|
ಕಳೆದು ಹೋದ ಬೆಳಕಿನ ಬಟ್ಟಲು
ಚಂದ್ರಶೇಖರ ತಾಳ್ಯ
ನಮ್ಮ ನಿಟ್ಟುಸಿರುಗಳೆ ರಾಗವಾಗಿದ್ದವು
ನಮ್ಮ ಉದ್ವಿಗ್ನತೆ ಹಾಡಾಗಿದ್ದವು
ನಮ್ಮ ಕಣ್ಣಿನ ಬೆಂಕಿ ಬೆಳಕಾಗಿದ್ದವು
ನಮ್ಮ ಮಾತು ಸಿಡಿಲ ಹಿಮ್ಮೇಳವಾಗಿದ್ದವು
ಸಮುದ್ರಗಳಾಗ ನಮಗೆ ಒಂದು ಕೆರೆ
ನದಿಗಳಾಗ ಸಣ್ಣ ತೊರೆ
ಕಣಿವೆಗಳೋ ಉಯ್ಯಾಲೆ
ಕಂದಕಗಳು ನಮ್ಮ ಅಡುಗೆ ಒಲೆ
ಗಗನಕ್ಕೆ ಹಾಸಿ, ರೆಕ್ಕೆಗಳ ಬೀಸಿ
ಗಾಳಿಯನೆ ಕಡೆ ಕಡೆದು, ಗಾಳಿ ಬೆಣ್ಣೆಯ ತೆಗೆದು
ಹಕ್ಕಿಗಾನಗಳಲ್ಲಿ ಕರಗಿಸಿದ್ದೆವು
ಹಸಿರು ಮರಗಳ ತುಂಬ ಹಣ್ಣುಗಳ ಹಬ್ಬಕ್ಕೆ ಬೇರಿಗೇ ನೀರ ಹನಿಸಿದ್ದೆವು.
ರಕ್ತದಲ್ಲಿ ಸಂಬಂಧಗಳ ಹೆಣೆಯಲು
ನೋಟದಲ್ಲಿ ಪ್ರೇಮಗಳ ಬೆಸೆಯಲು
ಆಟದಂತೆ ಆಡಿ ಬದುಕಲು
ಒಂದು ನಗೆಯ ಹುಡುಕಲು
ನಾವೆಲ್ಲ ಹಾಡಿದ್ದೆವು: ನಿಟ್ಟುಸಿರಲ್ಲಿ, ಸಿಟ್ಟಿನಲ್ಲಿ
ಈಗ ಬರೀ ನಿಟ್ಟುಸಿರು
ಈಗ ಬರೀ ದ್ವೇಷಗಳು
ಈಗ ಬರೀ ಕತ್ತಲು
ಕಳೆದೇ ಹೋಗಿದೆ ಬೆಳಕಿನ ಬಟ್ಟಲು.
ಮನೆ
ಗೀತಾ ವಸಂತ್
ಹಸಿಯಾಗೇ ಇದೆ ಇನ್ನೂ
ಚಿಗುರು ಬೆರಳಲಿ ಮನೆ ಕಟ್ಟಿದ್ದು
ಕನಸಿನ ಚಪ್ಪರ ಹರವಿ
ಬೆರಗಿನ ಚಿತ್ತಾರವಿಟ್ಟಿದ್ದು
ಅಪ್ಪನೆಂದರು; ಮರುಳು ಮಗು
ಮರಳ ಮನೆ ನಿಜವಲ್ಲ
ಕರೆದರು ಮನೆಯೊಳಗೆ
ಆಟ ಸಾಕು, ಇನ್ನು ಊಟದ ಸಮಯ!
ನಿಜದ ಮನೆಯೊಳು ಮನವಿಟ್ಟೆ
ಗೋಡೆಗಳು ಮುಗಿಲೆತ್ತರ
ಆಸೆಗಳು ಮುಗಿಲಿಗೂ ಮಿಗಿಲು
ಅಮ್ಮನೆಂದಳು ಒಂದಿರುಳು ಕಣ್ತುಂಬಿ
ನಿನ್ನದಲ್ಲ ಈ ಮನೆಯೂ
ಮನೆ- ಮನೆಯ ಕದತಟ್ಟುವ ಹಣೆಬರಹ
ತಪ್ಪದು ನಮಗೆ
ಮಳೆಯಾಗಿ ಹರಿದಳು
ಮೋಡದಂತಿದ್ದ ಅಮ್ಮ ಮೊದಲ ಸಲ
ತೋಯ್ದ ನನ್ನೆದೆಯೊಳಗೆ ಸಿಡಿಲು!
ಅಡಿದೆಗೆದೆ ಮನೆಯಾಚೆ
ಮತ್ತೊಂದಡಿಗೆ ಅವನ ಮನೆ ಹೊಸಿಲು
ಮಧ್ಯೆ ಬಯಲು- ಹೂ- ಬಿಸಿಲು
ಮಾತಾಡಿಸಿದೆ ಗೋಡೆಗಳ
ಅಪರಿಚಿತ ನಗೆ ನಕ್ಕವು
ತೆರೆದುಕೊಂಡವು ಕಿಟಕಿಗಳು
ಮೆಲ್ಲ- ಮೆಲ್ಲಗೆ
ಮನಬೆಸೆದೆ ಮನೆಯೊಡನೆ
ಯಾರದೋ ಧ್ವನಿ ಆಚೆ
ಅಲ್ಲಿಹುದು ನಮ್ಮನೆ
ಇಲ್ಲಿರುವುದು ಸುಮ್ಮನೆ
ಬೆಚ್ಚಿಕೊಂಡವು ಥಟ್ಟನೆ ಜೋಡಿ ಬಾಗಿಲು
ವ್ಯಕ್ತದಿಂದ ಅವ್ಯಕ್ತಕ್ಕೆ.
ಮೂರು ಕವಿತೆಗಳು...
ಜರಗನಹಳ್ಳಿ ಶಿವಶಂಕರ್
ಕೆರೆ
ಕೆರೆ ಬೆತ್ತಲಾಗಿ
ಕೆಸರು ಒಣಗಿ
ಒಡಲೆಲ್ಲ
ಬಿರುಕಿನ ಬರೆಗಳಾಗಿತ್ತು
ಮರೆಯಾಗಿದ್ದ 'ಸೀರೆ'
ಬಂದು ಆವರಿಸೆ
ಆನಂದದ ಅಲೆ ಅಲೆಯಾಗಿ
ತಾವರೆ ಕೆರೆಯಾಗಿತ್ತು
ಕೊಂಡು-ಬಿಟ್ಟರು
ಬಡಬಗ್ಗರು
ಕೋಳಿ, ಕುರಿ
ಹಸು, ಎಮ್ಮೆ
ಕೊಂಡು ಕೊಂಡರು
ಉಳ್ಳವರು
ಆನೆ, ಒಂಟೆ, ಕುದುರೆ
ಕೊಂಡು ಕೊಂಡರು
ಆಳುವವರು
ಜನರನ್ನೇ
ಕೊಂಡುಕೊಂಡು-ಬಿಟ್ಟರು
ಅವಸ್ಥೆ
ಹಕ್ಕಿಗಳು ಮಾತನಾಡಿಕೊಂಡವು:
ಕಾಲುದಾರಿ, ಹೆದ್ದಾರಿ, ರಹದಾರಿ
ಸಂದಿ, ಗೊಂದಿ, ಗಲ್ಲಿ
ಅಪಘಾತ, ಟ್ರಾಫಿಕ್ ಜಾಮ್
ಎಂತೆಂತಹ ರಸ್ತೆ
ಏನಿದು! ಪಾಪ
ಮನುಷ್ಯನ ಅವ್ಯವಸ್ಥೆ
ಬಿಡಿಸು ನೋಡೋಣ
ಆರ್. ತಾರಿಣಿ ಶುಭದಾಯಿನಿ
-1-
ಬರೆಯುವುದು ಬಿಡು ಎಂದು
ಹೇಳಿದರು, ಕೇಳಲಿಲ್ಲ
ಗಣ್ಣಿಗೆ ಹೊಡೆದರು
ಕೈಗೆ ಬರೆ ಎಳೆದರು
ನೋವು ಉಬ್ಬಿಕೊಂಡು
ಸೊಗಸಾದ ಕಾವ್ಯ ಬರೆಯಿತು.
ಲಠ್ಠ ತಿರುಗಿಸಿ ಹೊಡೆದು ಹೊಡೆದು
ಸಾಕಾದ ಪೊಲೀಸು ಹೇಳಿದ,
"ಎಷ್ಟು ಒದ್ದರೂ ಅದೇ ಕೆಲಸ,
ನಿನ್ನ ಪೊಗರು ಇಳಿಸುವೆ
ದಪ್ಪ ರೂಲರಿನ ದೊಣ್ಣೆ ನರ್ತನಕೆ
ಮಜ್ಜಿಗೆ ಬೆಣ್ಣೆ ಬಿಚ್ಚಿಕೊಳ್ಳುವಂತೆ
ನೋವುಗಳು ಮುದ್ದೆಯಾಗಿ ಗಟ್ಟಿಗೊಂಡವು.
-2-
ಮೊಲೆ ಬಿಡಿಸುವುದು ಕಷ್ಟ
ಬೇವಿನ ಸೊಪ್ಪು ಹಾಗಲ ರಸ ಹಚ್ಚಿ
ಮಗುವಿಗೆ ಸಾಕ್ಷಾತ್ ಪೂತನಿಯೆಂದು
ನಂಬಿಸುವಾಗ ಸಾಕು ಬೇಕಾಯಿತು!
ಅಷ್ಟೆಲ್ಲಾ ಮಾಡಿದರೂ ಈ ಕೃಷ್ಣ
ಏನು ಮಾಡಿದ?
ದೊಡ್ಡವನಾಗುತ್ತ ಬೆರಳು ಚೀಪಿದ
ಆಮೇಲೆ ಕೊಳಲ ಚೀಪಿ ಚೀಪಿ
ಸ್ವರಗಳನ್ನೆಲ್ಲ ಸವಿದ
-3-
ಬಲಿಯಿತೆಂದರೆ ಮುಗಿಯಿತು
ಮರ ಜಗ್ಗುವುದಿಲ್ಲ
ಮಣ್ಣು ಸಡಿಲ ಮಾಡಿ
ಭೂಮಿಯೊಳಗೆ ನಿಂತ ಮೇಲೆ
ಕೊಡಲಿ ಕಾವು ಯಾವ ಲೆಕ್ಕ ?
ತಿಪ್ಪರಲಾಗ ಹಾಕಿದರೂ
ಸಾಯುವುದಿಲ್ಲ ಬದುಕುವ ಹಠ
ನಾನು ಆಕಾಶ, ನಾನು ಭೂಮಿ
ಎಂ.ಆರ್. ಭಗವತಿ
ನಾನು ಆಕಾಶ
ಅವಳು ಭೂಮಿ
ಚಂಗನೆ ಆಕಾಶಕ್ಕೆ ನೆಗೆದ
ಚುಂಗನ್ನು ಎಳೆದು
ಪಾದಗಳಿಗೆ ಸ್ಪರ್ಶಿಸುವ
ಅವಳು ಭೂಮಿ;
ನಾನು ಆಕಾಶ.
ಕಣ್ಣಿಟ್ಟು ನಕ್ಷತ್ರಗಳಿಗೆ ನಾನು
ಲಗ್ಗೆ ಇಟ್ಟಾಗ
ಅವಳು ಸೂರ್ಯನನ್ನು ಬಯಸುತ್ತಾಳೆ;
ನೆಲದ ಮೇಲೆಯೇ ಪಾದ ಊರಿ
ಅವಳು ಸೂರ್ಯನಿಗೆ ಕಣ್ಣಿಟ್ಟು
ಭಾರ ಹೊತ್ತಾಗ
ನಕ್ಷತ್ರಗಳ ತೋರಿಸಿ
ನಾನು ನೆಲದ
ಸಹವಾಸ ಬಯಸುತ್ತೇನೆ.
ನಾನು ಭೂಮಿ;
ನಾನು ಆಕಾಶ.
ಟಿಎಸ್‌ಐ |