|
ಕಳೆದ ಒಂದೂವರೆ ದಶಕಗಳಿಂದ ಭಾರತ ಕ್ರಿಕೆಟ್ ತಂಡದ
ಬ್ಯಾಟಿಂಗ್ ಬೆನ್ನೆಲುಬಾಗಿದ್ದ ಈ ನಾಲ್ವರು ಒಟ್ಟು
480 ಟೆಸ್ಟ್
ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್ ಪಂದ್ಯಗಳನ್ನು ಮಾತ್ರ ಲೆಕ್ಕಕ್ಕೆ
ತೆಗೆದುಕೊಂಡರೆ ಈ ನಾಲ್ವರ ಬ್ಯಾಟ್‌ಗಳಿಂದ
35,011
ರನ್‌ಗಳ ಪ್ರವಾಹ ಉಕ್ಕಿ ಹರಿದಿದೆ. ಇವರ ಪೈಕಿ ಒಬ್ಬರಂತೂ ಕ್ರಿಕೆಟ್ ಲೋಕದ
ಅನಭಿಷಿಕ್ತ ದೊರೆ ಮತ್ತು ಭಾರತೀಯರ ಪಾಲಿಗೆ ಸಾಕ್ಷಾತ್ ದೇವತೆ. ಮತ್ತೊಬ್ಬ
ಭಾರತ ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ನಾಯಕರ ಪೈಕಿ ಒಬ್ಬರಾಗಿದ್ದವರು.
ಮೂರನೇ ಕ್ರಮಾಂಕದಲ್ಲಿ ಆಡಲಿಳಿಯುವ
'ಗೋಡೆ'
ಟೆಸ್ಟ್ ಆಡುವ ಪ್ರತಿಯೊಂದು ರಾಷ್ಟ್ರದ ವಿರುದ್ಧ ಶತಕಗಳಿಸಿ ದಾಖಲೆ ಬರದಾತ.
ಕೊನೆಯ ವ್ಯಕ್ತಿಯಂತೂ ಆಸ್ಟ್ರೇಲಿಯ ವಿರುದ್ಧ ಅತ್ಯಂತ ಯಶಸ್ವಿ
ಬ್ಯಾಟ್ಸ್‌ಮನ್ ಎಂಬ ಖ್ಯಾತಿ ಪಡೆದವರು. ಒಟ್ಟಾರೆ ವಿಶ್ವದ ಅಗ್ರಗಣ್ಯ
ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಈ ನಾಲ್ವರಿಗೂ ಶಾಶ್ವತ ಸ್ಥಾನವಿದೆ. ಆ
ಸ್ಥಾನ ಹಾಗೆಯೇ ಉಳಿದುಕೊಳ್ಳುವುದರಲ್ಲಿ ಅನುಮಾನವೇ ಬೇಡ.
ಆದರೀಗ...
ಹಣ್ಣೆಲೆಗಳು ಉದುರುವ ಕಾಲ ಹತ್ತಿರವಾಗಿದೆ. ಅದರಲ್ಲಂತೂ ಇತ್ತೀಚೆಗೆ ಮುಗಿದ
ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ
'ಫ್ಯಾಬ್ ಫೋರ್'ಗಳಾದ
ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಮತ್ತು
ವಿ.ವಿ.ಎಸ್. ಲಕ್ಷ್ಮಣ್ ಸಾಧನೆಯನ್ನು ಗಮನಿಸಿದಾಗ ಮೇಲಿನ ಮಾತು ನಿಜ. ಈ
ನಡುವೆ ಮತ್ತೊಂದು ಸ್ಪಷ್ಟವಾದ ಮಾತಿದೆ. ಅದೇನೆಂದರೆ, ಕೇವಲ ಒಂದು ಸರಣಿಯ
ಯಶಸ್ಸು ಅಥವಾ ಅಪಯಶಸ್ಸಿನ ಮೂಲಕ
'ಫ್ಯಾಬ್ ಫೋರ್'
ಅಲ್ಲಗಳೆಯಲು ಸಾಧ್ಯವೇ ಇಲ್ಲ.
ಆದರೆ, ಒಟ್ಟಾರೆ ಕಳೆದ ಎರಡು-ಮೂರು ವರ್ಷಗಳಲ್ಲಿನ ಟೆಸ್ಟ್ ಸಾಧನೆಯನ್ನು
ಗಮನಿಸಿದಾಗ ಖಂಡಿತ ಇದು ವಿದಾಯ ಹೇಳುವ ಸಮಯ ಎಂದು ಹೇಳದೆ ಬೇರೆ ವಿಧಿಯಿಲ್ಲ.
ಜೊತೆ-ಜೊತೆಗೆ ತೆಂಡೂಲ್ಕರ್ ಬಿಟ್ಟರೆ ಉಳಿದ ಮೂವರು ನಿಧಾನವಾಗಿ ಏಕದಿನ
ಪಂದ್ಯಗಳಲ್ಲಿ ತೆರೆಮರೆಗೆ ಸರಿದಾಗಿದೆ. ತೆಂಡೂಲ್ಕರ್ ಕೂಡ ಈಗ ಸತತವಾಗಿ
ಎಲ್ಲ ಏಕದಿನ ಪಂದ್ಯಗಳ ಸರಣಿಯಲ್ಲಿ ಆಡುವಷ್ಟು ದೈಹಿಕ ಸಾಮರ್ಥ್ಯವನ್ನು
ಉಳಿಸಿಕೊಂಡಿಲ್ಲ. ಅವರೇ ಒಪ್ಪಿಕೊಳ್ಳುವಂತೆ "ಈಗ ಮೊದಲಿನಷ್ಟು ಸರಾಗವಾಗಿ
ಬ್ಯಾಟಿಂಗ್ ಮಾಡಲು ಆಗುತ್ತಿಲ್ಲ." ಇಂತಹ ಪರಿಸ್ಥಿತಿಯಲ್ಲಿ ಭಾರತ
ಕ್ರಿಕೆಟ್‌ನ ಭವಿಷ್ಯವನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಖಂಡಿತ
ಟೆಸ್ಟ್‌ಗಳಲ್ಲಿ ಕೂಡ ಯುವರಾಜ್ ಸಿಂಗ್, ರೋಹಿತ್ ಶರ್ಮ, ಸುರೇಶ್
ರೈನಾ...ಮುಂತಾದ ಯುವಕರಿಗೆ ಅವಕಾಶ ನೀಡಲೇಬೇಕು.
ಯಾವುದೇ ಕಾರಣಕ್ಕೆ ತಮ್ಮ ಹೆಸರು ಬಹಿರಂಗ ಪಡಿಸಬಾರದು ಎಂಬ ಷರತ್ತಿನ
ಮೇಲೆ ಈ ವಿಷಯದ ಕುರಿತು ಟಿಎಸ್‌ಐ ಜೊತೆ ಮಾತನಾಡಿದ ಬಿಸಿಸಿಐನ ರಾಷ್ಟ್ರೀಯ
ಆಯ್ಕೆ ಸಮಿತಿ ಸದಸ್ಯರೊಬ್ಬರು, "ತಂಡದಲ್ಲಿರುವ ಪ್ರತಿಯೊಬ್ಬ ಹಿರಿಯ ಆಟಗಾರರ
ಮೇಲೂ ನಮಗೆ ಗೌರವವಿದೆ. ಆದರೆ, ದಿಲೀಪ್ ವೆಂಗ್‌ಸರ್ಕಾರ್ ನೇತೃತ್ವದ ನಮ್ಮ
ಆಯ್ಕೆ ಸಮಿತಿ ಕಠಿಣ ನಿಲುವು ತೆಗೆದುಕೊಂಡಿದ್ದರ ಫಲವನ್ನು ಈಗ ಏಕದಿನ
ಪಂದ್ಯಗಳಲ್ಲಿ ಕಾಣಬಹುದು. ಬಹುತೇಕ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ
ತಂಡ ಈಗ ಉತ್ತಮ ಪ್ರದರ್ಶನವನ್ನೇ ನೀಡುತ್ತಿದೆ. ಅದೇ ರೀತಿ ಟೆಸ್ಟ್‌ನಲ್ಲಿ
ಕೂಡ ಸುಸ್ಥಿರ ಪ್ರದರ್ಶನ ನೀಡಬೇಕಾದಲ್ಲಿ ಯುವಕರಿಗೆ ಅವಕಾಶ ನೀಡಲೇಬೇಕು.
ಹೆಚ್ಚಿನ ಪಕ್ಷ ಮುಂಬರುವ ಆಸ್ಟ್ರೇಲಿಯ ಸರಣಿಗೆ ತಂಡವನ್ನು ಆಯ್ಕೆ ಮಾಡುವ
ಸಂದರ್ಭದಲ್ಲಿ ಈ ಅಂಶವನ್ನು ಗಮನಕ್ಕೆ ತೆಗೆದುಕೊಳ್ಳಲಾಗುತ್ತದೆ. ಆ ವೇಳೆ
ಒಂದಿಷ್ಟು ಆಶ್ಚರ್ಯ ಪಡುವಂತಹ ಅಯ್ಕೆ ಕೂಡ ಆಗುವ ಸಾಧ್ಯತೆಯಿದೆ" ಎಂದು
ಹೇಳಿದರು.
"ಒಂದೇ ಬಾರಿ ಹಿರಿಯ ಆಟಗಾರರೆಲ್ಲರನ್ನೂ ಕೈಬಿಟ್ಟು, ಕಿರಿಯರನ್ನು
ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಯಿದೆಯೇ?" ಎಂಬ ಪ್ರಶ್ನೆಗೆ ಅವರು ನೀಡಿದ
ಉತ್ತರ, "ಒಂದೇ ಬಾರಿ ನಾಲ್ವರು ಅಥವಾ ಐವರು ಹಿರಿಯ ಆಟಗಾರರನ್ನು ಕೈಬಿಡುವ
ಸಾಧ್ಯತೆಯಿಲ್ಲ. ಏನಿದ್ದರೂ, ಹಂತ-ಹಂತವಾಗಿ ಹೊಸಬರನ್ನು ತಂಡಕ್ಕೆ
ಸೇರಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಈ ನಡುವೆ ಹೊಸಬರಿಗೆ ಅವಕಾಶ
ಕೊಟ್ಟಲ್ಲಿ ಅವರೆಲ್ಲಿ ವಿಫಲರಾಗುತ್ತಾರೋ ಎಂಬ ಪ್ರಶ್ನೆಯನ್ನು ಕೂಡ ಹಲವರು
ಎತ್ತುತ್ತಿದ್ದಾರೆ. ಫ್ಯಾಬ್ ಫೋರ್ ತಂಡದಲ್ಲಿದ್ದೇ ನಾವು
ವಿಫಲರಾಗುತ್ತಿರುವಾಗ, ಹೊಸಬರಿಗೆ ಏಕೆ ಅವಕಾಶ ಕೊಡಬಾರದು?"
'ಫ್ಯಾಬ್ ಫೋರ್'
ಕ್ಷೀಣಿಸುತ್ತಿರುವ ಬ್ಯಾಟಿಂಗ್ ಶಕ್ತಿಯನ್ನು ಸರಿಯಾಗಿ ಅರ್ಥ
ಮಾಡಿಕೊಳ್ಳಬೇಕಿದ್ದರೆ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿನ ಪ್ರದರ್ಶನವನ್ನು
ವಿಶ್ಲೇಷಿಸುವುದು ಒಳಿತು. ಮೂರು ಟೆಸ್ಟ್‌ಗಳ ಆ ಸರಣಿಯಲ್ಲಿ ಭಾರತ ಎರಡು
ಪಂದ್ಯಗಳಲ್ಲಿ ಹೀನಾಯ ಸೋಲನುಭವಿಸಿತು. ಒಂದು ಟೆಸ್ಟ್‌ನಲ್ಲಿ ವಿರೇಂದ್ರ
ಸೆಹ್ವಾಗ್ ಅದ್ಭುತ ಬ್ಯಾಟಿಂಗ್ ಮೂಲಕ ಎದುರಾಳಿಗಳನ್ನು ಬಗ್ಗು ಬಡಿಯಿತು. ಈ
ಸರಣಿಯಲ್ಲಿ ನಾಲ್ವರ ಪೈಕಿ ಸ್ವಲ್ಪ ಯಶಸ್ವಿಯಾದವರೆಂದರೆ ಲಕ್ಷ್ಮಣ್ ಮಾತ್ರ.
ಆಡಿದ ಆರು ಇನಿಂಗ್ಸ್‌ಗಳಲ್ಲಿ ಅವರು ಎರಡು ಅರ್ಧ ಶತಕಗಳನ್ನು ಸೇರಿದಂತೆ
215
ರನ್‌ಗಳಿಸಿದರು. ನಂತರದ ಸ್ಥಾನ ದ್ರಾವಿಡ್‌ಗೆ. ದ್ರಾವಿಡ್‌ಗಳಿಸಿದ ಒಟ್ಟು
ರನ್‌ಗಳ ಸಂಖ್ಯೆ 148.
ಇನ್ನು ಸೌರವ್ ಮತ್ತು ಸಚಿನ್ ಇಬ್ಬರೂ ಒಟ್ಟು ಆರು ಇನಿಂಗ್ಸ್‌ಗಳಲ್ಲಿ ತಲಾ
ನೂರು ರನ್‌ಗಳ ಗಡಿಯನ್ನೂ ದಾಟಲಿಲ್ಲ. ಒಂದು ಕಾಲದಲ್ಲಿ ವಿಶ್ವದಲ್ಲಿಯೇ
ಅತ್ಯಂತ ಯಶಸ್ವಿಯಾಗಿ ಸ್ಪಿನ್ನರ್‌ಗಳನ್ನು ಎದುರಿಸುವ ಸಾಮರ್ಥ್ಯವಿದ್ದವರು
ಇವರು. ಆದರೆ, ಅಜಂತಾ ಮೆಂಡಿಸ್ ಮತ್ತು ಮುತ್ತಯ್ಯ ಮುರಳೀಧರನ್ ಸ್ಪಿನ್
ಮೋಡಿಯ ಮುಂದೆ 'ಫ್ಯಾಬ್
ಫೋರ್'
ತತ್ತರಿಸಿದ ರೀತಿಯನ್ನು ಕಂಡಾಗ ಹಲವು ಅನುಮಾನಗಳು ಸಹಜವಾಗಿಯೇ ಮೂಡಿದವು. ಈ
ನಾಲ್ವರು ವಿಫಲವಾಗಿದ್ದರಿಂದಲೇ ಭಾರತ ಸರಣಿಯಲ್ಲಿ ಹೀನಾಯ
ಸೋಲನುಭವಿಸಬೇಕಾಯಿತು ಎನ್ನುವುದು ಈಗ ಇತಿಹಾಸ. ಶ್ರೀಲಂಕಾ ವಿರುದ್ಧ
ಶ್ರೀಲಂಕಾದಲ್ಲಿ ಟೆಸ್ಟ್ ಸರಣಿ ಗೆಲ್ಲುವುದು ಯಾವುದೇ ತಂಡಕ್ಕೂ ದೊಡ್ಡ
ಸವಾಲೇ ಸರಿ. ಆದರೆ, ಮೊದಲ ಹಾಗೂ ಕೊನೆಯ ಟೆಸ್ಟ್‌ನಲ್ಲಿ ಭಾರತ ತಂಡ ಶರಣಾದ
ರೀತಿ ಮಾತ್ರ ಸಹ್ಯವಲ್ಲ. ಕೊಲಂಬೊದಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಭಾರತದ
ಬೌಲರ್‌ಗಳು ಕಳಪೆ ಪ್ರದರ್ಶನ ನೀಡಿದರೆ, ಶ್ರೀಲಂಕಾದ ಬ್ಯಾಟ್ಸ್‌ಮನ್‌ಗಳು
ಅಬ್ಬರಿಸಿದರು. ಇನ್ನೊಂದೆಡೆ ಭಾರತದ ಬಲಿಷ್ಠ ಬ್ಯಾಟಿಂಗ್ ಕ್ರಮಾಂಕ ಕುಸಿದ
ಕಾರಣ ಇನಿಂಗ್ಸ್ ಸೋಲು ಅನುಭವಿಸಿತು. ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ
ನಡೆದ ಸರಣಿಯ ಕೊನೆಯ ಟೆಸ್ಟ್‌ನಲ್ಲಿ ಕೂಡ ಭಾರತದ ಬ್ಯಾಟ್ಸ್‌ಮನ್‌ಗಳು
ವಿಫಲವಾದರು. ಜೊತೆಯಲ್ಲಿಯೇ ಬೌಲರ್‌ಗಳು ಕೂಡ!
ಈ ಎರಡೂ ಟೆಸ್ಟ್‌ಗಳಲ್ಲಿ ಅಜಂತಾ ಮೆಂಡಿಸ್ ಮತ್ತು ಮುತ್ತಯ್ಯ ಮುರಳೀಧರನ್
ಉತ್ತರ ಸಿಗದ ಪ್ರಶ್ನೆಯಾದರು. ಆದರೆ, ಭಾರತ ತಂಡದ ನಾಯಕ ಅನಿಲ್ ಕುಂಬ್ಳೆ
ಮತ್ತು ಹರಭಜನ್ ಸಿಂಗ್ ಇಬ್ಬರೂ ಪರದಾಡಿದರು. ಶ್ರೀಲಂಕಾದಲ್ಲಿ ತಂಡದ
ಒಟ್ಟಾರೆ ಸಾಧನೆಯನ್ನು ಗಮನಿಸಿದಾಗ ಅನಿಲ್ ಕುಂಬ್ಳೆ ಕೂಡ ವಿದಾಯ ಹೇಳುವ ಕಾಲ
ಹತ್ತಿರವಾಗಿದೆ ಎಂದೆನ್ನಿಸುತ್ತಿದೆ. ಏಕೆಂದರೆ ಪಿಯುಷ್ ಚಾವ್ಲಾ ಮತ್ತು
ಪ್ರಗ್ಯಾನ್ ಓಹ್ಜಾ ಅವರಂತಹ ಯುವ ಪ್ರತಿಭೆಗಳು ಭಾರತ ತಂಡದ
ತಟ್ಟಲಾರಂಭಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಭಾರತ ಕ್ರಿಕೆಟ್ ಲೋಕಕ್ಕೆ
ಮಹತ್ತರ ಕಾಣಿಕೆ ನೀಡಿರುವ ಕುಂಬ್ಳೆ ಅವರು ಕೂಡ ತೆರೆಮರೆಗೆ ಸರಿದಲ್ಲಿ,
ಹೊಸನೀರು ಹರಿಯಲು ಅವಕಾಶ ಮಾಡಿಕೊಟ್ಟಂತಾಗುತ್ತದೆ.
ಸಚಿನ್, ಸೌರವ್, ರಾಹುಲ್, ಲಕ್ಷ್ಮಣ್ ಮತ್ತು ಅನಿಲ್ ಇಲ್ಲದ ಭಾರತ
ತಂಡವನ್ನು ನೆನಪಿಸಿಕೊಳ್ಳುವುದು ಕೂಡ ಒಂದು ಕಾಲದಲ್ಲಿ ಕಷ್ಟವೇ ಆಗಿತ್ತು.
ಅವರಲ್ಲಿ ಲಕ್ಷ್ಮಣ್ ಹೊರತುಪಡಿಸಿ ಉಳಿದ ನಾಲ್ವರು ಟೆಸ್ಟ್ ಮತ್ತು ಏಕದಿನ
ಪಂದ್ಯಗಳಲ್ಲಿ
ಆಡುತ್ತಿದ್ದ ತಂಡದ ಅವಿಭಾಜ್ಯ ಅಂಗವಾಗಿದ್ದರು. ಆದರೀಗ, ಸಚಿನ್ ಬಿಟ್ಟು
ಯಾರೂ ಏಕದಿನ ತಂಡದಲ್ಲಿ ಇಲ್ಲವೇ ಇಲ್ಲ! ಇದು ಈಗಾಗಲೇ ಸ್ವೀಕರಿಸಲಾದ ಕಟು
ಸತ್ಯ! ಇದೇ 'ಪ್ರಕೃತಿ
ನಿಯಮ'
ಟೆಸ್ಟ್ ತಂಡಕ್ಕೂ ಅನ್ವಯವಾಗುವ ಕಾಲ ಸಮೀಪಿಸಿದೆ. ಹೆಚ್ಚೆಂದರೆ ಮುಂಬರುವ
ಆಸ್ಟ್ರೇಲಿಯ ವಿರುದ್ಧದ ತವರಿನ ಸರಣಿಯ ನಂತರ
'ಫ್ಯಾಬ್ ಫೋರ್'
ಇತಿಹಾಸದ ಪುಟ ಸೇರಲಿದ್ದಾರೆ. ಆ ನಡುವೆ ಇನ್ನೂ ಕೆಲವು ದಾಖಲೆಗಳು
ಅಳಿಸಿಹೋಗಲಿ!
ಟಿಎಸ್‌ಐ
|