ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಮಾಧ್ಯಮ ಗೊಂದಲ
 
ಶಿಕ್ಷಣದ ನಿಜ ಅರ್ಥ ಮರೆಸಿದ ಭಾಷಾ ಜಗಳ
 

ಶಿಕ್ಷಕರು ಮಗುವಿನ ಸುಪ್ತಶಕ್ತಿ ಪ್ರಕಟಗೊಳ್ಳಲು ನೆರವಾದರೆ ಭಾಷಾ ಗೊಂದಲವನ್ನು ಮಗುವೇ ಬಗೆಹರಿಸಿಕೊಳ್ಳುತ್ತದೆ

ಡಾ. ಕೆ.ಬಿ. ಲೋಕೇಶ್ವರಪ್ಪ

ಉಪನ್ಯಾಸಕರು

'ಇಂಗ್ಲಿಷ್ ಮಾಧ್ಯಮ'ದ ಶಿಕ್ಷಣ ಬೇಕು ಎನ್ನುವ ವಾದದ ಹಿಂದೆ ವಾಸ್ತವವಾಗಿ ಇರುವುದು 'ಇಂಗ್ಲಿಷ್' ಅಲ್ಲ; ಬದಲಿಗೆ ಹೊಟ್ಟೆಪಾಡಿಗೊಂದು ಉದ್ಯೋಗ, ಹಣ, ಆಸ್ತಿ, ಅಧಿಕಾರ, ಸಾಮಾಜಿಕ ಸ್ಥಾನಮಾನ ಮುಂತಾದ ವಿಚಾರಗಳು ಎನ್ನುವುದು ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ. ಇವುಗಳಿಗೆ ನೆರವಾಗುವಂತಹ ಭಾಷೆ ಯಾವುದಾದರೂ ಸರಿ, ಸುಲಭವಾಗಿ ಈಡೇರುವಂತಾದರೆ ಸಾಕು. ಇವೆಲ್ಲವೂ ಪ್ರಪಂಚದ ಯಾವುದೇ ಭಾಷೆಯಿಂದ ಸಾಧ್ಯವಾಗುತ್ತದೆ ಎಂದಾದರೂ ಆ ಭಾಷೆಯೇ ಬೇಕು ಎಂದು ಹಠ ಮಾಡುವ ಸಮುದಾಯದವರು ನಾವು. ನಿಜವಾಗಿ ನಮಗೆ ಇಂಗ್ಲಿಷ್ ಭಾಷೆಯೇ ಆಗಬೇಕೆಂಬ ಹಠವಿಲ್ಲ. ಇದು ಕನ್ನಡದಿಂದ ಸಾಧ್ಯವಾಗುತ್ತದೆ ಎನ್ನುವುದಾದರೆ ಕನ್ನಡವೇ ಇರಲಿ ಎನ್ನುತ್ತೇವೆ. ಇದನ್ನು ಬಿಟ್ಟು ಬೇರೆ ಯಾವುದೇ ವಿಷಯ: ಮಾತೃಭಾಷೆ, ಸಂಸ್ಕೃತಿ, ಪರಂಪರೆ, ಅಭಿಮಾನ, ಪ್ರೀತಿ, ಗೌರವ... ಇತ್ಯಾದಿಗಳು ನಮ್ಮ ಆಯ್ಕೆಗಳಲ್ಲ.

ಇದು ಇನ್ನೂ ಸ್ಪಷ್ಟವಾಗಬೇಕೆಂದರೆ ನಮ್ಮಲ್ಲಿ ಇಂಗ್ಲಿಷ್ ಭಾಷೆ ಅಥವಾ ಆ ಸಂಸ್ಕೃತಿಯನ್ನು ಉದ್ಧರಿಸಬೇಕು, ಬೆಳೆಸಬೇಕು ಎನ್ನುವ ಯಾವುದೇ ಇಚ್ಛೆಯೂ ಇಲ್ಲ ಎಂಬುದನ್ನು ಮನಗಾಣಬೇಕು. ಆದ್ದರಿಂದ ನಮ್ಮ ಮೂಲ ಉದ್ದೇಶ, ಮೇಲೆ ಹೇಳಿದಂತೆ ನಾವು ಉದ್ಧಾರವಾಗಬೇಕು, ಅಷ್ಟೇ.

ಹೀಗೆ ಯೋಚನೆ ಮಾಡುವವರ ಪ್ರಮಾಣವೇ ಗರಿಷ್ಠವಾಗಿರುವುದರಿಂದ ಶಿಕ್ಷಣ ಮಾಧ್ಯಮ ಯಾವುದಿರಬೇಕು ಎನ್ನುವ ಜಿಜ್ಞಾಸೆ ತೀವ್ರವಾಗಿದೆ. ಮಾಧ್ಯಮದ ಬದಲಿಗೆ 'ಶಿಕ್ಷಣ' ಇಂಥದ್ದಿರಬೇಕು ಎಂದು ಕೋರ್ಟಿನ ಮೆಟ್ಟಿಲು ಹತ್ತುವಂತಾಗಿದ್ದಿದ್ದರೆ, 'ಜನ ಪರವಾಗಿಲ್ಲ ಎಚ್ಚರಗೊಂಡಿದ್ದಾರೆ' ಎಂದು ಸಮಾಧಾನ ಪಡಬಹುದಿತ್ತು. ಆದರೆ 'ಮಾಧ್ಯಮ' ಇಂಥದ್ದಿರಬೇಕು ಎಂದು ಕೋರ್ಟಿನ ಮೆಟ್ಟಿಲು ಹತ್ತಿರುವುದು ಆಧುನಿಕ ಕಾಲದಲ್ಲಿರುವ ನಮ್ಮ ದುಃಸ್ಥಿತಿಯನ್ನು ಹೇಳುತ್ತದೆ.

ಈ ಭಾಷಾ ಜಗಳವೇ ಅತ್ಯಂತ ಅರ್ಥರಹಿತ ಎನ್ನುವುದು 'ಶಿಕ್ಷಣ'ದ ವಿಚಾರವನ್ನು ಗಮನಿಸಿದಾಗ ತಿಳಿಯುತ್ತದೆ. ಶಿಕ್ಷಣವೆಂದರೆ ಯಾವುದು? ಕಲಿಕೆ ಎಂದರೆ ಏನು? ಎಂದು ಉತ್ತರ ಕಂಡುಕೊಳ್ಳಲು ಹೊರಟರೆ ಈ ಮಾತು ಅರ್ಥವಾಗುತ್ತದೆ. ಉತ್ತರ ಕಂಡುಕೊಳ್ಳುವ ಪ್ರಯತ್ನಗಳು ಮತ್ತು ಅದನ್ನು ನೀಡುವ ವ್ಯವಸ್ಥೆ ಬಹುಸಂಖ್ಯಾತ ಸಮುದಾಯವನ್ನು ಒಳಗೊಂಡಿಲ್ಲದೆ ಇರುವುದರಿಂದ 'ಮಾಧ್ಯಮ'ದ ಪ್ರಶ್ನೆ ಪ್ರತಿಷ್ಠೆಗೀಡಾಗಿದೆ. ನಿಜವಾದ ಶಿಕ್ಷಣ ಆಂತರಿಕವಾಗಿ ಅನುಸಂಧಾನಗೈಯ್ಯುವುದಕ್ಕೆ ನೆರವಾಗಬೇಕು. ಆದರೆ ನಾವು ಈ ವಿಚಾರದಲ್ಲಿ ಸಂಪೂರ್ಣ ಅವಜ್ಞೆಯಿಂದಿರುವುದರಿಂದ ಬ್ರಿಟಿಷರು ತಮ್ಮ ಸ್ವಾರ್ಥದ ಉದ್ದೇಶಕ್ಕಾಗಿ ಆರಂಭಿಸಿದ 'ತರಗತಿ ಬೋಧನಾ ವ್ಯವಸ್ಥೆ', 'ಶಿಕ್ಷಣ'ದ ಹೆಸರಿನಲ್ಲಿ ತೌಡು ಕುಟ್ಟುವ ಕೆಲಸವಾಗಿದೆ. ಬೇಸರದ ಸಂಗತಿ ಎಂದರೆ ನಮಗೆ ಈಗ ಎಂತಹ ಶಿಕ್ಷಣ ಬೇಕು, ನಮ್ಮ ಶಿಕ್ಷಕ ವೃಂದ ಹೇಗಿರಬೇಕು, ಕಲಿಕೆಯ ವಾತಾವರಣ ಎಂಥದ್ದಿರಬೇಕು ಎಂಬ ಅಂಶಗಳು ಚರ್ಚಿತವಾಗುತ್ತಲೇ ಇಲ್ಲ.

ಮಗುವಿನ ಉಲ್ಲಾಸ, ಉತ್ಸಾಹ, ಕ್ರಿಯಾಶೀಲತೆ, ಏಕಾಗ್ರತೆ, ಆಸಕ್ತಿ, ಪ್ರೀತಿ, ಧೈರ್ಯ, ತಾಳ್ಮೆ ಮುಂತಾದ ಗುಣಲಕ್ಷಣಗಳನ್ನು ಬಲಗೊಳಿಸುವ ಬದಲು ಭಯ, ನಿರಾಸಕ್ತಿ, ನಿರುತ್ಸಾಹ, ಆಲಸ್ಯ, ಚಂಚಲತೆ, ದ್ವೇಷ ಮುಂತಾದ ನಕಾರಾತ್ಮಕ ಗುಣಗಳನ್ನು ಬಲಗೊಳಿಸುವ ಶೈಕ್ಷಣಿಕ ವ್ಯವಸ್ಥೆ ಈಗ ಚಾಲ್ತಿಯಲ್ಲಿರುವುದನ್ನು ನೋಡುತ್ತಿದ್ದೇವೆ. ವಿದೇಶಿ ಕಂಪನಿಗಳಿಗೆ ಕೂಲಿಗಳನ್ನು ಸೃಷ್ಟಿಸಿಕೊಡುತ್ತಿರುವ ಈ ಶಿಕ್ಷಣ ಪದ್ಧತಿ ವಿದ್ಯಾರ್ಥಿಗಳಲ್ಲಿ ನಕಾರಾತ್ಮಕ ಗುಣಗಳನ್ನು ತೊಡೆದು ಹಾಕಿಕೊಳ್ಳಬಲ್ಲ ಅಂತಃಸ್ಸತ್ವ ಮೂಡಿಸುತ್ತಿಲ್ಲ. ಮಗುವಿನ ಆಂತರಿಕ ಶಕ್ತಿ ಸಂಪತ್ತು ಯಾವುದು ಎನ್ನುವುದನ್ನು ಗ್ರಹಿಸುವ ಅರಿವಾಗಲಿ, ಎಚ್ಚರವಾಗಲಿ, ಜವಾಬ್ದಾರಿಯಾಗಲಿ ಇಲ್ಲದ, ಮೆಕಾಲೆ ಶಿಕ್ಷಣ ಪದ್ಧತಿಯಲ್ಲಿ ಮಿಂದು ಬಂದ ನಮ್ಮ 'ಶಿಕ್ಷಣ ತಜ್ಞರ'ನ್ನೇ ಗಮನಿಸಿ. ಅವರು ತಮ್ಮ ಹೊಟ್ಟೆಪಾಡಿಗೋ; ಉದ್ಯೋಗದ ಕಾರಣಕ್ಕೋ; ಹಣ, ಆಸ್ತಿ, ಹೆಸರು, ಸಾಮಾಜಿಕ ಸ್ಥಾನಮಾನದ ಆಸೆಗೋ ಆರಂಭಿಸಿದ ಶಿಕ್ಷಣ ಸಂಸ್ಥೆಗಳು ಅಕ್ಷರಶಃ ವ್ಯಾಪಾರಕ್ಕಿಳಿದಿರುವುದು ಇಂಗ್ಲಿಷ್ ಪರವಾಗಿ ವಾದಿಸುವವರಿಗೂ ತಿಳಿದಿರುವ ವಿಚಾರ.

ಭಾಷಾ ವಿಚಾರ ಶಿಕ್ಷಣದ ನೀತಿಯಾಗಿರುವುದಕ್ಕಿಂತ ಹೆಚ್ಚಾಗಿ ವ್ಯಾಪಾರದ ನೀತಿಯಾಗಿ ಬದಲಾಗಿರುವುದು ತಿಳಿಯದ ವಿಷಯವೇನಲ್ಲ. ಕನ್ನಡ ಮಾತನಾಡುವ ಬಹುಸಂಖ್ಯಾತರು ಕರ್ನಾಟಕದಲ್ಲಿದ್ದಾರೆಯೆಂದು ಬಹುರಾಷ್ಟ್ರೀಯ ಕಂಪನಿಯೊಂದು ಲಾಭದ ಉದ್ದೇಶಕ್ಕಾಗಿ ಕನ್ನಡವನ್ನು ತನ್ನ ವ್ಯಾಪಾರದ ಮಾಧ್ಯಮವನ್ನಾಗಿ ಮಾಡಿಕೊಳ್ಳುವ ನೀತಿಯಂತೆ ಇಂಗ್ಲಿಷ್ ಪರವಾದ ಪ್ರತಿಪಾದನೆ ಕೂಡಾ ವ್ಯಾಪಾರದ ನೀತಿಯಾಗಿ ರೂಪುಗೊಂಡಿದೆ. ಹೀಗಾಗಿ ಶಿಕ್ಷಣ ಮಾಧ್ಯಮದ ಚರ್ಚೆ ಈ ದೃಷ್ಟಿಯಿಂದ ನಿರುಪಯುಕ್ತವಷ್ಟೇ ಅಲ್ಲ ನಿಜವಾದ ಶಿಕ್ಷಣದ ದೃಷ್ಟಿಯಿಂದಲೂ ಅನಗತ್ಯವಾಗಿದೆ.

ಮಗುವಿನ ಸುಪ್ತ ಶಕ್ತಿಗಳು ಪ್ರಕಟವಾಗುತ್ತಾ ವಿಕಾಸಗೊಳ್ಳಲು ಸಹಾಯ ಮಾಡುವ ಶೈಕ್ಷಣಿಕ ವ್ಯವಸ್ಥೆಯೊಂದಿದ್ದರೆ, ಅದಕ್ಕೆ ನೆರವಾಗುವ ಭಾಷೆ ಮಗುವಿನದೇ ಆಗಿದ್ದರೆ ಆ ಮಗುವಿನ ಗ್ರಹಿಕೆ ಮತ್ತು ಕಲಿಕೆ ಸಮತೋಲನದಿಂದ ಕೂಡಿರುತ್ತದೆ. ಹೀಗೆ ವಿಕಾಸಗೊಳ್ಳುವ ಸುಪ್ತಶಕ್ತಿ ಸಹಜವಾಗಿಯೇ ತನಗೆ ಬೇಕಾದ ಭಾಷೆಯನ್ನು ತಾನೇ ಕಂಡುಕೊಳ್ಳುತ್ತಾ ಸಾಗುತ್ತದೆ. ಈ ಬಗೆಯ ಮಹತ್ವವನ್ನು ಮನಗಾಣದ ಸಮುದಾಯ ಶಿಕ್ಷಣದ ಹೆಸರಿನಲ್ಲಿ ಮಗುವನ್ನು ಸಂಪೂರ್ಣವಾಗಿ ಬಲಿಪಶುವನ್ನಾಗಿ ಮಾಡಿಕೊಂಡು ('ತಾರೆ ಜಮೀನ್ ಪರ್' ಸಿನೆಮಾ ನೆನಪಾಗಬಹುದು) ಭಾಷೆಯ ಕಿತ್ತಾಟವೊಂದನ್ನು ಹುಟ್ಟಿಸಿಕೊಂಡಿದೆ. ತಮ್ಮ ತಮ್ಮ ತೆವಲುಗಳಿಗಾಗಿ ಬಡಿದಾಡುತ್ತಿರುವ ಸಮುದಾಯಗಳು ಮಗುವಿನ ಅಗತ್ಯವನ್ನು ಕಂಡುಕೊಳ್ಳುವ ಯತ್ನ ಮಾಡುತ್ತಿಲ್ಲ.

ಈಗಾಗಲೇ ಹೇಳಿದ ಹೊಟ್ಟೆಪಾಡು, ಹಣ, ಆಸ್ತಿ, ಅಧಿಕಾರ ಮುಂತಾದ ಅಂಶಗಳ ಈಡೇರಿಕೆಯನ್ನೇ ಪ್ರಮುಖ ಉದ್ದೇಶವಾಗಿಸಿಕೊಂಡಿರುವ ಸಮುದಾಯ ತಮ್ಮ ಮಗು ವಿಜ್ಞಾನವನ್ನೇ ಓದಬೇಕು, ಇಂಜಿನಿಯರ್, ಡಾಕ್ಟರೇ ಆಗಬೇಕು ಎಂದು ಮಕ್ಕಳ ಮೇಲೆ ಹಿಂಸಾತ್ಮಕ ಒತ್ತಾಯ ಹೇರುತ್ತಿರುವುದು ನಮ್ಮ ಕಣ್ಣೆದುರಿಗಿನ ಸತ್ಯ. ಇಂಥ ಮೌಢ್ಯ ಆಚರಣೆ ಜಾರಿಯಲ್ಲಿರುವಾಗ ಇಂಗ್ಲೀಷ್ ಕಲಿಕೆ ಮಾತ್ರ ಹೇಗೆ ಇದಕ್ಕಿಂತ ಭಿನ್ನವಾಗಿರಲು ಸಾಧ್ಯ? ಗಾಢ ಮೌಢ್ಯಕ್ಕೀಡಾಗಿರುವಾಗ ಇನ್ನಿತರ ವಿಷಯಗಳಲ್ಲಿ ವೈಜ್ಞಾನಿಕತೆಯನ್ನು ಎಲ್ಲಿಂದ ನಿರೀಕ್ಷಿಸುವುದು? ಮನುಷ್ಯ ಸಾಮರ್ಥ್ಯಕ್ಕೆ ಬೆಲೆ ಕೊಡದೆ ಭಾಷಾ ಸಾಮರ್ಥ್ಯಕ್ಕೆ ಬೆಲೆಕೊಟ್ಟು ನಂಬಿರುವ ವಿಪರ್‍ಯಾಸವಿದು.

ಹಾಗೆ ನೋಡಿದರೆ ಯಾವುದೇ ಜ್ಞಾನಕ್ಕೆ ಭಾಷೆ ಒಂದು ಮಾರ್ಗವೇ ವಿನಾ ಭಾಷೆಯೇ ಎಲ್ಲವೂ ಅಲ್ಲ. ಧ್ಯಾನದ ಒಂದು ಉದಾಹರಣೆಯನ್ನು ಇಲ್ಲಿ ಉಲ್ಲೇಖಿಸಬಯಸುತ್ತೇನೆ. ಅನಿರ್ವಚನೀಯ ಜ್ಞಾನ ಕೊಡುವ ಧ್ಯಾನಕ್ಕೆ ನಾವೆಲ್ಲಾ ಅಂದುಕೊಂಡಿರುವ ಭಾಷೆ ಅಗತ್ಯವೇ ಇಲ್ಲ. ಹಾಗೇ ಧ್ಯಾನ ಒದಗಿಸುವ ಜ್ಞಾನವನ್ನು ಸಮಗ್ರವಾಗಿ ಭಾಷೆಯ ಮೂಲಕ ಪ್ರಕಟಿಸಲೂ ಸಾಧ್ಯವಿಲ್ಲ. ಆ ಜ್ಞಾನ ನಮ್ಮ ಕಾರ್ಯ, ಆಲೋಚನೆ, ಆಟ-ಪಾಠಗಳಲ್ಲಿ ಪ್ರಕಟಗೊಳ್ಳುತ್ತಾ ಹೋಗುತ್ತದೆ. ಪ್ರೀತಿ, ಸ್ನೇಹ, ಸಹನೆ, ಧೈರ್ಯ, ಗೌರವ, ದೃಢತೆ ಮುಂತಾದ ಗುಣಗಳಿಂದ ಕೂಡಿದ ವ್ಯಕ್ತಿಗಳು ಉಪಾಧ್ಯಾಯ ವೃತ್ತಿಗೆ ಸೇರಿ ಮಗುವಿನ ವ್ಯಕ್ತಿಗತ ಸುಪ್ತಶಕ್ತಿ ಪ್ರಕಟವಾಗಲು ನೆರವಾದರೆ, ಅಂತಹ ವ್ಯವಸ್ಥೆಯೊಂದನ್ನು ಶಾಂತ ಪರಿಸರದಲ್ಲಿ ಒದಗಿಸಿದರೆ ಭಾಷಾ ಮಾಧ್ಯಮದ ಸಮಸ್ಯೆಯನ್ನು ಮಗು ತನಗೆ ತಾನೇ ಪರಿಹರಿಸಿಕೊಳ್ಳುತ್ತದೆ. ಇಂಥ ಕಡೆ ಭಾಷೆಯನ್ನು ಮೊದಲನೆಯ ಎರಡನೆಯ ಮೂರನೆಯ ಭಾಷೆಯೆಂದು ಕಲಿಸಬೇಕಾದ ಅಗತ್ಯವಾದರೂ ಏನಿರುತ್ತದೆ?

ಇದನ್ನು ಕಡೆಗಣಿಸಿ 'ಶಿಕ್ಷಣ'ದ ಹೆಸರಿನಲ್ಲಿ ಶಿಸ್ತು, ಸ್ವಚ್ಛತೆ, ರ್‍ಯಾಂಕು, ಬಹುಮಾನ, ಸ್ಪರ್ಧೆ ಹಾಳು-ಮೂಳು ಎಂದು ಮಗುವನ್ನು ಗೊಂದಲಗೊಳಿಸಿ ಭಾಷಾ ಮಾಧ್ಯಮದ ಮೂಲಕ ಕಲಿಯಲು ಒತ್ತಾಯಿಸಿ ಹಿಂಸಿಸುತ್ತಿರುವ ಈ ದೇಶದ ವಸ್ತುಸ್ಥಿತಿ ಎಚ್ಚರಿಕೆಯ ಗಂಟೆ ಬಾರಿಸುತ್ತಿದೆ. ಇದನ್ನು ಮನಗಾಣದ, ಗಮನಿಸದ ನ್ಯಾಯಾಲಯಗಳ ಸಾಂದರ್ಭಿಕ ತೀರ್ಪು ನಿಜವಾದ ನ್ಯಾಯ ಒದಗಿಸುತ್ತದೆಯೇ?

ಟಿಎಸ್‌ಐ

 

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .