ಇದು ನಮ್ಮ ವಿಶೇಷ ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಬಿಚ್ಚುಮಾತು
ಲಾರಾ: ಮಾತು ನೇರ, ಪ್ರತಿಭೆ ಅಪಾರ...
 
 
2000ದಲ್ಲಿ ವಿಶ್ವ ಸುಂದರಿ, ಈ ವರ್ಷ 'ಚಿತ್ರರಂಗದ ಸೇವೆ'ಗಾಗಿ ರಾಜೀವ್ ಗಾಂಧಿ ಪ್ರಶಸ್ತಿ. ಲಾರಾ ದತ್ತ ತಮ್ಮ ಸಾಧನೆಯ ಹಾದಿಯಲ್ಲಿ ಬಹುದೂರ ಸಾಗಿದ್ದಾರೆ. ಪ್ರಸಿದ್ಧ ಮೆನನ್ ಜೊತೆ ಲಾರಾ ಅಂತರಂಗ ಲಹರಿ...

 

ಸೇನಾ ಹಿನ್ನೆಲೆಯಿಂದ ಬಂದಿರುವುದರಿಂದ ಪ್ರವಾಸ ಮತ್ತು ಸಾಹಸ ನಿಮಗೆ ಅಪರೂಪವಲ್ಲ. ಇಂದಿನ ನಿಮ್ಮ ಸಾಧನೆಗೆ ಇದು ಎಷ್ಟು ನೆರವಾಗಿದೆ?

ಸೇನಾ ಹಿನ್ನೆಲೆಯ ಅತ್ಯುತ್ತಮ ಅಂಶ ಎಂದರೆ ಕನಿಷ್ಠ ನಾಲ್ಕು ವರ್ಷಗಳಿಗೊಮ್ಮೆ ಸ್ಥಳ ಬದಲಾವಣೆ. ಇದರಿಂದ ನಾನು ಹಠಾತ್ ಸನ್ನಿವೇಶ ಮತ್ತು ಪರಿಸ್ಥಿತಿಗಳಿಗೆ ಬಹು ಬೇಗನೇ ಹೊಂದಿಕೊಳ್ಳುವುದನ್ನು ಕಲಿತಿರುವೆ. ಶಾಲೆ, ಮನೆ ಮತ್ತು ಕೆಲ ಬಾರಿ ಸಂಪೂರ್ಣ ಜೀವನ ಶೈಲಿಯೇ ಬದಲಾಗುತ್ತಿರುತ್ತದೆ. ನನ್ನ ಜೀವನದಲ್ಲಿ ನಡೆದ ಅತ್ಯುತ್ತಮ ಸಂಗತಿ ಇದು. ತಾರೆಯಾಗಿ ಬೆಳೆಯಲು ಇದು ನೆರವಾಯಿತು. ನಟಿಯಾದ ಮೇಲೆ ಪ್ರವಾಸ ಮತ್ತು ವಿವಿಧ ಪಾತ್ರಗಳಿಗೆ ಒಗ್ಗಿಕೊಳ್ಳುವ ಅನಿವಾರ್ಯತೆ ಇದ್ದೇ ಇದೆ. ನನಗೆ ಅದು ಮೊದಲೇ ಕರಗತವಾಗಿದೆ.

ಸೇನೆಯಲ್ಲಿ ವೃತ್ತಿ ಅರಸುವ ಕಲ್ಪನೆಯೇ ಬಂದಿಲ್ಲವೆ? ಗ್ಲಾಡ್ರಾಗ್ಸ್ ಅವಕಾಶ ಸಿಕ್ಕಿದ್ದು ಹೇಗೆ?

ನಾನು ಪೈಲಟ್ ಆಗಬೇಕೆನ್ನುವುದು ನನ್ನ ತಂದೆಯ ಇಚ್ಛೆಯಾಗಿತ್ತು. ಅದೃಷ್ಟವಶಾತ್ ಗ್ಲಾಡ್ರಾಗ್ಸ್ ಅವಕಾಶ ಸಿಕ್ಕಿತು. ನನ್ನ ಸಹೋದರಿ ನನ್ನ ಭಾವಚಿತ್ರಗಳನ್ನು ನನಗೆ ತಿಳಿಸದೆಯೇ ಗ್ಲಾಡ್ರಾಗ್ಸ್‌ಗೆ ಕಳುಹಿಸಿಕೊಟ್ಟಿದ್ದಳು. ಮೌರೀನ್ ವಾಡಿಯಾ ಕರೆ ಮಾಡಿ ನಾನು ಆಯ್ಕೆಯಾದ ಸುದ್ದಿ ಹೇಳಿದಾಗ ಮುಂಬೈಗೆ ಬಂದು ವಿಭಿನ್ನ ಅನುಭವ ಪಡೆಯುತ್ತೇನೆ ಎಂಬ ಉತ್ಸುಕತೆ ಇತ್ತೇ ವಿನಾ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.

ನಿಮಗೆ 9.99 ದಾಖಲೆ ಅಂಕ ಗಳಿಸಿಕೊಟ್ಟ ಸಂದರ್ಶನದ ಪ್ರಶ್ನೆಗಳ ಬಗ್ಗೆ ಹೇಳಿ. ಆಗ ಎದೆಗುಂದಿದ್ದಿರೇನು?

ನಿಜ ಹೇಳಬೇಕೆಂದರೆ ಮೂರು-ನಾಲ್ಕು ತಿಂಗಳ ಸತತ ಪರಿಶ್ರಮದ ಬಳಿಕ; ಸ್ಪರ್ಧೆಯ ಅಂತಿಮ ಸುತ್ತು ಪ್ರವೇಶಿಸಿ ಮೂರೇ ಜನರು ಆಯ್ಕೆಯಾಗುವ ಸನ್ನಿವೇಶದಲ್ಲಿ ಅಗಾಧ ಒತ್ತಡ ಇರುತ್ತದೆ. ಸುಶ್ಮಿತಾ ಸೇನ್ ಪ್ರಶಸ್ತಿ ಗೆದ್ದು ಆಗಲೇ ಏಳು ವರ್ಷಗಳಾಗಿದ್ದವು. ಹೀಗಾಗಿ ಒತ್ತಡವೂ ಇತ್ತು ಮತ್ತು ಅಷ್ಟು ಸಮೀಪಕ್ಕೆ ಬಂದ ಮೇಲೆ ಗೆಲುವೇ ನನ್ನ ಗುರಿಯಾಗಿತ್ತು. ನನ್ನ ಅನುಭವದಿಂದಲೇ ಆ ಪ್ರಶ್ನೆಗಳಿಗೆ ಉತ್ತರಿಸಿದೆ. ಸೌಂದರ್ಯ ಸ್ಪರ್ಧೆಗಳನ್ನು ವಿರೋಧಿಸುವವರಿಗೆ ನಿಮ್ಮ ಸಮರ್ಥನೆ ಏನು ಎಂಬ ಪ್ರಶ್ನೆಗೆ ನಾನು ಈ ಸ್ಪರ್ಧೆ ನನಗೆ ಮತ್ತು ಭಾರತೀಯ ಮಹಿಳೆಯರಿಗೆ ಜಾಗತಿಕ ಬಾಗಿಲು ತೆರೆಯುತ್ತದೆ ಎಂದು ಉತ್ತರಿಸಿದ್ದೆ.

ಅಂತರ್‌ರಾಷ್ಟ್ರೀಯ ವೇದಿಕೆಯಲ್ಲಿ ವಿಶ್ವ ಸುಂದರಿಯಾಗಿ ಆಯ್ಕೆಯಾದ ಮೇಲೆ ಒಬ್ಬ ಭಾರತೀಯ ಮಹಿಳೆಯಾಗಿ ನಿಮ್ಮ ಜೀವನದಲ್ಲುಂಟಾದ ಬದಲಾವಣೆಗಳೇನು?

ಆ ಒಂದೇ ದಿನದಲ್ಲಿ ನನ್ನ ಜೀವನವೇ ಬದಲಾಯಿತು. ವಿಶ್ವ ಸುಂದರಿಯಾಗಿದ್ದ ಒಂದು ವರ್ಷದ ಅವಧಿ ಅಭೂತಪೂರ್ವ ಅನುಭವ. ಬೆಂಗಳೂರಿನ ಅನಾಮಧೇಯ ಹುಡುಗಿಯಾಗಿದ್ದ ನಾನು ಆಳ ಸಮುದ್ರದಲ್ಲಿ ಮುಳುಗಿದ್ದೆ. ಅಲ್ಲಿ ಲೈಫ್‌ಬೋಟ್ ಅಥವಾ ಲೈಫ್‌ಗಾರ್ಡ್‌ಗಳಿರುವುದಿಲ್ಲ. ಈಜಲು ಕಲಿತರಷ್ಟೇ ಉಳಿಗಾಲ.

ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ ಸೌಹಾರ್ದ ರಾಯಭಾರಿಯಾಗಿ ನಿಮ್ಮ ಪಾತ್ರ?

ನ್ಯೂಯಾರ್ಕ್‌ನಲ್ಲಿದ್ದಾಗ ವಿಶ್ವಸಂಸ್ಥೆಗೆ ಕೆಲವು ಸಾಕ್ಷ್ಯಚಿತ್ರಗಳನ್ನು ತಯಾರಿಸಿದ್ದೆ. ಅವುಗಳಲ್ಲಿ ಕೆಲವು ಭಾರತದಲ್ಲೇ ಚಿತ್ರೀಕರಿಸಿದ್ದು. ವಿಶ್ವಸಂಸ್ಥೆಯ ತಂಡದೊಂದಿಗೆ ಇಲ್ಲಿಗೆ ಬಂದಿದ್ದೆ. ಪಶ್ಚಿಮ ಬಂಗಾಳ, ಬಿಹಾರ್‌ಗಳಲ್ಲಿ ಮಹಿಳೆಯರಿಗೆ ಸಂಬಂಧಿಸಿದಂತೆ ಲಿಂಗ ತಾರತಮ್ಯ, ವರದಕ್ಷಿಣೆ, ಶಿಶುಹತ್ಯೆ, ಅನಕ್ಷರತೆ, ವೇಶ್ಯಾವೃತ್ತಿ ಮತ್ತು ಎಚ್‌ಐವಿ ಕುರಿತು ಸಾಕ್ಷ್ಯಚಿತ್ರ ನಿರ್ಮಿಸಲಾಗಿತ್ತು.

ರೂಪದರ್ಶಿಗಳಿಗೆ ನಟನೆ ಬರುವುದಿಲ್ಲ ಎಂಬ ಮಾತಿನ ಬಗ್ಗೆ?

ಆ ಮಾತು ನೂರಕ್ಕೆ ನೂರರಷ್ಟು ಸುಳ್ಳು. ರೂಪದರ್ಶಿಯಾಗಿ ಚಿತ್ರರಂಗಕ್ಕೆ ಬಂದು ಇಲ್ಲಿ ದೃಢವಾಗಿ ಕಾಲೂರಿದ ಅನೇಕರಿದ್ದಾರೆ. ಬಿಪಾಶಾ, ಐಶ್ವರ್ಯಾ, ಸುಶ್ಮಿತಾ ಅವರೆಲ್ಲಾ ರೂಪದರ್ಶಿಯಾಗಿದ್ದವರೇ. ಇವರೆಲ್ಲ ಈ ಆರೋಪ ಸುಳ್ಳೆಂದು ಸಾಬೀತು ಮಾಡಿದ್ದಾರೆ. ಗ್ಲಾಮರ್ ಪ್ರಪಂಚದ ಬೆಡಗಿಯರನ್ನು ಚಿತ್ರರಂಗವೂ ಗ್ಲಾಮರ್ ಪಾತ್ರಗಳಿಗೇ ಆರಿಸುವುದು. ನಯ- ವಿನಯದ ಪಾತ್ರಗಳು ಇತರರಿಗೆ. ಗ್ಲಾಮರ್ ಬೊಂಬೆಯಾಗಿರುವ ಪಾತ್ರಗಳು ರೂಪದರ್ಶಿಗಳಿಗೆ ಮೀಸಲು. ಇದಕ್ಕೆ ಅಪವಾದವೆನಿಸುವುದೇ ನನ್ನ ವೃತ್ತಿಜೀವನದ ದೊಡ್ಡ ಸವಾಲು. ವೃತ್ತಿ ಜೀವನದ ನಾಲ್ಕು ವರ್ಷಗಳ ಅನುಭವದಲ್ಲಿ ನಾನು ಯಾವುದರಲ್ಲಿ ಪಕ್ಕಾ ಆಗಿದ್ದೇನೆ ಎನ್ನುವುದನ್ನು ತಿಳಿದುಕೊಂಡಿರುವೆ. 'ನೋ ಎಂಟ್ರಿ', 'ಬಾಗಮ್‌ಬಾಗ್', 'ಪಾರ್ಟ್‌ನರ್' ಮತ್ತು 'ಜೂಮ್ ಬರಾಬರ್ ಜೂಮ್' ಮೊದಲಾದ ಹಾಸ್ಯ ಚಿತ್ರಗಳು ನನಗೆ ಒಗ್ಗುತ್ತವೆ.

'ನೋ ಎಂಟ್ರಿ'ಯಲ್ಲಿ ನಿಮ್ಮ ಪಾತ್ರ ಆಕಸ್ಮಿಕ?

ನಿಜ ಹೇಳಬೇಕೆಂದರೆ ನಾನು ಗ್ಲಾಮರ್ ಬೊಂಬೆಯಲ್ಲ. ಮಾದಕ ಬೆಡಗಿಯಂತೂ ಅಲ್ಲವೇ ಅಲ್ಲ. (ನಗು)

ಪ್ರಾಯೋಗಿಕ ಸಿನಿಮಾಗಳ ಬಗ್ಗೆ? ಮುಂಬರುವ ನಿಮ್ಮ ಚಿತ್ರಗಳು?

ಅದು ಅದ್ಭುತ ಅವಕಾಶ. ಈ ವರ್ಷ ಕೆಲವು ಗಂಭೀರ ಚಿತ್ರಗಳಲ್ಲಿ ನಟಿಸುವ ಅವಕಾಶ ನನಗೆ ಸಿಕ್ಕಿದೆ. ಈಗಾಗಲೇ ತುಂಬಾ ಹಾಸ್ಯ ಚಿತ್ರಗಳಲ್ಲಿ ನಟಿಸಿದ್ದೇನೆ. ಇತರ ಪಾತ್ರಗಳತ್ತಲೂ ಗಮನ ಹರಿಸಲು ಸುಸಂದರ್ಭ ಒದಗಿದೆ ಎಂದನಿಸುತ್ತಿದೆ. ಜೊತೆಯಲ್ಲೇ ಗೋವಿಂದ ಅವರ ಜೊತೆ ಮತ್ತೊಂದು ಹಾಸ್ಯ ಚಿತ್ರ 'ಬಂದಾ ಯೇ ಬಿಂದಾಸ್ ಹೇ' ನಟಿಸುತ್ತಿದ್ದೇನೆ. ಅಕ್ಷಯ್ ಕುಮಾರ್ ಮತ್ತು ಸಂಜಯ್ ದತ್ ಜೊತೆಗೆ ಸಾಹಸ ಚಿತ್ರವೊಂದರಲ್ಲಿ ನಟಿಸುತ್ತಿದ್ದೇನೆ. ನನ್ನ ಜೀವನ ಮತ್ತೆ ಸಾಹಸಮಯವಾದಂತೆ ಅನಿಸಿದೆ. (ನಗು)

ಮಾದಕ ದೃಶ್ಯ ಮತ್ತು ಅಂಗಾಂಗ ಪ್ರದರ್ಶನ ಕುರಿತಂತೆ ನಿಮ್ಮದೇ ಆದ ಕೆಲವು ಮಿತಿಗಳನ್ನು ಇಟ್ಟುಕೊಂಡಿದ್ದೀರಿ. ಇದರಿಂದ ಪಾತ್ರಗಳ ಆಯ್ಕೆಯಲ್ಲಿ ಸಮಸ್ಯೆಯಾಗಿದೆಯೆ?

ಹೌದು ಕೆಲಬಾರಿ ಹಾಗಾಗಿದ್ದಿದೆ. ಆದರೆ ಅಂಗಪ್ರದರ್ಶನವನ್ನು ನಾನು ವಿರೋಧಿಸಿದ್ದೇನೆ ಎಂದಲ್ಲ. ಕೆಲ ಸಿನಿಮಾಗಳಲ್ಲಿ ಅನಗತ್ಯವಾಗಿ ಇಂತಹ ಸನ್ನಿವೇಶಗಳನ್ನು ತುರುಕುವುದು ನನಗಿಷ್ಟವಿಲ್ಲ. ಆದರೆ ನಾನು 'ಏಕ್ ಅಜನಬಿ'ಯಂತಹ ಪಾತ್ರಗಳಲ್ಲಿ ನಟಿಸುತ್ತಿದ್ದೇನೆ ಎಂದಾದರೆ ಸಮಸ್ಯೆ ಇಲ್ಲ. ಈ ಚಿತ್ರದಲ್ಲಿ ನಾನು ಒಲಿಂಪಿಕ್ ಈಜುಗಾರ್ತಿಯ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಇಂತಹ ಸಂದರ್ಭದಲ್ಲಿ ಈಜುಡುಗೆ ತೊಟ್ಟು ಈಜುಕೊಳಕ್ಕೆ ಹಾರಲು ನನಗೆ ಅಡ್ಡಿಯಿಲ್ಲ. ಆದರೆ ಕಥೆಗೆ ಪೂರಕವಲ್ಲದೆ ಕೇವಲ ರಂಜನೆಗಾಗಿ ಬಿಕಿನಿ ತೊಟ್ಟು ಕಡಲ ತೀರದಲ್ಲಿ ನಡೆಯಲು ನಾನು ಒಪ್ಪಲಾರೆ. ಅಂತಹ ಪಾತ್ರಗಳನ್ನು ತಪ್ಪಿಸಿಕೊಳ್ಳ ಬಯಸುತ್ತೇನೆ.

ವೈಯಕ್ತಿಕ ಜೀವನವನ್ನು ರಹಸ್ಯವಾಗಿಡುವಲ್ಲಿ ನಂಬಿಕೆ ಇಲ್ಲದ ಕೆಲವೇ ವ್ಯಕ್ತಿಗಳಲ್ಲಿ ನೀವೂ ಒಬ್ಬರು. ಇದರಿಂದ ಅನಗತ್ಯ ವಿವಾದಗಳಿಂದ ತಪ್ಪಿಸಿಕೊಳ್ಳಬಹುದೆ?

ಹೌದು. ಮೊದಲನೆಯದಾಗಿ ಒಬ್ಬ ನಟಿ ಅಥವಾ ನಟನಿಗೆ ಖಾಸಗಿ ಬದುಕೇ ಇಲ್ಲ. ಆದರೆ ನಾನು ಮಾತ್ರ ಸುಭದ್ರ ವೈಯಕ್ತಿಕ ಜೀವನದ ಅದೃಷ್ಟ ಪಡೆದಿರುವೆ. ರಹಸ್ಯವಾಗಿ ಇಡುವಂತಹುದೇನು ನನ್ನಲ್ಲಿಲ್ಲ. ನಾನು ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸುವ ಮುನ್ನವೇ ಪ್ರೀತಿಸುತ್ತಿದ್ದ ವ್ಯಕ್ತಿಯನ್ನು ತಾರಾಪಟ್ಟ ದೊರೆತ ಕೂಡಲೇ ಮರೆಯಲು ಸಾಧ್ಯವೆ? ಅಕಸ್ಮಾತ್ ಆಗಿ ನಾನು ಒಂಟಿ ಎಂದು ಸಾರ್ವಜನಿಕವಾಗಿ ಘೋಷಣೆ ನೀಡಿದಲ್ಲಿ ನನ್ನನ್ನು ಪ್ರೀತಿಸಿದ ವ್ಯಕ್ತಿಗೆ ಅವಮಾನ ಮಾಡಿದಂತೆ. ಒಪ್ಪಿಕೊಂಡ ಸಂಬಂಧವನ್ನು ವೃತ್ತಿಯಲ್ಲಿ ಮೇಲೇರುವುದಕ್ಕೋಸ್ಕರ ತುಚ್ಛೀಕರಿಸಲು ನಾನು ಸಿದ್ಧಳಿಲ್ಲ. ಹೀಗಾಗಿ ಎಲ್ಲವನ್ನೂ ಸರಳವಾಗಿ ನಿಭಾಯಿಸಿದೆ.

ನೀವು ಪ್ರಾಯಶಃ ನಂಬಿದ ನಿಮ್ಮ ಕುರಿತ ಒಂದು ಗಾಸಿಪ್? ಗಾಸಿಪ್‌ಗಳು ನಿಮ್ಮನ್ನು ಬಾಧಿಸುತ್ತವೆಯೆ?

ಯಾವುದೇ ಟೀಕೆಗಳು ಸತ್ಯವಲ್ಲ ಎನ್ನುವುದು ಗೊತ್ತಿದ್ದರೆ ನಾನು ಅದನ್ನು ನಂಬುವುದಿಲ್ಲ. ಕೆಲ ಹುಚ್ಚು ಗಾಸಿಪ್‌ಗಳನ್ನು ಓದಿ ನಿಜಕ್ಕೂ ನಗು ಬರುವುದಿದೆ. ಹಾಗೆಯೇ ಕೆಲವು ಗಾಸಿಪ್‌ಗಳು ಅಪಾಯಕಾರಿ ಮತ್ತು ಬರೀ ಕಾಲ್ಪನಿಕವಾಗಿರುತ್ತದೆ. ಪರಿಣಾಮ ಅರ್ಥೈಸಿಕೊಳ್ಳದೆ ಇಂತಹ ವಿಚಾರಗಳನ್ನು ಬರೆದಿರುತ್ತಾರೆ. ಆದರೆ ಅದನ್ನು ನಿಭಾಯಿಸುವುದು ತುಂಬಾ ಕಷ್ಟ.

ಕೆಲಸವಿಲ್ಲದ ದಿನದ ಬಗ್ಗೆ ಹೇಳಿ?

ಈಗ ನಾನು ಹಾಗೇ ಇದ್ದೇನೆ. ಮುಂಜಾನೆ ಸಾಹಸ ಚಿತ್ರವೊಂದಕ್ಕೆ ತರಬೇತಿ ಪಡೆಯುತ್ತಿದ್ದೇನೆ. ನಂತರ ದೈಹಿಕ ತರಬೇತಿ. ಸಿನಿಮಾಕ್ಕಾಗಿ ಒಂದು ಕ್ರೀಡೆಯನ್ನು ಕಲಿಯುತ್ತಿದ್ದೇನೆ. ಇಲ್ಲದೆ ಹೋದಲ್ಲಿ ಓದುವುದು, ಜಾಲಿಯಾಗಿ ತಿರುಗುವುದು, ಎರಡು ನಾಯಿಗಳ ಜೊತೆ ಕಾಲ ಕಳೆಯುವುದರಲ್ಲಿ ಸಮಯ ಹೋಗುತ್ತದೆ. ನಾನು ಸಿನಿಮಾ ನೋಡುವುದರಲ್ಲಿ ಸದಾ ಮುಂದು. ಚಿತ್ರೀಕರಣ ಇಲ್ಲದೆ ಇದ್ದಲ್ಲಿ ಸಿನಿಮಾ ನೋಡುವೆ. ಶಾಪಿಂಗ್ ಹುಚ್ಚೂ ನನಗಿದೆ.

ದೇವರು ಮೂರು ವರಗಳನ್ನು ಕರುಣಿಸಿದರೆ?

ಒಂದೇ ವರ್ಷದಲ್ಲಿ ಅಮೀರ್, ಶಾರುಖ್ ಮತ್ತು ಸಲ್ಮಾನ್ ಜೊತೆ ಕೆಲಸ ಮಾಡುವ ಅವಕಾಶ ಕೊಡು ಎಂದು ಬೇಡುವೆ. ಆ ಮೂರೂ ಚಿತ್ರಗಳು ಸೂಪರ್ ಹಿಟ್ ಆಗಲಿ ಎಂದು ಕೋರುವೆ. ನಂತರ ಎರಡು ತಿಂಗಳ ರಜಾ ತೆಗೆದುಕೊಂಡು ಆರಾಮವಾಗಿ ಕಾಲ ಕಳೆಯುವೆ.

ಟಿಎಸ್‌ಐ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .