ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
 
ಸಂಪಾದಕೀಯ
ಮಹಾನ್ ತೈಲ ಬಿಕ್ಕಟ್ಟು: ಇದು ವ್ಯವಸ್ಥಿತ ಷಡ್ಯಂತ್ರದ ಫಲವೇ?
 
    
Arindam Choudhuri
ಅರಿಂದಮ್ ಚೌಧುರಿ,
ಪ್ರಧಾನ ಸಂಪಾದಕರು,
ದ ಸಂಡೆ ಇಂಡಿಯನ್

ಕಚ್ಚಾ ತೈಲಕ್ಕೆ ಬಹುದೊಡ್ಡ ಇತಿಹಾಸವಿದೆ; ಜಗತ್ತಿನಾದ್ಯಂತ ಅತಿ ಹೆಚ್ಚು ಸಂಖ್ಯೆಯ ಯುದ್ಧ ಮತ್ತು ಸಂಘರ್ಷಗಳಿಗೆ ಕಾರಣವಾದ ಏಕೈಕ ನೈಸರ್ಗಿಕ ಸಂಪನ್ಮೂಲವೆಂದರೆ ಪ್ರಾಯಶಃ ಕಚ್ಚಾತೈಲವಲ್ಲದೆ ಬೇರಾವುದೂ ಅಲ್ಲ. ತೈಲದ ಹಂಬಲದಿಂದಾಗಿಯೇ ಅಮೆರಿಕ ಮತ್ತು ಯೂರೋಪಿನ ಬಹಳಷ್ಟು ಮುಂದುವರಿದ ರಾಷ್ಟ್ರಗಳು ಹಿಂದುಳಿದ ಮತ್ತು ಶಾಂತಿಪ್ರಿಯ ರಾಷ್ಟ್ರಗಳಲ್ಲಿ ಸಾಕಷ್ಟು ರಕ್ತ ಹರಿಸಿವೆ; ತೈಲವಷ್ಟೇ ಅಲ್ಲ, ಯಾವುದೇ ಬೆಳವಣಿಗೆ ತಮ್ಮ ವಿರುದ್ಧ ಎಂಬಂತೆ ಕಂಡುಬಂದರೂ ತಮ್ಮ ಹಿತಾಸಕ್ತಿಗೆ ತಕ್ಕಂತೆ ಅಗತ್ಯ ಬದಲಾವಣೆ ಮಾಡದೆ ಬಿಡುವುದಿಲ್ಲ ಆ ಅಭಿವೃದ್ಧಿ ರಾಷ್ಟ್ರಗಳು. ಇಂತಹ ಕರಾಳ ಇತಿಹಾಸ ಇರುವಾಗ; ತೈಲ ಬೆಲೆಗಳು ಹಿಂದಿನ ಎಲ್ಲಾ ದಾಖಲೆಗಳನ್ನು ಮೀರಿ ಅಕ್ಷರಶಃ ಮುಗಿಲಿಗೇರಿ ನಿಂತು ಪ್ರಪಂಚದಾದ್ಯಂತ ಅಲ್ಲೋಲ-ಕಲ್ಲೋಲ ಸೃಷ್ಟಿಸಿರುವ ಪ್ರಸಕ್ತ ಸಂದರ್ಭದಲ್ಲಿ ಆ ಅಭಿವೃದ್ಧಿ ರಾಷ್ಟ್ರಗಳು ಅದೇಕೆ ಶಾಂತವಾಗಿವೆ ಎಂಬುದು ಅಚ್ಚರಿ ಸಂಗತಿ. ಅಷ್ಟೇ ಅಲ್ಲ, ತೈಲ ಬಳಕೆಯ ಅಸಂಖ್ಯಾತ ರಾಷ್ಟ್ರಗಳಿಗೆ ಹೋಲಿಸಿದರೆ ತೈಲ ಉತ್ಪಾದಿಸುವ ರಾಷ್ಟ್ರಗಳ ಸಂಖ್ಯೆ ಬೆರಳೆಣಿಕೆಯಷ್ಟು. ಇಂಥ ಸಂದರ್ಭದಲ್ಲಿ ಪ್ರಬಲ ರಾಷ್ಟ್ರವೊಂದು 'ಕ್ರಿಯಾತ್ಮಕವಾದರೆ' ಇಡೀ ಜಗತ್ತಿಗೇ ತಲ್ಲಣ ಉಂಟು ಮಾಡಬಹುದು. ಪರಿಸ್ಥಿತಿ ಹೀಗಿದ್ದರೂ ಆ ರಾಷ್ಟ್ರಗಳು ಅದೇಕೆ ಸುಮ್ಮನಿವೆ? ಏಷ್ಯಾದ ಬಡ ರಾಷ್ಟ್ರಗಳಿಗೆ ಹೋಲಿಸಿದರೆ ಪಶ್ಚಿಮ ಯೂರೋಪ್ ರಾಷ್ಟ್ರಗಳು ತೈಲಕ್ಕೆ ನೀಡುತ್ತಿರುವ ಬೆಲೆ ದುಬಾರಿಯೇ. ಆದರೂ ಆ ರಾಷ್ಟ್ರಗಳಲ್ಲೊಂದು ವಿಚಿತ್ರ ಮೌನ ಅದೇಕೆ ಮಡುಗಟ್ಟಿದೆ?

ಇತರ ಅಭಿವೃದ್ಧಿ ರಾಷ್ಟ್ರಗಳ ಮೌನ ಅತ್ತ ಇರಲಿ. ಇತರ ಸಂದರ್ಭಗಳಲ್ಲಿ ತೈಲಕ್ಕಾಗಿ ಪ್ರಪಂಚವನ್ನೇ ಕೋಲಾಹಲಕ್ಕೆ ದೂಡಿಬಿಡುವ ಜಾಯಮಾನ ಹೊಂದಿರುವ ಅಮೆರಿಕ ಸುಮ್ಮನಿರುವುದು ಅತಿ ದೊಡ್ಡ ಅಚ್ಚರಿ. ಅಮೆರಿಕದಿಂದ ಒಂದೇ ಒಂದು ಹೇಳಿಕೆ ಬಂದಿದ್ದರೆ ಅದನ್ನು ಒಪೆಕ್ (ಪೆಟ್ರೋಲಿಯಂ ರಫ್ತು ಮಾಡುವ ರಾಷ್ಟ್ರಗಳ ಒಕ್ಕೂಟ) ಚಾಚೂ ತಪ್ಪದೆ ಪಾಲಿಸಿ 'ತಿದ್ದುಪಡಿ ಕಾರ್ಯ'ಕ್ಕೆ ಮುಂದಾಗುತ್ತಿತ್ತು. ಆ ಮೂಲಕ ಇಡೀ ಜಾಗತಿಕ ಆರ್ಥಿಕತೆಯ ಸ್ಥಿತಿಗತಿ ತಹಬದಿಗೆ ಬರುತ್ತಿತ್ತು ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಅದಿರಲಿ, ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳಿಗೆ ಇಷ್ಟವಿಲ್ಲದ ಒಂದು ಬೆಳವಣಿಗೆ ಎಂದರೆ ತೈಲ ಬೆಲೆ ಏರಿಕೆಯಾಗುತ್ತಿದ್ದಂತೇ ತೈಲ ಉತ್ಪಾದಿಸುವ ರಾಷ್ಟ್ರಗಳ ಆದಾಯವೂ ಹೆಚ್ಚಿ ಸಂಪದ್ಭರಿತವಾಗುತ್ತಿವೆ. ಆದರೂ ಅಮೆರಿಕ ಸುಮ್ಮನಿದೆ!

ಆದರೆ ಒಪೆಕ್ ರಾಷ್ಟ್ರಗಳು ಅಭಿವೃದ್ಧಿ ರಾಷ್ಟ್ರಗಳ ಹಣಕಾಸು ಸಂಸ್ಥೆಗಳ ಷೇರುಗಳನ್ನು ಹೆಚ್ಚು ಕೊಳ್ಳುತ್ತಿರುವುದರಿಂದ ತೈಲಬೆಲೆಯ ಹಣ ಮರಳಿ ಅಭಿವೃದ್ಧಿ ರಾಷ್ಟ್ರಗಳತ್ತಲೇ ಹರಿಯುತ್ತಿದೆ. ಇನ್ನು ಬಳಕೆಯೇ ಮಾಡದ ಬೃಹತ್ ತೈಲಾಗಾರಗಳನ್ನು ಅಮೆರಿಕ ಹೊಂದಿರುವುದರತ್ತ ಗಮನ ಹರಿಸಿದರೆ, ಆ ಪರಿಯ ಮೌನ ಮತ್ತು ಯಾವುದೇ ಕ್ರಮಕ್ಕೆ ಮುಂದಾಗದಿರುವ ನಿಲುವು ಸಂದೇಹ ಮೂಡಿಸುತ್ತದೆ. ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ತೈಲ ಬೆಲೆ ಏರಿಕೆಯಲ್ಲಿ ಅಮೆರಿಕ ಮತ್ತು ಅಭಿವೃದ್ಧಿ ರಾಷ್ಟ್ರಗಳ ಹಿತಾಸಕ್ತಿ ಅಡಗಿದೆ ಎಂಬುದನ್ನು ಅಲ್ಲಗೆಳೆಯಲಾಗುವುದಿಲ್ಲ. ಆ ಹಿತಾಸಕ್ತಿ ಯಾವುದು?

ಪ್ರಸಕ್ತ ಪರಿಸ್ಥಿತಿ ಅಭಿವೃದ್ಧಿ ಪಾಶ್ಚಾತ್ಯ ರಾಷ್ಟ್ರಗಳು ಯೋಜನಾಬದ್ಧವಾಗಿ ಹೆಣೆದ (ಅದು ಸದುದ್ದೇಶದಿಂದಲೇ ಇರಬಹುದು) ಬೃಹತ್ ಷಡ್ಯಂತ್ರವೊಂದರ ಆರಂಭಿಕ ಹಂತವಷ್ಟೇ ಎಂಬುದು ಎಲ್ಲಾ ಸಾಧ್ಯತೆಗಳನ್ನು ಲೆಕ್ಕಹಾಕಿದ ನಂತರ ವೇದ್ಯವಾಗುತ್ತದೆ. ತೈಲ ಬೆಲೆ ಏರಿಕೆಯಿಂದ ಒಪೆಕ್ ರಾಷ್ಟ್ರಗಳು ಸದ್ಯಕ್ಕೆ ಆನಂದದ ಅಲೆಯಲ್ಲಿ ತೇಲುತ್ತಿರಬಹುದು. ಆದರೆ ಮುಂದೆ ಏನಾಗಲಿದೆ ಎಂಬುದು ಪ್ರಾಯಶಃ ಅವುಗಳ ಅರಿವಿಗೆ ಬಂದಿಲ್ಲ. ಈ ಅನಿರೀಕ್ಷಿತ ದುಬಾರಿ ತೈಲ ಬೆಲೆಯಿಂದಾಗಿ ಬದಲಿ ಇಂಧನ ಹುಡುಕಲೇಬೇಕಾದ ಅತಿ ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ಅನಿವಾರ್ಯತೆ ಹೀಗೇ ಮುಂದುವರಿದರೆ ಅಮೆರಿಕದ ಇಚ್ಛೆಗೆ ಅನುಗುಣವಾಗಿ ಒಪೆಕ್ ರಾಷ್ಟ್ರಗಳಿಗೇ ಭಾರಿ ಹೊಡೆತ ಬೀಳುತ್ತದೆ. ಇದರಿಂದ ಅಮೆರಿಕ, ಪಶ್ಚಿಮ ಯೂರೋಪ್‌ನ ಹಲವು ರಾಷ್ಟ್ರಗಳು ಮತ್ತು ರಷ್ಯಾ ಹೆಚ್ಚು ಲಾಭ ಪಡೆಯುತ್ತವೆ. ತೈಲ ಉತ್ಪಾದಿಸುವ ರಾಷ್ಟ್ರಗಳ ಬ್ಲಾಕ್‌ಮೇಲ್ ತಂತ್ರಕ್ಕೂ ಒಂದು ಮಿತಿ ಇದೆ; ಈ ಪರಿಸ್ಥಿತಿಯೇ ತೈಲ ಆಮದು ಮಾಡಿಕೊಳ್ಳುವ ರಾಷ್ಟ್ರಗಳಲ್ಲಿ ಪರ್ಯಾಯ ಇಂಧನ ಕಂಡುಕೊಳ್ಳಲೇಬೇಕಾದ ಅನಿವಾರ್ಯತೆ ಸೃಷ್ಟಿಸುತ್ತದೆ ಎಂದು ಊಹಿಸಲು ವಿಶೇಷ ಬುದ್ಧಿಮತ್ತೆಯೇನೂ ಬೇಡ. ಇತ್ತ ಭಾರತವು ಅಮೆರಿಕದೊಂದಿಗೆ ಪರಮಾಣು ಒಪ್ಪಂದಕ್ಕೆ ಮುಂದಾಗಿದ್ದರೆ ಅತ್ತ ರಷ್ಯಾ ಸಂಪೂರ್ಣ ನೈಸರ್ಗಿಕ ಅನಿಲ ಇಂಧನಕ್ಕೆ ಬದಲಾಗಲು ಸಿದ್ಧತೆ ನಡೆಸಿದೆ. ಈ ಕಾರಣದಿಂದಲೇ ಅಮೆರಿಕವು ಕ್ಯೋಟೋ ಪ್ರೊಟೊಕಾಲ್‌ಗೆ ತಡ ಮಾಡುತ್ತಿದೆ. ಆ ಮೂಲಕ ಸುಮ್ಮನೆ ಪ್ರೊಟೋಕಾಲ್‌ಗೆ ಸಹಿ ಹಾಕುವ ಮನೋಭಾವದ ರಾಷ್ಟ್ರಗಳ ಮೇಲೆ ಇಂಧನ ಮಾಲಿನ್ಯ ತಡೆಯಲೇಬೇಕಾದ, ಸ್ವಚ್ಛ ಇಂಧನಕ್ಕೆ ಹೋಗಲೇಬೇಕಾದ ಒತ್ತಡವನ್ನು ಅಮೆರಿಕ ಹೇರುತ್ತಿದೆ. ತೈಲ ಬೆಲೆ ಇನ್ನಷ್ಟು ಏರಿಕೆಯಾದರೆ ಜಗತ್ತು ಬದಲಿ ಇಂಧನ ಮತ್ತು ಅಸಾಂಪ್ರದಾಯಿಕ ಇಂಧನಗಳತ್ತ ಮತ್ತಷ್ಟು ವಾಲುತ್ತದೆ. ಹಾಗೆಯೇ ಕ್ಯೋಟೋ ಪ್ರೊಟೋಕಾಲ್‌ಗೆ ಸಹಿ ಹಾಕಿದ ರಾಷ್ಟ್ರಗಳಲ್ಲೂ ಇಂಧನ ಮಾಲಿನ್ಯ ತಡೆಯಲು ವೆಚ್ಚ ಮಾಡುವ ಹಣ ಬದಲಿ ಇಂಧನ ಆವಿಷ್ಕಾರಕ್ಕೆ ಹೂಡುವ ಹಣಕ್ಕಿಂತ ಬಲು ದುಬಾರಿಯಾಗುತ್ತದೆ. ಹೀಗಾಗಿ ಬದಲಿ ಇಂಧನ ಮಾರುಕಟ್ಟೆ ಹೆಚ್ಚು ಆಕರ್ಷಕವಾಗುತ್ತದೆ. ಹಾಗಾದಾಗ ಮಾತ್ರ ಬದಲೀ ಇಂಧನಕ್ಕಾಗಿ ಈಗಾಗಲೇ ಬಿಲಿಯನ್‌ಗಟ್ಟಲೆ ಹಣ ಹೂಡಿರುವ ಅಮೆರಿಕ, ಫ್ರಾನ್ಸ್ ಮತ್ತು ರಷ್ಯಾದ ಕಂಪನಿಗಳು ಜಾಗತಿಕ ಇಂಧನ ಮಾರುಕಟ್ಟೆಯನ್ನು ಸಂಪೂರ್ಣ ತಮ್ಮ ವಶದಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ.

(ಈ ಕಾರಣದಿಂದಲೇ ಭಾರತದ ಸಾಂಪ್ರದಾಯಿಕ ಕಾರ್ಖಾನೆಗಳು, ಇಟ್ಟಿಗೆ, ಮದ್ದು-ಗುಂಡು ತಯಾರಿಕಾ ಕಂಪನಿಗಳು ಹೆಚ್ಚು ಲಾಭ ಗಳಿಸುತ್ತಿರುವುದನ್ನು ನಾನು ಎಚ್ಚರಿಕೆಯಿಂದ ಗಮನಿಸುವುದು. ಪಾಶ್ಚಾತ್ಯ ಅಭಿವೃದ್ಧಿ ರಾಷ್ಟ್ರಗಳು ಈಗ ಏನಿದ್ದರೂ ಭವಿಷ್ಯದ ತಂತ್ರಜ್ಞಾನ -ಬದಲೀ ಇಂಧನ, ನ್ಯಾನೋ ತಂತ್ರಜ್ಞಾನ- ಮುಂತಾದವುಗಳೆಡೆ ಗಮನ ಹರಿಸಿವೆ. ಪರಿಸರ ಮಾಲಿನ್ಯಕ್ಕೆ ಕಾರಣವಾಗುವಂತಹ ಕೈಗಾರಿಕೆಗಳನ್ನು ಸಂತೋಷದಿಂದ ಅಭಿವೃದ್ಧಿಪರ ರಾಷ್ಟ್ರಗಳಿಗೆ ಸಾಗಹಾಕುತ್ತಿವೆ. ಭವಿಷ್ಯದಲ್ಲಿ ಇಂಧನ ನಿಯಮಗಳು ತೀರಾ ಕಠಿಣವಾದಾಗ ಅಭಿವೃದ್ಧಿಪರ ರಾಷ್ಟ್ರಗಳು ತೊಂದರೆಯಲ್ಲಿ ಸಿಲುಕಲಿವೆ).

ಏರುತ್ತಿರುವ ತೈಲ ಬೆಲೆಯನ್ನು ತಡೆಯಲು ಅಮೆರಿಕ ಅಷ್ಟು ಉತ್ಸಾಹ ತೋರದೇ ಇರಲು ಮತ್ತೊಂದು ಕಾರಣವೆಂದರೆ: ತೈಲ ಬೆಲೆ ಏರಿಕೆಯು ಚೀನಾದ ಅಭಿವೃದ್ಧಿಗೆ ಅಡ್ಡಗಾಲಾಗಲಿದೆ. ಕುತೂಹಲಕರ ಅಂಶವೆಂದರೆ ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚೀನಾದ ರಫ್ತು ಉತ್ಪನ್ನಗಳೊಡನೆ ಸ್ಪರ್ಧೆ ನಡೆಸಲು ಅನುವಾಗುವಂತೆ ಯುವಾನ್ ಮೌಲ್ಯವನ್ನು ಕಡಿಮೆ ಮಾಡಬಾರದು ಎಂದು ಅಮೆರಿಕ ಹಲವು ವರ್ಷಗಳಿಂದಲೂ ಚೀನಾ ಸರ್ಕಾರವನ್ನು ವಿನಂತಿಸುತ್ತಲೇ ಬಂದಿತ್ತು. ಆದರೆ ಕಳೆದ ಆರೆಂಟು ತಿಂಗಳಿಂದ ಹೀಗೆ ಮನವಿ ಮಾಡುವುದನ್ನು ಅಮೆರಿಕ ನಿಲ್ಲಿಸಿತ್ತು. ಅಪಮೌಲ್ಯಗೊಂಡ ಯುವಾನ್‌ಗೆ ತೈಲದ ಬಿಸಿ ಜೋರಾಗೇ ತಟ್ಟಲಿದೆ ಎಂಬ ಲೆಕ್ಕಾಚಾರ ಹಾಕಿದ್ದ ಅಮೆರಿಕ ಪ್ರಾಯಶಃ ಆ ಅವಧಿಯಲ್ಲಿ ತೈಲ ಬೆಲೆ ಏರಿಸುವ ತಂತ್ರದಲ್ಲಿ ತೊಡಗಿದ್ದಿರಬಹುದು. ಈಗ ತೈಲ ಬೆಲೆ ಏರಿಕೆಯಿಂದ ಚೀನಾ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಇನ್ನು ಹಣದುಬ್ಬರದ ದೆಸೆಯಿಂದ ಈಗಾಗಲೇ ಚೀನಾದ ಉತ್ಪನ್ನಗಳು ಸ್ಪರ್ಧೆ ನೀಡುವಲ್ಲಿ ಹಿಂದೆ ಬಿದ್ದಿರುವುದರಿಂದ ಈ ಸಂದರ್ಭದಲ್ಲಿ ಯುವಾನ್ ಮೌಲ್ಯ ಹೆಚ್ಚಿಸಿದರೆ ಚೀನಾಕ್ಕೆ ಇನ್ನಷ್ಟು ಹೊಡೆತ ಬೀಳುತ್ತದೆ. ಇನ್ನು ಹಿಂದೆ ಸರಿದು ಅಮೆರಿಕಕ್ಕಿಂತಲೂ ಮಿಗಿಲಾದ ಜಾಗತಿಕ ಪಿತೂರಿ ನಡೆಸುವುದು ಚೀನಾಕ್ಕೆ ಅಸಾಧ್ಯ. ಹೀಗಾಗಿ ಹೊಸ ಇಂಧನ ಮೂಲಕ್ಕಾಗಿ ಚೀನಾ ಜಗತ್ತಿನ ಇತರ ರಾಷ್ಟ್ರಗಳತ್ತ -ಅದರಲ್ಲೂ ಆಫ್ರಿಕಾದತ್ತ- ನೋಡಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ!

ಇರಲಿ, ನಾನೂ ಮೊದಲೇ ಹೇಳಿದಂತೆ ಇಂಧನಕ್ಕೆ ಬಹುದೊಡ್ಡ ಇತಿಹಾಸವೇ ಇದೆ. ಈ ಪರಂಪರೆ ಮುಂದುವರಿಯುತ್ತಲೇ ಇದೆ...

 

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .