ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ದೇಸಿ ದನಿ
 
 

ಸಮಸ್ಯೆ: ವರದಕ್ಷಿಣೆ

ಹಣ ಸಂಪಾದನೆಗೆ ಸರಳ ವಿಧಾನ

ಈಶಾನ್ಯ ಭಾರತದಲ್ಲಿ ಹೆಚ್ಚುತ್ತಿರುವ ವರದಕ್ಷಿಣೆ ಸಾವು ಪ್ರಕರಣ

ಒಂದು ಕಾಲದಲ್ಲಿ ಅಸ್ಸಾಂ ರಾಜ್ಯದಲ್ಲಿ ವಿಶಿಷ್ಟ ಪರಂಪರೆಯೊಂದಿತ್ತು. 'ಗಾ-ಧನ್' ವಿವಾಹ ಪದ್ಧತಿ! 'ಗಾ-ಧನ್' ಶಬ್ದವನ್ನು ಅಕ್ಷರಶಃ ಭಾಷಾಂತರಿಸಿದರೆ 'ದೇಹಕ್ಕೆ ಹಣ' ಎಂಬ ಅರ್ಥ ಬರುತ್ತದೆ. ಬಹಳಷ್ಟು ವರ್ಷಗಳ ಹಿಂದೆ ಅಸ್ಸಾಂ ಸಮುದಾಯದಲ್ಲಿ ಹಾಸುಹೊಕ್ಕಾಗಿದ್ದ ಈ ಪದ್ಧತಿ 'ವರದಕ್ಷಿಣೆ' ಪದ್ಧತಿಗೆ ತದ್ವಿರುದ್ಧ, ಅರ್ಥಾತ್ 'ವಧುದಕ್ಷಿಣೆ'. ಸ್ತ್ರೀಯನ್ನು ತವರು ಮನೆಯಿಂದ ಶಾಶ್ವತವಾಗಿ ಬೇರೆಡೆ ಕರೆದೊಯ್ಯುತ್ತಿರುವುದಕ್ಕೆ ವಧುವಿನ ಕುಟುಂಬದವರಿಗೆ ವರನ ಕಡೆಯವರು ಇಂತಿಷ್ಟು ಹಣ ನೀಡುವುದೇ 'ಗಾ-ಧನ್'. ಇದು ಅಸ್ಸಾಂ ಸಮುದಾಯದ ಸ್ತ್ರೀಯರಿಗೆ ನೀಡುವ ಸಾಂಕೇತಿಕ ಗೌರವವೂ ಹೌದು. ತವರು ಮನೆಯಿಂದ ಗೌರವಪೂರ್ವಕವಾಗಿ ಹೆಣ್ಣನ್ನು ಪತಿಯ ಮನೆಗೆ ಬರಮಾಡಿಕೊಳ್ಳುವ ರೀತಿಯೂ ಹೌದು. ಆದರೆ ಈಗ ಅವಲ್ಲ ಮುಗಿದುಹೋದ ಅಧ್ಯಾಯಗಳು. ಅಂದು-ಇಂದಿನ ಪರಿಸ್ಥಿತಿಗಳಿಗೆ ಅಜಗಜಾಂತರ ವ್ಯತ್ಯಾಸವಿದೆ. ಭಾರತದ ಈಶಾನ್ಯ ಭಾಗಕ್ಕೆ ವರದಕ್ಷಿಣೆ ವಿಷಯದಲ್ಲಿ 'ದೇಶದ ಹೃದಯಭಾಗ' ಎಂಬ ಆಪಾದನೆ ಬಂದಿದೆ. ಈಶಾನ್ಯ ರಾಜ್ಯಗಳಲ್ಲಿ ಒಂದಾದ ಅಸ್ಸಾಂನಲ್ಲಿ ಕಳೆದ ಎರಡು ವರ್ಷಗಳಿಂದ ವರದಕ್ಷಿಣೆ ಸಾವುಗಳು ಹೆಚ್ಚಾಗುತ್ತಿದ್ದು, 160 ಸ್ತ್ರೀಯರು ಬಲಿಯಾಗಿದ್ದಾರೆ. ಶೋಷಿತ ಸ್ತ್ರೀಯರ ಸಂಖ್ಯೆ 4000ಕ್ಕೇರಿದೆ.
"ಇದು ನಮ್ಮ ಸಮಾಜದ ಬದಲಾದ ಜೀವನಶೈಲಿಯ ಪರಿಣಾಮ" ಎನ್ನುತ್ತಾರೆ ಅಸ್ಸಾಂ ಪೊಲೀಸ್ ಮಹಾನಿರ್ದೇಶಕ (ಅಪರಾಧ ತನಿಖೆ) ದಿಲೀಪ್ ಬೋರಾ. ಇಲ್ಲಿನ ಜನರ ಆರ್ಥಿಕ ಪರಿಸ್ಥಿತಿ ಇನ್ನೂ ಹದಗೆಟ್ಟಾಗ ಈ ಸನ್ನಿವೇಶ ಮತ್ತೂ ದುರವಸ್ಥೆಗೆ ತಲುಪಬಹುದು ಎನ್ನಲಾಗಿದೆ. ಆರ್ಥಿಕವಾಗಿ ಅತೀ ಹಿಂದುಳಿದ ಪ್ರದೇಶವಾದ ಅಸ್ಸಾಂನಲ್ಲಿ ಜನರು ಹಣ ಸಂಪಾದನೆಯ ಸರಳ ವಿಧಾನಗಳನ್ನು ಅನುಸರಿಸಿದಲ್ಲಿ ಅಚ್ಚರಿ ಪಡಬೇಕಾಗಿಲ್ಲ ಬಿಡಿ.
ಇಲ್ಲಿ ನಡೆಯುತ್ತಿರುವುದನ್ನೆಲ್ಲಾ ಕೇವಲ ಅಂಕಿ- ಅಂಶಗಳೇ ಬಿಡಿಸಿ ಹೇಳುತ್ತವೆ. ೧೯೯೪ರಲ್ಲಿ ಅಸ್ಸಾಂನಲ್ಲಿ ನಡೆದಿರುವ ವರದಕ್ಷಿಣೆ ಪ್ರಕರಣಗಳು 13 (ಉತ್ತರಪ್ರದೇಶದ 1977ಕ್ಕೆ ಹೋಲಿಸಿದಾಗ). ನಾಗಾಲ್ಯಾಂಡ್‌ನಲ್ಲಿ 2 ಪ್ರಕರಣಗಳು ಪತ್ತೆಯಾದರೆ, ತ್ರಿಪುರದಲ್ಲಿ ಇಂಥ ಆರು ಪ್ರಕರಣಗಳಾಗಿವೆ. ದೇಶದ ಇತರ ಭಾಗಗಳಂತೆಯೇ ಇಲ್ಲೂ ಆರ್ಥಿಕ ಪೈಪೋಟಿ ಆರಂಭವಾದಂತೆ ಈ ಅಂಕಿ-ಅಂಶಗಳಲ್ಲಿ ಬದಲಾವಣೆ ಕಾಣಬಹುದು. "ವರದಕ್ಷಿಣೆ ಸಾವಿಗೆ ಬಡತನವೊಂದೇ ಪ್ರಮುಖ ಕಾರಣವಲ್ಲ. ಇಂದಿನ ಯುವಜನತೆಯಲ್ಲಿ ಜೀವನವನ್ನು ಎದುರಿಸುವ ಮತ್ತು ನಿಭಾಯಿಸಲು ಅಗತ್ಯವಾದ ಮಾನಸಿಕ ತಯಾರಿಯ ಕೊರತೆಯೇ ಮುಖ್ಯ ಕಾರಣ" ಎನ್ನುತ್ತಾರೆ ಗುವಾಹಟಿ ಹೈಕೋರ್ಟ್ ವಕೀಲರು ಮತ್ತು ಎಪಿಸಿಸಿ ಕಾನೂನು ವಿಭಾಗದ ಅಧ್ಯಕ್ಷೆ ಮಂಜುಶ್ರೀ ಪಾಠಕ್.
ವಿಪರ್ಯಾಸವೇನೆಂದರೆ, ಇತ್ತೀಚಿನ ದಿನಗಳಲ್ಲಿ ಈ ಕಂದಾಚಾರ ಮೇಘಾಲಯ ಮತ್ತು ಮಿಜೋರಾಂಗಳಿಗೂ ಹರಡುತ್ತಿದೆ. ಹಿಂದೆಲ್ಲ ಇಲ್ಲಿ ವರದಕ್ಷಿಣೆ ದೌರ್ಜನ್ಯದ ಮಾತೇ ಇರಲಿಲ್ಲ. ಈ ಪ್ರದೇಶಗಳಲ್ಲಿ ಸ್ತ್ರೀಯರನ್ನು ಅತ್ಯಂತ ಗೌರವದಿಂದ ಕಾಣಲಾಗುತ್ತಿತ್ತು. ಇಂದಿಗೂ ಅಲ್ಲಿಯ ಜನರು ಪುರಾತನವಾದ, ತಾವು ಸ್ತ್ರೀಯರನ್ನು ಗೌರವಿಸುತ್ತಿದ್ದ ಪರಂಪರಾಗತ ರೀತಿ-ರಿವಾಜುಗಳೇ ಪ್ರಸ್ತುತ ಎದುರಾಗಿರುವ ಸಮಸ್ಯೆಗಳಿಂದ ಸ್ತ್ರೀಯರನ್ನು ರಕ್ಷಿಸಬಹುದೆಂಬ ಆಶಾವಾದ ಹೊಂದಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ಸ್ತ್ರೀಯರನ್ನು ಕಾಪಾಡುತ್ತದೆ ಎನ್ನುವುದು ಮಾತ್ರ ಪ್ರಶ್ನೆಯಾಗಿಯೇ ಉಳಿದಿದೆ. "ಬುಡಕಟ್ಟು ಜನಾಂಗಗಳಲ್ಲಿ ಈವರೆಗೆ ಇಂತಹ ಸಮಸ್ಯೆಗಳು ಕಾಡಿಲ್ಲ" ಎನ್ನುತ್ತಾರೆ ತ್ರಿಪುರ ಮಾಜಿ ಪೊಲೀಸ್ ಮಹಾನಿರ್ದೇಶಕ ಜಿ.ಎಂ. ಶ್ರೀವಾಸ್ತವ್. "ಈಗ ನಿಜವಾಗಿಯೂ ಸಮಸ್ಯೆ ಆವರಿಸಿರುವುದು ಇಂತಹ ಪ್ರದೇಶಗಳಿಗೆ ವಲಸೆ ಬಂದಿರುವ ಜನರಲ್ಲಿ" ಎನ್ನುವುದು ಅವರ ಅಭಿಮತ. ಹೀಗಿದ್ದರೂ ರಾಷ್ಟ್ರೀಯ ಅಪರಾಧ ದಾಖಲೆಗಳ ಕಾರ್ಯಾಲಯ 2005ರಲ್ಲಿ ತ್ರಿಪುರದಲ್ಲಿ ಮಹಿಳಾ ದೌರ್ಜನ್ಯದ 840 ಪ್ರಕರಣಗಳನ್ನು ದಾಖಲಿಸಿದೆ. ಇದರಲ್ಲಿ 162 ಅತ್ಯಾಚಾರ ಪ್ರಕರಣಗಳು, 161 ಹಲ್ಲೆ, 43ಅಪಹರಣಗಳು, 34 ವರದಕ್ಷಿಣೆ ಪ್ರಕರಣಗಳು ಹಾಗೂ ಪತಿ-ಕುಟುಂಬವರ್ಗ ಮತ್ತು ಇನ್ನಿತರರಿಂದ ದೌರ್ಜನ್ಯಕ್ಕೆ ಒಳಗಾದ ಸ್ತ್ರೀಯರ ಸಂಖ್ಯೆ ೪೩೯. ಈ ಪ್ರಕರಣಗಳಲ್ಲಿ ಯಾವ ಸಮುದಾಯಗಳ ಪಾತ್ರವಿದೆ ಎನ್ನುವುದು ತಿಳಿದಿಲ್ಲ. ಆದರೆ ಹಿಂದಿನಂತೆ ದೇಶದ ಈಶಾನ್ಯ ಭಾಗಗಳಲ್ಲಿ ಸ್ತ್ರೀಯರನ್ನು ಗೌರವದಿಂದ ಕಾಣಲಾಗುತ್ತಿಲ್ಲ ಎಂಬುದು ಮಾತ್ರ ಸತ್ಯ.

ಟಿಎಸ್‌ಐ

ಸಂದೀಪ್ ಶರ್ಮ

ಸಮಸ್ಯೆ: ಕಳ್ಳಸಾಗಣೆ

ಕೇರಳದತ್ತ ಎಲ್‌ಟಿಟಿಇ ಕಣ್ಣು

ಕರಾವಳಿಯಲ್ಲಿ ಶಸ್ತ್ರಾಸ್ತ್ರ ಮತ್ತು ಮಾದಕ ವಸ್ತುಗಳ ಕಳ್ಳಸಾಗಣೆ

ನೌಕಾಪಡೆಯ ಉನ್ನತ ಅಧಿಕಾರಿಯೊಬ್ಬರ ಅಭಿಮತವನ್ನು ನಾವು ನಂಬಬಹುದಾದಲ್ಲಿ ಕೇರಳ ರಾಜ್ಯ ಇದೀಗ ತೀರ ಸಂಕಷ್ಟದಲ್ಲಿದೆ. ಎಲ್‌ಟಿಟಿಇ ಕೇರಳದತ್ತ ಕಣ್ಣಿಟ್ಟಿರುವುದು ಖಚಿತವಾಗಿದೆ. "ನೌಕಾಪಡೆ, ಕರಾವಳಿ ಭದ್ರತಾ ಸಿಬ್ಬಂದಿ ತಮಿಳುನಾಡಿನುದ್ದಕ್ಕೂ ತೀವ್ರ ನಿಗಾ ಇಟ್ಟಿರುವುದರಿಂದ ಎಲ್‌ಟಿಟಿಇ ಕೇರಳ ಕರಾವಳಿಯತ್ತ ಮುಖ ಮಾಡಿದೆ" ಎನ್ನುತ್ತಾರೆ ದಕ್ಷಿಣ ನೌಕಾಪಡೆಯ ಮುಖ್ಯಸ್ಥ ವೈಸ್ ಅಡ್ಮಿರಲ್ ಸುನಿಲ್ ಕೆ. ದಾಮ್ಲೆ. ಶ್ರೀಲಂಕಾ ಮತ್ತು ಭಾರತೀಯ ನೌಕಾಪಡೆ ತಮಿಳುನಾಡು ಕರಾವಳಿಯಲ್ಲಿ ಬಿಗಿ ಪಹರೆ ಹಾಕಿರುವುದರಿಂದ ಈ ತಂಡ ಕೇರಳವನ್ನು ಗುರಿಯಾಗಿರಿಸಿಕೊಂಡಿದೆ ಎನ್ನುತ್ತಾರವರು.
"ಶ್ರೀಲಂಕಾ ತೀವ್ರವಾದಿಗಳ ತಂಡ ಶಸ್ತ್ರಾಸ್ತ್ರ, ಯುದ್ಧಸಾಮಾಗ್ರಿಗಳು ಮತ್ತು ಮಾದಕ ವಸ್ತುಗಳ ಕಳ್ಳಸಾಗಣೆ ದಂಧಗೆ ಕೇರಳ ಕರಾವಳಿಯನ್ನು ಬಳಸಿಕೊಳ್ಳುತ್ತಿದೆ. ಇತರ ಉಗ್ರವಾದಿ ತಂಡಗಳೂ ಮಲಬಾರ್ ತೀರವನ್ನು ಆರ್‌ಡಿಎಕ್ಸ್ ಇಳಿಸಲು ಬಳಸಿಕೊಳ್ಳಬಹುದೆಂಬ ಅನುಮಾನವಿದೆ. ಹಿಂದೆ ಕೊಂಕಣ ಕರಾವಳಿ ಮೂಲಕ ಆರ್‌ಡಿಎಕ್ಸ್ ಸಾಗಿಲಾಗುತ್ತಿದ್ದು, ಈಗ ಮಲಬಾರ್ ಮೂಲಕ ಈ ದಂಧೆಯನ್ನು ಮುಂದುವರೆಸಲು ಪ್ರಯತ್ನಿಸಲಾಗುತ್ತಿದೆ" ಎನ್ನುವುದು ದಾಮ್ಲೆ ಅಭಿಪ್ರಾಯ.
ಇತ್ತೀಚೆಗೆ ಎಲ್‌ಟಿಟಿಇ ಕೊಚ್ಚಿನ್, ತಿರುವನಂತಪುರದ ನಡುವಣ ಕರಾವಳಿಯಲ್ಲಿ ಕಾರ್ಯಾಚರಣೆ ನಡೆಸಿ, ಮೀನುಗಾರಿಕಾ ದೋಣಿಯೊಂದನ್ನು ವಶಪಡಿಸಿಕೊಂಡಿದೆ. "ಇದು ರಹಸ್ಯ ಆಕ್ರಮಣದ ಆರಂಭವಷ್ಟೇ" ಎನ್ನುತ್ತಾರೆ ದಾಮ್ಲೆ.
ಕೆಲ ತಿಂಗಳುಗಳ ಹಿಂದೆ ತಿರುವನಂತಪುರದಲ್ಲಿ ಕೇಂದ್ರ ರಕ್ಷಣಾ ಸಚಿವ ಎ.ಕೆ. ಅಂಟನಿ, "ಶ್ರೀಲಂಕಾದ ಆಂತರಿಕ ಚಟುವಟಿಕೆಗಳನ್ನು ಭಾರತ ಗಂಭೀರವಾಗಿ ಪರಿಗಣಿಸಿರುವ ಹಿನ್ನೆಲೆಯಲ್ಲಿ ತಮಿಳುನಾಡು ಮತ್ತು ಕೇರಳದ ಕರಾವಳಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ" ಎಂದಿದ್ದರು.
"ಕರಾವಳಿಯ ರಕ್ಷಣೆಗೆ ನಾವು ಹೆಚ್ಚಿನ ಮಹತ್ವ ನೀಡುತ್ತಿದ್ದೇವೆ. ನೌಕಾಪಡೆ, ಕರಾವಳಿ ಭದ್ರತಾ ಸಿಬ್ಬಂದಿ ಹಾಗೂ ಕರಾವಳಿ ಪೊಲೀಸ್ ಪಡೆ ಒಟ್ಟಾಗಿ ಕರಾವಳಿ ರಕ್ಷಣೆಗೆ ಕಟಿಬದ್ಧರಾಗಿದ್ದಾರೆ." ಎಂಬುದಾಗಿಯೂ ಅವರು ಹೇಳಿದ್ದರು.
ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸಿರುವ ಕೇರಳ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್, "ಶ್ರೀಲಂಕಾದ ತೀವ್ರವಾದಿಗಳು ಎತ್ತರದ ಪ್ರದೇಶಗಳಲ್ಲಿ ಅಡಗುದಾಣಗಳನ್ನು ನಿರ್ಮಿಸಿಕೊಂಡಿದ್ದಾರೆ. 1995-97ರಲ್ಲಿ ಎಲ್‌ಟಿಟಿಇ ಸದಸ್ಯರಾಗಿದ್ದ ಸದಾರಂ ಎಂಬಾತ ಇಡುಕ್ಕಿ ಜಿಲ್ಲೆಯ ನೆಡುಂಕಂಡಂ ಎಂಬಲ್ಲಿಂದ ಅಧಿಕೃತ ದಾಖಲೆಗಳಿಲ್ಲದ ಕಾರಣ ಬಂಧನಕ್ಕೊಳಗಾದ. ಈತನ ಹುಟ್ಟೂರು ಶ್ರೀಲಂಕಾದ ವಾಯುನೀಯ ಜಿಲ್ಲೆಯ ನೊಚ್ಚಿಕುಳಂ ಎಂಬ ಗ್ರಾಮ. ತಮಿಳುನಾಡಿನ ಮಾವೋನಾಯಕ ಸುಂದರಮೂರ್ತಿ ಇಡುಕ್ಕಿ ಜಿಲ್ಲೆಯಲ್ಲಿ ನೆಲೆಸಿದ್ದರು" ಎಂದು ವಿವರ ನೀಡಿದ್ದಾರೆ.
ಕೇರಳ ರಾಜ್ಯದುದ್ದಕ್ಕೂ ಇಸ್ಲಾಂ ಮೂಲಭೂತವಾದಿಗಳ ಜಾಲವೇ ಇದೆ. ಪ್ರಸ್ತುತ ಎಲ್‌ಟಿಟಿಇ ಕೂಡ ರಾಜ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ ಎನ್ನುವುದು ಅಷ್ಟೇ ಸತ್ಯ.

ಟಿಎಸ್‌ಐ

ಎಂ. ರಾಜಶೇಖರ ಪಣಿಕ್ಕರ್

ಕರ್ನಾಟಕ: ಬಿಪಿಒ

ಗ್ರಾಮೀಣ ಪ್ರದೇಶಕ್ಕೆ ಲಗ್ಗೆ

ಅರ್ಹತೆಯುಳ್ಳ 9 ಕೋಟಿ ಗ್ರಾಮೀಣ ಭಾರತೀಯರು

ಭಾರತದ ನಗರಗಳಲ್ಲಿನ ಆರ್ಥಿಕ ಅಭಿವೃದ್ಧಿಗೆ ಒಂದು ಕಾರಣ ಹೊರ ಗುತ್ತಿಗೆ ಉದ್ಯಮ (ಬಿಪಿಒ). ಕರ್ನಾಟಕದ ರಾಜಧಾನಿ ಬೆಂಗಳೂರು ದೇಶದ ಬಿಪಿಒ ರಾಜಧಾನಿಯಾಗಿ ಹೋಗಿರುವುದು ಹಳೆಯ ಮಾತು. ಆರಂಭದ ಹಂತದಲ್ಲಿ ಕೇವಲ ನಗರ ಪ್ರದೇಶಕ್ಕಷ್ಟೇ ಸೀಮಿತವಾಗಿದ್ದ ಬಿಪಿಒ ಉದ್ಯಮ, ನಂತರ ನಿಧಾನವಾಗಿ ಮೈಸೂರು, ಮಂಗಳೂರು, ಹುಬ್ಬಳ್ಳಿ ಮತ್ತು ಬಳ್ಳಾರಿಯಂತಹ ಜಿಲ್ಲಾ ಕೇಂದ್ರಗಳನ್ನು ತಲುಪಿತು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ ಈ ಉದ್ಯಮ.ಗ್ರಾಮೀಣ ಪ್ರದೇಶಕ್ಕೆ ಹೊಸ ಆಯಾಮ ನೀಡುವ ದಿಕ್ಕಿನತ್ತ ಹೆಜ್ಜೆ ಹಾಕಿದೆ. ಕರ್ನಾಟಕದಲ್ಲಿನ ಗ್ರಾಮೀಣ ಪ್ರದೇಶಗಳಲ್ಲಿ ಬಿಪಿಒ ಉದ್ಯಮ ತನ್ನದೇ ಆದ ಛಾಪು ಮೂಡಿಸುವ ಕಾಲ ಹತ್ತಿರ ಬಂದಂತಿದೆ. ಜೆಎಸ್‌ಡಬ್ಲ್ಯು ಪ್ರತಿಷ್ಠಾನ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಿಟ್ಟಿದ್ದು, ಬಳ್ಳಾರಿ ಜಿಲ್ಲೆಯ ತೋರಣಗಲ್‌ನಲ್ಲಿನ ವಿದ್ಯಾನಗರದಲ್ಲಿ ಪ್ರಪ್ರಥಮ ಗ್ರಾಮೀಣ ಬಿಪಿಒ ಉದ್ಯಮ ಸ್ಥಾಪನೆಗೊಂಡಿದೆ. ಸುಮಾರು ಒಂದೂವರೆ ವರ್ಷಗಳ ಹಿಂದೆ ಪ್ರತಿಷ್ಠಾನದ ಅಧ್ಯಕ್ಷೆ ಸಂಗೀತಾ ಜಿಂದಾಲ್ ಅವರ ಕನಸಿನ ಕೂಸಾಗಿ ಜನ್ಮ ತಾಳಿರುವ ಜೆಎಸ್‌ಡಬ್ಲ್ಯು ಬಿಪಿಒ ಕೇಂದ್ರದ ಒಳ ಹೊಕ್ಕರೆ, ಬೆಂಗಳೂರಿನ ಯಾವುದಾದರೂ ಒಂದು ಬಹುರಾಷ್ಟ್ರೀಯ ಕಂಪನಿಯನ್ನು ಪ್ರವೇಶಿಸಿದಂತಾಗುತ್ತದೆ.
ಸುಮಾರು ನೂರಕ್ಕಿಂತಲೂ ಹೆಚ್ಚು ಗ್ರಾಮೀಣ ಯುವತಿಯರು ಕಂಪ್ಯೂಟರ್‌ಗಳ ಮುಂದೆ ಕೂತು ದೂರದೂರಿನ ಗ್ರಾಹಕರ ಸೇವೆಯಲ್ಲಿ ನಿರತರಾಗಿರುವುದನ್ನು ಕಂಡರೆ ಕೊನೆಗೂ ಭಾರತ ದೇಶದಲ್ಲಿ ಚೀನಾದ ಮಾದರಿ ಅಸ್ತಿತ್ವಕ್ಕೆ ಬಂದೇ ಬಿಟ್ಟಿತೆ ಎಂದೆನ್ನಿಸದೇ ಇರುವುದಿಲ್ಲ. ಈ ಬಿಪಿಒ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ಬಹುತೇಕ ಯುವತಿಯರು ಹತ್ತನೇ ತರಗತಿ ಪಾಸಾದವರು ಅಷ್ಟೆ. ತೋರಣಗಲ್ ಸುತ್ತಮುತ್ತಲಿನ ಹಳ್ಳಿಯವರಾದ ಇವರಿಗೆ ಮೊದಲ ಆರು ತಿಂಗಳ ಕಾಲ ಸೂಕ್ತ ತರಬೇತಿ ನೀಡಲಾಗಿದೆ. ನಂತರ ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರತಿ ತಿಂಗಳಿಗೆ ರೂ.2500 ರಿಂದ ರೂ.3000ದವರೆಗೆ ಸಂಬಳ ದೊರಕುತ್ತದೆ.
"ಇಲ್ಲಿಗೆ ಬಂದು ಕೆಲಸಕ್ಕೆ ಸೇರುವವರೆಗೆ ನಾನು ಕಂಪ್ಯೂಟರ್ ಕೂಡ ಮುಟ್ಟಿರಲಿಲ್ಲ" ಎನ್ನುವ ಜಗದೇವಿ ಈಗ ಆತ್ಮ ವಿಶ್ವಾಸದ ಚಿಲುಮೆಯಂತಿದ್ದಾರೆ. ತಂದೆ ಸಣ್ಣ ಪ್ರಮಾಣದ ಗುತ್ತಿಗೆದಾರ. ತಾಯಿ ತರಕಾರಿ ಮಾರುತ್ತಾರೆ. ಬಡತನದ ಬೇಗುದಿಯಲ್ಲಿಯೇ ಅರಳಿದ ಜಗದೇವಿ ಹತ್ತನೇ ತರಗತಿ ಮುಗಿಸಿದ ನಂತರ ಮುಂದೇನು ಎಂಬ ಚಿಂತೆಯಲ್ಲಿ ಮುಳುಗಿದ್ದರು. ಆಗ ದೊರಕಿತು ಈ ಅವಕಾಶ. ಜಗದೇವಿ ಕೇವಲ ಒಂದೂವರೆ ವರ್ಷಗಳಲ್ಲಿ ಮೇಲ್ವಿಚಾರಕಿಯಾಗಿ ಬಡ್ತಿ ಪಡೆದಿದ್ದಾರೆ. ಇದು ಕೇವಲ ಜಗದೇವಿ ಕಥೆಯಲ್ಲ. ಜೆಎಸ್‌ಡಬ್ಲ್ಯು ಪ್ರತಿಷ್ಠಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವ 200 ಯುವತಿಯರು-ಮಹಿಳೆಯರ ಕಥೆ ಹೆಚ್ಚು-ಕಡಿಮೆ ಇದೇ ಆಗಿದೆ. ಒಂದು ಅಂದಾಜಿನ ಪ್ರಕಾರ ಬಿಪಿಒಗಳಲ್ಲಿ ಕೆಲಸ ಮಾಡುವ ಅರ್ಹತೆಯುಳ್ಳ 9 ಕೋಟಿ ಮಾನವ ಸಂಪನ್ಮೂಲ ಭಾರತದ ಗ್ರಾಮೀಣ ಪ್ರದೇಶದಲ್ಲಿ ಸಿದ್ಧವಾಗಿ ನಿಂತಿದೆ. ಏನಿದ್ದರೂ, ಈಗ ಆ ಮಾನವ ಸಂಪನ್ಮೂಲವನ್ನು ಸದುಪಯೋಗ ಪಡಿಸಿಕೊಳ್ಳಬೇಕು.
"ಇಂತಹ ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ ಅಗತ್ಯವಾದ ಮೂಲಭೂತ ತರಬೇತಿ ನೀಡಬೇಕು. ಅದೂ ಕೇವಲ 6ರಿಂದ 8 ತಿಂಗಳು ಮಾತ್ರ. ನಂತರ ಅವರು ನಗರಗಳಲ್ಲಿನ ಪ್ರತಿಭೆಗಳಷ್ಟೇ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ನಮ್ಮ ಪ್ರಕಾರ ಗ್ರಾಮೀಣ ಬಿಪಿಒಗಳು ಭಾರತದಲ್ಲಿನ ಗ್ರಾಮೀಣ ಪ್ರದೇಶದ ಚಿತ್ರವನ್ನೇ ಬದಲಿಸುವ ಸಾಮರ್ಥ್ಯ ಹೊಂದಿವೆ. ಆ ಮೂಲಕ ಹೊಸದೊಂದು ಕ್ರಾಂತಿಯನ್ನೇ ಮಾಡಬಹುದು" ಎಂದು ಜೆಎಸ್‌ಡಬ್ಲ್ಯು ಪ್ರತಿಷ್ಠಾನ ಬಿಪಿಒ ಕೇಂದ್ರದ ಮುಖ್ಯಸ್ಥೆ ಶೈಲಾ ಲೋಬೊ ಹೇಳುತ್ತಾರೆ. ನಗರ ಕೇಂದ್ರೀಕೃತ ಬಿಪಿಒ ದಣಿಗಳ ಕಿವಿಗಳಿಗೆ ಈ ಮಾತು ಬೀಳುತ್ತಿದೆಯೇ?

ಟಿಎಸ್‌ಐ

ಸತೀಶ್ ಚಪ್ಪರಿಕೆ

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .