ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ಮುಖಪುಟ ಲೇಖನ : ಕನ್ನಡ-ಜಗತ್ತು

ಕಡಲ ತಡಿಯಲಿ ಕನ್ನಡ ಡಿಂಡಿಮ
ವಸುಧಾವಲಯ ವಿಲೀನ : ಸಾಹಿತ್ಯ ಸಮ್ಮಿಲನ

ಕನ್ನಡ ಸಾಹಿತ್ಯ ಜಗತ್ತಿನ ಉಳಿದ ಭಾಷೆಗಳ ಸಾಹಿತ್ಯದಷ್ಟೇ ಶ್ರೇಷ್ಠ ಹಾಗೂ ಸಮೃದ್ಧ. ಆದರೆ, ಜಾಗತಿಕ ಮಟ್ಟದಲ್ಲಿ ಮೈಲಿಗಲ್ಲಾಗಲೇಬೇಕಾಗಿದ್ದ ಕನ್ನಡದ ಹಲವಾರು ಸಾಹಿತ್ಯ ಕೃತಿಗಳಿಗೆ ಸಿಗಬೇಕಾದಷ್ಟು ಪ್ರಾಶಸ್ತ್ಯ ಸಿಕ್ಕಿಲ್ಲ ಎನ್ನುವುದು ಶಶಿ ಸಂಪಳ್ಳಿ ವಾದ

ಮಹಾ ಕುಬೇರರು, ಪ್ರತಿಷ್ಠಿತ ಐಟಿ, ಬಿಟಿ ಕಂಪನಿಗಳು, ಸಿಲಿಕಾನ್ ಸಿಟಿ... ಮುಂತಾದ ಹಲವು ಕಾರಣಗಳಿಗಾಗಿ ಇಂದು ಕನ್ನಡ ನಾಡು ಜಗತ್ತಿನ ಗಮನ ಸೆಳೆದಿದೆ. ಇಂತಹ ನಾಡಿನ ಸತ್ವಶಾಲಿ ಸಾಹಿತ್ಯ ಜಾಗತಿಕ ಮಟ್ಟಕ್ಕೆ ಏರಿ ನಿಂತಿದೆಯೇ? ಎಂಬ ಪ್ರಶ್ನೆ ಹಾಕಿಕೊಂಡರೆ ಮಾತ್ರ ನಮಗೆ ನಿರಾಶೆಯೇ ಉತ್ತರ!
ಮಾಹಿತಿ ತಂತ್ರಜ್ಞಾನದ ಕೇಂದ್ರವೆಂಬ ಬೆಂಗಳೂರನ್ನು ರಾಜಧಾನಿಯಾಗಿ ಹೊಂದಿರುವ ನಾಡಿನ ನುಡಿ ಮತ್ತು ಬದುಕನ್ನು ಬೆಳೆಸಿದ ಮಹತ್ವದ ಸಾಹಿತ್ಯ ಜಾಗತಿಕ ಮಟ್ಟದಲ್ಲಿರಲಿ, ತನ್ನ ನೆರೆಹೊರೆಯ ಸಹೋದರ ಭಾಷೆಗಳ ವ್ಯಾಪ್ತಿಯನ್ನು ಕೂಡ ನಿರೀಕ್ಷಿತ ಪ್ರಮಾಣದಲ್ಲಿ ತಲುಪಿಲ್ಲ. ಇದು ಈ ಕಾಲದ ವಿಪರ್ಯಾಸವೂ, ದುರಂತವೂ ಹೌದು.
ದೇಶದ ಇನ್ನಾವ ಭಾಷೆಯ ಸಾಹಿತ್ಯಕ್ಕೂ ದಕ್ಕದಷ್ಟು ಜ್ಞಾನಪೀಠ ಪುರಸ್ಕಾರಗಳಿಗೆ ಅರ್ಹವಾಗಿರುವ, ಒಟ್ಟಾರೆ ಜಾಗತಿಕ ಮಹತ್ವದ ಕೃತಿಗಳಿಗೆ ಸರಿಸಮನಾದ ಹಲವು ಕೃತಿಗಳನ್ನು ಕೊಟ್ಟಿರುವ ಕನ್ನಡ ಸಾಹಿತ್ಯ ಸತ್ವಕ್ಕೆ ತಕ್ಕ ಪ್ರಮಾಣದಲ್ಲಿ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗಿಲ್ಲ. ಅದಕ್ಕೆ ಕಾರಣ ಸಾಹಿತ್ಯ ಕೃತಿಗಳು ಜಾಗತಿಕ ಭಾಷೆಗಳ ಮೂಲಕ ತಲುಪದಿರುವುದೇ ವಿನಃ ಅಂತಹ ಸತ್ವದ ಕೊರತೆಯಲ್ಲ. ನೋಬೆಲ್ ಪುರಸ್ಕೃತ ಲೇಖಕರ ಕೃತಿಗಳಿಗೆ ಸಮಾನವಾದ, ಕೆಲವೊಮ್ಮೆ ಅವನ್ನೂ ಮೀರಿಸುವ ಕೃತಿಗಳು ಪಂಪನಾದಿಯಾಗಿ ಈವರೆಗಿನ ಸಾಹಿತ್ಯದಲ್ಲಿ ಹಲವು ಇವೆ. ಆದರೆ, ಅವುಗಳಿಗೆ ತಕ್ಕ ಮಹತ್ವ ಮಾತ್ರ ಜಾಗತಿಕ ಮಟ್ಟದಲ್ಲಿ ದಕ್ಕಿಲ್ಲ. ಕಳೆದ ಶತಮಾನದ ಎಂಬತ್ತರ ದಶಕದಲ್ಲಿ ಕೆಲವು ಕನ್ನಡದ ಕೃತಿಗಳು ಇಂಗ್ಲಿಷ್ ಭಾಷೆಗೆ ಅನುವಾದಗೊಳ್ಳುವ ಮೂಲಕ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದವು. ಆದರೆ, ಆ ಕಾರ್ಯ ಆನಂತರ ಅದೇ ಪ್ರಮಾಣದಲ್ಲಿ ಮುಂದುವರಿಯಲಿಲ್ಲ ಮತ್ತು ಕನ್ನಡದ ಆ ಹಿಂದಿನ ಲೇಖಕರ ಮಹತ್ವದ ಕೃತಿಗಳವರೆಗೆ ಅದು ವಿಸ್ತರಿಸಲೂ ಇಲ್ಲ.
'ಕನ್ನಡದೊಳಗೆ ಜಗತ್ತನ್ನೂ, ಜಗತ್ತಿನೊಳಗೆ ಕನ್ನಡವನ್ನೂ ಕಾಣುವ' ಕವಿ ಕಾಣ್ಕೆಯ ಕವಿರಾಜಮಾರ್ಗಕಾರ, 'ಮನುಷ್ಯ ಕುಲಂ ತಾನೊಂದೆ ವಲಂ' ಎಂಬ ವಿಶ್ವಪ್ರಜ್ಞೆಯ ಪಂಪರನ್ನು ಪಡೆದ ನುಡಿ ಕನ್ನಡ. ಇಂದು ಜಗತ್ತಿನ ಯಜಮಾನಿಕೆಯ ಭಾಷೆಯಾಗಿರುವ ಇಂಗ್ಲಿಷ್ ಇನ್ನೂ ಒಂದು ಶಿಷ್ಟ ಭಾಷೆ ಎಂಬ ಮಾನ್ಯತೆ ಪಡೆಯುವುದಕ್ಕೆ ಸಾವಿರ ವರ್ಷಗಳ ಮುಂಚೆಯೇ ಕನ್ನಡ ತನ್ನೊಳಗೆ ಇಂದಿನ ಜಾಗತಿಕ ಹಳ್ಳಿ (ಗ್ಲೋಬಲ್ ವಿಲೇಜ್) ಪರಿಕಲ್ಪನೆಯನ್ನು ಬೇರೊಂದು ಬಗೆಯಲ್ಲಿ ಕಂಡುಕೊಂಡಿತ್ತು. ಅಂದಿನ ಕನ್ನಡದ ಬಹುಮುಖ್ಯ ಲೇಖಕರೆಲ್ಲಾ ತಮ್ಮ ನುಡಿಯ ಕೃತಿಗಳನ್ನಷ್ಟೇ ಅಲ್ಲದೆ ಬೇರೆ- ಬೇರೆ ಭಾಷೆಯ ವಾಲ್ಮೀಕಿ, ವ್ಯಾಸ, ಕಾಳಿದಾಸರನ್ನು ಮುಖಾಮುಖಿಯಾಗಿದ್ದಾರೆ, ತಮ್ಮೊಳಗೆ ತುಂಬಿಕೊಂಡಿದ್ದಾರೆ. ಇನ್ನು ಮಹಾಭಾರತ, ರಾಮಾಯಣ, ಭಗವದ್ಗೀತೆಗಳ ಮೂಲಕ ಕನ್ನಡ ಮನಸ್ಸು ಪಡೆದುಕೊಂಡದ್ದನ್ನು ಪ್ರಭಾವ, ಪರಿಣಾಮಗಳ ಪರಿಭಾಷೆಯಲ್ಲಿ ಹಿಡಿದಿಡಲು ಸಾಧ್ಯವಾಗದ್ದು.
ಬ್ರಿಟಿಷ್ ಸಾಮ್ರಾಜ್ಯಶಾಹಿಯ ಅವಧಿಯ ಆಧುನಿಕ ಕನ್ನಡದ ಸಂದರ್ಭದಲ್ಲಿ ಬಹುತೇಕ ನವೋದಯ ಲೇಖಕರು ಆರಂಭದಲ್ಲಿ ಬಂಗಾಳಿ ಕಾದಂಬರಿಗಳಿಂದಲೂ, ನಂತರ ಗ್ರೀಕ್ ಮತ್ತು ಇಂಗ್ಲಿಷ್ ಸಾಹಿತ್ಯದಿಂದಲೂ ಪ್ರಭಾವಿತರಾಗಿದ್ದರು. ಬಂಗಾಳಿಯ ಕಾದಂಬರಿಗಳನ್ನು ನೇರವಾಗಿ ಕನ್ನಡಕ್ಕೆ ಅನುವಾದಿಸಿ ಓದಲಾಗುತ್ತಿತ್ತು. ಹಾಗೆ ನೋಡಿದರೆ ಕನ್ನಡದಲ್ಲಿ ಕಾದಂಬರಿ ಪ್ರಕಾರ ಮತ್ತು ಸಣ್ಣ ಕಥೆ ಪ್ರಕಾರಗಳ ಹುಟ್ಟಿಗೆ ಪ್ರೇರಣೆ ಒದಗಿಬಂದದ್ದು ಬಂಗಾಳಿ ಪ್ರಭಾವದಿಂದಲೇ. ಆ ಬಳಿಕ ಅಧಿಕಾರಸ್ಥ ಇಂಗ್ಲಿಷ್ ಭಾಷೆ ಕಲಿತ ವಿದ್ಯಾವಂತ ಜನಾಂಗದ ಸಾಹಿತ್ಯಾಸಕ್ತರು ಇಂಗ್ಲಿಷ್ ಕಾದಂಬರಿಗಳನ್ನು ಓದತೊಡಗಿದರು. ಅಧ್ಯಯನ ಮಾಡಿದರು, ತಮ್ಮ- ಭಾಷೆಗಳಿಗೆ ರೂಪಾಂತರಿಸಿದರು (ಆರಂಭದಲ್ಲಿ ಅನುವಾದಿಸಲು ಸಾಂಸ್ಕೃತಿಕ ಭಿನ್ನತೆಯ ಅಪಾಯದ ಭೀತಿಯಿತ್ತು). ಹಾಗೇ ಗ್ರೀಕ್ ಕೃತಿಗಳನ್ನು ಕೂಡ ಕನ್ನಡಕ್ಕೆ ತರಲಾಯಿತು. ಹೀಗೆ ಮಿಲ್ಟನ್, ಶೇಕ್ಸ್‌ಪಿಯರ್, ವರ್ಡ್ಸ್‌ವರ್ತ್, ಶೆಲ್ಲಿ, ಬ್ಲೇಕ್ ಮತ್ತು ಗ್ರೀಕ್‌ನ ಸೊಫೊಕ್ಲೀಸ್, ಯುರಿಪಿಡೀಸ್, ಈಸ್ಕಿಲಸ್ ಕಾಲಾನುಕ್ರಮದಲ್ಲಿ ಕನ್ನಡಕ್ಕೆ ಬಂದವು. ಪರಿಣಾಮವಾಗಿ ಕನ್ನಡದಲ್ಲಿ ಬಿಎಂಶ್ರೀ ಅವರ 'ಇಂಗ್ಲಿಷ್ ಗೀತಗಳು' ಕನ್ನಡಕ್ಕೆ ಭಾವಗೀತೆ ಎಂಬ ಪ್ರಕಾರವನ್ನು ಪರಿಚಯಿಸುವ ಮೂಲಕ ಆಧುನಿಕ ಕನ್ನಡ ಕಾವ್ಯಕ್ಕೆ ನಾಂದಿ ಹಾಡಿತು. ಗ್ರೀಕ್ ದುರಂತ ನಾಟಕಗಳು ನವೋದಯ ಕಾಲಘಟ್ಟದಲ್ಲಿ ನೇರವಾಗಿ ಪ್ರಭಾವಿಸಿದ್ದಕ್ಕಿಂತ ಅನುವಾದಗಳ ಮೂಲಕವೇ ಬಂದವು. ನಂತರ ಕುವೆಂಪು ಅವರು ಸಂಸ್ಕೃತ ಮತ್ತು ಇಂಗ್ಲಿಷ್‌ನಿಂದ ಪ್ರಭಾವಿತರಾದರೆ, ಬೇಂದ್ರೆ ಇಂಗ್ಲಿಷ್ ಮತ್ತು ಮರಾಠಿಯಿಂದ ಪ್ರಭಾವಿತರಾಗಿದ್ದರು. ಹಾಗೆ ಮರಾಠಿ ಸಾಹಿತ್ಯವನ್ನೂ ಪ್ರಭಾವಿಸಿದರು. ಕಾರಂತರು, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಕೀರ್ತಿನಾಥ ಕುರ್ತಕೋಟಿ, ಜಿ.ಎಸ್. ಆಮೂರ, ವಿ.ಕೃ. ಗೋಕಾಕ್, ಜಿ.ಎಸ್. ಶಿವರುದ್ರಪ್ಪ, ಗೋವಿಂದ ಪೈ ಮುಂತಾದ ಲೇಖಕರು ಕೂಡ ಇಂಗ್ಲಿಷ್‌ನಿಂದ ಪ್ರಭಾವಿತರಾಗಿದ್ದರು. ಹಾಗೇ ಈ ಬಹುತೇಕ ಲೇಖಕರು ಠ್ಯಾಗೋರ್, ಬಂಕಿಮಚಂದ್ರ, ವಿಭೂತಿಭೂಷಣ, ಶರತ್‌ಚಂದ್ರ ಚಟರ್ಜಿ ಮುಂತಾದ ಬಂಗಾಳಿ ಲೇಖಕರಿಂದ ಪ್ರಭಾವಿತರಾಗಿದ್ದರು. ಆದರೆ, ನವೋದಯದ ಆ ಅವಧಿಯಲ್ಲಿ ಕನ್ನಡದ ಕೃತಿಗಳು ಇಂಗ್ಲಿಷ್ ಅಥವಾ ಇನ್ನಾವುದೇ ಭಾರತೀಯ ಭಾಷೆಗಳಿಗೆ ಅನುವಾದಗೊಂಡದ್ದಾಗಲಿ, ಗುರುತಿಸುವಂತಹ ಪ್ರಭಾವ ಬೀರಿದ್ದಾಗಲಿ ವಿರಳ. ಆದರೆ, ಈ ಸಂದರ್ಭದಲ್ಲಿ ಆದ ಗಮನಾರ್ಹವಾದ ಒಂದು ಬೆಳವಣಿಗೆ ಎಂದರೆ, ವಸಾಹತುಶಾಹಿ ರಾಜಕೀಯ ಯಜಮಾನಿಕೆಯ ಪರಿಣಾಮವಾಗಿ ಬಂಗಾಳಿ ಮತ್ತಿತರ ಭಾರತೀಯ ಭಾಷೆಗಳ ಕುರಿತ ಆಸಕ್ತಿಯ ಸ್ಥಾನದಲ್ಲಿ ಇಂಗ್ಲಿಷ್ ಬಂದು ಕೂತಿತು. ಅದು ಇಂಗ್ಲಿಷ್ ಶಿಕ್ಷಣದ ಪರಿಣಾಮ ಮತ್ತು ವಸಾಹತೀಕರಣಗೊಂಡ ಮನಸ್ಥಿತಿಯ ಪರಿಣಾಮ. ಹಾಗಾಗಿ ಕನ್ನಡದಲ್ಲಿ ಬಂಗಾಳಿ ಮತ್ತಿತರ ಭಾರತೀಯ ಭಾಷೆಗಳ ಲೇಖಕರ ಕುರಿತ ಓದು ಕ್ರಮೇಣ ಕುಂಠಿತವಾಯಿತು.
ನವ್ಯ ಕಾಲಘಟ್ಟದ ಹೊತ್ತಿಗೆ ಆ ಸಾಹಿತ್ಯ ಚಳವಳಿ ಸಂಪೂರ್ಣ ಪಶ್ಚಿಮಮುಖಿಯಾದ್ದರಿಂದ ಸಹಜವಾಗೇ ಇಂಗ್ಲಿಷ್ ಮಾತ್ರ ಅವರಿಗೆ ಮಾದರಿಯಾಗಿ ಕಂಡಿತು. ಫಂಚ್, ರಷ್ಯನ್ ಲೇಖಕರಿಂದ ಪ್ರಭಾವಿತರಾದರೂ ಅವರೆಲ್ಲರೂ ಇಂಗ್ಲಿಷ್ ಮೂಲಕವೇ ಈ ಲೇಖಕರಿಗೆ ದಕ್ಕಿದ್ದು. ಈ ಹೊತ್ತಿಗಾಗಲೇ ಕನ್ನಡೇತರ ಭಾರತೀಯ ಭಾಷೆಗಳ ಬಗ್ಗೆ ಗಾಢ ವಿಸ್ಮೃತಿ ಆವರಿಸತೊಡಗಿತ್ತು. ಇಲ್ಲೂ ಹಾಗೇ ವಸಾಹತುಶಾಹಿ ರಾಜಾಶ್ರಯದ ಇಂಗ್ಲಿಷ್ ಮತ್ತು ಆ ವ್ಯವಸ್ಥೆ ಉಳಿಸಿಹೋಗಿದ್ದ ಪಶ್ಚಿಮಮುಖಿ ಚಿಂತನೆಗಳೇ ಮೇಲುಗೈ ಸಾಧಿಸಿದವು. ಆದರೆ, ಈ ಸಂದರ್ಭದಲ್ಲಿ ಈವರೆಗೆ ಏಕಮುಖಿಯಾಗಿದ್ದ ಈ ಸಂಬಂಧ ಹೊಸ ತಿರುವು ಪಡೆಯಿತು. ಕನ್ನಡದ ಪ್ರಮುಖ ಕೃತಿಗಳು ಇಂಗ್ಲಿಷ್, ಜರ್ಮನ್, ಫ್ರೆಂಚ್, ರಷ್ಯನ್ ಮುಂತಾದ ಭಾಷೆಗಳಿಗೆ ಅನುವಾದಗೊಂಡವು. ಹಾಗೇ ಹಲವು ಭಾರತೀಯ ಭಾಷೆಗಳಿಗೂ ಕೂಡ. ಇಂಗ್ಲಿಷಿನ ನವ ಸಾಹಿತ್ಯ ಮತ್ತು ಆಧುನಿಕೋತ್ತರ ಸಾಹಿತ್ಯ ಚಳವಳಿಯ ಟಿ.ಎಸ್. ಎಲಿಯಟ್, ಎಜ್ರಾ ಪೌಂಡ್, ಡಬ್ಲ್ಯು.ಬಿ. ಯೇಟ್ಸ್, ಬರ್ನಾರ್ಡ್ ಶಾ, ಡಿ.ಎಚ್. ಲಾರೆನ್ಸ್, ಜೇಮ್ಸ್ ಜಾಯ್ಸ್, ಬ್ರೆಕ್ಟ್, ಸ್ಯಾಮುಯೆಲ್ ಬೆಕೆಟ್ ಮುಂತಾದ ಲೇಖಕರು ಕನ್ನಡ ಸಾಹಿತ್ಯದ ಮೇಲೆ ಪ್ರಭಾವ ಬೀರಿದರು. ಹಾಗೇ ಲ್ಯಾಟಿನ್ ಅಮೆರಿಕ, ದಕ್ಷಿಣಾ ಆಫ್ರಿಕಾ, ಜರ್ಮನ್, ಫ್ರೆಂಚ್, ರಷ್ಯನ್ ಭಾಷೆಗಳ ಹಲವು ಮಹತ್ವದ ಲೇಖಕರು ಇಂಗ್ಲಿಷ್ ಮೂಲಕವಾಗಿ ಕನ್ನಡಕ್ಕೆ ಬಂದರು. ಹಾಗೆ ಕನ್ನಡದ ಡಾ.ಯು.ಆರ್. ಅನಂತಮೂರ್ತಿ, ಗಿರೀಶ ಕಾರ್ನಾಡ, ಎಸ್.ಎಲ್. ಭೈರಪ್ಪ, ಎ.ಕೆ. ರಾಮಾನುಜನ್ ಅವರ ಕೃತಿಗಳು ಬೇರೆ ಭಾಷೆಯ ಲೇಖಕರ ಮೇಲೆ ಪ್ರಭಾವ ಬೀರುವ ಮಟ್ಟಿಗೆ ಚರ್ಚೆಗೊಳಗಾದವು. 'ಸಂಸ್ಕಾರ' ಕಾದಂಬರಿ ಇಡೀ ಜಾಗತಿಕ ಸಾಹಿತ್ಯದಲ್ಲಿ ಮೊದಲ ಬಾರಿಗೆ ಕನ್ನಡಕ್ಕೆ ಸ್ಥಾನ ಕಲ್ಪಿಸಿಕೊಟ್ಟರೆ, 'ತುಘಲಕ್' ನಾಟಕವಂತೂ ಭಾರತೀಯ ಆಧುನಿಕ ನಾಟಕ ಮತ್ತು ರಂಗಭೂಮಿಯ ಮೈಲಿಗಲ್ಲಾಯಿತು. ಹಾಗೇ ಭೈರಪ್ಪ ಅವರ 'ಗೃಹಭಂಗ', 'ವಂಶವೃಕ್ಷ'ಗಳು. ರಾಮಾನುಜನ್ ಅವರ ವಚನ ಅನುವಾದ ಕೂಡ ಮೊದಲ ಬಾರಿಗೆ ಜಗತ್ತಿನ ಇತರ ಭಾಷೆಗಳಿಗೆ ೧೨ನೇ ಶತಮಾನದ ಸಾಹಿತ್ಯವನ್ನು ಪರಿಚಯಿಸಿತು. ಆಲನಹಳ್ಳಿ ಕೃಷ್ಣ, ದೇವನೂರ ಮಹದೇವ, ಪೂರ್ಣಚಂದ್ರ ತೇಜಸ್ವಿ, ವೈದೇಹಿ ಅವರ ಕೆಲವು ಕೃತಿಗಳು ಇಂಗ್ಲಿಷ್ ಮತ್ತು ಭಾರತೀಯ ಭಾಷೆಗಳಿಗೆ ಅನುವಾದಗೊಂಡವು. ಇವೆಲ್ಲವೂ ಕನ್ನಡವನ್ನು ಭಾಷೆಯ ಮಿತಿಯನ್ನು ಮೀರಿ ಜಾಗತಿಕ ಮಟ್ಟಕ್ಕೆ ವಿಸ್ತರಿಸಿದವು.
ನಂತರದ ಬಂಡಾಯ ಮತ್ತು ದಲಿತ ಸಾಹಿತ್ಯ ಚಳವಳಿಯ ಸಂದರ್ಭದಲ್ಲಿ ಕನ್ನಡ ಮತ್ತು ಮರಾಠಿ ಹಾಗೂ ತೆಲುಗು ಭಾಷೆಗಳ ನಡುವೆ ಸಾಕಷ್ಟು ಕೊಡು- ಕೊಳ್ಳುವಿಕೆ ನಡೆಯಿತು. ತೆಲುಗು ಮತ್ತು ಮರಾಠಿಯ ಕ್ರಾಂತಿ ಕವಿತೆಗಳು ಮತ್ತು ಆತ್ಮಕಥೆಗಳು ಕನ್ನಡದ ಹೊಸ ತಲೆಮಾರಿನ ಬರಹಗಾರರಿಗೆ ಪ್ರೇರಣೆಯಾದಂತೆಯೇ ಕನ್ನಡ ಲೇಖಕರ ಕೃತಿಗಳು ಆ ಭಾಷೆಗಳ ಲೇಖಕರಿಗೆ ಸ್ಫೂರ್ತಿಯಾದವು. ಆದರೆ, ಇತ್ತೀಚಿನ ವರ್ಷಗಳಲ್ಲಿ ಅಲ್ಲೊಂದು, ಇಲ್ಲೊಂದು ಕೃತಿಗಳು, ಬಿಡಿ ಲೇಖನ, ಕವಿತೆಗಳು, ಪ್ರಬಂಧಗಳು ಅನುವಾದಗೊಳ್ಳುತ್ತಿಯೆಯಾದರೂ ಅವೆಲ್ಲವೂ ಬಹುತೇಕ ಇಂಗ್ಲಿಷ್‌ಗೆ ಮಾತ್ರ ಸೀಮಿತವಾಗಿವೆ ಎಂಬುದು ಗಮನಾರ್ಹ.
ಅದೇ ಹೊತ್ತಿಗೆ ಕನ್ನಡದ ಕವಿರಾಜಮಾರ್ಗಕಾರನಾದಿಯಾಗಿ ಇತ್ತೀಚಿನವರೆಗಿನ ಮಹತ್ವದ ಲೇಖಕರ ಬಗ್ಗೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದವರಲ್ಲಿ ಡಿ.ಆರ್. ನಾಗರಾಜ್ ಪ್ರಮುಖರು. ತಮ್ಮ ಪಾಂಡಿತ್ಯ ಮತ್ತು ಪ್ರಖರ ಚಿಂತನೆಗಳ ಮೂಲಕ ೨೦ನೇ ಶತಮಾನದ ಕೊನೆಯ ವೇಳೆಗೆ ಜಗತ್ತಿನ ಬಹುಮುಖ್ಯ ಚಿಂತಕರಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದ ಡಿ.ಆರ್. ತಮ್ಮ ಚಿಂತನೆಗಳಿಗೆ ಮೂಲದ್ರವ್ಯವನ್ನು ಕನ್ನಡದ ಪ್ರಾಚೀನ ಸಾಹಿತ್ಯದ ಮೂಲಕವೇ ಪಡೆಯುತ್ತಿದ್ದರು. ಆ ಕಾರಣದಿಂದಾಗೇ ಅವರು ಜಾಗತಿಕ ಮಟ್ಟದಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಕುತೂಹಲ ಮೂಡುವಂತೆ ಮಾಡಿದ್ದರು. ಆದರೆ, ಅವರ ನಂತರ ಅಂತಹ ಪ್ರತಿಭೆಗಳು- ಚಿಂತನೆಯ ಮಟ್ಟದಲ್ಲಿ- ಅಪರೂಪವಾದವು. ಸದ್ಯಕ್ಕೆ ಜಾಗತಿಕ ಕುತೂಹಲ ಉಳಿಸಿಕೊಂಡಿರುವ ಕನ್ನಡದ ಲೇಖಕರಲ್ಲಿ ಡಾ. ಯು.ಆರ್. ಅನಂತಮೂರ್ತಿ ಮತ್ತು ಗಿರೀಶ ಕಾರ್ನಾಡ ಅವರು ಪ್ರಮುಖರು.
ವಸಾಹತುಶಾಹಿ ಅವಧಿಯ ಭಾಷಾ ಯಜಮಾನಿಕೆ ಈಗ ಇಲ್ಲವಾದರೂ ಅದೇ ಕಾರಣಗಳಿಂದಾಗಿ ಇಂಗ್ಲಿಷ್ ಭಾಷೆಗೆ ಅನಾಯಾಸವಾಗಿ ಒದಗಿ ಬಂದಿರುವ ಬೇರೊಂದು ಸಾಂಸ್ಕೃತಿಕ ಯಜಮಾನಿಕೆಯ ಸ್ವರೂಪದ ಕಾರಣದಿಂದಾಗಿ ಇಂದು ಆ ಭಾಷೆ ನಮ್ಮ ಲೇಖಕರನ್ನು ಉಳಿದ ಭಾಷೆಗಳೆಡೆಗೆ ಕುರುಡರಾಗುವಂತೆ ಮಾಡಿದೆ. ಭಾಷೆ- ಭಾಷೆಗಳ ನಡುವಿನ ಕೊಡು- ಕೊಳ್ಳುವಿಕೆಯ ಸಂಬಂಧದಲ್ಲಿ ಕೂಡ ಪ್ರಭಾವ ಬೀರುವ ಯಜಮಾನಿಕೆಯ ಇಂತಹ ಸ್ವರೂಪ ಕನ್ನಡದ ಸಾಹಿತಿಗಳನ್ನು ಮತ್ತು ಓದುಗರನ್ನು ಡಾ.ಯು.ಆರ್. ಅನಂತಮೂರ್ತಿ ಅವರು ಹೇಳುವಂತೆ 'ಕೂಪಮಂಡೂಕಗಳನ್ನಾಗಿ ಮಾಡುತ್ತಿದೆ'.
ಕುವೆಂಪು, ಬೇಂದ್ರೆ, ಕಾರಂತರಂಥ ಅಸಾಮಾನ್ಯ ಲೇಖಕರ ಕೃತಿಗಳು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಲ್ಲಿ ಹಿಂದೆ ಬಿದ್ದಿರುವುದಕ್ಕೆ ಭಾಷೆಯ ಮಿತಿಯ ಜೊತೆಗೆ ಅಂತಹ ಲೇಖಕರನ್ನು ಅರಗಿಸಿಕೊಂಡು ಪ್ರಭಾವಶಾಲಿಯಾಗಿ ಅನುವಾದಿಸುವ ಪ್ರತಿಭಾವಂತರ ಕೊರತೆಯೂ ಕಾರಣ. ಅನುವಾದದ ಕೆಲವು ಪ್ರಯತ್ನಗಳು ಆಗಾಗ ನಡೆದಿದ್ದರೂ ಆ ಪ್ರಮಾಣ ಸಾಲದು. ಹಾಗಾಗಿ ಸಹಜವಾಗೇ ತೃತೀಯ ಜಗತ್ತಿನ ಇತರ ಭಾಷೆಗಳಂತೆಯೇ ಕನ್ನಡ ಕೂಡ ಸಾಹಿತ್ಯಿಕ ದೃಷ್ಟಿಯಲ್ಲೂ ಹಿಂದೆ ಬಿದ್ದಿದೆ ಎಂದರೆ
ಅತಿಶಯೋಕ್ತಿಯೇನೂ ಅಲ್ಲ.

ಟಿಎಸ್‌ಐ

ಕನ್ನಡದ ಮಿತಿ ಹಿಗ್ಗಿಸಿದ ನಾಟಕ

ಭಾರತೀಯ ಮತ್ತು ವಿದೇಶಿ ಭಾಷಾ ಸಾಹಿತ್ಯದ ಮೇಲೆ ಕನ್ನಡ ಸಾಹಿತ್ಯ ಕೆಲಮಟ್ಟಿಗಾದರೂ ಪ್ರಭಾವ ಬೀರಿದ್ದರೆ ಅದರಲ್ಲಿ ಕನ್ನಡ ನಾಟಕಕಾರರ ಪಾತ್ರ ಮುಖ್ಯವಾಗಿದೆ.
ಹಾಗೇ ಬೇರೆ ಭಾಷೆಗಳಿಗೆ ಅನುವಾದಗೊಂಡು ಅಥವಾ ಇಂಗ್ಲಿಷ್ ಮೂಲಕ ಪ್ರಭಾವ ಬೀರಿದ ಕೃತಿಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವುದು ಗಿರೀಶ ಕಾರ್ನಾಡ ಅವರ ಮೇರುಕೃತಿ 'ತುಘಲಕ್'. ಬಹುತೇಕ ಎಲ್ಲಾ ಭಾರತೀಯ ಭಾಷೆಗಳಿಗೆ ಅನುವಾದಗೊಂಡು ರಂಗ ಪ್ರಯೋಗ ಕಂಡಿರುವ 'ತುಘಲಕ್' ಕನ್ನಡ ನಾಟಕಕಾರರತ್ತ ಇಡೀ ಜಗತ್ತೇ ನಿರೀಕ್ಷೆಯ ನೋಟ ಬೀರುವಂತೆ ಮಾಡಿತು. ಜೊತೆಗೆ ಅವರ 'ನಾಗಮಂಡಲ', 'ಅಗ್ನಿ ಮತ್ತು ಮಳೆ' ಮುಂತಾದ ನಾಟಕ ಕೃತಿಗಳು ಕೂಡ ಕನ್ನಡೇತರ ಭಾಷೆಯ ಸಾಹಿತ್ಯ ವಲಯದ ಗಮನ ಸೆಳೆದವು.
ಹಾಗೇ ಚಂದ್ರಶೇಖರ ಕಂಬಾರರ 'ಸಿರಿಸಂಪಿಗೆ', 'ತುಕ್ರನ ಕನಸು', 'ಜೋಕುಮಾರಸ್ವಾಮಿ' ನಾಟಕಗಳು, ಲಂಕೇಶರ 'ಗುಣಮುಖ', 'ಸಂಕ್ರಾತಿ', ಎಚ್.ಎಸ್. ಶಿವಪ್ರಕಾಶ್ ಅವರ 'ಮಹಾಚೈತ್ರ', ಪ್ರಸನ್ನರ 'ಹದ್ದು ಮೀರಿದ ಹಾದಿ', 'ಒಂದು ಲೋಕ ಕಥೆ' ಅನ್ಯಭಾಷೆಗಳ ಗಮನ ಸೆಳೆದ ನಾಟಕಗಳು. ಶ್ರೀರಂಗರ 'ಕೇಳು ಜನಮೇಜಯ', 'ಶೋಕ ಚಕ್ರ' ಮುಂತಾದ ನಾಟಕಗಳು ಕೂಡ ಬೇರೆ- ಬೇರೆ ಭಾರತೀಯ ಭಾಷೆಗಳಲ್ಲಿ ರಂಗ ಪ್ರಯೋಗ ಕಂಡಿವೆ.
ಅಸ್ಸಾಮಿಯಿಂದ ಮಲೆಯಾಳಂವರೆಗೆ ಹಲವು ಭಾಷೆಗಳಲ್ಲಿ ಕನ್ನಡ ನಾಟಕಗಳು ಇಂದಿಗೂ ಕುತೂಹಲ ಉಳಿಸಿಕೊಂಡಿವೆ. ಹಾಗೆ ನೋಡಿದರೆ, ಕನ್ನಡಕ್ಕೆ ಅನ್ಯಭಾಷೆಗಳ ಕೃತಿಗಳು ಮೊದಲ ಬಾರಿಗೆ ರೂಪಾಂತರ ಅಥವಾ ಅನುವಾದಗಳ ಮೂಲಕ ಬಂದದ್ದು ಕೂಡ ನಾಟಕಗಳ ರೂಪದಲ್ಲೇ.ಮಲೆಯಾಳಂನಲ್ಲಾಗಲೀ, ಅಸ್ಸಾಮಿಯಲ್ಲಾಗಲಿ ಇಂದಿಗೂ ನಾಟಕೋತ್ಸವಗಳಲ್ಲಿ ಕನ್ನಡದ ಒಂದಾದರೂ ನಾಟಕದ ಅನುವಾದ ಅಥವಾ ರೂಪಾಂತರಗಳು ಪ್ರದರ್ಶನ ಕಾಣದೆ ಇರವು ಎಂಬಷ್ಟರ ಮಟ್ಟಿಗೆ ಕನ್ನಡ ನಾಟಕಗಳು ಪ್ರಭಾವ ಬೀರಿವೆ. ಈ ವಿಷಯದಲ್ಲಿ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಕೆಲಸ ಮಾಡಿದ ಬಿ.ವಿ. ಕಾರಂತರು ಮತ್ತು ಪ್ರಸನ್ನ ಮುಂತಾದವರ ಕೊಡುಗೆ ಮಹತ್ವದ್ದು.

ಟಿಎಸ್‌ಐ

 

ಮುಖ ಪುಟ ಲೇಖನದಲ್ಲಿ ಇನ್ನೇನಿದೆ

ಕಡಲ ತಡಿಯಲಿ ಕನ್ನಡ ಡಿಂಡಿಮ : ಸಮೃದ್ಧಿ-ಶ್ರೇಷ್ಠತೆಯ ಕಡಲಾಳದಲ್ಲಿ...

ಶಾಸ್ತ್ರೀಯ ಎಂಬುದೇ ಅಶಾಸ್ತ್ರೀಯ ಎಂದಾಗುವುದಾದರೆ....

ಭಾಷೆ 'ತಾಂತ್ರಿಕವಾಗಿ' ಉಳಿಯಬೇಕು : ಡಾ. ಚಂದ್ರಶೇಖರ ಕಂಬಾರ

ಕನ್ನಡಮ್ಮನ ಝೇಂಕಾರ : ವಿವಾದದ ಅಪಸ್ವರ

ವಿವಾದ, ತಾತ್ವಿಕ ನೆಲೆ ಮತ್ತು ನಿಲುವು : ಡಾ. ಬರಗೂರು ರಾಮಚಂದ್ರಪ್ಪ

ವಸುಧಾವಲಯ ವಿಲೀನ : ಸಾಹಿತ್ಯ ಸಮ್ಮಿಲನ

ಕಳೆದ ಕವಿರಾಜಮಾರ್ಗಕಾರನ ನಂಬಿಕೆ : ಡಾ. ಯು. ಆರ್ ಅನಂತಮೂರ್ತಿ

ತಂತ್ರಜ್ಞಾನದ ಗಾಲಿಯ ಮೇಲೆ ಕನ್ನಡದ ತೇರು

ಸುಮ್ಮನೆ ಬುಡುಬುಡಿಕೆ ಬಾರಿಸಬೇಡಿ : ಬೇಳೂರು ಸುದರ್ಶನ

ಬೆಳ್ಳಿತೆರೆಗೆ ಶಕ್ತಿ ಶಾರದೆಯ ಮೆರುಗು

ದೃಶ್ಯ ಮಾಧ್ಯಮದ ಘನತೆ ಹೆಚ್ಚಿಸಿದ ಸಾಹಿತ್ಯ : ಪಿ. ಶೇಷಾದ್ರಿ

ಚಿತ್ರ ಸಂಚಯ

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .