ಇದು ನಮ್ಮ ವಿಶೇಷ ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಮುಖಪುಟ ಲೇಖನ
ಧಾರ್ಮಿಕ ಅಂಧಾರಾಧನೆಯ ಸೋಗಿನಲ್ಲಿ...
 
ಕ್ಯಾಮರಾ ಮುಂದೆ ಬಂದಾಗ ಪ್ರತಿಭಟನೆಯನ್ನು ಉಗ್ರಗೊಳಿಸುವುದು ಆ ಹೊತ್ತಿಗೆ ಖುಷಿ ನೀಡಬಹುದು. ಆದರೆ ಕಾಶ್ಮೀರ ಎತ್ತ ಸಾಗುತ್ತಿದೆ ಎಂಬ ಅರಿವು ಈ ಪ್ರತಿಭಟನಾಕಾರರಿಗೆ ಇದೆಯೇ?

|

ಭೂ ಲೋಕದ ಸ್ವರ್ಗಕ್ಕೆ ಕಿಚ್ಚು ಹಚ್ಚಿದ ಧರ್ಮ

ಜಮ್ಮು ಮತ್ತು ಕಾಶ್ಮೀರದ ಹಿಂಸಾ ಪ್ರತಿಭಟನೆಯ ನಂತರ ಕಿಶ್ತ್‌ವಾರ್ ಕೋಮುದ್ವೇಷದ ದಳ್ಳುರಿಯಲ್ಲಿ ಬೇಯುತ್ತಿದೆ
ಎನ್ನುತ್ತಾರೆ ಅಲ್ಲಿಗೆ ಭೇಟಿಯಿತ್ತ ಜುಬೇರ್ ಎ ದಾರ್

ದೇವ ದತ್‌ನ ವಯಸ್ಸು 70, ಘುಲಾಮ್ ರಸೂಲ್ ಕಿಚ್ಲೂನ ವಯಸ್ಸು 57; ಇಬ್ಬರ ಮನೆಗಳೂ ಆಜುಬಾಜಿನಲ್ಲೇ ಇವೆ. ತಲೆತಲಾಂತರದಿಂದ ದತ್ ಮತ್ತು ಕಿಚ್ಲೂ ಕುಟುಂಬಗಳು ಕಷ್ಟ-ಸುಖಗಳನ್ನು ಪರಸ್ಪರ ಹಂಚಿಕೊಳ್ಳುತ್ತಲೇ ಸಾಗಿಬಂದಿವೆ. ಇನ್ನು ದೇವ ದತ್ತ ಮತ್ತು ಘುಲಾಮ್ ರಸೂಲ್ ಅವರು ಸ್ವಂತ ಅಣ್ಣ ತಮ್ಮಂದಿರಂತೆ ಬೆಳೆದು ಬಂದಿದ್ದಾರೆ.

ಇಲ್ಲಿಯವರೆಗೆ ಮಿತ್ರರೂ, ನೆರೆ-ಹೊರೆಯವರೂ ಆಗಿದ್ದ ಇವರು ಈಗ ಇದ್ದಕ್ಕಿದ್ದಂತೆಯೇ 'ಹಿಂದೂ' ಮತ್ತು 'ಮುಸ್ಲಿಂ' ಆಗಿಬಿಟ್ಟಿದ್ದಾರೆ.

ಅಮರನಾಥ್ ಜಮೀನು ವರ್ಗಾವಣೆ ವಿವಾದದಿಂದಾಗಿ ಹಿಮಾಲಯದ ಸೆರಗಿನ ಈ ಪುಟ್ಟ ಪಟ್ಟಣ ಇಬ್ಭಾಗಗೊಂಡಿದೆ; ಇಲ್ಲೀಗ ರಾಜಕೀಯ ಮತ್ತು ಜನರ ನಿಷ್ಠೆ ಕೇವಲ ಧರ್ಮದಿಂದಲೇ ನಿರ್ಣಯವಾಗುತ್ತದೆ.

ಈಗಲೂ ಸ್ನೇಹಿತರಾಗೇ ಇರುವ ದತ್ ಮತ್ತು ಕಿಚ್ಲೂ ಅವರು ಜಮ್ಮು ಮತ್ತು ಕಾಶ್ಮೀರದ ಘಟನೆಗಳನ್ನು ತಮ್ಮದೇ ದೃಷ್ಟಿಯಲ್ಲಿ ವಿಶ್ಲೇಷಿಸುತ್ತಾ ಚರ್ಚೆಯಲ್ಲಿ ತೊಡಗುತ್ತಾರೆ. ದತ್ ಪ್ರಕಾರ ಅಮರನಾಥ್ ದೇವಾಲಯಕ್ಕೆ ಜಮೀನು ಹಸ್ತಾಂತರಿಸುವ ಆದೇಶ ನೀಡಿ ನಂತರ ವಾಪಸು ಪಡೆದುದು ಹಿಂದೂ ವಿರೋಧಿ ನಿಲುವು. ಆದ್ದರಿಂದ ಈ ಕೂಡಲೇ ದೇವಾಲಯಕ್ಕೆ ಜಮೀನು ನೀಡಬೇಕು ಎಂಬುದು ದತ್ ಅಭಿಪ್ರಾಯ. ಆದರೆ ಕಿಚ್ಲೂ ಹೇಳುವುದೇ ಬೇರೆ. ಹಿಂದೂ ಮೂಲಭೂತವಾದಿಗಳು ಅನಗತ್ಯವಾಗಿ ಗೊಂದಲ ಎಬ್ಬಿಸುತ್ತಿದ್ದಾರೆ. ಆ ಜಮೀನನ್ನು ಯಾತ್ರಾರ್ಥಿಗಳು ಅನಾದಿ ಕಾಲದಿಂದ ಬಳಸುತ್ತಲೇ ಬಂದಿದ್ದಾರೆ. ಅದನ್ನು ದೇವಾಲಯ ಮಂಡಳಿಯ ಮಾಲೀಕತ್ವಕ್ಕೆ ಈಗ ಅದೇಕೆ ಹಸ್ತಾಂತರಿಸಬೇಕು ಎಂಬುದು ಆತನ ಪ್ರಶ್ನೆ.

ವಿಪರ್ಯಾಸವೆಂದರೆ ಇಬ್ಬರ ಚಿಂತನೆಯೂ ತಪ್ಪೇ. ಆದರೆ ನಡೆದ ಘಟನಾವಳಿಗಿಂತ ಅದನ್ನು ಹೇಗೆ ಅರ್ಥೈಸಲಾಗುತ್ತದೆ ಎಂಬುದು ಇಲ್ಲಿ ಮುಖ್ಯ. ಹೀಗಾಗಿ ಜಮೀನು ಹಸ್ತಾಂತರ ಪ್ರಕರಣ ಜಮ್ಮುವನ್ನು ಕೋಮು ನೆಲೆಯಲ್ಲಿ ಸ್ಪಷ್ಟವಾಗಿ ಇಬ್ಭಾಗಿಸಿದೆ. ಜಮ್ಮು ನಗರ, ಕಥುವಾ, ಸಾಂಭಾ ಮತ್ತು ಉಧಾಮ್‌ಪುರ್‌ಗಳಲ್ಲಿ ಹಿಂದೂ ಬಹುಸಂಖ್ಯಾತರಿದ್ದರೆ, ರಾಜೌರಿ, ಪೂಂಚ್, ದೋಡಾ, ಕಿಶ್ತ್‌ವಾರ್, ರಂಬನ್ ಮತ್ತು ರಿಯಾಸಿಗಳಲ್ಲಿ ಮುಸ್ಲಿಮರೇ ಬಹುಸಂಖ್ಯಾತರು. ಸಂಪೂರ್ಣ ಜಮ್ಮು ಪ್ರಾಂತ್ಯ ಅಪಾಯಕಾರಿ ಮಟ್ಟದಲ್ಲಿ 'ದ್ವಿ-ರಾಷ್ಟ್ರ' ಸಿದ್ಧಾಂತವನ್ನು ಪುನರುಚ್ಚರಿಸುತ್ತಿದೆ. ಇದು ಮತ್ತೊಂದು ವಿಭಜನೆಗೆ ದಾರಿ ಮಾಡಿಕೊಡುತ್ತಿದೆ. ಕಿಶ್ತ್‌ವಾರ್ ಪ್ರದೇಶವಂತೂ ಕೋಮು ದಳ್ಳುರಿಯಲ್ಲಿ ಬೇಯುತ್ತಿದೆ. ಕಾಶ್ಮೀರದಲ್ಲಿ ಹುರಿಯತ್ ನಾಯಕ ಶೇಖ್ ಅಜೀಜ್ ಹತ್ಯೆಯಾದ ಮರುದಿನವೇ ಅಂದರೆ ಆಗಸ್ಟ್ 12ರಂದು ಹೊತ್ತಿಕೊಂಡ ಕೋಮುಜ್ವಾಲೆಯಲ್ಲಿ ಇಬ್ಬರು ಮೃತಪಟ್ಟು 40 ಮಂದಿ ಗಾಯಗೊಂಡರು.

ಆದರೆ ಕೋಮು ಗಲಭೆ ಇದ್ದಕ್ಕಿದ್ದಂತೆಯೇ ಭುಗಿಲೇಳಲಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ರಮವಾಗಿ ಜಮೀನು ನೀಡಬೇಕು ಮತ್ತು ನೀಡಬಾರದು ಎಂಬ ಪ್ರತಿಭಟನೆ ನಡೆಯುತ್ತಿರುವಾಗಲೇ ಕಿಶ್ತ್‌ವಾರ್‌ನಲ್ಲಿ ಕೋಮು ಭಾವನೆ ಒಳಗೊಳಗೇ ಬೇಯುತ್ತಿತ್ತು. ಕಾಶ್ಮೀರ ಕಣಿವೆಯಲ್ಲಿ ಪ್ರತಿಭಟನೆಗಳು ಭುಗಿಲೆದ್ದಾಗ ಹುರಿಯತ್ ಕಾರ್ಯಕರ್ತರ ನೇತೃತ್ವದಲ್ಲಿ ಕಿಶ್ತ್‌ವಾರ್ ಮುಸ್ಲಿಮರೂ ಕೈಜೋಡಿಸಿದರು; ಅದೇ ರೀತಿ ಆದೇಶ ವಾಪಸು ತೆಗೆದುಕೊಂಡ ನಂತರ ಜಮ್ಮು ಪ್ರಾಂತ್ಯದಲ್ಲಿ ಹಿಂದೂಗಳು ಪ್ರತಿಭಟನೆ ನಡೆಸಿದಾಗ ಕಿಶ್ತ್‌ವಾರ್‌ನ ಹಿಂದೂಗಳೂ ಕೈಜೋಡಿಸಿದರು. ಆರ್‌ಎಸ್‌ಎಸ್‌ನ ಮಾಜಿ ಪ್ರಚಾರಕರ ನೇತೃತ್ವದಲ್ಲಿ ಅಮರನಾಥ ಸಂಘರ್ಷ ಸಮಿತಿಯ ಸ್ಥಳೀಯ ಘಟಕಗಳು ನೇಮಕಗೊಂಡವು. ಮುಸ್ಲಿಂ ಸಮುದಾಯದ ಪಾಕ್ ಪರ ಮತ್ತು ಸ್ವಾತಂತ್ರ್ಯ ಪರ ಘೋಷಣೆಗಳ ವಿರುದ್ಧ ಪ್ರತಿ ಘೋಷಣೆಗಳು ರೂಪುಗೊಂಡವು: ಪಾಕಿಸ್ತಾನ ಹುಡುಕುವವರಿಗೆ ಸಿಗುವುದು ಸ್ಮಶಾನ ('ಜೋ ಢೂಂಡೇಗಾ ಪಾಕಿಸ್ತಾನ್, ಉಸ್‌ಕೋ ಮಿಲೇಗಾ ಕಬ್ರಿಸ್ತಾನ್'). ಅಷ್ಟೇ ಅಲ್ಲ, ಸೇನಾ ಪಡೆ ಕೂಡಾ ನಮ್ಮೊಂದಿಗೆ (ಹಿಂದೂಗಳೊಂದಿಗೆ) ಇದೆ ಎಂಬ ಹಿಂದೂಗಳ ಘೋಷಣೆ ಮತ್ತಷ್ಟು ಗಾಬರಿ ಹುಟ್ಟಿಸಿತು ಎನ್ನುತ್ತಾನೆ ಮುಸ್ಲಿಂ ಯುವಕ ತೌಕೀರ್.

ಆದರೆ ಕರ್ಫ್ಯೂ ವಿರೋಧಿಸಿ ಮುಸ್ಲಿಂ ಯುವಕರು, ಹೆಂಗಸರು, ಮಕ್ಕಳು, ವೃದ್ಧರು ಎಲ್ಲಾ ಕಿಶ್ತ್‌ವಾರ್‌ನ ಬೀದಿ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಮೇಲಷ್ಟೇ ಕೋಮು ದಳ್ಳುರಿ ಸಿಡಿದೆದ್ದಿತು.

ಪರಿಸ್ಥಿತಿಯ ಸೂಕ್ಷ್ಮತೆ ಗಮನಿಸಿ ನಾವು ಕಿಶ್ತ್‌ವಾರ್ ಪಟ್ಟಣದಾದ್ಯಂತ ಕರ್ಫ್ಯೂ ಘೋಷಿಸಿದ್ದೆವು. ಇದಕ್ಕಾಗಿ ಸೇನಾಪಡೆಯ ಐದು ತಂಡಗಳನ್ನು ಕೂಡಲೇ ಒದಗಿಸುವಂತೆ ಕೇಳಿಕೊಂಡಿದ್ದೆವು ಎನ್ನುತ್ತಾರೆ ಕಿಶ್ತ್‌ವಾರ್ ಎಸ್‌ಪಿ ಡಾ. ಹಸೀಬ್ ಮುಘಲ್. ಆದರೆ ಮುಂಜಾನೆ ಐದು ಗಂಟೆಯಾದರೂ ಸೈನಿಕರ ತಂಡ ಬರಲೇ ಇಲ್ಲ. ಹಿಂದೂ ಸಮುದಾಯ ಹೆಚ್ಚಾಗಿದ್ದ ಹಡಿಯಾಲ್ ಚೌಕ್ ಕಡೆಗೆ ಪ್ರತಿಭಟನಾಕಾರರು ನುಗ್ಗುತ್ತಲೇ ಇದ್ದರು. ಜಿಲ್ಲಾ ಕೇಂದ್ರದಲ್ಲಿ ಲಭ್ಯವಿದ್ದ ಪೊಲೀಸ್ ಸಿಬ್ಬಂದಿ ಸುಮಾರು 60 ಅಷ್ಟೇ. ಅವರಿಂದ ಅಷ್ಟೊಂದು ಮಂದಿ ಪ್ರತಿಭಟನಾಕಾರರನ್ನು ತಡೆಯುವುದು ಅಸಾಧ್ಯವಿತ್ತು. ಅಲ್ಲದೆ ಪ್ರತಿಭಟನಾಕಾರರಲ್ಲಿ ಮಕ್ಕಳು, ವೃದ್ಧರು, ಹಸುಗೂಸುಗಳನ್ನು ಎತ್ತಿಕೊಂಡಿದ್ದ ಮಹಿಳೆಯರೂ ಇದ್ದಿದ್ದರಿಂದ ಅವರನ್ನು ತಡೆಯುವುದು ಕಷ್ಟವಿತ್ತು ಎಂಬುದು ಮುಘಲ್ ವಿವರಣೆ.

ಪ್ರತಿಭಟನಾಕಾರರು ಅಲ್ಲಿಗೆ ಸಮೀಪಿಸಿದಾಗ ಹಿಂದೂ ಯುವಕರು ಆಗಲೇ ಚೌಕ್‌ನಲ್ಲಿ ಸೇರಿದ್ದರು. ಅವರು ಕಲ್ಲು ತೂರಲಾರಂಭಿಸಿದರು. ಪ್ರತಿಯಾಗಿ ಮುಸ್ಲಿಮರೂ ಕಲ್ಲು ತೂರಿದರು. ಆ ಸಂದರ್ಭದಲ್ಲಿ ಪೊಲೀಸರು ಮಧ್ಯೆ ಪ್ರವೇಶಿಸಿ ಎರಡೂ ಗುಂಪುಗಳನ್ನು ಹಿಂದಕ್ಕಟ್ಟಿದರು ಎಂಬುದು ಹಡಿಯಾಲ್ ಚೌಕ್‌ನಲ್ಲಿ ವಾಸಿಸುವ ಬಸ್ ಕಂಡಕ್ಟರ್ ಆಜಾದ್ ಅಹ್ಮದ್ ನಕೀರ್ ಹೇಳಿಕೆ.

ಕೂಡಲೇ ನನ್ನ ನೆರೆಯ ಮುಸ್ಲಿಂ ಮನೆ ಮೇಲೆ ಒಂದು ಗ್ರೆನೇಡ್ ತೂರಿಬಂತು. ಮತ್ತೊಂದು ಗ್ರೆನೇಡ್ ಮುಸ್ಲಿಂ ಗುಂಪಿನ ಮೇಲೆ ತೂರಲಾಯಿತು ಎನ್ನುತ್ತಾರೆ ನ್ಯಾಷನಲ್ ಕಾನ್ಫರೆನ್ಸ್ ಕಾರ್ಯಕರ್ತ ಶೇಖ್ ಫಯಾಜ್ ಉಲ್ಲಾ. ಅವರ ಪ್ರಕಾರ: ಮುಸ್ಲಿಂ ಗುಂಪನ್ನು ಅಲ್ಲಿಂದ ಹಿಂದಕ್ಕೆ ಅಟ್ಟಿದ ಮೇಲೆ ಹಿಂದೂ ಜನರೆಲ್ಲಾ ಮತ್ತೆ ಒಂದುಗೂಡಿದರು. ಹಿಂದೂ ಪ್ರಾಬಲ್ಯದ ಆ ಪ್ರದೇಶದಲ್ಲಿದ್ದ ಐದು ಮುಸ್ಲಿಂ ಮನೆಗಳ ಮೇಲೆ 'ವ್ಯವಸ್ಥಿತ ದಾಳಿ' ನಡೆಸಲು ಸಂಚು ರೂಪಿಸಿದರು.

ಈ ಹಿಂದೆ ಕೂಡಾ ನನ್ನ ಮನೆ ಮೇಲೆ ದಾಳಿ ನಡೆದಿತ್ತು. ಆಗೆಲ್ಲಾ ಕೇವಲ ಕಲ್ಲು ತೂರಾಟ ನಡೆಸಲಾಗಿತ್ತು. ಆದರೆ ಈ ಬಾರಿ ಸಂಪೂರ್ಣವಾಗಿ ಸುಟ್ಟು ಹಾಕಲಾಯಿತು. ನನ್ನ ಕಾರಿನ ಕೆಳಗೆ ಸೌದೆಗಳನ್ನಿಟ್ಟು, ಮೇಲೆ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದಾರೆ. ನಮ್ಮ ಅದೃಷ್ಟಕ್ಕೆ ಒಬ್ಬ ಮುಸ್ಲಿಂ ಡಿಸಿಪಿ ನಮ್ಮ ನೆರವಿಗೆ ಬಂದರು. ಹೀಗಾಗಿ ನಾವು ಮನೆ ಹಿಂದಿನ ಕಂಪೌಂಡ್ ಹಾರಿ ತಪ್ಪಿಸಿಕೊಂಡು ಹೋಗಲು ಸಾಧ್ಯವಾಯಿತು. ಆದರೆ ದಾಳಿ ಮುಂದುವರಿಯಿತು. ನನ್ನ ಮನೆಯನ್ನು ಸಂಪೂರ್ಣವಾಗಿ ಭಸ್ಮ ಮಾಡಲಾಯಿತು ಎಂಬ ಕಂಬನಿ ಮಿಡಿಯುತ್ತಾನೆ ಅಲ್ಲಿನ ನಿವಾಸಿ ಫಯಾಜ್ ಉಲ್ಲಾ.

ಅತ್ತ ಮುಸ್ಲಿಂ ಸಮುದಾಯ ಒಂದು ಹಿಂದೂ ಅಂಗಡಿಯನ್ನು ಸಂಪೂರ್ಣ ಭಸ್ಮಗೊಳಿಸಿ ಮತ್ತಷ್ಟು ದಾಳಿಗೆ ಮುಂದುವರಿದಿತ್ತು. ಆಗಲೇ ಮುಸ್ಲಿಂ ಸಮುದಾಯದ ಮೇಲೆ ಗುಂಡು ದಾಳಿ ಆರಂಭವಾಯಿತು. ದಾಳಿಯಲ್ಲಿ ಇಬ್ಬರು ಯುವಕರು ಮೃತಪಟ್ಟರು. ಎಸ್‌ಪಿ ಹೇಳುವಂತೆ 12 ಬೋರ್ ರೈಫಲ್‌ನಿಂದ ಒಬ್ಬ ಯುವಕ ಮೃತಪಟ್ಟ. ಮತ್ತೊಬ್ಬ ಯುವಕ ಯಾವ ರೈಫಲ್‌ನಿಂದ ಮೃತಪಟ್ಟಿದ್ದಾನೆಂಬುದು ವೈದ್ಯಕೀಯ ಪರೀಕ್ಷೆಗಳಿಂದ ಇನ್ನೂ ಖಚಿತವಾಗಿಲ್ಲ. ಸೇನಾ ಪಡೆ ದೊಂಬಿಯನ್ನು ನಿಯಂತ್ರಿಸಲು ಮುಂದಾಗಲೇ ಇಲ್ಲ. ಅವರು ಗೋಲಿಬಾರ್ ಆದೇಶಕ್ಕಾಗಿ ಕಾಯುತ್ತಿದ್ದರು. ಆದರೆ ಹಾಗೆ ಆಜ್ಞೆ ಮಾಡುವುದು ನಮಗೆ ಸಾಧ್ಯವಿರಲಿಲ್ಲ. ಹಿಂಸಾಕೃತ್ಯವನ್ನು ತಡೆಗಟ್ಟಲು ಸೇನಾಪಡೆ ಬೇರಾವುದೇ ಕ್ರಮ ಅನುಸರಿಸಲೇ ಇಲ್ಲ ಎನ್ನುತ್ತಾರೆ ಅವರು.

ಹೀಗೆ ದೊಂಬಿ ನಡೆಯುತ್ತಿದ್ದಾಗ ದೇವ ದತ್ ಬಾಗಿಲು ಭದ್ರಪಡಿಸಿಕೊಂಡು ಮನೆಯೊಳಗೇ ಇದ್ದರು. ನನ್ನ ರಕ್ಷಣೆ ರಸೂಲ್‌ನಂತಹ ಮುಸ್ಲಿಮರ ಕೈಲೇ ಇದೆ ಎಂದು ದತ್ ಹೇಳುತ್ತಿದ್ದಂತೆಯೇ ರಸೂಲ್‌ನ ಕೈಗಳು ದತ್‌ನ ತೋಳುಗಳನ್ನು ಬಳಸುತ್ತವೆ. ಇಬ್ಬರೂ ತಮ್ಮ- ತಮ್ಮ ಮನೆಯ ಜಗುಲಿಯ ಮೇಲೆ ಕುಳಿತು ದೊಂಬಿ ನಡೆಯಲು ಕಾರಣವಾದ ಘಟನೆಗಳ ಬಗ್ಗೆ ಚರ್ಚೆ ಮುಂದುವರಿಸುತ್ತಾರೆ. ಹಳೆಯ ತಲೆಮಾರಿನವರು ಕೋಮುಸೌಹಾರ್ದತೆಗೆ ಸಾಕಷ್ಟು ಪೋಷಣೆ ನೀಡಿದರೂ ಯುವಜನಾಂಗದಲ್ಲಿ ದ್ವೇಷ ಬಲಿಯುತ್ತಲೇ ಇದೆ. ಇದಕ್ಕೆ ನೀರೆರೆಯುತ್ತಿರುವುದು ಜಮ್ಮು ಮತ್ತು ಕಾಶ್ಮೀರದ ರಾಜಕೀಯ ನಾಯಕತ್ವ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಅತ್ತ ಮುಸ್ಲಿಂ ಯುವಕರು, 'ಭಾರತೀಯ ಸೇನಾಪಡೆ ಹಿಂದೂಗಳ ಪರ ಇದೆ; ಹಿಂದೂಗಳಿಗೆ ಶಸ್ತ್ರಾಸ್ತ್ರ ಸರಬರಾಜು ಮಾಡುತ್ತಿದೆ' ಎಂಬ ನಂಬಿಕೆಯಲ್ಲಿದೆ. ಇನ್ನು ಹಿಂದೂ ಯುವಕರು, 'ಮುಸ್ಲಿಮರಿಗೆ ಅಕ್ರಮ ಶಸ್ತ್ರಾಸ್ತ್ರ ಸುಲಭವಾಗಿ ಸಿಗುತ್ತದೆ. ನಮ್ಮ ಜೀವ ಉಳಿಸಿಕೊಳ್ಳಬೇಕಾದರೆ ಪ್ರತಿದಾಳಿ ನಡೆಸಲು ಸಜ್ಜಾಗುವುದೊಂದೇ ಮಾರ್ಗ' ಎಂದು ಚಿಂತಿಸುತ್ತಾರೆ.

ಏಟಿಗೆ ಎದಿರೇಟು ನೀಡಿದರಷ್ಟೇ ಉಳಿಗಾಲ. ನಿಮ್ಮ ಮನೆಗೆ ಯಾರಾದರೂ ಕೊಳ್ಳಿ ಇಟ್ಟರೆ ನೀವು ಯಾವ ರೀತಿ ಪ್ರತಿಕ್ರಿಯಿಸುತ್ತೀರಿ? ಎಂದು ಪ್ರಶ್ನಿಸುತ್ತಾರೆ ಸಂಘರ್ಷ ಸಮಿತಿಯ ಸ್ಥಳೀಯ ಮುಖಂಡ ರಾಜಿಂದರ್ ಸಿಂಗ್. ಗಲಭೆ ನಡೆದ ಪ್ರದೇಶದಲ್ಲೇ ಅವರ ಮನೆಯೂ ಇದೆ. ಜಿಲ್ಲೆಯ ಹಿಂದೂ ಸಮುದಾಯವಿರುವ 355 ಗ್ರಾಮಗಳಲ್ಲೂ 'ಗ್ರಾಮ ರಕ್ಷಣಾ ಸಮಿತಿ'ಗಳನ್ನು ರಚಿಸಲಾಗಿದೆ. ಆ ಸಮಿತಿಗಳ ಜೊತೆ ಸಿಂಗ್ ಸತತ ಸಂಪರ್ಕದಲ್ಲಿರುತ್ತಾರೆ. ಆ ಸಮಿತಿಗಳು 3500 ಬಂದೂಕುಗಳಿಂದ ಸರ್ವಸಜ್ಜಿತವಾಗಿವೆ. ಇದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ.

ಈ ಹಿಂದೆ ಉಗ್ರರ ಹಾವಳಿ ಹೆಚ್ಚಿದ್ದಾಗ ಈ ಗ್ರಾಮ ರಕ್ಷಣಾ ಸಮಿತಿಗಳಿಗೆ ಸರ್ಕಾರವೇ ಪರವಾನಗಿ ಸಹಿತ 12 ಬೋರ್ ಬಂದೂಕುಗಳನ್ನು ವಿತರಿಸಿತ್ತು. ಜಮ್ಮುವಿನ ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಳೆದ 15 ವರ್ಷಗಳ ಅವಧಿಯಲ್ಲಿ ಉಗ್ರರ ವಿರುದ್ಧ ಕೇವಲ ಎರಡು ಪ್ರಕರಣಗಳಲ್ಲಷ್ಟೇ ಗ್ರಾಮ ರಕ್ಷಣಾ ಸಮಿತಿ ಜಯ ದಾಖಲಿಸಿದೆ. ಆದರೂ ಆ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳಲು ಸರ್ಕಾರ ಸಮಿತಿಗಳಿಗೆ ಅನುಮತಿ ನೀಡಿದೆ. ಕೆಲವು ಗ್ರಾಮ ರಕ್ಷಣಾ ಸಮಿತಿಗಳು ಜಿಲ್ಲಾ ಕೇಂದ್ರಗಳಿಂದ 150 ಕಿ.ಮೀ. ದೂರದವರೆಗೆ ಇರುವುದರಿಂದ ಅವುಗಳನ್ನು ನಿಯಂತ್ರಿಸುವುದು ಜಿಲ್ಲಾಡಳಿತಕ್ಕೆ ಕಷ್ಟವಾಗುತ್ತಿದೆ.

ಕಾಶ್ಮೀರಿಗಳಿಗೆ ಹೇಗೆ ಅವರ ಜಮೀನಿನ ಮೇಲೆ ಹಕ್ಕು ಇದೆಯೋ, ಜಮ್ಮು ಜನರಿಗೂ ಅದೇ ಹಕ್ಕು ಇದೆ. ಹೀಗಾಗಿ ನಾವು ಸಮಿತಿಗಳನ್ನು ಬೆಂಬಲಿಸುತ್ತೇವೆ ಎನ್ನುತ್ತಾರೆ ಭೇಡಾಭಾಟ ಗ್ರಾಮದ ಗ್ರಾಮ ರಕ್ಷಣಾ ಸಮಿತಿ ಮುಖಂಡ ಎಸ್.ಆರ್. ಶರ್ಮ.

ಅವರ ಪ್ರಕಾರ ದೇವಾಲಯ ಮಂಡಳಿಗೆ ಜಮೀನು ನೀಡುವುದನ್ನು ಕಾಶ್ಮೀರಿ ಮುಸ್ಲಿಮರು ವಿರೋಧಿಸುತ್ತಿರುವುದು ವಾಣಿಜ್ಯ ಉದ್ದೇಶದಿಂದಾಗಿ. ಯಾತ್ರೆಗಳನ್ನು ಆಯೋಜಿಸಿ ಅವರು ತುಂಬಾ ಹಣ ಗಳಿಸುತ್ತಿದ್ದಾರೆ. ಅವರಿಗೆ ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಲು ಸಾಧ್ಯವಾಗಿದ್ದು ಕೂಡಾ ಈ ಲಾಭದಿಂದಾಗಿಯೇ. ಇದೀಗ ನಾವು ಕೂಡಾ ಶಸ್ತ್ರಾಸ್ತ್ರಗಳನ್ನು ಹೊಂದುವುದು ಅನಿವಾರ್ಯ ಎನ್ನುತ್ತಾರೆ ಅವರು.

ಅತ್ತ ಮುಸ್ಲಿಮರ ಅಭಿಪ್ರಾಯವೇ ಬೇರೆ. ತಮ್ಮ ವಿರುದ್ಧ ವ್ಯವಸ್ಥಿತ ಪಿತೂರಿ ನಡೆಸಲಾಗುತ್ತಿದೆ. ಅವರು (ಹಿಂದೂಗಳು) ಪೆಟ್ರೋಲ್ ಬಾಂಬ್, ಗ್ರೆನೇಡ್‌ಗಳನ್ನೂ ಬಳಸಿದ್ದಾರೆ. ತಮ್ಮ ಮೇಲೆ ಗುಂಡು ದಾಳಿಯನ್ನೂ ನಡೆಸಿದ್ದಾರೆ ಎನ್ನುವುದು ಫಯಾಜ್ ಉಲ್ಲಾನ ಆತಂಕ.

ದಾಳಿ ನಡೆದ ಆರು ದಿನಗಳ ನಂತರ ಅದೂ ಕರ್ಫ್ಯೂ ಹೇರಿದ್ದ ಸಮಯದಲ್ಲೂ ಅಂಗಡಿಯೊಂದನ್ನು ಸುಟ್ಟುಹಾಕಲಾಯಿತು ಎಂದರೆ ಕೋಮು ದ್ವೇಷ ಶೀಘ್ರವಾಗಿ ಶಮನವಾಗುವಂಥದಲ್ಲ ಎಂಬದನ್ನು ಯಾರಾದರೂ ಅರ್ಥ ಮಾಡಿಕೊಳ್ಳಬಹುದು.

ಜಮ್ಮು ಮತ್ತು ಕಾಶ್ಮೀರ ಪ್ರತಿಭಟನೆಗಳ ಸಂದರ್ಭದಲ್ಲಿ ಕಿಶ್ತ್‌ವಾರ್ ಪಟ್ಟಣದಲ್ಲಿ ಕೇಳಿಬಂದ ಧಾರ್ಮಿಕ ಘೋಷಣೆಗಳನ್ನು ಗಮನಿಸಿದರೆ ಆ ದುರದೃಷ್ಟದ ಪಟ್ಟಣಕ್ಕೆ ಮತ್ತೊಂದು ಅವಘಡ ಕಾದಿದೆ ಎಂದೆನಿಸದೇ ಇರದು. ಧಾರ್ಮಿಕ ಅಸಹನೆ ಮತ್ತು ಮತಾಂಧತೆಯನ್ನು ಶಮನಗೊಳಿಸುವಲ್ಲಿ, ಶಸ್ತ್ರಾಸ್ತ್ರ ಬಳಕೆಯನ್ನು ನಿಯಂತ್ರಿಸುವಲ್ಲಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ.

ಒಂದೇ ಒಂದು ಸಮಾಧಾನದ ಸಂಗತಿ ಎಂದರೆ ಇಷ್ಟೆಲ್ಲಾ ದ್ವೇಷ, ದಳ್ಳುರಿ ಬೇಯುತ್ತಿದ್ದರೂ ರಸೂಲ್ ಕಿಚ್ಲೂ ಮತ್ತು ದೇವ ದತ್‌ನಂತಹ ಹಿರಿಯ ಜೀವಗಳು ಪರಸ್ಪರ ಹೆಗಲ ಮೇಲೆ ಕೈಹಾಕಿ ಸರಿ-ತಪ್ಪುಗಳ ಸೌಹಾರ್ದ ವಿಮರ್ಶೆಯಲ್ಲಿ ತೊಡಗಿರುವುದು. ಆದರೆ ಈ ಮನೋಭಾವ ಅವರ ಮುಂದಿನ ತಲೆಮಾರಿನವರಿಗೆ ಹರಿದು ಬರುತ್ತದೆಯೇ?

ಟಿಎಸ್‌ಐ

ಮುಖಪುಟ ಲೇಖನದಲ್ಲಿ ಇನ್ನೇನಿದೆ

ಧಾರ್ಮಿಕ ಅಂಧಾರಾಧನೆಯ ಸೋಗಿನಲ್ಲಿ...

  ಭೂ ಲೋಕದ ಸ್ವರ್ಗಕ್ಕೆ ಕಿಚ್ಚು ಹಚ್ಚಿದ ಧರ್ಮ

  ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡಬಾರದೇಕೆ? : ಅರಿಂದಮ್ ಚೌಧುರಿ,

  ವಿಫಲ ನಾಯಕತ್ವಕ್ಕೆ ಸ್ಪಷ್ಟ ಉದಾಹರಣೆ : ಅಜಯ್ ಸಾಹ್ನಿ

  ಪ್ರಾಂತೀಯ ಅನನ್ಯತೆ, ಆಶೋತ್ತರ ಗೌರವಿಸಿ : ಬಲರಾಜ್ ಪುರಿ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .