿರಾಜಮಾರ್ಗಂ...' ಎಂಬ ಸಾಲು ಇದಕ್ಕೆ ಸಮರ್ಥನೆ ಒದಗಿಸುತ್ತಿತ್ತು. ಆದರೆ ಇದೇ ಸಾಲೇ ಹಲವು ಚರ್ಚೆ ಹುಟ್ಟುಹಾಕಿ, ಹಲವು ವಾದಗಳು ನಡೆದು ಕೊನೆಗೆ ಕವಿರಾಜಮಾರ್ಗಕಾರ ನೃಪತುಂಗನಲ್ಲ 'ಶ್ರೀವಿಜಯ' ಎಂದು ಸಾಬೀತಾಯಿತು.
ಕುಮಾರವ್ಯಾಸ: ಭಾಮಿನಿ ದೊರೆ, ರೂಪಕ ಚಕ್ರವರ್ತಿ ಗದುಗಿನ ನಾರಣಪ್ಪ ಸಾರ್ವಕಾಲಿಕ ಶ್ರೇಷ್ಠಕವಿ ಎನ್ನುವುದನ್ನು ಪಂಡಿತ-ಪಾಮರರೆಲ್ಲರೂ ಒಮ್ಮೆಗೇ ಒಪ್ಪುತ್ತಾರೆ. ಆದರೆ ಈತನ ಕಾಲದ ಮಾತು ಬಂದಾಗ ಮಾತ್ರ ಪ್ರತಿಯೊಬ್ಬರದೂ ಒಂದೊಂದು ಮಾತು. ಕನ್ನಡ ವಿಮರ್ಶಕರು, ಸಾಹಿತ್ಯ ಚರಿತ್ರಕಾರರಲ್ಲಿ ಕುಮಾರವ್ಯಾಸನ ಕಾಲದ ಕುರಿತಷ್ಟು ನಡೆದ ಚರ್ಚೆ ಬೇರಿನ್ಯಾವ ಕವಿಯ ಕುರಿತೂ ನಡೆಯಲಿಲ್ಲ ಅಂದರೆ ಅತಿಶಯೋಕ್ತಿ ಅಲ್ಲ. ಅಂತೂ ತನ್ನ ಹೆಸರನ್ನು ಕೂಡಾ ಹೇಳಿಕೊಳ್ಳದ ಈ ಕವಿಯ ಕಾಲ 13ನೇ ಶತಮಾನದಿಂದ 16ನೇ ಶತಮಾನದವರೆಗೆ ತೇಂಕಾಡುತ್ತದೆ.
ಮುದ್ದಣ: ಪತಿ-ಪತ್ನಿಯರ ಸರಸ ಸಂಭಾಷಣೆಯ ಮೂಲಕ ಶ್ರೇಷ್ಠ ಕಥೆ ಹೇಳುವ ನವೀನ ಶೈಲಿಯ ಮಾರ್ಗ ಹಾಕಿಕೊಟ್ಟ ಈ ಮುದ್ದಣ ಯಾರು ಎಂಬುದೇ ಹಲವು ವರ್ಷಗಳ ಕಾಲ ಚರ್ಚೆಗೆ ಗ್ರಾಸವಾಗಿತ್ತು. ಕೊನೆಗೆ ನಂದಳಿಕೆ ಲಕ್ಷ್ಮೀನಾರಾಯಣಪ್ಪ ಎಂಬ ದೈಹಿಕ ಶಿಕ್ಷಕನೇ ಮುದ್ದಣನ ಹೆಸರಲ್ಲಿ ಬರೆದಿದ್ದು ಸಾಬೀತಾಯಿತು. 20ನೇ ಶತಮಾನದ ಈ ಪ್ರತಿಭೆ ತನ್ನ ಹೆಸರೇ ಮರೆಮಾಚಿ ಹಳಗನ್ನಡ ಶೈಲಿಯಲ್ಲಿ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಭಂಡಾರವನ್ನು ಶ್ರೀಮಂತಗೊಳಿಸಿದ.
ಕುವೆಂಪು: ರಾಷ್ಟ್ರಕವಿ ಕುವೆಂಪು ಅವರ 'ಜಯ ಭಾರತ ಜನನಿಯ ತನುಜಾತೆ' ಕವನ ನಾಡಗೀತೆಯಾಗಿ ವಿವಾದದ ಕೇಂದ್ರವಾಯಿತು. ಶಂಕರ, ರಾಮಾನುಜರ ಜೊತೆಗೆ ಮಧ್ವಾಚಾರ್ಯರ ಹೆಸರನ್ನೂ ಸೇರಿಸಬೇಕೆಂಬ ವಿಷಯ ಸಾಕಷ್ಟು ವಿವಾದಕ್ಕೆ ಕಾರಣವಾಯಿತು. ಹೆಸರು ಸೇರ್ಪಡೆಗೆ ಕುವೆಂಪು ಸಮ್ಮತಿಸಿದ್ದೂ ಆಯಿತು. ದೀರ್ಘವಾದ ಈ ಕವನದಲ್ಲಿ ಯಾವ ಚರಣ ಬಿಡಬೇಕು, ಯಾವ ರಾಗದಲ್ಲಿ ಹಾಡಬೇಕು ಎಂಬ ವಿಷಯಗಳೂ ಚರ್ಚೆಗೊಳಗಾದವು.
ಮಾಸ್ತಿ ವೆಂಕಟೇಶ ಅಯ್ಯಂಗಾರ್: ಡೆಪ್ಯುಟಿ ಕಮಿಷನರಂತಹ ಉನ್ನತ ಹುದ್ದೆಯಲ್ಲಿದ್ದು ಅಗಾಧ ಪಾಂಡಿತ್ಯ ಹೊಂದಿದ್ದ ವಿನಯವಂತರೂ, ಸರಳ ದೇಸಿ ಶೈಲಿಯಲ್ಲೇ ಸಾಹಿತ್ಯ ಲೋಕದಲ್ಲಿ ಚಿರಸ್ಥಾಯಿಯಾದ 'ಕನ್ನಡದ ಆಸ್ತಿ' ಕೂಡಾ ವಿವಾದದಿಂದ ಹೊರತಾಗಲಿಲ್ಲ. ಇವರು 1910ರ ವೇಳೆಗೆ ರಂಗನ ಮದುವೆ, ರಂಗಪ್ಪನ ದೀಪಾವಳಿಯಂತಹ ಸರಳ ಶ್ರೀಮಂತಿಕೆಯ ಸಣ್ಣಕಥೆಗಳನ್ನು ಬರೆಯಲಾರಂಭಿಸಿದಾಗ ಇದೂ ಒಂದು ಸಾಹಿತ್ಯವೇ ಎಂಬ ವಾದದ ಅಲೆ ಎದ್ದಿತು. 'ರಂಗಪ್ಪನ ದೀಪಾವಳಿಯೋ? ಸರಿ. ಉಗ್ರಪ್ಪನ ಉಗಾದಿಯನ್ನೂ ಬರೀರಿ' ಎಂದು ಪಂಡಿತರೆನ್ನಿಸಿಕೊಂಡವರು ಟೀಕೆಯ ಚಾಟಿ ಬೀಸಿದ್ದರು. ಮಾಸ್ತಿ ಅವರು ಇದನ್ನೇ ಸವಾಲಾಗಿ ಸ್ವೀಕರಿಸಿ 'ಉಗ್ರಪ್ಪನ ಉಗಾದಿ'ಯನ್ನೂ ಬರೆದರು. 1949ರಲ್ಲಿ ಇವರು ಬರೆದ 'ಚೆನ್ನಬಸವ ನಾಯಕ' ಐತಿಹಾಸಿಕ ಕಾದಂಬರಿಯಂತೂ ವೀರಶೈವ ಸಮಾಜದವರ ಕೆಂಗಣ್ಣಿಗೆ ಗುರಿಯಾಗಿತ್ತು. ಅಲ್ಲಿನ ಪಾತ್ರವೊಂದನ್ನು ಮಾಸ್ತಿ ಅವರು ಚಿತ್ರಿಸಿದ ಬಗೆಗೆ ಭಾರಿ ಪ್ರತಿರೋಧ ಉಂಟಾಯಿತು. 1983ರಲ್ಲಿ ಇವರ 'ಚಿಕವೀರ ರಾಜೇಂದ್ರ' ಕೃತಿಗೆ ಜ್ಞಾನಪೀಠ ಪುರಸ್ಕಾರ ಲಭ್ಯವಾದಾಗಲೂ ಹಲವರು 'ಅಡ್ಡಮಾತು' ತೆಗೆದಿದ್ದರು. ಇದರಿಂದ ಮನನೊಂದ ಮಾಸ್ತಿ ಜ್ಞಾನಪೀಠ ತಿರಸ್ಕಾರಕ್ಕೆ ಮುಂದಾಗಿದ್ದರು. ಆಗ ಗುಲ್ಬರ್ಗಾದಿಂದ ಹಾ.ಮಾ. ನಾಯಕರು ಒಂದೇ ಉಸಿರಿಗೆ ಧಾವಿಸಿ ಬಂದು ಅಕ್ಷರಶಃ ಮಾಸ್ತಿ ಅವರ ಕಾಲು ಹಿಡಿದು ಅವರು ಪ್ರಶಸ್ತಿ ಒಪ್ಪಿಕೊಳ್ಳುವಂತೆ ಮಾಡಬೇಕಾಯಿತು.
ರಾಜರತ್ನಂ-ಬೀಚಿ: 'ಮೂಗ್ನಲ್ ಕನ್ನಡ ಮಾತಾಡಿದ' ಬಹುಭಾಷಾ ವಿದ್ವಾಂಸ ಜಿ.ಪಿ. ರಾಜರತ್ನಂ ಅವರು 'ಯಂಡ್ಕುಡ್ಕ ರತ್ನ' ಮಾದರಿಯ ರತ್ನನ ಪದಗಳನ್ನು ಬರೆದಾಗ ಆ ಭಾಷಾಮೋಡಿಗೆ ತಲೆದೂಗಿದವರು ಕೂಡಾ ಇದೇನು ಸಾಹಿತ್ಯ ಎಂದು ಜರೆದಿದ್ದರು. ಅದಾದ ಮೇಲೆ ಹಾಸ್ಯಬ್ರಹ್ಮ ಬೀಚಿ ಮತ್ತು ರಾಜರತ್ನಂ ಅವರ ನಡುವಿನ ವೈಮನಸ್ಯ, ವಾದ-ವಿವಾದಗಳು ಹಲವು ವರ್ಷಗಳ ಕಾಲ ನಡೆದವು. ಬೀಚಿ 'ಭಯಾಗ್ರಫಿ' ಎಂಬ ಆತ್ಮಕಥೆ ಬರೆದರೆ, ರತ್ನಂ 'ನಿರ್ಭಯಾಗ್ರಫಿ' ಬರೆದರು. ರತ್ನಂ ಅವರ ಸಾಯಿಬಾಬಾ ಭಕ್ತಿಯನ್ನು ಹೋದಲ್ಲಿ ಬಂದಲ್ಲಿ ಬೀಚಿ ಲೇವಡಿ ಮಾಡತೊಡಗಿದರೆ, ಬೀಚಿ ಅವರನ್ನು ರತ್ನಂ 'ಬೇ.ಶ್ರೀ. ಭೀಮಣ್ಣ' ಎಂದೇ ತೆಗಳತೊಡಗಿದ್ದರು.
ಬೂಸಾ ಪ್ರಕರಣ: 1974ರಲ್ಲಿ ಮೈಸೂರಿನಲ್ಲಿ ನಡೆದ ಸಾಹಿತ್ಯ ಗೋಷ್ಠಿಯೊಂದರಲ್ಲಿ ಅಂದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಬಿ. ಬಸವಲಿಂಗಪ್ಪ ಅವರು 'ಕನ್ನಡದ ಹೆಚ್ಚಿನ ಸಾಹಿತ್ಯ ಮತ-ಧರ್ಮಕ್ಕೆ ಸೇರಿದ್ದು. ಹೀಗಾಗಿ ಈ ಸಾಹಿತ್ಯ ಬೂಸಾ ಇದ್ದಂತೆ' ಎಂಬ ಹೇಳಿಕೆ ನೀಡಿದ್ದು ವಿವಾದವನ್ನು ಹುಟ್ಟು ಹಾಕಿತ್ತು. ಇದು ಬೂಸಾ ಪ್ರಕರಣ ಎಂದೇ (ಕು)ಖ್ಯಾತಿ ಪಡೆದು ರಾಜ್ಯದಾದ್ಯಂತ ದೊಡ್ಡ ಚಳವಳಿ ನಡೆಯಿತು. ಕುವೆಂಪು, ಯು.ಆರ್. ಅನಂತಮೂರ್ತಿ ಸೇರಿದಂತೆ ಹಲವು ಬರಹಗಾರರು ಬಸವಲಿಂಗಪ್ಪ ಅವರನ್ನು ಸಮರ್ಥಿಸಿದರೂ ಬಸವಲಿಂಗಪ್ಪ ತಮ್ಮ ಮಂತ್ರಿ ಪದವಿ ಕಳೆದುಕೊಳ್ಳಬೇಕಾಯಿತು.
ಎಸ್.ಎಲ್. ಭೈರಪ್ಪ: ಅಗಾಧ ಜೀವನಾನುಭವಿ ಭೈರಪ್ಪ ಅವರು ಸಶಕ್ತ ಕಾದಂಬರಿಗಳನ್ನು ಕೊಡುತ್ತಲೇ ಸದಾ ವಿವಾದದ ನಡುವೆಯೇ ಇದ್ದವರು. ಇವರದು ಬಲಪಂಥೀಯ ಧೋರಣೆ ಎಂದು ವಿಮರ್ಶಾಕಾರರು ಇವರನ್ನು ದೂರವಿಟ್ಟರು. ಇವರ 'ಪರ್ವ' ಕೃತಿ ಧರ್ಮಕ್ಕೆ ಮತ್ತು ಮಹಾಕಾವ್ಯಕ್ಕೆ ಮಾಡಿದ ಅಪಮಾನ ಎಂಬ ಟೀಕೆಗೆ ಗುರಿಯಾಗಿತ್ತು. ಇವರ ಕಾದಂಬರಿಗಳಲ್ಲಿನ 'ಕಾಮ', ಲೈಂಗಿಕ ವಿಚಾರಗಳ ವೈಭವೀಕರಣ ಕಥೆಯ ಓಘಕ್ಕೆ ಅನಗತ್ಯ ಎಂಬ ಟೀಕೆಯೂ ಇತ್ತು. ಐತಿಹಾಸಿಕ ಮುಸ್ಲಿಂ ದಾಳಿಯ ವಸ್ತುವನ್ನೊಳಗೊಂಡ ಇತ್ತೀಚಿನ ಇವರ ಕೃತಿ 'ಆವರಣ'ವಂತೂ ಭಾರಿ ವಿವಾದಕ್ಕೆ ಗುರಿಯಾಗಿತ್ತು.
ಸಂಗ್ಯಾಬಾಳ್ಯಾ: ಉತ್ತರ ಕರ್ನಾಟಕದಲ್ಲಿ ಅತ್ಯಂತ ವಿವಾದಕ್ಕೊಳಗಾದ ಕೃತಿ 'ಸಂಗ್ಯಾ-ಬಾಳ್ಯಾ'. ಕಂಬಾರರು ಇದನ್ನು 'ಅಡಾಪ್ಟ್' ಮಾಡಿಕೊಂಡು ತಮ್ಮ ಹೆಸರಿನಲ್ಲಿ ಬರೆದಾಗ ಟೀಕೆಗಳು ಬಂದವು. ಗಂಗವ್ವ ಎಂಬಾಕೆ ತನಗೆ ಸಿಗಲಿಲ್ಲ ಎಂಬ ವೈಯಕ್ತಿಕ ದ್ವೇಷದಿಂದ ಕೃತಿಕಾರ ಪತ್ತಾರ ಮಾಸ್ತರ ಆಕೆಯ ವಿವಾಹೇತರ ಸಂಬಂಧವನ್ನು ಚಿತ್ರಿಸಿದ್ದಾನೆ ಎಂಬ ಆರೋಪ ಸಾಕಷ್ಟು ಚರ್ಚೆಯಾಯಿತು. ಇತ್ತೀಚೆಗೆ ಎಂ.ಎಂ. ಕಲ್ಬುರ್ಗಿ ಅವರು 'ಖರೇ ಖರೇ ಸಂಗ್ಯಾಬಾಳ್ಯಾ' ಬರೆದ ಮೇಲೂ ವಿವಾದದ ಕೇಂದ್ರವಾಯಿತು.
ಗಿರೀಶ ಕಾರ್ನಾಡ: ಭಾರತೀಯ ರಂಗಭೂಮಿಯ ಅದ್ಭುತ ಪ್ರತಿಭೆ ಗಿರೀಶ ಕಾರ್ನಾಡರ 'ಅಂಜು ಮಲ್ಲಿಗೆ' ಕೃತಿ ಅಕ್ಕ-ತಮ್ಮನ ಸಂಬಂಧದ ಬೇರೊಂದು ವ್ಯಾಖ್ಯಾನಕ್ಕಾಗಿ ವಿಮರ್ಶಾ ಲೋಕದಲ್ಲಿ ಹಲವು ಚರ್ಚೆ ಹುಟ್ಟುಹಾಕಿತ್ತು. ಕಾರ್ನಾಡರಿಗೆ ಜ್ಞಾನಪೀಠ ಘೋಷಣೆಯಾದಾಗ ಕೂಡಾ ಟೀಕೆಗಳು ಬಂದವು. ಕಾವೇರಿ ಜಲವಿವಾದದ ಅಂತಿಮ ತೀರ್ಪು ಬಂದ ಸಂದರ್ಭದಲ್ಲಿ ಸ್ವತಃ ಕಾರ್ನಾಡರೇ ವಿವಾದದ ಕೇಂದ್ರವಾದರು. ಇಂಗ್ಲಿಷ್ ಚಾನಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಾರ್ನಾಡರು 'ತೀರ್ಪನ್ನು ಒಪ್ಪಬೇಕು' ಎಂದು ಹೇಳಿದ್ದು ಉದ್ರಿಕ್ತ ಜನರನ್ನು ಮತ್ತಷ್ಟು ಕೆರಳಿಸಿತು. ಆಗ ಕಾರ್ನಾಡರ ನಿವಾಸಕ್ಕೆ ಪೊಲೀಸ್ ರಕ್ಷಣೆಯನ್ನೂ ಒದಗಿಸಬೇಕಾಯಿತು.
ಮಹಾಚೈತ್ರ-ಧರ್ಮಕಾರಣ-ಆನುದೇವಾ...: 12ನೇ ಶತಮಾನದ ವಸ್ತು ಎಂದರೆ ವಿವಾದ ಖಚಿತ ಎನ್ನುವುದಕ್ಕೆ ಉದಾಹರಣೆಯಾದ ಕೃತಿಗಳು. ಎಚ್.ಎಸ್. ಶಿವಪ್ರಕಾಶ್ ಅವರ 'ಮಹಾಚೈತ್ರ' ನಾಟಕವನ್ನು ವಿಶ್ವವಿದ್ಯಾಲಯಕ್ಕೆ ಪಠ್ಯವನ್ನಾಗಿಸಿದಾಗ ಪ್ರತಿಭಟನೆಗಳು ನಡೆದವು. ನಾಟಕದಲ್ಲಿ ಬಸವಣ್ಣನನ್ನು ಅವಮಾನಿಸಲಾಗಿದೆ ಎಂದು ಬಿರುಗಾಳಿ ಎಬ್ಬಿಸಲಾಯಿತು. 1995ರಲ್ಲಿ ಪ್ರಕಟವಾದ ಪಿ.ವಿ. ನಾರಾಯಣ ಅವರ 'ಧರ್ಮಕಾರಣ' ಕಾದಂಬರಿಯಲ್ಲಿ ಬಸವಣ್ಣ, ಅಕ್ಕನಾಗಮ್ಮ ಮತ್ತಿತರ ಪಾತ್ರಗಳಿಗೆ ಅಪಚಾರ ಮಾಡಲಾಗಿದೆ ಎಂದು ವೀರಶೈವ ಸಂಘಟನೆಗಳು ಭಾರಿ ಪ್ರತಿಭಟನೆ ನಡೆಸಿದವು. ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಈ ವಿವಾದದಿಂದಾಗಿ ಕೃತಿಯನ್ನು ನಿಷೇಧಿಸಲಾಗಿತ್ತು. ಇತ್ತೀಚೆಗೆ ಬಂಜಗೆರೆ ಜಯಪ್ರಕಾಶ್ ಅವರ 'ಆನುದೇವಾ ಹೊರಗಣವನು' ಕೃತಿ ಬಸವಣ್ಣ ಬ್ರಾಹ್ಮಣ ಮೂಲದವನಲ್ಲ, ಬದಲಿಗೆ ಮಾದಿಗ ಮೂಲದವನು ಎಂದು ನಿರೂಪಿಸಿ ಭಾರಿ ವಿವಾದ ಸೃಷ್ಟಿಸಿತು. ಈ ಕೃತಿಯನ್ನೂ ಮುಟ್ಟುಗೋಲು ಹಾಕಲಾಯಿತು.
ಇವೆಲ್ಲಾ ಸಾಹಿತಿ, ಸಾಹಿತ್ಯ ಕೃತಿಗಳ ಸುತ್ತಾ ಗಿರಕಿ ಹೊಡೆದ ವಿವಾದಗಳು. ಇನ್ನು ಸಾವಿರಾರು ಮಂದಿ ಸೇರಿ ನಡೆಸುವ ಸಮ್ಮೇಳನದಂತಹ 'ಜಾತ್ರೆ'ಗಳು ವಿವಾದ, ಟೀಕೆಗಳಿಲ್ಲದೆ ಸಾಂಗವಾಗಿ ನೆರವೇರುವುದು ಹೇಗೆ ಸಾಧ್ಯ?
ಧರ್ಮಸ್ಥಳ: 1979ರಲ್ಲಿ ತುರ್ತು ಪರಿಸ್ಥಿತಿ ವೇಳೆ ನಡೆದ ಈ ಸಮ್ಮೇಳನಕ್ಕೆ ಗೋಪಾಲಕೃಷ್ಣ ಅಡಿಗರು ಅಧ್ಯಕ್ಷರಾಗಿದ್ದರು. ಈ ಸಮ್ಮೇಳನದಲ್ಲಿ ದಲಿತ-ಬಂಡಾಯ ಸಾಹಿತ್ಯಕ್ಕೂ ಒಂದು ಗೋಷ್ಠಿ ಏರ್ಪಡಿಸಬೇಕು ಎಂದು ಚಂಪಾ ಸೇರಿದಂತೆ ಹಲವು ಸಾಹಿತಿಗಳು ಒತ್ತಾಯಿಸಿದ್ದರು. ಆದರೆ ಅಂದಿನ ಕಸಾಪ ಅಧ್ಯಕ್ಷ ಹಂಪನಾ ಅವರು 'ದಲಿತ, ಕಲಿತ, ಬಲಿತ' ಅಂತ ಪ್ರತ್ಯೇಕ ಗೋಷ್ಠಿ ಏರ್ಪಡಿಸುವುದು ಬೇಡಾ ಅಂದು ಬಿಟ್ಟರು. ಇದೇ ವಿವಾದಕ್ಕೆ ಕಾರಣವಾಯಿತು. ಇದಕ್ಕೆ ಸವಾಲಾಗಿ ಚಂಪಾ ಅವರು ಬೆಂಗಳೂರಿನಲ್ಲಿ ಪರ್ಯಾಯ ಸಮ್ಮೇಳನ ಆಯೋಜಿಸಿದ್ದರು.
ಹುಬ್ಬಳ್ಳಿ: 1990ರಲ್ಲಿ ಆರ್.ಸಿ. ಹಿರೇಮಠ್ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನದಲ್ಲೂ ವಿವಾದವಾಗಿ ಸಮಾನಾಂತರ ಸಮ್ಮೇಳನ ನಡೆಯಿತು. ಹಿರೇಮಠ್ ಅವರು ಸಾಹಿತಿಯೇ ಅಲ್ಲ; ಸಂಶೋಧಕರು. ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ತಪ್ಪು ಎಂದು ಹಲವು ಸಾಹಿತಿಗಳು ಟೀಕಿಸಿದರು.
ಬೀದರ್: 2006ರ ಆರಂಭದಲ್ಲಿ ನಡೆದ ಈ ಸಮ್ಮೇಳನದ ಉದ್ಘಾಟನೆಗೆ ಭಾರತದ ಇತರ ಭಾಷೆಯ ಸಾಹಿತಿಗಳನ್ನು ಕರೆಸಬೇಕು. ಇದರಿಂದ ಭಾಷಾ ಸಾಮರಸ್ಯಕ್ಕೆ ನಾಂದಿಯಾಗುತ್ತದೆ ಎಂದು ಕಸಾಪ ಅಧ್ಯಕ್ಷ ಚಂಪಾ ಪ್ರಸ್ತಾಪ ಮುಂದಿಟ್ಟರು. ಮರಾಠಿ ಸಾಹಿತಿಗಳ ಹೆಸರೂ ಚರ್ಚೆಗೆ ಬಂತು. ಆದರೆ ಈ ಪ್ರಸ್ತಾಪಕ್ಕೆ ಭಾರಿ ವಿರೋಧ ವ್ಯಕ್ತವಾಯಿತು.
ಹೀಗೆ ವಿವಾದಗಳ ನಡುವೆಯೇ ಸಾಗಿ ಬಂದ ಕನ್ನಡ ಸಾಹಿತ್ಯ ಮತ್ತು ಸಾಹಿತ್ಯ ಸಮ್ಮೇಳನಗಳ ಪಟ್ಟಿಗೆ ಶಿವಮೊಗ್ಗದಲ್ಲಿ ನಡೆದ ಕಳೆದ ಸಮ್ಮೇಳನ ಕೂಡ ಸೇರಿಕೊಳ್ಳುತ್ತದೆ. 2006ರಲ್ಲಿ ನಡೆದ ಸಮ್ಮೇಳನದಲ್ಲಿ ಕಸಾಪ ಅಧ್ಯಕ್ಷ ಚಂಪಾ ಅವರೇ ವಿವಾದದ ಕೇಂದ್ರವಾದರು. ಮುಖ್ಯಮಂತ್ರಿಯಾದ ತಮ್ಮನ್ನೇ ಸಮ್ಮೇಳನದ ಉದ್ಘಾಟನೆಗೆ ಆಹ್ವಾನಿಸಿಲ್ಲ ಎಂದು ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು. ಇದಕ್ಕೆ ಚಂಪಾ ಅವರ ಪ್ರತಿಕ್ರಿಯೆ, ಕುಮಾರಸ್ವಾಮಿ ಪ್ರತಿ ಹೇಳಿಕೆ ಹಲವು ದಿನಗಳ ಕಾಲ ನಡೆದವು. ಇದೇ ಸಮ್ಮೇಳನದಲ್ಲಿ ನಕ್ಸಲ್‌ಪರ ವಿಚಾರಗಳ ಗೋಷ್ಠಿಗೆ ಅವಕಾಶ ಕೊಡಲಾಗಿದೆ ಎಂದು ಹಲವು ಸಂಘಟನೆಗಳು ಭಾರಿ ಗಲಾಟೆ ಎಬ್ಬಿಸಿದವು. ಇವುಗಳನ್ನು ಕೈಬಿಡುವಂತೆ ಅಂದಿನ ಉಪಮುಖ್ಯಮಂತ್ರಿ ನೀಡಿದ ಸೂಚನೆಗೆ ಚಂಪಾ ಅವರು, 'ಕಸಾಪ ರಾಜ್ಯ ಸರ್ಕಾರದ ಅಡಿಯಾಳಲ್ಲ. ಇದು ಸ್ವಾಯತ್ತ ಸಂಸ್ಥೆ. ಸರ್ಕಾರ ಸಮ್ಮೇಳನಕ್ಕೆ ಹಣ ಕೊಡದಿದ್ದರೂ ಪರವಾಗಿಲ್ಲ' ಎಂದು ಬಿಟ್ಟರು. ಕೋಮು ಸೌಹಾರ್ದ ವೇದಿಕೆಯ ಗೌರಿ ಲಂಕೇಶ್ ಅವರ ಅಧ್ಯಕ್ಷತೆಯಲ್ಲಿ ಗೋಷ್ಠಿ ವೇಳೆ ಗಲಾಟೆ ಸಂಭವಿಸಿ ಪೊಲೀಸ್ ಲಾಠಿ ಪ್ರಹಾರ ಕೂಡಾ ನಡೆಯಿತು. ಸಮ್ಮೇಳನದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಎಂಬಂತೆ, ಈ ಗೋಷ್ಠಿಗೆ ಅತ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ಇನ್ನು ಈ ಬಾರಿಯ ಉಡುಪಿ ಸಾಹಿತ್ಯ ಸಮ್ಮೇಳನ. ಈ ಸಮ್ಮೇಳನದ ಅಧ್ಯಕ್ಷರನ್ನಾಗಿ ಎಲ್.ಎಸ್. ಶೇಷಗಿರಿರಾಯರನ್ನು ಆಯ್ಕೆ ಮಾಡಿದಾಗಲೇ ಅಧ್ಯಕ್ಷಾಕಾಂಕ್ಷಿಯಾಗಿದ್ದ ವ್ಯಾಸರಾಯ ಬಲ್ಲಾಳರು ಅಪಸ್ವರ ತೆಗೆದರು. ಈ ಸಮ್ಮೇಳನ 'ಕೇಸರೀಕರಣ'ಗೊಂಡಿದೆ ಎಂದು ಆರೋಪಿಸಿ ಜಿ. ರಾಜಶೇಖರ್, ಜಿ. ರಾಮಕೃಷ್ಣ ಮುಂತಾದವರನ್ನೊಳಗೊಂಡ ಪ್ರಗತಿಪರ ಸಂಘಟನೆಗಳು ಪರ್ಯಾಯ ಸಮ್ಮೇಳನಕ್ಕೆ ಸಿದ್ಧವಾಗಿವೆ.
ಹೀಗೆ ಕನ್ನಡ ಸಾಹಿತ್ಯ ಮತ್ತು ಸಮ್ಮೇಳನ ಎರಡೂ ಸದಾ ವಿವಾದಗಳ ನಡುವೆಯೇ ಮುಂದಣ ಹೆಜ್ಜೆ ಹಾಕುತ್ತಲೇ ಇವೆ. ಬರವಣಿಗೆಯ ಅರಿವುಳ್ಳ ಮಂದಿ ಎಂದ ಮೇಲೆ ಅಭಿಪ್ರಾಯ ಭೇದ, ಭಿನ್ನ ಚರ್ಚೆ ಇರಬೇಕಾದ್ದೇ. ಕೃತಿ ಬಂದ ಮಾತ್ರಕ್ಕೇ ಅದನ್ನು ಕೇವಲ ಹೊಗಳಬೇಕೆಂದೇನೂ ಇಲ್ಲ. ಚರ್ಚೆ, ವಿವಾದಗಳು ಸಾಹಿತ್ಯದ ಓಘಕ್ಕೆ ಬೇರೊಂದು ಆಯಾಮ ಒದಗಿಸುವುದೂ ನಿಜ. ಆದರೆ ಇವು ಅಭಿವ್ಯಕ್ತಿಯ ಮೆದುಳಿಗೆ ಮೊಟಕಿದಂತಾಗಬಾರದಲ್ಲ. ಬೃಹತ್ ಸಮ್ಮೇಳನಗಳನ್ನು ನಡೆಸುವ ಮೂಲ ಉದ್ದೇಶಕ್ಕೇ ವಿವಾದದ ಗ್ರಹಣ ಹಿಡಿಯಬಾರದಲ್ಲ?
ಇಂದು ನಾವು 'ಕನ್ನಡ ಸಾಹಿತ್ಯದಲ್ಲಿ ವಿವಾದಗಳೂ ಇವೆ' ಎನ್ನುತ್ತೇವೆ. ಭವಿಷ್ಯದ ಪೀಳಿಗೆಯ ಹೊತ್ತಿಗೆ ಈ ಮಾತು 'ವಿವಾದದೊಳಗೆ ಕನ್ನಡ ಸಾಹಿತ್ಯವೂ ಇದೆ' ಎನ್ನುವಂತಾಗಬಾರದು ಅಲ್ಲವೇ?
ಟಿಎಸ್‌ಐ
| ನಿರ್ಣಯಗಳ ಗತಿ ಏನಾಯಿತು? |
ಪ್ರತಿ ಸಾಹಿತ್ಯ ಸಮ್ಮೇಳನದಲ್ಲಿ ಕೂಡಾ ಪುಟಗಟ್ಟಲೆ ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತದೆ. ನಂತರ ತೆರೆಮರೆಗೇ ಸರಿಯುವ ಇವುಗಳನ್ನು ಯಾರೂ ಅಷ್ಟು ಗಂಭೀರವಾಗಿ ಪರಿಗಣಿಸಿದಂತಿಲ್ಲ. ಹೀಗಾಗಿ ಬಹುಪಾಲು ನಿರ್ಣಯಗಳು ಹಾಗೆಯೇ ಉಳಿದು ಬಿಡುತ್ತವೆ. ಆದರೂ ಕೆಲವು ನಿರ್ಣಯಗಳು ಕನ್ನಡ ನಾಡು-ನುಡಿಯ ಔನ್ನತ್ಯಕ್ಕೆ ಅಡಿಪಾಯ ಹಾಕಿವೆ.
ಕನ್ನಡದಲ್ಲಿ ಪ್ರಾಥಮಿಕ ಶಿಕ್ಷಣ, ಕನ್ನಡ ಆಕಾಶವಾಣಿ ಮತ್ತು ದೂರದರ್ಶನ ಕೇಂದ್ರಗಳ ಸ್ಥಾಪನೆ, ಕನ್ನಡ ಲಿಪಿ ಬಳಕೆ, ನಿಘಂಟು ರಚನೆ, ವಿಶ್ವವಿದ್ಯಾಲಯಗಳ ಸ್ಥಾಪನೆ, ಮಹಿಳಾ ಪ್ರಾತಿನಿಧ್ಯ, ಲೋಕಸೇವಾ ಆಯೋಗಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲೇ ಬರೆಯಲು ಅವಕಾಶ ಎಂಬಂತಹ ನಿರ್ಣಯಗಳು ಇವುಗಳಲ್ಲಿ ಮುಖ್ಯವಾದುವು.
"ಕೇವಲ ನಿರ್ಣಯಗಳನ್ನು ಕೈಗೊಂಡರೆ ಸಾಲದು. ಅವುಗಳು ಕಾರ್ಯಗತವಾಗುವಂತೆ ಸರ್ಕಾರದ ಮೇಲೆ ಪರಿಷತ್ತು ಮತ್ತು ಸಾಹಿತಿಗಳು ಒತ್ತಡ ಹೇರಬೇಕು. ಶಿವಮೊಗ್ಗದಲ್ಲಿ ಕೆ.ಎಸ್. ನಿಸಾರ್ ಅಹಮದ್ ಅಧ್ಯಕ್ಷತೆಯಲ್ಲಿ ನಡೆದ 73ನೆಯ ಸಾಹಿತ್ಯ ಸಮ್ಮೇಳನದ ನಿರ್ಣಯದಂತೆ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಜಾರಿಗೊಳಿಸುವಂತೆ ನಾವು ಪಟ್ಟು ಹಿಡಿದೆವು. ಇದರಿಂದ ಸರ್ಕಾರ ಘೋಷಣೆ ಕೂಡಾ ಹೊರಡಿಸಿತು. ಇದನ್ನು ಪಾಲಿಸದ 2,000 ಶಾಲೆಗಳ ಮಾನ್ಯತೆಯನ್ನೂ ಸರ್ಕಾರ ರದ್ದು ಮಾಡಿತು" ಎನ್ನುತ್ತಾರೆ ಕಸಾಪ ಅಧ್ಯಕ್ಷ ಚಂಪಾ.
ಮೂಡುಬಿದಿರೆಯಲ್ಲಿ ಡಾ. ಕಮಲಾ ಹಂಪನಾ ಅಧ್ಯಕ್ಷತೆಯಲ್ಲಿ ನಡೆದ 71ನೇ ಸಾಹಿತ್ಯ ಸಮ್ಮೇಳನ ವಿಶಿಷ್ಟ. ಏಕೆಂದರೆ ಇಲ್ಲಿ ಯಾವ ನಿರ್ಣಯಗಳನ್ನೂ ಕೈಗೊಳ್ಳದೆ, ಇದುವರೆಗೆ ಕೈಗೊಂಡ ನಿರ್ಣಯಗಳನ್ನು ಕಾರ್ಯಗತಗೊಳಿಸಲು ಆಗ್ರಹಿಸಲಾಯಿತು.
ಕರ್ನಾಟಕ ಗ್ರಂಥಾಲಯ ಅಭಿವೃದ್ಧಿಗಾಗಿ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿತವಾಗಬೇಕು ಎಂಬುದು ಪ್ರಥಮ ಸಾಹಿತ್ಯ ಸಮ್ಮೇಳನದ ನಿರ್ಣಯ. ಬೆಳಗಾವಿಯಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅಧ್ಯಕ್ಷರಾಗಿದ್ದ 15ನೆಯ ಸಮ್ಮೇಳನದಲ್ಲಿ ಕರ್ನಾಟಕದ ನಾಡಗೀತೆಯೊಂದನ್ನು ನಿರ್ಧರಿಸಿ ಅದನ್ನು ಕರ್ನಾಟಕದ ಎಲ್ಲಾ ಶಾಲೆಗಳಲ್ಲಿ ವಾಡಿಕೆಗೆ ತರುವ ನಿರ್ಣಯಗಳಾದವು.
ಟಿಎಸ್‌ಐ ಜೊತೆ ಮಾತನಾಡಿದ ಸಾಹಿತಿ ಕಮಲಾ ಹಂಪನಾ ಅವರು "ಸಮ್ಮೇಳನ ಕೈಗೊಳ್ಳುವ ನಿರ್ಣಯಗಳನ್ನು ಜಾರಿಗೊಳಿಸುವತ್ತ ನಮ್ಮ ಸರ್ಕಾರ ಕ್ರಿಯಾತ್ಮಕ ಹೆಜ್ಜೆಗಳನ್ನಿಡಬೇಕು. ಸಾಹಿತ್ಯ ಪರಿಷತ್ತು ಸರ್ಕಾರದ ಮೇಲೆ ಇನ್ನಷ್ಟು ಒತ್ತಡ ತರಬೇಕು. ಸುವರ್ಣ ಕರ್ನಾಟಕ ಉತ್ಸವವನ್ನು ಉತ್ತಮವಾಗಿ ನಡೆಸಿದ ಸರ್ಕಾರ 'ವಿಶ್ವ ಕನ್ನಡ ಸಮ್ಮೇಳನ' ನಡೆಸುವ ನಿಟ್ಟಿನಲ್ಲಿ ಕಾರ್ಯತತ್ಪರವಾಗಬೇಕು" ಎನ್ನುತ್ತಾರೆ.
ನಿರ್ಣಯಗಳು ಜಾರಿಯಾಗಲು ಸಾಹಿತಿಗಳ ಒತ್ತಾಸೆ ಜೊತೆಗೆ ರಾಜಕೀಯ ಇಚ್ಛಾಶಕ್ತಿ ಅತ್ಯಗತ್ಯ.
ಟಿಎಸ್‌ಐ
ಡಿ.ಎಸ್. ಶ್ರೀಕಲಾ
|
|