ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ಚುನಾವಣಾ ನೀತಿ
 
ವಾಣಿಜ್ಯೀಕರಣ : ವಿಷವರ್ತುಲದಲ್ಲಿ ಕ್ರಿಕೆಟ್: ಮುಕ್ತಿ ಪಡೆಯಲಿ
 
'ಎಷ್ಟು ಸಾಧ್ಯವೋ ಅಷ್ಟು ಪ್ರಾಬಲ್ಯ ಮತ್ತು ಹಣ ಸಂಪಾದಿಸುವುದೇ ಮುಖ್ಯ' ಎಂಬ ಮಾತಿಗೆ ಕಿವಿಗೊಡಬೇಡಿ
ರವೀಶ್ ಕುಮಾರ್

ಹಿರಿಯ ಪತ್ರಕರ್ತ, ಎನ್‌ಡಿಟಿವಿ

ಇದೊಂದು ಅದ್ಭುತ ಆಟ. ಯಾವುದೇ ವಾಂಛೆಗಳಿಲ್ಲದ ವಿಜಯ, ಕ್ಷಣ ಕ್ಷಣಕ್ಕೂ ಕುತೂಹಲಕಾರಿ ತಿರುವುಗಳನ್ನು ಪಡೆಯುವ ಜಂಟಲ್‌ಮನ್ ಆಟ ಕ್ರಿಕೆಟ್. ಒಂದು ಕ್ಷಣದಲ್ಲಿ ವಿಜಯದ ಪರಾಕಾಷ್ಠೆಗೇರಿದಂತೆ ಕಂಡರೆ ಮರುಕ್ಷಣವೇ ಸೋಲಿನ ಚುರುಕು. ಆದರೆ ಮಾರಣಾಂತಿಕ ಬ್ಯಾಟ್ಸ್‌ಮನ್‌ಗಳ- ಬೌಲರ್‌ಗಳ ಕ್ರಿಯಾತ್ಮಕ ಮತ್ತು ಅಮೋಘ ಪ್ರದರ್ಶನವನ್ನು ಉಸಿರು ಬಿಗಿ ಹಿಡಿದು ಉಗುರು ಕಚ್ಚುತ್ತಾ ಹೊರಜಗತ್ತಿನ ಪರಿವೆಯೇ ಇಲ್ಲದೆ ನೋಡುತ್ತಿರುವಾಗ ಧುತ್ತೆಂದು ಕಾಣಿಸಿಕೊಳ್ಳುವ ವಿರಾಮ ಅಸಾಧ್ಯ ಹೇವರಿಕೆ ಹುಟ್ಟಿಸಿಬಿಡುತ್ತದೆ. ಕ್ರಿಕೆಟ್ ಎಂಬುದು ಮುಗ್ಧ ಬ್ಯಾಟ್, ಕುತಂತ್ರಿ ಚೆಂಡಿನ ವಿರುದ್ಧ ಆಡುವ ಆಟವೇ ಹೊರತು ಕ್ರೂರ ಆಕ್ರಮಣ ಅಥವಾ ಪ್ರತಿಫಲಾಪೇಕ್ಷೆಯಿಂದ ಆಡುವ ಆಟವಲ್ಲ.
ಕ್ರಿಕೆಟ್, ಪಕ್ಕಾ ಲೆಕ್ಕಾಚಾರ ಮತ್ತು ಹೀಗೇ ಎಂದು ಕರಾರುವಕ್ಕಾಗಿ ಹೇಳಬಹುದಾದಂಥ ವಾಣಿಜ್ಯ ಉದ್ಯಮಕ್ಕಿಂತ ಎಷ್ಟೋ ಭಿನ್ನ. ಒಂದೇ ಸಮನೆ ಏರುತ್ತಿರುವ ರನ್ನುಗಳು ಅಷ್ಟೇ ರಭಸದಲ್ಲಿ ನೆಲಕಚ್ಚುತ್ತಿರುವ ವಿಕೆಟ್‌ಗಳಿರುವ ಕ್ರಿಕೆಟ್ ಆಟದಲ್ಲಿ ಅರೆಕ್ಷಣದಲ್ಲಿ ಏನು ಬೇಕಾದರೂ ನಡೆಯಬಹುದು. ರಭಸವಾಗಿ ಮುನ್ನುಗ್ಗಿ ಬರುತ್ತಿದ್ದ ಚೆಂಡು ಬ್ಯಾಟ್‌ನ ಸ್ಪರ್ಶಮಾತ್ರದಿಂದ ಬೌಂಡರಿಯಾಚೆಗೆ ಚಿಮ್ಮಿ ಅಚಾನಕ್ 'ಸಿಕ್ಸರ್' ಸಿಡಿದಾಗ ಆ ಆಟಗಾರ ಅನುಭವಿಸುವ ರೋಮಾಂಚಕ ಅನುಭವ...! ಯಾವುದೋ ಒಂದು ಮಾಂತ್ರಿಕ ಕ್ಷಣದಲ್ಲಿ ಮೊದಲ ಎಸೆತದಲ್ಲೇ ವಿಕೆಟ್‌ಗಳನ್ನು ಚದುರಿ ಹೋಗಿ ಪೆಚ್ಚು ಮೋರೆಯ ಬ್ಯಾಟ್ಸ್‌ಮನ್ ಪೆವಿಲಿಯನ್ ದಾರಿ ಹಿಡಿಯುವಾಗ ಮಿಂಚುವ ಆ ಬೌಲರ್‌ನ ಮುಖದ ಕಳೆ....!
ನವ್‌ನಗರ್‌ನ ಜಾಮ್ ಸಾಹೇಬ್ ಬಗ್ಗೆ ಎ.ಜಿ ಗಾರ್ಡಿನರ್ ಬರೆದ ಪುಸ್ತಕವನ್ನು ಓದಿದ್ದರೆ ಅವರ ಅವರ್ಣನೀಯ ಉತ್ಸಾಹ ಮತ್ತು ಕ್ರಿಕೆಟ್‌ನ ನಿಜವಾದ ಸತ್ವದ ಅರಿವು ನಿಮಗಾಗುತ್ತದೆ. ಆದರೆ ಪರಿಶುದ್ಧವಾದ ಈ ಆಟ ಈಗ ತನ್ನ ಸತ್ವಗಳನ್ನೆಲ್ಲಾ ಕಳೆದುಕೊಂಡು ಅಳಿವಿನ ಹಾದಿ ಹಿಡಿದಿದೆ. ಪ್ರಸ್ತುತ ವಾಣಿಜ್ಯ ಉದ್ಯಮವಾಗಿ ಬಿಟ್ಟಿರುವ ಈ ಆಟದಲ್ಲಿ ಆರೋಗ್ಯಕರ ಸ್ಪರ್ಧಾತ್ಮಕತೆ ದಿನೇ ದಿನೇ ನಶಿಸಿ ಹೋಗುತ್ತಿದೆ. ಇತ್ತಂಡದ ಆಟಗಾರರೂ ವಿಷ ಕಕ್ಕುವವರೇ!
ಆಟಗಾರರು ಈ ಅದ್ಭುತ ಕ್ರೀಡೆಯ ಕಾವ್ಯ ಮಾಧುರ್‍ಯ, ನಾಟಕೀಯತೆ ಅನುಭವಿಸಿ ಕ್ರಿಕೆಟ್ ಆಡುವ ಕಾಲ ಎಲ್ಲೋ ಕಳೆದು ಹೋಗಿದೆ. ಗೆಳೆತನದ ಪ್ರತೀಕವಾಗಿದ್ದ ಈ ಕಾಮನ್‌ವೆಲ್ತ್ ಆಟಕ್ಕೆ ಅಷ್ಟ ದಿಕ್ಕುಗಳಿಗೂ ವ್ಯಾಪಿಸಿರುವ ಕರಾಳ ಮಾಫಿಯಾ ವಿಷ ಉಣಿಸಿದೆ. ಆರು ಸಿಕ್ಸರ್‌ಗಳು ಕೋಟಿ ರೂಪಾಯಿಗಳಿಗೆ ಸಮ. ೧೧ ಜನರ ತಂಡಕ್ಕೆ ಸೇರ್ಪಡೆಯಾಗುವುದೆಂದರೆ 50 ಲಕ್ಷ ರೂಪಾಯಿ ಮತ್ತು ಇತರ ಥರಾವರಿ ಸೌಲಭ್ಯಗಳ ಸರದಾರನಾಗುವುದು! ಈ ನೀಚತನ ಆಟದ ಪಾವಿತ್ರ್ಯದ ಮೇಲೆ ಕೆಸರೆರಚಿದೆ. ರಾಕ್ಷಸೀ ಪ್ರವೃತ್ತಿಗಳ ಹಾಗೂ ಲಂಪಟತನಗಳ ಬೆನ್ನಿಗೆ ರಾಜ್ಯಸರ್ಕಾರಗಳೂ ನಿಲ್ಲುತ್ತಿವೆ ಎಂಬುದು ಖೇದಕರ. ಇಂಥ ಆಭಾಸಕಾರಿ ಬೆಳವಣಿಗೆಗಳನ್ನು ತಡೆದು ಗತವೈಭವವನ್ನು ಮತ್ತೊಮ್ಮೆ ಸ್ಥಾಪಿಸುವುದು ಎಲ್ಲಾ ಕ್ರಿಕೆಟ್ ಪ್ರೇಮಿಗಳ ಗುರಿಯಾಗಬೇಕು. ಇಂಥ ಘನಗಂಭೀರ ಆಟವನ್ನು ಸರ್ವವ್ಯಾಪಿ ವಾಣಿಜ್ಯೀಕರಣ ಹಾಗೂ ಮಾರಾಟಗಾರರ ಕೈಗೊಪ್ಪಿಸುವುದು ಘೋರಾಪರಾಧವೇ ಸರಿ. ಭಾರತೀಯ ಕ್ರಿಕೆಟಿಗೆ ಜಾಗತಿಕ ಮಟ್ಟದಲ್ಲಿ ಉನ್ನತ ಸ್ಥಾನ ದೊರಕಿಸಿಕೊಟ್ಟ ಕೆಲವು ಖ್ಯಾತನಾಮರಿಗೂ ವಾಣಿಜ್ಯೀಕರಣ ಮಸಿ ಬಳಿಯುತ್ತಿದೆ. ಯಾವ ತಂಡವೇ ಗೆಲ್ಲಲಿ ಯಾರೇ ಸೋಲಲಿ ಕ್ರಿಕೆಟ್ ಅಂತೂ ತನ್ನ ಸೊಬಗು ಕಳೆದುಕೊಂಡಿದೆ. ಯಾವುದೇ ತಂಡವನ್ನು ಗೆಲ್ಲಿಸುವುದಲ್ಲ, ಈಗ ಆಗಬೇಕಾಗಿರುವ ಕೆಲಸ 'ಕ್ರಿಕೆಟ್' ಆಟವನ್ನು ಗೆಲ್ಲಿಸುವುದು.
ಕಾಮನ್‌ವೆಲ್ತ್ ತಂಡಗಳ ಉಳಿದ ಆಟಗಾರರಿಗಿಂತಲೂ ಶ್ರೇಷ್ಠ ಆಟಗಾರರು ಇಂದೂ ನಮ್ಮಲ್ಲಿದ್ದಾರೆ. ಇವರನ್ನು ಶೋಭಾಯಮಾನ ಪ್ರತಿಭೆಗಳು ಎಂದು ಗೌರವಿಸಬೇಕೇ ಹೊರತು ಗಾಯದ ಮೇಲೆ ಬರೆ ಎಳೆಯುವಂಥ ಧನಪಿಶಾಚಿಗಳು ಎಂದಲ್ಲ! ನಿಮಗೆ ಗೊತ್ತೇ? ಹಿಂದೆ 'ಪ್ರಧಾನಮಂತ್ರಿ ತಂಡ'ವನ್ನು ನೆಹರು ಮತ್ತು 'ವಿರೋಧ ಪಕ್ಷ'ದ ತಂಡವನ್ನು ಎ.ಕೆ. ಗೋಪಾಲನ್ ಮುನ್ನಡೆಸಿದ್ದರು. "ಮಾರುಕಟ್ಟೆಯ ಸೋಗಿಲ್ಲದ, ಕಳಂಕರಹಿತ ಹಾಗೂ ಪರಿಶುದ್ಧ ಕ್ರಿಕೆಟನ್ನು ನಾವು ಮೈದಾನದಲ್ಲಿ ಮತ್ತು ಸಾರ್ವಜನಿಕ ಜೀವನದಲ್ಲಿ ಆಡೋಣ" ಎಂದಿದ್ದರು ನೆಹರು.
ಕೆಲವೊಂದು ಬಾರಿ ಈ ಆಟ ಸಮಯವನ್ನು ತಿಂದುಬಿಡುತ್ತದೆ. 5 ದಿನಗಳ ಕಾಲ ನಡೆಯುವ ಟೆಸ್ಟ್ ಕ್ರಿಕೆಟ್, ಏಕದಿನ ಪಂದ್ಯ ಅಥವಾ 'ಟ್ವೆಂಟಿ-20'ಯೇ ಇರಬಹುದು, ಜನ ಸೇವೆಗೆಂದೇ ಇರುವ ಅಧಿಕಾರಿಗಳ ಅಮೂಲ್ಯ ಸಮಯವನ್ನು ಇವು ಕದಿಯುತ್ತವೆ.
ಇದು ಜಂಟಲ್‌ಮನ್ ಆಟದ ಋಣಾತ್ಮಕ ಗುಣ. ಟೆಲಿವಿಷನ್ ಮೂಗು ತೂರಿಸದ ಜಾಗವೇ ಇಲ್ಲ ಬಿಡಿ. ಅಂಥದ್ದರಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಗಳು ಕೆಲಸಗಳನ್ನು ಅರ್ಧಕ್ಕೇ ನಿಲ್ಲಿಸಿ, ಕ್ರಿಕೆಟ್ ನೋಡುತ್ತಾ ಮೈ ಮರೆಯುವುದೆಂದರೆ ಅದಕ್ಕಿಂತ ವಿಪರ್ಯಾಸ ಬೇರೇನಿದೆ? ಈ ಅರ್ಧಕ್ಕೇ ನಿಲ್ಲುವ ಕೆಲಸ ಒಮ್ಮೆ ಎಂಥಾ ತಾರಕಕ್ಕೇರಿತ್ತು ಎಂದರೆ, ಉದ್ರೇಕಕಾರಿ ಪಂದ್ಯಗಳಿರುವ ದಿನ ನ್ಯಾಯಾಧೀಶರು ಮತ್ತು ವಕೀಲರಿಗೆ ಹೈಕೋರ್ಟ್ ರಜೆ ಘೋಷಿಸಿತ್ತು! 'ದ ಟೈಮ್ಸ್ ಆಫ್ ಇಂಡಿಯಾ'ದಲ್ಲಿ ನಾನು ಈ ಬಗ್ಗೆ ಕಟು ಮಾತುಗಳಲ್ಲಿ ಬರೆದಿದ್ದೆ. ತಪ್ಪಿನ ಅರಿವಾದ ನಂತರ ಹೈಕೋರ್ಟ್ ಮುಂದೆಂದೂ ಮತ್ತೊಮ್ಮೆ ಅಂಥ ತೀರ್ಪು ಹೊರಡಿಸಿಲ್ಲ!
ಏನೇ ಆಗಲಿ ಕ್ರಿಕೆಟ್ ನನ್ನನ್ನು ಯಾವತ್ತೂ ಆಕರ್ಷಿಸುತ್ತದೆ. ಅದರ ಸಕಾರಾತ್ಮಕ ಗುಣಗಳು ನೈತಿಕ ಪ್ರಬುದ್ಧತೆಯನ್ನು ನೀಡುತ್ತದೆ. ಯೌವನದಲ್ಲಿ ನನಗೆ ಮತ್ತು ನನ್ನ ಪತ್ನಿಗೆ ಕ್ರಿಕೆಟ್‌ನ ಹುಚ್ಚು ಎಷ್ಟಿತ್ತೆಂದರೆ ರಾಷ್ಟ್ರಮಟ್ಟದ ಪಂದ್ಯಗಳನ್ನೆಲ್ಲಾ ನಾವು ಉಸಿರುಗಟ್ಟಿ ನೋಡುತ್ತಿದ್ದೆವು. ಮಲಬಾರ್‌ನ ಒಬ್ಬ ಖ್ಯಾತ ವಕೀಲನಾಗಿದ್ದರೂ ನನ್ನ ಕೇಸುಗಳನ್ನೆಲ್ಲಾ ಬದಿಗಿರಿಸಿ ವಿಕೆಟ್ ಉರುಳುವುದನ್ನು, ಪೆಚ್ಚು ಮೋರೆ ಹಾಕಿದ ಬ್ಯಾಟ್ಸ್‌ಮನ್ ಪೆವಿಲಿಯನ್ ಸೇರುವುದನ್ನು, ಸಾವಿರಗಟ್ಟಲೆ ಜನರನ್ನು ಒಂದೇ ಪಟ್ಟಿಗೆ ಆಕರ್ಷಿಸುವ ಅಮೋಘ ಸಿಕ್ಸರ್‌ಗಳನ್ನು ನೋಡುವುದಕ್ಕಾಗಿಯೇ ನನ್ನ ಅಮೂಲ್ಯ ನಾಲ್ಕು ಗಂಟೆ ಅವಧಿ, ಹಣ ವ್ಯಯಿಸುತ್ತಿದ್ದೆ! ನಿಜವಾಗಿಯೂ ಆಟದ ರಮಣೀಯತೆಯನ್ನೋ ಅಥವಾ ಚೆಂಡು ಮತ್ತು ಬ್ಯಾಟ್ ನಡುವಿನ ಹಣಾಹಣಿಯನ್ನೋ ಅಲ್ಲಿ ನೆರೆದ ಸಹಸ್ರಾರು ವೀಕ್ಷಕರು ವೀಕ್ಷಿಸುತ್ತಿರುತ್ತಾರೆಯೇ? ಖಂಡಿತಾ ಇಲ್ಲ! ಅವರೆಲ್ಲಾ ಕ್ರಿಕೆಟ್ ಮೈದಾನದಲ್ಲಿ ಯಾವುದೋ ಎರಡು ಶತ್ರು ರಾಷ್ಟ್ರಗಳು ಕಾದಾಡುತ್ತಿವೆಯೇನೋ ಎಂಬ ಭಾವನೆಯಲ್ಲಿರುತ್ತಾರೆ! ಇಂಥ ಭಾವನೆ ಮೈದಾನದಲ್ಲಿ ನಡೆಯುತ್ತಿರುವ ಆಟಕ್ಕೇ ಕಳಂಕ. ಆದರೂ ಎರಡೂ ತಂಡಗಳ ಸ್ಪರ್ಧಾ ಮನೋಭಾವವನ್ನು ಮೆಚ್ಚಲೇ ಬೇಕು. ಬ್ಯಾಟ್ಸ್‌ಮನ್‌ನ ಹಿಂದೆ ನಿಂತಿರುವ ವಿಕೆಟ್ ಕೀಪರ್ ಪ್ರತಿ ಕ್ಷಣವೂ ಜಾಗೃತನಾಗಿರುತ್ತಾನೆ... ಮೈದಾನದ ತುಂಬೆಲ್ಲಾ ಚದುರಿರುವ ಇತರರು ಯಾವ ಕ್ಷಣದಲ್ಲೂ ಚಿಮ್ಮಬಹುದಾದ ಚೆಂಡನ್ನು ಹಿಡಿಯುವ ಕಾತರದಲ್ಲಿರುತ್ತಾರೆ... ಏನೇ ಆದರೂ ಬ್ಯಾಟ್ಸ್‌ಮನ್‌ಗೆ 'ಬೌಂಡರಿ' ಸಿಗಬಾರದು ಅಷ್ಟೇ... ಬ್ಯಾಟ್ಸ್‌ಮನ್‌ನ ವಿಜಯ, ಪಂದ್ಯಶ್ರೇಷ್ಠ ಪ್ರಶಸ್ತಿ ಇವೆಲ್ಲವೂ ಆ ಆಟಗಾರನ ಪ್ರತಿಭೆಗೆ ದೊರಕುವ ಫಲ. ಅದೇ ಅಮೋಘ ಬ್ಯಾಟ್ಸ್‌ಮನ್ ಮುಂದಿನ ಪಂದ್ಯದಲ್ಲಿ 'ಡಕ್ ಔಟ್' ಆಗಬಹುದು. ಈ ಸೋಲು ಗೆಲುವು ದುರಂತಗಳು, ಸಾಧನೆಗಳು, ಆಶಾಭಂಗ ಎಲ್ಲವೂ ಕ್ರಿಕೆಟ್ ಅನ್ನು ಇತರ ಆಟಗಳಿಗಿಂತ ಭಿನ್ನವಾಗಿಸಿದೆ.
ಜೀವನವೂ ಹಾಗೆಯೇ... ವಿನ್ಸಂಟ್ ಚರ್ಚಿಲ್ ಸೋತು ಗೆದ್ದ, ನೆಪೋಲಿಯನ್ ಬೋನಾಪಾರ್ಟೆ ಗೆದ್ದರೂ ಕೊನೆಗೆ ಭಾರೀ ಸೋಲನುಭವಿಸಿದ. ಇವೆಲ್ಲಾ ಆಯಾಮಗಳಿಂದ ಕ್ರಿಕೆಟ್ ಒಂದು ಅದ್ಭುತವಾದ ಆಟವಾಗಬಲ್ಲದು. ಆದರೆ ಇಂದಿನ ಕ್ರಿಕೆಟ್ ಲೋಕಕ್ಕೆ ಶಾಪವಾಗಿ ಪರಿಣಮಿಸಿರುವ ವಾಣಿಜ್ಯೀಕರಣದಿಂದ ಕ್ರಿಕೆಟ್ ಹೊರಬರಬೇಕು.
"ಪ್ರಪಂಚದಲ್ಲಿ ಎಷ್ಟು ಸಾಧ್ಯವೋ ಅಷ್ಟು ಪ್ರಾಬಲ್ಯ ಮತ್ತು ಹಣ ಸಂಪಾದಿಸುವುದೇ ಮುಖ್ಯ. ಉಳಿದುದೆಲ್ಲ ಅರ್ಥಹೀನ" ಎಂದಿದ್ದ ನೆಪೋಲಿಯನ್. ಈ ಅಪಾಯಕಾರಿ ಮಾತುಗಳಿಗೆ ಎಂದೂ ಕಿವಿಗೊಡಬೇಡಿ!

ಟಿಎಸ್‌ಐ

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .