|

'ಜಾಲ'
ನಾರಾಯಣ ಮಾಳ್ಕೋಡ್ ಅವರ ಚೊಚ್ಚಲ ಕಾದಂಬರಿ. ಚೊಚ್ಚಲ ಕೃತಿಯಲ್ಲಿ
ಸಾಮಾನ್ಯವಾಗಿ ಕಂಡುಬರುವ ಲೋಪದೋಷಗಳಿಗೆ ಹೊರತಲ್ಲದ ಮಾಳ್ಕೋಡ್ ಅವರ ಈ
ಕಾದಂಬರಿ ಮುಖ್ಯವಾಗಿ ನಮ್ಮ ಗಮನ ಸೆಳೆಯುವುದು ಅದು ಹಿಡಿದಿರುವ ವಿಭಿನ್ನ
ಜಾಡಿನಿಂದಾಗಿ. ಕಾಫ್ಕಾನ ದುಃಸ್ವಪ್ನ ಪ್ರಪಂಚವನ್ನು ನೆನಪಿಗೆ ತರುವ
'ಜಾಲ' ಸಾಂಪ್ರದಾಯಿಕ
ಕಾದಂಬರಿಯ ಪರಿಕಲ್ಪನೆಯಲ್ಲಿ ಅಚ್ಚು ಹೊಯ್ದ ಕೃತಿಯಲ್ಲ. ಕಥಾ ಸಂವಿಧಾನವಿಲ್ಲ,
ನಾಯಕನಿಲ್ಲ, ಗುರಿ- ಗಮ್ಯತೆಗಳೂ ಸ್ಪಷ್ಟವಿಲ್ಲ. ಸಾಂಕೇತಿಕ ರೂಪಾರ್ಥಗಳಲ್ಲಿ,
ಅನ್ಯೋಕ್ತಿ ಮಾರ್ಗದಲ್ಲಿ ಕೇಡಿನಿಂದಾವೃತವಾದ ವ್ಯವಸ್ಥೆಯೊಂದನ್ನು ಬಯಲು
ಮಾಡುವ ಪ್ರಯತ್ನ ಇಲ್ಲಿದೆ.
ಹೊಸಪಟ್ಟಣ ಎಂಬ ಊರು ಈ ಕಾದಂಬರಿಯ ಕೇಂದ್ರ. ಈ
ಊರಿನ ಆಗು- ಹೋಗುಗಳೇ ಕಾದಂಬರಿಯ ಒಡಲು. ಹೊಸಪಟ್ಟಣ ಪಂಚಾಯತಿಗೊಬ್ಬ
ಅಧ್ಯಕ್ಷನಿದ್ದಾನೆ, ಇಲ್ಲಿ ನ್ಯಾಯಕೊಡುವ ನ್ಯಾಯಧೀಶನಿದ್ದಾನೆ, ರಕ್ಷಣೆ
ಕೊಡುವ ಪೊಲೀಸರಿದ್ದಾರೆ, ಆರೋಗ್ಯ ನೋಡಿಕೊಳ್ಳುವ ವೈದ್ಯನಿದ್ದಾನೆ,
ಆಧ್ಯಾತ್ಮಿಕಕ್ಕೆ ಮೊಖ್ತೇಸರನಿದ್ದಾನೆ ಮತ್ತು ಸವಿತಾ ಸಮಾಜದ
ಸುಬ್ಬಯ್ಯನಿದ್ದಾನೆ. ಹೀಗೆ ಹೊಸಪಟ್ಟಣಕ್ಕೊಂದು ವ್ಯವಸ್ಥೆ ಇದೆ. ಇವರೆಲ್ಲ
ಸಮಾಜದ ಆರೋಗ್ಯಪಾಲಕರಾಗಬೇಕಾದವರು, ದುಷ್ಟಕೂಟವಾಗಲೂಬಹುದು. ಇಂಥ ಸಾಮಾಜಿಕ
ಬಿಕ್ಕಟ್ಟಿನ ಒಂದು ಛಿದ್ರ ಬಿಂಬದೊಡನೆ ಕಾದಂಬರಿ ಶುರುವಾಗುತ್ತದೆ.
ಶುರುವಿಗೇ ವೆಂಕಪ್ಪ ಭಂಡಾರಿ ಎಂಬ
ಶಹನಾಯಿವಾದಕನ ಕೊಲೆ. ಹೊಸಪಟ್ಟಣ ಪಂಚಾಯತಿ ಅಧ್ಯಕ್ಷ ವಿಕಾಸ್‌ಗೌಡ ಎಂಬುವನು
ಗುಂಡುಹಾರಿಸುವುದರಿಂದ ಭಂಡಾರಿಯ ಕೊಲೆಯಾಗುತ್ತದೆ. 'ಸಮುದ್ರದ
ನೀರು ಹೆಚ್ಚುತ್ತಿದೆ ನನ್ನ ಕಣ್ಣೀರಿನಿಂದ'-
ಜನರ ಅಳಲಿನ ಇಂಗಿತದ ಈ ನುಡಿಗಳನ್ನಾಡುವ ಭಂಡಾರಿ ಶಹನಾಯ್‌ನಲ್ಲಿ ಬಂಡಾಯ
ಗೀತೆಗಳನ್ನು ನುಡಿಸಿದ್ದಿದೆ. ವಿಕಾಸ್‌ಗೌಡನ ಹೆಂಡತಿ ಸೀತಾ ಇವನಿಗೋ ಇವನ
ಶಹನಾಯ್‌ಗೋ ಅನುರಕ್ತಳಾದದ್ದಿದೆ. ವಿಕಾಸ್‌ಗೌಡ ಗುಂಡು ಹಾರಿಸಲು ಇದೇ ಕಾರಣ
ಎಂಬ ಗುಮಾನಿಯೂ ಇದೆ. ಹೀಗೇ ಕೊಲೆಯೊಂದರಿಂದ ಶುರುವಾಗಿ ನಾಣಿಭಟ್ ಎಂಬುವನ
ಲಾಕಪ್ ಸಾವಿನೊಂದಿಗೆ, ಒಂದಷ್ಟು ಜನ ನಕ್ಸಲೀಯರನ್ನು ಕೂಡಿಕೊಳ್ಳಲು ಕಾಡಿಗೆ
ಹೋಗುವುದರೊಂದಿಗೆ, ಹೊಸಪಟ್ಟಣಕ್ಕೆ ಸಂತನೊಬ್ಬನ ಅಗತ್ಯವನ್ನು
ಮನಗಾಣುವುದರೊಂದಿಗೆ, ಸಂಭವನೀಯ ಪರಿಹಾರ ಪ್ರಯತ್ನಗಳಲ್ಲಿ ಕಾದಂಬರಿ
ಮುಕ್ತಾಯಗೊಳ್ಳುತ್ತದೆ. ಈ ಎರಡು ಅಸಹಜ ಸಾವುಗಳ ನಡುವೆ ಮತ್ತಷ್ಟು ಕೊಲೆಗಳ
ವ್ಯಾಖ್ಯಾನ, ಅಪಪ್ರಚಾರದ ಭಿತ್ತಿಪತ್ರಗಳು, ಅನೈತಿಕ ಸಂಬಂಧಗಳು, ವಿದ್ರೋಹಗಳು,
ಮುತ್ತುವ ಸೊಳ್ಳೆಗಳು, ಇಲಿ ಬೋನು, ಇಲಿಪಾಷಣ ನಿರಂತರ ಒಬ್ಬರಲ್ಲ ಒಬ್ಬರಿಗೆ
ಕಾಡುವ ಹಲ್ಲುನೋವು- ಹೀಗೆ ಸಾಂಕೇತಿಕ ವಿವರಗಳಲ್ಲಿ ಸಾಮಾಜಿಕ ವ್ಯವಸ್ಥೆ,
ಪ್ರಜಾಸತ್ತಾತ್ಮಕ ವ್ಯವಸ್ಥೆ ಹದಗೆಡುತ್ತಿರುವುದು, ಗತಿಗೆಡುತ್ತಿರುವುದು
ಛಿದ್ರ- ಛಿದ್ರ ಬಿಂಬಗಳಲ್ಲಿ ನಮಗೆ ಎದುರಾಗುತ್ತವೆ.
ವಿಕಾಸ್‌ಗೌಡನ ನಂತರ ಹೊಸಪಟ್ಟಣ ಪಂಚಾಯ್ತಿಯ
ಸ್ವಯಂಘೋಷಿತ ಅಧ್ಯಕ್ಷನಾಗುವ ದಾಸಪ್ಪ, ಪಿಸ್ತೂಲಿನ ಮೇಲೆ ಕೈಯಿಟ್ಟೇ ಪೋಸ್ಟರ್
ಪಿಡುಗು ಕೊನೆಗಾಣಿಸುವ ನೈತಿಕ ಹೊಣೆಯನ್ನು ನಿರ್ವಹಿಸುತ್ತಲೇ ಸರ್ಕಸ್
ಹುಡುಗಿಯನ್ನು ರಾತ್ರಿ ಹಾಸಿಗೆಗೆ ಕರೆಸಿಕೊಳ್ಳಬಲ್ಲ. ನ್ಯಾಯಾಧೀಶನೋ ಸದಾ
ಜೂಜಿನ ಮನೆಯಲ್ಲೇ ಇರುವವನು. ಅಪಪ್ರಚಾರಕ್ಕೆ ಹೆದರಿ ಊರು ಬಿಡುವ
ಮರ್ಯಾದಸ್ಥರಂತೆ, ನೈತಿಕತೆ ಸೋಗಿನಲ್ಲೇ ಅನೈತಿಕತೆ ಮೆರೆಯುವ ಸಾಪ್‌ಸೀದಾ
ಜನರೂ ಇದ್ದಾರೆ, ಲಾಭವಿಲ್ಲದೆ ಗರ್ಭಪಾತ ಮಾಡಲೊಪ್ಪದ ವೈದ್ಯನೂ ಇದ್ದಾನೆ. ಈ
ಹತ್ತೂ ಸಮಸ್ತರಿಗೆ ಹೆಸರುಗಳಿದ್ದರೂ, ಸಂಬಂಧಗಳು ಸ್ಪಷ್ಟವಿಲ್ಲ. ರಾಜಕೀಯ
ಚರ್ಚೆ ನಿಷೇಧ ಎನ್ನುವ ಫಲಕ ಹೊತ್ತ ಸವಿತಾ ಸಮಾಜದ ಸುಬ್ಬಯ್ಯನ ಅಂಗಡಿಯೂ ಒಂದು
ಬಿತ್ತನೆ ಕೇಂದ್ರ. ಹೊಸಪಟ್ಟಣದಲ್ಲಿ ಕರ್ಪ್ಯೂ ಯಾವಾಗ ಜಾರಿಯಲ್ಲಿದೆ, ಯಾವಾಗ
ಜಾರಿಯಲ್ಲಿಲ್ಲ ಹೇಳಲು ಬರುವುದಿಲ್ಲ. ನಕ್ಸಲೀಯನಿರಬಹುದಾದ ನಾಣಿಭಟ್ಟನ ಲಾಕಪ್
ಮರಣದಿಂದ ಒಳಗಿನ ಲಾವಾ ಹೊರಬಂದಂತೆ ತಳಮಳ, 'ವಾಸನೆ',
'ತೋಳದ ಮನೆಗಳ'
ಅರಿವು, ಹೊಸನಾಯಕನ ಆಗಮನದ ನಿರೀಕ್ಷೆ.
ಇಂಥ ಕೇಡಿನಿಂದಾವೃತವಾದ ಬದುಕನ್ನು ಬಿಂಬಿಸಲು
ನಾರಾಯಣ ಮಾಳ್ಕೋಡ್ ಅವರು ಆರಿಸಿಕೊಂಡಿರುವ ಅಭಿವ್ಯಕ್ತಿಮಾರ್ಗ
ಸಾಂಕೇತಿಕವಾದದ್ದು. ಅನ್ಯೋಕ್ತಿ ರೀತಿಯದು. ಇದರಲ್ಲಿ ಅವರು
ಯಶಸ್ವಿಯಾಗಿದ್ದಾರೆಯೇ ಎಂದರೆ ಪೂರ್ತಿಯಾಗಿ 'ಹೌದು'
ಎನ್ನುವಂತಿಲ್ಲ. ಛಿದ್ರ- ಛಿದ್ರ ಬಿಂಬಗಳಂತೆ ಅನಾವರಣಗೊಳ್ಳುವ ಕೇಡು- ನೋವು
ಮತ್ತು ತಹತಹಗಳನ್ನು ಸಾವಯವ ಸಂಬಂಧಗಳಲ್ಲಿ ಹಿಡಿದಿರಿಸುವಂಥ ಅಂತರ್ಗತ
ಶಕ್ತಿಯೊಂದು ಕೃತಿಯೊಳಗಿಲ್ಲವಾದ್ದರಿಂದ ಸಂಪೂರ್ಣವಾಗಿ 'ಜಾಲ'ವನ್ನು
ರೂಪಕನಿಷ್ಠೆ ಅಥವಾ ಅನ್ಯೋಕ್ತಿ ಕಾದಂಬರಿ ಎಂದು ಕರೆಯಲಾಗದು. ಜೊತೆಗೆ ಇಂಥ
ಅಭಿವ್ಯಕ್ತಿಗೆ ತಕ್ಕುದಾದ ಕಾವ್ಯಭಾಷೆ ನಾರಾಯಣ ಮಾಳ್ಕೋಡ್ ಅವರಿಗೆ ಇನ್ನೂ
ಸಿದ್ಧಿಸಿಲ್ಲದಿರುವುದೂ ಇನ್ನೊಂದು ಕಾರಣ. ಸಂಕೇತಗಳು, ಸಂಕೇತಾರ್ಥದ
ವಾಕ್ಯಗಳು ಹೇರಳವಾಗಿ ನಮಗೆ ಎದುರಾಗುತ್ತವೆಯಾದರೂ ಭಾಷೆ ಗ್ರಂಥಸ್ಥವಾಗಿ
ಅನೇಕ ಕಡೆ ಬರವಣಿಗೆ ವರದಿಗಾರಿಕೆ, ಸಮೀಕ್ಷೆಗಳಿಗಿಂತ ಮೇಲೇರುವುದಿಲ್ಲ.
ರೂಪಕನಿಷ್ಠ ಮಾರ್ಗದಲ್ಲೂ ಸಾಧ್ಯವಾಗಬಹುದಾದ ಸಾವಯವ ಶಿಲ್ಪ ಸಾಂಗತ್ಯದ
ಕೊರತೆಯಿಂದಾಗಿಯೇ ದುಃಸ್ವಪ್ನ ಪ್ರಪಂಚ ಹೊಕ್ಕಿ ಬಂದ ನಂತರವೂ ಕಾಡುವ ಇಡಿಯಾದ
ಅನುಭವವಾಗದೆ ಅದನ್ನು ಮರೆತುಬಿಡಬಹುದು.
ನಾರಾಯಣ ಮಾಳ್ಕೋಡರು ಸಂವೇದನಾಶೀಲರು,
ಮೌಲ್ಯಗಳ ಕಾಳಜಿ ಉಳ್ಳವರು, ಸೃಜನಶೀಲ ಪ್ರತಿಭೆ ಉಳ್ಳವರು ಎಂಬುದಕ್ಕೆ
'ಜಾಲ'
ತೋರುಬೆರಳಾಗಬಹುದು. ಇದೆಲ್ಲದರ ಜೊತೆಗೆ ಭಾಷೆಯನ್ನು ಬಗ್ಗಿಸಿಕೊಂಡು
'ಬಡಿದಿಷ್ಟ ದೇವತಾ'
ವಿಗ್ರಹವನ್ನು ರೂಪಿಸುವ ಕಲೆ ಇನ್ನೂ ಸಿದ್ಧಿಸಬೇಕಿದೆ.
ಹಸ್ತಪ್ರತಿಯನ್ನು ಡಿ.ಟಿ.ಪಿ.ಗೊಪ್ಪಿಸುವ
ಮುನ್ನ ಇನ್ನೊಮ್ಮೆ ಅವಲೋಕಿಸಿದ್ದರೆ 'ಬಂಧೀಖಾನೆ',
'ವಿಧಾಯ',
'ಬಂಧಿ',
'ಲಘುಬಗೆ'
'ಇಲಿಯ ಪಂಜರ',
'ಸಾವನ್ನು ಉದ್ದೇಶಪೂರ್ವಕವಾಗಿ
ಕರೆಸಲಾಗುತ್ತಿದೆ', 'ಪ್ರಶಾಂತವಾಗಿ
ಮಲಗಿದ್ದ ಹೆಗ್ಗಡೆ' ಇಂಥ ಅಪಪ್ರಯೋಗಗಳನ್ನು
ತಪ್ಪಿಸಬಹುದಿತ್ತು.
ಟಿಎಸ್‌ಐ
ಜಿ.ಎನ್. ರಂಗನಾಥ
ರಾವ್
|