ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
 
ಪತ್ರ ಚರಿತ್ರೆ
ವಿಲ್ಬರ್ ರೈಟ್ ಬರೆದ ಪತ್ರ
 

ಜಗತ್ತಿನ ಮೊಟ್ಟ ಮೊದಲ ವಿಮಾನ ಕಂಡುಹಿಡಿದವರು ವಿಲ್ಬರ್ ರೈಟ್ ಮತ್ತು ಆರ್ವಿಲ್ ರೈಟ್ ಸಹೋದರರು. ಸೈಕಲ್ ಮಾರಾಟ ಮತ್ತು ರಿಪೇರಿ ಮೂಲಕ ರೈಟ್ ಸಹೋದರರು ತಮ್ಮ ವೃತ್ತಿ ಬದುಕು ಆರಂಭಿಸಿದ್ದರು. ಸೈಕಲ್ ಉದ್ಯಮ ಯಶಸ್ಸಿನಿಂದ ಅವರ ವೈಮಾನಿಕ ಪ್ರಯೋಗಗಳಿಗೆ ಬಂಡವಾಳ ಸಿಕ್ಕಿತು. ಮೊದಲ ಹೆಜ್ಜೆಗಳಿಗೆ ಸೈಕಲ್ ಉದ್ಯಮದಿಂದ ಸಿಗುತ್ತಿದ್ದ ಲಾಭ ಆಧಾರವಾಯಿತು. ಇದೇ ಸಮಯದಲ್ಲಿ ವಿಲ್ಬರ್ ಈ ಪತ್ರವನ್ನು 'ದ ಸ್ಮಿತ್‌ಸೋನಿಯನ್ ಇನ್‌ಸ್ಟಿಟ್ಯೂಷನ್'ಗೆ ಬರೆದರು. ಅದು ಜಗತ್ತಿನಾದ್ಯಂತ ೧೯ ವಸ್ತು ಸಂಗ್ರಹಾಲಯಗಳು ಮತ್ತು 9 ಸಂಶೋಧನಾ ಕೇಂದ್ರಗಳನ್ನೊಳಗೊಂಡ ಬೃಹತ್ ಸಂಸ್ಥೆಯಾಗಿತ್ತು. ಮೊದಲ ವಿಮಾನದ ಕುರಿತ ಅವರ ಸಂಶೋಧನೆಗಳ ಬಗ್ಗೆ ಈ ಪತ್ರ ವಿವರಿಸುತ್ತದೆ. ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದರೂ ಅವರಲ್ಲಿದ್ದ ಸಾಧನೆಯ ಛಲ ಈ ಪತ್ರದಲ್ಲಿ ಕಾಣುತ್ತದೆ.

ದ ಸ್ಮಿತ್‌ಸೋನಿಯನ್ ಇನ್‌ಸ್ಟಿಟ್ಯೂಷನ್, ವಾಷಿಂಗ್ಟನ್:

ಮಾನ್ಯರೇ,
ಯಂತ್ರ ಮತ್ತು ಮಾನವ ಹಾರಾಟ ಸಮಸ್ಯೆಯ ಬಗ್ಗೆ ಚಿಕ್ಕಂದಿನಿಂದಲೂ ನನಗೆ ಅಪಾರ ಆಸಕ್ತಿ. ಕೇಲಿ ಮತ್ತು ಪೀನಾಡ್ ಅವರ ಯಂತ್ರ ಮಾದರಿಯಲ್ಲಿ ಹಲವು ಗಾತ್ರದ, ಗಾಳಿಯಲ್ಲಿ ಹಾರಾಟ ನಡೆಸಬಲ್ಲಂತಹ ವಿವಿಧ ಹಾರುವ ಯಂತ್ರಗಳ ಮಾದರಿಗಳನ್ನು ನಾನು ಬಾಲ್ಯದಲ್ಲಿ ತಯಾರಿಸುತ್ತಿದ್ದೆ. ಅಂದಿನಿಂದ ಇಂದಿನವರೆಗಿನ ನನ್ನ ಅನುಭವಗಳು ಮತ್ತು ಅವಲೋಕನಗಳು ನನಗೆ ಒಂದು ವಿಷಯವನ್ನು ಸ್ಪಷ್ಟವಾಗಿ ಹೇಳಿವೆ- ಮಾನವ ಹಾರಾಟ ಸಾಧ್ಯ! ಅದ್ಭುತ ಚಮತ್ಕಾರಗಳನ್ನು ಸಾಧಿಸಲು ಬೇಕಾದ ಜ್ಞಾನ ಮತ್ತು ನೈಪುಣ್ಯ ಇಲ್ಲೂ ಇರಬೇಕು ಅಷ್ಟೇ.
ಪಕ್ಷಿಗಳು ಭೂಮಿಯಲ್ಲಿರುವಂಥ ಎಲ್ಲಾ ಜೀವಿಗಳಿಗಿಂತಲೂ ಉತ್ತಮ ಮತ್ತು ಸಮರ್ಥ ವ್ಯಾಯಾಮಪಟುಗಳು. ಕಾರ್ಯಕ್ಕೆ ತಕ್ಕ ಕಾಯ ಅವುಗಳದು. ಇದೇ ಕಾರಣಕ್ಕೆ ನಾವು ಮಾನವರು ಅವುಗಳ ಸಮಕ್ಕೆ ಬರಲಾರೆವು. ಪಕ್ಷಿಯೊಂದು ಹುಳವನ್ನೋ ಅಥವಾ ಇನ್ನೊಂದು ಪಕ್ಷಿಯನ್ನೋ ಬೇಟೆಯಾಡುವಾಗ ಅದರ ಸಾಮರ್ಥ್ಯ ಸಾಮಾನ್ಯ ಹಾರಾಟಕ್ಕಿಂತ ಮೂರು ಅಥವಾ ನಾಲ್ಕು ಪಟ್ಟು ಹೆಚ್ಚಿದೆ ಎಂಬ ಬಗ್ಗೆ ಯಾರೂ ಅನುಮಾನ ತಾಳಲಾರರು. ಒಂದು ಸರಳ ಹಾರಾಟ ನಡೆಸುವ ಸಾಮರ್ಥ್ಯ ಖಂಡಿತಾ ಮಾನವನಲ್ಲಿದೆ ಎಂಬುದನ್ನು ನಾನು ಬಲವಾಗಿ ನಂಬುತ್ತೇನೆ. ಮಾಹಿತಿ ಸಂಗ್ರಹ, ವಿಷಯ ಜ್ಞಾನ, ನಿಪುಣತೆ ಇವೆಲ್ಲವನ್ನೂ ಕಲೆ ಹಾಕಲು ಹಲವಾರು ಜನರ ಸಂಶೋಧನೆ- ಪ್ರಯೋಗಗಳು ಅತೀ ಅವಶ್ಯಕ. ಇವೆಲ್ಲವೂ ಒಟ್ಟುಗೂಡಿದರೆ ಮಾನವ ಹಾರಾಟದ ಕನಸು ನನಸಾಗಬಹುದು. ಆಪಲ್‌ಟನ್ ಮತ್ತು ಇತರ ಹಲವು ಪತ್ರಿಕೆಗಳು ಪ್ರಕಟಿಸಿದ ಮೇರಿ ಹಾಗೂ ಜೇಮಿಸನ್ ಅವರ ಬರಹಗಳು ಮತ್ತು ಇತರ ವ್ಯಾಪಕ ಮಾಹಿತಿಗಳಿರುವ ಲೇಖನಗಳಿಂದ ನಾನು ನನ್ನ ಅಧ್ಯಯನಗಳ ಬಗೆಗಿನ ವಿಷಯವನ್ನು ಕಲೆಹಾಕಿದೆ. ಪ್ರಾಯೋಗಿಕವಾಗಿ ಇವುಗಳನ್ನು ಕಾರ್ಯಗತಗೊಳಿಸುವಂಥ ವ್ಯವಸ್ಥಿತ ಅಧ್ಯಯನ ಮಾಡಬೇಕಾಗಿದೆ. ಇದಕ್ಕೋಸ್ಕರ ನಾನು ಸಾಮಾನ್ಯವಾಗಿ ನನ್ನ ನಿತ್ಯ ಕಾರ್ಯಗಳಿಂದ ಮೀಸಲಿಡುತ್ತಿದ್ದ ಸಮಯವನ್ನು ವ್ಯಯಮಾಡಲು ಸಿದ್ಧ. ಈ ವಿಷಯದ ಬಗ್ಗೆ 'ದ ಸ್ಮಿತ್‌ಸೋನಿಯನ್ ಇನ್‌ಸ್ಟಿಟ್ಯೂಷನ್' ಪ್ರಕಟಿಸಿರುವ ಲೇಖನಗಳು ಮತ್ತು ಸಾಧ್ಯವಾದರೆ ಇತರೆಡೆಗಳಿಂದ ಲಭಿಸಿರುವ ಮಾಹಿತಿಗಳನ್ನೂ ಆಂಗ್ಲ ಮುದ್ರಣದಲ್ಲಿ ನನಗೆ ಕಳುಹಿಸಿಕೊಡಬೇಕಾಗಿ ಕೇಳಿಕೊಳ್ಳುತ್ತೇನೆ. ಆಸಕ್ತಿಯಿದ್ದರೂ ಈ ವಿಷಯದಲ್ಲಿ ನಾನು ಪರಿಪಕ್ವನಲ್ಲ. ಪರಿಪೂರ್ಣವಾದ ಹಾರುವ ಯಂತ್ರವೊಂದರ ತಯಾರಿಗೆ ನನ್ನಲ್ಲಿ ಕೆಲ ಸಿದ್ಧಾಂತಗಳಿವೆ. ಪ್ರಸ್ತುತ ಈ ವಿಷಯದ ಬಗ್ಗೆ ಈಗಾಗಲೇ ಇರುವ ಎಲ್ಲಾ ಜ್ಞಾನಗಳನ್ನೂ ನಾನು ಪಡೆಯಬಯಸುತ್ತೇನೆ. ಆ ಮೂಲಕ ಅಂತಿಮ ಯಶಸ್ಸಿಗೆ ಕಾರಣರಾಗುವ ಭವಿಷ್ಯದ ಕಾರ್ಯಪಡೆಗೆ ನೆರವಾಗುವ ಇಚ್ಛೆ ನನ್ನದು. ಯಾವೆಲ್ಲಾ ನಿರ್ಬಂಧಗಳ ಮೇಲೆ ತಾವು ಮಾಹಿತಿಗಳನ್ನು ನನಗೆ ಕಳುಹಿಸುವಿರೋ ಗೊತ್ತಿಲ್ಲ. ಆದರೆ ಅವುಗಳ ಬೆಲೆಯನ್ನು ತಿಳಿಸಿದರೆ ನಾನು ಪಾವತಿಸುತ್ತೇನೆ.

ನಿಮ್ಮ ವಿಶ್ವಾಸಿ,
ವಿಲ್ಬರ್ ರೈಟ್
ರೈಟ್ ಸೈಕಲ್ ಕಂಪನಿ
1127, ಪಶ್ಚಿಮ ಮೂರನೇ ರಸ್ತೆ,
ಡೇಟನ್, ಒಹಿಯೋ.
ಮೇ 30, 1899

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .