ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ಮುಖಪುಟ ಲೇಖನ : ಸಾಹಿತ್ಯ-ತಂತ್ರಜ್ಞಾನ

ಕಡಲ ತಡಿಯಲಿ ಕನ್ನಡ ಡಿಂಡಿಮ
ತಂತ್ರಜ್ಞಾನದ ಗಾಲಿಯ ಮೇಲೆ ಕನ್ನಡದ ತೇರು

ಮಾಹಿತಿ ತಂತ್ರಜ್ಞಾನದ ಅಬ್ಬರದಲ್ಲಿ ಕಿರಿದಾಗುತ್ತಿರುವ ಜಗತ್ತು...ಇಂಗ್ಲಿಷ್‌ನ ವಸಾಹತು ಶಾಹಿ ಮನೋಭಾವದ ನಡುವೆ ನರಳುತ್ತಿರುವ ಇನ್ನಿತರ ಭಾಷೆಗಳು...ಇಂತಹ ಸನ್ನಿವೇಶದಲ್ಲಿ ಎಲ್ಲಕ್ಕೂ ಕನ್ನಡ ಸೆಡ್ಡು ಹೊಡೆದು ನಿಲ್ಲಬೇಕೆಂದರೆ ಕನ್ನಡದ ತೇರನ್ನು ತಂತ್ರಜ್ಞಾನದ ಗಾಲಿಯ ಮೇಲೆ ಕೂರಿಸಿ ಮುನ್ನುಗ್ಗಲೇಬೇಕು ಎನ್ನುವುದು ಸತೀಶ್ ಚಪ್ಪರಿಕೆ ಅಭಿಪ್ರಾಯ

ಅಂತರ್ಜಾಲದಲ್ಲಿ ಜಾಲಾಡುತ್ತಾ 'ಗೂಗಲ್' ಅನ್ವೇಷಣಾ ಕಿಂಡಿಯಲ್ಲಿ 'ಕನ್ನಡ ಲಿಟರೇಚರ್' ಎಂದು ಇಂಗ್ಲಿಷ್‌ನಲ್ಲಿ ಟೈಪ್ ಮಾಡಿ... ಹುಡುಕು ಎಂದು ಆದೇಶ ನೀಡಿದರೆ 0.26 ಸೆಕೆಂಡಿನಲ್ಲಿ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತಹ 1,77,000 ಕೊಂಡಿಗಳ ಪಟ್ಟಿ ಧುತ್ತೆಂದು ಪ್ರತ್ಯಕ್ಷವಾಗುತ್ತದೆ. ತಮಿಳು ಸಾಹಿತ್ಯಕ್ಕೆ ಸಂಬಂಧಿಸಿದಂತೆ ಹುಡುಕಾಟ ನಡೆಸಿದರೆ 0.21 ಸೆಕೆಂಡಿನಲ್ಲಿ 5,77,000 ಕೊಂಡಿಗಳು, ತೆಲುಗಿಗೆ ಸಂಬಂಧಿಸಿದರೆ 0.18 ಸೆಕೆಂಡುಗಳಲ್ಲಿ 1,75,00 ಕೊಂಡಿಗಳು, ಬಂಗಾಳಿಗೆ ಸಂಬಂಧಿಸಿದರೆ 0.16 ಸೆಕೆಂಡುಗಳಲ್ಲಿ 3,30,000 ಕೊಂಡಿಗಳ ಪಟ್ಟಿ ಪ್ರತ್ಯಕ್ಷವಾಗುತ್ತದೆ. ಅದೇ 'ಇಂಗ್ಲಿಷ್ ಲಿಟರೇಚರ್' ಎಂಬ ಪದ ಟೈಪ್ ಮಾಡಿ ಹುಡುಕು ಎಂದ 0.30 ಸೆಕೆಂಡುಗಳಲ್ಲಿ 9,68,00,000 ಕೊಂಡಿಗಳ ಮಹಾಸಾಗರವೇ ಅಲೆಯಾಗಿ ಬಂದು ಅಪ್ಪಳಿಸುತ್ತದೆ. ಹೆಚ್ಚಿನ ಪಕ್ಷ ಆಧುನಿಕ ತಂತ್ರಜ್ಞಾನಗಳ ಪಿತಾಮಹ ಎಂದೆನ್ನಿಸಿರುವ ಮಾಹಿತಿ ತಂತ್ರಜ್ಞಾನದ ಮೇಲೆ ಇಂಗ್ಲಿಷ್‌ನ ಏಕಸ್ವಾಮ್ಯ ಎಷ್ಟು ಬಿಗಿಯಾಗಿದೆ ಎನ್ನುವುದಕ್ಕೆ ಇದಕ್ಕಿಂತ ಸರಳವಾದ ಉದಾಹರಣೆ ಬೇರೊಂದಿಲ್ಲ. ಕೇವಲ ಭಾಷೆಯ ನೆಲೆಯಲ್ಲಿ ಮಾತ್ರ ನಾವು ಹಿಂದೆ ಬಿದ್ದಿಲ್ಲ. ಬದಲಾಗಿ ತಂತ್ರಜ್ಞಾನಕ್ಕೆ ಭಾಷೆಯನ್ನು ಅಳವಡಿಸಿಕೊಂಡು, ಅದನ್ನು ಭಾಷೆಯ ಅಭಿವೃದ್ಧಿಗೆ ದುಡಿಸಿಕೊಳ್ಳುವಲ್ಲಿ ಕೂಡ ಹಿಂದೆ ಬಿದ್ದಿದ್ದೇವೆ. ಇದು ಕೇವಲ ಇಂಗ್ಲಿಷ್ ಮತ್ತು ಇನ್ನಿತರ ಭಾಷೆಗಳ ನಡುವಿನ 'ಡಿಜಿಟಲ್ ಕಂದಕ' ಮಾತ್ರವಲ್ಲ. ಬೇರೆ ಭಾಷೆಗಳು-ಸಂಸ್ಕೃತಿ-ಪರಂಪರೆಯ ನಿಜವಾದ ಸ್ಥಿತಿ-ಗತಿಯ ಸಂಕೇತ ಕೂಡ.
ಹಾಗೆ ನೋಡಿದಲ್ಲಿ ದ್ರಾವಿಡ ಮೂಲದ ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳು ಇಂಗ್ಲಿಷ್‌ಗಿಂತ ಅತ್ಯಂತ ಪುರಾತನವಾದ ಭಾಷೆಗಳು. ಜಗತ್ತಿನ ಅತ್ಯಂತ ಪುರಾತನವಾದ ಭಾಷೆಗಳ ಪೈಕಿ ಸಂಸ್ಕೃತದ ನಂತರದ ಸ್ಥಾನ ಇರುವುದು ತಮಿಳಿಗೆ. ಆನಂತರದ ಮೂರನೇ ಸ್ಥಾನ ಕನ್ನಡದ್ದು! ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ಜನರು ಮಾತನಾಡುವ ಭಾಷೆಗಳ ಪಟ್ಟಿಯಲ್ಲಿ ಕನ್ನಡಕ್ಕೆ 29ನೇ ಸ್ಥಾನವಿದೆ. ಆದರೂ, ಆಗೊಮ್ಮೆ-ಈಗೊಮ್ಮೆ ಕನ್ನಡ ಸೋತು ನಿಂತ ಭಾವನೆ ಉಕ್ಕುವುದು ಏಕೆ? ಕಾಲನೊಂದಿಗೆ ಜೊತೆಯಾಗಿ ಹೆಜ್ಜೆ ಹಾಕುವಲ್ಲಿ ಕನ್ನಡ ಭಾಷೆ ಸ್ವಲ್ಪ ಮಟ್ಟಿಗೆ ಹಿಂದೆ ಬಿದ್ದಿರುವುದೇ ಇದಕ್ಕೆ ಕಾರಣ.
ಕರ್ನಾಟಕದ ರಾಜಧಾನಿ ಈಗ ಭಾರತದ ಮಾಹಿತಿ ತಂತ್ರಜ್ಞಾನ ರಾಜಧಾನಿ. ಸುಮಾರು 5000ಕ್ಕಿಂತ ಹೆಚ್ಚು ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ತವರೂರು. ಜಗತ್ತನ್ನೇ ಆಳುತ್ತಿರುವ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಕನ್ನಡ, ಕರ್ನಾಟಕದ ಕೊಡುಗೆ ಅಪಾರ. ಆದರೆ, ಆ ಕಡೆಯಿಂದ ಈ ಕಡೆಗೆ ಹರಿದು ಬಂದದ್ದು? ಈ ಪ್ರಶ್ನೆಗೆ ಅಂತಹ ಆರೋಗ್ಯಕರವಾದ ಉತ್ತರ ದೊರಕುವುದಿಲ್ಲ.
ಹೆಚ್ಚಿನ ಪಕ್ಷ ಇದು ಕೇವಲ ಮಾಹಿತಿ ತಂತ್ರಜ್ಞಾನಕ್ಕೆ ಮಾತ್ರ ಸೀಮಿತವಾದದ್ದಲ್ಲ. ನೂರಾರು ವರ್ಷಗಳ ಹಿಂದೆ ಮುದ್ರಣ ತಂತ್ರಜ್ಞಾನ ಬಂದಾಗ, ನಂತರ ರೇಡಿಯೊ, ಟೆಲಿವಿಷನ್‌ನಂತಹ ಮಾಧ್ಯಮಗಳ ವಿಕಾಸವಾದಾಗ ಕೂಡ ಕನ್ನಡದಂತಹ ಭಾಷೆಗಳು ಇಂಗ್ಲಿಷ್ ಸ್ಪಂದಿಸಿದಷ್ಟು ವೇಗವಾಗಿ ಅವುಗಳಿಗೆ ಸ್ಪಂದಿಸಲಿಲ್ಲ. ಪರಿಣಾಮ ಇಂದಿಗೂ ಕರ್ನಾಟಕದ ಯಾವುದೋ ಕಗ್ಗಾಡಿನಲ್ಲಿ ಕೂತು ಡಿಷ್ ಟಿವಿ ಹಾಕಿಸಿಕೊಂಡ ವ್ಯಕ್ತಿಯೊಬ್ಬ ಬಿಬಿಸಿ, ಸಿಎನ್‌ಎನ್‌ನಂತಹ ಬ್ರಿಟಿಷ್ ಮತ್ತು ಅಮೆರಿಕದ ಸುದ್ದಿ ಚಾನೆಲ್‌ಗಳನ್ನು ಮುಕ್ತವಾಗಿ ನೋಡಬಹುದು. ಸ್ಟಾರ್ ಮೂವೀಸ್ ಮತ್ತು ಎಚ್‌ಬಿಒ ಕೂಡ ಲಭ್ಯ. ಆದರೆ, ಅದೇ ಕನ್ನಡದ ಒಂದು ಚಾನೆಲನ್ನು ಬ್ರಿಟನ್ ಅಥವಾ ಅಮೆರಿಕದಲ್ಲಿ ಕೂತ ಕನ್ನಡಿಗನೊಬ್ಬ ನೋಡಬೇಕೆಂದರೆ ಅದಕ್ಕೆ ಆತ ಭಾರೀ ಮೊತ್ತದ ಹಣ ನೀಡಬೇಕು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇಂಗ್ಲಿಷ್ ಚಾನೆಲ್‌ಗಳನ್ನು ಈ ರೀತಿ ಪುಕ್ಕಟೆ ನೀಡುವ ಮೂಲಕ ಅಲ್ಲಿನ ಸಂಸ್ಕೃತಿಯ ಬೀಜವನ್ನೇ ಇಲ್ಲಿ ಬಿತ್ತಲಾಗುತ್ತಿದೆ. ಮತ್ತೊಂದು ಪರಂಪರೆಯನ್ನೇ ಹೇರಲಾಗುತ್ತಿದೆ. ಕನ್ನಡದಂತಹ ಭಾಷೆಯನ್ನು ತುಳಿಯುವ ಹುನ್ನಾರ ನಡೆಸಲಾಗುತ್ತಿದೆ. ಉಳಿದೆಲ್ಲ ಭಾಷೆಗಳನ್ನು, ಸಂಸ್ಕೃತಿ, ಪರಂಪರೆಗಳನ್ನು ನುಂಗಿ ಹಾಕುವ ಜಾಗತಿಕ ಹುನ್ನಾರವಿದು. ಹಾಗೆಂದ ಕೂಡಲೇ ಇಂಗ್ಲಿಷ್ ಅಥವಾ ಬೇರೆ ಭಾಷೆಯ ಚಾನೆಲ್‌ಗಳನ್ನು ನೋಡಲೇಬಾರದು ಎಂದಲ್ಲ. ಇಂಗ್ಲಿಷ್ ಅನ್ನು ಒಳಗೊಂಡು ಯಾವುದೇ ಭಾಷೆಯಲ್ಲಿರುವ ಒಳಿತೆಲ್ಲವನ್ನೂ ಹೀರಿಕೊಂಡರೆ ಮಾತ್ರ ನಮ್ಮ ಭಾಷೆ ಸಮೃದ್ಧವಾಗಲು ಸಾಧ್ಯ. ಆ ಬಗ್ಗೆ ಎರಡು ಮಾತಿಲ್ಲ. ಇಲ್ಲಿ ಪ್ರಸ್ತಾಪಿಸಲಾದ ವಿಷಯದ ಮುಖ್ಯ ತಿರುಳೆಂದರೆ ಇಂಗ್ಲಿಷ್ ಹೇಗೆ ಒಂದು ತಂತ್ರಜ್ಞಾನವನ್ನು ಬಳಸಿಕೊಂಡು ಏಕಸ್ವಾಮ್ಯ ಸಾಧಿಸಲು ಯಶಸ್ವಿಯಾಯಿತು ಎಂದು. ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳು ಕೂಡ ಈ ಹಿಂದೆ ಇಂತಹ ವಿಫಲ ಯತ್ನಗಳನ್ನು ಮಾಡಿದ್ದವು ಎಂದು ಅರಿವಿಗೆ ಬರುತ್ತದೆ. ಇಂಗ್ಲಿಷ್ ದೊಡ್ಡಣ್ಣನಾಗುವ ಪ್ರಕ್ರಿಯೆ ಟೆಲಿವಿಷನ್ ಮಾಧ್ಯಮ ಅಥವಾ ಆ ತಂತ್ರಜ್ಞಾನಕ್ಕೆ ಸೀಮಿತವಾಗೇನಲ್ಲ. ಜಗತ್ತೇ ಅರಿತಿರುವಂತೆ ಈಗ ಎಲ್ಲರ ಮತ್ತು ಎಲ್ಲದರ ಭವಿಷ್ಯ ಮಾಹಿತಿ ತಂತ್ರಜ್ಞಾನದ ಕೈಯಲ್ಲಿ ಅಡಗಿ ಕುಳಿತಿದೆ. ಇಂತಹ ಸನ್ನಿವೇಶದಲ್ಲಿ ಆ ತಂತ್ರಜ್ಞಾನವನ್ನು ನಮ್ಮ ಭಾಷೆ ಎಷ್ಟರ ಮಟ್ಟಿಗೆ ಸಮರ್ಥವಾಗಿ ದುಡಿಸಿಕೊಳ್ಳುತ್ತಿದೆ ಎನ್ನುವುದರ ಮೇಲೆ ಯಶಸ್ಸು ಅಡಗಿ ಕುಳಿತಿದೆ. ಈ ನಡುವೆ ಕಂಪ್ಯೂಟರ್, ಅಂತರ್ಜಾಲಗಳೇನೂ ಈಗ ದೇಶದಲ್ಲಿನ ಎಲ್ಲರ ಆಸ್ತಿ ಆಗಿಲ್ಲ. ಅಂತಹುದರಲ್ಲಿ ಇಂತಹ ಅರ್ಥವಿಲ್ಲದ ಕನಸುಗಳನ್ನು ಕಾಣುವುದು ಮೂರ್ಖತನ ಎಂಬ ವಾದ ಕೂಡ ಇದೆ. ಹೌದು! ಕನ್ನಡಕ್ಕೆ ಅಥವಾ ಇತರ ಭಾರತೀಯ ಭಾಷೆಗಳಿಗೆ ಸೀಮಿತವಾಗಿ, ಕೂಪಮಂಡೂಕವಾಗಿ ಕೂತು ಯೋಚಿಸಿದರೆ ಖಂಡಿತ ಇದೊಂದು ಅರ್ಥವಿಲ್ಲದ ಕನಸು. ಆದರೆ, ನಾವು ಮಹಾಯುದ್ಧ ಸಾರಲು ಹೊರಟಿರುವುದು ಇಂಗ್ಲಿಷ್‌ನಂತಹ ಒಂದು ಬ್ರಹ್ಮ ರಾಕ್ಷಸನ ವಿರುದ್ಧ. ನಾವೇನೋ ಹೇಗಿದ್ದರೂ ಬಡ ಬೋರೇಗೌಡರ ಮನೆಗೆ ಇನ್ನೂ ಕಂಪ್ಯೂಟರ್-ಅಂತರ್ಜಾಲ ಯಾವುದೂ ಬಂದಿಲ್ಲ ಎಂದು ಸುಮ್ಮನೇ ಕೂತು ಬಿಡಬಹುದು. ಆದರೆ, ಇನ್ನೊಂದೆಡೆಯಲ್ಲಿ ಇಂಗ್ಲಿಷ್ ಅದರ ಉಪಯೋಗ ಪಡೆದುಕೊಂಡು ಕನ್ನಡದಂತಹ ಭಾಷೆಗಳ ಕತ್ತನ್ನು ಮತ್ತಷ್ಟು ಬಲವಾಗಿ ಹಿಡಿದುಕೊಳ್ಳುತ್ತದೆ. ಕನಿಷ್ಠ ಆ ನಿಟ್ಟಿನಲ್ಲಿ ಪ್ರತಿರೋಧ ಒಡ್ಡುವ ಸಲುವಾಗಿಯಾದರೂ ಮಾಹಿತಿ ತಂತ್ರಜ್ಞಾನವನ್ನು ಕನ್ನಡ ಭಾಷೆ ಇನ್ನಷ್ಟು ಪರಿಣಾಮಕಾರಿಯಾಗಿ ದುಡಿಸಿಕೊಳ್ಳಲು ಮುಂದಾಗಬೇಕು. ಹಾಗೆ ನೋಡಿದರೆ, ಈ ನಿಟ್ಟಿನಲ್ಲಿ ಭಾರತದ ಇತರ ಭಾಷೆಗಳಿಗಿಂತ ಕನ್ನಡಕ್ಕೆ ಅದರದ್ದೇ ಆದ ಅನುಕೂಲತೆಗಳು ಇವೆ. ಮುಖ್ಯವಾಗಿ ಮಾಹಿತಿ ತಂತ್ರಜ್ಞಾನದ ರಾಜಧಾನಿ ನಮ್ಮಲ್ಲೇ ಇದೆ. ಜೊತೆ-ಜೊತೆಗೆ ಅಲ್ಲಿ ನೆಲೆ ನಿಂತಿರುವ ಬಹುತೇಕ ಮಾನವ ಸಂಪನ್ಮೂಲದ ತಾಯ್ನುಡಿ ಕನ್ನಡವೇ ಆಗಿದೆ. ಪರಿಸ್ಥಿತಿ ಹೀಗಿರುವಾಗ ಮಾಹಿತಿ ತಂತ್ರಜ್ಞಾನವನ್ನು ಕನ್ನಡಕ್ಕೆ ಒಗ್ಗಿಸುವ ಮತ್ತು ಕನ್ನಡವನ್ನು ಮಾಹಿತಿ ತಂತ್ರಜ್ಞಾನಕ್ಕೆ ಬಗ್ಗಿಸುವಾಗ ತಂತ್ರಜ್ಞರಿಗೆ ಭಾಷೆ ಹೆಚ್ಚಿನ ತೊಡಕಾಗುವುದಿಲ್ಲ. ಅದಲ್ಲದೇ ಈ ನಿಟ್ಟಿನಲ್ಲಿ ಈಗಾಗಲೇ ಸಾಕಷ್ಟು ವ್ಯಕ್ತಿಗತ ಹಾಗೂ ಕೆಲಮಟ್ಟಿಗೆ ಕೆಲವು ಸಂಸ್ಥೆಗಳು ಪ್ರಾಮಾಣಿಕ ಪ್ರಯತ್ನ ಮಾಡಿಯಾಗಿದೆ.
ಉದಾಹರಣೆಗೆ ಸದ್ಯ ಜಾಗತಿಕವಾಗಿ ಮತ್ತು ಪುಕ್ಕಟೆಯಾಗಿ ಬಳಕೆಯಾಗುತ್ತಿರುವ 'ನುಡಿ' ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿರುವ ಕನ್ನಡ ಗಣಕ ಪರಿಷತ್ ಪ್ರಯತ್ನ. ಇನ್ನೊಂದೆಡೆ ಬರಹದಂತ ತಂತ್ರಾಂಶವನ್ನು ಸಿದ್ಧ ಪಡಿಸಿರುವ ಶೇಷಾದ್ರಿ ವಾಸು ಅವರ ಸಾಧನೆಗಳಿವೆ. ಇಲ್ಲಿ ಸರ್ಕಾರ ನುಡಿ ಪರ ನಿಂತಿದೆ ಮತ್ತು ದಿನ ನಿತ್ಯದ ಆಡಳಿತದಲ್ಲಿ ಆ ತಂತ್ರಾಶದ ಬಳಕೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಇದು ಕೂಡ ಭಾಷೆ-ತಂತ್ರಜ್ಞಾನದ ಬೆಳವಣಿಗೆಯ ನಿಟ್ಟಿನಲ್ಲಿ ಮಹತ್ತರ ಹೆಜ್ಜೆಯೇ ಸರಿ. ಈ ನಡುವೆ ಕನ್ನಡದ ತಂತ್ರಾಶಗಳ ಬಳಕೆಗೆ ಅವುಗಳದ್ದೇ ಆದ ಆಪರೇಟಿಂಗ್ ಸಿಸ್ಟಮ್ ಇಲ್ಲ ಎಂಬ ಕೊರಗು ಇದ್ದೇ ಇದೆ. ಆದರೂ, ವಿಂಡೋಸ್‌ನಂತಹ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಇವೆರಡನ್ನೂ ಅಡಚಣೆಗಳಿಲ್ಲದೇ ಬಳಸಬಹುದು.
ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವಿದೆ. ಏನೆಂದರೆ ಮುದ್ರಣ ಮಾಧ್ಯಮ ನೇರವಾಗಿ ಒಂದು ಏಕಮುಖ ಪ್ರಕ್ರಿಯೆ. ಇನ್ನು ರೇಡಿಯೊ ಮತ್ತು ಟಿವಿ ನಿಯಂತ್ರಿತ ದ್ವಿಮುಖ ಮಾಧ್ಯಮಗಳು. ಇವೆರಡು ಸಂಸ್ಥೆಯವರು ಅವಕಾಶ ನೀಡಿದರೆ ಕೇಳುಗ ಅಥವಾ ನೋಡುಗ ಕಾರ್ಯಕ್ರಮಗಳಲ್ಲಿ ನೇರವಾಗಿ ಭಾಗಿಯಾಗಬಹುದು. ಆದರೆ, ಅಂತರ್ಜಾಲ ಲೋಕ ಸದಾ ದ್ವಿಮುಖ. ಕೆಲವೊಂದು ತಾಂತ್ರಿಕ ಅಡೆ-ತಡೆಗಳನ್ನು ಹಾಕಿದರೂ, ಸಾರ್ವಜನಿಕವಾದ ಒಂದು ಅಂತರ್ಜಾಲ ತಾಣದಲ್ಲಿ ಓದುಗರು-ನೋಡುಗರು ಮುಕ್ತವಾಗಿ ಅಭಿಪ್ರಾಯ ಮಂಡಿಸಬಹುದು. ಇದರಿಂದ ಪ್ರಭಾವಿತಗೊಂಡಿರುವ ಕನ್ನಡ ಸಾಹಿತ್ಯ ಲೋಕದ ಹಲವಾರು ಪ್ರತಿಭೆಗಳು ಈಗಾಗಲೇ ಅವರದ್ದೇ ಅಂತರ್ಜಾಲ ತಾಣಗಳನ್ನು ಮತ್ತು ಬ್ಲಾಗ್‌ಗಳನ್ನು ಕನಸಿನ ಲೋಕದಲ್ಲಿ ನಿರ್ಮಿಸಿಯಾಗಿದೆ.
ಉದಾಹರಣೆಗೆ ದಟ್ಸ್ ಕನ್ನಡ ಡಾಟ್ ಕಾಂ, ಕನ್ನಡ ಸಾಹಿತ್ಯ ಡಾಟ್ ಕಾಂ... ಮುಂತಾದ ಅಂತರ್ಜಾಲ ತಾಣಗಳು ಈಗ ಜಗತ್ತಿನಾದ್ಯಂತ ಕನ್ನಡಿಗರು ಇರುವಲ್ಲೆಲ್ಲ ಚಿರಪರಿಚಿತ. ಇನ್ನು ಒಎಲ್‌ಎನ್‌ಸ್ವಾಮಿ, ಅವಧಿ, ಮೈಸೂರು ಪೋಸ್ಟ್, ಜೋಗಿಮನೆ...ಯಂತಹ ಬ್ಲಾಗ್‌ಗಳು ಅವುಗಳದ್ದೇ ಆದ ವಲಯದಲ್ಲಿ ವ್ಯಕ್ತಿಗತವಾಗಿ ಜನಪ್ರಿಯಗೊಳ್ಳುತ್ತಿವೆ. ಈ ನಡುವೆ ಕನ್ನಡದ ಬಹುತೇಕ ಪತ್ರಿಕೆಗಳು, ನಿಯತಕಾಲಿಕಗಳು ಅವುಗಳದ್ದೇ ಆದ ಅಂತರ್ಜಾಲ ತಾಣಗಳನ್ನು ಹೊಂದಿವೆ. ಈ ಎಲ್ಲ ಉದಾಹರಣೆಗಳ ಓದುಗ-ನೋಡುಗನಿಗೆ ಇರುವ ಒಂದು ಅತ್ಯುತ್ತಮ ಅವಕಾಶವೆಂದರೆ ಆತ ಕೂಡ ಮುಕ್ತವಾಗಿ ಅವನ ಅಭಿಪ್ರಾಯಗಳನ್ನೂ ಈ ತಾಣಗಳಲ್ಲಿ ಮಂಡಿಸಬಹುದು. ಒಂದು ಅಂತರ್ಜಾಲ ತಾಣ ಅಥವಾ ಒಂದಷ್ಟು ಬ್ಲಾಗ್‌ಗಳನ್ನು ಮಾಡಿದ ಕೂಡಲೇ ಕನ್ನಡ ಭಾಷೆ ಇದ್ದಕ್ಕಿದ್ದಂತೆ ಉದ್ಧಾರವೇನೂ ಆಗುವುದಿಲ್ಲ. ಆದರೆ, ಜಾಗತಿಕ ಭಾಷೆಯಾಗಿ ಮೆರೆಯಬೇಕು ಎಂದು ಹೊರಟಿರುವ ಇಂಗ್ಲಿಷ್ ಓಟಕ್ಕೆ ಈ ಮೂಲಕ ಸ್ವಲ್ಪ ಮಟ್ಟಿಗೆ ಕಡಿವಾಣ ಹಾಕಿದಂತಾಗುತ್ತದೆ. ಅದರೊಂದಿಗೆಯೇ ಜಾಗತಿಕ ನೆಲೆಯಲ್ಲಿ ತನ್ನ ಪರಿಧಿಯನ್ನು ವಿಸ್ತರಿಸಿಕೊಳ್ಳಲು ಕೂಡ ಕನ್ನಡಕ್ಕೆ ಸಾಧ್ಯವಾಗುತ್ತದೆ. ಜಗತ್ತಿನ ಮೂಲೆ-ಮೂಲೆಯಲ್ಲಿ ಕೂತಿರುವ ಕನ್ನಡದ ಮನಸ್ಸುಗಳನ್ನು ಒಂದು ಮಾಡಲು ಕೂಡ ಆ ಮೂಲಕ ಸಾಧ್ಯವಾಗುತ್ತದೆ. ಇದು ಯಾವುದೇ ಭಾಷೆಯ ದೃಷ್ಟಿಯಲ್ಲಿ ಅತ್ಯಂತ ಮಹತ್ವದ ವಿಷಯ.
ಮಾಹಿತಿ ತಂತ್ರಜ್ಞಾನ ಮತ್ತು ಅಂತರ್ಜಾಲ ಲೋಕದ ಮತ್ತೊಂದು ಸೊಬಗೆಂದರೆ ಅದಕ್ಕಿರುವ ಕೊಡು ಕೊಳ್ಳುವಿಕೆಯ ಗುಣ. ಒಂದು ದೇಶ, ಸಮಾಜದ ಆರ್ಥಿಕ ಹಾಗೂ ಸಾಮಾಜಿಕ ಪರಿಸ್ಥಿತಿಯನ್ನು ನಿಯಂತ್ರಿಸಲು ಇರುವ ವಿಶೇಷವಾದ ಶಕ್ತಿ. ಉದಾಹರಣೆಗೆ ಇಂಗ್ಲಿಷ್ ಮತ್ತು ಕನ್ನಡವನ್ನೇ ತೆಗೆದುಕೊಳ್ಳೋಣ. ಇಂಗ್ಲಿಷ್‌ಗೆ ಹೋಲಿಸಿದರೆ ಕನ್ನಡದಲ್ಲಿ ವಿಜ್ಞಾನ, ವೈದ್ಯಕೀಯ ವಿಜ್ಞಾನ, ಕ್ರೀಡೆ ಮುಂತಾದ ಸಾಹಿತ್ಯ ಪ್ರಕಾರ ಇದುವರೆಗೆ ಪ್ರಬುದ್ಧವಾಗಿಲ್ಲ. ಏಕೆಂದರೆ ಅಂತರ್ಜಾಲ ಅದರ ವ್ಯಾಪ್ತಿ ಹಿಗ್ಗುವವರೆಗೆ ಅಂತಹ ಸಾಹಿತ್ಯ ಪ್ರಕಾರಗಳ ರಚನೆಗೆ ಅಗತ್ಯವಾದ ಮೂಲದ್ರವ್ಯವೇ ಲೇಖಕರಿಗೆ ಲಭ್ಯವಾಗುತ್ತಿರಲಿಲ್ಲ. ಆದರೀಗ ಕನ್ನಡದಲ್ಲಿಯೂ ಕೆಲವು ಅತ್ಯುತ್ತಮ ವಿಜ್ಞಾನ, ವೈದ್ಯ ವಿಜ್ಞಾನ ಹಾಗೂ ಕ್ರೀಡಾ ಲೇಖನಗಳು ಪ್ರಕಟವಾಗಲಾರಂಭಿಸಿವೆ. ಅದಕ್ಕೆ ಮೂಲ ಕಾರಣ ಅಂತರ್ಜಾಲದಲ್ಲಿರುವ ಮಾಹಿತಿ ಸಾಗರ. ಒಂದು ಕಾಲದಲ್ಲಿ ಯಾವುದಾದರೂ ಲೇಖಕ ಏಡ್ಸ್ ಬಗ್ಗೆ ಒಂದು ಲೇಖನ ಬರೆಯಬೇಕಿದ್ದರೆ ಅದಕ್ಕೆ ಅಗತ್ಯವಾದ ಮಾಹಿತಿ ಸಂಗ್ರಹಿಸಲು ವಾರಗಟ್ಟಲೇ ಅಲ್ಲಿಂದ ಇಲ್ಲಿಗೆ ಓಡಬೇಕಾಗುತ್ತಿತ್ತು. ಆದರೀಗ 'ಗೂಗಲ್' ಅನ್ವೇಷಣಾ ಕಿಂಡಿಯಲ್ಲಿ 'ಏಡ್ಸ್' ಎಂದು ಟೈಪ್ ಮಾಡಿ ಹುಡುಕು ಎಂದು ಆದೇಶ ನೀಡಿದ 0.13 ಸೆಕೆಂಡುಗಳಲ್ಲಿ 3,53,00,000 ಕೊಂಡಿಗಳ ಪಟ್ಟಿ ಪ್ರತ್ಯಕ್ಷವಾಗುತ್ತದೆ. ಆ ಪೈಕಿ ಹೆಚ್ಚಿನವು ಅಧಿಕೃತ ಮಾಹಿತಿಯಾಗಿರುವುದರಿಂದ ಮೂಲದ್ರವ್ಯವನ್ನು ಸುಲಭವಾಗಿ ಬಳಸಿಕೊಂಡು ಪರಿಣಾಮಕಾರಿಯಾದ ಲೇಖನ ಬರೆಯಬಹುದು. ಪತ್ರಿಕೋದ್ಯಮದ ಭಾಷೆಯಲ್ಲಿಯೇ ಹೇಳುವುದಾದರೆ, ಈಗ 'ಗೂಗಲ್ ಜರ್ನಲಿಸಂ' ಎಂಬ ಹೊಸ ಪ್ರಾಕಾರವೇ ಹುಟ್ಟಿಕೊಂಡಾಗಿದೆ. ಸಂಶೋಧನಾ ವಿದ್ಯಾರ್ಥಿಗಳ ಪಾಲಿಗೆ ಅಂತರ್ಜಾಲ ಮಾಹಿತಿಯ ಕಣಜವೇ ಸರಿ.
ಇಂತಹ ಅಸಾಧ್ಯ ಸಾಧ್ಯತೆಗಳ ನಡುವೆಯೇ ಮಾಹಿತಿ ತಂತ್ರಜ್ಞಾನ ಇ-ಪುಸ್ತಕದಂತಹ ವಿನೂತನ ಪ್ರಯೋಗಗಳಿಗೆ ಕೂಡ ಅವಕಾಶ ಮಾಡಿಕೊಟ್ಟಿದೆ. ಇ-ಪುಸ್ತಕದ ಪರಿಕಲ್ಪನೆಯನ್ನು ಮೊದಲು ಸಾಕಾರಗೊಳಿಸಿದಾತ ಸ್ಟೀಫನ್ ಕಿಂಗ್ ಎಂಬ ಇಂಗ್ಲಿಷ್ ಲೇಖಕ. ಆತ 'ರೈಡಿಂಗ್ ಬುಲ್ಲೆಟ್' ಎಂಬ ಕೃತಿಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸದೇ ನೇರವಾಗಿ ಇ-ಪುಸ್ತಕದ ರೂಪದಲ್ಲಿ ಪ್ರಕಟಿಸಿದ. ಕೇವಲ 48 ಗಂಟೆಗಳ ಅವಧಿಯಲ್ಲಿ 'ರೈಡಿಂಗ್ ಬುಲ್ಲೆಟ್'ನ 5 ಲಕ್ಷ ಪ್ರತಿಗಳು ಅಂತರ್ಜಾಲದಲ್ಲಿ ಬಿಕರಿಯಾದವು. ತಲಾ ಒಂದು ಪ್ರತಿಗೆ ಕೇವಲ 2.5 ಡಾಲರ್ ಬೆಲೆ ವಿಧಿಸಿದ ಸ್ಟೀಫನ್ ಕಿಂಗ್ ಪುಸ್ತಕ ಪ್ರಕಟಣಾ ಲೋಕದಲ್ಲಿ ಹೊಸದೊಂದು ದಾಖಲೆಯನ್ನೇ ನಿರ್ಮಿಸಿದರು. ಈಗ ಇಂಗ್ಲಿಷ್‌ನಲ್ಲಿ ಕೇವಲ ಇ-ಪುಸ್ತಕವಲ್ಲ, ಮಾತನಾಡುವ ಪುಸ್ತಕಗಳು, ಸಿ.ಡಿ.ರೂಪದ ಕೃತಿಗಳು ಮಾರುಕಟ್ಟೆಯನ್ನು ಆಕ್ರಮಿಸಿಯಾಗಿದೆ. ಕನ್ನಡದ ಬರಹಗಾರರ ಪೈಕಿ ಅಂತಹ ಒಂದು ವಿನೂತನ ಪ್ರಯೋಗ ಮಾಡಿದ ಕೀರ್ತಿ ವಸುಧೇಂದ್ರ ಅವರಿಗೆ ಸಲ್ಲಬೇಕು. ಅವರ 'ಯುಗಾದಿ', 'ಮಿಥುನ' ಮತ್ತು 'ಕೋತಿಗಳು...' ಕಥಾ ಸಂಕಲನಗಳು ಮೊದಲು ಪುಸ್ತಕ ರೂಪದಲ್ಲಿ ಪ್ರಕಟವಾಗಿದ್ದವು. ನಂತರ ಆ 3 ಪುಸ್ತಕಗಳು ಸಿ.ಡಿ. ಮೂಲಕ ಪ್ರಕಟವಾದವು. ಮಾತ್ರವಲ್ಲ ಅವುಗಳು ಈಗ ಅಮೆರಿಕದಲ್ಲೂ ಲಭ್ಯವಿವೆ. ಇತ್ತೀಚೆಗೆ ಕನ್ನಡದ ಲೇಖಕ ಜಿ.ಎನ್.ಮೋಹನ್ ಅವರ ಕವನ ಸಂಕಲನ 'ಪ್ರಶ್ನೆಗಳಿರುವುದು ಷೇಕ್ಸ್‌ಪಿಯರನಿಗೆ' ಪ್ರಕಟವಾಗಿದೆ. ಆ ಕವನ ಸಂಕಲನದಲ್ಲಿರುವ ಕವನಗಳನ್ನು ಬೇರೆ, ಬೇರೆ ಹಿರಿ-ಕಿರಿಯ ಸಾಹಿತಿಗಳು ವಾಚಿಸಿದ್ದಾರೆ. ಆ ಪುಸ್ತಕವೀಗ ಒಂದರ್ಥದಲ್ಲಿ ಮಾತನಾಡುವ ಪುಸ್ತಕವೇ ಆಗಿ ಬಿಟ್ಟಿದೆ.
ಹೀಗೆ ವೈಯಕ್ತಿಕ ನೆಲೆಯಲ್ಲಿ ಕನ್ನಡ ಸಾಹಿತ್ಯವನ್ನು ಅಂತರ್ಜಾಲದಲ್ಲಿ ಮತ್ತು ತಂತ್ರಜ್ಞಾನ ಲೋಕದಲ್ಲಿ ಗಟ್ಟಿಯಾಗಿಸುವ ಪ್ರಯತ್ನಗಳು ನಡೆಯುತ್ತಿರುವುದು ಸ್ವಾಗತಾರ್ಹ. ಆದರೆ, ನಮಗಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು 'ವಿಶ್ವ ಅಂತರ್ಜಾಲ ಕನ್ನಡ ಗ್ರಂಥಾಲಯ'ದ ಸ್ಥಾಪನೆಯಾಗ ಬೇಕಾಗಿರುವುದು ಅತ್ಯಗತ್ಯ. ಅಂತಹ ಪ್ರಯತ್ನ ಇದುವರೆಗೆ ಇಂಗ್ಲಿಷನ್ನು ಒಳಗೊಂಡು ಯಾವುದೇ ಭಾಷೆಯಲ್ಲಿ ನಡೆದಿಲ್ಲ. ಪಂಪನಿಂದ ಹಿಡಿದು ಪೂರ್ಣಚಂದ್ರ ತೇಜಸ್ವಿಯವರೆಗೆ ಪ್ರತಿಯೊಬ್ಬ ಕನ್ನಡ ಸಾಹಿತಿ ಬರೆದಿರುವ ಕೃತಿಗಳನ್ನು (ಕನಿಷ್ಠ ಮೌಲ್ಯಯುತ) ಆ 'ವಿಶ್ವ ಅಂತರ್ಜಾಲ ಕನ್ನಡ ಗ್ರಂಥಾಲಯ'ದಲ್ಲಿ ಸೇರಿಸಬೇಕು. ಇನ್ನು ಮೇಲೆ ಪ್ರಕಟವಾಗುವ ಎಲ್ಲ ಕನ್ನಡ ಕೃತಿಗಳನ್ನು ಆ ಗ್ರಂಥಾಯಲಕ್ಕೆ ಸೇರಿಸುತ್ತಾ ಹೋಗಬೇಕು. ಆಗ ಭವಿಷ್ಯದ ಪೀಳಿಗೆಗೆ ಕನ್ನಡ ಸಾಹಿತ್ಯವನ್ನು ನಾವು ಶಾಶ್ವತವಾಗಿ ಉಡುಗೊರೆಯ ರೂಪದಲ್ಲಿ ನೀಡಿದಂತಾಗುತ್ತದೆ. ಕನ್ನಡ ವಿಶ್ವವಿದ್ಯಾಲಯ, ಕನ್ನಡ ಸಾಹಿತ್ಯ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು, ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ನಾಟಕ ಅಕಾಡೆಮಿ... ಹೀಗೆ ಕನ್ನಡ ಸಾಹಿತ್ಯ, ಸಂಸ್ಕೃತಿಯ ಹೊಣೆ ಹೊತ್ತ ಸರ್ಕಾರದ ಅಧೀನದಲ್ಲಿರುವ ಹಲವಾರು ಸಂಸ್ಥೆಗಳು ನಮ್ಮಲ್ಲಿವೆ. ಅವೆಲ್ಲ ಒಂದಾಗಿ 'ವಿಶ್ವ ಅಂತರ್ಜಾಲ ಕನ್ನಡ ಗ್ರಂಥಾಲಯ' ಸ್ಥಾಪನೆ-ನಿರ್ವಹಣೆಯ ಹೊಣೆ ಹೊರಬೇಕು.
ಎಂತಹ ಸುಂದರ ಕನಸು!? ರಾಜ್ಯದ ಎಷ್ಟೋ ಹಳ್ಳಿಗಳನ್ನು ವಿದ್ಯುತ್ ಇನ್ನೂ ತಲುಪಿಲ್ಲ. ಕೋಟಿಗಟ್ಟಲೆ ಜನರು ಇನ್ನೂ ಕಂಪ್ಯೂಟರ್ ಮುಟ್ಟಿಯೇ ನೋಡಿಲ್ಲ. ಅಂತರ್ಜಾಲ ಎಂದರೆ ಏನು ಎಂಬ ಅರಿವು ಶೇಕಡಾ 80ರಷ್ಟು ಮಂದಿಗೆ ಇಲ್ಲವೇ ಇಲ್ಲ. ಹಾಗಿರುವಾಗ ಇಂತಹ ಕನಸು ಎಷ್ಟರ ಮಟ್ಟಿಗೆ ಫಲಪ್ರದವಾಗಲು ಸಾಧ್ಯ? ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಆದರೆ, ಹಾಗೆಂದುಕೊಂಡು ನಾವು ಕೈಕಟ್ಟಿ ಕುಳಿತರೆ ಇಂಗ್ಲಿಷ್ ಉಳಿದ ಹಲವಾರು ಭಾಷೆಗಳನ್ನು ಆಪೋಶನ ಮಾಡಿಕೊಂಡಂತೆ ಕನ್ನಡವನ್ನೂ ನುಂಗಿ ನೀರು ಕುಡಿದು ಬಿಟ್ಟೀತು. ನಮ್ಮ ಭಾಷೆ, ಸಂಸ್ಕೃತಿ, ಪರಂಪರೆಯ ರಕ್ಷಣೆಯ ನಿಟ್ಟಿನಲ್ಲಿ ತಂತ್ರಜ್ಞಾನದ ಮೊರೆ ಹೋಗಿ ಅದನ್ನು ಬಳಸಿಕೊಳ್ಳುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಸಾಂಘಿಕ ಯತ್ನಗಳು ಈಗಿನಿಂದಲೇ ಆರಂಭವಾಗಬೇಕು.

ಟಿಎಸ್‌ಐ

ಇ-ಲೋಕದಲಿ ಸಾಹಿತ್ಯ ಕಲರವ

ಬ್ಲಾಗುಗಳು ಮನದ ಭಾವನೆಗಳನ್ನು ಬಿಚ್ಚಿಡುವ ಲೋಕ. ವೆಬ್ ತಾಣಗಳು ಮಾಹಿತಿ, ಮನೋರಂಜನೆಯ ಮಿಲನ. ಕನ್ನಡ ಸಾಹಿತ್ಯ ಲೋಕವೂ ನಿಧಾನವಾಗಿ ಈ ಎರಡು ಹೊಸ ಪ್ರಕಾರಗಳತ್ತ ತೆರೆದುಕೊಳ್ಳುತ್ತಿದೆ. ಇ-ಲೋಕದಲ್ಲಿ ಮುದ್ರಣ ಮಾಧ್ಯಮಕ್ಕೆ ಪರ್ಯಾಯವಾಗಿ ಒಂದು ಸಾಹಿತ್ಯವೇ ಸೃಷ್ಟಿಯಾಗುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸಾವಿರಾರು ಕಿರಿಯ ಮತ್ತು ಕೈಬೆರಳೆಣಿಕೆಯಷ್ಟು ಹಿರಿಯ ಮತ್ತು ಪ್ರಸಿದ್ಧ ಲೇಖಕರ ಚಿಂತನೆಗಳನ್ನು ಕತ್ತರಿ ಪ್ರಯೋಗಗಳಿಲ್ಲದೆ ನೇರವಾಗಿ ಅವರದೇ ಶೈಲಿಯಲ್ಲಿ ಓದುವ ಅವಕಾಶ ಇಲ್ಲಿ ದೊರಕುತ್ತಿದೆ.
ಕನ್ನಡ ಸಾಹಿತ್ಯ ಚರ್ಚೆಗೆ, ಬೆಳವಣಿಗೆಗೆ ವೇದಿಕೆಯಾಗಿರುವ ವೆಬ್ ತಾಣಗಳಲ್ಲಿ ಪ್ರಥಮ ಪಂಕ್ತಿಯಲ್ಲಿ ಕೇಳಿ ಬರುವ ಹೆಸರುಗಳೆಂದರೆ ದಟ್ಸ್ ಕನ್ನಡ, ಸಂಪದ ಮೊದಲಾದವು. 'ಸಂಪದ' ಸಾಹಿತ್ಯ ಮತ್ತು ಸಾಹಿತ್ಯಾಧಾರಿತ ಚರ್ಚೆಗಳು, ಲೇಖನಗಳ ತಾಣ. 'ದಟ್ಸ್ ಕನ್ನಡ' ಮಾಹಿತಿ, ಮನೋರಂಜನೆ ಮತ್ತು ಸಾಹಿತ್ಯವನ್ನು ಉಣಬಡಿಸುತ್ತಿರುವ ತಾಣ. ಇವುಗಳ ಜೊತೆ-ಜೊತೆಗೆ ವಿಶ್ವ ಕನ್ನಡ, ಯಾಹೂ ಕನ್ನಡ, ಕನ್ನಡ ಗೂಗಲ್, ಸಾಹಿತ್ಯ ಪುಟ, ಕನ್ನಡ ರತ್ನಗಳು ಕನ್ನಡ ಭಾಷೆಯನ್ನು ಶ್ರೀಮಂತವಾಗಿಸಿವೆ. ಬರಹ ಕನ್ನಡ, ಕನ್ನಡ ಕಸ್ತೂರಿಗಳು ಕನ್ನಡ ಪದಕೋಶಗಳ ಆವಶ್ಯಕತೆಯನ್ನು ತುಂಬಿವೆ. ಕನ್ನಡದ ಪ್ರಸಿದ್ಧ ಸಾಹಿತಿಗಳ ಬರಹಗಳು, ವ್ಯಕ್ತಿ ವಿವರಗಳೂ ವೆಬ್ ತಾಣಗಳಲ್ಲಿ ಸಿಗುತ್ತವೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಕುವೆಂಪು ಡಾಟ್‌ಕಾಂ.
"ವೆಬ್‌ಗಳು ಮತ್ತು ಬ್ಲಾಗ್‌ಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುತ್ತಿವೆ. ಸದ್ಯ ಇದು ಸೀಮಿತ ಜನರನ್ನು ತಲುಪುತ್ತಿರಬಹುದು. ಆದರೆ ಕಾಲ ಬದಲಾಗುತ್ತಿದೆ. ಜನರು ತಮಗೆ ಬೇಕಾದ ಮಾಹಿತಿಗಳನ್ನೆಲ್ಲಾ ವೆಬ್ ತಾಣಗಳಿಂದ ಪಡೆದುಕೊಳ್ಳುವ ದಿನ ದೂರವಿಲ್ಲ. ಇಂಥ ಸಂದರ್ಭದಲ್ಲಿ ನಾವು ವೆಬ್ ಸಾಹಿತ್ಯವನ್ನು ಪ್ರೋತ್ಸಾಹಿಸಿಬೇಕು" ಎನ್ನುತ್ತಾರೆ 'ಮೈಸೋರ್ ಪೋಸ್ಟ್' ಬ್ಲಾಗುದಾರ ಅಬ್ದುಲ್ ರಶೀದ್.
ಅಂತರ್ಜಾಲದಲ್ಲಿ ಕನ್ನಡ ಸಾಹಿತ್ಯ ಬೆಳೆಯುತ್ತಿರುವಂತೆ ಮಾಹಿತಿ ತಂತ್ರಜ್ಞಾನ ಇಲಾಖೆಯೂ ಅಗತ್ಯ ಸಹಕಾರವನ್ನು ನೀಡಲು ತುದಿಗಾಲಲ್ಲಿ ನಿಂತಿದೆ. "ಕನ್ನಡ ಬ್ಲಾಗ್‌ಗಳು ಹೆಚ್ಚಾಗುತ್ತಿರುವುದು ಸಕಾರಾತ್ಮಕ ಬೆಳವಣಿಗೆ. ಸಂಸ್ಕೃತಿ ಇಲಾಖೆ ಏನಾದರೂ ತಾಂತ್ರಿಕ ಸಹಾಯ ಯಾಚಿಸಿದರೆ ಅದನ್ನು ಒದಗಿಸಲು ನಾವು ಸದಾ ಸಿದ್ಧ" ಎನ್ನುತ್ತಾರೆ ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ ಕಾರ್ಯದರ್ಶಿ ವಿದ್ಯಾ ಶಂಕರ್.
ಸಂಪಾದಕರ, ಪ್ರಕಾಶಕರ ಮರ್ಜಿ ಇಲ್ಲದೆ ಬ್ಲಾಗ್‌ಗಳಲ್ಲಿ ಬರವಣಿಗೆ ಸ್ವಾತಂತ್ರ್ಯ ಪಡೆದ ಲೇಖಕರು ಇಲ್ಲೊಂದು 'ಪರ್ಯಾಯ ಸಾಹಿತ್ಯ ಲೋಕ'ವನ್ನೇ ಸೃಷ್ಟಿಸಿದ್ದಾರೆ. ಹೌದು, ಕೆಲ ಬ್ಲಾಗ್‌ಗಳು ಆಂತರ್ಯದ ದನಿ. ಇನ್ನು ಕೆಲವು ಹಾಸ್ಯ- ವಿಡಂಬಣೆ. ಜೊತೆಗೆ ಚುರುಕ್ ಎನ್ನುವ ಖಾರಾಬಾತ್‌ಗಳು, ಕಾವ್ಯ, ಲಹರಿಗಳ ಸಂಕಲನ. ತಮ್ಮದೇ ಕತೆ, ಪ್ರವಾಸಿ ಸ್ಥಳಗಳ ವರ್ಣನೆ. ನಿರ್ದಿಷ್ಟ ಉದ್ದೇಶ, ಚಳವಳಿಗಾಗಿ ಬ್ಲಾಗ್ ಮಾಡಿದವರು ಇದ್ದಾರೆ. ಪ್ರಸಿದ್ಧ ಸಾಹಿತಿಗಳ ಬ್ಲಾಗ್‌ಗಳೂ ಇವೆ. "ಬ್ಲಾಗ್ ಸೀಮಿತ ಸಾಹಿತ್ಯಾಸಕ್ತರ ಲೋಕವೇನೋ ಹೌದು. ಆದರೆ ಇಲ್ಲಿ ಕನ್ನಡದ ಬಗ್ಗೆ ಚರ್ಚೆಯಾಗುತ್ತಿದೆ. ಕನ್ನಡದಲ್ಲಿ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸಾಫ್ಟ್‌ವೇರ್ ಅಥವಾ ಇನ್ನಾವುದೇ ತಂತ್ರಜ್ಞಾನ ಲೋಕದಲ್ಲಿ ಕೆಲಸ ಮಾಡುತ್ತಿರುವವರ ಬರೆಯುವ ಹಪಹಪಿಸುವಿಕೆಗೆ ಮಾಧ್ಯಮವಾಗಿದೆ ಬ್ಲಾಗ್. ಹೀಗಾಗಿ ಇವು ಖಂಡಿತವಾಗಿಯೂ ಕನ್ನಡ ಸಾಹಿತ್ಯ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡುತ್ತಿವೆ" ಎನ್ನುತ್ತಾರೆ ಸಾಹಿತಿ ವಸುಧೇಂದ್ರ.
ಓ.ಎಲ್. ನಾಗಭೂಷಣ ಸ್ವಾಮಿ, ವಸುಧೇಂದ್ರ, ಅಬ್ದುಲ್ ರಶೀದ್ ಮುಂತಾದವರ ಬ್ಲಾಗುಗಳು ಕನ್ನಡ ಸಾಹಿತ್ಯದ ಬೆಳವಣಿಗೆಗೆ ಪೂರಕವಾಗಿವೆ. 'ಜೋಗಿಮನೆ'ಯಲ್ಲಿ ಸಾಹಿತ್ಯ, ಪ್ರೀತಿ, ಬದುಕು ಚರ್ಚೆಯ ವಸ್ತುವಾಗಿವೆ. "ಬ್ಲಾಗ್‌ಗಳು ಅಪ್ಪಟ ಆತ್ಮಚರಿತ್ರೆಗಳಾಗಿರುವುದೇ ಹೆಚ್ಚು. ತಮ್ಮ ಅನುಭವ, ಪ್ರವಾಸ ಕಥನ ಹಂಚಿಕೊಳ್ಳುವ ಮಾಧ್ಯಮವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಬರಹಗಳು ಆಸಕ್ತಿ ಮೂಡಿಸಬೇಕು. ಓದಲು ಏನೋ ಒಂದು ಹೊಸತನ್ನು ನೀಡಬೇಕು" ಎನ್ನುತ್ತಾರೆ 'ಜೋಗಿಮನೆ'ಯ ಪತ್ರಕರ್ತ ಗಿರೀಶ್ ರಾವ್ (ಜೋಗಿ).
ಕನ್ನಡ ಬ್ಲಾಗ್‌ಗಳ ಬಗ್ಗೆ ಬರೆಯುವಾಗ ಅನಂತಮೂರ್ತಿಯವರ 'ಋಜುವಾತು' ಬಗ್ಗೆ ಬರೆಯದಿದ್ದರೆ ಹೇಗೆ? ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕರ ಪ್ರಕಟಿತ ಪುಸ್ತಕಗಳನ್ನು ಖರೀದಿಸುವ, ಓದುವ ತಾಳ್ಮೆ ಇಲ್ಲದವರಿಗಂತೂ ಅವರ ಬರಹಗಳನ್ನು ಓದುವ ಅವಕಾಶ ದೊರೆತಿದೆ. ಇ-ಸಾಹಿತ್ಯ ಲೋಕದ ಕನ್ನಡ ಬರಹಗಾರರಿಗೂ ತಮ್ಮ ಜೊತೆಗೊಬ್ಬ ಮಹಾನ್ ಲೇಖಕರಿದ್ದಾರೆಂಬ ಹೆಮ್ಮೆ. ಅನಂತಮೂರ್ತಿ ಒಟ್ಟಾರೆ ನಿಧಾನವಾಗಿ ಕನ್ನಡ ಇ-ಲೋಕದಲ್ಲ್ಲೂ ಛಾಪು ಮೂಡಿಸುತ್ತಿದ್ದಾರೆ.

ಟಿಎಸ್‌ಐ

ಎನ್.ಕೆ. ಸುಪ್ರಭಾ

 

ಮುಖ ಪುಟ ಲೇಖನದಲ್ಲಿ ಇನ್ನೇನಿದೆ

ಕಡಲ ತಡಿಯಲಿ ಕನ್ನಡ ಡಿಂಡಿಮ : ಸಮೃದ್ಧಿ-ಶ್ರೇಷ್ಠತೆಯ ಕಡಲಾಳದಲ್ಲಿ...

ಶಾಸ್ತ್ರೀಯ ಎಂಬುದೇ ಅಶಾಸ್ತ್ರೀಯ ಎಂದಾಗುವುದಾದರೆ....

ಭಾಷೆ 'ತಾಂತ್ರಿಕವಾಗಿ' ಉಳಿಯಬೇಕು : ಡಾ. ಚಂದ್ರಶೇಖರ ಕಂಬಾರ

ಕನ್ನಡಮ್ಮನ ಝೇಂಕಾರ : ವಿವಾದದ ಅಪಸ್ವರ

ವಿವಾದ, ತಾತ್ವಿಕ ನೆಲೆ ಮತ್ತು ನಿಲುವು : ಡಾ. ಬರಗೂರು ರಾಮಚಂದ್ರಪ್ಪ

ವಸುಧಾವಲಯ ವಿಲೀನ : ಸಾಹಿತ್ಯ ಸಮ್ಮಿಲನ

ಕಳೆದ ಕವಿರಾಜಮಾರ್ಗಕಾರನ ನಂಬಿಕೆ : ಡಾ. ಯು. ಆರ್ ಅನಂತಮೂರ್ತಿ

ತಂತ್ರಜ್ಞಾನದ ಗಾಲಿಯ ಮೇಲೆ ಕನ್ನಡದ ತೇರು

ಸುಮ್ಮನೆ ಬುಡುಬುಡಿಕೆ ಬಾರಿಸಬೇಡಿ : ಬೇಳೂರು ಸುದರ್ಶನ

ಬೆಳ್ಳಿತೆರೆಗೆ ಶಕ್ತಿ ಶಾರದೆಯ ಮೆರುಗು

ದೃಶ್ಯ ಮಾಧ್ಯಮದ ಘನತೆ ಹೆಚ್ಚಿಸಿದ ಸಾಹಿತ್ಯ : ಪಿ. ಶೇಷಾದ್ರಿ

ಚಿತ್ರ ಸಂಚಯ

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .