ಮನುಕುಲ: ಅಪಾಯ ಸನ್ನಿಹಿತ
ತರ್ಕರಹಿತ ನಂಬಿಕೆಗಳು
ನೆಲೆಗಟ್ಟಿಲ್ಲದ ಆಚಾರ ಮನುಕುಲವನ್ನೇ ಅಪಾಯಂದಂಚಿಗಟ್ಟಿದೆ
"ನೀಚ ಆತ್ಮಗಳಿಗೆ ಸಾಧ್ಯವಿರುವ ಧರ್ಮವೆಂದರೆ ಮೌಢ್ಯ" ಜೋಸೆಫ್ ಜಾಬರ್ಟ್ ಹೇಳಿದ ಈ ಮಾತುಗಳನ್ನು ಅಷ್ಟು ಸುಲಭದಲ್ಲಿ ಅಲ್ಲಗಳೆಯುವಂತಿಲ್ಲ. ಮುಗ್ಧನೊಬ್ಬನ ಜೀವನವನ್ನು ಅಸ್ತವ್ಯಸ್ತಗೊಳಿಸುವ ಮೂಢನಂಬಿಕೆಗಳಿಂದ ಬೇರೇನಾದರೂ ಲಾಭವಿದೆಯೇ?
ಇತಿಮಿತಿಗಳ ಒಳಗೇ ಇರುವ ಮೂಢನಂಬಿಕೆಗಳು ಅಷ್ಟು ಅಪಾಯಕಾರಿ ಏನಲ್ಲ. ಉದಾಹರಣೆಗೆ, ಸಂಖ್ಯೆ ೬ನ್ನು ಬಳಸದಿರುವುದು (ಥೈಲೆಂಡ್‌ನ ಜನಜನಿತ ನಂಬಿಕೆ!), ಉತ್ತರ ದಿಕ್ಕಿಗೆ ತಲೆ ಇಟ್ಟು ಮಲಗದೇ ಇರುವುದು (ಜಪಾನಿಗಳ ನಂಬಿಕೆ) ಅಥವಾ ಒಡೆದ ಕನ್ನಡಿಯಲ್ಲಿ ಮುಖ ನೋಡಬಾರದೆಂಬ ನಂಬಿಕೆ (ರಷ್ಯನ್ನರ ಕಟ್ಟಾ ನಂಬಿಕೆ!) ಇಷ್ಟರೊಳಗೇ ಮೂಢನಂಬಿಕೆಗಳಿದ್ದರೆ ಸರಿ. ಅದರಿಂದ ಯಾರಿಗೂ ತೊಂದರೆ ಇಲ್ಲ ಯಾವುದೇ ನಷ್ಟವೂ ಇಲ್ಲ. ಆದರೆ ಓಬಿರಾಯನ ಕಾಲದ ನಂಬಿಕೆಗಳು ಮತ್ತು ಅವಾಸ್ತವಿಕ ಜಗತ್ತಿನ ಕಪೋಲ ಕಲ್ಪಿತ ಕಲ್ಪನೆಗಳು ಮೂಢನಂಬಿಕೆಗಳ ಮೇಲೆ ಹಿಡಿತ ಸಾಧಿಸಿದರೆ ಅದು ಅಪಾಯಕಾರಿಯಾಗಬಲ್ಲದು ಎಂಬುದರಲ್ಲಿ ಅನುಮಾನವಿಲ್ಲ.
ಭಾರತದಲ್ಲಿದ್ದ ಸತಿ ಪದ್ಧತಿಯೆಂಬ ಘೋರ ಆಚರಣೆ ಹಳೆಯ ಗೊಡ್ಡು ಸಂಪ್ರದಾಯದ ಫಲಶ್ರುತಿ. ಅಂದು ರಾಜಾರಾಂ ಮೋಹನ್‌ರಾಯ್ ಅವರಂತಹ ಸಮಾಜ ಸುಧಾರಕರ ನಿರಂತರ ಹೋರಾಟದ ಫಲವಾಗಿ ಈ ಪದ್ಧತಿಯೇನೋ ತಹಬದಿಗೆ ಬಂತು. ಆದರೆ ದೇಶದ ಕೆಲ ಭಾಗಗಳಲ್ಲಿ ಇದು ಇನ್ನೂ ಆಚರಣೆಯಲ್ಲಿದೆ ಎಂಬುದು ಪ್ರತಿಯೊಬ್ಬ ಭಾರತೀಯನಿಗೂ ನಾಚಿಕೆಗೇಡಿನ ವಿಷಯ.
ಉದಾಹರಣೆಗೆ ಮನೆಯ ಛಾವಣಿಗೆ 12 ವರ್ಷದ ಬಾಲಕನನ್ನು ಕಟ್ಟಿ ಆತನ ಕೈಕಾಲನ್ನು ಬಂಧಿಸಿ ಅದೂ ಸಾಲದು ಎಂಬಂತೆ ಮನೆಯವರೂ, ಊರವರೂ ಸೇರಿ ಆ ಪುಟ್ಟ ಜೀವವನ್ನು ಹಿಗ್ಗಾ ಮುಗ್ಗಾ ಹೊಡೆಯುತ್ತಿದ್ದಾರೆ... ಕಾರಣ ಯಾವುದೋ ಒಂದು ಮೂಢನಂಬಿಕೆಯ ಗೊಡ್ಡು ನೆವ! ಬಿಡಿ, ಈ 12 ವರ್ಷದ ಬಾಲಕನ ಉದಾಹರಣೆ ವಿಚಿತ್ರದಲ್ಲಿ ವಿಚಿತ್ರವೇನೂ ಅಲ್ಲ. 432ಕ್ಕೂ ಹೆಚ್ಚಿನ ಮಕ್ಕಳು ಅಂಗೋಲಾದಲ್ಲಿ ಭಿಕ್ಷೆ ಬೇಡುತ್ತಾ ಬೀದಿಪಾಲಾಗಿದ್ದಾರೆ. 'ಇದೇನು ಹೊಸ ಸುದ್ದಿಯೇ?'ಎಂದು ನೀವು ಮೂಗು ಮುರಿಯುವ ಮುಂಚೆ ಇನ್ನೊಂದು ವಿಷಯ ಹೇಳುತ್ತೇನೆ; ಈ ಮಕ್ಕಳನ್ನು ಬೀದಿ ಪಾಲು ಮಾಡಿದ್ದು ಅವರ ಪೋಷಕರೇ!! ಕಾರಣ? ಮನೆಯಲ್ಲಿ ಜರುಗಿದ ಸಾವಿಗೆ, ಅನಾಹುತಗಳಿಗೆ ಈ 'ಮಾಂತ್ರಿಕರೇ'ಕಾರಣ ಎಂಬ ನಂಬಿಕೆ! ಎಲ್ಲಾ ಮೂಢನಂಬಿಕೆಗಳ ಹಿಂದಿರುವಂತೆ ಇಲ್ಲೂ ಒಂದು ಅವ್ಯಕ್ತ ಉದ್ದೇಶ ಹೆಡೆಮುದುಡಿ ಮಲಗಿದೆ. ಮಕ್ಕಳನ್ನು ಸಾಕುವುದು ಇನ್ನಿಲ್ಲದ ದೊಡ್ಡ ಸಮಸ್ಯೆ ಎಂದೆನಿಸಿದಾಗ ಹೆತ್ತ ಮಕ್ಕಳಿಗೇ 'ಮಂತ್ರ-ತಂತ್ರ ಪ್ರಯೋಗಿಸುವ ಮಕ್ಕಳು'ಎಂಬ ಹಣೆ ಪಟ್ಟಿ ಕಟ್ಟಿ ಸರಳವಾಗಿ ಸಮಸ್ಯೆಯನ್ನು ಸಾಗಹಾಕಲಾಗುತ್ತದೆ! ವಾಹ್ ಅದ್ಭುತ ಪರಿಹಾರ. ಅದಕ್ಕೆ ನಂಬಿಕೆಯ ಭದ್ರ ನೆಲೆಗಟ್ಟು! ಮೆಚ್ಚಲೇಬೇಕು.
ಪ್ರಪಂಚದ ಸಂದಿ ಗೊಂದಿಗಳಲ್ಲಿ ಇನ್ನೂ ಎಷ್ಟೆಲ್ಲಾ ಅನಾಚಾರಗಳು, ಮೂಢನಂಬಿಕೆಗಳು ಅಡಗಿ ಕುಳಿತಿವೆಯೋ ಆ ಗೊಡ್ಡು ಸಂಪ್ರದಾಯಗಳು ಎಷ್ಟೆಲ್ಲಾ ಜೀವಗಳಿಗೆ ಪ್ರಾಣಕಂಟಕವಾಗುತ್ತಿದೆಯೋ ಬಲ್ಲವರಾರು? ಇಂಥ ಆಚರಣೆಗಳು ಆ ದೇಶಕ್ಕೆ ಮಾತ್ರವಲ್ಲ ಸಮಸ್ತ ಮನುಕುಲಕ್ಕೇ ಅಪಾಯಕಾರಿ. 2005ರ ವೇಳೆಗೆ ಜಗತ್ತಿಗೆ ಜಗತ್ತೇ ಸಾಕ್ಷರವಾಗುವ ಮಾತಾಡುತ್ತಿದ್ದಾರೆ! ಪರಮಾಶ್ಚರ್ಯ!!
ಐಐಪಿಎಂ
'ಥಿಂಕ್ ಟ್ಯಾಂಕ್'
ತನಯಾ ಬೋಸ್
ಭಾರತ: ಖೋಟಾ ಜಾತ್ಯತೀತತೆ
ತಸ್ಲೀಮಾ ಮಾಡಿದ ಪ್ರಮಾದ!!
ಜಾತ್ಯತೀತತೆಯ ಹೆಸರಲ್ಲಿ ನಡೆಯುತ್ತಿರುವ ತೆರೆಮರೆಯಾಟ
ಜಾತ್ಯತೀತತೆಯ 'ಪ್ರದರ್ಶನ'ದ ಪುಟ್ಟ ಅವಕಾಶವನ್ನೂ ಬಾಚಿಕೊಳ್ಳುವಲ್ಲಿ ಪ್ರಚಂಡವೆನಿಸಿರುವ ರಾಷ್ಟ್ರವೊಂದಕ್ಕೆ ತಸ್ಲೀಮಾ ನಸ್ರೀನ್ ದೊಡ್ಡ ಅಪವಾದ. ಭಾರತ ಕಂಡ ಅತೀ ದೊಡ್ಡ ಗಲಭೆ ನಡೆದು ೫ ವರ್ಷಗಳೇ ಉರುಳಿ ಹೋದರೂ ಅದೊಂದು ಮಾಸದ ಗಾಯವಾಗಿ ಹಾಗೇ ಉಳಿದಿದೆ. ನಮ್ಮ ಇತಿಹಾಸದಲ್ಲಿ ಇಂಥ ಘಟನೆಗಳೇನೂ ಹೊಸತಲ್ಲ ಬಿಡಿ. ಆ ಘಟನೆ ಆಗಾಗ ನರೇಂದ್ರ ಮೋದಿ ಅವರಿಗೆ ಚುರುಕು ಮುಟ್ಟಿಸುತ್ತಿದ್ದರೂ ಆರಡಿ ದೇಹವನ್ನು ಮೂರಂಗುಲಕ್ಕೆ ಕುಗ್ಗಿಸಿ ಕೈಮುಗಿದು ಪ್ರಾಣ ಭಿಕ್ಷೆ ಬೇಡುತ್ತಿರುವ ಕುತುಬುದ್ದೀನ್ ಅನ್ಸಾರಿ ಚಿತ್ರ ಧರ್ಮದ ಹೆಸರಿನಲ್ಲಿ ನಡೆಯುವ ಆವಾಂತರಗಳ ಮುಖಮುದ್ರೆಯಾಗಿಬಿಟ್ಟಿತು. ಪಶ್ಚಿಮ ಬಂಗಾಳಕ್ಕೆ ತನ್ನ 'ಜಾತ್ಯತೀತತೆಯ ಪರಾಕಾಷ್ಠೆ'ಪ್ರದರ್ಶನಕ್ಕೆ ಇದಕ್ಕಿಂತ ತಕ್ಕ ಸಂದರ್ಭ ಬೇರೆ ಒದಗಿ ಬರುವುದುಂಟೇ?! ತಕ್ಷಣ ಕಾರ್ಯೋನ್ಮುಖವಾದ ಪಶ್ಚಿಮ ಬಂಗಾಳ ಸರ್ಕಾರ ಕುತುಬುದ್ದೀನ್ ಅನ್ಸಾರಿ ಅವರಿಗೆ ಆಶ್ರಯ ನೀಡಿ ತನ್ನ ಔದಾರ್ಯ ಪ್ರದರ್ಶಿಸಿತು. ಆ ಸುದೀರ್ಘ ಐದು ವರ್ಷಗಳ ಜೊತೆಗೆ ಕುತುಬುದ್ದೀನ್ ಚಿತ್ರದ ನೆನಪೂ ಮಸುಕಾಯಿತು. ಆ ಐದು ವರ್ಷಗಳು ಭಾರತವನ್ನೂ ಬದಲಾಯಿಸಿಬಿಟ್ಟವು.
ಈಗ ಅಂತಹದ್ದೇ ಒಂದು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವುದು ಭಾರತದ ಪಾಲಿಗೆ ಸುಲಭದ ಮಾತಾಗಿ ಉಳಿದಿಲ್ಲ. ಹಿಂದೂ ತೀವ್ರವಾದಿಗಳ ಆಕ್ರೋಶಕ್ಕೆ ಕುತುಬುದ್ದೀನ್ ತುತ್ತಾದರೆ, ಈಗ ತಸ್ಲೀಮಾ ಬಲಿ ಪಶುವಾಗಿದ್ದು ಮುಸ್ಲಿಂ ಸಂಪ್ರದಾಯವಾದಿಗಳ ಮತಾಂಧತೆಗೆ. ಒಂದು ವರ್ಷವಿಡೀ ನಂದಿಗ್ರಾಮದಲ್ಲಿ ಗುಂಡಿನ ದಾಳಿ ನಡೆದೇ ಇತ್ತು ಮತ್ತು ಶತ್ರು ಪಕ್ಷಗಳಿಂದ ನಂದಿಗ್ರಾಮವನ್ನು ಬಿಡಿಸಿಕೊಳ್ಳುವವರೆಗೆ ಈ ಹೋರಾಟ ಮುಂದುವರಿಯಿತು. ಆದರೆ ಆ ನತದೃಷ್ಟ ಮಹಿಳೆಯನ್ನು ರಾಜ್ಯದಿಂದ ಎತ್ತಂಗಡಿ ಮಾಡಲು ಸಂಪ್ರದಾಯವಾದಿಗಳ ಕ್ಷಣಕಾಲದ ಗಲಭೆ ಮತ್ತು ಕಿಡಿಗೇಡಿಗಳ ಪ್ರತಿಭಟನೆ ಧಾರಾಳವಾಗಿಬಿಟ್ಟಿತು! ಈಡನ್ ಟೆಸ್ಟ್‌ನಲ್ಲಿ ಆಡುತ್ತಿರುವ ಭಾರತ ಹಾಗೂ ಪಾಕಿಸ್ತಾನದ ಸುಮಾರು ೩೦ ಆಟಗಾರರ ರಕ್ಷಣೆಗೆ 5000 ಪೊಲೀಸರ ರಕ್ಷಣಾಪಡೆಯನ್ನೇ ಸಜ್ಜುಗೊಳಿಸುವ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸಂಪ್ರದಾಯವಾದಿಗಳ ಕೈಯಿಂದ ತಸ್ಲೀಮಾರನ್ನು ರಕ್ಷಿಸುವುದು ಅಸಾಧ್ಯವಾಯಿತು! ಹಾಗೆ ಈ ಮಹಿಳೆಯನ್ನು ಕೋಲ್ಕತ್ತಾ ಬಿಟ್ಟು ಹೋಗುವಂತೆ ಆದೇಶಿಸಲಾಯಿತು. ಅಲ್ಲಿಗೇ ಮುಗಿಯಲಿಲ್ಲ. ತಸ್ಲೀಮಾ ಮತ್ತು ವಿಧಿಯ ನಡುವಿನ ಸೆಣೆಸಾಟ... ದುರಂತಗಳ ಅಧ್ಯಾಯಕ್ಕೆ ಅದು ಕೇವಲ ನಾಂದಿ ಅಷ್ಟೇ...
ತಸ್ಲೀಮಾ ನಸ್ರೀನ್ ಯಾರು? ಆಕೆಯ ತಪ್ಪೇನು? ಹಲವು 'ಶಾ ಬಾನು'ಗಳ ಈ ನೆಲದಲ್ಲಿ ತಸ್ಲೀಮಾ ಮಾಡಿದ ತಪ್ಪೆಂದರೆ ಮುಕ್ತರನ್ ಮಾಯಿಯ ಬಗ್ಗೆ ತಾಳಿದ ಸದಭಿಪ್ರಾಯ! ಮುಕ್ತರನ್ ಮಾಯಿಯ ನೆನಪಿದೆಯೇ? ಯಾವುದೋ ಒಂದು ಕ್ಷುಲ್ಲಕ ಮನೆಜಗಳದ ಪರಿಹಾರಕ್ಕಾಗಿ 'ಸಾಮೂಹಿಕ ಅತ್ಯಾಚಾರ'ಎಂಬ ಘೋರ ಶಿಕ್ಷೆಗೆ ಗುರಿಯಾದ ಪಾಕಿಸ್ತಾನದ ಮುಜಫರಾಬಾದ್‌ನ ಹೆಣ್ಣುಮಗಳು! ಇಂಥ ಘಟನೆಗಳು ದಕ್ಷಿಣ ಏಷ್ಯಾದಲ್ಲಿ, ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಆಗಾಗ ನಡೆಯುತ್ತಲೇ ಇರುತ್ತವೆ ಬಿಡಿ. ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಮಹಿಳೆಗೆ ಸೌದಿ ನ್ಯಾಯಾಲಯ ೨೦೦ ಛಡಿಯೇಟು ಮತ್ತು ಆರು ವರ್ಷದ ಜೈಲು ಶಿಕ್ಷೆ ವಿಧಿಸಿದ್ದು ಇತ್ತೀಚಿನ ಉದಾಹರಣೆ! ಬಹುಶಃ ವಿಭಿನ್ನ ದೃಷ್ಟಿ ಕೋನ ಮತ್ತು ದಿಟ್ಟತನದಿಂದ ಪ್ರತಿಭಟಿಸುವುದು ತಸ್ಲೀಮಾ ಮಾಡುತ್ತಿರುವ ತಪ್ಪು! ಭಾರತದ ಏಕಮುಖೀ ಖೋಟಾ ಜಾತ್ಯತೀತತೆಯನ್ನು ಸಾಚಾ ಅಂದು ಕೊಂಡಿದ್ದು ತಸ್ಲೀಮಾ ಮಾಡಿದ ದೊಡ್ಡ ಪ್ರಮಾದ! ಒಂದಂತೂ ನಿಜ. ಪ್ರತಿಭಟನೆ ನಡೆಸುತ್ತಿರುವ ಮುಕ್ಕಾಲು ಪಾಲು ಜನರೂ ಆಕೆಯ ಪುಸ್ತಕವನ್ನು ಓದುವುದು ಬಿಡಿ, ಮುಟ್ಟಿಯೂ ನೋಡಿರಲಾರರು! ಜನರ ಭಾವನೆಗಳನ್ನು ಪ್ರಚೋದಿಸಬಾರದು ಎಂಬ ಷರತ್ತಿನ ಮೇರೆಗೆ ಕೇಂದ್ರ ಸರ್ಕಾರ ಆಶ್ರಯ ನೀಡಿದ್ದರೂ ಹಲವು ಸುತ್ತುಗಳ ಚರ್ಚೆ, ಮಾತುಕತೆ, ವಿವಾದಗಳು ಇವೆಲ್ಲವೂ ಕೇಂದ್ರ ಸರ್ಕಾರದ ಆ 'ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ'ನಿರ್ಧಾರದ ಹಿಂದಿದ್ದವು. ಸರಿ, ಆಕೆಯ ಲೇಖನಗಳು ನಿಜಕ್ಕೂ ಜನರ ಭಾವನೆಗಳನ್ನು ನೋಯಿಸುತ್ತಿವೆಯೇ? ತಸ್ಲೀಮಾ ತಮ್ಮ ತಿತಿತಿ.ಣಚಿsಟimಚಿಟಿಚಿsಡಿiಟಿ.ಛಿom ವೆಬ್ ಸೈಟ್‌ನಲ್ಲಿ ಬರೆದ ಈ ವಾಕ್ಯಗಳನ್ನು ಓದಿ ನೋಡಿ, "ಪಶ್ಚಿಮ, ಪೂರ್ವ, ಉತ್ತರ ದಕ್ಷಿಣವೆನ್ನದೇ ಎಲ್ಲೆಡೆಗಳಲ್ಲೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಮನೆಯ ಹೊರಗೂ, ಮನೆಯ ಒಳಗೂ ಆಕೆ ದೌರ್ಜನ್ಯಕ್ಕೊಳಗಾಗುತ್ತಿದ್ದಾಳೆ. ಆಕೆ ಆಸ್ತಿಕಳೋ, ನಾಸ್ತಿಕಳೋ, ಸುಂದರಿಯೋ, ಕುರೂಪಿಯೋ ಒಟ್ಟಾರೆ ಹೆಣ್ಣೆಂದ ಮೇಲೆ ಆಕೆ ದೌರ್ಜನ್ಯಕ್ಕೆ ಒಳಗಾಗುತ್ತಾಳೆ. ಅಂಗವಿಕಲಳೋ, ಶ್ರೀಮಂತಳೋ, ಬಡವಳೋ, ಅಕ್ಷರಸ್ಥಳೋ ಅಥವಾ ನಿರಕ್ಷರಕುಕ್ಷಿಯೋ ಆಕೆ ಪೀಡನೆಗೆ ಒಳಗಾಗುವುದು ಮಾತ್ರ ಸತ್ಯ. ವಸ್ತ್ರಧಾರಿಯೇ, ನಗ್ನಳೇ, ಮೂಕಿಯೇ, ಮುಜುಗರದ ಚಿಪ್ಪೊಳಗಿರುವವಳೇ ಅಥವಾ ದಿಟ್ಟೆದೆಯ ವೀರ ಮಹಿಳೆಯೇ ಎಂಬುದಕ್ಕಿಲ್ಲಿ ಪ್ರಾಶಸ್ತ್ಯವಿಲ್ಲ ಹೆಣ್ಣಾಗಿ ಹುಟ್ಟಿದ ಮೇಲೆ ಆಕೆ ಖಂಡಿತವಾಗಿಯೂ ದೌರ್ಜನ್ಯಕ್ಕೊಳಗಾಗುತ್ತಾಳೆ..." ತಸ್ಲೀಮಾ ಇಂಥವನ್ನೆಲ್ಲಾ ಬರೆಯುವಾಗ ಎಚ್ಚರಿಕೆಯಿಂದಿರಬೇಕು, ಏಕೆಂದರೆ ನಮ್ಮ ಸರ್ಕಾರದ ಪ್ರಕಾರ ಇವೆಲ್ಲಾ ಜನರ ಭಾವನೆಗಳಿಗೆ ನೋವುಂಟುಮಾಡುತ್ತವೆ!
ಐಐಪಿಎಂ
'ಥಿಂಕ್ ಟ್ಯಾಂಕ್'
ಪಥಿಕೃತ್ ಪಾಯ್ನೆ
|