|
"ಮಾಮರವೆಲ್ಲೋ,
ಕೋಗಿಲೆ ಎಲ್ಲೋ,
ಏನೀ ಸ್ನೇಹ ಸಂಬಂಧ,
ಎಲ್ಲಿಯದೋ ಈ ಅನುಬಂಧ..."
ಈ ಜನಪ್ರಿಯ ಗೀತೆ ಬರೆದ ಬಗ್ಗೆ ಖ್ಯಾತ ಚಿತ್ರಸಾಹಿತಿ ದಿವಂಗತ ಚಿ. ಉದಯಶಂಕರ್ ನೆನಪಿಸಿಕೊಳ್ಳುತ್ತಿದ್ದರು: "ನಾವು ಹೊಸದಾಗಿ ಬರೆಯುವುದೇನಿದೆ? ಎಲ್ಲವನ್ನೂ ನಮ್ಮ ಹಿಂದಿನವರು ಬರೆದಿಟ್ಟಿದ್ದಾರೆ. ನಾವು ಕೆಲ ಪದ ಬದಲಾಯಿಸಿ ನಮ್ಮ ಹೆಸರಲ್ಲಿ ಬರೆಯುತ್ತೀವಿ"
ಅಲ್ಲಮಪ್ರಭುವಿನ "ಎತ್ತಣ ಮಾಮರ, ಎತ್ತಣ ಕೋಗಿಲೆ ಎತ್ತಣಿಂದೆತ್ತ ಸಂಬಂಧವಯ್ಯಾ..." ವಚನವೇ ತಾವು ಆ ಗೀತೆ ಬರೆಯಲು ಪ್ರೇರಣೆ ಎಂದಿದ್ದರು ಉದಯಶಂಕರ್.
ಕನ್ನಡ ಸಿನಿಮಾ ಇತಿಹಾಸದಲ್ಲಿ ಒಂದಷ್ಟು ಒಳ್ಳೆಯ ಸಿನಿಮಾಗಳೇನಾದರೂ ಬಂದಿದ್ದರೆ ಅದರ ಕೀರ್ತಿ ಕನ್ನಡ ಸಾಹಿತ್ಯ ಲೋಕಕ್ಕೆ ಸಲ್ಲಬೇಕು.
ಸಾಹಿತ್ಯದಲ್ಲಿ ಸಾಕಷ್ಟು ಕೃಷಿ ಮಾಡಿದ ಜಯಂತ ಕಾಯ್ಕಿಣಿಯಂಥವರು ಇತ್ತೀಚೆಗೆ ಸಿನಿಮಾ ಮಾಧ್ಯಮದಲ್ಲೂ ಕ್ರಿಯಾತ್ಮಕವಾಗಿ ತೊಡಗಿಕೊಂಡಿದ್ದಾರೆ. ಹಿಂದಿನ ಸಾಹಿತಿಗಳು ತಾವು ಸಾಹಿತ್ಯಿಕವಾಗಿ ಬರೆದ ಕೃತಿಗಳನ್ನು ಸಿನಿಮಾಕ್ಕೆ ಬಳಸಿಕೊಳ್ಳಲು ಅನುಮತಿ ನೀಡುತ್ತಿದ್ದರಾದರೂ ಸಿನಿಮಾ ಮಾಧ್ಯಮವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ನೆರೆಯ ಮಲಯಾಳಂ ಚಿತ್ರರಂಗದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ವಾಸುದೇವನ್ ನಾಯರ್ ಅವರಂತಹ ಖ್ಯಾತರು ಸಿನಿಮಾದಲ್ಲಿಯೂ ಕ್ರಿಯಾತ್ಮಕವಾಗಿದ್ದಾರೆ. ಬಾಲಿವುಡ್‌ನಲ್ಲಿ ಗುಲ್ಜಾರ್, ಜಾವೇದ್ ಅಖ್ತರ್ ಅವರಂತಹವರು ಸಾಹಿತ್ಯದ ಆಳ ಜ್ಞಾನವನ್ನೂ ಹೊಂದಿರುವ ಅಸಾಮಾನ್ಯರು.
ಆದರೆ ನಮ್ಮಲ್ಲಿ ಸಿನಿಮಾಕ್ಕಾಗಿಯೇ ಸಾಹಿತ್ಯ ಬರೆದುಕೊಡುವ ಪರಿಪಾಠವಂತೂ ಗಂಭೀರ ಸಾಹಿತಿಗಳಲ್ಲಿರಲಿಲ್ಲ. ಸಿನಿಮಾ ಸೂತ್ರಗಳಿಗೆ ಕಟ್ಟುಬಿದ್ದು ಬರೆಯಬೇಕಾದರೆ ತಮ್ಮ ಬರವಣಿಗೆಯ ಸ್ವಾತಂತ್ರ್ಯಕ್ಕೆ ಪೆಟ್ಟು ಬಿದ್ದಂತೆ ಎಂದೇ ಆ ಧೀಮಂತ ಸಾಹಿತಿಗಳು ಭಾವಿಸಿದ್ದರು. ಸಿನಿಮಾ ಮಂದಿಗೂ ಕೂಡಾ ತಮ್ಮ ಮಾರುಕಟ್ಟೆ ತಂತ್ರ, ಮಸಾಲೆ ಅಂಶಗಳನ್ನೆಲ್ಲಾ ಸೇರಿಸುವಂತೆ ಸಾಹಿತಿಗಳ ಮೇಲೆ ಒತ್ತಡ ಹೇರುವುದು ಮುಜುಗರ ತರುತ್ತಿತ್ತು ಎನ್ನಿ. ಇಂದಿಗೂ ಕೂಡಾ ಸಿನಿಮಾ ಸಾಹಿತ್ಯವನ್ನು 2ನೇ ದರ್ಜೆಯ ಸಾಹಿತ್ಯ ಎಂದೇ ಪರಿಗಣಿಸಲಾಗುತ್ತಿದೆ. ಹೀಗಾಗಿ ಜನಪ್ರಿಯ ಮಸಾಲೆ ಸಿನಿಮಾಗಳಿಗೆ ಪರೋಕ್ಷವಾಗಿ ಪ್ರೇರಣೆಯಾಗುತ್ತಿದ್ದ ಸಾಹಿತ್ಯದ ಸೊಗಡು ಪರ್ಯಾಯ ಸಿನಿಮಾಗಳಲ್ಲಿ ಮಾತ್ರ ದಟ್ಟವಾಗಿಯೇ ಇತ್ತು.
ಸಿನಿಮಾಕ್ಕೆ ನೇರವಾಗಿ ವಸ್ತುವಾದ ಮೊದಲ ಕಾದಂಬರಿ ಎಂದರೆ ಕೃಷ್ಣಮೂರ್ತಿ ಪುರಾಣಿಕರ 'ಧರ್ಮದೇವತೆ'. ಇದು 1962ರಲ್ಲಿ 'ಕರುಣೆಯೇ ಕುಟುಂಬದ ಕಣ್ಣು' ಹೆಸರಿನ ಚಿತ್ರವಾಗಿ ಭರ್ಜರಿ ಯಶಸ್ಸು ಗಳಿಸಿ ಹಲವು ಜನಪ್ರಿಯ ಕಾದಂಬರಿಗಳಿಗೆ ಪ್ರೇರಣೆಯಾಯಿತು. ನಂತರ ತ.ರಾ.ಸು ಅವರ 'ಚಂದವಳ್ಳಿಯ ತೋಟ' ಕೃತಿ ಚಿತ್ರವಾಯಿತು. 1970 ಮತ್ತು 80ರ ದಶಕವನ್ನು ಕನ್ನಡ ಚಿತ್ರರಂಗದ ಸುವರ್ಣಯುಗ ಎನ್ನಬಹುದಾದರೆ ಅದಕ್ಕೆ ಕಾರಣ ಆ ಅವಧಿಯಲ್ಲಿ ಕನ್ನಡದ ಉತ್ತಮ ಸಾಹಿತ್ಯ ಕೃತಿಗಳು ಪ್ರತಿಭಾವಂತ ನಿರ್ದೇಶಕರ ಕೈಗೆ ಸಿಕ್ಕಿ ಬೆಳ್ಳೆತೆರೆಯ ಮೇಲೆ ಅರಳಿ ನಿಂತಿದ್ದು. ಪುಟ್ಟಣ್ಣ ಕಣಗಾಲ್ ಅವರು ಹಲವು ಕಾದಂಬರಿಗಳನ್ನು ದೃಶ್ಯಕಾವ್ಯವಾಗಿಸಿದ್ದೂ ಆಗಲೇ. ತ್ರಿವೇಣಿ ಅವರ 'ಬೆಳ್ಳಿಮೋಡ', 'ಶರಪಂಜರ'; ಎಂ.ಕೆ. ಇಂದಿರಾ ಅವರ 'ಗೆಜ್ಜೆಪೂಜೆ' ಕೃತಿಗಳನ್ನು ಪುಟ್ಟಣ್ಣ ಅವರು ದೃಶ್ಯ ಮಾಧ್ಯಮದ ಮಹಾನ್ ಕೃತಿಗಳನ್ನಾಗಿಸಿದರು. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ 'ಭೂತಯ್ಯನ ಮಗ ಅಯ್ಯು' ಸಿದ್ದಲಿಂಗಯ್ಯ ನಿರ್ದೇಶನದಲ್ಲಿ ಚಿತ್ರವಾಗಿ ಭರ್ಜರಿ ಯಶಸ್ಸು ಗಳಿಸಿತು. ಇದೇ ಅವಧಿಯಲ್ಲೇ ಪರ್ಯಾಯ ಸಿನಿಮಾ ಪರಂಪರೆಯಲ್ಲಿ ಶಿವರಾಮ ಕಾರಂತರ 'ಚೋಮನದುಡಿ', ಯು.ಆರ್. ಅನಂತಮೂರ್ತಿ ಅವರ 'ಸಂಸ್ಕಾರ', 'ಘಟಶ್ರಾದ್ಧ', ಎಸ್.ಎಲ್. ಭೈರಪ್ಪ ಅವರ 'ವಂಶವೃಕ್ಷ', ಎಂ.ಕೆ. ಇಂದಿರಾ ಅವರ 'ಫಣಿಯಮ್ಮ', ಮಾಸ್ತಿಯವರ 'ಕಾಕನ ಕೋಟೆ' ಮುಂತಾದವು ರಾಷ್ಟ್ರೀಯ, ಅಂತರ್ ರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದವು. ತೇಜಸ್ವಿಯವರ 'ತಬರನ ಕಥೆ', 'ಅಬಚೂರಿನ ಪೋಸ್ಟಾಫೀಸು' ಮುಂತಾದ ಕೃತಿಗಳು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾದವು. ತಮ್ಮ ನಿರೂಪಣೆ ಶೈಲಿ, ಕಥನಕ್ರಮದಲ್ಲಡಗಿದ ವಿಡಂಬನೆ, ತಮಾಷೆಯ ನಡುವೆಯೇ ವಾಸ್ತವದ ವೈರುಧ್ಯ ಕಟ್ಟಿಕೊಡುವ ತೇಜಸ್ವಿಯಂತಹವರ ಕೃತಿಗಳು ದೃಶ್ಯ ಮಾಧ್ಯಮಕ್ಕೆ ಭಾರೀ ಸವಾಲನ್ನೇ ಒಡ್ಡುವಂಥವು. ನಂತರದ ದಶಕದಲ್ಲಿ ಕಾರ್ನಾಡರ 'ನಾಗಮಂಡಲ', ಕುವೆಂಪು ಅವರ 'ಕಾನೂರು ಹೆಗ್ಗಡಿತಿ', ನಾ. ಡಿಸೋಜಾ ಅವರ 'ದ್ವೀಪ', ಎಸ್.ಎಲ್. ಭೈರಪ್ಪ ಅವರ 'ಮತದಾನ', ಇತ್ತೀಚೆಗೆ 'ನಾಯಿ-ನೆರಳು', ಅನಂತಮೂರ್ತಿ ಅವರ 'ಮೌನಿ' ಮುಂತಾದವು ಜಡ್ಡುಗಡ್ಡಿದ ಸಿನಿಮಾರಂಗಕ್ಕೆ ಚೈತನ್ಯ ಒದಗಿಸುತ್ತಿವೆ.
ಸಾಹಿತ್ಯ ಕೃತಿಗಳು ಚಿತ್ರಗೀತೆಗಳಾಗಿಯೂ ಕನ್ನಡ ಚಿತ್ರ ರಸಿಕರ ನೆನಪಿನಲ್ಲಿ ಚಿರಸ್ಥಾಯಿಯಾಗಿವೆ. ಮಿಸ್ ಲೀಲಾವತಿ ಚಿತ್ರದಲ್ಲಿ ಕುವೆಂಪು ಅವರ 'ದೋಣಿ ಸಾಗಲಿ, ಮುಂದೆ ಹೋಗಲಿ...' ಗೀತೆಯನ್ನು ಮರೆಯಲು ಸಾಧ್ಯವೇ? ಬೇಂದ್ರೆಯವರ 'ನೀ ಹಿಂಗಾ ನೋಡಬೇಡ ನನ್ನ...', ಮಾಸ್ತಿ ಅವರ 'ನೇಸರ ನೋಡು', ಕೆ.ಎಸ್. ನರಸಿಂಹಸ್ವಾಮಿಯವರ 'ಮೈಸೂರು ಮಲ್ಲಿಗೆ' ಪದ್ಯಗಳು ಕನ್ನಡ ಚಿತ್ರಲೋಕದ ಬೆಳ್ಳಿಮಿಂಚುಗಳು. ಇಂದಿನ 'ಕೆಂಚಾಲೋ ಮಂಚಾಲೋ' ಸಾಹಿತ್ಯ ಸಂಸ್ಕೃತಿಯ ಸಂದರ್ಭದಲ್ಲಿ ನಮ್ಮ ಅಕ್ಷರ ಪ್ರಪಂಚದ ಉತ್ತಮ ಕೃತಿಗಳೇ ಒಂದಿಷ್ಟು ಭರವಸೆ ಮೂಡಿಸಿರುವುದು. ಇತ್ತೀಚೆಗೆ 'ಎ' ಚಿತ್ರದಲ್ಲಿ ಕೂಡಾ ಜಿ.ಪಿ. ರಾಜರತ್ನಂ ಅವರ 'ಯೇಳ್ಕಾಳ್ಳಾಕ್ ಒಂದೂರು, ತಲೆ ಮೇಲೆ ಒಂದ್ಸೂರು, ಮಲಗಾಕೆ ಭೂಮ್ತಾಯಿ ಮಂಚ...' ಪದ್ಯ ಅತ್ಯಂತ ಜನಪ್ರಿಯವಾಯಿತು.
ಹೇಳಲೇಬೇಕಾದ ಮಾತೆಂದರೆ, ಕನ್ನಡ ಚಿತ್ರರಂಗ ಇತರ ಭಾರತೀಯ ಚಿತ್ರರಂಗಗಳಿಗೆ ಹೋಲಿಸಿದರೆ ಶ್ರೀಮಂತವಾಗಿಲ್ಲ. ನಾವು ಕನಿಷ್ಠ 30 ವರ್ಷ ಹಿಂದಿದ್ದೇವೆ ಎನ್ನುವ ಮಾತಿನಲ್ಲಿ ಖಂಡಿತ ಅತಿಶಯೋಕ್ತಿ ಇಲ್ಲ. ಮಚ್ಚು-ಲಾಂಗ್, ಬಡಿ-ಕಡಿ ಸಂಸ್ಕೃತಿಯ ಮಸಾಲೆ ಚಿತ್ರಗಳ ನಡುವೆ ಯಾವುದನ್ನಾದರೂ ಉತ್ತಮ ಚಿತ್ರ ಎನ್ನಬಹುದಾದರೆ ಅದು ಪರಭಾಷಾ ಚಿತ್ರ ವೊಂದರ ರಿಮೇಕ್ ಆಗಿರುತ್ತದೆ. ಹಾಗಾದರೆ ನಮ್ಮಲ್ಲಿ ಒಳ್ಳೆಯ ಸಾಹಿತಿಗಳಿಲ್ಲವೇ, ಒಳ್ಳೆಯ ಸಾಹಿತ್ಯ ಕೃತಿಗಳಿಲ್ಲವೇ? ಏಕಿಲ್ಲ. ಏಳು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳನ್ನು ಪಡೆದ ಕನ್ನಡ ಶಾರದೆ ಸಮೃದ್ಧವಾಗಿಯೇ ಇದ್ದಾಳೆ. ಹಾಗಾದರೆ ನಾವು ಎಲ್ಲಿ ಸೋತಿದ್ದೇವೆ? ಸಾಹಿತ್ಯ ಕೃತಿಯೊಂದನ್ನು ದೃಶ್ಯ ಮಾಧ್ಯಮಕ್ಕೆ ಯಶಸ್ವಿಯಾಗಿ ಇಳಿಸುವ ಪ್ರತಿಭಾವಂತ ನಿರ್ದೇಶಕರ ಕೊರತೆ ನಮ್ಮಲ್ಲಿದೆ. ಪುಟ್ಟಣ್ಣ ಕಣಗಾಲ್‌ರಂತಹ ನಿರ್ದೇಶಕರು ಕಾದಂಬರಿಯೊಂದರ ಸತ್ವ ಅರಿತು ಅದನ್ನು ದೃಶ್ಯ ಮಾಧ್ಯಮಕ್ಕೇ ವಿಶಿಷ್ಟವಾದ ಸಂಕೇತ, ಪ್ರತಿಮೆಗಳಾಗಿ ಬಳಸಿಕೊಳ್ಳುತ್ತಿದ್ದರು. ಆ ಪ್ರಕ್ರಿಯೆಯಲ್ಲಿ 'ಸೃಜನಶೀಲ ಸ್ವಾತಂತ್ರ್ಯ' ಚಲಾಯಿಸುತ್ತಿದ್ದರು. ಈಗ ಇಂತಹ 'ಸ್ವಾತಂತ್ರ್ಯ' ಚಲಾಯಿಸುವವರಿಗೇ ಬರ ಬಂದಿದೆ. ಈ ನಡುವೆಯೂ 'ಬ್ಯಾಂಕರ್ ಮಾರ್ಗಯ್ಯ', 'ನಾಗಮಂಡಲ' ಮುಂತಾದ ಸಾಹಿತ್ಯ ಕೃತಿಗಳಿಗೆ ಬೆಳ್ಳಿತೆರೆಯಲ್ಲಿ ಬೇರೆಯದೇ ಆಯಾಮ ಕೊಟ್ಟ ಟಿ.ಎಸ್. ನಾಗಾಭರಣ; ಸಾಹಿತ್ಯ ಕೃತಿಯ ಸುಸಂಬದ್ಧ ನಿರೂಪಣೆಯೊಂದಿಗೆ ಅದನ್ನು ದೃಶ್ಯಕಾವ್ಯವಾಗಿಸಬಲ್ಲ ಗಿರೀಶ್ ಕಾಸರವಳ್ಳಿ, 'ಉಂಡೂ ಹೋದ ಕೊಂಡೂ ಹೋದ'ದಂತಹ ಸಿನಿಮಾ ತೆಗೆದ ನಾಗತಿಹಳ್ಳಿ ಚಂದ್ರಶೇಖರ್, 'ಮುನ್ನುಡಿ' ಬರೆದ ಪಿ. ಶೇಷಾದ್ರಿ ಯಂಥವರು ಅಲ್ಲೊಬ್ಬ, ಇಲ್ಲೊಬ್ಬರಿದ್ದಾರೆ ಎನ್ನುವುದೇ ಸಮಾಧಾನದ ವಿಷಯ.
ಟಿಎಸ್‌ಐ
| 'ಸರಸ್ವತಿ' ಇದ್ದಲ್ಲಿ 'ಲಕ್ಷ್ಮಿ' ಇರುವುದು ಹೇಗೆ!? |
ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ 'ಕಾಕನಕೋಟೆ' ನಾಟಕ ಕೃತಿ ಸಿನಿಮಾ ಆದ ಸಂದರ್ಭದ ಬಗ್ಗೆ ನಿರ್ದೇಶಕ ಸಿ.ಆರ್. ಸಿಂಹ ಆಗಾಗ ಈ ಸಂಗತಿ ಹೇಳುತ್ತಿದ್ದರು: ಮಾಸ್ತಿ ಅವರು ಸಂಭಾವನೆ ಕೇಳುವ ಬದಲಿಗೆ, "ಪಾಪ ನೀವು ಅಷ್ಟು ಕಷ್ಟ ಪಟ್ಟು ನಾಟಕ ಆಡಿಸಿದಿರಿ. ಆಮೇಲೆ ಸಿನಿಮಾವನ್ನೂ ತೆಗೆದಿರಿ. ನಿಮಗೆ ಬಹಳ ಖರ್ಚಾಗಿರಬೇಕು. ಏನಾದರೂ ಹಣದ ಸಹಾಯ ಮಾಡಲಾ?" ಎಂದು ಕೇಳಿದ್ದರಂತೆ! ಸಿನಿಮಾಕ್ಕೆ 'ಅತ್ಯುತ್ತಮ ಕಥೆ' ವಿಭಾಗದ ಪ್ರಶಸ್ತಿ ಬಂದ ವಿಷಯವನ್ನು ತಿಳಿಸಿದಾಗಲೂ, "ನಾನು ಕಾಕನಕೋಟೆ ಕಥೆ ಎಲ್ಲಿ ಬರೆದೆ? ನಾನು ಬರೆದಿದ್ದು ನಾಟಕ ಅಲ್ಲವಾ?" ಎಂದು ಮುಗ್ಧವಾಗಿ ಪ್ರಶ್ನಿಸಿದ್ದರಂತೆ.
ಮಾಸ್ತಿ ಅವರ ಸರಳ ಮನಸ್ಸು, ಹೃದಯ ವೈಶಾಲ್ಯ, ಆರ್ಥಿಕ ಅನುಕೂಲತೆಯನ್ನು ಅತ್ತ ಇಡೋಣ. ಸಿನಿಮಾ ಎಂಬ ಥಳುಕು-ಬಳುಕಿನ ಲೋಕದಲ್ಲಿ ಹಣದ ಹೊಳೆಗೇನೂ ಕಡಿಮೆ ಇಲ್ಲ. ಸ್ಟಾರ್‌ಗಳ ಕೆಲವು ದಿನಗಳ ಕಾಲ್‌ಶೀಟ್ ಸಂಭಾವನೆ ಕೋಟಿ ಮೀರುತ್ತದೆ. ಆದರೆ ಸಿನಿಮಾಕ್ಕೆ ಕಸುವು ಒದಗಿಸಿದ ಸಾಹಿತಿಗಳಿಗೆ ಸಂಭಾವನೆ? ಸರಸ್ವತಿ ಮತ್ತು ಲಕ್ಷ್ಮಿ ಒಂದೇ ಕಡೆ ಇರುವುದಿಲ್ಲ ಎಂಬ ನುಡಿಗಟ್ಟು ನಮ್ಮಲ್ಲಿದೆ. ಇದು ಅದೆಷ್ಟೋ ನಿಜವೋ ಗೊತ್ತಿಲ್ಲ. ಆದರೆ ಸಿನಿಮಾ ಮಂದಿ ಮಾತ್ರ ಇದನ್ನು ಅಕ್ಷರಶಃ ನಿಜ ಮಾಡಲೇ ಹೊರಟಂತಿದೆ. ಒಂದು ಕೃತಿಯ ಹಕ್ಕನ್ನು ನಿರ್ಮಾಪಕರೊಬ್ಬರು ಪಡೆದರು ಎಂದರೆ ಅದು ಶಾಶ್ವತವಾಗಿ ಆತನ ಬಳಿಯೇ ಇರುತ್ತದೆ. ಆ ಹಕ್ಕನ್ನು ಲೇಖಕ ಮತ್ತೊಬ್ಬರಿಗೆ ನೀಡುವಂತಿಲ್ಲ. ಆದರೆ ಆ ಲೇಖಕನಿಗೆ ಸಿಗಬೇಕಾದ ಸಂಭಾವನೆಯ ವಿಷಯದಲ್ಲಿ ಮಾತ್ರ ಬೇಸರದ ಮಾತನ್ನೇ ಆಡಬೇಕಾಗುತ್ತದೆ.
ಪುಟ್ಟಣ್ಣ ಕಣಗಾಲ್‌ರಂತಹ ಧೀಮಂತ ನಿರ್ದೇಶಕರಿಂದಲೇ ಸಾಹಿತಿಗಳಿಗೆ ಸಿಗಬೇಕಾದ ಸಂಭಾವನೆ ಇರಲಿ, ಗೌರವ ಕೂಡಾ ಸಿಗಲಿಲ್ಲ ಎಂಬ ಮಾತುಗಳಿರುವಾಗ ಇನ್ನು ಉಳಿದವರಿಂದ ನಿರೀಕ್ಷಿಸುವುದೇನನ್ನು? ಪುಟ್ಟಣ್ಣ ನಿರ್ದೇಶನದ 'ನಾಗರಹಾವು' ಚಿತ್ರದ ಬಗ್ಗೆ ಆ ಕೃತಿಯ ಕರ್ತೃ ತ.ರಾ.ಸು ಅವರು "ಇದು ನಾಗರಹಾವಲ್ಲ ಕೇರೆ ಹಾವು" ಎಂದು ಲೇವಡಿ ಮಾಡಿದ್ದರು. ಆದರೆ ಈ ಎದೆಗಾರಿಕೆ ಎಲ್ಲಾ ಲೇಖಕರಿಗೂ ಇರಲಿಲ್ಲ. ಪುಟ್ಟಣ್ಣ ಅವರ 'ಸ್ವಂತ ಕಥೆ'ಯ ಚಿತ್ರ 'ಮಾನಸ ಸರೋವರ'ದ ಮೂಲ ತಮ್ಮ ಕಾದಂಬರಿ ಎಂದು ಸುದರ್ಶನ ದೇಸಾಯಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಅವರು ಪುಟ್ಟಣ್ಣ ಅವರಲ್ಲಿ ಪ್ರಸ್ತಾಪಿಸಿ ಕಪಾಳಮೋಕ್ಷವನ್ನೂ ಅನುಭವಿಸಿದ್ದರಂತೆ! 'ಗ್ರಾಮಾಯಣ' ಪ್ರಸಿದ್ಧಿಯ ರಾವ್ ಬಹದ್ದೂರ್ ಅವರಿಗೂ ಇಂಥದೇ ಅನುಭವ. ಅವರ 'ಪಡುವಾರಳ್ಳಿ ಪಾಂಡವರು' ಕೃತಿಗೆ ಪುಟ್ಟಣ್ಣ ಅವರಿಂದ ಬರಬೇಕಿದ್ದ ಸಂಭಾವನೆಯಲ್ಲಿ ಐದು ಸಾವಿರ ಬರಲೇ ಇಲ್ಲವಂತೆ. ಬೆಂಗಳೂರಿನಲ್ಲಿ ಪುಟ್ಟಣ್ಣ ಅವರು ಇಳಿಸಿದ್ದ ಲಾಡ್ಜ್‌ಗೆ ಬಾಡಿಗೆ ಕೊಡಲೂ ಹಣವಿಲ್ಲದ ರಾವ್ ಬಹದ್ದೂರ್ ಪತ್ರಿಕೆಯೊಂದಕ್ಕೆ ಕಾದಂಬರಿ ಬರೆದುಕೊಟ್ಟು ಹೊಟ್ಟೆ ಹೊರೆಯಬೇಕಾಯಿತಂತೆ. ಕಳೆದ ದಶಕದಲ್ಲಿ ಸಂಚಲನ ಮೂಡಿಸಿದ 'ಎ' ಚಿತ್ರದಲ್ಲಿ ಜಿ.ಪಿ. ರಾಜರತ್ನಂ ಅವರ 'ಯೇಳ್ಕಳ್ಳಾಕ್ ಒಂದೂರು...' ಹಾಡಿಗೂ ರಾಜರತ್ನಂ ಮನೆಯವರಿಗೆ ಸಂಭಾವನೆ ಸಂದಾಯವಾಗಿರಲಿಲ್ಲ. ಈ ಬಗ್ಗೆ ವಿವಾದ ಉಂಟಾಗಿತ್ತು.
ಲೇಖಕನೊಬ್ಬ ತನ್ನ ಕೃತಿ ಸಿನಿಮಾ ಆಗುತ್ತದೆ ಎಂಬ ಸಂಭ್ರಮದ ಭರದಲ್ಲಿ ಹೊಟ್ಟೆಪಾಡನ್ನೂ ಮರೆತುಬಿಡುತ್ತಾನೆ. ಈ ದೌರ್ಬಲ್ಯವನ್ನೇ ಸಿನಿಮಾದವರು 'ಎನ್‌ಕ್ಯಾಷ್' ಮಾಡಿಕೊಳ್ಳಲು ನೋಡಿದರೆ ಹೇಗೆ?
ಸಿನಿಮಾ ಮಂದಿಯ ಈ ಗುಣ ಗೊತ್ತಿದ್ದೋ ಏನೋ ತೇಜಸ್ವಿ ಬೆಳ್ಳಿತೆರೆಯವರ ಜೊತೆ ಖಡಕ್ಕಾಗಿದ್ದರು. ಒಮ್ಮೆ ಒಬ್ಬ ನಿರ್ಮಾಪಕರು ಅವರ ಕೃತಿಯೊಂದನ್ನು ಸಿನಿಮಾ ಮಾಡುವುದಾಗಿ ಹೇಳಿ ಹಕ್ಕು ಕೇಳಿದರಂತೆ. ಅದಕ್ಕೆ ತೇಜಸ್ವಿ "ಅದಕ್ಕೇನು ಧಾರಾಳವಾಗಿ ಮಾಡಿ, ಗೌರವಧನ ಒಂದು ಕೋಟಿ ರೂಪಾಯಿ" ಎಂದು ಬಿಟ್ಟರಂತೆ. ನಿರ್ಮಾಪಕರು ಮರು ಮಾತನಾಡದೆ ಎದ್ದು ಹೋಗಿಬಿಟ್ಟರು. ಮುಂದೆ ತೇಜಸ್ವಿ ಅವರೇ ತಮ್ಮ ಮಿತ್ರರಲ್ಲಿ ಇದನ್ನು ಪ್ರಸ್ತಾಪಿಸಿ, ಈ ಸಿನಿಮಾ ಮಂದಿ ಸಾಹಿತಿಗಳು, ಸಾಹಿತ್ಯ ಕೃತಿಗಳು ಎಂದರೆ ಏನೆಂದುಕೊಂಡಿದ್ದಾರೆ ಎಂದಿದ್ದರಂತೆ.
ಇಂದು ಒಂದು ಕನ್ನಡ ಸಿನಿಮಾ ನಿರ್ಮಿಸಲು ಯೋಚಿಸುವ ನಿರ್ಮಾಪಕ ಕನ್ನಡ ಸಾಹಿತ್ಯದಲ್ಲಿ ಒಳ್ಳೆಯ ಕಥೆ ಇದೆಯೇ ಎಂದು ನೋಡುವುದಿಲ್ಲ; ಅಥವಾ ಒಳ್ಳೆ ಸಾಹಿತಿಗಳಿಗೆ -ಸಾಹಿತ್ಯ ಕೃಷಿ ಮಾಡಿದವರು ಇರಲಿ, ಇಲ್ಲವೇ ಚಿತ್ರ ಸಾಹಿತಿಗಳೇ ಇರಲಿ- ಕಥೆ ರಚಿಸಲು ಹೇಳುವುದಿಲ್ಲ. ಬದಲಿಗೆ ಇತರ ಭಾಷೆಗಳ ಕೆಲವು ಚಿತ್ರಗಳ ವಿಡಿಯೋ ನೋಡಿ ಅಲ್ಲಿನ ಹಲವು ಸನ್ನಿವೇಶಗಳು, ಸಂಭಾಷಣೆಗಳು, ಹಾಸ್ಯಗಳನ್ನು ಎರವಲು ತಂದು ಕಥೆ ಹೊಸೆಯಲು ನೋಡುತ್ತಾರೆ. ಸಾಹಿತ್ಯ ಕೃತಿ ಆಧಾರಿತ ಚಿತ್ರವೊಂದು ಯಶಸ್ವಿಯಾದರೆ ಸರಿ. ಬದಲಿಗೆ ಅದು ಯಾವುದೇ ಕಾರಣದಿಂದ ತೋಪಾದರೂ ಮತ್ತೆ ಆತ ಸಾಹಿತ್ಯ ಕೃತಿಯನ್ನು ಚಿತ್ರ ಮಾಡಲು ಮುಂದಾಗಲಾರ.
ಹಿಂದೆ ಬೆಳ್ಳಾವೆ ನರಹರಿಶಾಸ್ತ್ರಿ, ದೇವುಡು ನರಸಿಂಹ ಶಾಸ್ತ್ರಿ, ಅ.ನ.ಕೃ, ತ.ರಾ.ಸು, ಟಿ.ಪಿ. ಕೈಲಾಸಂ ಮುಂತಾದ ದಿಗ್ಗಜರು ಚಲನಚಿತ್ರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದ್ದರು. ಆದರೆ ಕನ್ನಡ ಚಿತ್ರರಂಗ ಇಂತಹ ಮಹಾನ್ ಸಾಹಿತಿಗಳ ಪ್ರತಿಭೆ ಸೂಕ್ತವಾಗಿ ಹರಿಯಲು ಯೋಗ್ಯ ವಾತಾವರಣ ಕಲ್ಪಿಸಲಿಲ್ಲ. ಕೆ. ಶಿವರಾಮ ಕಾರಂತ, ಗಿರೀಶ ಕಾರ್ನಾಡ, ಚಂದ್ರಶೇಖರ ಕಂಬಾರ, ಪಿ. ಲಂಕೇಶ್, ಬರಗೂರು ರಾಮಚಂದ್ರಪ್ಪ ಮುಂತಾದವರು ಪರ್ಯಾಯ ಸಿನಿಮಾಗಳಲ್ಲಿ ಗೆದ್ದಿದ್ದಾರೆ. ಜನಪ್ರಿಯ ಸಿನಿಮಾಗಳಲ್ಲೂ ಇಂಥವರ ಪ್ರತಿಭೆಯನ್ನು ಬಳಸಿಕೊಳ್ಳಬೇಕಿದೆ.
ಸಾಹಿತಿಗಳ ಸಂಭಾವನೆಯ ವಿಚಾರವಾಗಿ ಮರೆತ ಮಾತು: ಇತ್ತೀಚೆಗೆ ಭಾರೀ ಯಶಸ್ಸು ಕಂಡ ಸಿನಿಮಾವೊಂದರ ಜನಪ್ರಿಯ ಸಾಹಿತಿ- ಗೀತರಚನಕಾರ ತನ್ನ ಕೆಲಸಕ್ಕೆ ನಿಗದಿತ ಸಂಭಾವನೆ ಪಡೆಯಲು ಸಾಕುಬೇಕಾಯಿತಂತೆ. ಆ ಸಾಹಿತಿಯ ಹಾಡುಗಳಿಂದಲೇ ಆ ಚಿತ್ರ ಕನ್ನಡ ಸಿನಿಮಾಲೋಕದಲ್ಲಿ ಹೊಸ ಅಲೆ ಎಬ್ಬಿಸಿತು. ಆ ಹಾಡುಗಳೇ ನಿರ್ಮಾಪಕನಿಗೆ ಕೋಟಿಗಟ್ಟಲೇ ಹಣ ತಂದು ಕೊಟ್ಟವು. ಆದರೆ ಆ ನಿರ್ಮಾಪಕ ಮಹಾಶಯರು ಕಡೇ ಪಕ್ಷ ಆ ಕವಿಗೆ ಒಂದು 'ವಿಷ್' ಕೂಡಾ ಮಾಡುವ ಸೌಜನ್ಯ ತೋರಲಿಲ್ಲ. ಇದನ್ನೆಲ್ಲಾ ಕಂಡರೆ ಏನು 'ಅನಿಸುತಿದೆ...' ಗೊತ್ತೆ?
ಟಿಎಸ್‌ಐ
|
|