ಇದು ನಮ್ಮ ವಿಶೇಷ ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಮುಖಪುಟ ಲೇಖನ
ಧಾರ್ಮಿಕ ಅಂಧಾರಾಧನೆಯ ಸೋಗಿನಲ್ಲಿ...
 
ಕ್ಯಾಮರಾ ಮುಂದೆ ಬಂದಾಗ ಪ್ರತಿಭಟನೆಯನ್ನು ಉಗ್ರಗೊಳಿಸುವುದು ಆ ಹೊತ್ತಿಗೆ ಖುಷಿ ನೀಡಬಹುದು. ಆದರೆ ಕಾಶ್ಮೀರ ಎತ್ತ ಸಾಗುತ್ತಿದೆ ಎಂಬ ಅರಿವು ಈ ಪ್ರತಿಭಟನಾಕಾರರಿಗೆ ಇದೆಯೇ?

|

ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡಬಾರದೇಕೆ?

 

Arindam Choudhuri
ಅರಿಂದಮ್ ಚೌಧುರಿ,
ಪ್ರಧಾನ ಸಂಪಾದಕರು,
ದ ಸಂಡೆ ಇಂಡಿಯನ್

ನನ್ನ ಬಾಲ್ಯದ ದಿನಗಳಿಂದ ನಮ್ಮ ತಂದೆಯವರು ಒಂದು ಪ್ರಶ್ನೆ ಕೇಳುತ್ತಿದ್ದರು. ಅದೇನೆಂದರೆ ಕಾಶ್ಮೀರಿಗಳು ಭಾರತದ ಭಾಗವಾಗಿ ಇರಲು ಇಚ್ಛಿಸುತ್ತಿಲ್ಲ. ಹಾಗಿರುವಾಗ ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡುವ ಕುರಿತು ನಾವೇಕೆ ಚಿಂತಿಸಬಾರದು? ಇನ್ನು ಪ್ರಜಾಪ್ರಭುತ್ವದ ದೃಷ್ಟಿಯಿಂದ ಕೂಡ ಅದು ನ್ಯಾಯವಾದದ್ದೇ ಎಂದು ನಾನು ಸದಾ ಭಾವಿಸುತ್ತಿದ್ದೆ. ಆ ನಡುವೆಯೂ ನನ್ನನ್ನು ಕಾಡುತ್ತಿದ್ದ ಒಂದು ಗೊಂದಲವೆಂದರೆ, ಉಳಿದ ರಾಜ್ಯಗಳು ಕೂಡ ಅದರಂತೆಯೇ ನಮಗೂ ಸ್ವಾತಂತ್ರ್ಯ ನೀಡಿ ಎಂಬ ಬೇಡಿಕೆಯನ್ನು ಮುಂದಿಟ್ಟರೆ ಎನ್ನುವುದು. ನನ್ನ ಎಣಿಕೆಯ ಪ್ರಕಾರ ಕಾಶ್ಮೀರ ಸಮಸ್ಯೆಯ ಬಗ್ಗೆ ನಾನು ಮತ್ತಷ್ಟು ಚಿಂತನೆ ನಡೆಸಲಿಲ್ಲ.

ಅದಾದ ಮೇಲೆ ಕಾಶ್ಮೀರದ ಪರಿಸ್ಥಿತಿ ನಿಯಂತ್ರಣದಲ್ಲಿರುವಂತೆ ಕೂಡ ಕಂಡು ಬಂದಿತು. ಕೆಲವು ತಿಂಗಳ ಹಿಂದೆ ನಮ್ಮ ವ್ಯವಸ್ಥಾಪಕ ಸಂಪಾದಕ ಸುತನು ಗುರು, '1989ಕ್ಕೆ ಮರಳಿದ ಕಾಶ್ಮೀರ' ಎಂಬ ಮುಖಪುಟ ವರದಿಯನ್ನು ನಾವೇಕೆ ಮಾಡಬಾರದು ಎಂಬ ಪ್ರಸ್ತಾಪವನ್ನು ಮುಂದಿಟ್ಟರು. ಅವರ ಪ್ರಸ್ತಾಪಕ್ಕೆ ನಾನು ಒಪ್ಪಿಗೆ ಸೂಚಿಸಿದ್ದೆ. ನಮ್ಮದೇ ಮುಖಪುಟ ವರದಿ ಓದಿದ ನಂತರವೂ ಅಲ್ಲಿನ ಪರಿಸ್ಥಿತಿಯ ಗಾಂಭೀರ್ಯತೆಯನ್ನು ಅರ್ಥ ಮಾಡಿಕೊಳ್ಳಲು ನನಗಾಗಲಿಲ್ಲ (ಅಚ್ಚರಿಯ ವಿಷಯವೆಂದರೆ ಆ ಸಂದರ್ಭದಲ್ಲಿ ಕಾಶ್ಮೀರ ಕರಾಳತೆಯತ್ತ ಮರಳುತ್ತಿದೆ ಎಂಬ ವಿಷಯವನ್ನು ಪ್ರಸ್ತಾಪಿಸಿದ್ದು ನಮ್ಮ ವಾರಪತ್ರಿಕೆ ಮಾತ್ರ). ಆದರೀಗ ನಾನು ಅರ್ಥ ಮಾಡಿಕೊಂಡಿರುವ ಪ್ರಕಾರ ಕೇಂದ್ರ ಸರ್ಕಾರ ತನ್ನ ಮಿತ್ರ ಪಕ್ಷಗಳ ಬೇಡಿಕೆಯನ್ನು ಪೂರೈಸುವುದರಲ್ಲಿಯೇ ಸಂಪೂರ್ಣ ಮಗ್ನವಾಗಿದೆ. ಇನ್ನು ಜನಸಾಮಾನ್ಯರು ಎಗ್ಗಿಲ್ಲದೇ ಏರುತ್ತಿರುವ ಹಣದುಬ್ಬರ, ಬೆಲೆಯೇರಿಕೆಯ ಬಿಸಿಗೆ ಸಿಕ್ಕಿ ಹಾಕಿಕೊಂಡು ಒದ್ದಾಡುತ್ತಿದ್ದಾರೆ. ಭಾರತ-ಅಮೆರಿಕ ನಾಗರಿಕ ಅಣು ಒಪ್ಪಂದ ಆಗಲೇಬಾರದು ಎಂದು ಪಟ್ಟು ಹಿಡಿದು ಕೂತಿದ್ದ ಎಡಪಕ್ಷಗಳು ಮಾಡಬಾರದ್ದೆಲ್ಲ ಮಾಡಿಯಾಗಿದೆ. ಈ ನಡುವೆ ನಿಧಾನವಾಗಿ ಹೊತ್ತಿಕೊಂಡ ಕಾಶ್ಮೀರದ ಬೆಂಕಿ ಭಯಂಕರ ಜ್ವಾಲೆಯಾಗಿ ಹರಡಲಾರಂಭಿಸಿದೆ. ಕಾಶ್ಮೀರ ಕೇಂದ್ರ ಸರ್ಕಾರದ ಕೈತಪ್ಪಲಾರಂಭಿಸಿದೆ ಮತ್ತು 1989ಕ್ಕೆ ಮರಳುತ್ತಿದೆ. ಅಥವಾ ಅದು ನಿಯಂತ್ರಣದಲ್ಲಿತ್ತು ಎನ್ನುವುದೇ ಭ್ರಮೆಯಾಗಿತ್ತೆ?

ಅಮರನಾಥ ಭೂವಿವಾದಕ್ಕೆ ಸಂಬಂಧಿಸಿದಂತೆ ಕ್ಷೀಣವಾಗಿ ಪ್ರಾರಂಭವಾದ ಪ್ರತಿಭಟನೆ ಈಗ ಎರಡು ಕೋಮಿನ ನಡುವಿನ ಬೃಹತ್ ಸಂಘರ್ಷವಾಗಿ ಬೆಳೆದು ನಿಂತಿದೆ. ಈ ವಿವಾದದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಎರಡು ಧ್ರುವಗಳಾಗಿ ದೂರ ಸರಿದು ನಿಂತಿವೆ. ಉಳಿದಂತೆ ಬಹುತೇಕ ಭಾರತೀಯರು ಇದು ಕೂಡ ಮೊದಲಿನ ಪ್ರತಿಭಟನೆಗಳಂತಹುದೇ ಎಂದು ತಾತ್ಸಾರದ ಮನೋಭಾವನೆ ತೋರಿದ್ದರು. ಅವರವರ ಬೇಡಿಕೆಗಳನ್ನು ಪೂರೈಸಿಕೊಳ್ಳುವ ಅಸ್ತ್ರ ಎಂಬ ಭಾವನೆ ಸಹಜವಾಗಿಯೇ ಮೂಡಿತ್ತು. ಆದರೀಗ ಇದೊಂದು ಕೋಮು ದಳ್ಳುರಿಯಾಗಿ ಬೆಳೆದು ನಿಂತಿದ್ದು, ಪ್ರತ್ಯೇಕತಾವಾದದ ಪ್ರತಿಧ್ವನಿ ಮತ್ತೆ ಕಾಶ್ಮೀರ ಕಣಿವೆಯಲ್ಲಿ ಮಾರ್ದನಿಸಿದೆ. ಹಿಂದೂಗಳೇ ಹೆಚ್ಚಾಗಿರುವ ಜಮ್ಮುವಿನಲ್ಲಿ ಈಗ ಅಮರನಾಥ ದೇಗುಲ ಮಂಡಳಿಗೆ ಆ ಭೂಮಿಯನ್ನು ಹಿಂತಿರುಗಿಸಿ ಎಂಬ ಆಧಾರದ ಮೇಲಿನ ಪ್ರತಿಭಟನೆ ನಡೆಯುತ್ತಿಲ್ಲ. ಬದಲಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತ್ಯೇಕತಾವಾದಿಗಳ ಕೂಗಿಗೆ ಎಂದಿನಂತೆಯೇ ಮಣಿಯುತ್ತಿವೆ ಎಂಬ ಕಾರಣಕ್ಕಾಗಿ ಕೂಗೇಳುತ್ತಿದೆ. ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚುವ ಮೂಲಕ ಜಮ್ಮುವಿನಲ್ಲಿನ ಹಿಂದೂಗಳು ನಮಗೆ ಆರ್ಥಿಕ ಹೊಡೆತ ನೀಡಿದ್ದಾರೆ. ಆ ಕಾರಣ ಪಾಕಿಸ್ತಾನದ ವಶದಲ್ಲಿರುವ ಮುಜಾಫರಾಬಾದ್ ಮತ್ತು ಕಾಶ್ಮೀರದ ನಡುವಿನ ಸಂಪರ್ಕವನ್ನು ಮುಕ್ತಗೊಳಿಸಿ ಎಂದು ಪ್ರತ್ಯೇಕತಾವಾದಿಗಳು ಒತ್ತಾಯಿಸಿದ್ದಾರೆ. ಈ ನಡುವೆ ಬಗೆ-ಬಗೆಯ ಬಣ್ಣದ ರಾಜಕೀಯ ಪಕ್ಷಗಳು ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳುವ ಕಾತರದಲ್ಲಿವೆ. ಗಲಭೆಯನ್ನು ನಿಯಂತ್ರಣದಲ್ಲಿರಿಸುವ ಸಲುವಾಗಿ ಭದ್ರತಾ ಪಡೆಗಳು ಎಗ್ಗಿಲ್ಲದೆ ಗೋಲಿಬಾರ್ ಮಾಡಿದ ಪರಿಣಾಮವಾಗಿ ಪರಿಸ್ಥಿತಿ ಮತ್ತಷ್ಟು ಭೀಕರವಾಗುವಂತೆ ಮಾಡಿವೆ. ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ. ಈಗ ಪರಿಸ್ಥಿತಿ ಸಂಪೂರ್ಣವಾಗಿ ಕೈತಪ್ಪಿ ಹೋಗಿಲ್ಲ. ಆದರೆ, ಕಾಶ್ಮೀರವನ್ನು ಮತ್ತೆ ಸೇನೆಯ ಮಡಿಲಿಗೆ ಹಾಕುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ. ಆ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಹೀಗೆ ಒಂದು ಕೋಮಿನ ಜನ ಅಪಾರ ಪ್ರಮಾಣದಲ್ಲಿ ದಂಗೆ ಏಳುವುದರ ಲಾಭವನ್ನು ಭಯೋತ್ಪಾದಕರು ಮತ್ತು ಪ್ರತ್ಯೇಕತಾವಾದಿಗಳು ಖಂಡಿತ ಪಡೆದುಕೊಳ್ಳಲಿದ್ದಾರೆ. ಸದ್ಯದ ಆಗುಹೋಗುಗಳನ್ನು ಗಮನಿಸಿದಾಗ ಕಾಶ್ಮೀರ 1989ಕ್ಕೆ ಮರಳಿದಂತೆಯೇ ಆಗಿದೆ. ಆಗಿನ್ನೂ ನಾನು ಶಾಲೆಯಿಂದ ಹೊರ ಬಂದಿದ್ದೆ. ಈಗಲೂ ನನಗೆ ಕಾಶ್ಮೀರದ ಕರಾಳ ದಿನಗಳ ನೆನಪು ಸ್ಪಷ್ಟವಾಗಿಯೇ ಇದೆ.

ಈಗ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಗಲಭೆಗಳನ್ನು ಗಮನಿಸಿದ ನನ್ನ ತಂದೆಯವರು ಕಳೆದ ವಾರ ಮತ್ತೊಮ್ಮೆ ಅವರ ಮೂಲ ಭಾವನೆಗಳನ್ನು ಹೊರಗೆಡಹಿದರು. ನಾನು ಅತ್ಯಂತ ಗೌರವಿಸುವ ಹಾಗೂ ಮೆಚ್ಚಿಕೊಂಡು ಓದುವ ಭಾರತದ ಲೇಖಕರಾದ ವೀರ್ ಸಾಂಘ್ವಿ, ಸ್ವಾಮಿನಾಥನ್ ಎಸ್. ಅಂಕ್ಲೇಸರಿಯ ಐಯ್ಯರ್ (ಪ್ರತಿ ಭಾನುವಾರ ಮಧ್ಯಾಹ್ನದ ಊಟದ ವೇಳೆ ತಂದೆಯವರು ಮತ್ತು ನಾನು ಇವರಿಬ್ಬರ ಅಂಕಣಗಳ ಬಗ್ಗೆ ಚರ್ಚೆ ನಡೆಸುತ್ತೇವೆ. ಏಕೆಂದರೆ ನಮ್ಮಿಬ್ಬರ ಭಾನುವಾರದ ಬೆಳಗು ಆರಂಭವಾಗುವುದೇ ಇವರ ಅಂಕಣಗಳ ಮೂಲಕ) ಮತ್ತು ಅರುಂಧತಿ ರಾಯ್ ಕಳೆದ ವಾರವಷ್ಟೆ ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡಿ ಎಂದು ಹೇಳಿದ್ದರು. ಆ ಹಿನ್ನೆಲೆಯಲ್ಲಿಯೇ ಈ ಮುಖಪುಟ ವರದಿ ಅನಿವಾರ್ಯವಾಯಿತು. ಕಳೆದ ಅರವತ್ತು ವರ್ಷಗಳಿಂದ ಭಾರತದ ಅವಿಭಾಜ್ಯ ಅಂಗವಾಗುವಲ್ಲಿ ಕಾಶ್ಮೀರ ಸೋತು ನಿಂತಿದೆ. ಹಾಗಿರುವಾಗ ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡಬಾರದೇಕೆ?

ಹಿಂದಿನಿಂದ ನಡೆದುಕೊಂಡು ಬಂದಂತೆಯೇ ನಡೆದಲ್ಲಿ, ಕಾಶ್ಮೀರ ಕಣಿವೆಗೆ ಭಾರಿ ಪ್ರಮಾಣದಲ್ಲಿ ಭದ್ರತಾ ಪಡೆ ಮತ್ತು ಸೇನೆಯನ್ನು ಕಳುಹಿಸಿ ಅವರ ಕೂಗನ್ನು ಹತ್ತಿಕ್ಕುವ ಯತ್ನ ಮಾಡಬಹುದು. ಆಗ ಹಿಂದಿನಂತೆಯೇ ಮತ್ತಷ್ಟು ರಕ್ತಪಾತವಾಗುತ್ತದೆ. ಈ ಒಂದು ಕಾರಣದಿಂದಲೇ ಕಾಶ್ಮೀರ ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ವಿಷಯಗಳು ಹಲವಾರು ಭದ್ರತಾ ಸಿಬ್ಬಂದಿ ಹಾಗೂ ಸೈನಿಕರ ಜೀವವನ್ನು ತೆಗೆದುಕೊಂಡಾಗಿದೆ. ಇನ್ನೂ ಒಂದು ವಿಷಯವಿದೆ. ಕಳೆದ ಹಲವಾರು ದಶಕಗಳಿಂದ ಕಾಶ್ಮೀರ ಬಹಳಷ್ಟನ್ನು ಪಡೆದುಕೊಂಡಿದೆ. ಸಾಕಷ್ಟನ್ನು ಕಳೆದುಕೊಂಡಿದೆ ಕೂಡ. ಈಗಿನ ಹಂತದಲ್ಲಿ ಹೇಳುವುದಾದರೆ ಕಾಶ್ಮೀರ ಪಡೆದುಕೊಂಡದ್ದು ಮತ್ತು ಕಳೆದುಕೊಂಡದ್ದು ಎರಡನ್ನೂ ಮರಳಿ ಪಡೆಯಲಾಗುವುದಿಲ್ಲ. ಈ ವಿಷಯವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು.

ಹಾಗಿದ್ದರೆ ಏನು ಮಾಡಬೇಕು? ಭಾರತೀಯ ಮುಖ್ಯವಾಹಿನಿಯೊಂದಿಗೆ ಕಾಶ್ಮೀರ ಒಂದಾಗಲಿ ಎಂದು ಇಷ್ಟು ದಿನ ಕಾದದ್ದು ಸಾಲದೇ? ಎಂದೆಂದೂ ನಿಮದಾಗಿರದೇ ಇದ್ದ ಜನರನ್ನು ನಿಮ್ಮೊಂದಿಗೆ ಒಂದಾಗಿಸಿಕೊಳ್ಳುವುದು ಸಾಧ್ಯವೇ? ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿನ ಅಲ್ಲಿನ ಜನಸಾಮಾನ್ಯರ ಆಶೋತ್ತರಗಳನ್ನು ಬದಿಗಿಟ್ಟು, ಒಬ್ಬ ರಾಜ ಕಾಶ್ಮೀರವನ್ನು ಭಾರತದ ಮಡಿಲಿಗೆ ಹಾಕಿದ. ಹಾಗೆ ಒಲ್ಲದ ಮನಸ್ಸಿನಿಂದ ಬಂದು ಭಾರತದಲ್ಲಿ ಸೇರಿಕೊಂಡವರನ್ನು ಒಂದಾಗಿಸಿಕೊಳ್ಳುವುದು ಸಾಧ್ಯವೇ? ಈ ಪ್ರಶ್ನೆಗೆ ಸಿಗುವ ಸ್ಪಷ್ಟ ಉತ್ತರ, ಸಾಧ್ಯವಿಲ್ಲ.

ಇದಕ್ಕಿಂತ ಇನ್ನೂ ದೊಡ್ಡ ಪ್ರಶ್ನೆಯೊಂದಿದೆ. ಹಾಗಿದ್ದರೆ ಭಾರತ, ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡಬೇಕೆ? ಹಾಗೇನಾದರೂ ಆದರೆ, ಮತ್ತೊಂದು ಮೂಲಭೂತ ಪ್ರಶ್ನೆ ಉದ್ಭವಿಸಿ ಬಿಡುತ್ತದೆ. ನಾಳೆಯೇ ಅಸ್ಸಾಂ ಜನ ಕೂಡ ಇದೇ ರೀತಿಯ ಸ್ವಾತಂತ್ರ್ಯವನ್ನು ಬಯಸಿದರೆ? ನಾಗಾಲ್ಯಾಂಡ್ ಜನ ಕೂಡ ನಮಗೂ ಸ್ವಾತಂತ್ರ್ಯ ನೀಡಿ ಎಂಬ ಬೇಡಿಕೆ ಮುಂದಿಟ್ಟರೆ?

ಇದರ ಮತ್ತೊಂದು ಸಕಾರಾತ್ಮಕ ಮುಖವನ್ನು ಕೂಡ ನೋಡಬಹುದು. ಸ್ಪೇನ್, ಫ್ರಾನ್ಸ್ ಮತ್ತು ರಷ್ಯಾವನ್ನು ಬದಿಗಿಟ್ಟರೆ, ಉಳಿದ ಯುರೋಪ್ ಭಾರತದಷ್ಟೇ ದೊಡ್ಡ ಭೂಪ್ರದೇಶ. ಅಷ್ಟೇ ವಿಸ್ತಾರದ ಭೂಪ್ರದೇಶದಲ್ಲಿ ಎಷ್ಟೊಂದು ಸಣ್ಣ, ಸಣ್ಣ ರಾಜ್ಯಗಳು ಇಲ್ಲ. ಮಾತ್ರವಲ್ಲ ಅವರು ಅಭಿವೃದ್ಧಿಯ ಪಥದಲ್ಲಿಯೇ ಇವೆಯಲ್ಲ. ಹಾಗಿದ್ದ ಮೇಲೆ ತೊಂದರೆಯೇನು? ಸಣ್ಣ ದೇಶಗಳು ಯಾವಾಗಲೂ ಉತ್ತಮ ಸಾಧನೆ ಮಾಡಬಲ್ಲವು ಎನ್ನುವುದು ಸತ್ಯದ ಒಂದು ಮುಖ. ಅದೇ ರೀತಿ ಇತಿಹಾಸ ಮತ್ತು ಪ್ರಾದೇಶಿಕತೆ ಕೂಡ ಒಂದು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎನ್ನುವುದು ಕೂಡ ಮತ್ತೊಂದು ಮುಖ.

ಆದರೆ, ಭಾರತ ಇದಕ್ಕೆ ಅಪವಾದ. ಇಲ್ಲಿ ಪ್ರತಿಯೊಂದು ಭೂಪ್ರದೇಶವೂ ಮತ್ತೊಂದನ್ನು ಅವಲಂಬಿಸಿಕೊಂಡು ನಿಂತಿವೆ ಮತ್ತು ಅದರ ಪರಿಣಾಮದಿಂದಾಗಿಯೇ ಏಕತೆ ಇಲ್ಲಿ ಉಳಿದುಕೊಂಡಿದೆ. ಹಲವು ಹಂತಗಳಲ್ಲಿ ಭಾರತದ ಪ್ರಜಾಪ್ರಭುತ್ವ ವಿಫಲವಾಗಿರಬಹುದು. ಆದರೆ, ಪ್ರತ್ಯೇಕತಾವಾದವನ್ನು ಮುಂದೊಡ್ಡುವ ರಾಜ್ಯಗಳು ಕೂಡ ಈ ಬೃಹತ್ ಪ್ರಜಾಪ್ರಭುತ್ವದ ಅಂಗವಾಗಿಯೇ ಉಳಿಯುವುದು ಒಳಿತು ಎಂಬ ನಿರ್ಧಾರಕ್ಕೆ ಬಂದಿವೆ, ಬರುತ್ತಿವೆ. ಕೊನೆಗೆ ಈ ಪ್ರಜಾಪ್ರಭುತ್ವದ ಅಂಗವಾಗಿಯೇ ಹೋಗುವ ಅಲ್ಲಿನ ನಾಯಕರು ಈ ತೀರ್ಪನ್ನು ಒಪ್ಪಿಕೊಂಡಾಗಿದೆ. ಅವರ ಪಕ್ಷ ಅಧಿಕಾರಕ್ಕೆ ಬಂದರೂ ಸರಿ ಅಥವಾ ಚುನಾವಣೆಯಲ್ಲಿ ನೆಲಕಚ್ಚಿದರೂ ಸರಿ. ಆದರೆ, ಕಾಶ್ಮೀರ ಮಾತ್ರ ಭಿನ್ನವಾಗಿ ನಿಂತಿದೆ. ಅಲ್ಲಿ ನಿರಂತರವಾಗಿ ಸೇನೆಯ ಆಟಾಟೋಪ ನಡೆದಿದೆ. ಜೊತೆಗೆ ಎಗ್ಗಿಲ್ಲದಂತೆ ವಿಶೇಷ ನೆರವು ಕೂಡ ಆ ರಾಜ್ಯಕ್ಕೆ ಹರಿದು ಹೋಗಿದೆ. ಆದರೂ, ಭಾರತೀಯ ಮುಖ್ಯವಾಹಿನಿಯಲ್ಲಿ ಅದು ಒಂದಾಗಿ ನಿಂತಿಲ್ಲ. ಅದೇಕೆ ಎನ್ನುವುದನ್ನು ಸ್ವಾಮಿನಾಥನ್ ಅವರ ಲೇಖನದಲ್ಲಿ ಸ್ಪಷ್ಟವಾಗಿ ವಿಶ್ಲೇಷಿಸಿದ್ದಾರೆ. ಕಾಶ್ಮೀರದಲ್ಲಿ ನಡೆದ ಚುನಾವಣೆಗಳ ಪೈಕಿ ಕೇವಲ ಒಂದು ಅಥವಾ ಎರಡರಲ್ಲಿ ಪ್ರಾಮಾಣಿಕವಾದ ರೀತಿಯಲ್ಲಿ ಮತದಾನವಾಗಿದೆ. ಉಳಿದಂತೆ ಸಾಮೂಹಿಕವಾಗಿ ಕಳ್ಳ ಮತ ಹಾಕಿ, ಜನರ ಭಾವನೆಗಳಿಗೆ ವಿರೋಧಿಗಳಾಗಿದ್ದವರು ಅಧಿಕಾರಕ್ಕೆ ಬಂದು ಹೋಗಿದ್ದಾರೆ. ಇದರಿಂದಾಗಿ ಜನರ ಕೂಗಿಗೆ ಅಲ್ಲಿ ಬೆಲೆಯೇ ಇಲ್ಲದಂತಾಗಿದೆ. ಹಾಗೆ ಅಧಿಕಾರಕ್ಕೆ ಬಂದ ಸರ್ಕಾರಗಳು ಅಲ್ಲಿನ ಜನರ ಭಾವನೆಗಳೊಂದಿಗೆ ಸರಸವಾಡಿವೆ. ಕಾಶ್ಮೀರದಲ್ಲಿ ನಿಜವಾದ ಪ್ರಜಾಪ್ರಭುತ್ವ ಜಾರಿಯಾದಲ್ಲಿ ತಮ್ಮ ಅಸ್ತಿತ್ವಕ್ಕೆ ಎಲ್ಲಿ ಕುತ್ತು ಬರುವುದೋ? ಎಂಬ ಪ್ರಶ್ನೆ ಎಲ್ಲ ರಾಜಕೀಯ ಪಕ್ಷಗಳನ್ನು ಕಾಡಿದೆ. ಇದನ್ನು ೬೦ ವರ್ಷಗಳ ಐತಿಹಾಸಿಕ ಸೋಲು ಎಂದು ಒಪ್ಪಿಕೊಳ್ಳಬೇಕು. ಆ ಐತಿಹಾಸಿಕ ಸೋಲಿನ ಕೆಟ್ಟ ಮುಖವೇ ಈಗ ಕಾಣಿಸಿಕೊಳ್ಳುತ್ತಿರುವುದು. ನೆಹರು ಕುಟುಂಬ ಮತ್ತು ಕಾಶ್ಮೀರದ ನಡುವಿನ ಭಾವನಾತ್ಮಕ ನಂಟಕ್ಕೆ ಭಾರತ ತೆತ್ತಿರುವ ಬೆಲೆ ಸಾಕಷ್ಟಾಗಿದೆ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮತ್ತೊಂದು ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ನಾವೇಕೆ ಜಮ್ಮು ಮತ್ತು ಕಾಶ್ಮೀರವನ್ನು ಮೂರು ಪ್ರತ್ಯೇಕ ರಾಜ್ಯಗಳನ್ನಾಗಿ ವಿಂಗಡಿಸಬಾರದು? ಜಮ್ಮು, ಕಾಶ್ಮೀರ ಮತ್ತು ಲಡಾಖ್‌ಗಳೇ ಆ ಮೂರು ರಾಜ್ಯಗಳು. ಈ ವಿಂಗಡಣೆಯ ನಂತರ ಕಾಶ್ಮೀರದ ಜನತೆಯನ್ನು ಸ್ವತಂತ್ರವಾಗಿ ಬಿಟ್ಟು ಬಿಡಬಹುದಲ್ಲಾ? ಹೇಗಿದ್ದರೂ ಈಗ ಕೂಡ ಕಾಶ್ಮೀರದ ಬಹುತೇಕ ಭಾಗ ಭಾರತದ ಕೈಯಲ್ಲಿ ಇಲ್ಲ. ಉಳಿದಂತೆ ಜಮ್ಮು ಮತ್ತು ಲಡಾಖ್ ರಾಜ್ಯಗಳನ್ನು ಭಾರತದ ಭಾಗವಾಗಿಯೇ ಇಟ್ಟುಕೊಳ್ಳಬಹುದಲ್ಲಾ? ವಾಸ್ತವದ ನೆಲೆಗಟ್ಟಿನ ಮೇಲೆಯೇ ಹೇಳುವುದಾದರೆ ಕಾಶ್ಮೀರದ ಜನರು ಭಾರತದ ಬಗ್ಗೆ ದ್ವೇಷ ಕಾರುತ್ತಾರೆ. ಭಾರತದೊಂದಿಗೆ ಯಾವುದೇ ಸಂಬಂಧ ಇಲ್ಲ ಎಂದೇ ಅವರು ಹೇಳುತ್ತಾರೆ. ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಅವರಿಗೆ ಮೋಸ ಮಾಡಲಾಗಿದೆ ಎಂಬ ಭಾವನೆ ಈಗಲೂ ಕಾಶ್ಮೀರಿಗಳಲ್ಲಿ ದಟ್ಟವಾಗಿ ನೆಲೆಯೂರಿದೆ. ಈಗಿನ ಪರಿಸ್ಥಿತಿಯನ್ನು ನೋಡಿದಾಗ ಅಲ್ಲಿನ ಬಟ್ಟೆಯಂಗಡಿಗಳಲ್ಲಿ ಲಭ್ಯವಿದ್ದ ಎಲ್ಲ ಹಸಿರು ಬಟ್ಟೆಯನ್ನು ಕಾಶ್ಮೀರಿಗಳು ಖರೀದಿಸಿ ಪಾಕಿಸ್ತಾನದ ರಾಷ್ಟ್ರಧ್ವಜ ಮಾಡಿಕೊಂಡಂತಿದೆ. ಹೀಗಿರುವಾಗ ನಾವು ಮಾಡುತ್ತಿರುವ ಪ್ರಯತ್ನಗಳಿಗೆ ಬೆಲೆ ಎಲ್ಲಿದೆ?

ಕಾಶ್ಮೀರ ನಮ್ಮೊಂದಿಗೆ ಇರಬೇಕು ಎನ್ನುವ ನಿಟ್ಟಿನಲ್ಲಿ ನಾವು ಅವರನ್ನು ಎಷ್ಟು ಓಲೈಸಿಲ್ಲ. ಆದರೂ ಕಾಶ್ಮೀರಿಗಳ ಮನಸ್ಸು ಗೆಲ್ಲಲು ನಮಗೆ ಸಾಧ್ಯವಾಗಲಿಲ್ಲ. ಹಾಗಿರುವಾಗ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ವಾಸ್ತವದಿಂದ ದೂರವುಳಿದಂತಾಗುವುದಿಲ್ಲವೇ? ಒಂದು ಮಾತನ್ನು ಎಲ್ಲರೂ ನೆನಪಲ್ಲಿ ಇಟ್ಟುಕೊಳ್ಳಬೇಕು. ಸ್ವಾತಂತ್ರ್ಯಕ್ಕಾಗಿ ಭಾರಿ ಪ್ರಮಾಣದ ಬೆಲೆ ತೆರಬೇಕಾಗುತ್ತದೆ. ಕಾಶ್ಮೀರಕ್ಕೆ ಈಗ ಭಾರಿ ಪ್ರಮಾಣದ ವಿಶೇಷ ಅನುದಾನ ನೀಡಲಾಗುತ್ತಿದೆ. ೩೭೦ನೇ ವಿಧಿಯ ಪ್ರಕಾರ ಆ ರಾಜ್ಯಕ್ಕೆ ವಿಶೇಷ ಅಧಿಕಾರ ನೀಡಲಾಗಿದೆ. ಭಾರತ ದೇಶದ ಉಳಿದ ರಾಜ್ಯಗಳಿಗೆ ಹೋಲಿಸಿದಲ್ಲಿ ಕಾಶ್ಮೀರದ ಜನತೆಗೆ ತಲಾವಾರು ಸರ್ಕಾರ ನೀಡುವ ಸಬ್ಸಿಡಿ ಅತ್ಯಂತ ಹೆಚ್ಚಿನ ಪ್ರಮಾಣದ್ದಾಗಿದೆ. ಕಾಶ್ಮೀರದ ಜನತೆಯನ್ನು ಸಂತೋಷದಿಂದ ಇಡುವ ಸಲುವಾಗಿ ಕಳೆದ ಹಲವಾರು ಶತಮಾನಗಳಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡಬಾರದ್ದನ್ನೆಲ್ಲ ಮಾಡಿಯಾಗಿದೆ. ಈಗ ಕಾಶ್ಮೀರದ ಜನತೆ ಅವರಿಗೆ ಸ್ವಾತಂತ್ರ್ಯ ಸಿಕ್ಕ ಮೇಲೆ ಹೇಗೆ ಆಳಿಕೊಳ್ಳುತ್ತಾರೆ ಎಂದು ಕುತೂಹಲದಿಂದ ವೀಕ್ಷಿಸುವ ಕಾಲ ಹತ್ತಿರವಾಗಿದೆ. ಅವರ ಆರ್ಥಿಕ ಸಂಪನ್ಮೂಲವನ್ನು ಹೇಗೆ ನಿರ್ವಹಿಸುತ್ತಾರೆ ಮತ್ತು ಅವರು ಬಲವಾಗಿ ನಂಬಿರುವ ಪಾಕಿಸ್ತಾನ ಕಾಶ್ಮೀರಕ್ಕೆ ಎಷ್ಟರ ಮಟ್ಟಿನ ನೆರವು ನೀಡುತ್ತದೆ ಎನ್ನುವುದನ್ನು ಕಾದು ನೋಡಬೇಕು. ಸ್ವಾತಂತ್ರ್ಯದ ನಂತರ ಈಗ ಕೂಗೆಬ್ಬಿಸುತ್ತಿರುವ ಜನಸಾಮಾನ್ಯರು ಎಷ್ಟರ ಮಟ್ಟಿಗೆ ಸುಖ ಸಂತೋಷದಿಂದ ಜೀವನ ಸಾಗಿಸುತ್ತಾರೆ ಎನ್ನುವುದು ಕೂಡ ಗಮನಿಸಬೇಕಾದ ಅಂಶ. ಭಾರತದೊಂದಿಗಿನ ಜೀವನ ಉತ್ತಮವೇ ಅಥವಾ ಸ್ವತಂತ್ರ ಹಕ್ಕಿಯಂತೆ ಹಾರಾಡುವುದು ಸೂಕ್ತವೇ ಎನ್ನುವುದನ್ನು ಅವರೇ ಅರ್ಥ ಮಾಡಿಕೊಳ್ಳಲು ಬಿಡಬೇಕು. ಗಡಿಯಾಚೆಗಿನ ಕಾಶ್ಮೀರದಲ್ಲಿರುವ ಜನರ ಆರ್ಥಿಕ ದುಸ್ಥಿತಿ ಎಂತಹುದು ಎನ್ನುವುದು ಭಾರತದಲ್ಲಿರುವ ಕಾಶ್ಮೀರಿಗಳಿಗೆ ಸರಿಯಾಗಿಯೇ ತಿಳಿದಿದೆ. ಭಾರತದ ಆರ್ಥಿಕ ಸುಸ್ಥಿತಿ ಹಾಗೂ ಪಾಕಿಸ್ತಾನದ ದಾರಿದ್ರ್ಯ ಕೂಡ ಅವರಿಗೆ ಸ್ಪಷ್ಟವಾಗಿ ಗೊತ್ತಿದೆ. ಅದೂ ಅಲ್ಲದೇ ಭಾರತ ಅಥವಾ ಪಾಕಿಸ್ತಾನದ ನೆರವಿಲ್ಲದೇ ಕಾಶ್ಮೀರ ಸ್ವತಂತ್ರವಾಗಿ ತನ್ನ ಕಾಲ ಮೇಲೆ ನಿಲ್ಲಲು ಸಾಧ್ಯವಿಲ್ಲ ಎನ್ನುವುದು ಕೂಡ ಪ್ರತ್ಯೇಕತಾವಾದದ ಕೂಗೆಬ್ಬಿಸುತ್ತಿರುವವರಿಗೆ ತಿಳಿದೇ ಇದೆ. ಇನ್ನು ಪ್ರತ್ಯೇಕತೆಗಾಗಿ ಟೊಂಕ ಕಟ್ಟಿ ನಿಂತಿರುವ ನಾಯಕರಲ್ಲಿ ಕೂಡ ಒಗ್ಗಟ್ಟಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆ ನಾಯಕರ ಸಾಮರ್ಥ್ಯದ ಬಗ್ಗೆ ಕೂಡ ಹಲವಾರು ಪ್ರಶ್ನೆಗಳು ಈಗಲೇ ಜೀವಂತವಾಗಿವೆ. ಇಷ್ಟೆಲ್ಲ ವಿಷಯಗಳ ಅರಿವು ಇದ್ದ ಮೇಲೂ, ಸ್ವಾತಂತ್ರ್ಯ ಬೇಕೆಂದಾದಲ್ಲಿ ಕೊಟ್ಟು ಬಿಡೋಣ. ನಮ್ಮಷ್ಟಕ್ಕೆ ನಾವು ನಮ್ಮದೇ ಆದ ವಿಷಯಗಳತ್ತ ಹೆಚ್ಚಿನ ಗಮನ ಹರಿಸೋಣ!!

ಯಾವುದೇ ಕಾರಣಕ್ಕೆ ಒಂದು ದೇಶ ಯಾವುದೋ ಒಂದು ಪ್ರಾಂತ್ಯದ ಮೇಲೆ ಒತ್ತಾಯಪೂರ್ವಕಾಗಿ ತನ್ನನ್ನು ಹೇರುವುದು ಸರಿಯಲ್ಲ ಎನ್ನುವುದು ಶತಮಾನಗಳಿಂದ ಮೂಡಿಬಂದಿರುವ ಭಾವನೆ. ಈ ಕಾರಣದಿಂದಾಗಿಯೇ ಕಣಿವೆಯಲ್ಲಿ ರಕ್ತದ ಹೊಳೆ ಹರಿದಾಗಿದೆ. ಲೆಕ್ಕವಿಲ್ಲದಷ್ಟು ಪ್ರತಿಭಟನೆಗಳಾಗಿವೆ. ದೊಂಬಿಗಳಾಗಿವೆ. ಯುದ್ಧ ಕೂಡ ನಡೆದುಹೋಗಿದೆ. ಹೀಗಿರುವಾಗ ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡಿ ಭಾರತವೇಕೆ ಜಗತ್ತಿಗೆ ಮಾದರಿಯಾಗಬಾರದು? ಖಂಡಿತ ಇದು ಅಷ್ಟು ಸುಲಭದ ಮಾತಲ್ಲ. ಒಬ್ಬ ನಿಜವಾದ ಭಾರತೀಯನ ಪಾಲಿಗೆ ದೇಶವನ್ನು ಒಡೆಯುವುದು ಎಣಿಸಿಕೊಳ್ಳಲೂ ಸಾಧ್ಯವಿಲ್ಲ. ಏಕೆಂದರೆ ಕಾಶ್ಮೀರ ಎನ್ನುವುದು ನಮ್ಮ ಮುಕುಟದ ಮಣಿ. ನಮ್ಮ ದೇಶದ ಹೆಮ್ಮೆ. ನಮ್ಮ ಭಾವನೆಗಳಿಗೆ ಸಾಕಷ್ಟು ಧಕ್ಕೆಯಾಗಬಹುದು. ಆದರೂ, ಎಷ್ಟು ದಿನ-ವರ್ಷ-ದಶಮಾನಗಳ ಕಾಲ ಒತ್ತಾಯ ಪೂರ್ವಕವಾಗಿ ಕಾಶ್ಮೀರವನ್ನು ಬಿಗಿಮುಷ್ಟಿಯಲ್ಲಿ ಇಟ್ಟುಕೊಳ್ಳಲು ಸಾಧ್ಯ. ಕಾಶ್ಮೀರವನ್ನು ಪ್ರತ್ಯೇಕವಾಗಿಸುವುದು ಭಾರತದ ಪಾಲಿಗೆ ವರವಾಗಲೂಬಹುದು. ಒಂದಂತೂ ನಿಜ. ಸ್ವಾತಂತ್ರ್ಯಕ್ಕಾಗಿ ಕೂಗು ಹೊಡೆಯುವುದು ಬೇರೆ. ಸ್ವಾತಂತ್ರ್ಯ ಸಿಕ್ಕ ಮೇಲೆ ಅದನ್ನು ಉಳಿಸಿಕೊಂಡು, ಪೋಷಿಸುವುದು ಬೇರೆ. ಒಮ್ಮೆ ಸ್ವಾತಂತ್ರ್ಯ ನೀಡಿದ ಮೇಲೆ, ಅದರ ತಪ್ಪಿನ ಅರಿವಾಗಿ ಕಾಶ್ಮೀರ ಮತ್ತೆ ಭಾರತವನ್ನು ಮನಃಪೂರ್ವಕವಾಗಿ ಮರಳಿ ಅಪ್ಪಿಕೊಳ್ಳಲೂಬಹುದಲ್ಲ. ಹಾಗಾದಲ್ಲಿ ಕಾಶ್ಮೀರ ಮುಕ್ತ ಮನಸ್ಸಿನಿಂದ ಭಾರತದೊಂದಿಗೆ ವಿಲೀನವಾದಂತಾಗುತ್ತದೆ. ಹಾಗಾಗದೇ ಹೋದಲ್ಲಿ ಕೂಡ, ಎಲ್ಲರೂ ಸಂತೋಷದಿಂದ ಬದುಕಲು ಸಾಧ್ಯವಾಗುತ್ತದಲ್ಲಾ! ಕೊನೆಯ ಪಕ್ಷ ಭಾರತೀಯರು ಮುಕ್ತವಾಗಿ ಕಾಶ್ಮೀರ ಕಣಿವೆಗೆ ಹೋಗಿ ಅಲ್ಲಿನ ಸೊಬಗನ್ನು ಅನುಭವಿಸಿ ಬರಬಹುದಲ್ಲ.

ಟಿಎಸ್‌ಐ

ಮುಖಪುಟ ಲೇಖನದಲ್ಲಿ ಇನ್ನೇನಿದೆ

ಧಾರ್ಮಿಕ ಅಂಧಾರಾಧನೆಯ ಸೋಗಿನಲ್ಲಿ...

  ಭೂ ಲೋಕದ ಸ್ವರ್ಗಕ್ಕೆ ಕಿಚ್ಚು ಹಚ್ಚಿದ ಧರ್ಮ

  ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡಬಾರದೇಕೆ? : ಅರಿಂದಮ್ ಚೌಧುರಿ,

  ವಿಫಲ ನಾಯಕತ್ವಕ್ಕೆ ಸ್ಪಷ್ಟ ಉದಾಹರಣೆ : ಅಜಯ್ ಸಾಹ್ನಿ

  ಪ್ರಾಂತೀಯ ಅನನ್ಯತೆ, ಆಶೋತ್ತರ ಗೌರವಿಸಿ : ಬಲರಾಜ್ ಪುರಿ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .