ಇದು ನಮ್ಮ ವಿಶೇಷ ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಸಣ್ಣ ಕಥೆ
ಅವಳೆಂಬ ಅಪಘಾತ
 
ಕೆ.ಎಸ್. ವಿನಾಯಕ

ಕಾವೇರಿ ಗಲಾಟೆಯಂತೆ, ಬೆಂಗಳೂರು ಬಂದ್ ಅಂತೆ... ಅವಳು ಮಣಗುಡುತ್ತಿದ್ದರೂ ಕಿವಿಗೆ ಬೀಳದವನಂತೆ ಬ್ಯಾಗ್ ಏರಿಸಿ, ಶೂ ಕಟ್ಟಿ ಆಫೀಸ್‌ನತ್ತ ಮುಖ ಮಾಡಲು ಸಜ್ಜಾದೆ. ರೀ ಇವತ್ತಿಗೆ ಮದ್ವೆಯಾಗಿ ಒಂದು ವರ್ಷ ಕಳೆಯಿತು. ಹಾಯಾಗಿ ಯಾವುದಾದರೂ ದೇವಸ್ಥಾನಕ್ಕೆ ಹೋಗಬಾರದ? ಹೇಗೂ ಬೆಂಗಳೂರು ಬಂದ್ ಅಂತೆ... ಮತ್ತೆ ರಾಗ ಎಳೆದಳು. ಸ್ವಾತಂತ್ರ್ಯ ದಿನಕ್ಕೂ ರಜೆ ಕೊಡದ, ಧ್ವಜ ಹಾರಿಸದ ಎಂಎನ್‌ಸಿ ನಮ್ಮದು. ಅಂತಹದರಲ್ಲಿ ಯಃಕಶ್ಚಿತ್ ಸ್ಟ್ರೈಕ್‌ಗೆ ರಜ ಕೊಡ್ತಾರಾ?! ಮುಂದುಗಡೆ ಬಾಗಿಲಿಗೆ ಬೀಗ ಜಡಿದು ಹಿಂದುಗಡೆಯಿಂದ ಕೆಲಸ ಮಾಡಿಸುತ್ತಾರೆ. ಒಂದು ದಿನ ರಜ ಕೊಟ್ಟರೂ ಅವರಿಗೆ ಲಕ್ಷಾಂತರ ರೂ ನಷ್ಟವಾಗುತ್ತೆ... ಅನ್ನುತ್ತಲೇ ಶೂ ಕಟ್ಟಿ ಬಾಗಿಲ ಬಳಿ ಬಂದೆ. ಫೋನ್ ರಿಂಗಣಿಸಿತು. ಮ್ಯಾನೇಜರ್ ವಿಶ್ವನಾಥರ ಕರೆ. ಇವತ್ತು ರಕ್ಷಣಾ ವೇದಿಕೆಯವರು ಹೋರಾಟ ಮಾಡುತ್ತಾರಂತೆ. ಬಾಗಿಲು ಮುಚ್ಚದ ಕಂಪನಿಗಳಿಗೆ ಕಲ್ಲು ಹೊಡೆಯುತ್ತಾರಂತೆ! ಹಾಗಾಗಿ ಬಾಸು ಇವತ್ತು ಆಫೀಸಿಗೆ ರಜೆ ಕೊಡಲು ಹೇಳಿದ್ದಾರೆ. ಸೋ ನಿಮಗೆಲ್ಲಾ ರಜೆ... ಅವರು ಮಾತು ಮುಗಿಸುವ ಮುನ್ನವೇ ಕರೆ ಕಟ್ಟಾಯಿತು. ಮುಂಡೇವಕ್ಕೆ ದಿನಾ ಬೆಳಗಾದರೆ ಕುಡಿಯಲಿಕ್ಕೆ ಕಾವೇರಿ ನೀರೇ ಬೇಕು ಅಂತ ಗೊತ್ತಿಲ್ಲ. ಯಾರೋ ಗಲಾಟೆ ಮಾಡುತ್ತಾರಂತೆ! ಅದಕ್ಕಾಗಿ ಇವರು ರಜ ಕೊಡುತ್ತಾರಂತೆ! ಇಂತಹವರಿಂದಲೇ ದೇಶ ಹಾಳಾಗುತ್ತಿದೆ ಎಂದು ಗೊಣಗುತ್ತಾ ಶೂ ಕಳಚಿ ಬಿಸಾಡಿ, ಬ್ಯಾಗನ್ನು ಸೋಫಾದ ಮೇಲೆ ಎಸೆದು ರೂಮು ಸೇರಿದೆ.

ರೀ ಇವತ್ತಿಗೆ ನಮ್ಮ ಮದ್ವೆಯಾಗಿ ಒಂದು ವರ್ಷ ಆಯಿತು. ಏನು ಸ್ಪೆಷಲ್ ಅಡುಗೆ ಮಾಡಲಿ? ಸುಮ್ನಿರೆ, ಅವಳು ಸತ್ತು ಎರಡು ವರ್ಷವಾಯಿತು ನಾನು ಏನು ತಿನ್ನಲಿ? ಊಹುಂ... ಹಾಗಂತ ಹೆಂಡತಿಗೆ ಹೇಳಲು ಮನಸ್ಸಾಗಲಿಲ್ಲ. ತಲೆ ನೋಯುತ್ತಿದೆ. ನನಗೇನೂ ಬೇಡ. ಮಧ್ಯಾಹ್ನ ಎಚ್ಚರ ಆದ್ರೆ ಊಟ ಮಾಡುತ್ತೇನೆ... ರೂಮು ಬಾಗಿಲು ಹಾಕಿಕೊಂಡೆ. ಅವಳು ತಿರುಗಿ ಏನನ್ನೂ ಕೇಳಲಿಲ್ಲ. ಕೇಳಿದ್ದರೂ ಅದು ನನಗಂತೂ ಕೇಳಿಸುತ್ತಿರಲಿಲ್ಲ. ಅಷ್ಟು ಗಟ್ಟಿಯಾಗಿ ರೂಮಿನ ಬಾಗಿಲು ಜಡಿದಿದ್ದೆ.

ಕಿಟಕಿ ಬಾಗಿಲು ತೆರೆದೆ. ಸದಾ ಗಿಜಿಗುಡುತ್ತಿದ್ದ ಮಹಾನಗರಿ ಮೈ ತುಂಬಾ ಮೌನ ಆವರಿಸಿತ್ತು. ಲಾರಿ, ಬಸ್ಸುಗಳಿಂದ ತುಂಬಿ ತುಳುಕುತ್ತಿದ್ದ ರಸ್ತೆಗಳೆಲ್ಲಾ ಬಿಕೋ ಅನ್ನುತ್ತಿದ್ದವು. ಬೀದಿಯಲ್ಲಿ ನೊಣಗಳು ಇದ್ದವೇನೋ, ಆದರೆ ಜನರಂತೂ ಇರಲಿಲ್ಲ! ದೇವರೆ ವಾರಕ್ಕೆ ಮೂರು ಕಾವೇರಿ ಹೋರಾಟ ನಡೆಯಲಿ ಎನ್ನುತ್ತಾ, ದಿಂಬಿಗೆ ತಲೆ ಕೊಡುತ್ತಾ, ಹಾಸಿಗೆಗೆ ಒರಗಿದೆ.

******

ಅವತ್ತೂ ಹೀಗೆ ಮಧ್ಯಾಹ್ನದ ಬಿರುಬಿಸಿಲು. 'ಮಾಣಿ ಹಗಲೇ ಎಣ್ಣೆ ಹೊಡುದ್ಯೆನೋ. ಅಲ್ಲಾ ಅವಳ ಮೇಲೆ ಬೈಕು ಹತ್ತಿಸ್ತಾ ಇದ್ದ್ಯಲ್ಲಾ...' ಬೀಡಾ ಅಂಗಡಿ ವೆಂಕಟೇಶಣ್ಣ ಕಿರುಚುತ್ತಾ ಇದ್ದರೆ, ನನ್ನ ಎದೆ ಡವಗುಡುತ್ತಿತ್ತು. ದಿನ ಹಗಲೇ ಟೈಟ್ ಆಗ್ತಾ ಇದ್ದೆ ನಿಜ. ಆದ್ರೆ ಇವತ್ತು ದೇವರಾಣೆಗೂ ಒಂದೇ ಒಂದು ಗುಟುಕು ಕುಡಿದಿಲ್ಲ. ಹಣೆಬರಹ ನಂದು. ಒಂದು ಪೆಗ್ ಏರಿಸಿ ಬಂದಿದ್ದರೆ ಹೀಗಾಗುತ್ತಿರಲಿಲ್ಲವೇನೋ... ಅವಳನ್ನು ಸೀನನ ರಿಕ್ಷಾಕ್ಕೆ ಹತ್ತಿಸಿದೆ. ವೆಂಕಟೇಶಣ್ಣ ಕೂಡ ಅವಳನ್ನು ರಿಕ್ಷಾಕ್ಕೆ ಹತ್ತಿಸಲು ಸಹಾಯ ಮಾಡಿದರು. ಎಚ್ಚರ ತಪ್ಪಿತ್ತು ಹನಿ ರಕ್ತವೇನೂ ತೊಟ್ಟಿಕ್ಕಿರಲಿಲ್ಲ. ಹೆಣ್ಣು ಮಕ್ಕಳು ಎಲ್ಲದರಲ್ಲೂ ತುಂಬಾ ಸೂಕ್ಷ್ಮ ಎಂಬುದನ್ನು ಕೇಳಿದ್ದರಿಂದ ಏನಾದ್ರೂ ಆದ್ರೆ ಅನ್ನೋ ಭಯ. ಸಂಜೀವಿನಿ ಆಸ್ಪತ್ರ್ರೆಗೆ ತಗೊಂಡು ಹೋಗು. ನಾನು ಬೈಕ್‌ನಲ್ಲಿ ಬರ್ತೀನಿ. ಸೀನನಿಗೆ ಹೇಳಿದೆ. ಏನೋ ಮಾಡಿ ವೆಂಕಟೇಶಣ್ಣನ ಬಾಯಿ ಮುಚ್ಚಿಸಿದೆ.

ಆದ್ರೂ ನನ್ನ ಸರ್ವೀಸ್‌ನಲ್ಲಿ ಇದು ಫಸ್ಟ್ ಆಕ್ಸಿಡೆಂಟು. ಎರಡು ಮೂರು ಬಾಟಲಿ ಏರಿಸಿಕೊಂಡು ಬೈಕ್ ಹೊಡೆದರೂ ಈವರೆಗೂ ಯಾರಿಗೂ ಕುಟ್ಟಿಲ್ಲ. ಹಣೆಬರಹ. ಅದು ಹುಡುಗಿಗೆ ತಾಗಬೇಕಿತ್ತಾ? ನೋಡಿದ್ರೆ ಊರಿಗೆ ಹೊಸಬಳ ತರಹ ಕಾಣ್ತಾಳೆ. ಇದೇನಾದ್ರೂ ಅಪ್ಪನ ಕಿವಿಗೆ ಬಿದ್ರೆ ನನ್ನ ತಿಥಿ ಗ್ಯಾರಂಟಿ. ಅವನೊಬ್ಬ ಬೇವರ್ಸಿ ಅಪ್ಪಾ. ನಾನು ತಪ್ಪು ಮಾಡುವುದನ್ನೇ ಕಾಯ್ತಿರ್ತಾನೆ ಅಂತೆಲ್ಲಾ ಯೋಚಿಸುತ್ತಾ ಸಾಗುವಾಗ ಸಂಜೀವಿನಿ ಆಸ್ಪತ್ರೆ ಬಂದಿತ್ತು.

'ಮುದುಕರ ಕೇರಿಗೆ ಸೂಳೇನೇ ಶೃಂಗಾರಿ' ಅನ್ನೋ ತರಹದ್ದು ನಮ್ಮೂರಿನ ಸಂಜೀವಿನಿ ಆಸ್ಪತ್ರೆ. ಆ ಡಾಕ್ಟರಮ್ಮನಿಗೆ ಬಸುರಿ ಹೆಂಗಸರನ್ನ ಅಬಾರ್ಷನ್ ಮಾಡಿಸುವುದು, ಥಂಡಿ, ಜ್ವರಕ್ಕೆ ಮಾತ್ರೆ ಕೊಡುವುದು ಬಿಟ್ಟರೆ ಮತ್ತೇನೂ ಗೊತ್ತಿಲ್ಲ. ತಲೆನೋವು ಅಂದ್ರೆ ತಲೆಗೇ ಇಂಜೆಕ್ಷನ್ ಕೊಡುವ ಸಾಗರದ ಐತಾಳ ಡಾಕ್ಟರ್ ಜಾತಿಯವಳು ಈ ಹಡ್ಬೆ ಹೆಂಗಸು. ಇಲ್ಲದೇ ಹೋಗಿರುವ ಏನೇನೂ ಖಾಯಿಲೆ ಇದೆ ಅನ್ನುತ್ತೋ, ಯಾವ ಇಂಜೆಕ್ಷನ್ ಹಾಕಬೇಕು ಅನ್ನುತ್ತೋ... ಅದೇ ಚಿಂತೆಯಲ್ಲೇ ಅವಳನ್ನು ಮಲಗಿಸಿದ್ದ ವಾರ್ಡ್‌ಗೆ ಹೋದೆ. ಡಾಕ್ಟರ್ ಮಾಲತಿಯಮ್ಮ ಆ ಪುಣ್ಯಾತಗಿತ್ತಿಯನ್ನು ಪರೀಕ್ಷಿಸಿ ಹೊರಬರುತ್ತಿದ್ದಳು. 'ಕೆಲಸ ಆಗಬೇಕು ಅಂದ್ರೆ ಕತ್ತೆ ಕಾಲನ್ನಾದರೂ ಹಿಡಿಯಬೇಕು' ಅನ್ನೋ ಅಪ್ಪನ ಮಾತು ಪಕ್ಕನೆ ನೆನಪಾಯಿತು. ಸಟಕ್ಕನೆ ಎರಡು ಕೈ ಜೋಡಿಸಿ ಡಾಕ್ಟರಮ್ಮನಿಗೊಂದು ನಮಸ್ಕಾರ ಹೊಡೆದೆ. ಆ ಯಮ್ಮ ಹಲ್ಲು ಕಿರಿಯುತ್ತಾ, ಅಂತ ಮೇಜರ್ ಪ್ರಾಬ್ಲಂ ಏನೂ ಇಲ್ಲ, ಪ್ರಜ್ಞೆ ತಪ್ಪಿದೆ ಅಷ್ಟೆ ಎಂದಿತು. ನಂಗೆ ಜೀವ ಬಂದ ಹಾಗಾಯಿತು. ಹೋಗಿ ಅವಳಿರುವಲ್ಲಿ ಕುಳಿತೆ. ಜೇಬಲ್ಲಿ ಇದ್ದ ಸಿಗರೇಟ್ ಪ್ಯಾಕ್ ತೆಗೆದು ಸಿಗರೇಟು ಸೇದುತ್ತಾ ಮುಂದೇನು ಮಾಡಬೇಕೆಂದು ಯೋಚಿಸುತ್ತಿದ್ದೆ. ನನ್ನ ಯೋಚನಾ ಓಘಕ್ಕೆ ಅರ್ಧ ಪ್ಯಾಕ್ ಸಿಗರೇಟು ಖರ್ಚಾಗಿತ್ತು.

ಇವತ್ತು ನೋಡಿದರೆ ನಿಜಕ್ಕೂ ಎಂತಹ ಹುಡುಗರನ್ನು ಮರುಳು ಮಾಡುವ ಸೌಂದರ್ಯವುಳ್ಳ ಹುಡುಗಿ. ಆದ್ರೆ ಆವತ್ತು ನಂಗೆ ಅದ್ಯಾವುದು ಬೇಡವಾಗಿತ್ತು. ಅವಳು ಜೀವ ಉಳಿದು ಮನೆ ತಲುಪಿದರೆ ಸಾಕಿತ್ತು. ಅವಳ ಬದುಕಿಗೆ ಯಾವುದೇ ಅವಘಡವೂ ಆಗದಿದ್ದರೆ ಸಾಕು ಅನ್ನುವಂತಾಗಿತ್ತು. ಇನ್ನೂ ಸರಿಯಾಗಿ ಹೇಳುವುದಾದರೆ ನನ್ನ ಪಾಲಿಗೆ ಆ ಘಳಿಗೆಯಲ್ಲಿ ಅವಳು ಶನಿಯಾಗಿದ್ದಳು. ಇನ್ನೊಂದು ಸಿಗರೇಟು ಹೊತ್ತಿಸಿ ಅವಳ ಕಾಲು ಬುಡದಲ್ಲಿ ಅವಳನ್ನೇ ದಿಟ್ಟಿಸುತ್ತಾ ಕುಳಿತಿದ್ದೆ. ಪುಣ್ಯಾತಗಿತ್ತಿ ಕಣ್ಣು ತೆರೆದಳು. ಜೀವ ಬಂದ ಹಾಗಾಯಿತು ನನಗೆ. ಡಾಕ್ಟರಮ್ಮ ಏನೇ ಹೇಳಿದರೂ ನಂಗೆ ಸಮಾಧಾನ ಆಗಿರಲಿಲ್ಲ. ಡಾಕ್ಟರಮ್ಮನ ಮೇಲೆ ನಂಬಿಕೆ ಅನ್ನೋದಂತು ಮೊದಲೇ ಇರಲಿಲ್ಲ. ನಿಜಕ್ಕೂ ದೀರ್ಘವಾದೊಂದು ಉಸಿರು ಬಿಟ್ಟೆ. ಅವಳು ಕಣ್ಣು ತೆರೆದು ನನ್ನ ಸಿಗರೇಟನ್ನೇ ದಿಟ್ಟಿಸಿದಳು. ಆಸ್ಪತ್ರೆಯಲ್ಲಿ ಸಿಗರೇಟು ಸೇದಬಾರದು ಅನ್ನೋ ಪರಿಜ್ಞಾನವೂ ಬೇಡವ ನಿನಗೆ ಅಂತ ಅಂದಿರಬೇಕು ಅವಳು. ಇದು ನಿಮ್ಮಪ್ಪನ ಆಸ್ಪತ್ರೆಯಲ್ಲ ಮಲಗು ಸುಮ್ಮನೆ ಅನ್ನೋಣ ಎಂಬಷ್ಟು ಕೋಪ ಬಂತು. ಆದರೂ ಹಾಸಿಗೆಯ ಮೇಲೆ ಮಲಗಿರುವ 'ರೋಗಿ' ಅವಳು ಅಂತ ಸುಮ್ಮನಾದೆ.

ಹೆಚ್ಚು ಹೊತ್ತು ಬೇಕಾಗಿರಲಿಲ್ಲ ಅವಳು ಎದ್ದು ಚೇತರಿಸಿಕೊಳ್ಳಲು. ಡಾಕ್ಟರಮ್ಮ ಹೇಳಿದಂತೆ ಪ್ರಜ್ಞೆ ತಪ್ಪಿತ್ತು ಅಷ್ಟೆ. ಸಿಗರೇಟು ಸೇದುತ್ತಿದ್ದ ನನ್ನ ಭಂಗಿ ನೋಡಿಯೇ ದಂಗು ಬಡಿದು ಹೋಗಿದ್ದಳು ಅವಳು! ಹೆಚ್ಚೇನೂ ಮಾತನಾಡಲಿಲ್ಲ. ಆದರೂ ಅವಳನ್ನು ಸರಿಯಾದ ಜಾಗಕ್ಕೆ ಸೇರಿಸುವುದು ಅನಿವಾರ್ಯವಾಗಿತ್ತು. "ಊರಿಗೆ ಹೊಸ ಫಿಗರ್‌ನಂತೆ ಕಾಣುತ್ತೀಯಾ ಯಾರ ಮನೆ ಕೂಸು ನೀನು ಹೇಳು. ಮನೆ ತಲುಪಿಸಿ ಬರುತ್ತೀನಿ" ಮಾತು ಮುಗಿಸುವುದರೊಳಗೆ... "ಗುಡ್ಡೆದಿಂಬದ ರಾಮಭಟ್ಟರ ಮನೆ" ಅಂದಳು. ಬೈಕ್‌ನಲ್ಲೇ ಹತ್ತಿಸಿಕೊಂಡು ಹೋಗಿ ಅವಳ ಮನೆ ಹತ್ತಿರ ಅವಳನ್ನು ಬಿಸಾಕಿ ಬರೋಣ ಅಂದುಕೊಂಡೆ. ಆದರೆ ಅವಳ ಕೈನಟಿಕ್ ಹೋಂಡಾ ಇತ್ತಲ್ಲ!

"ಸರಿ ರಿಕ್ಷಾದಲ್ಲಿ ಹತ್ತಿಸ್ತೀನಿ ಮನೆಗೆ ಹೋಗಿ ಮಲಗು. ನಿನ್ನ ಬೈಕ್‌ನ್ನು ಸಂಜೆಯೊಳಗೆ ಮನೆಗೆ ಸೇರಿಸ್ತೀನಿ. ವಿಜಯತ್ತೆಗೆ ಹೇಳು ಪ್ರಸನ್ನ ಬೈಕ್ ತಂದಿಡ್ತಿ ಹೇಳಿದ್ದ, ಹಿಂಗೆಲ್ಲಾ ಆತು ಅಂತ" ಎಂದೆ. ಪಾಪ ತರತರ ನಡುಗುತ್ತಿದ್ದಳು. ಬೈಕ್ ಮೇಲೆ ಕುಳಿತುಕೊಳ್ಳಲು ಗೊತ್ತಿಲ್ಲದವರಿಗೆಲ್ಲಾ ಬೈಕ್ ಕೊಡ್ತಾರೆ ಶ್ರೀಮಂತರು! ನಮ್ಮ ಪ್ರಾಣ ತೆಗೆಯಲಿಕ್ಕೆ... ಈ ರಕ್ಕಸನಿಂದ ಆದಷ್ಟು ಬೇಗ ಬಿಡುಗಡೆ ಸಿಕ್ಕಿದರೆ ಸಾಕು ಅನ್ನಿಸಿರಬೇಕು ಅವಳಿಗೆ! ಮುಖ ಸಪ್ಪೆಯಾಗಿತ್ತು. ಈಗಲೋ ಆಗಲೋ ಕಣ್ಣಿಂದ ನೀರು ಇಳಿಯುತ್ತದೆ ಅನ್ನೋ ಹಾಗಿತ್ತು. ನನಗೆ ಅಳುವವರನ್ನು ಕಂಡರೆ ಮೊದಲೇ ಭಯ. ರಿಕ್ಷಾ ಹತ್ತಿಸಿ ಕಳುಹಿಸಿಬಿಟ್ಟೆ.

ಕೂಸು ವಿಜಯತ್ತೆ ಮನೆಯದ್ದು... ಸಮಾಧಾನವಾಯಿತು. ತಲೆ ಮೇಲಿನ ಅರ್ಧ ಭಾರ ಇಳಿದ ಹಾಗಾಯಿತು. ಅದೇನೋ ಗೊತ್ತಿಲ್ಲ ನಾನು ಕುಡಿದು ಊರು ತುಂಬಾ ಗಲಾಟೆ ಮಾಡಿದರೂ, ನನ್ನನ್ನು ಕರೆದು ಕೂರಿಸಿಕೊಂಡು ಬುದ್ಧಿ ಹೇಳಿದವಳು ವಿಜಯತ್ತೆ ಮಾತ್ರ. ಈ ವಯಸ್ಸಿಗೆ ಕುಡಿತ ಯಾಕೆ ಕಲಿತೆ ಅಂತ ಪ್ರಶ್ನೆ ಕೇಳಿದವಳು ಅವಳು ಮಾತ್ರ. ಉಳಿದವರೆಲ್ಲಾ ನನ್ನನ್ನು ಕುಡುಕ, ಕುಡುಕ ಅಂತ ದೂರ ಇಟ್ಟವರೆ. ನನ್ನ ಅಪ್ಪ, ಚಿಕ್ಕಮ್ಮ ನಾನು ಕುಡಿತೀನಿ ಅನ್ನೋ ಕಾರಣಕ್ಕೆ ಸರಿಯಾಗಿ ಮುಖ ಕೊಟ್ಟು ಮಾತಾಡುತ್ತಿರಲಿಲ್ಲ. ಹುಟ್ಟಿಸಿದ ತಪ್ಪಿಗೆ ಕೇಳಿದಾಗಲೆಲ್ಲಾ ಕಾಸು ಕೊಡುತ್ತಿದ್ದರು ಅಷ್ಟೆ. ಹಾಗಾಗಿಯೇ ನಂಗೆ ವಿಜಯತ್ತೆ ಅಂದ್ರೆ ಮೊದಲಿಂದಲೂ ಪ್ರಾಣ.

ಹುಡುಗಿ ಬದುಕಿದ್ದಾಳೋ, ಸತ್ತಿದ್ದಾಳೋ ಅಂತ ನೋಡಿಕೊಂಡು, ಅವಳದ್ದು ಈ ಕಿರಿಕ್ ಹೋಂಡಾ, ಅಲ್ಲಲ್ಲ ಕೈನೆಟಿಕ್ ಹೋಂಡಾ ಕೊಟ್ಟು ಬರೋಣ ಅಂತ ಸಾಯಂಕಾಲ ನಾಲ್ಕೂವರೆ ಸಮಯಕ್ಕೆ ವಿಜಯತ್ತೆ ಮನೆಗೆ ಹೋದೆ. ಕೂಸು ಅಂಗಳದಲ್ಲೆ ಇತ್ತು. ಅನಿಷ್ಟ ಶನಿ ಎದುರಿಗೆ ಇದೆ ಅಂದುಕೊಂಡೆ. ಹಲ್ಲು ಕಿರಿದಳು. ನಯವಾಗಿಯೇ ಮಾತನಾಡಿಸಿದಳು. ನನ್ನ ವರ್ತನೆ ನೋಡಿ ಅವಳು ನನ್ನ ಎಡ ಬಲಕ್ಕೂ ಸುಳಿಯಲಾರಳು ಅಂದುಕೊಂಡಿದ್ದೆ. ಅಯ್ಯಪ್ಪಾ ಹುಡುಗಿಯರು ನನ್ನಂತಹವನನ್ನು ನೋಡಿಯೂ ಹಲ್ಲು ಕಿರಿಯುತ್ತಾರಾ?! ಇವಳಿಗೆ ಬೆಳಗ್ಗೆ ತಲೆಗೇನಾದ್ರೂ ಏಟು ಬಿದ್ದಿರಬಹುದಾ?! ಅನುಮಾನ ಶುರುವಾಯಿತು.

ನಿನ್ನ ಗಾಡಿ ಇಲ್ಲೆ ಇಟ್ಟಿದ್ದೇನೆ. ವಿಜಯತ್ತೆ ಇಲ್ವಾ...?

"ಎಂತುದಾ ಮಾಣಿ ನಿಂದು ಗಲಾಟೆ, ಪಾಪದ ಕೂಸು ಸಿಕ್ಕಿದ್ದು ಹೇಳಿ ನೀ ಹಾಂಗೆಲ್ಲಾ ಜೋರು ಮಾಡದನಾ" ಅನ್ನುತ್ತಾ ಅಂಗಳಕ್ಕೆ ಧಾವಿಸಿದರು ವಿಜಯತ್ತೆ.

"ಇಲ್ಲೆ, ಪಾಪ ಕೂಸಿಗೆ ತಲೆಗೆ ಏಟು ಬಿದ್ದಿದ್ದು ಕಾಣ್ಸುತ್ತು. ಅದ್ಕೆ ಗಟ್ಟಿ ಧ್ವನಿಲಿ ಮಾತಾಡಿದೆ ಅಷ್ಟೆ..."

"ನಿನ್ನಂತಹವನ ಕೈಯಲ್ಲಿ ಸಿಕ್ಕಿ ಹಾಕಿಕೊಂಡರೆ ತಲೆಗೂ ಬೀಳ್ತು ಮತ್ತೊಂದಕ್ಕೂ ಬೀಳ್ತು. ನಿನ್ನ ಕಟ್ಟಿಕೊಳ್ಳವಳನ್ನ ಆ ದೇವರೆ ಕಾಪಾಡಕ್ಕು ಒಳಗೆ ಬಾ ಕಾಫಿ ಕುಡಿಲ್ಲಕ್ಕಡ? ಈ ಹೊತ್ತಲ್ಲಿ ಕಾಫಿ ಕುಡಿತ್ಯಾ ಅಥವಾ..."

"ಇಲ್ಲೇ ಮಾರಾಯಿತಿ ಅದೇನು ಕಾಫಿ ಹಂಗೆ ಮೂರು ರೂಪಾಯಿಗೆ ಸಿಕ್ತು ಅಂದ್ಕೊಂಡಿದ್ಯನೆ? ಅದೆಲ್ಲಾ ಕಾಸ್ಟ್ಲಿ ಮಾರಾಯಿತಿ. ಅಪ್ಪಾ ಕೊಡೋ ದುಡ್ಡು ವಾರಕ್ಕೆ ಒಂದ್ಸಾರಿ ಕುಡಿಯಕ್ಕು ಸಾಕಾಗುತ್ತಿಲ್ಲೆ ಮಾರಾಯಿತಿ..."

"ಮನೆಯಾಳತನ ಸಿಗೋ ಮಾವನ ಮನೆ ನೋಡು... ಸಾಕು ಬಾ ಕಾಫಿ ಕುಡಿಲ್ಲಕ್ಕಡ..." ಅಡುಗೆ ಮನೆಗೆ ಕರೆದರು.

"ಸರಿ ಈ ಎಲಿಮೆಂಟು ನಿಮ್ಮ ಮನೆಗೆ ಹ್ಯಾಂಗೆ ಬಂದು ಸೇರಿಕೊಂಡ್ತು ಮಾರಾಯಿತಿ. ಬೆಳಿಗ್ಗೆ ಆಗಿದ್ದು ಗೊತ್ತಾಗಿರಬೇಕಲ್ಲ ನಿಂಗೆ..."

"ಗೊತ್ತಾತು ಪಾಪ ಕೂಸು ಗಾಡಿ ಕಲಿತಾ ಇದ್ದು. ಅಲ್ಲಾ ಗಾಡಿ ಕಲಿತ ನಿಂಗಾದ್ರೂ ಪ್ರಜ್ಞೆ ಬ್ಯಾಡ್ದನಾ?"

"ಅದು ಇದ್ದಿದ್ದರೆ ನಾನು ಈ ಊರಲ್ಲಿ ಎಂತಕೆ ಇರ್ತಿದ್ನೆ ಮಾರಾಯಿತಿ...?!"

"ಇವಳು ನಮ್ಮನೆ ರಾಜಗೋಪಾಲ್ ಭಾವನ ಮಗಳು. ಈ ವರ್ಷ ಅವಕ್ಕೆ ಆಂಧ್ರದಿಂದ ಬೆಂಗಳೂರಿಗೆ ಟ್ರಾನ್ಸ್‌ಫರ್ ಆತು. ಹಾಂಗಾಗಿ ಎಲ್ಲಾ ಬೈಂದ. ನಿಂಗೆ ಇವಳನ್ನು ನೋಡಿದಾ ನೆನಪೇ ಇಲ್ಲ್ಯೆನೋ ಅಲ್ದಾ? ನೋಡಕ್ಕೆ ಅವು ಊರಿಗೆ ಬಪ್ಪುದೇ ಅಪರೂಪ. ಈ ಬ್ಯಾಂಕಲ್ಲಿ ಇದ್ದವರ ಹಣೆ ಬರಹವೆ ಹಿಂಗೆ ನೋಡು. ಸರ್ವಿಸಲ್ಲಿ ಅರ್ಧಕ್ಕಧ ಆಯುಷ್ಯ ಹೊರರಾಜ್ಯದಲ್ಲೆ ಕಳೆದು ಬಿಡ್ತಾ..."

"ನನ್ನ ಹೆಸರು ಸುಮಾ ಅಂತ... ಫಸ್ಟ್ ಪಿಯುಸಿ ಮುಗತ್ತು. ಇಷ್ಟು ದಿನ ವಿಶಾಖಪಟ್ಟಣಂಲ್ಲಿ ಇದ್ದಿದ್ಯ. ಈಗ ಅಪ್ಪನಿಗೆ ಬೆಂಗಳೂರಿಗೆ ಟ್ಯಾನ್ಸ್‌ಫರ್ ಆಯದು..."

ಛೇ ನಿಜಕ್ಕೂ ಪಾಪದ ಕೂಸು ಸುಮ್ನೆ ರೇಗಾಡಿಬಿಟ್ಟೆ. ಒಂತರಹ ಸಂಕಟ ಶುರುವಾಯಿತು. ಆದ್ರೂ ಅಂತಹ ಸಂಕಟ, ಕರುಣೆ ಎಲ್ಲಾ ನನ್ನಲ್ಲಿ ಉಳಿಯುವುದು ಸ್ವಲ್ಪ ಕಾಲ ಮಾತ್ರ.

"ಸ್ಸಾರಿ. ಸಾಧ್ಯವಾದ್ರೆ ನಮ್ಮ ಮನೆಗೆ ಬಾ. ನನ್ನ ಚಿಕ್ಕಮ್ಮ ವಿಜಯತ್ತೆ ಹಂಗೆ ಕಾಫಿ ಕೊಟ್ಟು ಕಳಿಸ್ತಾ ಅಂತ ನಾನೇನು ಭರವಸೆ ಕೊಡದಿಲ್ಲೆ."

"ನಿಮ್ಮ ಮನೇಲಿ ಕಾಫಿ ಮಾಡಿಕೊಂಡು ಕುಡ್ಕಂಡು ಬತ್ಯಾ ತಗಾ..."

"ಸರಿ ನಾನಿನ್ನು ಹೊರಡ್ತಿ"

ಅವರು ಬರಲಿಲ್ಲ. ಅವಳು ಸಿಗಲಿಲ್ಲ. ಅವಳನ್ನು ಮತ್ತೆ ಹುಡುಕುವ ಗೌಜಿಗೂ ನಾನು ಹೋಗಲಿಲ್ಲ. ಆದ್ರೂ ಅವಳು ನನ್ನ ಹೃದಯದಲ್ಲಿ ಪುಟ್ಟದೊಂದು ತಲ್ಲಣ ಹುಟ್ಟು ಹಾಕಿದಳು.

******

ನಿದ್ದೆ ಬರುತ್ತಿತ್ತಾದರೂ ಯಾಕೋ ನಿದ್ದೆ ಬರಲಿಲ್ಲ! ಹೆಂಡತಿ ಬಳಿ ಒಂದು ಲೋಟ ಕಾಫಿ ಕೊಡುವಂತೆ ಕೂಗಿದೆ. ಆದರೂ ನನ್ನಲ್ಲಿ ಆ ದಿನಗಳಷ್ಟು ಅಬ್ಬರವಿಲ್ಲ. ಅಂದಿಗಿಂತ ಎಷ್ಟೋ ಸೌಮ್ಯವಾಗಿದ್ದೇನೆ. ಅದಕ್ಕೆಲ್ಲಾ ಅವಳೇ ಕಾರಣ.

ಊಹುಂ ಕಾಫಿ ಕುಡಿದರೂ ನನಗೆ ಅವಳ ನೆನಪುಗಳಿಂದ ಹೊರ ಬರಲಾಗುತ್ತಿಲ್ಲ. ಹೆಂಡತಿ ಏನು ಗೊಣಗುತ್ತಿದ್ದರೂ ಉತ್ತರಿಸಬೇಕನ್ನಿಸುತ್ತಿಲ್ಲ.

******

ಪಿಯುಸಿ ಮುಗಿಸಿ ಎಂಜಿನಿಯರಿಂಗ್‌ಗೆ ಅಂತ ಬೆಂಗಳೂರಿಗೆ ಬಂದು ಪಿಇಎಸ್ ಕಾಲೇಜು ಸೇರಿದೆ. ನನ್ನ ಹುಡುಗಾಟ, ತೆವಲುತನ ಯಾವುದೂ ನಿಂತಿರಲಿಲ್ಲ. ಹೀಗೆ ಎರಡು ಸೆಮ್ ಕಳೆದಿತ್ತು. ಅದು ಮೂರನೆ ಸೆಮ್ ಪ್ರಾರಂಭದ ದಿನ. ಫಸ್ಟ್ ಸೆಮ್‌ಗೆ ಬಂದಿರುವ ಹುಡುಗಿಯರನ್ನು ನೋಡಿ, ಒಂದಷ್ಟು ಅಣಕಿಸಿ ಬರಬೇಕು ಅಂತ ನಾವೆಲ್ಲಾ ಸ್ಕೆಚ್ ಹಾಕಿಕೊಂಡು ಕಾರಿಡಾರ್‌ನಲ್ಲಿ ನಿಂತಿದ್ದೆವು. ಆಕಾಶ ನೀಲಿ ಬಣ್ಣದ ಚೂಡಿದಾರ್ ತೊಟ್ಟಿದ್ದ, ಉದ್ದ ಜಡೆಯ ಹುಡುಗಿಯೊಬ್ಬಳು ನನ್ನ ಮುಂದೆ ಹಾದು ಹೋದಳು. ನಾನು ಮುಖ ನೋಡಲಿಲ್ಲ. "ಇದ್ಯಾವ ಫಿಗರೋ ಒಳ್ಳೆ ಗೌರಮ್ಮನ ತರಹ ಇದೆಯಲ್ಲೋ..." ಸಟಕ್ಕನೆ ತಿರುಗಿದಳು. ಎದೆಯೊಮ್ಮೆ ಡಬ್ ಅಂದಿತು.

"ಏ ಸುಮಾ... ನೀನು... ನೀನಿಲ್ಲಿ..."

ನಡುಗುತ್ತಿದ್ದೆ. ಯಾಕೆ ನಡುಗಿದೆನೋ ನನಗಂತೂ ಗೊತ್ತಿಲ್ಲ. ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕಾರಿಡಾರಿನಲ್ಲಿ ನಿಂತು ಹುಡುಗಿಯರನ್ನು ಅಣಕಿಸುವುದು ದೊಡ್ಡ ವಿಷಯವೇ ಅಲ್ಲ. ಹುಡುಗಿ ಅಂದ್ರೆ ಮೂರು ಮಾರು ದೂರ ಹಾರುತ್ತಿದ್ದ ನನ್ನಂತಹವನು ಕಾರಿಡಾರಿನಲ್ಲಿ ನಿಂತು ಹುಡುಗಿಯನ್ನು ಚುಡಾಯಿಸುತ್ತೀನಿ ಅಂದರೆ ಕಾಲೇಜಿನ ಪರಿಸರ ಹೇಗಿರಬಹುದು.

"ಏ ಪ್ರಸನ್ನ ನೀನು..."

ಕಳೆದು ಹೋದವಳು ಅವಳಾಗಿಯೇ ಸಿಕ್ಕಿದಳು ಅಂದುಕೊಂಡೆ. ಆಮೇಲೆ ಕ್ಯಾಂಟೀನ್‌ಗೆ ಹೋಗಿ ಕುಳಿತೆವು. ಅವಳು ನಮ್ಮ ಕಾಲೇಜಿನಲ್ಲೇ ಎಂಜಿನಿಯರಿಂಗ್‌ಗೆ ಸೇರಿದ್ದಾಳೆ ಅಂತ ಗೊತ್ತಾಯಿತು. "ಅಪ್ಪ ಇಲ್ಲೆ ಕತ್ರಿಗುಪ್ಪೆಯಲ್ಲಿ ಬ್ಯಾಂಕ್ ಮ್ಯಾನೇಜರ್ ನಾವು ಇಲ್ಲೇ ಮನೆ ಮಾಡಿದ್ಯಾ..." ಹೀಗೆ ಒಂದು ಮುಕ್ಕಾಲು ಗಂಟೆ ಅದು, ಇದು ಅಂತ ಹರಟಿರಬಹುದು. ಊರಲ್ಲಿ ನಾನು ಅವಳು ಹಾಗೆಲ್ಲಾ ಹರಟ್ಟಿದ್ದರೆ ದೊಡ್ಡ ಸುದ್ದಿಯೇ ಆಗುತ್ತಿತ್ತು. ಆದ್ರೆ ಬೆಂಗಳೂರಿನಲ್ಲಿ ಅವೆಲ್ಲಾ ಮಾಮೂಲು. ಅಷ್ಟಕ್ಕೂ ಒಬ್ಬರ ಮುಖ ಇನ್ನೊಬ್ಬರಿಗೆ ಪರಿಚಯವಿಲ್ಲದ ನಾಡಿದು. ಮುಖ ಪರಿಚಯ ಮಾಡಿಕೊಂಡು ಆಗಬೇಕಾದದ್ದು ಏನೂ ಇಲ್ಲ!

ಮೊದ ಮೊದಲಿಗೆ ನಮ್ಮದು ಗೆಳೆತನವಾಗಿತ್ತು. ಹೋಗು ಹೋಗುತ್ತಾ ಪ್ರೀತಿಗೆ ತಿರುಗಿತು. ಇಬ್ಬರೂ ಪ್ರೀತಿಯಲ್ಲಿ ಮುಳುಗಿದೆವು. ಸುತ್ತಾಡಲು ಶುರುವಿಟ್ಟೆವು. ನನ್ನ ಕುಡಿತ, ಸಿಗರೇಟು... ಇವ್ಯಾವ ಚಟವೂ ನನ್ನಿಂದ ದೂರವಾಗಿರಲಿಲ್ಲ. ಅದು ಅವಳಿಗೂ ಗೊತ್ತಿತ್ತು! ಸಿಕ್ಕಾಗಲೆಲ್ಲಾ ಬೋಧನೆ ಶುರುವಿಟ್ಟಳು. ಹಂತ ಹಂತವಾಗಿ ನನ್ನ ಚಟಗಳನ್ನೆಲ್ಲಾ ಬಿಡಿಸಿದಳು. ಅದರ ಪ್ರಭಾವ ಎಷ್ಟಿತ್ತೆಂದರೆ ಅವಳು ಸತ್ತಾಗ ನನ್ನ ತಲೆ ಎಷ್ಟು ಹಾಳಾದರೂ ನನಗೆ ಮತ್ತೆ ಕುಡಿಯಬೇಕು ಅನ್ನಿಸಲಿಲ್ಲ, ಸಿಗರೇಟ್ ಸೇದಬೇಕು ಅನ್ನಿಸಲಿಲ್ಲ. ಅಷ್ಟು ನಾಜೂಕಿನಿಂದ ಅವಳು ನನ್ನ ಚಟವನ್ನು ದೂರ ಮಾಡಿದ್ದಳು. ನನಗಂತೂ ಕುತೂಹಲವಿತ್ತು; ನನ್ನಂತಹ ಶುದ್ಧ ಒರಟನ ಬಲೆಗೆ ಅವಳು ಏಕೆ ಬಿದ್ದಳು ಮತ್ತು ಹೇಗೆ ಬಿದ್ದಳು ಎಂಬುದು. ನನ್ನ ಕಂಡ ದಿನ ಅವಳು ಹೆದರಿದ್ದಳು, ವಿಜಯತ್ತೆ ಬಳಿ ಹೋಗಿ ನನ್ನ ಕುರಿತು ಹೇಳಿದಳಂತೆ. ಆಗ ವಿಜಯತ್ತೆ ನನ್ನ ಬದುಕಿನ ಕಥೆ ಹೇಳಿದಳಂತೆ. ನನ್ನ ಕುರಿತು ಒಳ್ಳೆಯ ಅಭಿಪ್ರಾಯ ಅವಳಲ್ಲಿ ಮೂಡುವಂತೆ ಮಾಡಿದರಂತೆ. ಹಾಗಂತ ಅವಳೇ ಒಂದು ದಿನ ನನ್ನ ಬಳಿ ಹೇಳಿದ್ದಳು. ಪ್ರೇಯಸಿಯಾಗಿ, ಅದಕ್ಕಿಂತ ಮಿಗಿಲಾಗಿ, ಬದುಕಿನ ಗೆಳತಿಯಾಗಿ ಅವಳು ಅಂಟಿಕೊಂಡಳು.

******

ಆವತ್ತು ನನಗೆ ಕೆಲಸ ಸಿಕ್ಕಿದ ಸಂಭ್ರಮ. ಪಾರ್ಟಿ ಕೊಡಿಸು ಅಂತ ಹಠ ಹಿಡಿದಳು. ನನಗೆ ಒಂಚೂರು ಮನಸ್ಸಿರಲಿಲ್ಲ. ಬೇಡ ಸುಮಿ ಇನ್ನೊಂದು ದಿನ ಪಾರ್ಟಿ ಕೊಡಿಸ್ತಿನಿ ಪ್ಲೀಸ್ ಹಠ ಮಾಡಬೇಡ. ನನಗೆ ಇವತ್ತು ಹೊರಗಡೆ ಹೋಗಲು ಮೂಡಿಲ್ಲ... ಊಹುಂ ಕೇಳಲಿಲ್ಲ. ಮಗುವಿನಂತೆ ಹಠ ಹಿಡಿದಳು. ನನ್ನ ಸ್ಕೂಟರ್‌ನಲ್ಲೇ ಹೋಗೋಣ. ನೀನು ಹಿಂದೆ ಕುಳಿತುಕೋ ಸಾಕು ಅಂತ ಶಾಂತಿಸಾಗರ್ ಹೋಟೇಲ್‌ಗೆ ಕರೆದುಕೊಂಡು ಹೋದಳು.

ಪಾರ್ಟಿ ಮುಗಿಸಿ ಬರುತ್ತಾ ಇದ್ದೆವು, ಬಸ್ಸೊಂದು ನಮ್ಮ ಸ್ಕೂಟರ್‌ಗೆ ಡಿಕ್ಕಿ ಹೊಡೆದದ್ದು ಗೊತ್ತು. ಮುಂದೇನಾಯಿತೋ ಗೊತ್ತಿಲ್ಲ. ನಾನು ಆಸ್ಪತ್ರೆಯ ಐಸಿಯುದಲ್ಲಿ ತಿಂಗಳ ಕಾಲವಿದ್ದೆ. ಆದರೂ ಒಂದು ದಿನವೂ ಅವಳು ನನ್ನನ್ನು ನೋಡಲು ಬರಲಿಲ್ಲ. ಪಕ್ಕದಲ್ಲಿದ್ದವರನ್ನು ಕೇಳಿದ್ರೆ, ಇಲ್ಲ, ಅವಳೂ ಆಸ್ಪತ್ರೆಗೆ ಸೇರಿದಾಳೆ ಅಂದರು. ಆದರೂ ಜೀವಂತವಾಗಿದ್ದರೆ ಬರುತ್ತಿದ್ದಳು ಅಂದುಕೊಂಡೆ. ಅವಳ ತಂಗಿ ನನ್ನ ಹತ್ತಿರದಲ್ಲೇ ಇದ್ದಳು. ಅವಳಿಗೆ ನಮ್ಮಿಬ್ಬರ ಪ್ರೀತಿ ಗೊತ್ತಿತ್ತು. ಆಸ್ಪತ್ರೆ ಎಂಬ ನರಕದಿಂದ ಹೊರಬಂದ ಮೇಲೆ ಗೊತ್ತಾಯಿತು ಆವತ್ತಿನ ಆಕ್ಸಿಡೆಂಟಿನಲ್ಲಿ ಅವಳು ತೀರಿಹೋದಳು ಅಂತ. ಇವತ್ತಿಗೆ ಅವಳು ತೀರಿ ಎರಡು ವರ್ಷವಾಯಿತು...

ಅವಳು ಸತ್ತ ಮೇಲೆ ವಿಜಯತ್ತೆ ಹಠ ಮಾಡಿ ನನಗೆ ಗಂಟು ಹಾಕಿದ ಅವಳ ತಂಗಿ, "ರೀ ಇವತ್ತಿಗೆ ಮದ್ವೆಯಾಗಿ ವರ್ಷವಾಯಿತು. ದೇವಸ್ಥಾನಕ್ಕೆ ಹೋಗಿ ಬರೋಣ ಅಂದ್ರೆ..." ಎಂದು ಮತ್ತೆ ರಾಗ ಎಳೆದಳು!

ಟಿಎಸ್‌ಐ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .