|
ಈ ಜಗತ್ತಿನಲ್ಲಿ ಕೇವಲ ಪರಿಸರ-ಪ್ರಾಣಿ-ಪಕ್ಷಿ-ಸಸ್ಯ ಪ್ರಬೇಧಗಳು ಮಾತ್ರ ವಿನಾಶವಾಗುತ್ತಿಲ್ಲ. ಅದರ ಜೊತೆ-ಜೊತೆಯಲ್ಲಿಯೇ ಮನುಕುಲದ ಬಳಿಯಿರುವ ಭಾಷೆ ಎಂಬ ಅಮೂಲ್ಯ ಸಂಪತ್ತು ವಿನಾಶದಂಚಿಗೆ ಸರಿಯುತ್ತಿದೆ. ಇದು ಪರಿಸರ-ಪ್ರಾಣಿ-ಸಸ್ಯ ಪ್ರಬೇಧಗಳ ವಿನಾಶಕ್ಕಿಂತ ಹೆಚ್ಚು ಅಪಾಯಕಾರಿ ಪ್ರಕ್ರಿಯೆ. ಏಕೆಂದರೆ ಭಾಷೆಯೊಂದು ನಾಶವಾದರೆ ಒಂದು ಸಂಸ್ಕೃತಿ, ಪರಂಪರೆ ಹಾಗೂ ನಿರ್ದಿಷ್ಟ ಜನಾಂಗವೇ ಇಲ್ಲವಾಗಿ ಬಿಡುತ್ತವೆ. ಒಂದು ಅಂದಾಜಿನ ಪ್ರಕಾರ ಜಗತ್ತಿನಲ್ಲಿ ಒಟ್ಟು ಇರುವ ಭಾಷೆಯ ಸಂಖ್ಯೆ ಸುಮಾರು ಏಳು ಸಾವಿರದಷ್ಟು. ಆ ಪೈಕಿ 3,500 ಭಾಷೆಗಳು ಈಗಾಗಲೇ ನಿರ್ನಾಮವಾಗಿ ಹೋಗಿವೆ. ಉಳಿದ ಭಾಷೆಗಳ ಪೈಕಿ ಎರಡು ವಾರಕ್ಕೆ ಒಂದು ಭಾಷೆ ಸಾವಿನ ಒಡಲು ಸೇರುತ್ತಿದೆ. ಆ ಪೈಕಿ ಭಾರತೀಯ ಭಾಷೆಗಳಿಗೆ ಕೂಡ ಅಗ್ರಸ್ಥಾನವಿದೆ. ಮೈಸೂರಿನಲ್ಲಿರುವ ಕೇಂದ್ರೀಯ ಭಾಷಾ ಸಂಸ್ಥೆಯ ಪ್ರಕಾರ ಭಾರತದಲ್ಲಿ ನೆಲಸಿರುವ ಒಟ್ಟು ಕುಟುಂಬಗಳ ಪೈಕಿ ಶೇಕಡಾ ೩.೯ರಷ್ಟು ಕುಟುಂಬಗಳ ತಾಯ್ನುಡಿ ಕನ್ನಡ. ಈ ಪಟ್ಟಿಯಲ್ಲಿ ಸಹಜವಾಗಿಯೇ ತಮಿಳು ಮತ್ತು ತೆಲುಗು ಭಾಷೆಗಳು ಕನ್ನಡಕ್ಕಿಂತ ಬಲಶಾಲಿಯಾಗಿವೆ.
ಕರ್ನಾಟಕದ ಕಡಲತಡಿಯಲ್ಲಿ ೭೪ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಈ ಹೊತ್ತಿನಲ್ಲಿ ಒಮ್ಮೆ ಇತಿಹಾಸದ ಪುಟ ಕೆದಕಿ, ಪ್ರಸ್ತುತದ ಮೇಲೆ ಬೆಳಕು ಚೆಲ್ಲಿ, ಭವಿಷ್ಯದ ಮೇಲೆ ಕಣ್ಣು ಹಾಯಿಸಿದರೆ... ಒಂದಷ್ಟು ನೆಮ್ಮದಿ, ಒಂದಿಷ್ಟು ಆತಂಕ ಹಾಗೂ ಅರಿವಿನ ಕಣ್ಣು ತೆರೆದು ಮುಂದಡಿಯಿಡಬೇಕು ಎಂಬ ಮುನ್ನೆಚ್ಚರಿಕೆಯ ಮಾತು ಕೇಳಿ ಬರುತ್ತದೆ. ಉಳಿದ ದ್ರಾವಿಡ ಭಾಷೆಗಳಂತೆಯೇ ಸುಮಾರು ಎರಡು ಸಾವಿರ ವರ್ಷಗಳಷ್ಟು ದೀರ್ಘ ಇತಿಹಾಸ ಹೊಂದಿರುವ ಕನ್ನಡ ಭಾಷೆ ಮೊದಲ ಬಾರಿಗೆ ಅಕ್ಷರಗಳ ರೂಪ ತಾಳಿದ್ದು ಅಶೋಕ ಚಕ್ರವರ್ತಿಯ ಕಾಲದಲ್ಲಿ. ೧೬೦೦ ವರ್ಷಗಳ ಹಿಂದೆ ಹಲ್ಮಿಡಿ ಶಾಸನದಲ್ಲಿ ಹಳೆಗನ್ನಡದ ಅಕ್ಷರಗಳು ಮೂಡುವ ಮೂಲಕ ಕನ್ನಡ ಭಾಷೆ ವಿಕಾಸದ ಪಥದಲ್ಲಿನ ತನ್ನ ಪಯಣ ಆರಂಭಿಸಿತು. ಕನ್ನಡದ ಅತ್ಯಂತ ಪ್ರಾಚೀನ ಕೃತಿಯಾಗಿರುವ ಕವಿರಾಜಮಾರ್ಗ ನಮ್ಮ ಕಣ್ಣ ಮುಂದಿದೆ. ನಂತರ ಮೊದಲ ಕಾವ್ಯವಾಗಿ ಅರಳಿದ ಪಂಪನ 'ಆದಿಪುರಾಣ' ಕನ್ನಡಸಾಹಿತ್ಯಕ್ಕೆ ಭದ್ರ ನೆಲಗಟ್ಟು ಹಾಕಿಕೊಟ್ಟಿತು. ಆಮೇಲೆ ರನ್ನ, ಪೊನ್ನ, ಅಲ್ಲಮಪ್ರಭು, ಬಸವಣ್ಣ ಹಾಗೂ ವಚನಕಾರರು, ಹರಿಹರ, ರಾಘವಾಂಕ, ರತ್ನಾಕರವರ್ಣಿ, ಮುದ್ದಣ... ಹೀಗೆ ಹರಿದು ಬಂದ ಸಾಹಿತ್ಯ ಸುಧೆ ಹೊಸಗನ್ನಡದ ಹೊತ್ತಿಗೆ ಸಪ್ತಸಾಗರದಷ್ಟು ವಿಶಾಲವಾಗಿತ್ತು. ಹೊಸಗನ್ನಡ ಪರಂಪರೆಯನ್ನೇ ತೆಗೆದುಕೊಂಡರೆ ಕಳೆದ ಸುಮಾರು ಎಂಬತ್ತು ವರ್ಷಗಳ ಅವಧಿಯಲ್ಲಿ ಕನ್ನಡ ಸಾಹಿತ್ಯ ಲೋಕದಲ್ಲಿ ಜಾಗತಿಕ ಮಟ್ಟದಲ್ಲಿಯೂ ಮುಗಿಲೆತ್ತರಕ್ಕೇರಿ ನಿಲ್ಲುವ ಮಹಾನ್ ಸಾಹಿತಿಗಳು ಮತ್ತು ಸಾಹಿತ್ಯ ಕೃತಿಗಳು ಒಡಮೂಡಿಯಾಗಿದೆ. ಈಗ ಕೂಡ ಭಾರತದ ಇತರ ಭಾಷೆಗಳಿಗೆ ಹೋಲಿಸಿ ನೋಡಿದಲ್ಲಿ ಸಾಹಿತ್ಯದ ನೆಲೆಯಲ್ಲಿ ಕನ್ನಡ ಏನೂ ಹಿಂದೆ ಬಿದ್ದಿಲ್ಲ ಎನ್ನುವುದಕ್ಕೆ ಕನ್ನಡದ ಮಡಿಲಿಗೆ ಬಿದ್ದಿರುವ ಏಳು ಜ್ಞಾನಪೀಠ ಪ್ರಶಸ್ತಿಗಳೇ ಸಾಕ್ಷಿ. ಕುವೆಂಪು, ಕಾರಂತ, ಬೇಂದ್ರೆ, ಮಾಸ್ತಿ, ಅಡಿಗ, ಅನಂತಮೂರ್ತಿ, ಕಂಬಾರ, ಲಂಕೇಶ್... ಪೂರ್ಣಚಂದ್ರ ತೇಜಸ್ವಿ... ಹೀಗೆ ಕನ್ನಡ ಸಾಹಿತ್ಯ ಕ್ಷೇತ್ರ ಸಮೃದ್ಧಿಯ ಸಂಕೇತವಾಗಿ ನಿಂತಿದೆ. ಈ ನಡುವೆಯೂ ಜಾಗತಿಕ ಮಟ್ಟದಲ್ಲಿ ಕನ್ನಡಕ್ಕೆ ಸಿಕ್ಕಬೇಕಾದ ಸ್ಥಾನ-ಮಾನ ಸಿಕ್ಕಿಲ್ಲ ಎಂಬ ಕೊರಗು ಇದ್ದೇ ಇದೆ. ಅದಕ್ಕೆ ಶ್ರೇಷ್ಠತೆಯ ಕೊರತೆ ಕಾರಣವಲ್ಲ. ಕನ್ನಡದಂತಹ ಸಾವಿರಾರು ಭಾಷೆಗಳ ಒಳ ತಿರುಳನ್ನು ಅರಿಯದೇ, ಶ್ರೇಷ್ಠತೆಯನ್ನು ಅರ್ಥ ಮಾಡಿಕೊಳ್ಳದೇ ಇರುವ ನಿಕೃಷ್ಟ ಮನಸ್ಸುಗಳು ಕಾರಣ. ಅದಕ್ಕಾಗಿ ಕನ್ನಡಿಗರು ಕೊರಗಬೇಕಾಗಿಲ್ಲ.
ಕೇವಲ ಸಾಹಿತ್ಯದ ನೆಲೆಯಲ್ಲಿ ಮಾತ್ರವಲ್ಲ ಒಂದು ಭಾಷೆ-ಸಂಸ್ಕೃತಿ-ಪರಂಪರೆಯಾಗಿ ಕೂಡ ಕನ್ನಡ ಭಾಷೆ, ಕೆಲವರು ಬೊಬ್ಬೆ ಹೊಡೆಯುವಂತೆ ಈಗೇನೂ ನೆಲಕಚ್ಚಿ ಹೋಗಿಲ್ಲ. ನೆಲಕಚ್ಚಿ ಹೋಗುವ ಸ್ಥಿತಿಯಲ್ಲೂ ಇಲ್ಲ. ಇಂಗ್ಲಿಷ್‌ನ ಪ್ರಭಾವದ ಮುಂದೆ ಬೇರೆ ಭಾಷೆಗಳು ಮಸುಕಾದಂತೆ ಕನ್ನಡವೂ ಸ್ವಲ್ಪ ಮಟ್ಟಿಗೆ ತನ್ನ ಪ್ರಭೆಯನ್ನು ಕಳೆದುಕೊಂಡಿದೆ. ಹಾಗೆಂದ ಕೂಡಲೇ ಎಲ್ಲವೂ ಮುಗಿದೇ ಹೋಯಿತು ಎಂದು ಕನ್ನಡಿಗರು ತಲೆ ತಗ್ಗಿಸುವ ಅಗತ್ಯವಿಲ್ಲ. ತಲೆ ತಗ್ಗಿಸಲೂ ಕೂಡದು. ತಲೆಯೆತ್ತಿ, ಎದೆಯುಬ್ಬಿಸಿ ಮುನ್ನಡೆದಲ್ಲಿ ಕಳೆದುಹೋದ ಆ ಪ್ರಖರತೆಯನ್ನು ಕನ್ನಡ ಭಾಷೆಗೆ ತಂದು ಕೊಡಲು ಎಲ್ಲರೂ ಪಣ ತೊಡಬೇಕು. ಕನ್ನಡ ಭಾಷೆಯ ಪಾಲಿನ ವೈಭವದ ದಿನಗಳು ಮರಳಿ ಬರಬೇಕೆಂದರೆ ಎರಡು ಹಂತಗಳಲ್ಲಿ ಪ್ರಜ್ಞಾಪೂರ್ವಕವಾದ ಪ್ರಯತ್ನಗಳು ನಡೆಯಬೇಕು.
ಒಂದು ಸಾಹಿತ್ಯ ಕ್ಷೇತ್ರದಲ್ಲಿ. ೧೯೨೦ರಿಂದ ೯೦ರವರೆಗಿನ ಕನ್ನಡ ಸಾಹಿತ್ಯ ಲೋಕವನ್ನು ಕಂಡರೆ ಅದನ್ನು ಹೊಸಗನ್ನಡದ ವೈಭವದ ದಿನಗಳು ಎನ್ನಬಹುದು. ಆನಂತರದ ಕಳೆದ ಒಂದೂವರೆ ದಶಕದಲ್ಲಿ ಹಿಂದಿನಸಂಭ್ರಮ-ಉಲ್ಲಾಸ ಸಾಹಿತ್ಯ ವಲಯದಲ್ಲಿ ಕಂಡು ಬರುತ್ತಿಲ್ಲ. ಹಾಗೆಂದ ಕೂಡಲೇ ಕನ್ನಡ ಸಾಹಿತ್ಯ ನಿಂತ ನೀರಾಗಿದೆ ಎಂದಲ್ಲ. ಗುಣಮಟ್ಟದ ಸಾಹಿತ್ಯ ಕೃತಿಗಳು ಬರುತ್ತಿಲ್ಲ ಎಂಬ ಕೊರಗು ನಿತ್ಯ ನೂತನ. ಆ ನಡುವೆಯೂ ಬರುತ್ತಿರುವ ಸಾಹಿತ್ಯದ ಗುಣಮಟ್ಟದ ಪ್ರಾಮಾಣಿಕ ಪರಿಶೀಲನೆಯಾಗುತ್ತಿಲ್ಲ ಎನ್ನುವುದು ಕೂಡ ವಾಸ್ತವ. ಈ ನಿಟ್ಟಿನಲ್ಲಿ ಸಾರಸ್ವತ ವಲಯ ಪ್ರಾಮಾಣಿಕವಾಗಿ ಆತ್ಮವಿಮರ್ಶೆ ಮಾಡಿಕೊಳ್ಳುವ ಅಗತ್ಯ ಇದೆ. ಜೊತೆ-ಜೊತೆಗೆ ಗುಂಪುಗಾರಿಕೆಗೆ ತಿಲಾಂಜಲಿಯಿಟ್ಟು, ಹೊಸ ಪೀಳಿಗೆಯ ಸಾಹಿತಿಗಳ ಬೆನ್ನು ತಟ್ಟುವ ದೊಡ್ಡ ಮನಸ್ಸನ್ನು ಕೂಡ ಹಿರಿಯರು ಮಾಡಬೇಕಾಗಿದೆ. ಇಂತಹ ಸಾಹಿತ್ಯ ಸಮ್ಮೇಳನಗಳು ಅಂತಹ ಪೋಷಣೆಗೆ ಸರಿಯಾದ ವೇದಿಕೆ. ಅಂತಹ ಪ್ರಯತ್ನಗಳು ಕಡಲ ತೀರದಲ್ಲಿ ಈಗಿನಿಂದಲೇ ಆರಂಭವಾಗಲಿ.
ಎರಡನೆಯದಾಗಿ, ಸಾಮಾಜಿಕ ನೆಲೆಯಲ್ಲಿ ಕನ್ನಡ ಭಾಷೆಯನ್ನು ಭದ್ರಗೊಳಿಸುವ ಯತ್ನ. ಇದಕ್ಕೆ ತಕ್ಕ ಮದ್ದೆಂದರೆ ರಾಜ್ಯದ ಪ್ರತಿಯೊಂದು ಶಾಲೆಯಲ್ಲಿಯೂ ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿಯೇ ನೀಡುವಂತಾಗಬೇಕು. ಹತ್ತನೇ ತರಗತಿಯವರೆಗೆ ಕನ್ನಡ ಕಡ್ಡಾಯ. ಅದರೊಂದಿಗೆಯೇ ಇಂಗ್ಲಿಷ್ ಅಥವಾ ಇನ್ನಾವುದೇ ಭಾಷೆ ಕಲಿಯಬೇಕು ಎಂದಿದ್ದರೆ ಕಲಿತುಕೊಳ್ಳಲಿ. ಅದಕ್ಕೆ ಅಡ್ಡಿ ಮಾಡುವ ಅಗತ್ಯವಿಲ್ಲ.
ಈ ನಿಟ್ಟಿನಲ್ಲಿ ಇಡೀ ಕರ್ನಾಟಕವೇ ಒಂದಾಗಿ ನಿಲ್ಲಬೇಕು. ಏಕೆಂದರೆ ಭಾಷೆಯ ಬಗ್ಗೆ ದೃಢ ನಿಲುವು ತಳೆಯುವುದು ಭಾಷೆಯ ಅಳಿವು-ಉಳಿವಿನ ದೃಷ್ಟಿಯಿಂದ ಮಾತ್ರವಲ್ಲ ನಮ್ಮ ಸಂಸ್ಕೃತಿ-ಪರಂಪರೆಯ ದೃಷ್ಟಿಯಿಂದ ಕೂಡ ಇದು ತೀರಾ ಅಗತ್ಯ. ಇಂತಹ ದೃಢ ನಿರ್ಧಾರಗಳು ಒಡಮೂಡಲಿ. ಕನ್ನಡ ಭಾಷೆ ಮತ್ತಷ್ಟು ಸಮೃದ್ಧಿ ಹೊಂದಲಿ ಮತ್ತು ಯಾವಾಗಲೂ ಶ್ರೇಷ್ಠತೆಯ ಸಂಕೇತವಾಗಿ ಇರಲಿ.
ಟಿಎಸ್‌ಐ
|