|
ಶಾಸ್ತ್ರೀಯ ಭಾಷೆಯ ಸ್ಥಾನಮಾನ ಕನ್ನಡಕ್ಕೆ ಸಿಕ್ಕಬೇಕು ಎಂದು ಎದ್ದಿರುವ ಆಗ್ರಹದ ಬಗ್ಗೆ ಬೇರೆ ಬೇರೆ ಬಗೆಯಲ್ಲಿ ಆಲೋಚಿಸುವುದು ಸಾಧ್ಯವಿದೆ. ಈಗಾಗಲೇ ಬರಗೂರು ರಾಮಚಂದ್ರಪ್ಪ, ಕೆ.ವಿ. ನಾರಾಯಣ, ಡಿ.ಎಸ್. ನಾಗಭೂಷಣ ಮುಂತಾದವರು ಈ ಶಾಸ್ತ್ರೀಯ ಭಾಷೆಯ ಬೇಡಿಕೆ ಕೇವಲ ಭಾವನಾತ್ಮಕವಾದುದು, ಇದರಿಂದ ಕನ್ನಡ ಕಟ್ಟುವ ಕೆಲಸಕ್ಕೆ ಹೆಚ್ಚಿನ ಉಪಯೋಗವಾಗುವುದಿಲ್ಲ, ಬದಲಿಗೆ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಬಳಕೆ ಕಡ್ಡಾಯ, ಉದ್ಯೋಗಗಳಲ್ಲಿ ಸ್ಥಳೀಯರಿಗೆ ಆದ್ಯತೆ, ಸರ್ಕಾರದ ಎಲ್ಲಾ ಆಡಳಿತ ಹಂತಗಳಲ್ಲಿ ಕನ್ನಡದ ಬಳಕೆ, ಕೇಂದ್ರ ಹಾಗೂ ರಾಜ್ಯದ ವಾಣಿಜ್ಯ ಉದ್ದಿಮೆಗಳ ಜೊತೆಗೇ ಖಾಸಗಿ ರಂಗದ ಉದ್ದಿಮೆಗಳಲ್ಲೂ ಸ್ಥಳೀಯರಿಗೆ ಉದ್ಯೋಗಾವಕಾಶಗಳಲ್ಲಿ ಆದ್ಯತೆ, ತಾಂತ್ರಿಕ ಶಿಕ್ಷಣದಲ್ಲಿ ಪಠ್ಯವಾಗಿ ಕನ್ನಡ ಕಲಿಸುವುದು ಮುಂತಾದ ಕಾರ್ಯಕ್ರಮಗಳೇ ಹೆಚ್ಚು ರಚನಾತ್ಮಕ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ವಾಸ್ತವಿಕ ನೆಲೆಗಟ್ಟಿನಲ್ಲಿ ಭಾಷೆಗೆ ಸಿಗುವ ಮನ್ನಣೆ ಮತ್ತು ವ್ಯಾಪ್ತಿಗಳು ಆ ಭಾಷೆಯನ್ನು ಹೆಚ್ಚು ಬಲಗೊಳಿಸುತ್ತವೆ ಎಂಬ ಬಗ್ಗೆ ನಮಗೆ ಹೆಚ್ಚು ಭಿನ್ನಾಭಿಪ್ರಾಯವಿರಲಾರದು. ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಬೇಡಿಕೆಯನ್ನು ಮುಂದಿಟ್ಟಿರುವವರಿಗೂ, ಭಿನ್ನಮತ ವ್ಯಕ್ತಪಡಿಸಿರುವವರಿಗೂ ಈ ಬಗ್ಗೆ ಸಹಮತವಿದೆ. ಆದರೆ ಶಾಸ್ತ್ರೀಯ ಭಾಷೆಯ ಸ್ಥಾನಮಾನದ ಬೇಡಿಕೆಯನ್ನು ಆದ್ಯತೆಯ ಪ್ರಶ್ನೆಯನ್ನಾಗಿ ಮಾಡಿಕೊಂಡು ಹೋರಾಟ ಮಾಡಬೇಕೇ ಬೇಡವೇ ಎಂಬುದು ಸದ್ಯದಲ್ಲಿ ಚರ್ಚೆಗೊಳಗಾಗಿರುವ ಅಂಶ. ಏಕೆಂದರೆ ಶಾಸ್ತ್ರೀಯ ಭಾಷೆ ಸ್ಥಾನಮಾನದ ಬೇಡಿಕೆ ಎತ್ತಿರುವ ವಲಯ ಈ ಭಾವನಾತ್ಮಕ ಅಂಶಗಳ ಬಗ್ಗೆ ಕೊಡುವ ಒತ್ತನ್ನು ವಾಸ್ತವಿಕ ಕ್ರಮಗಳ ವಿಷಯದಲ್ಲಿ ತೋರಿಸುತ್ತಿಲ್ಲವೆಂಬುದು ಎಡಪಂಥೀಯ ಚಿಂತಕರ ಪ್ರಧಾನ ಆಕ್ಷೇಪಣೆ. ಸಂಘ ಪರಿವಾರದವರು ಹಿಂದೂಗಳ ಅಭ್ಯುದಯದ ಮಾರ್ಗವೆಂದು ರಾಮಜನ್ಮ ಭೂಮಿ ಪ್ರಶ್ನೆಯನ್ನು ಜ್ವಲಂತಗೊಳಿಸಿದ ಚಿಂತನಾ ವಿಧಾನಕ್ಕೂ, ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನದ ಬೇಡಿಕೆಯನ್ನು ಆದ್ಯತೆಯದೆಂದು ವಾದಿಸುತ್ತಿರುವವರ ಚಿಂತನಾ ವಿಧಾನಕ್ಕೂ ಒಂದು ಪರೋಕ್ಷ ಸಾಮ್ಯತೆಯಿರುವಂತಿದೆ. ಅಂದರೆ ಭಾವನಾತ್ಮಕ ಹೆಗ್ಗಳಿಕೆಯ ತಳಹದಿಯನ್ನೇ ಇವೆರಡು ಸಂದರ್ಭಗಳೂ ಪರಮ ಅಗತ್ಯಗಳೆಂದು ಭಾವಿಸುತ್ತಿರುವುದನ್ನು ನಿಚ್ಚಳವಾಗಿ ಗುರುತಿಸಲು ಸಾಧ್ಯವಿದೆ.
ಧರ್ಮ, ಭಾಷೆ ಇವುಗಳ ಉದ್ಧಾರಕ್ಕಾಗಿ ತಮ್ಮ ಎದುರಾಳಿಗಳನ್ನಾಗಿ ಯಾರನ್ನೋ ಇರಿಸಿಕೊಳ್ಳುವುದು, ಅದರಲ್ಲೂ ಅವು ಹೆಚ್ಚಿನ ಸಲ ಹುಸಿ ಎದುರಾಳಿಗಳಾಗಿದ್ದು, ವಾಸ್ತವದ ಎದುರಾಳಿಗಳು ಜನರ ಕಣ್ಣಿಗೆ ಬೀಳದೇ ಹೋಗುವಂತೆ ಮಾನಸಿಕ ಪರದೆ ನಿರ್ಮಿಸುವ ತಂತ್ರಗಾರಿಕೆಯಾಗಿ ಕಾರ್ಯನಿರ್ವಹಿಸುವುದು ಇಂತಹ ಚಿಂತನಾ ವಿಧಾನದ ಹಿಂದೆ ಕ್ರಿಯಾಶೀಲವಾಗಿರುವುದನ್ನು ನಾವು ಗುರುತಿಸಬಹುದಾಗಿದೆ. ಈಗ ಹಲವು ವರ್ಷಗಳಿಂದ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನಕ್ಕಾಗಿ ಬೇಡಿಕೆ ಹುಟ್ಟಿಕೊಂಡಿರುವುದರ ಪ್ರೇರಣೆಯನ್ನು ಗಮನಿಸಿದರೆ ಇದು ಮತ್ತಷ್ಟು ಸ್ಪಷ್ಟಗೊಳ್ಳುತ್ತದೆ.
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಯುಪಿಎ ಸರ್ಕಾರದಲ್ಲಿ ಪಾಲುದಾರನಾಗಿರುವ ಡಿಎಂಕೆ ಪಕ್ಷ ತನ್ನ ಅಧಿಕಾರ ಹೊಂದಾಣಿಕೆಯ ಷರತ್ತುಗಳ ಅಂಗವಾಗಿ ತಮಿಳು ಭಾಷೆ ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ಶಾಸನಬದ್ಧವಾಗಿ ಪಡೆದುಕೊಂಡಿತು. ತನ್ನ ಚುನಾವಣೆಯ ಪ್ರಣಾಳಿಕೆಯಲ್ಲಿ ಈ ಬೇಡಿಕೆಯನ್ನು ಅದು ಜನತೆಯ ಮುಂದೆ ಪ್ರಚಾರ ಮಾಡಿತ್ತು. ಅದಕ್ಕನುಸಾರವಾಗಿ ಅದನ್ನು ಈಡೇರಿಸಿತು. ತಮಿಳು ಭಾಷೆಯ ಪರಂಪರೆಯಲ್ಲಿ ಸಂಸ್ಕೃತದ ಪ್ರಭಾವ ಬಹಳ ಕಡಿಮೆ. ಹೆಚ್ಚು ಕಮ್ಮಿ ಅದೊಂದು ಪರ್ಯಾಯ ಭಾಷಾ ಪರಂಪರೆಯನ್ನಾಗಿಯೇ ಪೋಷಿಸಿಕೊಂಡು ಬರಲಾಗಿದೆ. ಉತ್ತರ ಭಾರತದ ಯಜಮಾನಿಕೆ ಧೋರಣೆಯ ವಿರುದ್ಧವೂ ರಾಜಕೀಯವಾಗಿ ತಮಿಳುನಾಡಿನಲ್ಲಿ ಪ್ರತಿಭಟನೆಯ ಧೋರಣೆ ಗಟ್ಟಿಯಾಗಿಯೇ ಪ್ರಕಟಗೊಂಡಿತು. ಸಾಂಸ್ಕೃತಿಕವಾಗಿ ವೈದಿಕಶಾಹಿ ಮೌಲ್ಯಗಳು ಮತ್ತು ಪ್ರತೀಕಗಳನ್ನು ಧಿಕ್ಕರಿಸುವ ನಿಲುವುಗಳು ಪೆರಿಯಾರ್ ರಾಮಸ್ವಾಮಿ ನಾಯ್ಕರ್ ನೇತೃತ್ವದ ಸ್ವಮರ್ಯಾದಾ ಚಳವಳಿಯ ಕಾಲದಲ್ಲಿ ಚೆನ್ನಾಗಿ ಪೋಷಿಸಲ್ಪಟ್ಟವು.
ಈ ಹಿನ್ನೆಲೆಯಲ್ಲಿ ತಮಿಳಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಬೇಕೆಂಬ ಬೇಡಿಕೆ ಒಂದು ರೀತಿಯಲ್ಲಿ ಭಾರತೀಯ ಪರಂಪರೆಯ ಮೇಲೆ ಉತ್ತರ ಭಾರತದ ಮೌಲ್ಯ, ಪ್ರತೀಕಗಳು ಹೊಂದಿರುವ ಏಕಸ್ವಾಮ್ಯತೆಯ ವಿರುದ್ಧ ಮುಂದುವರಿದ ಸ್ವಾಭಿಮಾನಿ ಚಳವಳಿಯಂತಿದೆ. ಸಂವಿಧಾನಾತ್ಮಕವಾಗಿ ಹಿಂದಿ ಭಾಷೆಗೆ ಅಧಿಕೃತ ರಾಷ್ಟ್ರೀಯ ಭಾಷೆಯ ಸ್ಥಾನಮಾನ ಕೊಡಲು ಮುಖ್ಯವಾಗಿ ಅಡ್ಡಿಯಾಗಿದ್ದವರು ತಮಿಳರು. ಆದರೆ ಸಂಸ್ಕೃತವನ್ನು ಶಾಸ್ತ್ರೀಯ ಭಾಷೆ ಎಂಬ ಹೆಸರಲ್ಲಿ ಅದಕ್ಕೊಂದು ವಿಶಿಷ್ಟ ಪ್ರಾತಿನಿಧಿಕ ಸ್ಥಾನಮಾನ ಕಲ್ಪಿಸಿದಾಗ, ಅದರ ಅಧ್ಯಯನಕ್ಕೆ ವಿಶ್ವವಿದ್ಯಾಲಯವೂ ಸೇರಿದಂತೆ ಕೆಲವು ಸವಲತ್ತುಗಳನ್ನು ನೀಡಿದಾಗ ಅದನ್ನು ಅಡ್ಡಿಪಡಿಸಲು ದ್ರಾವಿಡ ಚಳವಳಿಯ ನೇತಾರರಿಗೆ ಸಾಧ್ಯವಾಗಲಿಲ್ಲ. ಹಿಂದಿಯನ್ನು ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಅಧಿಕೃತ ರಾಷ್ಟ್ರಭಾಷೆಯ ಸ್ಥಾನಕ್ಕೇರಿಸುವುದನ್ನು ತಪ್ಪಿಸುವುದು ಅಂದಿಗೆ ಅವರ ಮುಖ್ಯವಾದ ರಾಜಕೀಯ ಗುರಿಯಾಗಿತ್ತು.
ಆದರೆ ಅವರ ಸಾಂಸ್ಕೃತಿಕ ಪ್ರಾತಿನಿಧ್ಯದ ಹಸಿವೆ ಮರೆಯಾಗಿರಲಿಲ್ಲ. ಸಂಸ್ಕೃತ ಭಾಷೆಯೊಂದನ್ನೇ ಭಾರತದ ಏಕಮೇವ ಪ್ರಾಚೀನ ಭಾಷೆಯೆಂಬಂತೆ ಬಿಂಬಿಸುವುದರ ಹಿಂದಿನ ಸಾಂಸ್ಕೃತಿಕ ಯಜಮಾನಿಕೆಯ ಬಗ್ಗೆ ತಮಿಳರಿಗಿದ್ದ ವಿರೋಧವನ್ನು ಅರ್ಥಪೂರ್ಣವಾದುದು ಎಂದು ನಾವು ಗುರುತಿಸಬೇಕು. ಏಕೆಂದರೆ ಪ್ರಾಚೀನತೆ ಮತ್ತು ಪರಂಪರೆಯ ವಾರಸುದಾರಿಕೆ ಒಂದರ್ಥದಲ್ಲಿ ಪರಸ್ಪರ ಸಂವಾದಿಯಾದವುಗಳು. ಅತ್ಯಂತ ಪ್ರಾಚೀನವಾದದ್ದು, ಅತ್ಯಂತ ಸತ್ವಶಾಲೀ ಸಂಸ್ಕೃತಿ ಎಂಬ ಹೆಮ್ಮೆಗೆ ಕಾರಣವಾಗುತ್ತಿರುವುದನ್ನು ನಾವು ಪ್ರಪಂಚದ ಹಲವು ಭಾಗಗಳಲ್ಲಿ ಗಮನಿಸುತ್ತಿದ್ದೇವೆ. ಹೀಗಿರುವಾಗ ಭಾರತೀಯ ಪರಂಪರೆಯಲ್ಲಿ ಸಂಸ್ಕೃತವೊಂದೇ ಅತ್ಯಂತ ಪ್ರಾಚೀನವಲ್ಲ. ಜನಜೀವನದಲ್ಲಿ ಸಂಸ್ಕೃತ ಸಾಹಿತ್ಯದಂತೆಯೇ ಪ್ರಾಚೀನವೂ, ಸತ್ವಶಾಲಿಯೂ ಆದ ಇತರೆ ಹಲವು ಧಾರೆಗಳಿದ್ದವು. ಅವೆಲ್ಲವೂ ಸೇರಿಯೇ ಭಾರತೀಯ ಪರಂಪರೆಯ ಸಂಕೀರ್ಣ ನೇಯ್ಗೆ ರೂಪುಗೊಂಡಿದೆ. ಗೊಂಡ, ಸಂತಾಲಿಯಂತಹ ಬುಡಕಟ್ಟು ಭಾಷೆಗಳಿಗೆ ಈ ಭಾರತೀಯ ನೆಲದಲ್ಲಿ ಸಾವಿರಾರು ವರ್ಷಗಳ ಪ್ರಾಚೀನತೆಯಿದೆ.
ಆದರೆ ಸಂಸ್ಕೃತ ರಾಜಾಶ್ರಯ ಪಡೆದ ಧಾರ್ಮಿಕ ವ್ಯವಸ್ಥೆ ಬಳಸಿಕೊಂಡ ಭಾಷೆಯಾಯಿತಾದ್ದರಿಂದ ಬೇಗನೆ ಲಿಖಿತ ಸ್ವರೂಪ ಪಡೆದುಕೊಂಡಿತು. ಆ ಸೌಲಭ್ಯ ಪರಿಶಿಷ್ಟ ಸಮುದಾಯಗಳಾಗಿ ಉಳಿದುಕೊಂಡು ಬಂದ ಇತರೆ ಎಷ್ಟೋ ಭಾಷೆಗಳಿಗೆ ಒದಗಿಬರಲಿಲ್ಲ. ಅವುಗಳ ಜೀವನ ಪರಿಸ್ಥಿತಿಗಳು ಮೌಖಿಕತೆಯನ್ನು ಆಧರಿಸಿದ ಆದಿಮ ಸ್ವರೂಪವನ್ನೇ ಉಳಿಸಿಕೊಂಡು ಬಂದವು. ಒಂದು ಬದುಕಿನ ಪ್ರಾಚೀನ ಅಸ್ತಿತ್ವದ ಅಭಿವ್ಯಕ್ತಿ ರೂಪಕವನ್ನಾಗಿ ಭಾಷೆಯನ್ನು ಪರಿಗಣಿಸುವುದಾದರೆ ಭಾರತದ ಉಪಖಂಡದಲ್ಲಿ ನಾವು ಹಲವಾರು ಭಾಷೆಗಳಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಕೊಡಬೇಕಾಗಿ ಬರುತ್ತದೆ. ಆದರೆ ಶಾಸ್ತ್ರೀಯ ಭಾಷೆ ಎಂಬ ವರ್ಗೀಕರಣಕ್ಕೆ ಆಧುನಿಕ ಆಡಳಿತಗಾರರು ಲಗತ್ತಿಸಿರುವ ಲಕ್ಷಣಗಳಿಗೆ ಸೋಲಿಗ ನುಡಿ, ತುಳು ಇತ್ಯಾದಿ ಕಂದಮಿಳ ಪ್ರಕಾರದ ಹಲವು ಭಾಷೆಗಳು ಅಳವಡುವುದಿಲ್ಲ. ಆ ಬಗೆಯ ವರ್ಗೀಕರಣ ಎಷ್ಟರಮಟ್ಟಿಗೆ ಜನಪರವಾದುದು ಎಂಬ ಪ್ರಶ್ನೆ ಅತ್ಯಂತ ಮುಖ್ಯವಾದುದು. ಇದೆಲ್ಲದರ ಹೊರತಾಗಿ, ಪ್ರಚಲಿತ ಸನ್ನಿವೇಶದ ರಾಜಕೀಯ ಸಮೀಕರಣಗಳ ಕಾರಣಕ್ಕಾಗಿ ತಮಿಳು ಭಾಷೆಗೆ ಶಾಸ್ತ್ರೀಯ ಭಾಷೆ ಎಂಬ ಬಿರುದನ್ನು ಒದಗಿಸಲಾಯಿತು.
ತಮಿಳು ಭಾಷೆಗೆ ಶಾಸ್ತ್ರೀಯ ಸ್ಥಾನ ದೊರೆತಿರುವುದನ್ನು ವಿಶಾಲಾರ್ಥದಲ್ಲಿ ನಾವು ಸಾಂಸ್ಕೃತಿಕ ರಾಜಕೀಯದ ಸಮತೋಲನ ಎಂದು ಕೂಡ ಕರೆಯಬಹುದು. ಏಕೆಂದರೆ ಈಗ ಕೇವಲ ಉತ್ತರಾದಿ ಸಾಹಿತ್ಯ ಮತ್ತು ಸಾಂಸ್ಕೃತಿಕತೆಯ ಪ್ರತೀಕವಾದ ಸಂಸ್ಕೃತವನ್ನು ಮಾತ್ರ ಶಾಸ್ತ್ರೀಯ ಎನ್ನದೆ, ದಕ್ಷಿಣಾತ್ಯ ಪರಂಪರೆಯ ತಮಿಳನ್ನು ಕೂಡ ಶಾಸ್ತ್ರೀಯ ಎಂದು ಪರಿಗಣಿಸಲಾಗಿದೆ. ಒಂದು ರೀತಿಯಲ್ಲಿ ಇದು ವೈದಿಕ ಅಥವಾ ಇಂಡೋ ಆರ್ಯನ್ ಭಾಷಾ ಪ್ರಾಚೀನತೆಯ ಏಕಮುಖಿ ಪರಿಗಣನೆಗೆ ಬದಲಾಗಿ ಕಂದಮಿಳ ಮೂಲದ ಮತ್ತೊಂದು ಮುಖವನ್ನೂ ಪ್ರತಿನಿಧಿಸಿದಂತಾಗಿದೆ. ಆ ಮುಖಾಂತರ ಅದರ ವಿಶಿಷ್ಟಾರ್ಥದಲ್ಲಿ ದಕ್ಷಿಣದವರಾದ ನಾವು, ಸಂಸ್ಕೃತ ಪರಂಪರೆಗೆ ಭಿನ್ನವಾದ ಮತ್ತೊಂದು ಪರಂಪರೆಯನ್ನು ಸಾಂಕೇತಿಕವಾಗಿ ಗುರುತಿಸಲು ಆರಂಭಿಸಿದ ಈ ಬೆಳವಣಿಗೆಯನ್ನು ಸಂತೋಷದಿಂದ ಸ್ವಾಗತಿಸಬೇಕು.
ಏಕೆಂದರೆ ತಮಿಳಿಗೆ ತನ್ನದೇ ಆದ ಪ್ರಾಚೀನತೆ ಹಾಗೂ ಭಿನ್ನ ಸಾಂಸ್ಕೃತಿಕ, ಐತಿಹಾಸಿಕ ತಳಹದಿಯಿರುವುದು ವಾಸ್ತವ. ಅದು ಇಡೀ ದಕ್ಷಿಣದವರನ್ನು ಸಮಗ್ರವಾಗಿ ಪ್ರತಿನಿಧಿಸುವ ಸತ್ವವುಳ್ಳದ್ದೋ ಅಲ್ಲವೋ ಎಂಬುದು ಬೇರೆ ಪ್ರಶ್ನೆ. ಭಾರತೀಯ ಪರಂಪರೆಯನ್ನು ವೈದಿಕಶಾಹಿ ಪರಂಪರೆಯ ಹೆಗ್ಗುರುತಾದ ಸಂಸ್ಕೃತ ಒಂದರಿಂದಲೇ ಸೂಚಿಸುವ ಬದಲು ಅದರ ಭಿನ್ನ ಮಜಲಾಗಿರುವ ಕಂದಮಿಳ ಮೂಲದ ತಮಿಳು ಭಾಷೆಯೊಂದಿಗೂ ಪರಿಗಣಿಸಲು ಸಾಧ್ಯವಾಗಿರುವುದು ಒಂದು ಬಗೆಯಲ್ಲಿ ಉತ್ತರ ಮತ್ತು ದಕ್ಷಿಣ ರಾಜಕೀಯ ಶಕ್ತಿಗಳ ನಡುವಿನ ಬೆಳೆಯುತ್ತಿರುವ ಸಮತೋಲನದ ಕುರುಹಾಗಿದೆ ಎಂಬ ಅಂಶ ಇಲ್ಲಿ ಮುಖ್ಯವಾದುದು.
ಈ ನೆಲೆಗಟ್ಟನ್ನು ನಾವು ಪರಿಗಣಿಸದೆಯೇ ತಮಿಳರು ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ಪಡೆದುಕೊಂಡದ್ದರ ಬಗ್ಗೆ ಆಲೋಚಿಸುವಂತಿಲ್ಲ. ಅಧಿಕೃತ ರಾಷ್ಟ್ರೀಯ ಭಾಷೆಯ ಸ್ಥಾನಮಾನವನ್ನು ಕೇವಲ ಹಿಂದಿಯೊಂದಕ್ಕೆ ಕೊಡುವುದಕ್ಕೆ ಸಾಧ್ಯವಾಗದಿರುವ ಸೋಲನ್ನು ಉತ್ತರದ ರಾಜಕೀಯ ಶಕ್ತಿಗಳು ಪರೋಕ್ಷವಾಗಿ ಸಂಸ್ಕೃತವನ್ನು ಶಾಸ್ತ್ರೀಯಗೊಳಿಸುವ ಮುಖಾಂತರ ತುಂಬಿಕೊಳ್ಳಲು ಪ್ರಯತ್ನಿಸಿದ್ದರೆ, ಅದಕ್ಕೆ ಒಂದು ರಚನಾತ್ಮಕ ವಿರೋಧವಾಗಿ ತಮಿಳು ಶಾಸ್ತ್ರೀಯ ಭಾಷೆಯ ಸ್ಥಾನಮಾನ ನಿಂತುಕೊಂಡಿದೆ. ಇದು ಭಾರತೀಯ ರಾಜಕಾರಣದಲ್ಲಿ ಅನಿವಾರ್ಯವಾಗುತ್ತಿರುವ ಸಮ್ಮಿಶ್ರ ರಾಜಕೀಯ ಅಧಿಕಾರದ ಪರಿಸ್ಥಿತಿಯನ್ನು ಪ್ರತಿನಿಧಿಸುತ್ತಿದೆ. ಆದರೆ ಈ ಸನ್ನಿವೇಶದಲ್ಲಿ ಮುಕ್ತಗೊಂಡಿರುವ ಶಾಸ್ತ್ರೀಯ ಸ್ಥಾನಮಾನದ ಬಾಗಿಲು ಕೇವಲ ತಮಿಳಿನ ಪ್ರಶ್ನೆಯೊಂದಿಗೆ ಮುಗಿಯುವಂತೆ ಕಾಣುವುದಿಲ್ಲ. ಹಾಗೆ ಅದು ಮುಗಿದರೆ ನಾವು ಪರೋಕ್ಷವಾಗಿ ಉತ್ತರದಲ್ಲಿ ಒಂದು, ದಕ್ಷಿಣದಲ್ಲಿ ಮತ್ತೊಂದು ಭಾಷಾ ಶಕ್ತಿ ಕೇಂದ್ರಗಳನ್ನು ಮಾನ್ಯಗೊಳಿಸಿದಂತಾಗುತ್ತದೆ. ಅಂದರೆ ಸಂಸ್ಕೃತದ ಮುಖಾಂತರ ತಮ್ಮ ಪ್ರಾತಿನಿಧ್ಯವನ್ನು ಸಾಂಕೇತಿಕಗೊಳಿಸಿದ ಉತ್ತರಾದಿ ಬಂಡವಾಳಿಗರ ಪರಂಪರೆ, ಮತ್ತೊಂದು ಕಡೆ ತಮಿಳಿನ ಮುಖಾಂತರ ತಮ್ಮನ್ನು ಪ್ರತಿನಿಧೀಕರಿಸಿಕೊಂಡ ದಕ್ಷಿಣದ ಬಂಡವಾಳಿಗರ ಪರಂಪರೆ- ಹೀಗೆ ಭಾಷೆ ಎನ್ನುವ ರೂಪಕಗಳ ಮುಖಾಂತರ ಪರಸ್ಪರ ಸ್ಪರ್ಧೆಗಿಳಿದಿರುವ ಎರಡು ರಾಜಕೀಯ ಧ್ರುವೀಕರಣಗಳನ್ನು ಮಾತ್ರ ನಾವು ಒಪ್ಪಿಕೊಂಡಂತಾಗುತ್ತದೆ.
ತಮಿಳಿನಷ್ಟೇ ಯಥಾವತ್ತಾಗಿ ಅಲ್ಲದಿದ್ದರೂ ಕೂಡಾ ಅದಕ್ಕೆ ಸರಿಸಮನಾಗಿ ನಿಲ್ಲಬಲ್ಲ ಒಂದು ಸಾಹಿತ್ಯಿಕ ಭಾಷಾತ್ಮಕ ಪರಂಪರೆ ಕನ್ನಡಕ್ಕಿದೆ. ಸಂಸ್ಕೃತವನ್ನು ಅದು ತಮಿಳಿನಂತೆ ಹೊರಗಿಟ್ಟು ಬೆಳೆಯಲಿಲ್ಲವಾದರೂ ತನ್ನ ಚಿಂತನಾತ್ಮಕ ನೆಲೆಯಲ್ಲಿ ವೈದಿಕಶಾಹಿಗೆ ಹಾಗೂ ಸಂಸ್ಕೃತದ ಮುಖಾಂತರ ವ್ಯಕ್ತಗೊಳ್ಳುತ್ತಿದ್ದ ಭರತ ಖಂಡವ್ಯಾಪಿ ಸಾಮ್ರಾಜ್ಯ ಸಂರಚನೆಗೆ ಒಂದು ಪ್ರತಿರೋಧವನ್ನು ನಿರ್ಮಿಸಿಕೊಂಡು ಅದು ಬಂದಿದೆ. ಕಾವ್ಯ ಹಾಗೂ ಸಂಸ್ಕೃತಿಗಳ ನಿರ್ಮಾಣದಲ್ಲಿ ಕನ್ನಡಕ್ಕೆ ಅಚ್ಚಳಿಯದ ಸ್ವಂತಿಕೆಯಿದೆ. ಆ ಸ್ವಂತಿಕೆ ಇತರೆ ಪ್ರಭಾವಗಳಿಂದ ಮುಕ್ತವಾಗಿರುವ ಪ್ರಮಾಣ ಯಾವುದು ಎಂಬುದನ್ನು ನಾವು ಮತ್ತಷ್ಟು ನಿಕಶಕ್ಕೊಳಪಡಿಸಬೇಕಾದ ಅಗತ್ಯವಿದೆಯಾದರೂ ಕನ್ನಡ ಸಂಸ್ಕೃತಿಯ ಅಸ್ಮಿತೆ ಹಾಗೂ ಅಸ್ತಿತ್ವ ದಕ್ಷಿಣದಲ್ಲಿ ಇತರೆ ಯಾವುದಕ್ಕೂ ಎರಡನೆಯದಲ್ಲವೆಂಬ ಅಂಶ ಮಾತ್ರ ವಾಸ್ತವವಾದುದು. ಹೀಗಿರುವಾಗ ಕನ್ನಡಕ್ಕೂ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಸಿಕ್ಕರೆ ಅದು ಸ್ವಾಗತಾರ್ಹ. ಆದರೆ ಈ ಪ್ರಶ್ನೆಯನ್ನು ಜನಪರವಾಗಿ ಚಿಂತಿಸುವ ಸಂವೇದನಾಶೀಲರು ಮತ್ತಷ್ಟು ರಚನಾತ್ಮಕ ವಿಧಾನದಲ್ಲಿ ಕೈಗೆತ್ತಿಕೊಳ್ಳುವುದು ಹೆಚ್ಚು ಪ್ರಯೋಜನಕಾರಿ. ವಾಸ್ತವವಾಗಿ ಭಾರತೀಯ ಪರಂಪರೆಯಲ್ಲಿ ಉತ್ತರ ಮತ್ತು ದಕ್ಷಿಣ ಎನ್ನುವ ಸಾಂಸ್ಕೃತಿಕ ಭಿನ್ನತೆ ಯಾವುದೋ ಎರಡು ಭಾಷಾ ಬಿಂದುಗಳಲ್ಲಿ ಕೇಂದ್ರೀಕೃತವಾಗಿಲ್ಲ. ಅದು ಹಾಗೆ ಸರಳ ಪ್ರಾದೇಶಿಕ ವಿಂಗಡಣೆಗಳಿಂದ ಸಂಪೂರ್ಣಗೊಳ್ಳುವುದೂ ಅಲ್ಲ. ಅದು ಹಲವು ಬಗೆಗಳಲ್ಲಿ, ಹಲವು ನೆಲೆಗಳಲ್ಲಿ ಹರಡಿಕೊಂಡಿದೆ. ಹೀಗಿರುವಾಗ ಕನ್ನಡವನ್ನು ಈ ನೆಲೆಯಲ್ಲಿ ಮತ್ತೊಂದು ಸಾಂಸ್ಕೃತಿಕ ಧಾರೆಯ ಬಿಂದುವನ್ನಾಗಿ ಪರಿಗಣಿಸಲು ನಾವು ಹೋರಾಟ ಕೈಗೊಳ್ಳುವುದು ಕೇವಲ ತಮಿಳಿನ ಮೇಲೆ ಇರುವ ಸ್ಪರ್ಧೆಯ ಒಂದು ಮುಖದಂತೆ ಕಾಣತೊಡಗುವುದು ಸಾಧ್ಯವಿದೆ. ಒಂದು ಪ್ರದೇಶದ ಸಾಂಸ್ಕೃತಿಕ ವಿನ್ಯಾಸ ಅಲ್ಲಿನ ಹಲವಾರು ಸಮುದಾಯಗಳ ನೆಲೆಯಲ್ಲಿ ವಿಂಗಡಿತವಾಗಿರುವಾಗ ನಿಜಕ್ಕೂ ಶಾಸ್ತ್ರೀಯ, ಅಶಾಸ್ತ್ರೀಯ ಎನ್ನುವ ವಿಂಗಡಣೆಗಳಿಂದ ಕೆಲವು ಪರಂಪರೆಗಳನ್ನು ಹೆಚ್ಚು ಮಾನ್ಯಗೊಳಿಸುವುದು ಅಥವಾ ಅಧಿಕೃತಗೊಳಿಸುವುದು, ಅದೇ ಸಂದರ್ಭದಲ್ಲಿ ಮಿಕ್ಕ ಅಲಕ್ಷಿತ ಪರಂಪರೆಗಳನ್ನು ಅನಧಿಕೃತ ಅಥವಾ ಅಮಾನ್ಯ ಎಂದು ವಿಂಗಡಿಸುವ ಜನ ವಿರೋಧಿ ನಿಲುವಾಗುವ ಸಾಧ್ಯತೆಯನ್ನು ಒಳಗೊಂಡಿರುತ್ತದೆ.
ಕನ್ನಡ ಶಾಸ್ತ್ರೀಯವಾದುದು. ಅನುಮಾನವಿಲ್ಲ. ಅದೇ ಬಗೆಯಲ್ಲಿ ಲಿಖಿತ ಪರಂಪರೆ ಇಲ್ಲವೆಂಬುದೊಂದನ್ನು ಬಿಟ್ಟರೆ ಒಂದು ಶಾಸ್ತ್ರೀಯ ಭಾಷೆ ಎಂದು ಕರೆಯಲ್ಪಡಲು ಅಗತ್ಯವಿರುವ ಇನ್ನೂ ಹಲವಾರು ಮಾನದಂಡಗಳನ್ನು ಸುಸ್ಪಷ್ಟವಾಗಿ ಪ್ರತಿನಿಧಿಸುತ್ತಿರುವ ಹಲವು ಭಾಷೆಗಳಿದ್ದರೂ, ಅವುಗಳ ಪರವಾದ ವಾದ ಮಂಡನೆಯನ್ನು ಮಾಡಲು ಸಾಮರ್ಥ್ಯವುಳ್ಳ ಪಂಡಿತ ವರ್ಗವೊಂದು ಇಲ್ಲದೇ ಹೋಗಿದೆ ಎಂಬ ದೌರ್ಬಲ್ಯವನ್ನೇ ಬಳಸಿಕೊಂಡು ಅವುಗಳನ್ನು ಶಾಸ್ತ್ರೀಯ ಎನ್ನುವ ಮನ್ನಣೆಯಿಂದ ಹೊರಗಿಡುವುದು ಎಷ್ಟರಮಟ್ಟಿಗೆ ಪ್ರಜಾತಾಂತ್ರಿಕವಾದುದು? ಎಂಬುದಿಲ್ಲಿ ಪ್ರಶ್ನೆ.
ಶಾಸ್ತ್ರೀಯ ಭಾಷೆ ಎನ್ನುವುದಕ್ಕೆ ಕೇಂದ್ರದ ಸಂಸ್ಕೃತಿ ಇಲಾಖೆ ತನ್ನ ಸುತ್ತೋಲೆಯಲ್ಲಿ ಸೂಚಿಸಿರುವ ಮುಖ್ಯ ಮಾನದಂಡಗಳು: ೧೫೦೦ ವರ್ಷಗಳಿಗೂ ಹೆಚ್ಚಿನ ಸಾಹಿತ್ಯದ ಪ್ರಾಚೀನತೆ; ಪೀಳಿಗೆಗಳಲ್ಲಿ ನೆಲೆಗೊಂಡ ಮೌಲಿಕ ಪರಂಪರೆ; ಯಾವುದೇ ಬೇರೆ ಭಾಷೆಯಿಂದ ಸ್ವೀಕರಿಸದೇ ಸ್ವತಂತ್ರವಾಗಿ ಬೆಳೆದುಬಂದ ಸಾಹಿತ್ಯ ಪರಂಪರೆ ಹಾಗೂ ಶಾಸ್ತ್ರೀಯ ಭಾಷೆ ಹಾಗೂ ಸಾಹಿತ್ಯವು ಈಗಿನ ರೂಪಕ್ಕಿಂತ ಅದರ ಹಿಂದಿನ ರೂಪದಲ್ಲಿ ವಿಶಿಷ್ಟವಾಗಿರಬೇಕು ಎಂಬವುಗಳಾಗಿವೆ.
ಈ ಮಾನದಂಡಗಳನ್ನು ಸರ್ಕಾರ ಅಥವಾ ಸಾಂಪ್ರದಾಯಿಕ ಸಂಸ್ಕೃತಿ ತಜ್ಞರು ನಿರ್ವಚಿಸುವ ವಿಧಾನಕ್ಕಿಂತ ಭಿನ್ನವಾಗಿ ನಿರ್ವಚಿಸುವ ಸಾಧ್ಯತೆಗಳು ನಮ್ಮ ಮುಂದಿವೆ. ಇವು ಗ್ರಹಿಕೆಯ ನೆಲೆಗಟ್ಟಿಗೆ ಸಂಬಂಧಪಟ್ಟ ವಿಷಯಗಳೇ ಹೊರತು ನೂರಕ್ಕೆ ನೂರರಷ್ಟು ವಾಸ್ತವಾಂಶಗಳಲ್ಲ ಎಂಬುದನ್ನು ನಾವು ಗಮನಿಸಬೇಕಾಗಿದೆ. ೧೫೦೦ ವರ್ಷಗಳಿಗೂ ಹೆಚ್ಚಿನ ಸಾಹಿತ್ಯ ಪರಂಪರೆ ಎನ್ನುವ ವಿಷಯವನ್ನೇ ನೋಡೋಣ. ಈ ಸಾಹಿತ್ಯ ಚರಿತ್ರೆಯನ್ನು ನಿರ್ಧರಿಸುವಾಗ ಸಾಂಪ್ರದಾಯಿಕವಾಗಿ ಲಿಖಿತ ಪುರಾವೆಗಳ ಲಭ್ಯತೆಯನ್ನು ಪರಿಗಣಿಸಲಾಗುತ್ತದೆ. ಲಿಖಿತ ಪುರಾವೆಗಳ ಲಭ್ಯತೆ ಇಲ್ಲದಿದ್ದರೆ ಒಂದು ಬುಡಕಟ್ಟು ಭಾಷೆಯ ಸಾಹಿತ್ಯ ಪ್ರಾಚೀನತೆ ಪುರಾವೆಗೊಳ್ಳುವುದಿಲ್ಲವೇ? ಪ್ರತೀ ಬುಡಕಟ್ಟು ಸಮುದಾಯವೂ ತನ್ನ ಜೀವನಾವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸಾವಿರಾರು ವರ್ಷಗಳಿಂದ ಸಾಹಿತ್ಯ, ಸಂಸ್ಕೃತಿ, ಕಲೆ ಇತ್ಯಾದಿಗಳನ್ನು ರೂಪುಗೊಳಿಸಿಕೊಂಡು ಬಂದಿರುತ್ತದೆ. ಬಹುವರ್ಣದ ಗುಹಾ ಚಿತ್ರಗಳನ್ನು ಬರೆದ ಸಮುದಾಯಕ್ಕೆ ಅದರ ಭಿನ್ನ ಕಲಾ ಪ್ರಕಾರಗಳಾದ ಹಾಡು, ಕಥೆ ಮುಂತಾದವುಗಳಲ್ಲಿ ಪರಿಶ್ರಮ ಇರಲಿಲ್ಲ ಎನ್ನಲಿಕ್ಕೆ ಬರುತ್ತದೆಯೇ?
ಮುಖ್ಯವಾಗಿ ಲಿಖಿತ ಸಾಹಿತ್ಯ ಪರಂಪರೆಯನ್ನು ಮಾತ್ರ ಒಂದು ಭಾಷೆಯ ಸಾಹಿತ್ಯ ಚರಿತ್ರೆಯನ್ನಾಗಿ ಪರಿಗಣಿಸುವ ಮಾನದಂಡದಲ್ಲೇ ಒಂದು ಶಿಷ್ಟ- ಪರಿಶಿಷ್ಟ ತಾರತಮ್ಯವಿದೆ. ಹಾಗೆಯೇ ಬೇರೆ ಯಾವುದೇ ಭಾಷೆಯಿಂದ ಸ್ವೀಕರಿಸದೇ ಬೆಳೆದು ಬಂದ ಸಾಹಿತ್ಯದ ಪರಂಪರೆ ಎಂಬ ಮಾನದಂಡ. ಇದು ಸಾಪೇಕ್ಷವಾಗಿ ಅರ್ಥೈಸಲ್ಪಡುವ ಮಾನದಂಡವಾಗಬಲ್ಲದೇ ಹೊರತು ಶುದ್ಧಾಂಗವಾಗಿ ನಿರ್ಣಯಕ್ಕೊಳಪಡುವ ಮಾನದಂಡವಲ್ಲ. ಸಾಹಿತ್ಯ ಪ್ರಕಾರಗಳು ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಎರವಲಾಗಿ, ಪ್ರಭಾವವಾಗಿ ಬಂದಿರುವ ಸಾಧ್ಯತೆ ಇರುವಂತೆಯೇ, ಯಾವುದೇ ಪ್ರಭಾವವಿರದೆ ಒಂದೇ ಬಗೆಯ ಪ್ರಕಾರಗಳು ಭಿನ್ನ ಸಮುದಾಯಗಳಲ್ಲಿ ಅದರ ಅಭಿವೃದ್ಧಿ ಹಂತದ ಅಂಗವಾಗಿ ಚಾಲ್ತಿಗೆ ಬಂದಿರುವ ಸಾಧ್ಯತೆ ಕೂಡ ಇರುತ್ತದೆ.
ಕಥೆ ಹೇಳುವ, ಹಾಡುಗಬ್ಬ ಕಟ್ಟುವ ಪ್ರಾಚೀನ ಸಮುದಾಯಗಳ ಪ್ರೇರಣೆ ಇಲ್ಲದೆ ಮಹಾಕಾವ್ಯಗಳ ಮಾರ್ಗ ಪರಂಪರೆ ಏರ್ಪಡಲು ಸಾಧ್ಯವಿದೆಯೇ? ರಾಮಾಯಣ, ಮಹಾಭಾರತಗಳೂ ಕೂಡ ಸಂಸ್ಕೃತದಲ್ಲಿ ಮಹಾಕಾವ್ಯಗಳಾಗುವ ಮೊದಲು ವೀರಗಾಥೆಗಳಾಗಿ ಜನಸಮುದಾಯಗಳ ನಡುವೆ ಪ್ರಚಲಿತದಲ್ಲಿದ್ದವು. ಹಾಗಿರುವಾಗ ಪಾಳಿ, ಪ್ರಾಕೃತ ಮುಂತಾದವುಗಳ ಪ್ರಭಾವವಿಲ್ಲದೆ ಸಂಸ್ಕೃತ ತನ್ನ ಸಾಹಿತ್ಯ ಪರಂಪರೆಯನ್ನು ಬೆಳೆಸಿಕೊಂಡಿತೋ ಇಲ್ಲವೋ ಹೇಳುವುದು ಹೇಗೆ ಸಾಧ್ಯ? ಇದೆಲ್ಲ ಪಂಡಿತ ನಿರ್ವಚನಗಳ ಮುಖಾಂತರ ನಮ್ಮ ಸೌಕರ್ಯಕ್ಕನುಸಾರವಾಗಿ ನಿರ್ಮಿಸಿಕೊಂಡ ತೀರ್ಮಾನಗಳು ಮಾತ್ರವಾಗಿರಬಹುದು ಎಂಬ ಜಿಜ್ಞಾಸೆಯಿಂದ ಪರಿಶೀಲಿಸಬಲ್ಲೆವಾದರೆ ಶಾಸ್ತ್ರೀಯ ಭಾಷೆ ಎಂಬ ಮಾನ್ಯತೆಗೆ ಒಳಪಡಲು ಕನಿಷ್ಠ ನೂರು ಬುಡಕಟ್ಟು ಭಾಷೆಗಳಿಗೆ ಅರ್ಹತೆಗಳಿವೆ.
ಬರವಣಿಗೆ, ಮಹಾಕಾವ್ಯ ಮುಂತಾದವುಗಳೆಲ್ಲ ಒಂದೊಂದು ಕಾಲಘಟ್ಟದಲ್ಲಿ ಆಯಾ ಸಮುದಾಯದ ಆರ್ಥಿಕ ಸಾಮರ್ಥ್ಯಗಳ ಬೆಳವಣಿಗೆಯೊಂದಿಗೆ ಮೂಡಿಬಂದ ಲಕ್ಷಣಗಳೇ ಹೊರತು ಅವು ಮಾತ್ರವೇ ಒಂದು ಪರಂಪರೆಯ ಸತ್ವಕ್ಕೆ ಮತ್ತು ಅರ್ಥಪೂರ್ಣತೆಗೆ ಸೂಚಕಗಳಲ್ಲ.
ಆದ್ದರಿಂದ ಕೆಲವು ಭಾಷೆಗಳನ್ನು ಶಾಸ್ತ್ರೀಯ ಎಂದು, ಮತ್ತೆ ಕೆಲವನ್ನು ಅಶಾಸ್ತ್ರೀಯ ಎಂದು ಕರೆಯುವುದು ಆಯಾ ಭಾಷಾ ಸಮುದಾಯದ ಆರ್ಥಿಕ, ರಾಜಕೀಯ ಬಲವನ್ನಾಧರಿಸಿದ ನಿರ್ಣಯಗಳಾಗುವ ಬದಲು ಶಾಸ್ತ್ರೀಯ ಭಾಷೆಯ ಲಾಕ್ಷಣಿಕತೆಯನ್ನು ಒಂದು ಪ್ರಜಾತಾಂತ್ರಿಕ ನಿರ್ವಚನಕ್ಕೊಳಪಡಿಸಿ ಸಾಕಷ್ಟು ಪ್ರಾಚೀನವಾಗಿರುವ ಭಾಷೆಗಳೆಲ್ಲವುಗಳನ್ನು ಗೌರವಿಸುವುದು, ಅವುಗಳ ಬೆಳವಣಿಗೆಗೆ ಬೆಂಬಲ ನೀಡುವುದು ಯಾವುದೇ ಪ್ರಭುತ್ವದ ಕರ್ತವ್ಯವಾಗುವಂತೆ ಸೂಕ್ತವಾದ ಸಂವಿಧಾನಾತ್ಮಕ ಸವಲತ್ತುಗಳನ್ನು ಕಲ್ಪಿಸಲು ಆಗ್ರಹಿಸುವುದೇ ಹೆಚ್ಚು ಸೂಕ್ತವಾದುದು. ಅದನ್ನು ಕನ್ನಡಿಗರಾದ ನಾವು ಕೈಗೊಳ್ಳುವ ಮುಖಾಂತರ ಕನ್ನಡವೆಂಬ ಇಂದಿನ ಭಾಷಾ ಪರಂಪರೆಗೆ ತಾಯಿ ತಂದೆಗಳಾಗಿರಬಹುದಾದ ಮತ್ತೆಷ್ಟೋ ಆದಿಮ ಭಾಷಾ ಸಂಕುಲಗಳನ್ನು ಹಾಗೂ ಅವುಗಳನ್ನು ಆಡುತ್ತಾ ಇಂದಿಗೂ ಬಾಳಿಕೊಂಡು ಬಂದಿರುವ ಸಮುದಾಯಗಳನ್ನು ಸಮಾಜದ ಮಖ್ಯವಾಹಿನಿಯಲ್ಲಿ ಗುರುತಿಸಿ ಸಮಗೌರವಕ್ಕೆ ಪಾತ್ರಗೊಳಿಸಿದಂತಾಗುತ್ತದೆ. ಅದೇ ಸಮಯದಲ್ಲಿ ಪರೋಕ್ಷವಾಗಿ ಕೆಲವು ಭಾಷಾ ಪರಂಪರೆಯ ಮೂಲದ ಸಮುದಾಯಗಳನ್ನು ಹೆಚ್ಚು ಸಮರ್ಥವೆಂದು, ಮತ್ತೆ ಕೆಲವನ್ನು ಅಸಮರ್ಥವೆಂದು ಬಿಂಬಿಸುತ್ತಾ ನಡೆಯುವ ಶ್ರೇಣೀಕರಣ ಪರಂಪರೆಯನ್ನು ಧಿಕ್ಕರಿಸಿದಂತಾಗುತ್ತದೆ.
ಕನ್ನಡವನ್ನು ಅದರ ಹುಸಿ ಹೆಮ್ಮೆಯ 'ಶೂನ್ಯ' ಸಿಂಹಾಸನದ ಮೇಲೆ ಕೂರಿಸಿ ಹೆಮ್ಮೆಪಡಲು ಹೆಣಗಾಡುವ ಬದಲು ಇಂದಿನ ಸಂದರ್ಭದಲ್ಲಿ ಅದರ ಬಳಕೆಗೆ ಅಡ್ಡಿಯಾಗಿರುವ ಆರ್ಥಿಕ, ರಾಜಕೀಯ ಸನ್ನಿವೇಶಗಳಲ್ಲಿ ಸೂಕ್ತ ಮಾರ್ಪಾಡುಗಳನ್ನು ತರಲು ಹೋರಾಡುವುದು ಹೆಚ್ಚು ಪ್ರಯೋಜನಕಾರಿ. ಇಂಗ್ಲಿಷ್ ತನ್ನ ಜಾಗತಿಕ ಬಂಡವಾಳದ ಬೆಂಬಲದೊಂದಿಗೆ ಕನ್ನಡವೂ ಸೇರಿದಂತೆ ಇತರೆ ದೇಸಿ ಭಾಷೆಗಳ ಅಸ್ತಿತ್ವಕ್ಕೆ ಹಾಗೂ ಗೌರವಕ್ಕೆ ತಂದಿಟ್ಟಿರುವ ಗಂಡಾಂತರಗಳನ್ನು ಸಮರ್ಪಕವಾಗಿ ಎದುರಿಸಲು ಅಗತ್ಯವಾದ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೈಗೊಳ್ಳುವುದು ಇಂದು ಹೆಚ್ಚು ತುರ್ತಿನದಾಗಿದೆ.
ಶಾಸ್ತ್ರೀಯ ಭಾಷೆಯ ಪಟ್ಟ ಬರುವುದರಿಂದ ಅದು ಕರ್ನಾಟಕದ ಶಾಲಾ ಕಾಲೇಜುಗಳಲ್ಲಿ ಉಳಿದುಕೊಳ್ಳಲು ಶಕ್ತವಾಗುತ್ತದೆಯೇ? ಇಲ್ಲವೇ? ಎನ್ನುವುದನ್ನು ನಾವು ನಿರ್ಮಮಕಾರವಾಗಿ ಆಲೋಚಿಸಿದರೆ, ಕನ್ನಡಿಗರಿಗೆ ನಿರಂತರ ಉಪವಾಸ ಕಲ್ಪಿಸಬಹುದಾಗಿರುವ ಅಪಾಯಗಳ ವಿರುದ್ಧವೇ ಮೊದಲು ಕನ್ನಡದ ಮಹಾಮಹಿಮರು, ನಾಡೋಜರು ಉಪವಾಸ ಸತ್ಯಾಗ್ರಹಗಳನ್ನು ಕೈಗೊಳ್ಳಬೇಕಾಗಿರುವುದು ಅಗತ್ಯವೆಂದೆನಿಸುತ್ತದೆ.
ಟಿಎಸ್‌ಐ
|