ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಪ್ರತಿಧ್ವನಿ
ಓದುಗರ ಪತ್ರ
 

Letters- The Sunday Indian - Kannada

ಒಗ್ಗಟ್ಟು ಗೆಲುವಿನ ಸೂತ್ರ

ಕಳೆದ ಸಂಚಿಕೆಯಲ್ಲಿ 'ಯುಪಿಎ ಸಂಕಷ್ಟ; ಬಿಜೆಪಿಗೆ ಸದವಕಾಶ' (ರಂಜಿತ್ ಭೂಷಣ್) ಮುಖಪುಟ ಲೇಖನ ಚೆನ್ನಾಗಿ ಮೂಡಿಬಂದಿದೆ. ದೇಶದ ಅಭಿವೃದ್ಧಿ ದೃಷ್ಟಿಯಿಂದ ಮತ್ತು ರಾಜಕೀಯ ಪರಿಶುದ್ಧ ಅರ್ಥ ಪಡೆಯಬೇಕಾದಲ್ಲಿ ಭಾರತೀಯ ಜನತಾ ಪಕ್ಷ ಮುಂಬರುವ ಲೋಕಸಭಾ ಚುವಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕು. ಜನಮನವನ್ನು ಅರ್ಥ ಮಾಡಿಕೊಂಡು, ದೃಢವಾದ ಭದ್ರ ಸರಕಾರ ರಚನೆಯ ಚಿತ್ರ ಜನರ ಮುಂದಿಟ್ಟಲ್ಲಿ, ಅಂಥ ರಾಜಕೀಯ ಪಕ್ಷ ಜಯ ಗಳಿಸುವಲ್ಲಿ ಅನುಮಾನವಿಲ್ಲ. ತತ್ವಾಧಾರಿತ ಪಕ್ಷವೆನಿಸಿದ ಬಿಜೆಪಿ 7 ಪ್ರಮುಖ ರಾಜ್ಯಗಳಲ್ಲಿ ಏಕಪಕ್ಷೀಯ ಹಾಗೂ ೫ ರಾಜ್ಯಗಳಲ್ಲಿ ಮೈತ್ರಿಕೂಟದ ಸರ್ಕಾರವಾಗಿ ಮಾತ್ರವಲ್ಲ, ದೇಶದ ಪ್ರಮುಖ ವಿರೋಧ ಪಕ್ಷವಾಗಿ ಅಸ್ತಿತ್ವದಲ್ಲಿದೆ. ಈ ಹಿಂದಿನ ಸೋಲುಗಳು ಹಾಗೂ ಗೆಲುವಿನ ಅವಕಾಶವನ್ನು ಅರಿತು ಮುಂಬರುವ ಸಾರ್ವತ್ರಿಕ ಚುನಾವಣೆಗೆ ಸಿದ್ಧತೆ ಮಾಡಿಕೊಂಡಿರುವ ಕುರಿತು ಸಮಗ್ರವಾಗಿ ಟಿಎಸ್‌ಐ ವರದಿ ಮಾಡಿದೆ. ಅರುಣ್ ಜೇಟ್ಲಿ ಚುನಾವಣಾ ತಂತ್ರದ ರೂವಾರಿಯಾಗಿ ಕಾರ್ಯನಿರ್ವಹಿಸುತ್ತಿರುವುದು, ಪಕ್ಷದ ಒಗ್ಗಟ್ಟಿನ ಸೂತ್ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವಿಗೆ ಕಾರಣವಾದೀತು ಎಂಬುವುದರಲ್ಲಿ ಎಳ್ಳಷ್ಟು ಸಂಶಯವಿಲ್ಲ.

ಬಿ. ರಾಮರಾವ್
ಗುಲ್ಬರ್ಗಾ

'ಹಿಂದುತ್ವ' ಬದಿಗೆ ಸರಿಸಿ

'ಯುಪಿಎಗೆ ಸಂಕಷ್ಟ: ಬಿಜೆಪಿಗೆ ಸದವಕಾಶ' ಮುಖಪುಟ ಲೇಖನ ಅದ್ಭುತವಾಗಿ ಮೂಡಿಬಂದಿದೆ. ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ತನ್ನ ಅಸ್ತಿತ್ವಕ್ಕೆ ತಾನೇ ಬೆಂಕಿಯಿಡುತ್ತಿರುವುದು ಎನ್‌ಡಿಎ ಪಾಲಿಗೆ ವರವೇ. ಹಣದುಬ್ಬರ, ಬೆಲೆಯೇರಿಕೆ ಎದುರು ಅಸಹಾಯಕನಾಗಿ ಕೈಚೆಲ್ಲಿರುವ ಯುಪಿಎ ಭವಿಷ್ಯ ಅಧಃಪತನದತ್ತ ಸಾಗುತ್ತಿದೆ ಎನ್ನುವುದು ವಾಸ್ತವ. ಇಡೀ ದೇಶಕ್ಕೆ ಅಗತ್ಯವಾದ ಅಣು ಒಪ್ಪಂದದಲ್ಲಿ ತನ್ನದೇ ಧೋರಣೆಯನ್ನು ಅನುಸರಿಸುತ್ತಿರುವುದೂ ಸಾರ್ವತ್ರಿಕ ಚುನಾವಣೆಯಲ್ಲಿ ಯುಪಿಎಗೆ ನುಂಗಲಾರದ ತುತ್ತು. ಇಂಥ ಸಂದರ್ಭದಲ್ಲಿ ಕೇಂದ್ರದಲ್ಲಿ ಪ್ರಬಲ ವಿರೋಧ ಪಕ್ಷವಾಗಿರುವ ಬಿಜೆಪಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಹಿಂದುತ್ವ, ಕೇಸರೀಕರಣ, ಜಾತಿ ಎಲ್ಲೆಯನ್ನು ಮೀರಿ ಜನಪರ- ಅಭಿವೃದ್ಧಿಪರ ಚಿಂತನೆಯತ್ತ ಸಾಗಬೇಕು. ಜನ ಬದಲಾವಣೆ ಬಯಸಿದ್ದಾರೆ. ಈ ಸಕಾರಾತ್ಮಕ ಬದಲಾವಣೆ ತರುವಲ್ಲಿ ಬಿಜೆಪಿ ಮಹತ್ವದ ಪಾತ್ರ ವಹಿಸಬೇಕು.

ಶ್ಯಾಮ್‌ಸುಂದರ್ ಭಟ್
ಶಿರಸಿ

ಅಯೋಧ್ಯೆ ಬದಿಗಿಟ್ಟು ಭಾವೈಕ್ಯತೆಯ ಮಾತಾಡಿ

Letters- The Sunday Indian - Kannada

'ಯುಪಿಎ ಸಂಕಷ್ಟ; ಬಿಜೆಪಿಗೆ ಸದವಕಾಶ' ಮುಖಪುಟ ಲೇಖನ ವಸ್ತುನಿಷ್ಠ ವಿಶ್ಲೇಷಣೆ. ಪ್ರಸ್ತುತ ಅದೃಷ್ಟ ಬಿಜೆಪಿಯ ಮುಂದೆ ಮಂಡಿಯೂರಿ ಕುಳಿತಿದೆ. ಕೆಲ ರಾಜಕಾರಣಿಗಳು ಟೀಕಿಸುವಂತೆ ಬಿಜೆಪಿ ಕೇವಲ ಟ್ರೇಡರ್‍ಸ್ ಪಕ್ಷವಲ್ಲ, ಮೋಡ ಕವಿದೊಡನೆ ಕೊಡೆ ಹಿಡಿಯುವ ಅವಸರವಾದಿಗಳ ಮತ್ತು ಮಹಾ ವಾಚಾಳಿಗಳ ಪಕ್ಷವೂ ಹೌದು. ತನ್ನ ದುರ್ಬಲತೆಯಿಂದಲೇ ಕೆಲವು ಸುವರ್ಣಾವಕಾಶವನ್ನು ಕಳೆದುಕೂಂಡಿದೆ. ದೇಶ ಕಂಡರಿಯದ ಹಣದುಬ್ಬರ, ಉಗ್ರಗಾಮಿಗಳ ಅಟ್ಟಹಾಸ, ಅಶಾಂತಿ, ಕಾಂಗ್ರೆಸ್ ವಿರುದ್ಧ ಅತೃಪ್ತಿ, ಏಕಪಕ್ಷೀಯ ಅಣು ಒಪ್ಪಂದ, ಮತಗಳಿಸುವ ಮ್ಯಾಜಿಕ್ ಕಳೆದುಕೊಂಡಿರುವ ಕಾಂಗ್ರೆಸ್ ಹೈಕಮಾಂಡ್, ಹೀಗೆ ಇಡೀ ವಿರೋಧಿ ಪಾಳೆಯ ಬಣಗುಟ್ಟುತ್ತಿದೆ. ಅತೀ ಕೌಶಲ್ಯದಿಂದ ತನ್ನ ಕಾರ್ಯತಂತ್ರಗಳನ್ನು ಹೆಣೆದು ಈ ಅದೃಷ್ಟವನ್ನು ಮತಗಳನ್ನಾಗಿ ಪರಿವರ್ತಿಸಬೇಕಾದ ಮಹತ್ತರ ಜವಾಬ್ದಾರಿ ಬಿಜೆಪಿ ಹೆಗಲ ಮೇಲಿದೆ. ಹಿಂದಿ, ಹಿಂದುಸ್ಥಾನ, ಅಯೋಧ್ಯೆಗಳನ್ನು ಬದಿಗಿಟ್ಟು ರಾಷ್ಟ್ರೀಯ ಭಾವೈಕ್ಯ, ರಾಷ್ಟ್ರೀಯ ಸರ್ವತೋಮುಖ ಅಭಿವೃದ್ಧಿಯತ್ತ ದೃಢ ಹೆಜ್ಜೆಯಿಟ್ಟಲ್ಲಿ ಬಿಜೆಪಿಗೆ ಗೆಲುವಿನ ದಾರಿ ಸುಗಮವಾಗಬಹುದು.

ರಮಾನಂದ ಶರ್ಮಾ
ಬೆಂಗಳೂರು

Letters- The Sunday Indian - Kannadaಆರ್ಥಿಕ ಸಂಕಷ್ಟ

'ಮಧ್ಯಮ ವರ್ಗದ ಹೊಟ್ಟೆಗೆ ಬೆಂಕಿ' (ಸತೀಶ್ ಚಪ್ಪರಿಕೆ) ಲೇಖನ ಸಕಾಲಿಕವಾಗಿ ಮೂಡಿಬಂದಿದೆ. ತೈಲ ಬೆಲೆ ಏರಿಕೆಗೆ ಕೇಂದ್ರದ ಯುಪಿಎ ಸರ್ಕಾರ ಮಾತ್ರ ಹೊಣೆಯಲ್ಲ, ವಿಶ್ವಬ್ಯಾಂಕ್ ಮತ್ತು ವಿಶ್ವದ ಆರ್ಥಿಕ ನೀತಿ, ಕೆಲವು ರಾಷ್ಟ್ರಗಳು ತೈಲ ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಲು ನಡೆಸಿದ ಯತ್ನ ಇಂದು ವಿಶ್ವದ ಅನೇಕ ರಾಷ್ಟ್ರಗಳಿಗೆ ಹೊರೆಯಾಗಿ ಪರಿಣಮಿಸಿದೆ ಎನ್ನುವುದರಲ್ಲಿ ಅಚ್ಚರಿಯಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆ ಮಧ್ಯಮ ವರ್ಗದವರನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ. ತೈಲ ಉತ್ಪನ್ನಗಳ ಬದಲಿಗೆ ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಳ್ಳುವುದು ಈಗಿನ ತುರ್ತು.

ಗುರುರಾಜ್
ಶಿವಮೊಗ್ಗ

ಖಾಸಗಿವಲಯಕ್ಕೆ ವಹಿಸಿ

ಟಿಎಸ್‌ಐಯಲ್ಲಿ ಮೂಡಿ ಬಂದ 'ಮಧ್ಯಮ ವರ್ಗದ ಹೊಟ್ಟೆಗೆ ಬೆಂಕಿ' ವಿಶೇಷ ವರದಿ ಪ್ರಸ್ತುತ ಸ್ಥಿತಿ ಮತ್ತು ಪತ್ರಿಕೆಯ ಜನಪರ ಕಾಳಜಿಯನ್ನು ಬಿಂಬಿಸಿದೆ. ಅಗತ್ಯವಿರುವಷ್ಟು ಅಡುಗೆ ಅನಿಲವನ್ನು ಸರಬರಾಜು ಮಾಡದಿರುವುದು ಸರ್ಕಾರದ ಬೇಜವಾಬ್ದಾರಿಗೆ ಸ್ಪಷ್ಟ ನಿದರ್ಶನ. ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಅನಿಲ ಪೂರೈಕೆಯಾಗುತ್ತಿಲ್ಲ. ಈಗಿರುವ ಸಬ್ಸಿಡಿ ಕಾಯ್ದೆ ಖಾಸಗಿ ವಲಯವನ್ನು ನಿಯಂತ್ರಿಸುತ್ತಿದೆ. ಈ ಎಲ್ಲಾ ಸಮಸ್ಯೆಗಳ ನಡುವೆ ಜನಸಾಮಾನ್ಯರ ಪರಿಸ್ಥಿತಿ ಹೇಗಿರಬಹುದು ಎನ್ನುವುದನ್ನು ಊಹಿಸಬಹುದು. ಅಡುಗೆ ಅನಿಲಕ್ಕೆ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕಾದ ಅನಿವಾರ್ಯತೆ ಇದೆ. ಇದನ್ನು ಮಾಡಲು ಸರ್ಕಾರ ವಿಫಲವಾದರೆ ಖಾಸಗಿ ವಲಯಕ್ಕೆ ಈ ಜವಾಬ್ದಾರಿ ನೀಡಲಿ.

ಉನ್ನಿಕೃಷ್ಣನ್
ಕೇರಳ

ಸಮಯವೆಲ್ಲಿದೆ ಹೇಳಿ?

'ಗುನ್ಯಾ ಏಟಿಗೆ ಕರಾವಳಿ ತತ್ತರ' (ಚಿತ್ರಾ ಕರ್ಕೇರಾ) ವಿಶ್ಲೇಷಣಾ ವರದಿ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹಬ್ಬಿರುವ ಚಿಕೂನ್ ಗುನ್ಯಾದ ಕುರಿತು ಆರೋಗ್ಯ ಇಲಾಖೆಯ ನಿರ್ಲಕ್ಷತೆಯನ್ನು ಅನಾವರಣಗೊಳಿಸಿದೆ. ಕಳೆದ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಮತಗಟ್ಟೆಗಳ ಮುಂದೆ ಇದ್ದ 'ಕ್ಯೂ' ಇದೀಗ ಆಸ್ಪತ್ರೆಗಳ ಮುಂದೆ ನಿಂತಿದೆ. ಪುಟ್ಟ ಕಂದಮ್ಮಗಳನ್ನೂ ಬಿಡದ ಈ ಮಾರಿ, ಪ್ರಾಕೃತಿಕ ಅಸಮತೋಲನದಿಂದ ಉಂಟಾಗಿರಬಹುದು ನಿಜ. ಆದರೆ ಒಂದೆಡೆ ಜನರ ಸರಣಿ ಸಾವು ಮುಂದುವರಿಯುತ್ತಿದ್ದರೆ, ಸರ್ಕಾರ ಮಾತ್ರ ಬರೀ ಸಬೂಬುಗಳನ್ನು ನೀಡುವುದರಲ್ಲೇ ಕಾಲ ಕಳೆಯುತ್ತಿದೆ. 'ಕುದುರೆ ವ್ಯಾಪಾರ'ದಲ್ಲಿ ಬ್ಯುಸಿಯಾಗಿರುವ ಜನಪ್ರತಿನಿಧಿಗಳಿಗೆ ಇತ್ತ ಗಮನಹರಿಸುವ ವ್ಯವಧಾನವಿದೆಯೆ?

ಎಂ. ಇರ್ಷಾದ್
ವೇಣೂರು

ವಿವೇಕಶೂನ್ಯ ಪಕ್ಷಗಳು

ಪ್ರಸ್ತುತ ರಾಜಕೀಯ ಸ್ಥಿತಿಗತಿಯನ್ನು ಅವಲೋಕಿಸಿದಾಗ, ರಾಷ್ಟ್ರೀಯ ಪಕ್ಷಗಳು ಇವೆಯೇ ಎಂಬ ಅನುಮಾನ ಮೂಡುವುದಂತೂ ಖಂಡಿತ. ವಿವೇಕಶೂನ್ಯರಂತೆ ವರ್ತಿಸುತ್ತಿರುವ ಯುಪಿಎ ಹಾಗೂ ಯುಪಿಎ ಸರ್ಕಾರದ ಮೇಲೆ ಗೂಬೆ ಕೂರಿಸುವುದನ್ನೇ ಮೂಲವೃತ್ತಿಯನ್ನಾಗಿ ಮಾಡಿಕೊಂಡಿರುವ ಎನ್‌ಡಿಎ, ಇವೆರಡರ ಜನಪರ ಕಾಳಜಿಯ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಈ ತಿಕ್ಕಾಟದ ಲಾಭ ಪ್ರಾದೇಶಿಕ ಪಕ್ಷಗಳಿಗೆ! ಹೌದು, ಖಂಡಿತವಾಗಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳ ಗೆಲುವನ್ನು ನಿರೀಕ್ಷಿಸಲು ಸಾಧ್ಯವೇ ಇಲ್ಲ. 'ಮುಂದಿನ ಲೋಕಸಭಾ ಚುನಾವಣೆಯ ನಂತರ ಮಾತ್ರವಲ್ಲ, ರಾಷ್ಟ್ರದ ಭವಿಷ್ಯದಲ್ಲೂ ಪ್ರಾದೇಶಿಕ ಪಕ್ಷಗಳು ನಿರ್ಣಾಯಕ ಪಾತ್ರ ವಹಿಸಬಹುದಲ್ಲವೇ?' (ಅರಿಂದಮ್ ಚೌಧುರಿ) ಎಂದಿರುವುದು ಒಪ್ಪತಕ್ಕದ್ದೇ.

ಶರ್ಮಿಳಾ ಗೌಡ
ರಾಯಚೂರು

ಯುವಜನರ ಸಾಥ್ ಬೇಕು

ತೆರೆಬೀಳುವ ಮುನ್ನ ಅಂಕಣದಲ್ಲಿ ಮೂಡಿಬಂದ 'ಯುವಜನರ ಸಾಥ್ ಸಿಕ್ಕರಷ್ಟೇ ಪ್ರಗತಿ' (ಡಾ. ಜಯಪ್ರಕಾಶ ನಾರಾಯಣ)ಯಲ್ಲಿ ಉತ್ತಮ ವಿಚಾರಗಳನ್ನು ಜನತೆಗೆ ಮನದಟ್ಟುಮಾಡಲಾಗಿದೆ. ರಾಜಕೀಯದಲ್ಲಿ ತುಂಬಿಹೋಗಿರುವ ಭ್ರಷ್ಟಾಚಾರ, ಅಪ್ರಾಮಾಣಿತೆಯಿಂದಾಗಿ ರಾಜಕೀಯವೆಂದರೆ ಅಸಹ್ಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇಂಥ ಸನ್ನಿವೇಶದಲ್ಲಿ ಯುವಜನರು ರಾಜಕೀಯಕ್ಕೆ ಧುಮುಕಲೇಬೇಕು. ಹೀಗಿದ್ದಲ್ಲಿ ದೇಶದಲ್ಲಿ ಪಾರದರ್ಶಕ ಮತ್ತು ಪ್ರಾಮಾಣಿಕ ರಾಜಕೀಯ ಸ್ಥಿತಿ ನಿರ್ಮಾಣವಾಗಬಹುದು. ಲೇಖಕರ ಈ ಮಾತು ದೇಶದ ಎಲ್ಲಾ ಯುವಜನರಿಗೆ ಕಿವಿಮಾತಾಗಲಿ ಎನ್ನುವುದು ನಮ್ಮ ಆಶಯ.

ಎಚ್.ಎಂ. ರಂಗನಾಥ್
ಕೋಲಾರ

ಅರಿವು ಮೂಡಿಸಿ

'ಕಂಬLetters- The Sunday Indian - Kannadaಿ ಹಿಂದಿನ ಕುಖ್ಯಾತರು' ಮುಖಪುಟ ಲೇಖನ ನಮ್ಮ ದೇಶದ ಸ್ಥಿತಿಗತಿಗೆ ಹಿಡಿದ ಕೈಗನ್ನಡಿ. ದೇಶದ ಪ್ರಸಿದ್ಧ ವ್ಯಕ್ತಿಗಳ ಹಿನ್ನೆಲೆ ತಿಳಿದಾಗ ಅಚ್ಚರಿಯಾಯಿತು. 'ಕೆಟ್ಟ ಮೇಲೆ ಬುದ್ಧಿ ಬಂತು' ಎಂಬಂತೆ ಕೆಲವರು ಜೈಲಿನಲ್ಲಿ ಒಳ್ಳೆ ನಡತೆಯನ್ನು ರೂಢಿಸಿಕೊಂಡಿರುವುದಕ್ಕೆ ಸಮಾಧಾನಪಡುವುದೋ ಅಥವಾ ಕಂಬಿಹಿಂದೆಯೇ ಇದ್ದುಕೊಂಡು ಎಲ್ಲವನ್ನೂ ತಮ್ಮ ಕಪಿಮುಷ್ಠಿಯಲ್ಲಿ ಬಂಧಿಸಿ ಐಶಾರಾಮಿ ಜೀವನ ನಡೆಸುತ್ತಿರುವ ಬಗ್ಗೆ ಖೇದ ಪಡುವುದೋ ಎಂಬ ಗೊಂದಲ ಉಂಟಾಗಿದೆ. ಜೈಲಿನಲ್ಲಿ ಮಾನವಹಕ್ಕುಗಳ ಬಗ್ಗೆ ಕಾಳಜಿವಹಿಸಬೇಕು. ಸ್ವಚ್ಛತೆ, ಶುದ್ಧ ಗಾಳಿ, ಆಹಾರ, ರೋಗಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಬೇಕು. ಜೈಲು ಎಂಬುದು ಕೈದಿಗಳನ್ನು ಅಧಃಪತನಕ್ಕೆ ತಳ್ಳುವ ವೇದಿಕೆಯಾಗದೆ ಭವಿಷ್ಯದಲ್ಲಿ ಆ ಕೈದಿಗಳನ್ನು ಸತ್ಪ್ರಜೆಯಾಗಿಸುವ ನೆಲೆಯಾಗಬೇಕು. ಈ ನಿಟ್ಟಿನಲ್ಲಿ ಅವರಿಗೆ ಕಾರ್‍ಯಾಗಾರಗಳನ್ನು ನಡೆಸಬೇಕು. ಹಾಗಿದ್ದಲ್ಲಿ ಮಾತ್ರ ದೇಶದ ಉನ್ನತಿ ಸಾಧ್ಯ.

ಅನುಪಮಾ ರಾಘವೇಂದ್ರ
ಕಾಸರಗೋಡು

ಹಳ್ಳಿ ಉದ್ಧಾರವಾಗಲಿ

'ಮಲೆನಾಡ ಮಡಿಲಲ್ಲಿ ಒಂದು ಹಳ್ಳಿಯ ಕೊಲೆ' (ಸತೀಶ್ ಚಪ್ಪರಿಕೆ) ವಿಶೇಷ ವರದಿ ಓದಿದೆ. ಅಭಿವೃದ್ಧಿಯ ಮಂತ್ರ ಪಠಿಸುತ್ತಿರುವ ಭಾರತ ದೇಶದಲ್ಲಿ ದೇವಕಾರುವಿನಂತಹ ಹಳ್ಳಿ ಇರುವುದು ವಿಷಾದನೀಯ. ಅಭಿವೃದ್ಧಿಗಾಗಿ ದೇವಕಾರು ಎಂಬ ಊರೇ ಬಲಿಯಾಗುತ್ತಿದೆ. ಇಲ್ಲಿಯ ನಿವಾಸಿಗಳಿಗೆ ಮೂಲಭೂತ ಸೌಕರ್ಯ ಒದಗಿಸದಿರುವುದು ದುರಂತವೇ ಸರಿ. ಸರ್ಕಾರ, ದೇಶದಲ್ಲಿ ಹೆಚ್ಚುತ್ತಿರುವ ವಿದ್ಯುತ್ ಅಗತ್ಯವನ್ನು ಮನಗಂಡು ಇವರ ಭೂಮಿಯನ್ನು ತೆರವುಗೊಳಿಸಿದೆ. ಆದರೆ ಇಲ್ಲಿನ ಗ್ರಾಮಸ್ಥರ ಬದುಕಿನ ಕುರಿತು ಚಿಂತಿಸುವ ಕನಿಷ್ಠ ಕಾಳಜಿಯೂ ಸರ್ಕಾರಕ್ಕಿಲ್ಲ. ಸರ್ಕಾರದ ದಾಖಲಾತಿಗಳಲ್ಲಿ ಇವರ ಅಸ್ತಿತ್ವದ ಬಗ್ಗೆ ದಾಖಲೆಗಳೇ ಇಲ್ಲದಿರುವಾಗ ಇವರಿಗೆ ನೆರವಾಗುವವರು ಯಾರು? ಈ ಬಡಗ್ರಾಮಸ್ಥರನ್ನು ನಿರ್ಲಕ್ಷಿಸಿ, ಮತ್ಯಾರೋ ಈ ಭೂಮಿಯ ಲಾಭ ಪಡೆಯುತ್ತಿದ್ದಾರೆ. ದೇವಕಾರು ನಿವಾಸಿಗಳಿಗೆ ರಸ್ತೆ, ಶಾಲೆ, ಮೂಲಸೌಕರ್ಯ, ವಿದ್ಯುತ್ ಹಾಗೂ ಆಸ್ಪತ್ರೆ ಯಾವ ಸೌಲಭ್ಯವೂ ಇಲ್ಲ. ಬಡಜನರ ಕೂಗಿಗೆ ಪ್ರತಿಯೊಬ್ಬರೂ ಕಿವುಡರೇ. ತುತ್ತಿಗಾಗಿ ಪರದಾಡುವ ಬಡಜನರ ಅಭಿವೃದ್ಧಿಯಾದರೆ ಮಾತ್ರ ದೇಶ ಉದ್ಧಾರವಾಗಲು ಸಾಧ್ಯ.

ನೀತು ಪುರುಶೋತ್ತಮನ್
ತಮಿಳುನಾಡು

ಬಿಜೆಪಿ ಪರ

'ಬಿಜೆಪಿಗೆ ಇದು ಸದವಕಾಶ' ಮುಖಪುಟ ಲೇಖನ ಅದ್ಭುತವಾಗಿ ಮೂಡಿಬಂದಿದೆ. ರಂಜಿತ್ ಭೂಷಣ್ ಅವರು ಬಿಜೆಪಿ ಮುಂದಿರುವ ಅವಕಾಶಗಳನ್ನು ಸಮರ್ಪಕ ವಿವರಗಳೊಂದಿಗೆ ತೆರೆದಿಟ್ಟಿದ್ದಾರೆ. ದೇಶದ ಜನತೆ ಬಿಜೆಪಿ ಪರವಾಗಿದ್ದಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಆದರೆ ಮುಂಬರುವ ಸಾರ್ವತ್ರಿಕ ಚುನಾವಣೆಯೇ ನಿರ್ಣಾಯಕ ಘಟ್ಟ.

ಬಾಲಚಂದ್ರ
ಇ-ಮೇಲ್ ಮೂಲಕ

ಕಣ್ಸೆಳೆಯುವ ವಿನ್ಯಾಸ

ಟಿಎಸ್‌ಐ ಚೆನ್ನಾಗಿ ಮೂಡಿಬರುತ್ತಿದೆ. ಕಣ್ಸೆಳೆಯುವ ಪತ್ರಿಕೆಯ ವಿನ್ಯಾಸ ಉತ್ತಮ ಗುಣಮಟ್ಟದ್ದು. ಒಂದು ಪತ್ರಿಕೆಯ ಆದ್ಯತೆ ಅದರ ವಿನ್ಯಾಸವನ್ನೇ ಅವಲಂಬಿಸಿರುತ್ತದೆ. ಪ್ರತಿಯೊಬ್ಬ ಓದುಗನೂ ವಿನ್ಯಾಸ, ಶಿರೋನಾಮೆ, ಪೀಠಿಕೆ, ಆನಂತರ ಸಂಪೂರ್ಣ ಲೇಖನ ಓದುತ್ತಾನೆ. ಇಷ್ಟೇ ಅಲ್ಲ, ಇದರಲ್ಲಿ ಬರುವ ಅಂಕಣಗಳು ಮತ್ತು ಉದಯೋನ್ಮುಖ ಪ್ರತಿಭೆಗಳಿಗೆ ಮೀಸಲಿಟ್ಟ 'ಇಷ್ಟೇ ಇಷ್ಟು' ಅಂಕಣ ಮನಸೆಳೆಯುತ್ತವೆ.

ನಯನ
ಇ-ಮೇಲ್ ಮೂಲಕ

ಚೆಂದದ ಕಥೆ

ಅರವಿಂದ ಚೊಕ್ಕಾಡಿ ಅವರ 'ಬೇಡ' ಸುದೀರ್ಘ ನೆನಪುಗಳ ಚೆಂದದ ಕಥೆ. ಸರಳವಾದ ಶಬ್ಧಗಳಲ್ಲಿ ರಚಿತವಾದ ಪಾತ್ರಗಳನ್ನು ಅಚ್ಚುಗೊಳಿಸುತ್ತ ಸಾಗುತ್ತದೆ. ಕಥೆಯೊಂದಿಗೆ ಮಿಳಿತವಾದ ಸಹಜ ಸಾಮಾಜಿಕ ಘಟನೆಗಳು/ ವ್ಯಕ್ತಿಗಳು ಮೆಚ್ಚುವಂತಹವು.

ಇಕ್ಬಾಲ್
ಇ-ಮೇಲ್ ಮೂಲಕ

ರಂಗಭೂಮಿಗೂ ಆದ್ಯತೆ

ಪತ್ರಿಕೆ ವರ್ಣಿಸಲಸದಳವಾಗಿದೆ. ಆದರೆ ರಂಗಭೂಮಿಗೂ ಕೊಂಚ ಜಾಗ ಮೀಸಲಿಟ್ಟರೆ ಇನ್ನೂ ಚೆನ್ನಾಗಿರುತ್ತದೆ. ಆಕರ್ಷಕ ಗುಣಮಟ್ಟ ಹೀಗೆಯೇ ಕಾಯ್ದುಕೊಳ್ಳಿ. ಶುಭವಾಗಲಿ.

ಮಂಡ್ಯ ರಮೇಶ್, ನಟ
ಇ-ಮೇಲ್ ಮೂಲಕ

 

ಬಹುಮಾನಿತ ಪತ್ರಗಳು

Letters- The Sunday Indian - Kannada

ರಾಜಕೀಯ ತಂತ್ರಗಾರಿಕೆ

ಈಗಿನ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿದರೆ ಹಣದುಬ್ಬರ ಅತಿ ಮುಖ್ಯ ರಾಜಕೀಯ ದಾಳವಾಗುತ್ತಿದೆ. ಟಿಎಸ್‌ಐ ಜುಲೈ 13ರಂದು ಪ್ರಕಟವಾದ ಮುಖಪುಟ ಲೇಖನ 'ಬಿಜೆಪಿಗೆ ಇದು ಸದವಕಾಶ' (ರಂಜಿತ್ ಭೂಷಣ್) 2009ರಲ್ಲಿ ಬಿಜೆಪಿ ಜಯಭೇರಿಯ ಸಾಧ್ಯತೆ ಇದೆ ಎಂದು ಸರಿಯಾಗಿಯೇ ಹೇಳಿದೆ. ಬೆಲೆ ಏರಿಕೆ ಕಾಂಗ್ರೆಸ್‌ಗೆ ಮುಳುವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಜಾತಿ ರಾಜಕೀಯ ಮತ್ತು ಮೂಲ ಸೌಕರ್ಯ ಸಮಸ್ಯೆಗಳೂ ಕೂಡ ಚುನಾವಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸಲಿವೆ. 2004ರ ಚುನಾವಣೆಯಲ್ಲಿ ಬಿಜೆಪಿ ಎಂತಹ ದುಸ್ಥಿತಿ ಎದುರಿಸಿತ್ತೋ ಅದನ್ನೇ ಕಾಂಗ್ರೆಸ್ ಈ ಚುನಾವಣೆಯಲ್ಲಿ ಎದುರಿಸಬೇಕಾಗುತ್ತದೆ. ಹಿಂದೆ ರಾಜಕೀಯವಾಗಿ ಉಳಿಯಬೇಕೆಂದರೆ ಆಹಾರೋತ್ಪನ್ನಗಳ ಬೆಲೆ ಬಹಳ ಪ್ರಮುಖ ಪಾತ್ರ ವಹಿಸುತ್ತಿತ್ತು. 1980ರಲ್ಲಿ ಈರುಳ್ಳಿಯ ಬೆಲೆ ಸರ್ಕಾರ ಉರುಳಲು ಕಾರಣವಾಯಿತು. ಇನ್ನು ಬಿಜೆಪಿ ಈಗ ಪತ್ರಿಕೆಗಳಲ್ಲಿ ನೀಡುತ್ತಿರುವ ಪ್ರಚಾರ ಜಾಹೀರಾತುಗಳನ್ನು ನೋಡಿ. 'ಬೆಲೆ ಏರಿಕೆಗೆ ಕಾಂಗ್ರೆಸ್ ದೂಷಿಸುತ್ತಿರುವುದು ಯಾರನ್ನು? ತನ್ನನ್ನು ಹೊರತುಪಡಿಸಿ ಬೇರೆಲ್ಲರನ್ನೂ. ನೀವೂ ಅಲ್ಲಿದ್ದೀರಿ' ಎಂಬ ಘೋಷಣೆಗಳೇ ಬಿಜೆಪಿ ಹಣದುಬ್ಬರದ ವಿಚಾರವನ್ನು ಚುನಾವಣಾ ಪ್ರಚಾರ ಕಾರ್ಯದಲ್ಲಿ ಎಷ್ಟು ಚೆನ್ನಾಗಿ ಬಳಸಿಕೊಳ್ಳುತ್ತಿದೆ ಎಂಬುದನ್ನು ತೋರಿಸಿಕೊಡುತ್ತದೆ.

ಅಖಿಲ್ ಜೋಶಿ
ಇ-ಮೇಲ್ ಮೂಲಕ

ವಿತ್ತೀಯ ಸಮಸ್ಯೆಯತ್ತ ಗಮನ

ಅರಿಂದಮ್ ಚೌಧುರಿ ಅವರ 'ಭಾರತದ ವಿತ್ತೀಯ ಕೊರತೆ ತಲೆಕೆಡಿಸಿಕೊಳ್ಳಬೇಕಾದ ಸಂಗತಿಯೇನೂ ಅಲ್ಲ' ಸಂಪಾದಕೀಯ ಎಂದಿನಂತೆ ಉತ್ತಮ ಓದಿಗೆ ಪೂರಕವಾಯಿತು. 'ಇಂಟರ್ ನ್ಯಾಶನಲ್ ರೇಟಿಂಗ್ ಏಜೆನ್ಸಿ ಫಿಚ್' ಕೂಡ ಪರಿಷ್ಕರಣೆ ಮಾಡುತ್ತಾ ಭಾರತದ ಸ್ಥಳೀಯ ಕರೆನ್ಸಿ ಸುಭದ್ರ ಸ್ಥಿತಿಯಿಂದ ಕೆಳಮಟ್ಟಕ್ಕಿಳಿಯುತ್ತಿದೆ ಎಂದಿದೆ. ಹೆಚ್ಚುತ್ತಿರುವ ಹಣದುಬ್ಬರ ಮತ್ತು ಹಣಕಾಸು ಪರಿಸ್ಥಿತಿ ಅತ್ಯಂತ ಕಳಪೆ ಸ್ಥಿತಿಗೆ ತಲುಪಿರುವುದೇ ಇದಕ್ಕೆ ಕಾರಣ. ಇದು ಕಾಂಗ್ರೆಸ್ ಪಾಲಿಗೆ ಅತ್ಯಂತ ಕೆಟ್ಟ ಸುದ್ದಿಯಂತೂ ಹೌದು. ಅದು ಭಾರತೀಯ ಹಣಕಾಸು ಪರಿಸ್ಥಿತಿ ಹಿಮ್ಮುಖವಾಗಿ ಚಲಿಸಲು ಕಾರಣವಾಗಿದೆ. ಅರಿಂದಮ್ ಸೂಚಿಸಿರುವಂತೆ ಹಣಕಾಸು ಕೊರತೆಗೆ ಕಾರಣವೇನು ಎಂಬುದನ್ನು ಕಂಡುಹಿಡಿಯಬೇಕಾದ ಅನಿವಾರ್ಯತೆ ಇದೆ. ವಿತ್ತೀಯ ಕೊರತೆ ಅನುಭವಿಸಿದ್ದ ಚೀನಾದ ನಿದರ್ಶನ ನೀಡಿದ್ದು ಇಲ್ಲಿ ಮೆಚ್ಚತಕ್ಕದ್ದು.

ತರುಣ್ ಲಲಿತ್
ಚಂಡೀಗಢ್

Letters- The Sunday Indian - Kannadaಮನೆಗೆಲಸದವರಿಗೆ ಬದುಕು

ದೇಶದಲ್ಲಿಯೇ ಅತಿ ದೊಡ್ಡ ಸಂಖ್ಯೆಯ ಬಡ, ಅವಿದ್ಯಾವಂತ ಅಥವಾ ಅರೆ-ವಿದ್ಯಾವಂತ ನಗರವಾಸಿ ಮಹಿಳೆಯರು ಹಗಲು ರಾತ್ರಿ ಎನ್ನದೇ ಮಾಡುವ ಕೆಲಸವೊಂದಿದ್ದರೆ ಅದು 'ಮನೆಗೆಲಸ'. ಆದರೆ ಈ ಮಹಿಳೆಯರು ತಮ್ಮ ಮೈ ಮುರಿಯುವ ಕೆಲಸದ ನಂತರವೂ ಅವರು ಪಡೆಯುವ ವೇತನದ ಕುರಿತು ಯಾರೂ ತಲೆ ಕೆಡಿಸಿಕೊಂಡಂತಿಲ್ಲ. ಮನೆಗೆಲಸಕ್ಕೆ ಮಹಿಳೆಯರನ್ನು ನೇಮಿಸಿಕೊಳ್ಳುವ ಸಂಪ್ರದಾಯ ಭಾರತದಲ್ಲಿ ದಿನಗಳೆದಂತೆ ಬಲವಾಗುತ್ತಿದೆ. ಪಾಶ್ಚ್ಯಾತ್ಯ ದೇಶಗಳಲ್ಲಿ ಮನೆಗೆಲಸದವರನ್ನು ನೇಮಿಸಿಕೊಳ್ಳಲು ಕಾನೂನು ಸಂಬಂಧೀ ನಿರ್ಬಂಧ ಹೆಚ್ಚಿರುವುದರಿಂದ ಅಲ್ಲಿ ಈ ಪದ್ಧತಿ ನಿಧಾನವಾಗಿ ಕಣ್ಮರೆಯಾಗುತ್ತಿದೆ. ಪ್ರಸೂನ್ ಮಜುಂದಾರ್ ಪ್ರಕಾರ ಮನೆಗೆಲಸದವರಿಗೆ ಸಂಬಂಧಿಸಿದಂತೆ ಭಾರತದಲ್ಲಿ ಯಾವುದೇ ಕಾನೂನುಗಳಿಲ್ಲದಿರುವುದರಿಂದ ಅವರು ತಮ್ಮ ಮಾಲೀಕರಿಂದ ದೌರ್ಜನ್ಯಗಳಿಗೆ ಒಳಗಾಗುತ್ತಿದ್ದಾರೆ. ಅವರು ತಮ್ಮ ದುಡಿಮೆಗೆ ಪಡೆಯುವ ಸಂಬಳ ಕೂಡಾ ಅತ್ಯಲ್ಪ. ಸೂಕ್ತ ಕಾನೂನಿನ ಕೊರತೆ ಮತ್ತು ವ್ಯವಸ್ಥೆಯ ದುರಾಸೆ ಕೆಲವು ವರ್ಗದ ಕೆಲಸಗಾರರ ಬದುಕನ್ನು ದುರ್ಭರಗೊಳಿಸಿವೆ. ಮನೆಯೊಳಗಿನ ಬೆಲೆಬಾಳುವ ವಸ್ತುಗಳನ್ನು, ನಮ್ಮ ಅವಶ್ಯಕತೆಗಳನ್ನು ಕಾಯುವ ಮನೆಗೆಲಸದ ಕಾರ್ಮಿಕರ ಬದುಕನ್ನು ಹಸನುಗೊಳಿಸಬೇಕಾದ ಗುರುತರ ಹೊಣೆ ನಮ್ಮ ಮೇಲಿದೆ.

ಗುಂಜನ್ ಭಟ್ಟಾಚಾರ್ಯ
ಹೌರಾ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .