ಇದು ನಮ್ಮ ವಿಶೇಷ ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಭಯೋತ್ಪಾದನೆ
 
ಬದಲಾಗಬೇಕಿದೆ ಕಾಮಾಲೆಕಣ್ಣಿನ ಗ್ರಹಿಕೆ
 

ಭಯೋತ್ಪಾದಕರು ಇಸ್ಲಾಂ ಧರ್ಮವನ್ನು ಬಳಸಿಕೊಂಡು ಮುಗ್ಧ ಜನ ಸಮುದಾಯದ ಬಲಿ ತೆಗೆದುಕೊಳ್ಳುತ್ತಿದ್ದಾರೆ
 

ಫಕೀರ್ ಮುಹಮ್ಮದ್ ಕಟ್ಪಾಡಿ

ಹಿರಿಯ ಲೇಖಕರು

ಬೆಂಗಳೂರು ಮತ್ತು ಅಹಮದಾಬಾದ್ ಮುಂತಾದ ಕಡೆಗಳಲ್ಲಿ ಮತ್ತೆ ಬಾಂಬುಗಳನ್ನಿಟ್ಟು ಭಯೋತ್ಪಾದಕರು ಅಮಾಯಕರ ಬಲಿ ತೆಗೆದುಕೊಂಡಿದ್ದಾರೆ. ರಾಜಕಾರಣಿಗಳು, ಕೇಂದ್ರ ಸರಕಾರ- ರಾಜ್ಯ ಸರಕಾರ, ಕಾಂಗ್ರೆಸ್- ಭಾಜಪಗಳ ಮಧ್ಯೆ ಆರೋಪ- ಪ್ರತ್ಯಾರೋಪಗಳಲ್ಲಿ ಮುಳುಗಿದ್ದಾರೆ. ಭಾರತದ ರಾಜಕಾರಣ, ಇಂತಹ ಸಮಸ್ಯೆಗಳು ಎದುರಾದಾಗ ನಿದ್ದೆಯಿಂದ ಥಟ್ಟನೆ ಎಚ್ಚತ್ತಂತೆ 'ಇದೊಂದು ಪ್ರಾತಿನಿಧಿಕ ಯುದ್ಧ', ಜಾಗತಿಕ ನೆಲೆಯಲ್ಲಿ 'ಭಯೋತ್ಪಾದನೆಯ ವಿರುದ್ಧ ಯುದ್ಧ', 'ಎಲ್ಲ ಮುಸ್ಲಿಮರೂ ಭಯೋತ್ಪಾದಕರಲ್ಲ, ಆದರೆ ಭಯೋತ್ಪಾದಕರೆಲ್ಲ ಮುಸ್ಲಿಮರು' ಎಂದೆಲ್ಲ ಕೂಗಿ ಜನಸಾಮಾನ್ಯರನ್ನು ದಾರಿತಪ್ಪಿಸುವಂತಹ ಜಾಣತನದಲ್ಲೇ ಮುಳುಗಿರುತ್ತದೆ. ಸಮೂಹ ಮಾಧ್ಯಮಗಳು ಯಾರಾದರೂ ಅಮಾಯಕ ಮುಸ್ಲಿಮರನ್ನು ತೋರಿಸಿ 'ಈ ಕೃತ್ಯವನ್ನು ಮಾಡಿದವರು ಇಂಡಿಯನ್ ಮುಜಾಹಿದೀನ್ ಸಂಘಟನೆ ಎಂದು ಹೇಳಿಕೆ ನೀಡಿದೆ, ಇದಕ್ಕೆ ನೀವೇನು ಹೇಳುತ್ತೀರಿ?' ಎಂಬ ಪ್ರಶ್ನೆ ಕೇಳಿ, ಇದಕ್ಕೆಲ್ಲ ಮುಸ್ಲಿಂ ಸಮುದಾಯವೇ ಜವಾಬ್ದಾರಿ ಎಂಬಂತಹ ಪರೋಕ್ಷ ತೀರ್ಮಾನವನ್ನು ಸಾರಿ ಬಿಡುತ್ತವೆ. ಪೊಲೀಸರು ನಾಲ್ಕಾರು ಅಮಾಯಕ ಮುಸ್ಲಿಂ ಹುಡುಗರನ್ನು ಹಿಡಿದು ಸಾಧ್ಯವಾದಷ್ಟು ಹಿಂಸೆ ನೀಡಿ ಬಾಯಿ ಬಿಡಿಸುವ ಕೆಲಸವನ್ನು ಮಾಡುತ್ತಾರೆ. ಮುಸ್ಲಿಂ ಸಮುದಾಯವನ್ನು ಸಾಕಷ್ಟು ಪ್ರಮಾಣದಲ್ಲಿ ನಿಂದನೆಗೆ ಗುರಿಪಡಿಸಿ, ಪೊಲೀಸರು ತಮ್ಮ ಕಾರ್ಯ ವೈಖರಿಯ ವೈಫಲ್ಯವನ್ನು ಮುಚ್ಚಿಹಾಕುವಲ್ಲಿ ಯಶಸ್ವಿಯಾಗುತ್ತಾರೆ.

ಇಂತಹ ಘಟನೆಗಳು ನಡೆದಾಗ ಮುಸ್ಲಿಮನಾಗಿರುವ ನನ್ನನ್ನೇ ಬೊಟ್ಟು ಮಾಡಿ 'ಇದಕ್ಕೆ ನೀವೇನು ಹೇಳುತ್ತೀರಿ?' ಎಂದಾಗ ನನಗೆ ಸಿಟ್ಟುಬರುತ್ತದೆ. ಯಾಕೆಂದರೆ ಹಿಂದೆಲ್ಲ ಕೋಮುಗಲಭೆಯ ಹೆಸರಿನಲ್ಲಿ ಸಹಸ್ರಾರು ಮುಸ್ಲಿಮರನ್ನು ಎಲ್ಲರೆದುರೇ ಹಿಂದೂ ಭಯೋತ್ಪಾದಕರು ಕೊಲೆಮಾಡಿದಾಗ ಈ ಜನ, ಹಿಂದೂ ಧರ್ಮೀಯರಾದ ನಿಮ್ಮನ್ನು ಈ ಪ್ರಶ್ನೆ ಕೇಳಿದ್ದರೆ ನನ್ನ ನೋವಿನ ಅನುಭವ ನಿಮಗೂ ಆದೀತು. ಕೊಲೆಗೀಡಾದ ಜನರ ಸಂಬಂಧಿಗಳು ರೋಧಿಸುವಾಗ, ಗಾಯಗೊಂಡವರು ನರಳುವಾಗ ನಿಮ್ಮಂತೆಯೇ ನನಗೂ ನೋವಾಗುತ್ತದೆ, ನಿಮ್ಮಂತೆಯೇ ನಾನೂ ಕೂಡ ಅಸಹಾಯಕನೆಂದು ನಿಮಗ್ಯಾಕೆ ಅನ್ನಿಸುವುದಿಲ್ಲ? ಎಲ್ಲ ಮುಸ್ಲಿಮರೂ ಭಯೋತ್ಪಾದಕರಲ್ಲ ಎನ್ನುವುದೇನೊ ಸರಿ. ಆದರೆ, ಈ ದೇಶದಲ್ಲಾಗಲೀ, ಜಗತ್ತಿನೆಲ್ಲೆಡೆಯಲ್ಲಾಗಲೀ ಭಯೋತ್ಪಾದಕರು ಮುಸ್ಲಿಮರು ಮಾತ್ರ ಅಲ್ಲ ಎನ್ನುವ ಸತ್ಯ ನಿಮಗೆ ತಿಳಿದಿಲ್ಲವೆಂದು ನನಗನ್ನಿಸುವುದಿಲ್ಲ. ಜಗತ್ತಿನ ಯಾವ ಧರ್ಮವೂ ಕೂಡ ಕೊಲೆಗಾರನನ್ನು, ಕ್ರಿಮಿನಲ್ ವ್ಯಕ್ತಿಯನ್ನು ಬೆಂಬಲಿಸುವುದು ಬಿಡಿ, ತಮ್ಮವನೆಂದು ಹೇಳಿಕೊಳ್ಳುವುದಾಗಲೀ, ಅವನನ್ನು ಸಮರ್ಥಿಸಿಕೊಳ್ಳುವುದಾಗಲೀ ಮಾಡುವುದಿಲ್ಲ. ಹಾಗಿರುವಾಗ ಒಬ್ಬ ಕ್ರಿಮಿನಲ್ ವ್ಯಕ್ತಿಯನ್ನು, ಅವನ ಕೃತ್ಯ ಸಾಬೀತಾದಾಗ ಶಿಕ್ಷೆಗೆ ಗುರಿಪಡಿಸುವ ಜೊತೆಗೆ, ಇಡೀ ಸಮುದಾಯವನ್ನು ಶಿಕ್ಷೆಗೆ ಗುರಿಪಡಿಸುವುದು ಸರಿಯೇ?

ಭಯೋತ್ಪಾದಕರು ಇಸ್ಲಾಂ ಧರ್ಮವನ್ನು ಬಳಸಿಕೊಂಡು ಮುಸ್ಲಿಮರನ್ನೂ ಸೇರಿದಂತೆ, ಮುಗ್ಧ ಜನ ಸಮುದಾಯದ ಬಲಿ ತೆಗೆದುಕೊಳ್ಳುತ್ತಿದ್ದಾರೆ. ಮುಸ್ಲಿಂ ಸಮುದಾಯವಿಂದು ಬಹಳ ವಿಶಿಷ್ಟವಾದ ಸಮಸ್ಯೆಯ ಅಡಕತ್ತರಿಯಲ್ಲಿ ಸಿಲುಕಿದೆ ಎನ್ನುವುದನ್ನು ಗಮನಿಸಬೇಕು. ಇಸ್ಲಾಂ ಹೆಸರನ್ನು ಬಳಸಿಕೊಂಡು ಭಯೋತ್ಪಾದಕರು ಒಂದೆಡೆ ಮುಸ್ಲಿಮರನ್ನೂ ಕೊಲೆ ಮಾಡುತ್ತಿದ್ದಾರೆ. ಇನ್ನೊಂದೆಡೆ ಪೊಲೀಸ್ ವಿಚಾರಣೆಯಲ್ಲೂ ಮುಸ್ಲಿಮರೇ ಹಿಂಸೆಗೆ ಬಲಿಯಾಗುತ್ತಿದ್ದಾರೆ. ಮತ್ತೊಂದೆಡೆ ಇಡೀ ಮುಸ್ಲಿಂ ಸಮುದಾಯ ಮಾಧ್ಯಮ ಮತ್ತು ಮುಸ್ಲಿಂ ವಿರೋಧಿಗಳು ಹೊರಿಸುವ ವಿವಿಧ ಆರೋಪಗಳನ್ನು ಎದುರಿಸಬೇಕಾಗಿದೆ.

ಏಳೆಂಟು ವರ್ಷಗಳ ಹಿಂದೆ ನಮ್ಮ ಮನೆಯೆದುರು ಜುಬ್ಬಾ ಪೈಜಾಮ ಧರಿಸಿ ಟೊಪ್ಪಿ ಇಟ್ಟು, ದಾಡಿಬಿಟ್ಟ ಯುವಕನ ಜೊತೆಗೆ ಮೂರು- ನಾಲ್ಕು ಮಂದಿಯ ಗುಂಪು ಗೇಟಿನ ಮುಂದೆ ನಿಂತು ನನ್ನನ್ನು ಕರೆದು ಧರ್ಮ, ಸತ್ತ ನಂತರದ ಬದುಕಿನ ಬಗ್ಗೆ, ಧರ್ಮ ವಿಶ್ವಾಸದ ಬಗ್ಗೆ ಭಾಷಣ ಬಿಗಿಯಿತು. ನಂತರ ನಿಮ್ಮ ಮಕ್ಕಳೆಲ್ಲಿ ಎಂದು ಕೇಳಿದರು. 'ನನ್ನ ಒಬ್ಬನೇ ಮಗ ಕಾಲೇಜಲ್ಲಿ ಓದುತ್ತಿದ್ದಾನೆ' ಎಂದೆ. ಕೂಡಲೇ ಅವರು 'ಅವನೇ ನಮಗೆ ಬೇಕಿರುವುದು' ಎಂದರು. ಯಾಕೆ ಎಂದೆ. 'ಅವನಿಗೆ 'ದೀನಿ ತಾಲೀಮು' ನೀಡ ಬೇಕಿದೆ' ಎಂದರು. ಹಾಗೇ ಹೇಳಿದ ಆ ಗುಂಪಿನಲ್ಲಿದ್ದವನ ಮಾತಿನಲ್ಲಿ ನನಗೆ ಅವನ ಉದ್ದೇಶ ಬೇರೇನೋ ಇದೆ ಎಂದು ತಿಳಿದು ಸಿಟ್ಟು ಬಂತು. 'ನಿನ್ನ ಸಂಕುಚಿತ ದೃಷ್ಟಿಕೋನದ 'ದೀನಿ ತಾಲೀಮು' ನನ್ನ ಮಗನಿಗೆ ಬೇಕಿಲ್ಲ...' ಎಂದು ನನಗೆ ತಿಳಿದ ಧಾರ್ಮಿಕ ವಿಷಯಗಳ ಆಧಾರದ ಮೇಲೆ ವಾದಿಸಿ, ಅವನ ನಿಲುವನ್ನು ಸಾಕಷ್ಟು ಹಂಗಿಸಿ ಕಳಿಸಿದೆ. ಸ್ವಲ್ಪ ಸಮಯದ ನಂತರ ಇಂತಹವರು ಕರೆದಲ್ಲಿಗೆ ಹೋಗಿ ಬಂದ ನಮ್ಮ ಕೆಲವು ಯುವಕರು ತಿಳಿಸಿದಂತೆ, ಅಲ್ಲಿ ಸೇರಿದ ಯುವಕರಿಗೆ ಧರ್ಮದ ಬೋಧನೆಯ ಜೊತೆಗೆ, ಜಗತ್ತಿನಾದ್ಯಂತ ಮುಸ್ಲಿಮರ ಮೇಲೆ ಆಗುತ್ತಿರುವಂತಹ ಅನ್ಯಾಯ, ಅತ್ಯಾಚಾರಗಳು, ಗುಜರಾತಿನ ಹಿಂಸಾಕಾಂಡ, ದೇಶದ ಹಲವಾರು ಕಡೆಗಳಲ್ಲಿ ನಡೆದ ಕೋಮು ಗಲಭೆಗಳಲ್ಲಿ ಮುಸ್ಲಿಮರ ಹತ್ಯೆ ಮುಂತಾದ ವಿಷಯಗಳ ಜೊತೆಗೆ ವೀಡಿಯೋ ಸಿಡಿಗಳನ್ನು ಪ್ರದರ್ಶಿಸಿ ಯುವಕರನ್ನು ರೊಚ್ಚಿಗೆಬ್ಬಿಸುವ ಕೆಲಸ ಮಾಡಲಾಗುತ್ತಿದೆ.

ಆದರೆ, ಸಮಾಧಾನಕರ ವಿಷಯವೆಂದರೆ, ಇಂದು ಮುಸ್ಲಿಂ ಚಿಂತನಾ ಕ್ರಮದಲ್ಲಿ ಬಹಳ ಬದಲಾವಣೆಗಳಾಗಿವೆ. ಬಹಳ ಕಾಲ ಮೌನವಾಗಿದ್ದದ್ದು, ತಮ್ಮ ತಪ್ಪು ಎಂದು ಎಚ್ಚೆತ್ತ ಮುಲ್ಲಾಗಳು, ಮೌಲ್ವಿಗಳು, ಧಾರ್ಮಿಕ ಮುಖಂಡರು ಇಸ್ಲಾಮಿನಲ್ಲಿ ಭಯೋತ್ಪಾದನೆಗೆ ಸ್ಥಾನವಿಲ್ಲವೆಂದು, ಆತಂಕವಾದಿಗಳು (ದೆಹಶತ್‌ಗರ್ದ್) ಮುಸ್ಲಿಮರೇ ಅಲ್ಲವೆಂದು ಬಹಿರಂಗವಾಗಿ ಶುಕ್ರವಾರದ ಪ್ರವಚನ- ಖುತ್ಬಾಗಳನ್ನು ಸೇರಿದಂತೆ ಎಲ್ಲೆಡೆಯಲ್ಲೂ ಘೋಷಿಸುತ್ತಿದ್ದಾರೆ. ಆದರೆ, ಈ ಕಾರ್ಯ ಉಳಿದ ಧರ್ಮಗಳಲ್ಲಿ ಆಗುತ್ತಿದೆಯೇ?

ಜಾಗತೀಕರಣದ ದೆಸೆಯಿಂದ ದೇಶ- ದೇಶಗಳ ಮಧ್ಯೆ ಪ್ರಯಾಣ ಸುಲಭಸಾಧ್ಯವಾಗಿದೆ. ತಂತ್ರಜ್ಞಾನದ ಬಳಕೆಯೂ ಅಡೆತಡೆಯಿಲ್ಲದೆ ಸುಲಭವಾಗಿ ಲಭಿಸುತ್ತದೆ. ಭಯೋತ್ಪಾದಕರು ಈ ಸೌಲಭ್ಯವನ್ನು ಸಂಪೂರ್ಣವಾಗಿ ಉಪಯೋಗಿಸುತ್ತಿದ್ದಾರೆ. ಬಾಂಬನ್ನು ತಯಾರಿಸುವುದು, ಅದರ ಬಗ್ಗೆ ಪರಿಣತಿ ಸಾಧಿಸುವುದಕ್ಕೆ ಅಂತರ್ಜಾಲದಂತಹ ಮಾಧ್ಯಮ ಬಳಕೆಯಾಗುತ್ತಿದೆ. ಇಂದು ಭಯೋತ್ಪಾದಕರ ಅಮಾನವೀಯ ಕೃತ್ಯಗಳು ಎಂತಹ ಪರಾಕಾಷ್ಠೆಯನ್ನು ತಲುಪಿದೆ ಎಂದರೆ ಆಸ್ಪತ್ರೆ, ರೋಗಿಗಳು, ಸೇವೆ ಮಾಡುತ್ತಿರುವ ವೈದ್ಯರು, ರೋಗಿಗಳನ್ನು ನೋಡಲು ಬಂದ ಸಂಬಂಧಿಗಳನ್ನೂ ಬಿಡದೆ ಬಲಿ ತೆಗೆದುಕೊಂಡಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯ ಬುನಾದಿಯೇ ಪರಸ್ಪರ ವಿಶ್ವಾಸ. ರಾಜ್ಯ- ಕೇಂದ್ರದ ಮಧ್ಯೆ, ಸಮುದಾಯ- ಸಮುದಾಯಗಳ ಮಧ್ಯೆ, ರಾಜಕೀಯ ಪಕ್ಷಗಳ ಮಧ್ಯೆ, ರಾಜಕಾರಣಿಗಳ ಮಧ್ಯೆ ಇಂತಹ ಸಂದರ್ಭಗಳಲ್ಲಿ ವಿಶ್ವಾಸ ಮೂಡಬೇಕು; ಆರೋಪ- ಪ್ರತ್ಯಾರೋಪದ ಮೇಲಾಟವನ್ನು ನಿಲ್ಲಿಸಬೇಕು. ಭಯೋತ್ಪಾದನೆಯ ಮೂಲದಲ್ಲಿರುವ ನಿರುದ್ಯೋಗ, ಬಡತನ, ಕೋಮುಗಲಭೆಗಳು, ನ್ಯಾಯ ವ್ಯವಸ್ಥೆಯಲ್ಲಿರುವ ತಾರತಮ್ಯ, ಅನ್ಯಾಯ, ಅಸಮಾನತೆ ಮುಂತಾದ ಸಮಸ್ಯೆಗಳಿಗೆ ಮೂಲ ಕಾರಣ ಮತ್ತು ಪರಿಹಾರ ಹುಡುಕುವಲ್ಲಿ ಕಾರ್ಯಪ್ರವೃತ್ತರಾಗಬೇಕು. ರಾಜಕೀಯ ಪಕ್ಷ ಮತ್ತು ವ್ಯಕ್ತಿಗಳ ಹಿಡಿತದಿಂದ ಪೊಲೀಸ್ ಇಲಾಖೆಯನ್ನು ಮುಕ್ತಗೊಳಿಸಬೇಕಾಗಿದೆ. ಹೀಗೆ ಭಯೋತ್ಪಾದನೆ ವಿರುದ್ಧ ಹಲವು ನೆಲೆಯಲ್ಲಿ ಸಮರ ಸಾರಬೇಕಾಗಿದೆ. ಪೋಟಾ, ಟಾಡಾದಂತಹ ಅಮಾನವೀಯ ಕಾನೂನುಗಳು ಮತ್ತಷ್ಟು ಆತಂಕವಾದಿಗಳ ಸೃಷ್ಟಿಗೆ ಕಾರಣವಾಗುತ್ತದೆ ಎನ್ನುವುದನ್ನು ಗಮನಿಸಿ, ನಿರಪರಾಧಿಗಳು ಶಿಕ್ಷೆ, ಹಿಂಸೆಗೆ ಗುರಿಯಾಗದಂತೆ ಎಚ್ಚರವಹಿಸುವ ಹೊಸ ಕಾನೂನು

ವ್ಯವಸ್ಥೆಯನ್ನೊಳಗೊಂಡ ಕೇಂದ್ರ ಭಯೋತ್ಪಾದನಾ ನಿಗ್ರಹ ಆಯೋಗ (ಸೆಂಟ್ರಲ್ ಆಂಟಿ ಟೆರರಿಸಂ ಕಮೀಷನ್)ದಂತಹದ್ದನ್ನು ಸ್ಥಾಪಿಸುವತ್ತ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಂಟಿಯಾಗಿ ಹೆಜ್ಜೆ ಇಡಬೇಕು.

ಟಿಎಸ್‌ಐ

 

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .