ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ವಿಶೇಷ ವರದಿ
ಪಕ್ಷಾಂತರ ಪರ್ವ ಕಮಲಕ್ಕೆ ವರವೇ?
 

ಕರ್ನಾಟಕದಲ್ಲಿ ಚುನಾವಣೆ ನಡೆದು ಒಂದೂವರೆ ತಿಂಗಳಲ್ಲೇ ಪಕ್ಷಾಂತರ ಪರ್ವ ಆರಂಭವಾಗಿದೆ. ಈ ಬೆಳವಣಿಗೆ ಮೂರೂ ಪಕ್ಷಗಳಲ್ಲಿ ಹುಟ್ಟಿಸಿರುವ ತಲ್ಲಣದ ಸುತ್ತ 'ಟಿಎಸ್‌ಐ' ಬೆಳಕು ಚೆಲ್ಲಿದೆ

  

ಕರ್ನಾಟಕದ ರಾಜಕಾರಣ ಮತ್ತೆ ರಂಗೇರತೊಡಗಿದೆ. ಆರು ತಿಂಗಳ ಹಿಂದೆ ನಿತ್ಯದ ನಾಟಕೀಯ ಬೆಳವಣಿಗೆಗಳ ಮೂಲಕ ಇಡೀ ದೇಶದ ಗಮನಸೆಳೆದಿದ್ದ ರಾಜ್ಯ ರಾಜಕಾರಣದಲ್ಲಿ ಈಗ ಹಣ ಮತ್ತು ಅವಕಾಶವಾದಿತನ ಆಟ ಮತ್ತೆ ಶುರು ಮಾಡಿದೆ.

ಕಳೆದ ವಾರ ಕಾಂಗ್ರೆಸ್ ಮತ್ತು ಜೆಡಿ(ಎಸ್) ಪಕ್ಷಗಳನ್ನು ತೊರೆದ ನಾಲ್ವರು ಶಾಸಕರು ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದಾರೆ. ಚುನಾವಣೆ ಮುಗಿದು 40 ದಿನ ಕೂಡ ಕಳೆಯುವ ಮೊದಲೇ ಈ 'ಜನಪ್ರತಿನಿಧಿ'ಗಳು ತಮ್ಮನ್ನು ಆರಿಸಿ ಕಳಿಸಿದ ಮತದಾರರ ಜನಾದೇಶವನ್ನು ಬುಡಮೇಲು ಮಾಡಿ ಮತ್ತೆ ಹೊಸ ಜನಾದೇಶ ಪಡೆಯಲು ಸಿದ್ಧ ಎಂದಿದ್ದಾರೆ. ರಾಜ್ಯ ರಾಜಕೀಯದಲ್ಲಿ ಚುನಾವಣೆಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿ ರಾಜಕೀಯ ನಾಯಕರು ಒಂದು ಪಕ್ಷದಿಂದ ಮತ್ತೊಂದಕ್ಕೆ ತಮ್ಮ ನಿಷ್ಠೆ ಬದಲಿಸುವುದು ಸಾಮಾನ್ಯವಾಗಿತ್ತು. ಹಿಂದಿನ ಹಲವು ಸರ್ಕಾರಗಳ ಸಂದರ್ಭದಲ್ಲಿ ಹಾಗೇ ಪಕ್ಷಾಂತರ ನಡೆದಿತ್ತು. ಆದರೆ, ಇದೀಗ ಚುನಾವಣೆ ಮುಗಿದು ಐದು ವಾರ ಕಳೆಯುವ ಮುನ್ನವೇ ಸಾಲು- ಸಾಲು ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಅಧಿಕಾರಾರೂಢ ಪಕ್ಷದ ಕದ ತಟ್ಟತೊಡಗಿದ್ದಾರೆ.

ಅದು ಕಾಂಗ್ರೆಸ್ ಮತ್ತು ಜೆಡಿ(ಎಸ್) ಪಾಳೆಯದಲ್ಲಿ ಗರಬಡಿದಂತಹ ವಾತಾವರಣ ಸೃಷ್ಟಿಸಿದ್ದರೆ ಬಿಜೆಪಿ ವಲಯದಲ್ಲಿ ಒಂದೆಡೆ ಸಂಭ್ರಮ ಮತ್ತೊಂದೆಡೆ ಆತಂಕದ ಅಲೆ ಎಬ್ಬಿಸತೊಡಗಿದೆ. ತನ್ನ ಶಾಸಕರು ಒಬ್ಬೊಬ್ಬರಾಗಿ ಆಡಳಿತ ಪಕ್ಷದ ತೆಕ್ಕೆಗೆ ಸರಿಯುತ್ತಿರುವುದು ಕಾಂಗ್ರೆಸ್ ಮತ್ತು ಜೆಡಿ(ಎಸ್) ನಾಯಕರನ್ನು ದಿಕ್ಕುಗೆಡಿಸಿದೆ. ಜೊತೆಗೆ ಆ ಪಕ್ಷಗಳಿಂದ ಇನ್ನೂ ಕೆಲವು ಘಟಾನುಘಟಿ ನಾಯಕರುಗಳು ಕಮಲವನ್ನು ಅಪ್ಪಿಕೊಳ್ಳುವ ನಿಟ್ಟಿನಲ್ಲಿ ತೆರೆಮರೆಯ 'ವ್ಯವಹಾರ' ನಡೆಸುತ್ತಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದೆ. ಬಿಜೆಪಿಯ ಕದ ಬಡಿಯುವವರ ಸಾಲಿನಲ್ಲಿ ದಿನಕ್ಕೊಂದು ಹೆಸರು ಸೇರುತ್ತಲೇ ಇದೆ. 'ಕಾಂಗ್ರೆಸ್‌ನ ಜಗ್ಗೇಶ್‌ರಿಂದ ಸಿದ್ದರಾಮಯ್ಯವರೆಗೆ, ಜೆಡಿ(ಎಸ್) ಶಾಸಕಾಂಗ ಪಕ್ಷದ ಉಪನಾಯಕ ಉಮೇಶ್ ಕತ್ತಿ ಸೇರಿದಂತೆ ಹಲವರು ಬಿಜೆಪಿಗೆ ಸೇರಲಿದ್ದಾರೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ 20ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಮೂಲಕ ಅಡ್ವಾಣಿಯವರ ಕೈಬಲಪಡಿಸುವುದಾಗಿ ದೆಹಲಿಯಲ್ಲಿ ಮಾತು ಕೊಟ್ಟುಬಂದಿರುವ ಯಡಿಯೂರಪ್ಪ ಅವರಿಗೆ ತಮ್ಮ ಮಾತು ಉಳಿಸಿಕೊಳ್ಳಲು ಕಾಂಗ್ರೆಸ್ ಮತ್ತು ಜೆಡಿ(ಎಸ್)ಗಳನ್ನು ಬಲಹೀನಗೊಳಿಸಬೇಕಾಗಿದೆ. ಹಾಗಾಗಿ ಎರಡೂ ಪಕ್ಷದ ಅತೃಪ್ತ ನಾಯಕರನ್ನು ಸೆಳೆಯಲು ಭಾರಿ ಕಾರ್ಯಾಚರಣೆಗೆ ಗಣಿ ಧಣಿಗಳನ್ನು ಬಿಟ್ಟಿದ್ದಾರೆ' ಎಂಬ ಮಾತುಗಳೂ ಇವೆ.

ಅದೇ ಹೊತ್ತಿಗೆ ಸಂಪುಟ ವಿಸ್ತರಣೆ ಕೂಡ ಆಗುತ್ತಿದ್ದು, ಉಮೇಶ್ ಕತ್ತಿ ಜೊತೆಗೆ, ಬಾಲಚಂದ್ರ ಜಾರಕಿಹೊಳಿ, ಅಸ್ನೋಟಿಕರ್ ಅಥವಾ ಶಿವನಗೌಡ ಸಚಿವರಾಗಿ ಅಧಿಕಾರ ಸ್ವೀಕರಿಸಬಹುದು. ಜೊತೆಗೆ ಕಾಂಗ್ರೆಸ್‌ನ ಸಿದ್ದರಾಮಯ್ಯ ಕೂಡ ಬಿಜೆಪಿ ಸೇರಲಿದ್ದಾರೆ ಎಂಬ ಊಹಾಪೋಹ ಕಳೆದ ಹದಿನೈದು ದಿನದಿಂದ ಚಾಲ್ತಿಯಲ್ಲಿದೆ. ಅದಕ್ಕೆ ಸಿದ್ದರಾಮಯ್ಯ ಅವರಾಗಲೀ, ಅವರ ಬೆಂಬಲಿಗರಾಗಲೀ ಸ್ಪಷ್ಟ ನಕಾರ ಸೂಚಿಸಿದ್ದು ಕೂಡ ಇಲ್ಲ. ಇತ್ತ ಬಿಜೆಪಿ ನಾಯಕರು ಸಿದ್ದರಾಮಯ್ಯ ಬರುವುದಾದರೆ ಅವರಿಗೆ ಸೂಕ್ತ ಸ್ಥಾನ-ಮಾನ ನೀಡಲಾಗುವುದು ಎಂದಿದ್ದಾರೆ. ಜೊತೆಗೆ ಬಿಜೆಪಿ ಹಿರಿಯ ನಾಯಕ ಈಶ್ವರಪ್ಪ ಕೂಡ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆಗೆ ಸಿದ್ಧ ಎಂದಿದ್ದಾರೆ. ಬಳ್ಳಾರಿಯ ಗಣಿ ಧಣಿಗಳು ಸತೀಶ್ ಜಾರಕಿಹೊಳಿ ಮೂಲಕ ಸಿದ್ದರಾಮಯ್ಯ ಅವರನ್ನು ಪಕ್ಷಕ್ಕೆ ಸೆಳೆಯುವ ಕಾರ್ಯಾಚರಣೆ ಆರಂಭಿಸಿದ್ದಾರೆ. ಅದರ ಫಲವಾಗಿಯೇ ಸಿದ್ದರಾಮಯ್ಯ ಮಾರಿಷಸ್‌ಗೆ ತೆರಳುವ ಮುನ್ನ ತಮ್ಮ ನಿವಾಸದಲ್ಲಿ ಬೆಂಬಲಿಗರ ಸಭೆ ನಡೆಸಿದ್ದಾರೆ. ಈ ನಡುವೆ ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ಪಕ್ಷ ತೊರೆಯುವ ಕುರಿತು ಚರ್ಚಿಸಲು ಹೈಕಮಾಂಡ್ ಬಳಿಗೆ ನಿಯೋಗ ಹೋಗಿಬಂದಿದ್ದಾರೆ. ಅವರು ರಸಗೊಬ್ಬರ ಸಮಸ್ಯೆ, ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಕುರಿತ ವಿಷಯಗಳ ಚರ್ಚೆಗೆ ತೆರಳಿದ್ದಾಗಿ ಹೇಳಿದ್ದರೂ ವಾಸ್ತವವಾಗಿ ಪಕ್ಷದಲ್ಲಿ ಸಿದ್ದರಾಮಯ್ಯ ಮತ್ತು ಮೂಲ ಜನತಾ ಪರಿವಾರದ ಹಲವರು ಹೊರಹೋಗುವ ಸೂಚನೆಗಳ ಬಗ್ಗೆ ಚರ್ಚೆ ನಡೆಸಿ ಬಂದಿದ್ದಾರೆ ಎನ್ನಲಾಗುತ್ತಿದೆ.

ಒಟ್ಟಾರೆ, ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯ ಮತ್ತೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಈಗಾಗಲೇ ತೀರಾ ಸೋಲುಗಳ ಮೇಲೆ ಸೋಲು ಕಂಡು ಕಂಗೆಟ್ಟಿರುವ ಕಾಂಗ್ರೆಸ್‌ಗೆ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಮತ್ತು ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಜನತಾ ಪರಿವಾರ ಮೂಲದ ನಾಯಕರು ಸಿಡಿದು ಹೋದರೆ ಬೀಳುವ ಹೊಡೆತದ ಅರಿವಾದಂತಾಗಿದೆ. ಸಿದ್ದರಾಮಯ್ಯ ಬಿಜೆಪಿ ಸೇರಲಿ, ಪ್ರತ್ಯೇಕ ಪಕ್ಷ ಕಟ್ಟಲಿ ಅದರಿಂದ ಕಾಂಗ್ರೆಸ್‌ಗೆ ಭಾರಿ ಹೊಡೆತ ಬೀಳುವುದಂತೂ ನಿಜ. ಹಾಗಂತ ತನ್ನ ತೆಕ್ಕೆಗೆ ಬರುತ್ತಿರುವ ಶಾಸಕರು ಮತ್ತು ನಾಯಕರನ್ನು ಕಂಡು ಬಿಜೆಪಿಯಿಡೀ ಸಂಭ್ರಮದ ವಾತಾವರಣವೇನೂ ಇಲ್ಲ. ಏಕೆಂದರೆ, ಶಾಸಕರನ್ನು 'ಖೆಡ್ಡಾ'ಕ್ಕೆ ಕೆಡವಿ ತರುತ್ತಿರುವ ಗಣಿ ಧಣಿಗಳ ಕಾರ್ಯಾಚರಣೆ ಯಶಸ್ವಿಯಾದಷ್ಟೂ ಪಕ್ಷದಲ್ಲಿ ಅವರ ಕೈ ಮೇಲಾಗುತ್ತಿದೆ. ಅವರ ಕೈ ಮೇಲಾದಂತೆ ತಾವು ಕರೆತಂದವರಿಗೇ ಸಚಿವ ಸ್ಥಾನ ನೀಡಬೇಕು, ಅವರಿಗೆ ಇಂತಹದ್ದೇ ಖಾತೆ ಬೇಕು ಎಂಬ ಪಟ್ಟುಗಳೂ ಗಣಿ ದಣಿಗಳ ಕಡೆಯಿಂದ ಮುಖ್ಯಮಂತ್ರಿಗಳತ್ತ ಅಪ್ಪಳಿಸತೊಡಗಿವೆ. ಈ ಬೆಳವಣಿಗೆಗಳು ಗಣಿ ಲಾಬಿಯ ಬಲದ ಮೇಲೆ ಚುನಾವಣೆ ಗೆದ್ದು ಅಧಿಕಾರದ ಗದ್ದುಗೆಗೇರಿರುವ ಬಿಜೆಪಿಗೆ ಅದೇ ಲಾಬಿ ನುಂಗಲಾರದ ಬಿಸಿ ತುಪ್ಪವಾಗುವ ಸೂಚನೆ ನೀಡಿವೆ.

ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಈಗಾಗಲೇ ಗಣಿ ಧಣಿಗಳ ನಾಗಾಲೋಟಕ್ಕೆ ಅಡ್ಡಗಾಲು ಹಾಕುವ ಕಸರತ್ತುಗಳು ತೆರೆಮರೆಯಲ್ಲಿ ಆರಂಭವಾಗಿವೆ. ಅದರ ಭಾಗವಾಗಿಯೇ ಲಿಂಗಾಯತ ಸಮುದಾಯದ ನಾಯಕರನ್ನು ಇತರ ಪಕ್ಷಗಳಿಂದ ಸೆಳೆಯುವ ಇನ್ನಿಲ್ಲದ ಪ್ರಯತ್ನ ಆರಂಭಿಸಿದ್ದಾರೆ. ಕ್ರಮೇಣವಾಗಿ ಇಡೀ ಪಕ್ಷದ ಮೇಲೆ ಹಿಡಿತ ಸ್ಥಾಪಿಸುತ್ತಿರುವ ಗಣಿ ಧಣಿಗಳಿಂದ ತಮ್ಮ ಕುರ್ಚಿಗೂ ಕುತ್ತು ಬರಬಹುದೆಂಬ ಅಪಾಯ ಗ್ರಹಿಸಿರುವ ಯಡಿಯೂರಪ್ಪ ತಮ್ಮದೇ ಲೆಕ್ಕಾಚಾರಗಳ ಮೂಲಕ ಸಚಿವ ಸಂಪುಟ ಪುನರ್ ವಿಂಗಡಣೆ ಮಾಡಲಿದ್ದಾರೆ ಎಂಬ ನಿರೀಕ್ಷೆ ಕೂಡ ಇದೆ. ಒಟ್ಟಾರೆ, ಬಿಜೆಪಿಗೆ ವಿವಿಧ ಪಕ್ಷಗಳನ್ನು ತೊರೆದು ತನ್ನತ್ತ ಬರುತ್ತಿರುವ ನಾಯಕರ ಪಡೆ ತರುವ ಭಾಗ್ಯಕ್ಕಿಂತ ಅಪಾಯವೇ ಹೆಚ್ಚು ಎಂಬುದು ಮನವರಿಕೆಯಾಗತೊಡಗಿದೆ. ಆದರೂ ಕನಿಷ್ಠ ಬರಲಿರುವ ಲೋಕಸಭಾ ಚುನಾವಣೆಯವರೆಗಾದರೂ ಎಲ್ಲವೂ ಸರಿಯಿದ್ದಂತೆ ಇರಬೇಕಾದುದು ಈಗಿನ ಅನಿವಾರ್‍ಯ.

ಇತ್ತ ಸಿದ್ದರಾಮಯ್ಯ ಕೂಡ ತೀರಾ ಗೊಂದಲದಲ್ಲಿದ್ದಂತೆ ಕಂಡುಬರುತ್ತಿದ್ದಾರೆ. ಸೋನಿಯಾ ಭೇಟಿಗೆ ಹೋದ ಪಕ್ಷದ ನಿಯೋಗದಲ್ಲಿ ದೆಹಲಿಗೆ ತೆರಳದೇ ಇರುವುದು, ಅತ್ತ ನಾಯಕರು ದೆಹಲಿಯಲ್ಲಿದ್ದಾಗ ಅವರು ತಮ್ಮ ನಿವಾಸದಲ್ಲಿ ಆಪ್ತರ ಸಭೆ ನಡೆಸಿದ್ದು, ಬಿಜೆಪಿಗೆ ಸೇರ್ಪಡೆಯಾದ ಶಾಸಕರ ನಡೆಯ ಬಗ್ಗೆ ಅದೆಲ್ಲಾ ಸಹಜವೆಂದು ಪ್ರತಿಕ್ರಿಯಿಸಿದ್ದು, ದೆಹಲಿಯಲ್ಲಿ ರಾಜ್ಯದ ನಾಯಕರು ತಮ್ಮ ಬಗ್ಗೆ ಚರ್ಚಿಸಿದ ಬಳಿಕ ಹೈಕಮಾಂಡ್‌ನಿಂದ ಬುಲಾಲ್ ಬರಬಹುದು ಎಂಬ ಹಿನ್ನೆಲೆಯಲ್ಲಿ ದಿಢೀರ್ ಮಾರಿಷಸ್ ಪ್ರವಾಸ ಕೈಗೊಂಡದ್ದು... ಹೀಗೆ ಇತ್ತೀಚಿನ ದಿನಗಳಲ್ಲಿ ಅವರ ಪ್ರತಿ ನಡೆಯೂ ಅವರು ಕಾಂಗ್ರೆಸ್‌ನಿಂದ ದೂರ ಸರಿಯುತ್ತಿರುವ (ಸದ್ಯಕ್ಕೆ ಕನಿಷ್ಠ ಮಾನಸಿಕವಾಗಿಯಾದರೂ) ಸೂಚನೆ ನೀಡಿವೆ. ಈಗಿನ ರಾಜಕೀಯ ಸ್ಥಿತಿಯಲ್ಲಿ ಅವರ ಮುಂದೆ ಕೂಡ ಇರುವ ಆಯ್ಕೆಗಳು ವಿರಳ. ಮತ್ತೆ ಅಹಿಂದ ಸಂಘಟನೆಗೆ ಇಳಿದು, ಎಬಿಪಿಜೆಡಿ ಅಥವಾ ಹೊಸ ಪಕ್ಷ ಕಟ್ಟುವ ಸಾಧ್ಯತೆ ಕಡಿಮೆ. ಇನ್ನು ಜೆಡಿ(ಎಸ್)ಗೆ ಮರಳುವ ಯೋಚನೆ ಮಾಡಲಾರರು. ಹಾಗಾಗಿ ಅನಿವಾರ್ಯವಾಗಿ ಬಿಜೆಪಿಯತ್ತ ಹೆಜ್ಜೆ ಹಾಕಬಹುದು ಎಂಬುದು ಸದ್ಯದ ಲೆಕ್ಕಾಚಾರ. ಬಿಜೆಪಿ ಸೇರಲಿದ್ದಾರೆ ಎಂಬ ವದಂತಿಗಳಿಗೆ ಅವರ ಆಪ್ತರು ಕೂಡ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿಲ್ಲ ಎಂಬುದು ಗಮನಾರ್ಹ.

ಹಾಗಾಗಿ ಒಂದೆಡೆ ಸಿದ್ದರಾಮಯ್ಯ ರಾಜಕೀಯ ಭವಿಷ್ಯದ ತಿರುವಿನಲ್ಲಿ ನಿಂತಂತೆ ಇದ್ದರೆ, ಮತ್ತೊಂದೆಡೆ ಯಡಿಯೂರಪ್ಪ ಕೂಡ ತಾವೇ ಹಗ್ಗ ಕೊಟ್ಟು ಕೈಕಟ್ಟಿಸಿಕೊಳ್ಳುವ ಹಾದಿಯಲ್ಲಿ ಸಾಗುತ್ತಿರುವಂತಿದೆ. ಇನ್ನು ಕಾಂಗ್ರೆಸ್‌ನ ಉಳಿದ ನಾಯಕರ ವಿಚಿತ್ರ ಸ್ಥಿತಿ ನೋಡಿದರೆ ಕಾಂಗ್ರೆಸ್ ಪಕ್ಷಕ್ಕೆ ಹೊಸ ರಕ್ತದ ಸೋಂಕೇ ಇಲ್ಲ ಎಂಬ ಹಾಗಿದೆ. ಈ ನಡುವೆ ಎಚ್.ಕೆ. ಪಾಟೀಲರು ವಿಧಾನಪರಿಷತ್ ಸೋಲಿನ ಬಳಿಕ ದೇವೇಗೌಡರನ್ನು ಭೇಟಿ ಮಾಡಿಬಂದಿದ್ದಾರೆ. ಉತ್ತರ ಪ್ರದೇಶದ ಪ್ರಭಾವಿ ಲಿಂಗಾಯಿತ ಮುಖಂಡ ಪ್ರಭಾಕರ ಕೋರೆ ಬಿಜೆಪಿ ಸೇರಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ದಾವಣಗೆರೆಯ ಧಣಿ ಶಾಮನೂರು ಶಿವಶಂಕರಪ್ಪ ಅವರನ್ನು ಕರೆತರುವ ಪ್ರಯತ್ನಗಳು ಕೂಡ ಅಲ್ಲಿನ ಬಿಜೆಪಿ ಸಂಸದರ ಉಸ್ತುವಾರಿಯಲ್ಲಿ ನಡೆದಿವೆ.

ಈ ಎಲ್ಲಾ ಬೆಳವಣಿಗೆಗಳ ಜೊತೆಯಲ್ಲೇ ಇದೀಗ ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿ ಬಿಜೆಪಿ ಸೇರುತ್ತಿರುವ ಬೆಳವಣಿಗೆ ಗಂಭೀರ ಚರ್ಚೆಯನ್ನೂ ಹುಟ್ಟುಹಾಕಿದೆ. ಚುನಾವಣೆಯಲ್ಲಿ ಜನತೆ ನೀಡಿದ ತೀರ್ಪು ಕೇವಲ ಒಂದೂವರೆ ತಿಂಗಳಲ್ಲಿ ನಿರರ್ಥಕವಾಗುವ ಇಂತಹ ಸ್ಥಿತಿ ಒಂದು ಕಡೆ ಚುನಾವಣಾ ವ್ಯವಸ್ಥೆಯ ಬಗ್ಗೆಯೇ ಪುನರಾವಲೋಕನ ನಡೆಸುವಂತೆ ಮಾಡಿದ್ದರೆ, ಮತ್ತೊಂದು ಕಡೆ ಪಕ್ಷಾಂತರ ನಿಷೇಧ ಕಾಯ್ದೆಯನ್ನೂ ಪುನರ್ ವ್ಯಾಖ್ಯಾನಿಸಬೇಕಾದ ಜರೂರನ್ನು ತಂದೊಡ್ಡಿದೆ. ಇದೆಲ್ಲಾ ಸಾಂವೈಧಾನಿಕ ಆಶಯಗಳ ಹಿನ್ನೆಲೆಯ ಪ್ರಶ್ನೆಗಳಾದರೆ, ಇನ್ನು ಈ ಶಾಸಕರು ಬಿಜೆಪಿ ಸೇರುತ್ತಿರುವ ನಿರ್ಧಾರಕ್ಕೆ ನೀಡಿರುವ ಕಾರಣಗಳು ಕೂಡ ಪ್ರಜಾತಂತ್ರ ವ್ಯವಸ್ಥೆಯ ನಂಬಿಕೆಗೇ ಪೆಟ್ಟುಕೊಡುವಂತಿವೆ.

ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದ ದೊಡ್ಡಬಳ್ಳಾಪುರದ ಶಾಸಕ ಜೆ. ನರಸಿಂಹಸ್ವಾಮಿ ಮತ್ತು ಕಾರವಾರ ಕ್ಷೇತ್ರದ ಶಾಸಕ ಆನಂದ ಆಸ್ನೋಟಿಕರ್ ನೀಡಿರುವ ಹೇಳಿಕೆಗಳಂತೂ ಆಡಳಿತ ಪಕ್ಷ ಹೊರತುಪಡಿಸಿ ಉಳಿದ ಪಕ್ಷಗಳ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳು ಈ ಸರ್ಕಾರ ಇರುವವರೆಗೆ ಅಭಿವೃದ್ಧಿ ಕಾಣಲು ಸಾಧ್ಯವೇ ಇಲ್ಲ ಎಂಬ ಅಭಿಪ್ರಾಯ ಮೂಡಿಸುತ್ತಿವೆ. ನರಸಿಂಹಸ್ವಾಮಿ ಅವರಂತೂ ತಮ್ಮ ಪಕ್ಷಕ್ಕೆ ಬಂದರೆ ಕ್ಷೇತ್ರದ ಅಭಿವೃದ್ಧಿಗೆ 40 ಕೋಟಿ ನೀಡುವುದಾಗಿ ಮುಖ್ಯಮಂತ್ರಿಗಳೇ ಆಮಿಷ ಒಡ್ಡಿದರು ಎಂಬ ಅರ್ಥದ ಹೇಳಿಕೆ ನೀಡಿದ್ದಾರೆ. ಇನ್ನು ಜೆಡಿ(ಎಸ್)ನ ಬಾಲಚಂದ್ರ ಜಾರಕಿಹೊಳಿ ಮತ್ತು ಶಿವನಗೌಡ ನಾಯಕ ಅವರ ಹೇಳಿಕೆಗಳು ಕೂಡ ಅಭಿವೃದ್ಧಿಯಲ್ಲಿ ಕ್ಷೇತ್ರ ಹಿಂದುಳಿಯುತ್ತದೆ. ಅದನ್ನು ತಪ್ಪಿಸಿ ಕ್ಷೇತ್ರದ ಏಳಿಗೆಯ ಏಕೈಕ ಉದ್ದೇಶದಿಂದ ಆಡಳಿತ ಪಕ್ಷವನ್ನು ಸೇರಿರುವುದಾಗಿ ಹೇಳಿದ್ದಾರೆ. ಅದರರ್ಥ ಕೂಡ ಅಷ್ಟೇ ಸ್ಪಷ್ಟ. ಆಡಳಿತ ಪಕ್ಷದಲ್ಲಿ ಇಲ್ಲದೇ ಇದ್ದರೆ ತಮ್ಮ ಕ್ಷೇತ್ರಗಳಿಗೆ ಅಭಿವೃದ್ಧಿಯ ಬಿಡಿಗಾಸೂ ಸಿಕ್ಕುವುದಿಲ್ಲ ಎಂದೇ. ದುರಂತವೆಂದರೆ, ಅವರನ್ನೆಲ್ಲಾ ಪಕ್ಷಕ್ಕೆ ಬರಮಾಡಿಕೊಂಡ ಬಿಜೆಪಿ ನಾಯಕರು ಕೂಡ ಅಭಿವೃದ್ಧಿಯ ಮಾತನ್ನೇ ಆಡಿದ್ದಾರೆ. ಒಟ್ಟಾರೆ ಇದರರ್ಥ ಏನು? ಆಡಳಿತ ಪಕ್ಷ ಉಳಿದ ಪಕ್ಷಗಳ ಶಾಸಕರ ಕ್ಷೇತ್ರಗಳಿಗೆ ಬಿಡಿಗಾಸನ್ನೂ ನೀಡದಿರುವ ಸೂಚನೆ ನೀಡಿದೆ ಎಂದೇ? ಹಾಗಾದರೆ, ಅಂತಹ ರಾಜಕಾರಣ ಪ್ರಜಾಪ್ರಭುತ್ವ ವ್ಯವಸ್ಥೆಯ ಅರ್ಥವನ್ನೇ ನಾಶಮಾಡಲಿದೆ ಅಲ್ಲವೇ?

ಟಿಎಸ್‌ಐ

ಶಶಿ ಸಂಪಳ್ಳಿ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
ಇದನ್ನೂ ಓದಿ

ಸಾವಿನ ಮನೆಯಲ್ಲೂ ರಾಜಕೀಯ

ಸಮೂಹ ಸನ್ನಿಗೆ ಬೇಕಿದೆ ಮದ್ದು : ಡಾ.ಸಿ.ಆರ್. ಚಂದ್ರಶೇಖರ್

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .