ಇದು ನಮ್ಮ ವಿಶೇಷ ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಪ್ರತಿಧ್ವನಿ
ಓದುಗರ ಪತ್ರ
 

Letters- The Sunday Indian - Kannada

ಅವರನ್ನು ನೆನೆಯೋಣ

'ವಿಶ್ವಾಸದ ಮೂರು ಮುಖಗಳು' ಲೇಖನದ ಮುಖಪುಟ, ಸೇನಾನಿಗಳ ತರಬೇತಿ, ಶ್ವಾನಪಡೆ, ಅರಣ್ಯದ ಚಿತ್ರಗಳು ಅದ್ಭುತವಾಗಿ ಮೂಡಿಬಂದಿವೆ. ಭೂಸೇನೆ, ವಾಯುಸೇನೆ, ನೌಕಾಸೇನೆಗಳಲ್ಲಿನ ಸೇನಾನಿಗಳ ಶಿಸ್ತು, ಕಠಿಣ ಕಮಾಂಡೋ ತರಬೇತಿ, ಬಾಂಬ್ ಪತ್ತೆ... ಇವುಗಳ ಬಗ್ಗೆ ನಡೆಸಿರುವ ಸಂದರ್ಶನಗಳು ಜನಸಾಮಾನ್ಯರಿಗೆ ಮಾಹಿತಿ ನೀಡುವಂತಿದ್ದವು. ಸ್ವಾತಂತ್ರ್ಯೋತ್ಸವ ಸಂದರ್ಭ ಈ ಲೇಖನಗಳು ಮೂಡಿಬಂದಿರುವುದು ಸಂತಸದ ವಿಚಾರ. ಸಂದರ್ಶನದಲ್ಲಿ ಯುವ ಸೇನಾನಿಗಳಿಗೆ ಸೇನೆಗೆ ಸೇರಲು ಪ್ರೇರೇಪಣೆ ನೀಡಿದ ಪ್ರಸಂಗಗಳು ಪ್ರತಿಯೊಬ್ಬ ಭಾರತೀಯನಲ್ಲಿಯೂ ಸೇನೆಗೆ ಸೇರಿ ದೇಶಸೇವೆ ಮಾಡಬೇಕೆಂಬ ಹಂಬಲ ಮೂಡಿಸುವಂತಹುದು. ಸದಾ ಸೇವೆ ಸಲ್ಲಿಸುತ್ತಿರುವ ಶ್ವಾನಪಡೆಗಳ ಕಾರ್ಯಕ್ಷಮತೆ ಕುರಿತ ಪರಿಚಯ ಮೈನವಿರೇಳಿಸುವಂತಿತ್ತು. ಗಡಿಗಳಲ್ಲಿ ಕಣ್ಣಲ್ಲಿ ಕಣ್ಣಿಟ್ಟು ಕಾವಲು ಕಾಯುವ ಯೋಧರ ದಿನಚರಿ ಪ್ರಾತ:ಸ್ಮರಣೀಯ. ಜನಸಾಮಾನ್ಯರು ಎಲ್ಲಾ ಸೌಕರ್ಯಗಳಿದ್ದೂ ಜೀವನದಲ್ಲಿ ಜಿಗುಪ್ಸೆ ಹೊಂದುವ ಪರಿಸ್ಥಿತಿಯಿರುವಾಗ ಗಡಿಗಳಲ್ಲಿ, ಹಿಮಾಲಯದ ಪರ್ವತಶ್ರೇಣಿಗಳಲ್ಲಿ ಒಂಟಿಯಾಗಿ ಕಾವಲುಗೋಪುರಗಳಲ್ಲಿ ದೇಶ ಕಾಯುವ ಯೋಧನ ಆತ್ಮಸ್ಥೈರ್ಯ ಮೆಚ್ಚಬೇಕಲ್ಲವೇ? ಬಾಹ್ಯಾಕಾಶದಲ್ಲಿ ತ್ರಿಸೇನಾ ಪಡೆಗೆ ಒತ್ತುನೀಡಬೇಕಾದ ವಿಚಾರವೂ ದೇಶದ ಹಿತದಿಂದ ಉತ್ತಮ ಆಲೋಚನೆ. ಯುವ ವಿಜ್ಞಾನಿಗಳು, ವೈದ್ಯರು, ಪ್ರತಿಭಾವಂತರು, ಪತ್ರಕರ್ತರು ಇವರೆಲ್ಲ ಸೇನೆಗೆ ಸೇರುತ್ತಿರುವುದು ಉತ್ತಮ ಬೆಳವಣಿಗೆ. ಗೆರಿಲ್ಲಾ ಯುದ್ಧತಂತ್ರಕಲೆ, ಇವುಗಳ ಜೊತೆಗೆ ಸಿಐಜೆಡಬ್ಲ್ಯುಎಸ್‌ಗಳಿಂದ ಪ್ರೇರಿತರಾಗಿ ವಿದೇಶೀಯರೂ ತಮ್ಮ ಸೈನಿಕರನ್ನು ತರಬೇತಿಗಾಗಿ ಕಳುಹಿಸುವಲ್ಲಿ ಆಸಕ್ತಿ ವಹಿಸುತ್ತಿರುವುದು ಹೆಮ್ಮೆಯ ಸಂಗತಿ. ದೇಶ ಮತ್ತು ಪ್ರಜೆಗಳ ರಕ್ಷಣೆಯಲ್ಲಿ ತೊಡಗಿರುವ ಯೋಧರನ್ನು ದಿನವೂ ನೆನೆಯುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಈ ವಿಶೇಷಾಂಕ ಸಂಚಿಕೆ ಹೊರತಂದ ಪತ್ರಿಕಾ ಬಳಗಕ್ಕೆ ಧನ್ಯವಾದಗಳು.

ಬಿ.ಎಚ್. ಚಂದ್ರಶೇಖರ
ಬೆಂಗಳೂರು

ಸೈನಿಕರಿಗೆ ಗೌರವ ನೀಡಿ

ಟಿಎಸ್‌ಐ ಮುಖಪುಟ ಲೇಖನ 'ರಕ್ಷಣೆಯ ನೊಗಹೊತ್ತ ಹೋರಾಟಗಾರರು' ಉತ್ತಮ ಓದಿಗೆ ಪೂರಕವಾಯಿತು. ರಾಜಕಾರಣಿಗಳ ವಿವೇಚನಾರಹಿತ ತಂತ್ರಗಾರಿಕೆಗಳಲ್ಲಿ ಸೈನಿಕರು ತಲೆ ಹಾಕದೆ- ಚಳಿ, ಮಳೆ, ಬಿಸಿಲು ಲೆಕ್ಕಿಸದೆ'ಕರ್ಮಣ್ಯೇ ವಾಧಿಕಾರಸ್ತೆ ಮಾಫಲೇಷು ಕದಾಚನ' ಎಂಬಂತೆ ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ವಿಚಲಿತರಾಗದೆ ಹಿಮಪರ್ವತಗಳಲ್ಲಿ ಸದಾ ಜಾಗರೂಕರಾಗಿ ದೇಶ ರಕ್ಷಣೆಗೆ ಕಂಕಣಬದ್ಧರಾಗಿರುವ ಅವರ ಜೀವನ್ಮರಣದ ಸಾಹಸಗಾಥೆ ಪ್ರಶಂಸನೀಯ. ಬ್ರಿಟಿಷರ ಆಡಳಿತ ಕಾಲದಲ್ಲೂ ಅವರ ವಸಾಹತು ದ್ವೀಪಗಳ ರಕ್ಷಣೆಯನ್ನು ಬ್ರಿಟಿಷ್ ಸೇನಾಪಡೆಗಿಂತ ಹೆಚ್ಚಾಗಿ ಭಾರತೀಯ ಸೈನಿಕರೇ ಮಾಡಿದ್ದರು ಎಂದು ಬ್ರಿಟಿಷ್ ಆಡಳಿತಗಾರರು ಪುಸ್ತಕದಲ್ಲಿ ಬರೆದಿಟ್ಟಿದ್ದಾರಂತೆ. ಆದರೆ ತಮ್ಮ ಜೀವ ಪಣಕ್ಕಿಟ್ಟು ಹೋರಾಡುತ್ತಿರುವ ಸೈನಿಕ ಪಡೆಗೆ ಇಂದು ನಾವು ಎಂತಹ ಸ್ಥಾನಮಾನ ಕೊಟ್ಟಿದ್ದೇವೆ? ಭ್ರಷ್ಟ ರಾಜಕಾರಣಿಗಳಿಗೆ ಹೆಚ್ಚಿನ ಗೌರವ ಕೊಡುವುದರಲ್ಲೇ ನಾವು ವ್ಯಸ್ತರಾಗಿದ್ದೇವೆ. ದೇಶಕ್ಕಾಗಿ ನಿರಂತರ ಹೋರಾಡುತ್ತಿರುವ ನಮ್ಮ ಸೈನಿಕರನ್ನು ಗೌರವದಿಂದ ಕಾಣಬೇಕಾಗಿದೆ.

ರೇ.ಚ. ರೇವಡಿಗಾರ
ಸಿಂಧಗಿ

ಸ್ವಾತಂತ್ರ್ಯೋತ್ಸವದ ಉಡುಗೊರೆ

Letters- The Sunday Indian - Kannada

'ವಿಶ್ವಾಸದ ಮೂರು ಮುಖಗಳು' ಶಿರೋನಾಮೆ ಹೊತ್ತು ಬಂದ ಟಿಎಸ್‌ಐ ನನಗೆ ಅತೀವ ಸಂತೋಷ ಉಂಟುಮಾಡಿತು. ನಮ್ಮ ಸೇನೆ ಏನು ಮಾಡುತ್ತಿದೆ, ಅದರ ಜವಾಬ್ದಾರಿ ಎಂತಹುದು, ಅದರ ಸಾಮರ್ಥ್ಯ ಎಷ್ಟು ಏನೊಂದೂ ಅರಿಯದ ನಾವು ನಮ್ಮ ಮನೆಗಳಲ್ಲಿ ಬೆಚ್ಚಗೆ ಕುಳಿತು ಟೀಕೆ ಮಾಡುತ್ತಿರುತ್ತೇವೆ. ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಟಿಎಸ್‌ಐ ಇಂತಹ ವಿಷಯವನ್ನಾಯ್ದು ನಿಜಕ್ಕೂ ಅತ್ಯುತ್ತಮ ಕೊಡುಗೆ ನೀಡಿದೆ. ನಾವೆಲ್ಲ ಭದ್ರತೆ ಅಂದಾಕ್ಷಣ ನಮ್ಮ ಮನೆ ಬಾಗಿಲು- ಬೀಗ, ಕಾಂಪೌಂಡಿನೊಳಗಿನ ನಾಯಿ, ಕೊನೆಗೆ ಬ್ಯಾಂಕ್ ಡಿಪಾಸಿಟ್‌ಗಳ ಬಗ್ಗೆ ನೆನೆಯುತ್ತೇವೆ. ದಿನಗಟ್ಟಲೆ, ವಾರಗಟ್ಟಲೆ, ವರ್ಷಗಟ್ಟಲೆ ಸಮುದ್ರದಲ್ಲಿ, ಆಕಾಶದಲ್ಲಿ, ಕೊರೆಯುವ ಹಿಮದಲ್ಲಿ ಬಂದೂಕು ಹಿಡಿದು ನಮ್ಮನ್ನು ಕಾಪಾಡುತ್ತಿರುವ ಯೋಧರು ನೆನಪಿಗೆ ಬರುವುದೇ ಇಲ್ಲ. ರಾಷ್ಟ್ರದ ಭದ್ರತೆಯನ್ನು ನಾವೆಂದೂ ನಮ್ಮ ಭದ್ರತೆ ಎಂದು ಯೋಚಿಸುವುದೇ ಇಲ್ಲವಲ್ಲ! ಈವರೆಗೆ ಕನ್ನಡ ಪತ್ರಿಕೆಗಳಲ್ಲಂತೂ ನನಗೆ ಭಾರತೀಯ ಸೇನೆಯ ಬಗ್ಗೆ ಇಷ್ಟು ಸ್ವಾದಿಷ್ಟವಾದ ಓದು ಸಿಕ್ಕಿಲ್ಲ. ಗಂಭೀರ ಸಂಗತಿಗಳಿಂದ ಹಿಡಿದು, ಸೇನೆಯ ಪ್ರಾಣಿಗಳನ್ನೂ ಒಳಗೊಂಡಂತೆ, ಸೇನಾ ಹಿನ್ನೆಲೆಯ ಗ್ಲಾಮರ್ ಗೊಂಬೆಗಳ ಮಾಹಿತಿ, ಯೋಧರ ಬಗೆಗೆ ಹುಡುಗಿಯರ ಒಲವು... ಓಹ್! ಅದ್ಭುತ! ಜೀವದ ಹಂಗು ತೊರೆದು ರಾಷ್ಟ್ರ ರಕ್ಷಣೆಗೆ ನಿಂತಿರುವ ಯೋಧರನ್ನು ಆಗಾಗ ನೆನೆಯುತ್ತ ಹೀಗೆ, ನಿಮ್ಮನ್ನು ನಾವು ಗುರುತಿಸುತ್ತಿದ್ದೇವೆ, ನಮಗೂ ನಿಮ್ಮ ಬಗ್ಗೆ ಪ್ರೀತಿ- ಕಾಳಜಿಗಳಿವೆ ಎಂದು ಹೇಳುತ್ತಿದ್ದರೆ ಅವರದೆಷ್ಟು ಸಂತಸ ಪಡುವರಲ್ಲವೆ? ಯೋಧರು ಎಂದಾಕ್ಷಣ ರೋಮಾಂಚಿತಳಾಗುವ ನನಗಂತೂ ಈ ಸಂಚಿಕೆ ರಾಷ್ಟ್ರ ಹಬ್ಬದ ಉಡುಗೊರೆಯೇ ಸರಿ! ಧನ್ಯವಾದಗಳು ಟಿಎಸ್‌ಐ.

ಚೇತನಾ ತೀರ್ಥಹಳ್ಳಿ
ಇ-ಮೇಲ್ ಮೂಲಕ

ಸಂಗ್ರಹ ಯೋಗ್ಯ ಸಂಚಿಕೆ

'ಕಠಿಣ ಕಮಾಂಡೋ ಜೀವನ' (ಮಾಯಾಂಕ್ ಸಿಂಗ್) ಲೇಖನ ಓದುಗರಲ್ಲಿ ದಿಗ್ಭ್ರಾಂತಿ ಮೂಡಿಸುವುದರಲ್ಲಿ ಸಂಶಯವಿಲ್ಲ. ಭಾರತೀಯತೆ ಎಂಬ ಕಿಚ್ಚು ತುಂಬಿ ತುಳುಕುತ್ತಿರುವ ಸಿಪಾಯಿಗಳು ದೇಶ ಸೇವೆಗೆ ಸಹಿಸುವ ಕಷ್ಟಗಳು ಅಪಾರ. ಶಸ್ತ್ರಾಸ್ತ್ರ ಚೀಲ ಸೇರಿದಂತೆ ೨೨ ಕೆ.ಜಿ. ಹೊರುವ ಅವರಿಗೆ ಸ್ವಲ್ಪವೂ ದಣಿವಿಲ್ಲ. ಕಾಡಿನಲ್ಲಿರುವ ಪರಿಸ್ಥಿತಿ ಬಂದರೆ 'ಅನ್ನ-ಆಹಾರ' ಎಂಬ ಪದಗಳು ಕೇಳುವುದೂ ಕಷ್ಟ! ಕೈ ತುಂಬಾ ಸಂಬಳವಂತೂ ಕನಸಿನ ಮಾತು. ಇತರ ಕ್ಷೇತ್ರಗಳಿಗೆ ಹೋಲಿಸಿದರೆ ಈ ಸಂಬಳ ನಗಣ್ಯ. ಇಂತಹ ವಾಸ್ತವ ಸ್ಥಿತಿಗಳನ್ನು ತಿಳಿದೂ ಕಮಾಂಡೋಗಳಾಗಬೇಕೆಂದು ಬಯಸುವವರು ನಿಜವಾಗಿಯೂ ಗ್ರೇಟ್. ಅಂತಹ ಮಕ್ಕಳನ್ನು ಹಡೆದ ಭಾರತಾಂಬೆಗೆ ಕೋಟಿ ನಮನ. ವಿಶ್ವಾಸದ ಮೂರು ಮುಖಗಳನ್ನು ಪರಿಚಯಿಸಿದ ಪ್ರಸಕ್ತ ಸಂಚಿಕೆ ಸಂಗ್ರಹ ಯೋಗ್ಯ.

ಇರ್ಷಾದ್ ಎಂ. ವೇಣೂರು
ಉಜಿರೆ

ಟಿ ದೇಶ ಕಾಯುವ ವಿಶ್ವಾಸದ ಮುಖಗಳು

ರಕ್ಷಣಾ ಪಡೆ ವಿಶೇಷಾಂಕ'ವಿಶ್ವಾಸದ ಮೂರು ಮುಖಗಳು' ಮುಖಪುಟ ಲೇಖನ ಅದ್ಭುತವಾಗಿ ಹೊರಬಂದಿದೆ. ದೇಶದ ಮೂರು ರಕ್ಷಣಾಪಡೆಗಳು ಹಗಲು ರಾತ್ರಿ ಎನ್ನದೆ ಕಾರ್ಯ ನಿರ್ವಹಿಸುತ್ತಾ, ಶತ್ರುಗಳ ಹುಟ್ಟಡಗಿಸಲು ಎಲ್ಲಾ ರೀತಿಯ ತರಬೇತಿ ಪಡೆದು ದೇಶ ರಕ್ಷಣೆ ಮಾಡುತ್ತಾ ತಮ್ಮ ಪ್ರಾಣವನ್ನೇ ತ್ಯಾಗ ಮಾಡುತ್ತಿವೆ. ಟಿಎಸ್‌ಐನ ಲೇಖನಗಳನ್ನು ಓದುತ್ತಿರುವಾಗ ಸೈನಿಕರ ಜೊತೆ ಕುಳಿತು ಮಾತನಾಡುತ್ತಿರುವ ಅನುಭವವಾಯಿತು. ಮುಖಪುಟ ಬಹಳ ಆಕರ್ಷಣೀಯವಾಗಿ ಮೂಡಿಬಂದಿದೆ. ಓದುಗರಿಗೆ ಸವಿಸ್ತಾರವಾಗಿ ರಕ್ಷಣಾಪಡೆಯ ವಿವಿಧ ವಿಭಾಗಗಳನ್ನು ಪರಿಚಯಿಸಿದ್ದಕ್ಕೆ ಧನ್ಯವಾದ. ಇಂತಹ ಇನ್ನಷ್ಟು ಉತ್ತಮ ವಿಶೇಷ ಸಂಚಿಕೆಗಳನ್ನು ಟಿಎಸ್‌ಐ ಬಳಗ ನೀಡಲಿ ಎಂಬ ಆಶಯ ನನ್ನದು.

ಎಚ್. ಶರಣಗೌಡ ಸುಂಕೇಶ್ವರಹಾಳ
ರಾಯಚೂರು

ಟಿ ರಾಜಕಾರಣಿಗಳು ಕಣ್ತೆರೆಯಲಿ

ಗಡಿಯಂಚಿನ ಜೀವನ ಎಷ್ಟು ದುಸ್ತರ ಎಂಬ ಕಲ್ಪನೆ ಬಹುಶಃ ಎಸಿ ರೂಮಿನ ಒಳಗೆ ಕುಳಿತು ರಾಜಕಾರಣ ನಡೆಸುವ ವ್ಯಕ್ತಿಗಳಿಗೆ ತಿಳಿದೇ ಇಲ್ಲ ಎಂದೆನಿಸುತ್ತದೆ. ಒಂದೆಡೆ ಕಣ್ಣಿಗೆ ಎಣ್ಣೆ ಬಿಟ್ಟು ಹಗಲು- ರಾತ್ರಿ ಎನ್ನದೆ ದೇಶ ಕಾಯುತ್ತಾ

ಕುಳಿತ ಯೋಧರಾದರೆ ಇನ್ನೊಂದೆಡೆ ಭೂರಿಭೋಜನ ಮಾಡುತ್ತಾ, ಸಂತೋಷಕೂಟಗಳಲ್ಲಿ ಅಡ್ಡಾಡುವ ನಮ್ಮ 'ನಾಯಕರು'. ಟಿಎಸ್‌ಐನ'ಸರಹದ್ದಿನ ಸೋಲರಿಯದ ಸರದಾರ' (ರಾಜನ್ ಪ್ರಕಾಶ್) ಲೇಖನವನ್ನು ಇಂತಹ ಸೋ ಕಾಲ್ಡ್ ನಾಯಕರಿಗೆ ಓದಲು ಕೊಡಬೇಕು. ಯೋಧರ ಕಷ್ಟಗಳೇನು ಎಂಬುದನ್ನು ತಿಳಿಯಬೇಕಾದರೆ ಇವರೆಲ್ಲಾ ಒಂದು ಬಾರಿ ಟಿಎಸ್‌ಐ ರಕ್ಷಣಾ ಪಡೆ ವಿಶೇಷಾಂಕ ಓದುವುದು ಒಳಿತು. ಸಮಾಜಸೇವೆಯ ಹೆಸರಿನಲ್ಲಿ ರಾಜಕೀಯ ಪ್ರವೇಶಿಸುವ ಮಂದಿಗೆ ರಾಜಕಾರಣ ಎಂದರೆ ಕೇವಲ ಆಶ್ವಾಸನೆ ನೀಡುವುದಷ್ಟೇ ಅಲ್ಲ ಎಂಬ ವಿಚಾರ ಯಾವತ್ತು ಹೊಳೆದೀತೋ?

ಶ್ರೀನಿವಾಸ ರಾವ್
ಶಿವಮೊಗ್ಗ

ಕ್ರೀಡೆ ಎಂದರೆ ಕ್ರಿಕೆಟ್ ಮಾತ್ರವಲ್ಲ

ಭಾರತದಲ್ಲಿ ಕ್ರೀಡೆ ಎಂದರೆ ಕೇವಲ ಕ್ರಿಕೆಟ್. ಆ ಕ್ರೀಡೆಗೆ ನಮ್ಮಲ್ಲಿ ಎಲ್ಲಿಲ್ಲದ ಪ್ರೋತ್ಸಾಹ. ಹಾಗಿದ್ದಾಗ ಇತರ ಕ್ರೀಡೆಗಳಿಗೆ ಮಹತ್ವ ನೀಡಲು ಹೇಗೆ ಸಾಧ್ಯ ಹೇಳಿ? ಎಲ್ಲರ ನೋಟವೂ ಈಗ ಬೀಜಿಂಗ್ ಒಲಿಂಪಿಕ್ಸ್ ಮೇಲೆ ನೆಟ್ಟಿದೆ. ನಮಗೆ ಪದಕಗಳು ಸಿಕ್ಕಿಲ್ಲ ಎಂದು ಬೊಬ್ಬಿಡುವುದು, ಟೀಕಿಸುವುದೇನೋ ಸುಲಭ. ಆದರೆ ಸಾಧನೆಗೆ ಸೂಕ್ತವಾದ ತರಬೇತಿಯೂ ಅಗತ್ಯ ಎಂಬ ವಿಚಾರವನ್ನೂ ಗಮನದಲ್ಲಿಡಬೇಕು. ಚೀನಾ, ಅಮೆರಿಕ ಪದಕ ಪಟ್ಟಿಯಲ್ಲಿ ಮುಂದಿರುತ್ತವೆ ಎಂದರೆ ಅಲ್ಲಿ ಕ್ರೀಡಾಪಟುಗಳಿಗೆ ನೀಡುವ ತರಬೇತಿಯ ಗುಣಮಟ್ಟವೂ ಅಷ್ಟೇ ಉತ್ಕೃಷ್ಟವಾಗಿರುತ್ತದೆ. ಆದರೆ ನಮ್ಮಲ್ಲಿ ನಾಮಕಾವಾಸ್ತೆ ತರಬೇತಿ ಕಾರ್ಯಗಳು ನಡೆಯುತ್ತವೆ. ಸರ್ಕಾರ ಕ್ರೀಡೆ ಎಂದರೆ ಕೇವಲ ಕ್ರಿಕೆಟ್ ಎಂಬುದನ್ನು ಮರೆತರೆ ನಮ್ಮಲ್ಲೂ ಪದಕ ಬಾಚುವ ಪ್ರತಿಭಾವಂತರಿದ್ದಾರೆ ಎಂಬುದು ದೇಶಕ್ಕೇ ತಿಳಿಯುತ್ತದೆ.

ಮೋಹನ್ ಕುಮಾರ್
ಚಿತ್ರದುರ್ಗ

ಉತ್ತಮ ಗುಣಮಟ್ಟ

ಟಿಎಸ್‌ಐನಲ್ಲಿ ಮೂಡಿ ಬರುತ್ತಿರುವ ಲೇಖನ ಹಾಗೂ ಅಂಕಣಗಳು ಚೆನ್ನಾಗಿದೆ. 'ವಿಶ್ವಾಸದ ಮೂರು ಮುಖಗಳು' ಮುಖಪುಟ ಲೇಖನವಿದ್ದ ಸಂಚಿಕೆ ನನಗೆ ಮೆಚ್ಚುಗೆಯಾಯಿತು. ಒಳ್ಳೆಯ ಸುದ್ದಿ ನೀಡಿ ಮಾಧ್ಯಮದ ಜವಾಬ್ದಾರಿ ಏನು ಎಂಬುದನ್ನು ತೋರಿಸಿಕೊಡುತ್ತಿದ್ದೀರಿ. ಇದೇ ರೀತಿ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳಿ. ಶುಭವಾಗಲಿ.

ಎಂ.ಎ. ಪ್ರಶಾಂತ್
ಬೆಂಗಳೂರು

ಶ್ಲಾಘನೀಯ

'ವಿಶ್ವಾಸದ ಮೂರು ಮುಖಗಳು' ರಕ್ಷಣಾ ಪಡೆ ವಿಶೇಷಾಂಕ ಅತ್ಯುತ್ತಮವಾಗಿತ್ತು. ಯೋಧರ ಕುರಿತಾದ ಹಾಗೂ ಭಾರತದ ರಕ್ಷಣೆಗೆ ಸಂಬಂಧಪಟ್ಟ ಪ್ರತಿ ಲೇಖನಗಳು ಮೂಡಿಬಂದ ರೀತಿ ಶ್ಲಾಘನೀಯ.

ವಿಕ್ರಮ್ ಪೈ
ಕಾರ್ಕಳ

ಸರ್ವಾಧಿಕಾರಿ ಧೋರಣೆ ಬೇಡ

'ಅತಿ ಆಡಂಬರದ ಅಮಾನವೀಯ ಒಲಿಂಪಿಕ್ಸ್ ಇದಾಗಲಿದೆಯೇ?' (ಅರಿಂದಮ್ ಚೌಧುರಿ) ಸಂಪಾದಕೀಯ ಗಂಭೀರ ಓದಿಗೆ ಕಾರಣವಾಯಿತು. ಹೌದು. ಒಲಿಂಪಿಕ್ಸ್‌ಗೆ ಆತಿಥೇಯ ರಾಷ್ಟ್ರವಾಗಿ ಚೀನಾ ಕೆಲ ವರ್ಷಗಳ ಹಿಂದೆ ಆಯ್ಕೆಯಾದಾಗ, ಅದು ತನ್ನ ಮತ್ತು ಜಗತ್ತಿನ ಇತರೆಲ್ಲಾ ರಾಷ್ಟ್ರಗಳ ನಡುವೆ ಇರುವ ಕಂದಕ ತುಂಬುವ ಸುವರ್ಣಾವಕಾಶ ಇದು ಎಂದು ಯೋಚಿಸಲಿಲ್ಲ. ಬದಲಾಗಿ ತಾನು ನಡೆದದ್ದೇ ದಾರಿ ಎಂಬಂತಹ ಧೋರಣೆ ಪ್ರದರ್ಶಿಸಿತು. ಒಲಿಂಪಿಕ್ಸ್ ಎಂದರೆ ಕೇವಲ ಕ್ರೀಡಾಸ್ಪರ್ಧೆಯಷ್ಟೇ ಅಲ್ಲ. ಅದು ಯಾವ ದೇಶದಲ್ಲಿ ನಡೆಯುತ್ತಿದೆಯೋ ಅಲ್ಲಿನ ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಲು ಇತರರಿಗೆ ಅವಕಾಶವನ್ನೂ ಸೃಷ್ಟಿಸುತ್ತದೆ. ಆದರೆ ಈ ಬಾರಿಯ ಒಲಿಂಪಿಕ್ಸ್ ಇದನ್ನು ಸತ್ಯವಾಗಿಸುವುದೇ?

ಕೆ.ಎಸ್. ನಿರಂಜನ
ಹಾಸನ

ನಿಯಂತ್ರಣ ಅತ್ಯಗತ್ಯ

'ಭಯೋತ್ಪಾದನೆ ವಿರುದ್ಧ ಸಮರದ ಕುಯಿಲು ಕೊಯ್ದ ಪಿಎಂಸಿ ಉದ್ಯಮ' (ಅರಿಂದಮ್ ಚೌಧುರಿ) ಸಂಪಾದಕೀಯ ಪಿಎಂಸಿ ಉದ್ಯಮದ ನೈಜತೆಗೆ ಹಿಡಿದ ಕನ್ನಡಿ. ಪಿಎಂಸಿಯಂತಹ ಉದ್ಯಮಗಳು ಬಲಿಷ್ಟವಾಗುತ್ತಿರುವುದಾದರೂ ಹೇಗೆ? ಅಮೆರಿಕದಂತಹ ಶ್ರೀಮಂತ ದೇಶಗಳು ಪಡೆಯುತ್ತಿರುವ ಹೊರ ಗುತ್ತಿಗೆಯಿಂದ ತಾನೇ? ಜಾಗತೀಕರಣದ ಅಬ್ಬರದಿಂದ ಮೆರೆಯುತ್ತಿರುವ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಖಾಸಗಿ ಸೇನಾ ಉದ್ಯಮಗಳನ್ನು ಕೈಗೊಂಬೆಯಾಗಿ ಮಾಡಿಕೊಂಡು ಬಡರಾಷ್ಟ್ರಗಳ ಜನತೆಗೆ ಆಮಿಷ ಒಡ್ಡಿ ಬಲಿಪಶುಗಳನ್ನಾಗಿಸಿ ಕೈ ಬಿಡುವುದು ಸ್ತುತ್ಯರ್ಹವಲ್ಲ. ಸಮಸ್ಯೆಗಳ ಕಂತೆಯನ್ನೇ ಹೊತ್ತಿರುವ ಪೆರು, ಚಿಲಿ, ಫಿಜಿ, ಮತ್ತು ದ್ರವರೂಪದ ಚಿನ್ನಕ್ಕೆ ಹೆಸರುವಾಸಿಯಾದ ಇರಾಕ್ ದೇಶಗಳ ಜನತೆ ಸದಾ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿರುವುದು ಅನಿವಾರ್ಯ. ಅಮೆರಿಕ, ಇರಾಕ್, ಆಫ್ರಿಕಾ ಹಾಗೂ ಇನ್ನಿತರ ರಾಷ್ಟ್ರಗಳಲ್ಲಿ ತನ್ನ ಎಲ್ಲೆಯನ್ನು ವಿಸ್ತರಿಸುತ್ತಾ ಹೊರಟಿರುವ ಇಂತಹ ಖಾಸಗಿ ಉದ್ಯಮಗಳಿಗೆ ಅಂತ್ಯವಾದರೂ ಎಂದು? ಇದು ಕಾನೂನಿನ ನಿರ್ಲಕ್ಷ್ಯವೋ ಅಥವಾ ಅಮೆರಿಕದಂತಹ ದೇಶಗಳು ಇತರ ದೇಶಗಳ ಮೇಲೆ ತಮ್ಮ ಪ್ರಾಬಲ್ಯ ಸಾಧಿಸಲು ನಡೆಸುವ ಪಿತೂರಿಯೋ ಎನ್ನುವುದಕ್ಕೆ ಈ ಸಂಪಾದಕೀಯ ಸೂಕ್ತ ನಿದರ್ಶನ.

ವೈ. ಎಂ. ಸಿದ್ಧಲಿಂಗ ಸ್ವಾಮಿ
ರಾಯಚೂರು

ಬಹುಮಾನಿತ ಪತ್ರಗಳು

Letters- The Sunday Indian - Kannada

ಸಂದರ್ಭೋಚಿತ ಲೇಖನ

ಟಿಎಸ್‌ಐ 'ರಕ್ಷಣಾ ಪಡೆ ವಿಶೇಷಾಂಕ' ನಿಜಕ್ಕೂ ಅಮೂಲ್ಯ ಒಳನೋಟಗಳನ್ನು ಹೊಂದಿತ್ತು. ಒಂದು ಮಿಲಿಯನ್‌ಗೂ ಹೆಚ್ಚಿನ ಯೋಧರನ್ನು ಹೊಂದಿರುವ ಭಾರತದ ಸೇನೆ ಜಗತ್ತಿನ ಅತ್ಯಂತ ಪ್ರಾಮಾಣಿಕ ಮತ್ತು ವೃತ್ತಿಪರ ಸೇನೆಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಪಡೆದಿದೆ. ಆದರೆ ಯಾವ ಸೇನೆಯೂ ಎದುರಿಸದಷ್ಟು ಸವಾಲು, ಸಮಸ್ಯೆಗಳನ್ನು ಭಾರತೀಯ ಸೇನೆ ಎದುರಿಸುತ್ತಿರುವುದು ಅಷ್ಟೇ ಸತ್ಯ. ಜಾಗತಿಕ ಮಟ್ಟದಲ್ಲಿ ಹೆಮ್ಮರವಾಗಿ ಬೆಳೆಯುತ್ತಿರುವ ಭಯೋತ್ಪಾದನೆ, ರಕ್ಷಣಾ ಪಡೆಗಳಲ್ಲಿ ಆಗುತ್ತಿರುವ ತಾಂತ್ರಿಕ ಕ್ರಾಂತಿ ಇವೆಲ್ಲವುಗಳ ನಡುವೆ ಸಮರ್ಪಕ ರಾಜಕೀಯ ಬೆಂಬಲವಿಲ್ಲದ, ದೂರದೃಷ್ಟಿ ಇಲ್ಲದ ಭಾರತೀಯ ಸೇನೆ ಕಾಲದೊಡನೆ ಹೆಜ್ಜೆ ಇಡಲು ತಡವರಿಸುತ್ತಿದೆ. ದೂರದೃಷ್ಟಿಯುಳ್ಳ, ಸಮತೋಲಿತ ರಕ್ಷಣಾ ಯೋಜನೆಗಳು, ಸುಸಜ್ಜಿತ ಶಸ್ತ್ರಾಸ್ತ್ರಗಳ ವ್ಯವಸ್ಥೆ ಭಾರತೀಯ ಸೇನೆಗೆ ಅಗತ್ಯವಿದೆ. ಈಗಿನ ಸ್ಥಿತಿಯಲ್ಲಿ ಹೊಸ ಶಸ್ತ್ರಾಸ್ತ್ರ, ತಾಂತ್ರಿಕ ಅಭಿವೃದ್ಧಿ ಸಾಧಿಸಬೇಕೆಂದರೆ ಭಾರತೀಯ ಸೇನೆ ೩-೫ರಿಂದ ವರ್ಷಗಳನ್ನು ತೆಗೆದುಕೊಳ್ಳುವುದು ಖಚಿತ. ಆಧುನಿಕ ಶಸ್ತ್ರಾಸ್ತ್ರಗಳು ಮತ್ತು ತಂತ್ರಜ್ಞಾನದ ವಿಚಾರದಲ್ಲಿ ನಮ್ಮ ಸೇನೆ ಚೀನಾ, ಜಪಾನ್ ಮತ್ತು ಅಮೆರಿಕಗಳಿಗಿಂತ ಬಹಳ ಹಿಂದಿದೆ. ಸೇನೆಯ ಆಧುನೀಕರಣ ಸದ್ಯದ ತುರ್ತು.

ಭಾವನಾ ಕಾಂತ್
ಅಮರಾವತಿ

ಜನಪ್ರಿಯತೆಯತ್ತ 'ಶೂಟಿಂಗ್'

ಇಲ್ಲಿಯವರೆಗೆ ಅಮೆರಿಕ, ಚೀನಾ, ರಷ್ಯಾ ದೇಶಗಳಲ್ಲಿ ಚಾಲ್ತಿಯಲ್ಲಿದ್ದ 'ಶೂಟಿಂಗ್' ಕ್ರೀಡೆ ದಿನ ಬೆಳಗಾಗುವುದರಲ್ಲಿ ಭಾರತದಲ್ಲೂ ಜನಪ್ರಿಯವಾಗಿದೆ. ಸತತವಾಗಿ ಬಂದ ಎರಡು ಒಲಿಂಪಿಕ್ಸ್ ಪದಕಗಳು ಇದಕ್ಕೆ ಕಾರಣ. ಈ ಕ್ರೀಡೆ ಸಂಪೂರ್ಣ ತಾಂತ್ರಿಕತೆ, ವೈಯಕ್ತಿಕ ಛಲ ಮತ್ತು ಅಪಾರ ಏಕಾಗ್ರತೆಯನ್ನು ಬೇಡುತ್ತದೆ. ದುರದೃಷ್ಟವೆಂದರೆ ಈ ಕ್ರೀಡೆ ಕೈಗೆಟುಕುವುದು ಒಂದೋ ಶ್ರೀಮಂತರಿಗೆ ಅಥವಾ ಅರೆ ಸೇನಾಪಡೆ ಮತ್ತು ಸೇನಾಪಡೆಯಲ್ಲಿರುವ ವ್ಯಕ್ತಿಗಳಿಗೆ. ಹಾಗೊಂದು ವೇಳೆ ಇದು ಜನಸಾಮಾನ್ಯರಿಗೆ ತಲುಪುವಂತಾದರೆ ನಾವು ಮುಂದಿನ ಕ್ರೀಡಾಕೂಟಗಳಲ್ಲಿ ಭಾರತದ ಹಲವು ಅಭಿನವ್- ರಾಥೋಡ್‌ಗಳಂತಹ ಪ್ರತಿಭೆಗಳು ಜಾಗತಿಕ ಕ್ರೀಡಾ ನಭದಲ್ಲಿ ಮಿಂಚುವುದನ್ನು ನೋಡಬಹುದು. ತನ್ನ ಎಡೆಬಿಡದ ಬೆನ್ನು ಮೂಳೆಯ ನೋವಿನಲ್ಲೂ ಭಾರತಕ್ಕೆ ಪದಕ ತಂದು ಕೊಟ್ಟ ಅಭಿನವ್ ಬಿಂದ್ರಾ ಅವರ ಸಾಧನೆ ನಿಜಕ್ಕೂ ಶ್ಲಾಘನೀಯ.

ಯುಧಿಷ್ಠಿರ್ ಶರ್ಮ
ಇ-ಮೇಲ್ ಮೂಲಕ

ಒಲಿಂಪಿಕ್ಸ್ ಮೇಲೆ ರಕ್ತದ ಕಲೆ

ಒಲಿಂಪಿಕ್ಸ್‌ನ ಧ್ಯೇಯ-ಧೋರಣೆಗಳನ್ನು ಬದಿಗೊತ್ತಿದ್ದಲ್ಲದೇ, ಅಲ್ಲಿನ ಮಾನವ ಹಕ್ಕುಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಂಪೂರ್ಣ ವಿಫಲವಾದ ಚೀನಾ ಸರ್ಕಾರದ ಕುರಿತು ಅರಿಂದಮ್ ಚೌಧುರಿ ಅವರ ಚಿಂತನೆಗಳನ್ನು ತಳ್ಳಿಹಾಕುವಂತಿಲ್ಲ. ಬಂಧಿಸಿರುವ ಚಳವಳಿಗಾರರನ್ನು ಬಿಡುಗಡೆ ಮಾಡುವುದರ ಜೊತೆಗೆ, ದೇಶ ಮತ್ತು ವಿದೇಶದ ಪತ್ರಕರ್ತರಿಗೆ ಅಲ್ಲಿನ ಪರಿಸ್ಥಿತಿ ಕುರಿತು ಸ್ವತಂತ್ರವಾಗಿ ವರದಿ ಮಾಡುವಲ್ಲಿ ಚೀನಾ ಸರ್ಕಾರ ಅವಕಾಶ ಕಲ್ಪಿಸಬೇಕು. ಜೊತೆಗೆ ಅಲ್ಲಿ ಜಾರಿಯಲ್ಲಿರುವ ಮರಣದಂಡನೆಯಂತಹ ಕ್ರೂರ ಕಾನೂನುಗಳನ್ನೂ ರದ್ದು ಮಾಡಬೇಕು. ಒಲಿಂಪಿಕ್ಸ್ ಪ್ರಾರಂಭದಲ್ಲಿಯೇ ವಿರೋಧಿಗಳ ಹುಟ್ಟಡಗಿಸುವ ಕಾರ್ಯವನ್ನು ಚೀನಾ ಮಾಡಿತು. ದೇಶದ'ಸ್ಥಿರತೆ' ಮತ್ತು'ಸಾಮರಸ್ಯ'ದ ರಕ್ಷಣೆಯ ನೆಪವೊಡ್ಡಿ ಚೀನಾ ಸರ್ಕಾರ ಸಾವಿರಾರು ಪ್ರತಿಭಟನೆಗಾರರನ್ನು ಒತ್ತಾಯಪೂರ್ವಕವಾಗಿ ಹೊರದಬ್ಬುವ ಕಾರ್ಯ ನಡೆಸಿದ್ದು ಮಾನವೀಯತೆಗೆ ಎಸಗಿದ ಅಪಚಾರ. ಮಾನವ ಹಕ್ಕುಗಳ ಮೇಲೆ ಚೀನಾ ಎಸಗುತ್ತಿರುವ ಅತ್ಯಾಚಾರದ ವಿರುದ್ಧ ಜಾಗತಿಕ ನಾಯಕರು, ಮಾನವ ಹಕ್ಕು ಹೋರಾಟಗಾರರು ಧ್ವನಿ ಎತ್ತಲು ಇದು ಸಕಾಲ. ಇಲ್ಲವಾದರೆ, ಮಾನವ ಹಕ್ಕುಗಳನ್ನು ದಮನ ಮಾಡಿಯೂ ಒಲಿಂಪಿಕ್ಸ್ ಕ್ರೀಡಾಕೂಟದ ಆತಿಥ್ಯ ವಹಿಸಿಕೊಳ್ಳಬಹುದು ಎನ್ನುವ ತಪ್ಪು ಸಂದೇಶ ಇತರ ರಾಷ್ಟ್ರಗಳಿಗೆ ರವಾನೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ರಚಿತಾ ಗುಲಾಟಿ
ಪಟಿಯಾಲ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .