ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಮುಖಾಮುಖಿ
ಭ್ರಷ್ಟರಿಗೆ ಬಡ್ತಿ ಲೋಕಾಯುಕ್ತಕ್ಕೆ ಅವಮಾನ
 

ಭ್ರಷ್ಟರ ವಿರುದ್ಧ ನಿಷ್ಠುರ ಕ್ರಮ ಜರುಗಿಸುತ್ತಿರುವ ಲೋಕಾಯುಕ್ತ ಸಂತೋಷ್ ಹೆಗ್ಡೆ ಜನರಲ್ಲಿ ನಂಬುಗೆ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಟಿಎಸ್‌ಐನ ಬಿ.ಎಸ್. ನಾರಾಯಣಸ್ವಾಮಿ ಜೊತೆ ಮಾತನಾಡಿದ ಅವರು, ಲೋಕಾಯುಕ್ತಕ್ಕೆ ವಿವೇಚನಾಧಿಕಾರ (ಸು-ಮೊಟೊ ಪವರ್) ನೀಡುವುದು ಅತ್ಯಂತ ಜರೂರು ಎಂದಿದ್ದಾರೆ

Tryst - Santosh Hegde - The Sunday Indian Kannada ಲೋಕಾಯುಕ್ತದ ಹಿನ್ನೆಲೆ ಏನು ಹಾಗೂ ಅದರ ಕಾರ್ಯ ನಿರ್ವಹಣೆ ಹೇಗೆ?

ಅಂತರ್ ರಾಷ್ಟ್ರೀಯ ಮಟ್ಟದಲ್ಲಿ 'ಅಂಬುಡ್ಸ್‌ಮನ್' ಇರುವ ಹಾಗೆ, ರಾಷ್ಟ್ರದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಲ್ಲಿ ಭ್ರಷ್ಟಾಚಾರ ತಡೆಯಲು ಒಂದು ಏಜೆನ್ಸಿ ಬೇಕೆಂದು 1966ರಲ್ಲೇ ಮೊರಾರ್ಜಿ ದೇಸಾಯಿ ಸಮಿತಿ ಶಿಫಾರಸು ಮಾಡಿತ್ತು. ಕೇಂದ್ರ ಸರ್ಕಾರದ ಮಟ್ಟದಲ್ಲಿ ಲೋಕಪಾಲ್ ಮತ್ತು ರಾಜ್ಯಗಳಲ್ಲಿ ಲೋಕಾಯುಕ್ತ ರಚಿಸಲು ಸಲಹೆ ಮಾಡಿತ್ತು. ಅದರಂತೆ ಕರ್ನಾಟಕದಲ್ಲಿ 1986ರಲ್ಲಿ ಮೊದಲ ಬಾರಿಗೆ ಲೋಕಾಯುಕ್ತ ರಚನೆ ಮಾಡಲಾಯಿತು. ಲೋಕಾಯುಕ್ತರನ್ನು ಸಚಿವ ಸಂಪುಟ ಮತ್ತು ಮುಖ್ಯನ್ಯಾಯಾಧೀಶರನ್ನೊಳಗೊಂಡ ಸಮಿತಿ ಆಯ್ಕೆ ಮಾಡುತ್ತದೆ. ನಿವೃತ್ತ ನ್ಯಾಯಮೂರ್ತಿಗಳನ್ನೇ ನೇಮಕ ಮಾಡಬೇಕೆಂಬ ನಿಯಮ ಇದೆ; ಅವರ ಅಧಿಕಾರಾವಧಿ 5 ವರ್ಷಗಳು. ನಿಯಮಾನುಸಾರ ವರ್ಗ-1ಕ್ಕಿಂತ ಮೇಲ್ಪಟ್ಟ ಅಧಿಕಾರಿಗಳು, ಶಾಸಕರು, ಸಚಿವರು ಮತ್ತು ಮುಖ್ಯಮಂತ್ರಿಗಳೆಲ್ಲಾ ಲೋಕಾಯುಕ್ತ ವ್ಯಾಪ್ತಿಗೆ ಬರುತ್ತಾರೆ. ವರ್ಗ-1ಕ್ಕಿಂತ ಕೆಳಗಿನ ಅಧಿಕಾರಿಗಳು, ನೌಕರರು ಉಪಲೋಕಾಯುಕ್ತ ವ್ಯಾಪ್ತಿಗೆ ಬರುತ್ತಾರೆ.

ಬೇರೆ ರಾಜ್ಯಗಳಲ್ಲಿ ಲೋಕಾಯುಕ್ತ ಹೇಗೆ ಕಾರ್ಯ ನಿರ್ವಹಿಸುತ್ತಿದೆ?

ದೇಶದ 18 ರಾಜ್ಯಗಳಲ್ಲಿ ಲೋಕಾಯುಕ್ತ ಕಾರ್ಯ ನಿರ್ವಹಿಸುತ್ತಿದೆ. ಆದರೆ ಕರ್ನಾಟಕದ ಲೋಕಾಯುಕ್ತಕ್ಕೆ ಹೋಲಿಸಿದರೆ ಇತರ ರಾಜ್ಯಗಳಲ್ಲಿ ಅವು ಅಷ್ಟೇನೂ ಕ್ರಿಯಾತ್ಮಕವಾಗಿಲ್ಲ.

ಕರ್ನಾಟಕದಲ್ಲಿ ಲೋಕಾಯುಕ್ತ ಇಷ್ಟೊಂದು ಕ್ರಿಯಾತ್ಮಕವಾಗಿದ್ದರೂ ಇತ್ತೀಚಿನ ಸಮೀಕ್ಷೆಯೊಂದರ ಅನುಸಾರ ಭ್ರಷ್ಟಾಚಾರದಲ್ಲಿ ರಾಜ್ಯ 4ನೇ ಸ್ಥಾನದಲ್ಲಿದೆಯಲ್ಲ?

ಆ ಸಮೀಕ್ಷಾ ವರದಿಯನ್ನು ನಾನೂ ನೋಡಿದ್ದೇನೆ. ಯಾವ ಆಧಾರದ ಮೇಲೆ ಅಂತಹ ವರದಿ ಸಿದ್ಧಪಡಿಸಲಾಗಿದೆ ಎಂಬುದು ಮುಖ್ಯ. ಅದೇ ಸಮೀಕ್ಷೆ ಮತ್ತೊಂದೆಡೆ ಭ್ರಷ್ಟಾಚಾರ ಹೆಚ್ಚಿರುವ ರಾಜ್ಯಗಳನ್ನು 'ಅಲಾರ್ಮಿಂಗ್ ಲೆವೆಲ್', 'ವೆರಿ ಹೈ' ಮತ್ತು 'ಮಾಡರೇಟ್' ವಿಭಾಗಗಳಾಗಿ ವಿಂಗಡಿಸಿದೆ. ಅಲಾರ್ಮಿಂಗ್ ಲೆವೆಲ್‌ನಲ್ಲಿ ಕರ್ನಾಟಕ ಇಲ್ಲ. ಬದಲಿಗೆ ಅಸ್ಸಾಂ ಮೊದಲುಗೊಂಡು 5 ರಾಜ್ಯಗಳಿವೆ; ಕರ್ನಾಟಕ 'ವೆರಿ ಹೈ' ವಿಭಾಗದಲ್ಲಿದೆ. ಇಂತಹ ವರದಿಗಳು ತಪ್ಪು ಚಿತ್ರಣ ನೀಡುತ್ತವೆ. ಅದೇನೇ ಇರಲಿ, ಕರ್ನಾಟಕದಲ್ಲಿ ಭ್ರಷ್ಟಾಚಾರ ಇರುವುದಂತೂ ನಿಜ; ಹಾಗೆಯೇ ಅತಿ ಹೆಚ್ಚು ಭ್ರಷ್ಟರು ಬಲೆಗೆ ಬೀಳುತ್ತಿರುವುದು ಕೂಡಾ ಇಲ್ಲಿಯೇ. ಪ್ರಸಕ್ತ ವರ್ಷದಲ್ಲಿ ಇಲ್ಲಿಯವರೆಗೆ 139 ಭ್ರಷ್ಟರನ್ನು ನಾವು 'ಟ್ರ್ಯಾಪ್' ಮಾಡಿದ್ದೇವೆ.

ಲೋಕಾಯುಕ್ತಕ್ಕೆ ಪ್ರತಿದಿನ ಸರಾಸರಿ ಎಷ್ಟು ದೂರುಗಳು ಬರುತ್ತವೆ? ಯಾವ ಇಲಾಖೆಗೆ ಸಂಬಂಧಪಟ್ಟಂತೆ ಅತಿ ಹೆಚ್ಚಿನ ದೂರುಗಳಿವೆ?

ಪ್ರತಿದಿನ ಸರಾಸರಿ 10-12 ಲಿಖಿತ ದೂರುಗಳು ಬರುತ್ತವೆ. ಇದರ ಜೊತೆಗೆ ಲೋಕಾಯುಕ್ತ 'ಸಹಾಯವಾಣಿ'ಯಲ್ಲೂ ದಿನಕ್ಕೆ ಸರಾಸರಿ 25 ದೂರುಗಳು ಬರುತ್ತವೆ. ಇದರಲ್ಲಿ ಬಹುಪಾಲು ಉಪಲೋಕಾಯುಕ್ತರ ವ್ಯಾಪ್ತಿಗೆ ಸಂಬಂಧಪಟ್ಟ ದೂರುಗಳೇ ಇರುತ್ತವೆ. ಇಲಾಖೆಗಳ ಬಗ್ಗೆ ಹೇಳುವುದಾದರೆ ಆರೋಗ್ಯ, ಪೊಲೀಸ್ ಇಲಾಖೆ ಮತ್ತು ಸ್ಥಳೀಯ ಸಂಸ್ಥೆಗಳ ವಿರುದ್ಧ ಹೆಚ್ಚು ದೂರುಗಳಿರುತ್ತವೆ.

ನೀವು ಸಾಕಷ್ಟ್ಟು ಭ್ರಷ್ಟರನ್ನು ಬಲೆಗೆ ಕೆಡವಿದ್ದರೂ ಆರೋಪ ಪಟ್ಟಿ ಸಲ್ಲಿಕೆಯಲ್ಲಿ ವಿಳಂಬವಾಗುತ್ತಿದೆಯಲ್ಲಾ?

ನಿಜ. ನೋಡಿ, ಲೋಕಾಯುಕ್ತ ಒಂದರಿಂದಲೇ ಭ್ರಷ್ಟಾಚಾರವನ್ನು ತಡೆಯಲು ಸಾಧ್ಯವಿಲ್ಲ. ಇದಕ್ಕೆ ಇತರ ಅಂಗಗಳ ನೆರವೂ ಬೇಕು. ನಾವು ಬಲೆಗೆ ಕೆಡವಿದವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಸಂಬಂಧಪಟ್ಟ ಇಲಾಖೆ 'ಸ್ಯಾಂಕ್ಷನ್' ಕೊಡಬೇಕು. ಇದರಲ್ಲಿ ತುಂಬಾ ವಿಳಂಬವಾಗುತ್ತಿದೆ. ಎಷ್ಟೋ ಬಾರಿ 3-4 ವರ್ಷ, ಕೆಲವೊಮ್ಮೆ 7-8 ವರ್ಷ ತೆಗೆದುಕೊಂಡಿರುವುದೂ ಇದೆ. ಪ್ರಶ್ನಿಸಿದರೆ ನಾನಾ ಕಾರಣಗಳನ್ನು ನೀಡುತ್ತಾರೆ. ಹೀಗಾಗಿ 'ಚಾರ್ಜ್ ಶೀಟ್' ಸಲ್ಲಿಕೆಯಲ್ಲಿ ವಿಳಂಬವಾಗುತ್ತಿದೆ.

ಭ್ರಷ್ಟಾಚಾರವನ್ನು ಇನ್ನೂ ಪರಿಣಾಮಕಾರಿಯಾಗಿ ನಿರ್ಮೂಲನ ಮಾಡಲು ಲೋಕಾಯುಕ್ತಕ್ಕೆ ಅಡ್ಡಿ ಏನು?

ಬಹುಮುಖ್ಯ ಅಡ್ಡಿ ಎಂದರೆ 'ಸು- ಮೊಟೊ' ಅಧಿಕಾರ ಇಲ್ಲದಿರುವುದು. ಅಂದರೆ ಭ್ರಷ್ಟರ ವಿರುದ್ಧ ಲೋಕಾಯುಕ್ತ ಸ್ವಯಂ ಆಗಿ ಕ್ರಮ ಕೈಗೊಳ್ಳುವಂತಿಲ್ಲ. ಲಿಖಿತ ದೂರು ನೀಡಿದಲ್ಲಿ ಮಾತ್ರ ನಾವು ಕ್ರಮಕ್ಕೆ ಮುಂದಾಗಬಹುದು. ಹಿಂದೆ ಈ ವಿವೇಚನಾ ಅಧಿಕಾರ ಕೂಡಾ ಇತ್ತು. ಆದರೆ 2006ರ ಜೂನ್‌ನಲ್ಲಿ ಈ ಅಧಿಕಾರವನ್ನು ವಾಪಸು ಪಡೆಯಲಾಯಿತು. ಉಪಲೋಕಾಯುಕ್ತರಿಗೆ ಈ ಅಧಿಕಾರ ಮುಂದುವರಿದಿದೆ. ಆದರೆ ಅವರ ವ್ಯಾಪ್ತಿಯಲ್ಲಿ ಕ್ಲಾಸ್-1ಕ್ಕಿಂತ ಕೆಳಗಿನ ಅಧಿಕಾರಿಗಳೇ ಬರುವುದರಿಂದ ದೊಡ್ಡ- ದೊಡ್ಡ ತಿಮಿಂಗಿಲಗಳು ತಪ್ಪಿಸಿಕೊಳ್ಳುವಂತಾಗಿದೆ. ಸು-ಮೊಟೊ ಅಧಿಕಾರ ನೀಡುವ ತಿದ್ದುಪಡಿ ಮಸೂದೆ ಇನ್ನೂ ಶಾಸನ ಸಭೆಯಿಂದ ಹೊರಬಂದಿಲ್ಲ.

ಚಾರ್ಜ್ ಶೀಟ್ ಸಲ್ಲಿಸಿದ ಮೇಲೂ ಪ್ರಕರಣ ಇತ್ಯರ್ಥಪಡಿಸುವಲ್ಲಿ ನ್ಯಾಯಾಲಯಗಳು ತುಂಬಾ ನಿಧಾನ ಮಾಡುತ್ತಿವೆ. ಹೀಗಿರುವಾಗ ಲೋಕಾಯುಕ್ತ ಪ್ರಕರಣಗಳ ಇತ್ಯರ್ಥಕ್ಕೆಂದೇ ವಿಶೇಷ ನ್ಯಾಯಾಲಯ ರೂಪಿಸುವುದು ಅಗತ್ಯವಿದೆ ಅಲ್ಲವೇ?

ನ್ಯಾಯಾಲಯಗಳಲ್ಲಿ ತಡವಾಗುತ್ತಿರುವುದೇನೋ ನಿಜ. ಆದರೆ ಸುಮ್ಮನೆ ನ್ಯಾಯಾಲಯಗಳನ್ನು ದೂರುವುದು ಸರಿಯಲ್ಲ. ವಿದೇಶಗಳಲ್ಲಿ ಸರಾಸರಿ ಒಂದು ಸಾವಿರ ಮಂದಿಗೆ ಒಬ್ಬ ನ್ಯಾಯಾಧೀಶರಿದ್ದರೆ, ನಮ್ಮಲ್ಲಿ ಸರಾಸರಿ 10 ಲಕ್ಷ ಮಂದಿಗೆ ಒಬ್ಬರು ನ್ಯಾಯಾಧೀಶರಿದ್ದಾರೆ. ಇನ್ನು ಸಿಬ್ಬಂದಿ ಮತ್ತಿತರ ಸೌಲಭ್ಯಗಳೂ ಸೂಕ್ತವಾಗಿಲ್ಲ. ಹೀಗಿರುವಾಗ ನ್ಯಾಯಾಲಯಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುವುದು ಹೇಗೆ ಸಾಧ್ಯ? ಇಷ್ಟಾದರೂ ಲೋಕಾಯುಕ್ತ ಪ್ರಕರಣಗಳ ಇತ್ಯರ್ಥಕ್ಕೆಂದೇ ಪ್ರತ್ಯೇಕ ನ್ಯಾಯಾಲಯ ಅಲ್ಲವಾದರೂ ಪ್ರತ್ಯೇಕ ನ್ಯಾಯಾಧೀಶರೊಬ್ಬರನ್ನು ಪ್ರತಿ ಜಿಲ್ಲೆಯಲ್ಲಿ ನೇಮಕ ಮಾಡುವ ಕಾರ್ಯ ಪ್ರಗತಿಯಲ್ಲಿದ್ದು ಬಹಳಷ್ಟು ಜಿಲ್ಲೆಗಳಲ್ಲಿ ವಿಶೇಷ ನ್ಯಾಯಾಧೀಶರನ್ನು ನೇಮಿಸಲಾಗಿದೆ.

ದಾಳಿ ಹೊರತುಪಡಿಸಿ ಜನರಲ್ಲಿ ಭ್ರಷ್ಟಾಚಾರ ಮತ್ತು ಲೋಕಾಯುಕ್ತದ ಕುರಿತು ಜಾಗೃತಿ ಮೂಡಿಸುವಂಥ ಕಾರ್ಯಕ್ರಮಗಳನ್ನೇನಾದರೂ ಹಾಕಿಕೊಳ್ಳುತ್ತೀರಾ?

ಪ್ರತಿ ಜಿಲ್ಲೆಯಲ್ಲೂ ತಿಂಗಳಿಗೊಮ್ಮೆ ಸ್ಪಂದನ ಕಾರ್ಯಕ್ರಮ ಹಾಕಿಕೊಳ್ಳುತ್ತಿದ್ದೇವೆ. ಸದ್ಯಕ್ಕೆ ಜಿಲ್ಲಾಕೇಂದ್ರಗಳಲ್ಲಿ ಮಾತ್ರ ನಡೆಸಲಾಗುತ್ತಿದ್ದು, ಇದನ್ನು ಗ್ರಾಮಗಳ ಮಟ್ಟದಲ್ಲೂ ನಡೆಸುವಂತೆ ಆಯಾ ಜಿಲ್ಲೆಯ ಲೋಕಾಯುಕ್ತ ಎಸ್‌ಪಿಗೆ ಸೂಚಿಸಿದ್ದೇವೆ. ಜೊತೆಗೆ ಸ್ಥಳೀಯ ಅಧಿಕಾರಿಗಳ ಸಮ್ಮುಖದಲ್ಲೇ ಜನರ ಅಹವಾಲುಗಳನ್ನು ಆಲಿಸಿ ಆಗಲೇ ಕ್ರಮ ಕೈಗೊಳ್ಳುವ ಕಾರ್ಯಕ್ರಮಗಳನ್ನೂ ನಡೆಸುತ್ತಿದ್ದೇವೆ.

ಲೋಕಾಯುಕ್ತ ಪೊಲೀಸರು ಮತ್ತಿತರೆ ಸಿಬ್ಬಂದಿಯನ್ನು ಸರ್ಕಾರವೇ ನೇಮಕ ಮಾಡುತ್ತದೆಯಲ್ಲವೇ? ಹಾಗಿದ್ದಾಗ ಆ ಸಿಬ್ಬಂದಿಯಿಂದ ಎಂತಹ ಮಟ್ಟದ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯನ್ನು ನಿರೀಕ್ಷಿಸಲು ಸಾಧ್ಯ?

ನೀವು ಹೇಳುವುದು ನಿಜ. ಬಹಳಷ್ಟು ಮಂದಿ ಇತರ ಇಲಾಖೆಗಳಿಂದ ಲೋಕಾಯುಕ್ತಕ್ಕೆ ನಿಯುಕ್ತಿಗೊಂಡಿರುತ್ತಾರೆ. ಹಾಗಿದ್ದಾಗ ಅವರು ತಮ್ಮ ಹಳೆಯ ಸಹೋದ್ಯೋಗಿಗಳ ವಿರುದ್ಧ ಅಥವಾ ಜನಪ್ರತಿನಿಧಿಗಳ ವಿರುದ್ಧ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲು ಹಿಂದೇಟು ಹಾಕುವ ಸಾಧ್ಯತೆ ಇದ್ದೇ ಇದೆ. ಆದರೆ ಸದ್ಯದ ಮಟ್ಟಿಗೆ ಲೋಕಾಯುಕ್ತ ತಾನೇ ಶಾಶ್ವತ ನೌಕರರ ನೇಮಕಾತಿ ಮಾಡಿಕೊಳ್ಳುವ ಸ್ಥಿತಿಯಲ್ಲಿಲ್ಲ. ಹಾಗೆ ನೇಮಕ ಮಾಡಿಕೊಂಡರೆ ಅವರಿಗೆ ಅಗತ್ಯವಾದ ತರಬೇತಿ ಅದರಲ್ಲೂ ಪೊಲೀಸ್ ತರಬೇತಿ ನೀಡುವುದೆಲ್ಲಾ ವಾಸ್ತವದಲ್ಲಿ ಕಷ್ಟಸಾಧ್ಯ. ಇಷ್ಟಾದರೂ ನಾವು ನಿಯುಕ್ತಗೊಂಡ ಸಿಬ್ಬಂದಿ ಪ್ರಾಮಾಣಿಕತೆ ಪ್ರದರ್ಶಿಸುವಂತೆ ಹಲವು ಕ್ರಮಗಳನ್ನು ಅನುಸರಿಸುತ್ತೇವೆ. ಹಾಗೇನಾದರೂ ಅವರಲ್ಲಿ ದೋಷ ಕಂಡುಬಂದರೆ ಸರ್ಕಾರಕ್ಕೆ ಸೂಚನೆ ನೀಡಿ ಅವರನ್ನು ಬೇರೆಡೆಗೆ ವರ್ಗಾಯಿಸಬಹುದು. ಇದು ಅವರ ವೃತ್ತಿಜೀವನದಲ್ಲೊಂದು ಕಪ್ಪುಚುಕ್ಕೆಯಾಗಿಬಿಡುತ್ತದೆ. ಅದೇ ಶಾಶ್ವತ ಸಿಬ್ಬಂದಿ ಕಳಂಕಿತರಾದರೆ ಅವರನ್ನು ಸುಲಭವಾಗಿ ತೆಗೆದು ಹಾಕುವುದು ಸಾಧ್ಯವಾಗುವುದಿಲ್ಲ.

ಕಳೆದೆರಡು ವರ್ಷಗಳ ಅವಧಿಯಲ್ಲಿನ ನಿಮ್ಮ ಸಾಧನೆ ತೃಪ್ತಿ ತಂದಿದೆಯೇ?

ಒಂದು ದೃಷ್ಟಿಯಲ್ಲಿ ತೃಪ್ತಿ ತಂದಿದೆ. ಏಕೆಂದರೆ ನಾವು ಸಾಕಷ್ಟು ಮಂದಿ ಕೋಟ್ಯಧಿಪತಿ ಭ್ರಷ್ಟರನ್ನೇ ಬಲೆಗೆ ಕೆಡವಿದ್ದೇವೆ. ಆದರೆ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಜರುಗದೇ ಹೋದಾಗ ಬೇಸರವಾಗುತ್ತದೆ.

'ಟ್ರ್ಯಾಪ್'ಗೆ ಬಿದ್ದ ಕೆಲವು ಆರೋಪಿಗಳ ವಿಚಾರಣೆ ಇತ್ಯರ್ಥಗೊಳ್ಳದಿದ್ದರೂ ಅವರಿಗೆ ಬಡ್ತಿ ನೀಡಿದ ಪ್ರಕರಣಗಳೂ ಇವೆ ಅಲ್ಲವೇ?

ಹೌದು. ಇಂತಹ ಕ್ರಮವಂತೂ ಬೇಸರ ತಂದಿರುವುದಷ್ಟೇ ಅಲ್ಲ, ನಮ್ಮ ಮುಖಕ್ಕೆ ಹೊಡೆದಂಥ ಅನುಭವ ನೀಡಿದೆ. ಹಿಂದೆ ಬಡ್ತಿ ನೀಡಲು 'ಸೀಲ್ಡ್ ಕವರ್ ಸಿಸ್ಟಮ್' ಅನುಸರಿಸಲಾಗುತ್ತಿತ್ತು. ಅಂದರೆ ಕಳಂಕಿತ ಅಧಿಕಾರಿಯೊಬ್ಬರ ಕಾರ್ಯಸಾಧನೆ ಪರಿಶೀಲಿಸಿದ ಮೇಲೆ ಅವರಿಗೆ ನೀಡಬಹುದಾದ ಬಡ್ತಿ ಆದೇಶವನ್ನು ಕವರ್‌ನಲ್ಲಿ ಸೀಲ್ ಮಾಡಿ ಇಡಲಾಗುತ್ತಿತ್ತು. ಆರೋಪಿ ಅಧಿಕಾರಿ/ನೌಕರರ ವಿಚಾರಣೆಯೆಲ್ಲಾ ಇತ್ಯರ್ಥಗೊಂಡು ಆತ ಆರೋಪಮುಕ್ತನಾದ ಮೇಲಷ್ಟೇ ಬಡ್ತಿ ಆದೇಶದ ಸೀಲ್ ತೆರೆಯಲಾಗುತ್ತಿತ್ತು. ಆತನಿಗೆ ಸೀಲ್ ಮಾಡಿದ ದಿನಾಂಕದ ಆಧಾರದ ಮೇಲೆ ಬಾಕಿ ವೇತನವೂ ಸಿಗುತ್ತಿತ್ತು. ಆದರೆ ಈ ನಿಯಮದ ಅಡಿ ಕೆಲವೊಂದು ದೋಷಗಳೂ ಇದ್ದವು. ವಿಚಾರಣೆ ಇತ್ಯರ್ಥ ಆರೇಳು ವರ್ಷ ನಡೆದು, ಅದರ ಮಧ್ಯೆ ಆರೋಪಿ ಅಧಿಕಾರಿ ನಿವೃತ್ತನಾದರೆ ಆತನಿಗೆ ಬಡ್ತಿ ವಂಚಿಸಿದಂತಾಗುತ್ತದೆ ಎಂದು ಆ ನಿಯಮವನ್ನು ತೆಗೆದು ಹಾಕಲಾಯಿತು.

ಭ್ರಷ್ಟ ಅಧಿಕಾರಿಗಳು ಲಂಚ ಸ್ವೀಕರಿಸುವಲ್ಲಿ ನೇರವಾಗಿ ಪಾಲ್ಗೊಳ್ಳದೆ 3ನೇ ವ್ಯಕ್ತಿಗಳ ಮೂಲಕ ಸ್ವೀಕರಿಸುವ ತಂತ್ರಕ್ಕೆ ಲೋಕಾಯುಕ್ತದ ಬಳಿ ಯಾವ ಉತ್ತರವಿದೆ?

ಸರ್ಕಾರಿ ಅಧಿಕಾರಿಗಳು ನೇರವಾಗಿ ಲಂಚ ಸ್ವೀಕರಿಸಲೇ ಬೇಕೆಂದಿಲ್ಲ. ಮೂರನೇ ವ್ಯಕ್ತಿಗೆ ತಲುಪಿಸುವಂತೆ ಸೂಚಿಸಿದರೂ ಅದನ್ನು ಲಂಚ ಸ್ವೀಕಾರವೆಂದೇ ಪರಿಗಣಿಸಿ ಆರೋಪಪಟ್ಟಿ ಸಲ್ಲಿಸುತ್ತೇವೆ. ಇದಕ್ಕಾಗಿ ದೂರವಾಣಿ ಸಂಭಾಷಣೆಯ ದಾಖಲೆ, ವಾಯ್ಸ್ ರೆಕಾರ್ಡಿಂಗ್ ಮುಂತಾದ ಕ್ರಮ ಅನುಸರಿಸುತ್ತೇವೆ.

ಲೋಕಾಯುಕ್ತಕ್ಕೆ ಪ್ರಸ್ತುತ ಸಿಬ್ಬಂದಿ, ಸೌಲಭ್ಯ ಸಮರ್ಪಕವಾಗಿದೆಯೇ?

ಸಿಬ್ಬಂದಿ ತುಂಬಾ ಕಡಿಮೆ ಇದೆ. ಈಗಿನ ಸಿಬ್ಬಂದಿಗಿಂತ ಎರಡು ಪಟ್ಟು ಹೆಚ್ಚು ಸಿಬ್ಬಂದಿ ಮತ್ತು ಮೂಲಸೌಕರ್ಯ ಅಗತ್ಯ ಇದೆ. ಇದನ್ನು ಸರ್ಕಾರ ಸದ್ಯವೇ ಪೂರೈಸಲಿದೆ ಎಂದು ನಂಬಿದ್ದೇವೆ.

ಸಂಸದೀಯ ಪ್ರಜಾಪ್ರಭುತ್ವ ಪದ್ಧತಿಯಲ್ಲೇ ಭ್ರಷ್ಟಾಚಾರಕ್ಕೆ ಅವಕಾಶಗಳಿವೆ ಎನ್ನುತ್ತೀರಾ? ಅಧ್ಯಕ್ಷೀಯ ಪದ್ಧತಿ ಇದಕ್ಕಿಂತ ಉತ್ತಮವೇ?

ಅಧ್ಯಕ್ಷೀಯ ಪದ್ಧತಿ ಈಗಿನ ಪದ್ಧತಿಗಿಂತ ಉತ್ತಮ ಎನ್ನಲಾರೆ; ಅದು ಈಗಿನದ್ದಕ್ಕಿಂತ ಸುಭದ್ರ ಸರ್ಕಾರ ನೀಡಬಹುದಷ್ಟೇ. ಮುಖ್ಯವಾಗಿ ಭಾರತದಲ್ಲಿ ದೂರದರ್ಶಿತ್ವ ಹೊಂದಿದ 'ಸ್ಟೇಟ್ಸ್‌ಮನ್' (ಮುತ್ಸದ್ದಿ)ಗಳ ಕೊರತೆ ಇದೆ. ತತ್‌ಕ್ಷಣಕ್ಕೆ ಆಗಬೇಕಾದ ಕೆಲಸವನ್ನು ಮಾಡಲು ಹಲವಾರು ವರ್ಷಗಳನ್ನು ತೆಗೆದುಕೊಳ್ಳುತ್ತಾರೆ. ಆ ಕೆಲಸ ಪೂರ್ಣಗೊಳ್ಳುವ ಕಾಲಕ್ಕೆ ಅದು 'ಔಟ್ ಡೇಟೆಡ್' ಆಗಿ ಬಿಟ್ಟಿರುತ್ತದೆ. ಈಗ ಬೆಂಗಳೂರಿನ ರಿಚ್‌ಮಂಡ್ ವೃತ್ತದ ಬಳಿಯ ಫ್ಲೈಓವರ್ ನಿರುಪಯುಕ್ತವಾಗಿರುವುದು ಕಣ್ಣೆದುರಿಗೇ ಇದೆ. ಹಾಗೇ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಸ್ತೆ ಸಂಪರ್ಕ ಕಲ್ಪಿಸುವ ಕಾರ್ಯ ಪೂರ್ಣಗೊಳ್ಳುವ ಕಾಲಕ್ಕೆ ಸಂಚಾರ ದಟ್ಟಣೆ ಎಷ್ಟಿರಬಲ್ಲುದೆಂಬ ಕಲ್ಪನೆ ಯಾರಲ್ಲೂ ಇಲ್ಲ. ನಮ್ಮ ಶಿಕ್ಷಣ ವ್ಯವಸ್ಥೆ ಕೂಡಾ ಉತ್ತಮ ನಾಯಕತ್ವ ಸೃಷ್ಟಿಸುವಲ್ಲಿ ವಿಫಲವಾಗಿದೆ. ಇದೆಲ್ಲದರ ಜೊತೆಗೆ ಭಾರತೀಯರಲ್ಲಿ 'ಕ್ರ್ಯಾಬ್ ಸಿಂಡ್ರೋಮ್' ಇದೆ. ಅಂದರೆ ಒಬ್ಬರು ಮೇಲೇರುತ್ತಿದ್ದಾರೆಂದರೆ ಇನ್ನೊಬ್ಬರು ಅವರ ಕಾಲು ಹಿಡಿದೆಳೆಯುತ್ತಾರೆ. ಹೀಗಾಗಿ ಯಾರೂ ಏನೂ ಸಾಧನೆ ಮಾಡಲಾಗುತ್ತಿಲ್ಲ!

 ಟಿಎಸ್‌ಐ

ವ್ಯಕ್ತಿ ವಿವರ:

ಜನನ: ಜೂನ್ 16, 1940

ಜನ್ಮ ಸ್ಥಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ನಿಟ್ಟೆ ಗ್ರಾಮ

ಶಿಕ್ಷಣ: ಕಾನೂನು ಪದವಿ, ಸರ್ಕಾರಿ ಕಾನೂನು ಮಹಾವಿದ್ಯಾಲಯ, ಬೆಂಗಳೂರು

1984: ಅಡ್ವೊಕೇಟ್ ಜನರಲ್ ಆಗಿ ನೇಮಕ

1998: ಭಾರತದ ಸಾಲಿಸಿಟರ್ ಜನರಲ್ ಆಗಿ ನೇಮಕ

1999: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ, 2005ರಲ್ಲಿ ನಿವೃತ್ತಿ.

2006 ಆಗಸ್ಟ್ 3: ಕರ್ನಾಟಕದ ಲೋಕಾಯುಕ್ತರಾಗಿ ನೇಮಕ

ಮುಖಪುಟ ಲೇಖನದಲ್ಲಿ ಇನ್ನೇನಿದೆ

ಭ್ರಷ್ಟಾಸುರ ಸಂಹಾರ ಬ್ರಹ್ಮಾಸ್ತ್ರ ಕೊಡಿ 

ಲೋಕಾಯುಕ್ತ ಕಾಯ್ದೆ ತಿದ್ದುಪಡಿ ಎಂದಿಗೆ? : ಮಾಜಿ ಲೋಕಾಯುಕ್ತ ಎನ್. ವೆಂಕಟಾಚಲ

ಭ್ರಷ್ಟರಿಗೆ ಬಡ್ತಿ ಲೋಕಾಯುಕ್ತಕ್ಕೆ ಅವಮಾನ : ಲೋಕಾಯುಕ್ತ ಸಂತೋಷ್ ಹೆಗ್ಡೆ 

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .