ಸರ್ಬಿಯಾ-ಅಲ್ಬೇನಿಯನ್: ಬಿಕ್ಕಟ್ಟು
ಕೊಸೊವೊ: ಸ್ವಘೋಷಿತ ಸ್ವಾತಂತ್ರ್ಯ?
ಅಪನಂಬಿಕೆ-ಸಂದೇಹಗಳೇ ಮೇರಿಲ್ಯಾಂಡ್‌ನ ನಿಜವಾದ ಯಶಸ್ಸು
"ನಿರಾಶಾಭಾವದ ವಾದ-ವಿವಾದಗಳಿಗೇನೂ ಕಡಿಮೆ ಇರದು, ಆದರೂ ಪಟ್ಟು ಬಿಡದೆ ಮುಂದುವರಿಯಲೂ ಕೆಲ ಪ್ರಬಲ ಕಾರಣಗಳು ಇದ್ದೇ ಇವೆ". ಮೇರಿಲ್ಯಾಂಡ್‌ನ ಅನಾಪೊಲಿಸ್‌ನಲ್ಲಿ ಅರಬ್ ಮತ್ತು ಇಸ್ರೇಲ್ ನಾಯಕರೂ ಇದೇ ಪ್ರಯತ್ನದಲ್ಲಿದ್ದಾರೆ. ಆರಂಭದಲ್ಲೇ ಅಂತ್ಯದ ಭೀತಿಯಲ್ಲಿರುವ ಶಾಂತಿ ಸಮ್ಮೇಳನದಿಂದ ವಿಶೇಷ ನಿರೀಕ್ಷೆಗಳೇನೂ ಇಟ್ಟುಕೊಳ್ಳಲಾಗಿಲ್ಲ. ಆದರೂ, 7 ವರ್ಷಗಳ ಹಿಂದೆಯೇ ಮಂಗಳ ಹಾಡಲಾಗಿದೆ ಎಂದು ತಿಳಿಯಲಾಗಿದ್ದ ಇಸ್ರೇಲ್-ಅರಬ್ ಮಾತುಕತೆ ಪ್ರಕ್ರಿಯೆಗೆ ಮತ್ತೆ ಚಾಲನೆ ನೀಡಿದ ಹಿರಿಮೆ ಅಮೆರಿಕ ಅಧ್ಯಕ್ಷ ಬುಷ್ ಅವರಿಗೇ ಸಲ್ಲಬೇಕು.
ಶಾಂತಿ ಮಾತುಕತೆಯ ಘೋಷಣೆಯ ಪ್ರತಿಯನ್ನು ಬಿಡುಗಡೆ ಮಾಡಲೇ ರಂಪ-ರಾಜಿಗಳು ನಡೆದಿದ್ದವು. ಅಂತಿಮವಾಗಿ ಸ್ವತಂತ್ರ ಪ್ಯಾಲೆಸ್ತೀನ್ ಕುರಿತಂತೆ ಭವಿಷ್ಯದ ಮಾತುಕತೆಗಳಿಗೆ ಸಂಬಂಧಿಸಿದ 'ಜಂಟಿ ಒಡಂಬಡಿಕೆ' ಎಂದು ಕರೆಯಲಾಗಿರುವ ಒಪ್ಪಂದಕ್ಕೆ ಇಸ್ರೇಲ್ ಪ್ರಧಾನಿ ಎಹೂದ್ ಆಲ್ಮರ್ಟ್ ಮತ್ತು 'ಪ್ಯಾಲೆಸ್ತೀನ್ ರಾಷ್ಟ್ರೀಯ ಪ್ರಾಧಿಕಾರ'ದ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರಿಂದ ಸಹಿ ಹಾಕಿಸಿಕೊಳ್ಳುವಲ್ಲಿ ಬುಷ್ ಯಶಸ್ವಿಯಾಗಿದ್ದಾರೆ. ಆದರೆ ಪ್ರಕಟಣೆಯಲ್ಲಿ ನಿಯಮಾವಳಿಗಳಿಗಿಂತ ಹೆಚ್ಚಾಗಿ ಆಶಾವಾದಗಳೇ ತುಂಬಿರುವುದು ವಿಪರ್ಯಾಸ. ಮಾತುಕತೆಗೆ ವಿಸ್ತೃತ ರೂಪುರೇಷೆಗಳನ್ನು ಸಿದ್ಧಪಡಿಸಬೇಕು ಎಂಬ ಪ್ಯಾಲೆಸ್ತೀನ್ ಆಶಯ ಕೈಗೂಡಿಲ್ಲ. ಕಟ್ಟುನಿಟ್ಟಾದ ಅಂತಿಮ ಗಡು ವಿಧಿಸಿ ಕಾರ್ಯ ನಿರ್ವಹಿಸಲು ಇಸ್ರೇಲ್ ನಿರಾಕರಿಸಿದೆ. 2008ರ ಅಂತ್ಯದೊಳಗೆ ಒಪ್ಪಂದವನ್ನು ಅಂತಿಮಗೊಳಿಸುವ ಎಲ್ಲಾ ಪ್ರಯತ್ನಗಳನ್ನು ಮಾಡುವುದಾಗಿ ತಿಳಿಸಿ ನುಣುಚಿಕೊಳ್ಳುವ ಹಾದಿ ಹುಡುಕಿದೆ. 1967ರ ಅರಬ್- ಇಸ್ರೇಲ್ ಯುದ್ಧದ ಬಳಿಕ ಅರಬ್ ಪಾಳೆಯಗಳಾಗಿರುವ ಗೊಲಾನ್ ಹೈಟ್ಸ್, ಗಾಜಾ ಸ್ಟ್ರಿಪ್ ಮತ್ತು ವೆಸ್ಟ್ ಬ್ಯಾಂಕ್ ಮೇಲೆ ಇಸ್ರೇಲ್ ಅಕ್ರಮ ಅಧಿಪತ್ಯ ಇಂದಿಗೂ ತಡೆಯಿಲ್ಲದೆ ಮುಂದುವರೆದಿದೆ.
ಆಶಾಭಂಗವಾಗುವಂತಹ ಇನ್ನೊಂದು ವಿಷಯವೆಂದರೆ, ಇದರಲ್ಲಿ ಪ್ಯಾಲೆಸ್ತೀನ್ ವ್ಯಾಪ್ತಿಯಲ್ಲಿರುವ ಇಸ್ರೇಲಿ ಪ್ರದೇಶಗಳ ಕುರಿತ ವಿಚಾರಗಳೇ ಇಲ್ಲ. ಮತ್ತೊಂದು ಪ್ರಮುಖ ಅಂಶವಾಗಿರುವ ಪೂರ್ವ ಜೆರುಸಲೆಂ ಬಗ್ಗೆಯೂ ಚಕಾರವೆತ್ತಿಲ್ಲ. ಇದಕ್ಕೆ ಪ್ರತಿಯಾಗಿ ಪ್ಯಾಲೆಸ್ತೀನರು ತಮ್ಮ ರಾಜಧಾನಿಯನ್ನು ಬಯಸುತ್ತಿದ್ದಾರೆ ಎನ್ನುವುದು ತಿಳಿದ ವಿಷಯ. ಆಲ್ಮರ್ಟ್ ಅವರು ಕೆಲ ಪ್ರಮುಖ ವಿಷಯಗಳ ಚರ್ಚೆಗೆ ಕಾರ್ಯ ಸಮಿತಿ ರಚಿಸಲು ಸಮ್ಮತಿ ಸೂಚಿಸಿದ್ದಾರೆ ಎನ್ನುವುದೇ ಸಮಾಧಾನ ತರುವ ಅಂಶ. "ಭದ್ರತಾ ವಿಷಯದಲ್ಲಿ ರಾಜಿ ಮಾಡಿಕೊಳ್ಳುವಂತೆ ಅಮೆರಿಕ ಎಂದಿಗೂ ಇಸ್ರೇಲ್ ಮೇಲೆ ಒತ್ತಡ ಹೇರದು. ಭಯೋತ್ಪಾದನಾ ಮೂಲ ಸೌಕರ್ಯಗಳ ಮೇಲಿನ ಒತ್ತಡ ಕಡಿಮೆ ಮಾಡಿದಲ್ಲಿ ಇನ್ನೂ ಕೆಲ ಇಸ್ರೇಲಿ ಮತ್ತು ಪ್ಯಾಲೆಸ್ತೀನ್ ಹೆಣಗಳನ್ನು ನೋಡಬೇಕಾಗುತ್ತದೆ" ಎಂದು ಟಿಎಸ್‌ಐಗೆ ಪ್ರತಿಕ್ರಿಯಿಸಿದ ಪ್ರಸಿದ್ಧ ಇಸ್ರೇಲಿ ವಿಮರ್ಶಕ ಸೋಲ್ ಸಿಂಗರ್ ಅಭಿಪ್ರಾಯಪಟ್ಟಿದ್ದಾರೆ.
ಮಾತುಕತೆಯ ಮೂಲಕ ಈ ಸಂಘರ್ಷಕ್ಕೆ ಗಂಭೀರ ಪರಿಹಾರ ಹುಡುಕುವ ದೃಢ ಸಂಕಲ್ಪ ಎರಡೂ ದೇಶಗಳ ನಾಯಕರಲ್ಲಿ ಇಲ್ಲ ಎನ್ನುವುದೂ ವಿಪರ್ಯಾಸ. ಆಲ್ಮರ್ಟ್ ಅವರಿಗೆ ಇಸ್ರೇಲ್‌ನಲ್ಲಿ ಭಾರಿ ಬೆಂಬಲವೇನೂ ಇಲ್ಲ ಮತ್ತು ಮಹಮೂದ್ ಅವರ ಹಿಂದೆ ಅರ್ಧದಷ್ಟು ಪ್ಯಾಲೆಸ್ತೀನ್ ಬೆಂಬಲಿಗರೂ ಇಲ್ಲ. ನಿಜವಾದ ಬೆಂಬಲವಿರುವ ಹಮಾಸ್ ಈಗಾಗಲೇ ಈ ವಿಚಾರದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಶತ್ರುಗಳ ಜೊತೆಗೆ ಮಾತುಕತೆ ನಡೆಸಿದಲ್ಲಿ ಅದು ಬಂದೂಕು ಮತ್ತು ರಾಕೆಟ್‌ಗಳ ಮೂಲಕ ಮಾತ್ರ" ಎಂದು ಹೇಳಿದ್ದಾರೆ. ಟಿಎಸ್‌ಐ ಜೊತೆ ಮಾತನಾಡಿದ ವಾಷಿಂಗ್ಟನ್ ಮೂಲದ ಪ್ಯಾಲೆಸ್ತೀನ್ ತಜ್ಞ ಹಿಸಾಮ್ ಮೆಲಮ್ ಪ್ರಕಾರ, "ಅನಾಪೊಲಿಸ್‌ನಲ್ಲಿ ಪ್ಯಾಲೆಸ್ತೀನಿಯನ್ನರು ಮತ್ತೊಂದು ಹಿನ್ನಡೆ ಕಂಡಿದ್ದಾರೆ. ಯೋಗ್ಯ ಕಾರ್ಯನಿರ್ವಹಿಸುವ ಮತ್ತೊಂದು ಅವಕಾಶವನ್ನು ಅಮೆರಿಕ ಕಳೆದುಕೊಂಡಿದೆ. ಇದೆಲ್ಲಾ ಒಂದು ಸೋಗು ಅಷ್ಟೆ". ಅಪನಂಬಿಕೆ ಮತ್ತು ಸಂದೇಹವಾದ- ಇದೇ ಮೇರಿಲ್ಯಾಂಡ್‌ನಲ್ಲಿ ನಾವು ಪಡೆದ ನಿಜವಾದ ಯಶಸ್ಸು.
ಟಿಎಸ್‌ಐ
ಸೌರಭ್ ಕುಮಾರ್ ಶಾಹಿ
ಅಪಹರಣ: ಸಂಧಾನ
ಆದರ್ಶಗಳ ತಾಕಲಾಟ: ಬದಿಗೆ ಸರಿದ ಧ್ಯೇಯ
ವೆನೆಜುವೆಲಾ-ಕೊಲಂಬಿಯಾ ಬಿಕ್ಕಟ್ಟು ಎಫ್‌ಎಆರ್‌ಸಿಗೆ ನೀರೆರೆಯಬಹುದು
ಏಕಧ್ರುವೀಯ ವಿಶ್ವದಲ್ಲಿ ಪ್ರಜ್ಞಾವಂತ ಮತ್ತು ಜವಾಬ್ದಾರಿಯುತ ಪರ್ಯಾಯ ನಾಯಕರೆಂಬ ವೆನೆಜುವೆಲಾ ಅಧ್ಯಕ್ಷ ಹ್ಯೂಗೊ ಶಾವೆಜ್ ಅವರ ಕ್ಷಿಪ್ರ ಅಭ್ಯುದಯಕ್ಕೆ ಕೊಡಲಿಯೇಟು ಬಿದ್ದಿದೆ. ಕಳೆದ ತಿಂಗಳು ಕೊಲಂಬಿಯಾ ತೆಗೆದುಕೊಂಡ ನಿರ್ಧಾರವೊಂದು ಹ್ಯೂಗೊ ಅವರ ಸಂಧಾನ ಪ್ರಯತ್ನಗಳ ಮೇಲೆ ತಣ್ಣೀರೆರಚಿದೆ. ಹಲವು ವರ್ಷಗಳಿಂದ ಅಪಹೃತರ ಕೈಯಲ್ಲಿ ನಲುಗುತ್ತಿರುವ ೪೭ ಜನರನ್ನು ಎಫ್‌ಎಆರ್‌ಸಿ (ಕೊಲಂಬಿಯಾದ ಕ್ರಾಂತಿಕಾರಿ ಶಸಸ್ತ್ರ ಪಡೆ) ಎಂಬ ಭಯೋತ್ಪಾದನಾ ಸಂಘಟನೆಯ ಕಬಂಧ ಬಾಹುಗಳಿಂದ ಬಿಡಿಸಿಕೊಳ್ಳುವ ನಿಟ್ಟಿನಲ್ಲಿ ಸಂಧಾನ ಪ್ರಕ್ರಿಯೆಯಲ್ಲಿ ಪ್ರಮುಖ ಮಧ್ಯವರ್ತಿಯಾಗಿದ್ದವರು ಶಾವೆಜ್. ಕೊಲಂಬಿಯಾ ಅಧ್ಯಕ್ಷ ಅಲ್ವರೋ ಯುರೈಬ್ ಅವರು ಹ್ಯೂಗೊ ಅವರ ಮೇಲೆ ಹೊರಿಸಿದ ಆರೋಪದಿಂದಾಗಿ ಸಂಧಾನ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ ಹಾಗೂ ಎರಡೂ ದೇಶಗಳ ಸಂಬಂಧಕ್ಕೆ ಹುಳಿ ಹಿಂಡಿ ಬಿಟ್ಟಿದೆ.
"ಹ್ಯೂಗೊ ಅವರು ಅಪಹೃತರನ್ನು ಬಿಡುಗಡೆಗೊಳಿಸುವತ್ತ ಪ್ರಯತ್ನ ಪಡುತ್ತಿಲ್ಲ, ಬದಲಾಗಿ ಕೊಲಂಬಿಯಾದ ಎಡಪಂಥೀಯ ಪರ ಸಂಘಟನೆ ಎಫ್‌ಎಆರ್‌ಸಿ ಮೂಲಕ ತಮ್ಮ ಪ್ರಭಾವದ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವುದೇ ಅವರ ಮುಖ್ಯ ಗುರಿ" ಎಂದು ಆರೋಪಿಸಿದ್ದಾರೆ. "ಅಪಹೃತರೆಲ್ಲರನ್ನೂ ಯಾವುದೇ ಅಪಾಯವಿಲ್ಲದೆ ಬಿಡುಗಡೆ ಮಾಡುವ ಧ್ಯೇಯದೊಂದಿಗೆ ಪ್ರಸ್ತುತ ಕೆಲವರನ್ನಾದರೂ ಬಿಡುಗಡೆ ಮಾಡಲು, ಅಧ್ಯಕ್ಷ ಶಾವೆಜ್ ಮತ್ತು ಮಾನ್ಯುಲ್ ಮರುಲಂಡಾ ಅವರ ನಡುವಿನ ಸಂಧಾನ ಮಾತುಕತೆ ಕೊಲಂಬಿಯಾದ ಯಾವುದಾದರೂ ಸ್ಥಳದಲ್ಲಿ ನಡೆಯಬೇಕು ಅಥವಾ ಅಧ್ಯಕ್ಷ ಶಾವೆಜ್ ಬಯಸಿದಂತೆ ಕಗುವಾನ್ ಪ್ರದೇಶದಲ್ಲೂ ನಡೆಸಬಹುದು ಎಂದು ಅಧ್ಯಕ್ಷ ಯುರೈಬ್ ಅವರು ಸಮ್ಮತಿಸಿದ್ದರು. ಆದರೆ ಅಧ್ಯಕ್ಷ ಶಾವೆಜ್ ಅವರು ಈ ವಿಚಾರವನ್ನು ಪ್ಯಾರಿಸ್‌ನಲ್ಲಿ ಬಹಿರಂಗಗೊಳಿಸಿದಾಗ ಕೊಲಂಬಿಯಾ ಸರ್ಕಾರ ಅಚ್ಚರಿಗೆ ಒಳಗಾಗಿತ್ತು. ಏಕೆಂದರೆ ಈ ಸಂಪೂರ್ಣ ಸಂಧಾನ ಪ್ರಕ್ರಿಯೆಯನ್ನು ವಿಶ್ವಾಸಾರ್ಹವಾಗಿ, ಗೌಪ್ಯವಾಗಿ ಮುಗಿಸಬೇಕು ಎಂದು ನಿರ್ಧರಿಸಲಾಗಿತ್ತು" ಎಂದು ಕೊಲಂಬಿಯಾ ಅಧ್ಯಕ್ಷರ ಕಚೇರಿ ಹೇಳಿದೆ. ಇದಕ್ಕೆ ಶಾವೆಜ್ ಅವರು ತಮ್ಮ ಎಂದಿನ ಪ್ರಕೋಪದಲ್ಲೇ ಪ್ರತಿಕ್ರಿಯಿಸಿದರು ಮತ್ತು ತಡ ಮಾಡದೆ ಕೊಲಂಬಿಯಾ ಜೊತೆಗಿನ ಎಲ್ಲಾ ದ್ವಿಪಕ್ಷೀಯ ಮತ್ತು ಆರ್ಥಿಕ ಸಂಬಂಧವನ್ನು ಕಡಿದು ಹಾಕುವ ನಿರ್ಣಯಕ್ಕೆ ಬಂದರು.
ಜಗತ್ತಿನ ಅತೀ ಘಾತುಕ ಮತ್ತು ವ್ಯವಸ್ಥಿತ ಭಯೋತ್ಪಾದಕ ಸಂಘಟನೆ ಎಫ್‌ಎಆರ್‌ಸಿ. ತಮ್ಮ ಕಾರ್ಯಾಚರಣೆಗಳಿಗೆ ಅಗತ್ಯ ಶಸ್ತ್ರಾಸ್ತ್ರ ಮತು ಸಾಮಗ್ರಿಗಳನ್ನು ಪಡೆಯಲು ಕೊಕೇನ್ ಬೆಳೆದು ಬಂಡವಾಳ ಪಡೆದುಕೊಳ್ಳುವ ಸಂಘಟನೆ. ವರದಿಗಳ ಪ್ರಕಾರ ಎಫ್‌ಎಆರ್‌ಸಿ ಕೊಕೇನ್ ಬೆಳೆಯುವ ಪ್ರದೇಶದ ಒಟ್ಟು ವಿಸ್ತೀರ್ಣ 140,000 ಹೆಕ್ಟೇರುಗಳಿಗಿಂತಲೂ ಹೆಚ್ಚು. ಎಫ್‌ಎಆರ್‌ಸಿ ಬಳಿ ತನ್ನದೇ ಆದ ಸುವ್ಯವಸ್ಥಿತ ಸೇನೆ ಇದೆ. ಆ ಮೂಲಕ ಅದು ಕೊಲಂಬಿಯಾ ವಿರುದ್ಧ ಯುದ್ಧ ಹೂಡಿದೆ. ಸುಮಾರು ೪ ದಶಕಗಳಿಂದ ಈ ಸಮರ ನಡೆಯುತ್ತಲೇ ಇದೆ. ಎಫ್‌ಎಆರ್‌ಸಿ 47 ಅಪಹೃತರ ಬದಲಾಗಿ ಅಮೆರಿಕದಲ್ಲಿ ಕಂಬಿ ಎಣಿಸುತ್ತಿರುವ ತಮ್ಮ ಪ್ರಮುಖ ನಾಯಕರಲ್ಲೊಬ್ಬರಾದ ರಿಕಾರ್ಡೊ ಪಲ್ಮೇರಾ ಪಿನೆಡಾ ಅವರ ಬಿಡುಗಡೆ ಬಯಸಿದೆ. ಅಮೆರಿಕ ನ್ಯಾಯಾಲಯದಲ್ಲಿ ಅವರ ಮೇಲೆ ಅಪಹರಣದ ಆರೋಪ ಹೊರಿಸಲಾಗಿದೆ.
ಶಾವೆಜ್ ಅವರ ಅಸಮಧಾನಕ್ಕೆ ಮುಖ್ಯ ಕಾರಣ ಅಮೆರಿಕ ಮತ್ತು ಕೊಲಂಬಿಯಾ ಸ್ನೇಹ. ಇತ್ತೀಚೆಗೆ ಕೊಲಂಬಿಯಾ ಮುಕ್ತ ವ್ಯಾಪಾರ ಒಪ್ಪಂದಕ್ಕೂ ಸಹಿ ಹಾಕಿದ್ದು, ಅಮೆರಿಕ ಪರ ಒಲವು ತೋರಿದೆ. ಅಮೆರಿಕದಿಂದಾಗಿ ಕೊಲಂಬಿಯಾದ ಆರ್ಥಿಕ ವ್ಯವಸ್ಥೆ ಚೇತರಿಸಿಕೊಳ್ಳುತ್ತಿದೆ. ಶಾವೆಜ್ ಮತ್ತು ಸಂಧಾನ ಪ್ರಕ್ರಿಯೆಗೆ ಸಂಬಂಧ ಪಟ್ಟ ರಾಷ್ಟ್ರಗಳು ವಿವೇಚನೆಯಿಂದ ಕಾರ್ಯವೆಸಗಬೇಕು. ವೈಮನಸ್ಯ, ತಪ್ಪು ತಿಳಿವಳಿಕೆಗಳು ಹಾಗೂ ಆದರ್ಶಗಳಲ್ಲಿನ ಭಿನ್ನಾಭಿಪ್ರಾಯಗಳು ಎಫ್‌ಎಆರ್‌ಸಿಯಂತಹ ಸಂಸ್ಥೆಯನ್ನು ಇನ್ನೂ ಪ್ರಬಲವಾಗಿ ಬೆಳೆಸಬಹುದು.
ಟಿಎಸ್‌ಐ
ಪಥಿಕೃತ್ ಪಾಯ್ನೆ
ಪರಮಾಣು: ಮಾರಾಟ
ವೃದ್ಧಿಸುತ್ತಿರುವ ಪರಮಾಣು ಕಳ್ಳಸಾಗಣೆ ಪ್ರಕರಣ
ಪರಮಾಣು ಪ್ರಭುತ್ವ ವ್ಯಾಪ್ತಿ ವಿಸ್ತಾರವಾಗುತ್ತಿರುವ ಕಳವಳ
ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಪರಮಾಣು ಕಳ್ಳಸಾಗಣೆ ಅಪಾಯದ ಕುರಿತು ತೀವ್ರ ಕಳವಳ ವ್ಯಕ್ತವಾಗಿದೆ. ಕಾರಣ? ಹಂಗೇರಿ ಪೊಲೀಸರ ಜೊತೆಗಿನ ಜಂಟಿ ಕಾರ್ಯಾಚರಣೆಯಲ್ಲಿ ಸ್ಲೊವೇಕಿಯಾ ಪೊಲೀಸರು ಪರಮಾಣು ಕಳ್ಳತನದ ಆರೋಪದ ಮೇಲೆ ಸ್ಲೊವೇಕಿಯಾ ಮತ್ತು ಹಂಗೇರಿಯಲ್ಲಿ ಮೂವರನ್ನು ಬಂಧಿಸಿರುವುದು. ಒಂದು ಕಿ.ಗ್ರಾಂ ವಿಕಿರಣಶೀಲ ಪದಾರ್ಥಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಅವರನ್ನು ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಪರಮಾಣು ಕಳ್ಳತನದ ಅಪಾಯದ ಛಾಯೆ ಕವಿದಿದೆ. ಪೊಲೀಸ್ ಅಧಿಕಾರಿಗಳು ವಿಕಿರಣಶೀಲ ಪದಾರ್ಥಗಳ ವಿವರಗಳನ್ನು ಹೊರಗೆಡವಲು ನಿರಾಕರಿಸಿದ್ದು, ಅವನ್ನು ಪರಿವೀಕ್ಷಣೆಗೆ ಕಳುಹಿಸಲಾಗಿದೆ ಎಂದಿದ್ದಾರೆ.
ಹಿಂದಿನ ಸೋವಿಯತ್ ಒಕ್ಕೂಟದ ದೇಶಗಳಾದ, ಮುಖ್ಯವಾಗಿ ರಷ್ಯಾ ಅಥವಾ ಉಕ್ರೇನ್‌ನಿಂದ ಈ ಪದಾರ್ಥಗಳನ್ನು ಕಳ್ಳಸಾಗಣೆ ಮಾಡಲಾಗಿದೆ ಎಂದು ಕಾರ್ಯಾಚರಣೆ ಸಂದರ್ಭ ತಿಳಿದುಬಂದಿದೆ. ಬಂಧಿತರು ಈ ಪರಮಾಣು ಘಟಕಗಳನ್ನು ಸುಮಾರು 1 ದಶಲಕ್ಷ ಡಾಲರ್‌ಗಳಿಗೆ ಮಾರಾಟ ಮಾಡುವ ಪ್ರಯತ್ನದಲ್ಲಿದ್ದರು.
ಕಳ್ಳಸಾಗಣೆದಾರರನ್ನು ಬಂಧಿಸುವ ಮುನ್ನ ಹಲವು ತಿಂಗಳುಗಳಿಂದ ಸ್ಲೊವೇಕಿಯಾ ಮತ್ತು ಹಂಗೇರಿಯ ಗುಪ್ತಚರರು ಅವರ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿದ್ದರು ಎಂದು ಸ್ಲೊವೇಕಿಯಾ ಅಧಿಕಾರಿಗಳು ತಿಳಿಸಿದ್ದಾರೆ. ಕಳ್ಳಸಾಗಣೆದಾರರನ್ನು ಪೂರ್ವ ಸ್ಲೊವೇಕಿಯಾ ಮತ್ತು ಪೂರ್ವ ಹಂಗೇರಿಯಲ್ಲಿ ಬಂಧಿಸಲಾಗಿದೆ. ಈ ಪ್ರದೇಶಗಳು ಉಕ್ರೇನ್‌ನ ಗಡಿಭಾಗದಲ್ಲಿವೆ ಎಂಬುದನ್ನು ಗಮನಿಸಲೇಬೇಕು. ಪೂರ್ವ ಸ್ಲೊವೇಕಿಯಾದ ಉಕ್ರೇನ್ ಗಡಿಭಾಗ ಯುರೋಪಿಯನ್ ಒಕ್ಕೂಟದ ಪೂರ್ವದಂಚಿನಲ್ಲಿರುವ ಪ್ರದೇಶ. ಕಳೆದ ಕೆಲ ವರ್ಷಗಳಲ್ಲಿ ಅಧಿಕಾರಿಗಳು ಇಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲು ಲಕ್ಷಾಂತರ ವೆಚ್ಚ ಮಾಡಿದ್ದಾರೆ. ಹಾಗೆಂದು, ಇಂತಹ ಬಂಧನ ಪ್ರಕರಣಗಳು ಇದೇ ಮೊದಲೇನಲ್ಲ. 1997ರಲ್ಲಿ, ಕಜಕ್‌ಸ್ಥಾನ್‌ನಲ್ಲಿರುವ ಪರಮಾಣು ಸ್ಥಾವರದಿಂದ 11 ಪೌಂಡ್‌ಗಳಷ್ಟು ಅಭಿವೃದ್ಧಿಪಡಿಸಿದ ಯುರೇನಿಯಂ ಕಳ್ಳತನ ಮಾಡಿ ಪಾಕಿಸ್ತಾನ ಮತ್ತು ಚೀನಾಕ್ಕೆ ಮಾರಾಟ ಮಾಡುವ ಪ್ರಯತ್ನದಲ್ಲಿದ್ದ ಆರೋಪದ ಮೇಲೆ ಇಬ್ಬರನ್ನು ರಷ್ಯಾದ ನೊವೊಸಿಬಿರ್ಸ್ಕ್‌ನಲ್ಲಿ ಬಂಧಿಸಲಾಗಿತ್ತು.
"ಎರಡು ಪೌಂಡ್‌ಗಳಷ್ಟು ಯುರೇನಿಯಂ ಕಳ್ಳತನವಾದ ಕೂಡಲೇ ಗಂಡಾಂತರ ಕಾದಿದೆ ಎನ್ನಲಾಗದು. ಆದರೆ ಈ ಪರಮಾಣು ಘಟಕಗಳನ್ನು ಕೆಲವು ವ್ಯಕ್ತಿಗಳು ಸ್ವಾಧೀನಪಡಿಸಿಕೊಳ್ಳುವುದು ಕಳವಳಕಾರಿಯೇ. ಇಂದಿಗೂ ಕೆಲ ವ್ಯಕ್ತಿಗಳು ಅಲ್ಪ ಪ್ರಮಾಣದಲ್ಲಿ ಯುರೇನಿಯಂ ಅನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ ಎನ್ನುವುದೇ ನಮ್ಮೆದುರಿರುವ ಬಹುದೊಡ್ಡ ಅಪಾಯ" ಎನ್ನುತ್ತಾರೆ ಈ ಬಗ್ಗೆ ಟಿಎಸ್‌ಐ ಜೊತೆ ಮಾತನಾಡಿದ 'ಅಂತರ್ ರಾಷ್ಟ್ರೀಯ ಭದ್ರತಾ ಮತ್ತು ಸಹಕಾರ ಕೇಂದ್ರ'ದ ಪರಮಾಣು ಪ್ರಸರಣ ತಡೆ ತಜ್ಞ ಪಾವೆಲ್ ಪಡ್ವಿಗ್.
ಅವರದು ಯಥಾರ್ಥ ಕಳವಳ. ಅನೇಕ ಗುಪ್ತಚರ ಸಂಸ್ಥೆಗಳು ಪ್ರಕಟಿಸಿದ ವರದಿಯಲ್ಲಿ ಪರಮಾಣು ಪ್ರಭುತ್ವದ ವ್ಯಾಪ್ತಿ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತವಾಗಿದೆ. ಅಂತರ್ ರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆ ಆಗಸ್ಟ್‌ನಲ್ಲಿ ಪ್ರಕಟಿಸಿದ ವರದಿಯ ಪ್ರಕಾರ, 2006ರಲ್ಲಿ ವಿಶ್ವದಾದ್ಯಂತ ಪರಮಾಣು ಕಳ್ಳತನ ಮತ್ತು ನಷ್ಟವಾಗಿರುವ 250 ಪ್ರಕರಣಗಳು ದಾಖಲಾಗಿವೆ. ದಾಖಲೆಗಳ ಪ್ರಕಾರ 2002ರ ನಂತರ ಕಳ್ಳತನದ ಪ್ರಮಾಣ ಶೇ.200ರಷ್ಟು ವೃದ್ಧಿಯಾಗಿದೆ.
ಟಿಎಸ್‌ಐ
ಸೌರಭ್ ಕುಮಾರ್ ಶಾಹಿ