|
ಕೈಗಾರಿಕಾ ವಲಯದಲ್ಲಿ ಮುಂಚೂಣಿಯಲ್ಲಿರುವ ದೇಶದ ಐದು ಪ್ರಮುಖ
ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕದ ಆರ್ಥಿಕ ಪ್ರಗತಿಗೆ ಕಳೆದ ವರ್ಷ
ವಿದ್ಯುತ್ ಕೊರತೆ ಬಲವಾದ ಪೆಟ್ಟನ್ನೇ ನೀಡಿದೆ. ಕಳೆದ ಬಾರಿ ಅತಿ ಹೆಚ್ಚು ಮಳೆಯಾಗಿಯೂ ಅಂತಹ ಅಭಾವ
ಎದುರಾಗಿದ್ದರೆ, ಈ ಬಾರಿಯ ಬರದ ಸ್ಥಿತಿಯಲ್ಲಿ ವಿದ್ಯುತ್ ಕೊರತೆ
ಆರ್ಥಿಕತೆಗೆ ನೀಡಬಹುದಾದ ಏಟಿನ ಬಿಸಿಯ ಅರಿವಾಗದೇ ಇರದು. 2007-08ರ
ಆರ್ಥಿಕ ಸಮೀಕ್ಷಾ ವರದಿ ಪ್ರಕಾರ, ವಿದ್ಯುತ್ ಕೊರತೆಯ ಕಾರಣದಿಂದಾಗಿ ಕರ್ನಾಟಕ ಶೇ.7ರಷ್ಟು
ಅಭಿವೃದ್ಧಿ ದಾಖಲಿಸಿ, ಒಟ್ಟು ರಾಷ್ಟ್ರೀಯ ಪ್ರಗತಿ ದರ (ಶೇ.8.7)ಕ್ಕಿಂತ
ಹಿಂದೆ ಬಿದ್ದಿದೆ.
ಕರ್ನಾಟಕದಲ್ಲಿ ಉಷ್ಣ ಘಟಕ, ಗಾಳಿಯಂತ್ರ, ಸಣ್ಣ ಜಲವಿದ್ಯುತ್ ಕೇಂದ್ರಗಳು ಮತ್ತು ಬೃಹತ್
ಜಲವಿದ್ಯುತ್ ಕೇಂದ್ರಗಳಿಂದ ಉತ್ಪಾದನೆಯಾಗುವ ಒಟ್ಟಾರೆ ವಿದ್ಯುತ್ ಸಾಮರ್ಥ್ಯ 7,784
ಮೆಗಾ ವ್ಯಾಟ್. ಆದರೆ ಸದ್ಯಕ್ಕೆ ಉತ್ಪಾದನೆಯಾಗುತ್ತಿರುವುದು 7,048
ಮೆಗಾ ವ್ಯಾಟ್. ಜಲವಿದ್ಯುತ್ ಕೇಂದ್ರಗಳಿಂದ ಒಟ್ಟು 3509.52ರಷ್ಟು
ವಿದ್ಯುತ್ ಉತ್ಪಾದನೆಯಾಗುತ್ತದೆ. ಕರ್ನಾಟಕದಲ್ಲಿ ಈಗ ಸುಮಾರು 1,180
ಮೆಗಾ ವ್ಯಾಟ್ ಸಾಮರ್ಥ್ಯದ ಪವನಶಕ್ತಿ ವ್ಯವಸ್ಥೆ ಇದೆ. 650
ಮೆಗಾ ವ್ಯಾಟ್ ಸಾಮರ್ಥ್ಯದ ಸಣ್ಣ ಜಲವಿದ್ಯುತ್ ಯೋಜನೆ ಇದೆ. ರಾಜ್ಯದಲ್ಲಿ ಈ ಬಾರಿ ಸುಮಾರು 700
ಮೆಗಾವ್ಯಾಟ್‌ಗಳಷ್ಟು ವಿದ್ಯುತ್ ಕೊರತೆಯಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ
ಸಚಿವೆ ಶೋಭಾ ಕರಂದ್ಲಾಜೆಯವರು ಅಧಿಕೃತವಾಗಿ ಹೇಳಿದ್ದಾರೆ! ಹಾಗಿದ್ದಲ್ಲಿ ಈ ಕೊರತೆಗೆ ಕಾರಣವೇನು? ಮೊದಲನೆಯದಾಗಿ ಕಣ್ಣಿಗೆ ರಾಚುವಂತೆ ಕಂಡು
ಬರುತ್ತಿರುವುದು ಬಳಕೆಯಲ್ಲಿನ ವ್ಯತ್ಯಯ.
ವಿದ್ಯುತ್ ಸರಬರಾಜು ಮತ್ತು ವಿತರಣೆಯಲ್ಲಿನ ದೋಷಗಳು ಮತ್ತು
ಕಳ್ಳತನದಿಂದಾಗಿ
1,300- 1400
ಮೆಗಾ ವ್ಯಾಟ್ ವಿದ್ಯುತ್ ಸೋರಿಕೆಯಾಗುತ್ತಿದೆ. ಹಾಗಾಗಿ ರಾಜ್ಯ ವಾರ್ಷಿಕ 2,500
ಕೋಟಿ ರೂಪಾಯಿಗಳನ್ನು ಕೊರತೆ ಬೀಳುವ ವಿದ್ಯುತ್ ಖರೀದಿಗಾಗಿ ವ್ಯಯಿಸುತ್ತಿದೆ. ಇವು ಪ್ರತಿವರ್ಷವೂ ಎದುರಾಗುತ್ತಿರುವ ಸಮಸ್ಯೆಗಳು. ಆದರೂ ಸೂಕ್ತ ಕ್ರಮ ಕೈಗೊಂಡ ಉದಾಹರಣೆಗಳೇನೂ ಇಲ್ಲ. ಈ ಬಾರಿ ರಾಜ್ಯಪಾಲರ ಆಡಳಿತಾವಧಿಯಲ್ಲಿ
ಕಲ್ಲಿದ್ದಲು ಬೇಡಿಕೆ ಪೂರೈಸಲು ಸಾಧ್ಯವಾಗದೆ ಪ್ರತಿದಿನ ಶರಾವತಿಯಿಂದ 42
ದಶಲಕ್ಷ ಯುನಿಟ್ ವಿದ್ಯುತ್ ಉತ್ಪಾದಿಸಲಾಯಿತು. ಸಾಮಾನ್ಯವಾಗಿ ಮಳೆಗಾಲ ಮುಗಿದ ಬಳಿಕ ರಾಯಚೂರು
ಉಷ್ಣ ವಿದ್ಯುತ್ ಕೇಂದ್ರವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲಾಗುತ್ತದೆ. ಪ್ರಸ್ತುತ ರಾಯಚೂರು ಘಟಕದ ಒಟ್ಟು ಸಾಮರ್ಥ್ಯದ ಶೇ. 60ರಷ್ಟು
ವಿದ್ಯುತ್ ಮಾತ್ರ ಉತ್ಪಾದಿಸಲಾಗುತ್ತದೆ. ಉತ್ತಮ ಗುಣಮಟ್ಟದ ಕಲ್ಲಿದ್ದಲು ಸಿಗದೆ ಇರುವುದು
ಅಥವಾ ಕಲ್ಲಿದ್ದಲು ಖರೀದಿಗೆ ಬಂಡವಾಳ ಸಮಸ್ಯೆ ಇರುವುದರಿಂದ ಬೇಸಗೆಯ
ವಿದ್ಯುತ್ ಕೊರತೆಯನ್ನು ಪೂರೈಸಬೇಕಾಗಿದ್ದ ರಾಯಚೂರು ಉಷ್ಣ ವಿದ್ಯುತ್
ಕೇಂದ್ರವೂ ಬರಿದಾಗುತ್ತಾ ಬಂದಿದೆ. ಇಲ್ಲಿನ ಒಟ್ಟು ಏಳು ಘಟಕಗಳಿಂದ 1470
ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. ಆದರೆ ಜುಲೈನಲ್ಲಿ ಘಟಕಗಳ ವಾರ್ಷಿಕ ನಿರ್ವಹಣಾ
ಕಾರ್ಯ ಆರಂಭವಾಗುವುದರಿಂದ ಉತ್ಪಾದನೆ ಸ್ಥಗಿತಗೊಳ್ಳುತ್ತದೆ. ಈಗಾಗಲೇ ಏಳು ಘಟಕಗಳಲ್ಲಿ ಒಂದು ಘಟಕದ ನಿರ್ವಹಣಾ
ಕಾರ್ಯ ಆರಂಭವಾಗಿದೆ.
ಇನ್ನೂ ರಾಜ್ಯದಲ್ಲಿ ಮುಂಗಾರು ಮಳೆ ಬಾರದೆ ಇರುವುದರಿಂದ ಜಲ ವಿದ್ಯುತ್
ಕೇಂದ್ರಗಳಿಂದ ವಿದ್ಯುತ್ ಉತ್ಪಾದನೆ ನಿರೀಕ್ಷೆಯೂ ಸಾಧ್ಯವಿಲ್ಲ. ಲಿಂಗನಮಕ್ಕಿ, ಸೂಪಾ ಮತ್ತು ವಾರಾಹಿ ಅಣೆಕಟ್ಟುಗಳು ತಳಕಂಡಿವೆ. ಲಿಂಗನಮಕ್ಕಿಯಲ್ಲಿ ಕಳೆದ ವರ್ಷ ಈ ಅವಧಿಯಲ್ಲಿ 61,452
ಕ್ಯೂಸೆಕ್ ನೀರಿದ್ದರೆ ಈ ಬಾರಿ 9,515
ಕ್ಯೂಸೆಕ್‌ಗಳಷ್ಟೆ ಇದೆ. ರಾಜ್ಯದ ಮತ್ತೊಂದು ಪ್ರಮುಖ ಜಲ ವಿದ್ಯುತ್ ಕೇಂದ್ರ
ಸೂಪಾದಲ್ಲಿ 38,600
ಕ್ಯೂಸೆಕ್‌ಗಳಷ್ಟು ನೀರಿದ್ದರೆ, ಈ ಬಾರಿ 4,414
ಕ್ಯೂಸೆಕ್‌ಗಳಷ್ಟು ನೀರಿದೆ. ಹಾಗೆಯೇ ವಾರಾಹಿಯಲ್ಲಿ 8,563
ಕ್ಯೂಸೆಕ್‌ಗಳಿದ್ದರೆ ಈ ಬಾರಿ 1,258
ಕ್ಯೂಸೆಕ್‌ಗಳಷ್ಟಿದೆ. ಈಗ ಶರಾವತಿ ಜಲಾಶಯದಲ್ಲಿ ಪ್ರತಿ ದಿನ 22 ದಶಲಕ್ಷ
ಯುನಿಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಇನ್ನು 887 ದಶಲಕ್ಷ
ಯುನಿಟ್ ವಿದ್ಯುತ್ ಉತ್ಪಾದಿಸುವಷ್ಟು ನೀರಿನ ಸಂಗ್ರಹ ಮಾತ್ರ ಉಳಿದಿದೆ. ಆದರೆ ಕಳೆದ ವರ್ಷ ಇದೇ ಅವಧಿಯಲ್ಲಿ 2,844
ದಶಲಕ್ಷ ಯುನಿಟ್ ಉತ್ಪಾದಿಸುವಷ್ಟು ನೀರಿನ ಸಂಗ್ರಹವಿತ್ತು. ಸೂಪಾದಲ್ಲಿ ಈಗ 518 ದಶಲಕ್ಷ
ಯುನಿಟ್ ನೀಡುವಷ್ಟು ವಿದ್ಯುತ್ ಸಂಗ್ರಹವಿದ್ದರೆ, ಕಳೆದ ವರ್ಷ ಈ ಅವಧಿಯಲ್ಲಿ 1,432
ದಶಲಕ್ಷ ಯುನಿಟ್ ಉತ್ಪಾದಿಸುವ ಸಾಮರ್ಥ್ಯವಿತ್ತು.
"ಪ್ರಸ್ತುತ ಪ್ರತಿನಿತ್ಯ 118 ದಶಲಕ್ಷ
ಯುನಿಟ್‌ಗಳಷ್ಟು ವಿದ್ಯುತ್ ಅಗತ್ಯವಿದೆ. ಆದರೆ ಪೂರೈಕೆ 117 ದಶಲಕ್ಷ
ಯುನಿಟ್‌ಗಳಷ್ಟೆ. ಶೇ. 50ರಷ್ಟು
ವಿದ್ಯುತ್ ಜಲ ಕೇಂದ್ರಗಳಿಂದಲೇ ಬರುವುದರಿಂದ ಮಳೆ ಕೈಕೊಟ್ಟರೆ ಪರಿಸ್ಥಿತಿ
ಚಿಂತಾಜನಕವಾಗಿಬಿಡುತ್ತದೆ. ಈ ನಿಟ್ಟಿನಲ್ಲಿ ಮೋಡ ಬಿತ್ತನೆ ಕಾರ್ಯ ಆರಂಭಿಸುವ
ಬಗ್ಗೆ ಮಾತುಕತೆ ನಡೆದಿದೆ. ಆದರೆ
2003ರಲ್ಲಿ ನಡೆದ ಇಂತಹುದೇ ಪ್ರಯತ್ನ ಯಾವುದೇ ಫಲ
ಕೊಟ್ಟಿರಲಿಲ್ಲ. ನೈರುತ್ಯ ಮುಂಗಾರು ಸಾಕಷ್ಟು ಮೋಡಗಳನ್ನು ಸೃಷ್ಟಿಸದೆ
ಇರುವುದರಿಂದ ಇದು ಹಣ ಪೋಲು ಮಾಡುವ ಯೋಜನೆಯಾಗುವ ಸಾಧ್ಯತೆಯೇ ಹೆಚ್ಚು" ಎನ್ನುತ್ತಾರೆ ಕೆಪಿಟಿಸಿಎಲ್ ಅಧಿಕಾರಿಗಳು.
ಇನ್ನು ಖಾಸಗಿ ವಲಯದಿಂದ
1,049
ಮೆಗಾವ್ಯಾಟ್‌ಗಳಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿದೆ. ಆದರೆ ಇದಕ್ಕೆ ದುಬಾರಿ ಬೆಲೆ ತೆರಬೇಕಾಗಿದೆ. ಈಗಾಗಲೇ ರಾಜ್ಯ ಸರ್ಕಾರ ಪ್ರತಿ ಯುನಿಟ್‌ಗೆ ರೂ. 16ರಂತೆ
ಪಾವತಿಸುತ್ತಿದ್ದ ತಣ್ಣೀರುಬಾವಿ ಕಂಪನಿಯ ಜೊತೆಗಿನ ಒಪ್ಪಂದವನ್ನು
ನವೀಕರಿಸಲು ನಿರಾಕರಿಸಿದೆ. ಸುಮಾರು 700 ಕೋಟಿ
ವೆಚ್ಚದಲ್ಲಿ ಆರಂಭಿಸಲಾಗಿದ್ದ ತಣ್ಣೀರುಬಾವಿ ಬಾರ್ಜ್ ಮೌಂಟೆಡ್ ವಿದ್ಯುತ್
ಕೇಂದ್ರದ ಜೊತೆಗಿನ ಏಳು ವರ್ಷಗಳ ಒಪ್ಪಂದ ಕಳೆದ ತಿಂಗಳು ಕೊನೆಗೊಂಡಿತ್ತು. ಹೀಗಾಗಿ ಈ ಕೇಂದ್ರ ಆಂಧ್ರಪ್ರದೇಶದ ಕಾಕಿನಾಡಕ್ಕೆ
ಸ್ಥಳಾಂತರಗೊಳ್ಳುತ್ತಿದೆ. ತಣ್ಣೀರುಬಾವಿ ಕಂಪನಿಗೆ ಮೆಸ್ಕಾಮ್ ಸುಮಾರು 5
ಕೋಟಿ ಮತ್ತು ಬೆಸ್ಕಾಮ್ ಸುಮಾರು
20 ಕೋಟಿ ತೆರುತ್ತಿತ್ತು. ಈ ಒಪ್ಪಂದ ನವೀಕರಿಸದಿರುವುದರಿಂದ ರಾಜ್ಯ ಸುಮಾರು 230
ಮೆಗಾವ್ಯಾಟ್ ವಿದ್ಯುತ್ ಕೊರತೆಗೆ ಅನ್ಯಮೂಲವನ್ನು ಹುಡುಕಬೇಕಿದೆ.
ಕೊನೆಗೂ ಕೇಂದ್ರದಿಂದ ಹೆಚ್ಚುವರಿ ವಿದ್ಯುತ್ ಒದಗಿಸಬೇಕು ಎಂದು ಬೇಡಿಕೆ
ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. 2000ದಲ್ಲಿ
ಭಾರತದ ಆರನೇ ಅಣು ವಿದ್ಯುತ್ ಕೇಂದ್ರವಾಗಿ ಕಾರ್ಯಾರಂಭವಾದ ಕೈಗಾ ಅಣು
ಸ್ಥಾವರದಲ್ಲಿ ಸುಮಾರು ತಲಾ 220
ಮೆಗಾವಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಮೂರು ಘಟಕಗಳಿವೆ. ಮತ್ತೊಂದು ಘಟಕ (220ಮೆ.ವಾ) ನಿರ್ಮಾಣ ಹಂತದಲ್ಲಿದೆ. ಕೈಗಾ ಘಟಕಗಳು ಒಟ್ಟಾಗಿ ಕಳೆದ ಐದು ವರ್ಷಗಳಿಂದ
ವರ್ಷಂಪ್ರತಿ 2,712
ಗಿಗಾ ವ್ಯಾಟ್‌ಗಳಷ್ಟು ವಿದ್ಯುತ್ ಉತ್ಪಾದಿಸುತ್ತಿವೆ. ದಕ್ಷಿಣದ ಆರು ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಮತ್ತು ಪಾಂಡಿಚೇರಿಗಳು ಈ ವಿದ್ಯುತ್‌ನ್ನು
ಹಂಚಿಕೊಳ್ಳುತ್ತಿವೆ. ಆದರೆ ಇತರ ರಾಜ್ಯಗಳಿಗೆ ಹೋಲಿಸಿದರೆ ಕೇಂದ್ರದಿಂದ
ರಾಜ್ಯಕ್ಕೆ ಸಿಗುತ್ತಿರುವ ವಿದ್ಯುತ್ ಪ್ರಮಾಣ ಕಡಿಮೆಯೇ. ಆಂಧ್ರಪ್ರದೇಶ ಮತ್ತು ತಮಿಳು ನಾಡುಗಳು ಶೇ. 35ರಷ್ಟು
ಪಾಲು ಪಡೆದರೆ ರಾಜ್ಯಕ್ಕೆ ಶೇ. 15ರಷ್ಟು
ಮಾತ್ರ ನೀಡಲಾಗುತ್ತಿದೆ.
ಇದು ಒಂದೆಡೆಯಾದರೆ, ಮತಬ್ಯಾಂಕ್ ಮೇಲೆ ಕಣ್ಣಿಟ್ಟು ಅನುಚಿತ ಆಶ್ವಾಸನೆಗಳನ್ನು
ನೀಡಿರುವ ರಾಜ್ಯ ಸರ್ಕಾರ ಮತ್ತೊಂದೆಡೆ! ಬಿಜೆಪಿ, ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ 10
ಅಶ್ವಶಕ್ತಿಯವರೆಗಿನ ಎಲ್ಲಾ ಸುಮಾರು 16 ಲಕ್ಷ ಕೃಷಿ
ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಪೂರೈಸುವುದಾಗಿ ಹೇಳಿತ್ತು. ಆದರೆ ಕೊರತೆ ಹಿನ್ನೆಲೆಯಲ್ಲಿ ಸದ್ಯಕ್ಕೆ
ರೈತರಿಗೆ ಉಚಿತ ವಿದ್ಯುತ್ ಪೂರೈಕೆ ಮಾಡುವುದು ಅನುಮಾನವೇ. ಬಜೆಟ್‌ನಲ್ಲಿ ಸರ್ಕಾರದ ತೀರ್ಮಾನ ತಿಳಿಯಲಿದೆ. ಬೇಡಿಕೆಯನ್ನು ಪೂರೈಸಲೇ ವಿದ್ಯುತ್ ಇಲ್ಲದಿರುವ
ಪರಿಸ್ಥಿತಿಯಲ್ಲಿ ರಾಜ್ಯಸರ್ಕಾರ ಇಂತಹುದೊಂದು ನಿರ್ಣಯವನ್ನು ಕಾರ್ಯರೂಪಕ್ಕೆ
ತರುವುದು ಸಾಧ್ಯವಿಲ್ಲ. ಆದರೆ ಇಂಧನ ಸಚಿವ ಈಶ್ವರಪ್ಪ ಈ ಆಶ್ವಾಸನೆ ಪೂರೈಸುವ
ಆಶಾವಾದ ವ್ಯಕ್ತಪಡಿಸಿದ್ದಾರೆ! "ಬಳ್ಳಾರಿ
ಉಷ್ಣ ವಿದ್ಯುತ್ ಘಟಕ ಈಗಾಗಲೇ ಕಾರ್ಯಾರಂಭ ಮಾಡಲು ಸಿದ್ಧವಾಗಿರುವುದರಿಂದ
ಆಶ್ವಾಸನೆ ಈಡೇರಿಸಲು ಪ್ರಯತ್ನಿಸಲಾಗುವುದು." 5,000
ಮೆಗಾವ್ಯಾಟ್ ಹೆಚ್ಚುವರಿ ವಿದ್ಯುತ್ ಉತ್ಪಾದನೆ ಕುರಿತ ಬಿಜೆಪಿಯ
ಆಶ್ವಾಸನೆಯಲ್ಲಿ ಸುಮಾರು 1,000
ಮೆಗಾವ್ಯಾಟ್ ಉತ್ಪಾದನೆಯನ್ನು ರಾಜ್ಯ ಈ ವರ್ಷವೇ ಪೂರೈಸಲಿದೆ ಎನ್ನುವುದು
ಅವರ ಭರವಸೆ. ಶೀಘ್ರವೇ ಆರಂಭವಾಗಲಿರುವ ಬಳ್ಳಾರಿ ಉಷ್ಣ ವಿದ್ಯುತ್
ಘಟಕದಿಂದ 500
ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ, ನವೆಂಬರ್- ಡಿಸೆಂಬರ್‌ನಲ್ಲಿ ಕಾರ್ಯಾರಂಭವಾಗಲಿರುವ ವರಾಹಿ
ಜಲವಿದ್ಯುತ್ ಕೇಂದ್ರದಿಂದ 230
ಮೆಗಾವ್ಯಾಟ್ ಮತ್ತು ಇತರ ಪರ್ಯಾಯ ಹಾದಿಗಳಿಂದ 250
ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಯೋಜನೆಯನ್ನು ಸರ್ಕಾರ ಹಾಕಿಕೊಂಡಿದೆ.
"ಇದೇ ಡಿಸೆಂಬರ್‌ನಲ್ಲಿ ಬಳ್ಳಾರಿ ಉಷ್ಣ
ವಿದ್ಯುತ್ ಕೇಂದ್ರದಲ್ಲಿ 500
ಮೆಗಾವ್ಯಾಟ್‌ಗಳ ಎರಡನೇ ಘಟಕದ ನಿರ್ಮಾಣ ಕಾರ್ಯ ಆರಂಭಿಸಲಾಗುವುದು. ಎರಡು ವರ್ಷಗಳೊಳಗೆ ಈ ಘಟಕ ಕಾರ್ಯಾರಂಭಿಸಲಿದೆ. ಜೊತೆಯಲ್ಲಿ ಪರ್ಯಾಯ ವಿದ್ಯುತ್ ಉತ್ಪಾದನಾ
ಹಾದಿಗಳನ್ನು ಹುಡುಕಲಾಗುವುದು" ಎಂದು ಈಶ್ವರಪ್ಪ ಹೇಳಿದ್ದಾರೆ. ಮೋದಿ ಮಾದರಿ ಆಡಳಿತದ ಭರವಸೆ ನೀಡಿರುವ
ಮುಖ್ಯಮಂತ್ರಿ ಯುಡಿಯೂರಪ್ಪ ಅವರು ಮೋದಿ ಮಾದರಿಯಲ್ಲಿ ವಿದ್ಯುತ್
ಸ್ವಾವಲಂಬನೆ ತಂತ್ರಗಳನ್ನೂ ಅಳವಡಿಸಿಕೊಳ್ಳುವ ಬಗ್ಗೆ ಯೋಚಿಸಬಾರದೇಕೆ? ಜಲ ಸಂಪನ್ಮೂಲಗಳಿಂದ ಸಮೃದ್ಧವಾಗಿರುವ
ಕರ್ನಾಟಕದಲ್ಲಿ ಮಳೆಗಾಲದಲ್ಲಿ ಪರಿಸರಸ್ನೇಹಿ ಸಣ್ಣ ಪ್ರಮಾಣದ ವಿದ್ಯುತ್
ಘಟಕಗಳನ್ನು ಆರಂಭಿಸುವ ಯೋಜನೆ ಪರಿಣಾಮಕಾರಿ ಬದಲಾವಣೆ ತರಬಲ್ಲುದು. ಜಲ ಸಂಪನ್ಮೂಲಗಳಿಲ್ಲದ ಗುಜರಾತ್‌ನಲ್ಲಿ
ಪವನಶಕ್ತಿಯಿಂದಲೇ ವಿದ್ಯುತ್ ಸ್ವಾವಲಂಬನೆ ಸಾಧಿಸಲಾಗಿದೆ. ಅಂತಹುದೇ ಯೋಜನೆ ಕರ್ನಾಟಕದಲ್ಲೂ ಆರಂಭಿಸಿದಲ್ಲಿ
ವಿದ್ಯುತ್ ಕೊರತೆ ಪ್ರಶ್ನೆಯೇ ಉದ್ಭವಿಸದು.
ಅಣು ವಿದ್ಯುತ್ ಯೋಜನೆಗಳಿಂದ ಪರಿಸರಕ್ಕೆ ಹಾನಿ. ಹಾಗೇ ಕರ್ನಾಟಕದಲ್ಲಿ ಮೈಸೂರು ಜಿಲ್ಲೆಯ
ಚಾಮಲಾಪುರ, ಉಡುಪಿಯ ನಂದಿಕೂರ್ ಮತ್ತು ಉತ್ತರ ಕನ್ನಡದ ತದಡಿಯಲ್ಲಿ
ಉಷ್ಣ ವಿದ್ಯುತ್ ಕೇಂದ್ರಗಳನ್ನು ನಿರ್ಮಿಸುವ ಯೋಜನೆಗಳಿಗೆ ಪರಿಸರವಾದಿಗಳಿಂದ
ತೀವ್ರ ವಿರೋಧ ವ್ಯಕ್ತವಾಗಿದೆ. ಹಾಗೆ ನೋಡಿದರೆ ಕಲ್ಲಿದ್ದಲು ಬಳಸುವ ಉಷ್ಣ
ಕೇಂದ್ರಗಳು ದುಬಾರಿ ವಿದ್ಯುತ್ ಯೋಜನೆಗಳು. ಕಲ್ಲಿದ್ದಲು ಸಾಗಾಣಿಕೆ ವೆಚ್ಚ, ಆಮದು ವೆಚ್ಚ ಎಲ್ಲವೂ ವಿದ್ಯುತ್ ದರದ ಮೇಲೆ
ಬೀಳುವ ಹೊರೆಯೇ. ಇದಕ್ಕೆ ಪೂರಕವಾಗಿ ನೆನೆಗುದಿಗೆ ಬಿದ್ದಿರುವ ಪರ್ಯಾಯ
ವ್ಯವಸ್ಥೆಗಳು ಮತ್ತು ಯೋಜನೆ, ಸುಧಾರಣೆಗಳನ್ನೂ ಶೀಘ್ರವೇ ಕಾರ್ಯರೂಪಕ್ಕೆ
ತರಬೇಕಿದೆ. ಈಗಾಗಲೇ ಇರುವ ಸಾಂಪ್ರದಾಯಿಕ ವಿದ್ಯುತ್ ಉತ್ಪಾದನೆ ಘಟಕಗಳ
ಆಧುನೀಕರಣ, ಸರಬರಾಜು ಮತ್ತು ವಿತರಣೆ ವ್ಯವಸ್ಥೆಯಲ್ಲಿನ ದೋಷಗಳನ್ನು
ಸರಿಪಡಿಸಬೇಕಿದೆ. ಜೊತೆಗೆ ಕಿರು ವಿದ್ಯುತ್ ಯೋಜನೆ, ಪವನ ಶಕ್ತಿ ವಿದ್ಯುತ್ ಘಟಕಗಳಿಗೆ ಪ್ರೋತ್ಸಾಹ, ಸೌರಶಕ್ತಿ ಬಳಕೆಗೆ ಉತ್ತೇಜನ ನೀಡುವತ್ತ ಸರ್ಕಾರ
ಗಂಭೀರ ಪ್ರಯತ್ನ ಮಾಡಬೇಕಿದೆ. ಇಲ್ಲವಾದಲ್ಲಿ ಕರ್ನಾಟಕ ಇನ್ನೂ ಕತ್ತಲೆಯ
ರಾತ್ರಿಗಳನ್ನು ಕಳೆಯಬೇಕಾಗುತ್ತದೆ. ಅಂತಹ ಕತ್ತಲ ರಾತ್ರಿಗಳು ಏರಿದಂತೆಲ್ಲಾ ಒಟ್ಟಾರೆ
ಪ್ರಗತಿಯಲ್ಲಿ ರಾಜ್ಯದ ಹೆಜ್ಜೆಗಳು ಹಿಂದೆ ಬೀಳದೇ ಇರಲಾರವು.
ಟಿಎಸ್‌ಐ
|