|
'ಅಕ್ಕ' ಸಮ್ಮೇಳನ
ತೆರಿಗೆ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ!
ಆಯ್ಕೆಗೆ ಪ್ರಭಾವ, ಜಾತಿ ಮಾನದಂಡವಾದರೆ ಪ್ರತಿಭೆ, ಹಿರಿಮೆಗೆಲ್ಲಿ ಬೆಲೆ?

ಉಚಿತ ಅಮೆರಿಕ ಪ್ರವಾಸ,
ಅದೂ ಸರ್ಕಾರಿ ಖರ್ಚಿನಲ್ಲಿ!
ಜೊತೆಗೆ ಮನತಣಿಸುವ ಔತಣ ಕೂಟ,
ಕಣ್ಣಿಗೆ ಹಬ್ಬ ನೀಡುವ ಮನರಂಜನಾ ಕಾರ್ಯಕ್ರಮ ಬೇರೆ...!
ಇಂಥ ಅವಕಾಶ ಬಾಗಿಲು ತಟ್ಟಿ ಬಂದರೆ ಬೇಡ
ಅನ್ನುತ್ತೀರಾ?
60ಕ್ಕೂ ಹೆಚ್ಚು
ಸದಸ್ಯರ ದೊಡ್ಡ ತಂಡ ಬಟ್ಟೆ ಬರೆ ಎಲ್ಲಾ ಜೋಡಿಸಿ ದೇವನಹಳ್ಳಿ ಕಡೆ ಮುಖ ಮಾಡಿ
ಕಾಯುತ್ತಾ ಕುಳಿತಿರುವುದೂ ಅದಕ್ಕೇ.
ಈ ಬಾರಿ ಶಿಕಾಗೋದಲ್ಲಿ ಆಗಸ್ಟ್
29ರಿಂದ
31ರವರೆಗೆ
ನಡೆಯಲಿರುವ 'ಅಕ್ಕ
ಸಮ್ಮೇಳನ'ಕ್ಕೆ
ಹೋಗುವವರ ಬಗೆಗಿನ ಚರ್ಚೆಗಳು ಎರಡು ವಾರಗಳಿಂದ ಕೇಳಿಬರುತ್ತಲೇ ಇವೆ.
ಬಹುಶಃ ಅದರ ಪರಿಣಾಮವೇ ಇರಬೇಕು ಸರ್ಕಾರ ಅಂತಿಮ
ಪಟ್ಟಿ ಪರಿಷ್ಕರಿಸಿ,
'ಸಮ್ಮೇಳನಕ್ಕೆ
ತೆರಳುತ್ತಿರುವ ಶಾಸಕರು ಹಾಗೂ ಉದ್ಯಮಿಗಳ ವೆಚ್ಚವನ್ನು ಸರ್ಕಾರ
ಭರಿಸುತ್ತಿಲ್ಲ,
ಆಹ್ವಾನಿತ 50
ಮಂದಿ ಕಲಾವಿದರು,
ಸಚಿವರು ಹಾಗೂ ಅಧಿಕಾರಿಗಳ ವೆಚ್ಚವನ್ನು ಮಾತ್ರ
ಭರಿಸುತ್ತಿದೆ'
ಎಂದು ಸಮಜಾಯಿಷಿಯನ್ನೂ ನೀಡಿತು.
ಅಂತೂ ಸರ್ಕಾರಿ ವಲಯದಲ್ಲಿ ಅಕ್ಕ ಸಮ್ಮೇಳನ
ಸಂಭ್ರಮದ ವಾತಾವರಣ ಸೃಷ್ಟಿಸಿದೆ ಎಂದರೆ ತಪ್ಪಲ್ಲ.
ಅಂತಿಮ ಪಟ್ಟಿಯ ಗಾತ್ರವನ್ನು ಕುಗ್ಗಿಸಿದ್ದೇವೆ
ಎಂದ ಸರ್ಕಾರಕ್ಕೆ ಬಹುಶಃ ಹಿಂದಿನ ವರ್ಷಗಳಲ್ಲಿ ಅಕ್ಕ ಸಮ್ಮೇಳನಕ್ಕೆ
ಹೋಗುತ್ತಿದ್ದ ಕಲಾವಿದರ ಸಂಖ್ಯೆ ಹೆಚ್ಚೆಂದರೆ
45
ಇರುತ್ತಿತ್ತು ಎಂಬುದು ಗೊತ್ತಿಲ್ಲವೇ?
ಲೆಕ್ಕ ಹಾಕಿ,
50
ಜನರ ಕಲಾವಿದರ ತಂಡದೊಂದಿಗೆ ಸಚಿವರ ದಂಡು ಹಾಗೂ ಅಧಿಕಾರಿಗಳೆಂದು ಅಂತಿಮ
ಪಟ್ಟಿಯ ಸದಸ್ಯರ ಸಂಖ್ಯೆ 75ಕ್ಕೆ
ಬಂದು ನಿಂತರೆ ಸರ್ಕಾರಕ್ಕೆ ಬರೀ ವಿಮಾನಯಾನದ ವೆಚ್ಚವೇ ಸುಮಾರು
50 ಲಕ್ಷ
ದಾಟುತ್ತದೆ!
ಯಾವುದೋ ಒಂದು ಸಂಘಟನೆ ನಡೆಸುವ ಕಾರ್ಯಕ್ರಮಕ್ಕೆ ಸರಿ
ಸುಮಾರು ಅರ್ಧ ಕೋಟಿ ರೂಪಾಯಿಗಳನ್ನು ಸಾರ್ವಜನಿಕ ತೆರಿಗೆ ಹಣದಿಂದಲೇ
ಭರಿಸಲಾಗುತ್ತದೆ!
ಸಾರ್ವಜನಿಕ ತೆರಿಗೆ ಹಣದಲ್ಲಿ ನಮ್ಮ ಕಲಾವಿದರು,
ರಾಜಕಾರಣಿಗಳು ಮತ್ತು ಅಧಿಕಾರಿಗಳು ಸಾಂಸ್ಕೃತಿಕ
ವಿನಿಮಯಕ್ಕಾಗಿ ಹೊರಟಿದ್ದಾರೆ ಎಂಬುದು ಸರ್ಕಾರಿ ಹಣದ ದುಂದುವೆಚ್ಚಕ್ಕಿರುವ
ಒಂದು ಸಮರ್ಥನೆ.
ಅದನ್ನು ಒಪ್ಪುವುದೇ ಆದರೂ,
ಈ ಕಲಾವಿದರ ಆಯ್ಕೆಯ ಮಾನದಂಡಗಳೇನು ಎಂಬ ಪ್ರಶ್ನೆ
ಬಾರದೇ ಇರದು.
ಸಾರ್ವಜನಿಕ ವೆಚ್ಚದಲ್ಲಿ ನೀಡಲಾಗುವ ಯಾವುದೇ ಗೌರವ,
ಪ್ರಶಸ್ತಿ,
ಸ್ಥಾನ-ಮಾನಗಳಿಗೆ
ಅರ್ಹರನ್ನು ಆಯ್ಕೆ ಮಾಡಬೇಕಾಗುತ್ತದೆ.
ಅದಕ್ಕಿಂತ ಮುಖ್ಯವಾಗಿ ಅಂತಹ ಆಯ್ಕೆಗಳಲ್ಲಿ
ಪಾರದರ್ಶಕತೆ ಕಾಯ್ದುಕೊಳ್ಳಬೇಕಾದುದು ಸರ್ಕಾರದ ಜವಾಬ್ದಾರಿ.
ಅಂದರೆ,
ಆಯ್ಕೆಯಾದ ಬಳಿಕ ಇಂತಿಂಥವರನ್ನು ಆಯ್ಕೆ
ಮಾಡಲಾಗಿದೆ ಎಂದು ಪಟ್ಟಿ ನೀಡಿ ಕೈತೊಳೆದುಕೊಳ್ಳುವುದಲ್ಲ.
ಬದಲಾಗಿ ಆಯ್ಕೆಯ ಪ್ರತಿ ಹಂತದಲ್ಲೂ ಪಾರದರ್ಶಕತೆ,
ಸಾರ್ವಜನಿಕರಿಂದ ಹೆಸರು ಸೂಚನೆ,
ಅರ್ಹತೆಯ ಮಾನದಂಡಗಳನ್ನು ನಿರ್ಧರಿಸುವುದು,
ಸ್ಪಷ್ಟ ಮಾನದಂಡಗಳ ಆಧಾರದ ಮೇಲೆ ಆಯ್ಕೆಮಾಡುವುದು
ಅಗತ್ಯ.
ಅದು ಸರ್ಕಾರದ ಉತ್ತರದಾಯಿತ್ವದ ಪ್ರಶ್ನೆ ಕೂಡ.
ಇಲ್ಲವಾದಲ್ಲಿ ಅಧಿಕಾರಸ್ಥರ ಬಾಲಬಡುಕರು ಮಾತ್ರ
ಇಂತಹದ್ದರಲ್ಲಿ ಸ್ಥಾನಗಿಟ್ಟಿಸಿದರೆ,
ಅದನ್ನು ಸಾರ್ವಜನಿಕ ಹಣದ ದುರುಪಯೋಗವೆನ್ನದೆ ಬೇರೆ
ರೀತಿಯಲ್ಲಿ ಅರ್ಥೈಸುವುದು ಸಾಧ್ಯವಿಲ್ಲ.
ಬಹುತೇಕ ಪ್ರಶಸ್ತಿ,
ಬಹುಮಾನಗಳಿಗೆ ಕೂಡ ಕಲಾವಿದರ ಕೊಡುಗೆಯನ್ನೇ
ಮಾನದಂಡವಾಗಿಸಿಕೊಳ್ಳಲಾಗುತ್ತದೆ.
ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ನೀಡುವಾಗ
ಕೂಡ ಲೇಖಕರಿಂದ ಪುಸ್ತಕಗಳನ್ನು ಆಹ್ವಾನಿಸಿ,
ಅದಕ್ಕೊಂದು ಸಮಿತಿ ನೇಮಿಸಿ ಕೃತಿಗಳನ್ನು ತುಲನೆ
ಮಾಡಿ ಪ್ರಶಸ್ತಿ ನಿರ್ಧರಿಸುವುದು ವಾಡಿಕೆ.
ಆದರೆ,
ಒಬ್ಬೊಬ್ಬ ವ್ಯಕ್ತಿಯ ಮೇಲೆ ಲಕ್ಷಾಂತರ ರೂಪಾಯಿ
ವ್ಯಯಮಾಡುವ ಈ ಸಮ್ಮೇಳನದ ಆಯ್ಕೆಯ ವಿಷಯದಲ್ಲಿ ಅಂತಹ ಯಾವುದೇ ನಿರ್ದಿಷ್ಟ
ವಿಧಾನಗಳೇ ಇಲ್ಲ ಎಂಬುದು ವಿಚಿತ್ರ.
ಜೊತೆಗೆ ಸಚಿವರ ದಂಡು ಬೇರೆ.
ರಾಜ್ಯದಲ್ಲಿ ಮಳೆ ಹಾನಿಯಿಂದಾಗಿ ಗ್ರಾಮೀಣ ಜನತೆ
ಸಂಕಷ್ಟದಲ್ಲಿರುವಾಗ ಅಲ್ಲಿಗೆ ತೆರಳಿ ಸರ್ಕಾರಿ ಯಂತ್ರವನ್ನು
ಚುರುಕುಗೊಳಿಸುವ ಬದಲು ಇವರೆಲ್ಲಾ ಸಾಂಸ್ಕೃತಿಕ ಗಂಧಗಾಳಿಯೂ ಇಲ್ಲದೆ
ಸಮ್ಮೇಳನದಲ್ಲಿ ಏನು ಮಾಡುತ್ತಾರೆ?
ಯಾವ ರೀತಿಯ ಸಾಂಸ್ಕೃತಿಕ ವಿನಿಮಯ ಮಾಡುತ್ತಾರೆ
ಎಂಬುದನ್ನು ಸರ್ಕಾರವೇ ಹೇಳಬೇಕು.
ಏಕೆಂದರೆ ಅಕ್ಕ ಸಮ್ಮೇಳನಕ್ಕೆ ರಾಜಕಾರಣಿಗಳು
ಬರುವುದರಿಂದ ರಾಜ್ಯಕ್ಕಾಗಲೀ,
ಸಮ್ಮೇಳನಕ್ಕಾಗಲಿ ಯಾವುದೇ ಪ್ರಯೋಜನವಿಲ್ಲ
ಎಂಬುದನ್ನು ಸ್ವತಃ ಅಕ್ಕದಲ್ಲಿ ಭಾಗವಹಿಸಿದ ಕಲಾವಿದರೇ ಒಪ್ಪಿಕೊಳ್ಳುತ್ತಾರೆ.
2004ರ ಅಕ್ಕ
ಸಮ್ಮೇಳನದಲ್ಲಿ ಭಾಗವಹಿಸಿದ್ದ ಪ್ರೊ.
ಬರಗೂರು ರಾಮಚಂದ್ರಪ್ಪ ಟಿಎಸ್‌ಐ ಜೊತೆ ಮಾತನಾಡಿ,
ಸರ್ಕಾರದ ಖರ್ಚಿನಲ್ಲಿ ರಾಜಕಾರಣಿಗಳು ಏಕೆ
ಹೋಗುತ್ತಾರೋ ನನಗಂತೂ ಗೊತ್ತಿಲ್ಲ.
ರಾಜಕಾರಣಿ ಅಲ್ಲಿ ಹೋಗಿ ಮಾಡುವಂಥದ್ದು ಏನೂ ಇಲ್ಲ.
ಇದೊಂದು
'ಸಾಂಸ್ಕೃತಿಕ
ವಿನಿಮಯ'
ಕಾರ್ಯಕ್ರಮವಾಗಿರಬೇಕು.
ಬದಲಿಗೆ 'ಪುಕ್ಕಟೆ
ಪ್ರವಾಸ'ವಾಗಬಾರದು
ಎನ್ನುತ್ತಾರೆ.
ಸಮ್ಮೇಳನಕ್ಕೆ ಆಹ್ವಾನಿತರಾಗಿ ಹೋಗಿಬಂದಿರುವ ಡಾ.
ರೋಹಿಣಿ ಮೋಹನ್ ಸಾಂಸ್ಕೃತಿಕ ಲಾಭ ಕೊಂಚಮಟ್ಟಿಗೆ
ಆಗುತ್ತದೆ.
ಹೊರದೇಶದಲ್ಲಿರುವ ಕನ್ನಡಿಗರ ಜೊತೆ ಉತ್ತಮ ಬಾಂಧವ್ಯ
ಬೆಳೆಯುತ್ತದೆ.
ಆದರೆ,
ರಾಜಕಾರಣಿಗಳು ಭಾಗವಹಿಸುವುದೇಕೆ ಎಂಬುದು ನನಗೂ
ಗೊತ್ತಿಲ್ಲ.
ಅಲ್ಲಿ ಅವರ ಅವಶ್ಯಕತೆ ಏನೇನೂ ಇಲ್ಲ ಎನ್ನುತ್ತಾರೆ.
ಇನ್ನು ಅಕ್ಕದಲ್ಲಿ ಭಾಗವಹಿಸಲು ನಡೆಯುವ ಲಾಬಿಯ
ಬಗ್ಗೆ ಕೇಳಿದಾಗ ಡಾ.
ರೋಹಿಣಿ ಮೋಹನ್,
ಇಲ್ಲಿ ಡಾರ್ವಿನ್ ಸಿದ್ಧಾಂತ
'ಸರ್ವೈವಲ್ ಆಫ್
ದ ಫಿಟ್ಟೆಸ್ಟ್'ನಂಥ
ವ್ಯವಸ್ಥೆ ಇದೆ.
ಪ್ರತಿಭೆಯ ಜೊತೆಗೆ ಹಣ,
ರಾಜಕೀಯ ಬೆಂಬಲ,
ಪ್ರಭಾವಿ ಕುಟುಂಬ ವಲಯ,
ಜಾತಿಯೂ ಇದ್ದರೆ ಆಯ್ಕೆ ಖಂಡಿತ ಎನ್ನಬಹುದು.
ಕೆಲವೊಮ್ಮೆ ಪ್ರತಿಭೆ ಇಲ್ಲದಿದ್ದರೂ ಗುಂಪಿನಲ್ಲಿ
ತೂರಿಕೊಳ್ಳಬಹುದು ಎನ್ನುತ್ತಾರೆ.
'ಎಲೆಕ್ಟ್ರಾನಿಕ್
ಮಾಧ್ಯಮ ಕ್ರಾಂತಿಯಿಂದ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ.
ಹಿಂದಿನ ಹಾಗೆ ಕರ್ನಾಟಕದಿಂದ ಹೋಗುವ
ಪ್ರತಿಭೆಗಳನ್ನು ಕೇಳುವ/
ನೋಡುವ ಕುತೂಹಲ ಅಲ್ಲಿ ಈಗಿಲ್ಲ.
ಹಲವು ಕನ್ನಡ ಟೆಲಿವಿಷನ್ ವಾಹಿನಿಗಳೂ ಲಭ್ಯವಿವೆ.
ಬೇಕಾದ ಸಿನಿಮಾಗಳನ್ನು,
ಹಾಡುಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಈಗ
ಬಲು ಸುಲಭ.
ಅಲ್ಲದೆ ಅಲ್ಲಿಯೇ ಪ್ರತಿಭೆಗಳ ಆಗರವಿದೆ.
ಹಾಗಿರುವಾಗ ಗುಂಪುಗಟ್ಟಲೆ ಕಲಾವಿದರನ್ನೂ
ಕಳುಹಿಸುವ ಅಗತ್ಯವಿಲ್ಲ'
ಎಂಬುದನ್ನು ಸ್ವತಃ ಕಲಾವಿದರೇ ಒಪ್ಪುತ್ತಾರೆ.
ಅಂದರೆ,
ಅಕ್ಕ ಸಮ್ಮೇಳನಕ್ಕೆ ಕಲಾವಿದರು,
ರಾಜಕಾರಣಿಗಳು ಮತ್ತು ಅಧಿಕಾರಿಗಳನ್ನು ಆಯ್ಕೆ
ಮಾಡುತ್ತಿರುವ ವಿಧಾನ ತೀರಾ ಪ್ರಜಾಪ್ರಭುತ್ವ ವ್ಯವಸ್ಥೆಗೆ
ತದ್ವಿರುದ್ಧವಾಗಿಯೇ ಇದೆ.
ಪ್ರಭಾವ,
ಜಾತಿ,
ಹಣ ಮುಂತಾದವುಗಳೇ ಮಾನದಂಡಗಳಾಗಿದ್ದು,
ಪ್ರತಿಭೆ ಮತ್ತು ಹಿರಿಮೆಗಳಿಗೆ ಕಿಮ್ಮತ್ತಿಲ್ಲ
ಎಂಬುದು ಸಮ್ಮೇಳನಕ್ಕೆ ಹೋಗಿ ಬಂದ ಕಲಾವಿದರ ಅನುಭವದ ಮಾತು.
ಅಂದರೆ,
ತೆರಿಗೆದಾರರ ದುಡ್ಡಲ್ಲಿ
'ಯಲ್ಲಮ್ಮನ
ಜಾತ್ರೆ'
ಮಾಡುವ ಇಂತಹ ವ್ಯವಸ್ಥೆ ಇನ್ನೆಷ್ಟು ದಿನ ಮುಂದುವರಿಯಬೇಕು?
ಟಿಎಸ್‌ಐ
ಕೆ. ದಿವ್ಯದರ್ಶಿನಿ
|