ಇದು ನಮ್ಮ ವಿಶೇಷ ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

 

ಇತರ ವಿಭಾಗಗಳು
 
ವಿಶೇಷ ವರದಿ
ಪಾಕ್ 'ಪಿನೋಷೆಟ್' ಪತನ
 

ರಾಜೀನಾಮೆ ಕೊಟ್ಟ ಬಳಿಕವೂ ಮುಷರಫ್ ಆರೋಪಗಳಿಂದ ಮುಕ್ತರಾಗುವರೇ, ಇಲ್ಲವೇ ಎಂಬ ಚಿಂತೆಯಲ್ಲಿ ಅಮೆರಿಕ ಮುಳುಗಿದೆ. ಈ ನಡುವೆ ಪಾಕಿಸ್ತಾನದ ಮಾಜಿ ಸರ್ವಾಧಿಕಾರಿ, ದೇಶದಲ್ಲೇ ನೆಲೆ ನಿಲ್ಲುವ ಸವಾಲು ಎದುರಿಸುವುದೇ ಅಥವಾ ವಿದೇಶಗಳಲ್ಲಿ ಆಶ್ರಯ ಪಡೆಯುವುದೇ ಎಂಬ ಗೊಂದಲದಲ್ಲಿದ್ದಾರೆ ಎನ್ನುತ್ತಾರೆ ಟಿಎಸ್‌ಐನ ಶಾಹಿದ್ ಹುಸೇನ್

 

ದೋಷಾರೋಪಣೆ ಹೊರಿಸಿ ಉಚ್ಛಾಟಿಸುವ ಭೀತಿಯ ಹಿನ್ನೆಲೆಯಲ್ಲಿ ಪಾಕಿಸ್ತಾನ ಅಧ್ಯಕ್ಷ ಪರ್ವೇಜ್ ಮುಷರಫ್ ಆಗಸ್ಟ್ 18ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸುದೀರ್ಘ ೯ ವರ್ಷಗಳ ಕಾಲ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಸರ್ವಾಧಿಕಾರಿ ಪದತ್ಯಾಗ ಮಾಡಿದ್ದೇ ತಡ ಪಾಕಿಸ್ತಾನದ ಜನತೆ ಸಿಹಿ ಹಂಚಿ ಸಂಭ್ರಮೋಲ್ಲಾಸದಿಂದ ಕುಣಿದಾಡಿದೆ. ರಾಜಕೀಯ ಕಾರ್ಯಕರ್ತರು ಮೆರವಣಿಗೆ ಹೊರಟು ರಸ್ತೆಗಳಲ್ಲಿ ನರ್ತಿಸಿದ್ದೇ ಅಲ್ಲದೆ, ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮ ಪಟ್ಟರು. ಆದರೆ 'ಭಯೋತ್ಪಾದನಾ ವಿರುದ್ಧ ಸಮರ'ದಲ್ಲಿ ನಂಬಿಕಸ್ಥ ಮಿತ್ರನಾಗಿದ್ದ ಸೇನಾ ಸರ್ವಾಧಿಕಾರಿ ಅಧಿಕಾರ ಕಳೆದುಕೊಂಡಿರುವುದರಿಂದ ಅಮೆರಿಕಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ.

ಅಫ್ಘಾನಿಸ್ತಾನದಲ್ಲಿ ಕಾರ್ಯಾಚರಣೆ ಮುಂದುವರಿಸಿರುವ ಅಮೆರಿಕದ ಮೇಲೆ ಒತ್ತಡ ತೀವ್ರವಾಗಿದೆ. ಒಂದು ಕಡೆ ತಾಲಿಬಾನ್ ಕೈ ಮೇಲಾಗುತ್ತಿದ್ದರೆ, ಮತ್ತೊಂದೆಡೆ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಪಾಕಿಸ್ತಾನ ಸರ್ಕಾರ ಅಲ್-ಖೈದಾ ಮೇಲಿನ ಹಿಡಿತವನ್ನು ಸಡಿಲಿಸಿದೆ. ಇತ್ತ ಕೇಂದ್ರಾಡಳಿತ ಬುಡಕಟ್ಟು ಪ್ರಾಂತಗಳಲ್ಲಿ ತಾಲಿಬಾನ್ ತನ್ನ ಚಟುವಟಿಕೆಗಳನ್ನು ಮುಂದುವರಿಸಿದ್ದು, ಇಸ್ಲಾಮಿಕ್ ಉಗ್ರಗಾಮಿಗಳು ಮತ್ತೆ ತಮ್ಮ ನೆಲೆಗಳನ್ನು ಭದ್ರಪಡಿಸಿಕೊಂಡು ನೆರೆಯ ಅಫ್ಘಾನಿಸ್ತಾನದಲ್ಲಿ ನೇಟೊ ಪಡೆಗಳ ಮೇಲೆ ದಾಳಿಗೆ ನವೋತ್ಸಾಹದಿಂದ ಸಜ್ಜಾಗುತ್ತಿದ್ದಾರೆ. ಇದೇ ವರ್ಷ ಫೆಬ್ರುವರಿಯಲ್ಲಿ ಅಧಿಕಾರ ವಹಿಸಿಕೊಂಡಿರುವ 'ಪಾಕಿಸ್ತಾನ ಪೀಪಲ್ಸ್ ಪಾರ್ಟಿ' (ಪಿಪಿಪಿ) ನೇತೃತ್ವದ ಸರ್ಕಾರ ಇಸ್ಲಾಮಿಕ್ ಉಗ್ರರ ಜೊತೆ ಮಾತುಕತೆ ನಡೆಸಲು ಮುಂದಾಗಿರುವುದು ಅಮೆರಿಕದ ಆತಂಕ ಹೆಚ್ಚಿಸಿದೆ. ಹಾಗಿದ್ದರೂ, ಸಮರದಿಂದ ಜರ್ಜರಿತವಾಗಿರುವ ಸೇನೆಗೆ ಸ್ವಲ್ಪ ಕಾಲಾವಕಾಶ ಸಿಕ್ಕಿದ್ದು, ಅದು ನಿಧಾನವಾಗಿ ಮುಂದುವರಿಯುವ ನಿರ್ಧಾರಕ್ಕೆ ಸಮ್ಮತಿ ವ್ಯಕ್ತಪಡಿಸಿದೆ.

ಡಿಸೆಂಬರ್ 27ರಂದು ನಡೆದ ಪಿಪಿಪಿ ಅಧ್ಯಕ್ಷೆ ಬೆನಜೀರ್ ಭುಟ್ಟೊ ಹತ್ಯೆ ನಂತರ ಪಾಕ್‌ನ ಸಂಪೂರ್ಣ ವ್ಯವಸ್ಥೆಯೇ ಕುಸಿದಿತ್ತು. ಆಗಲೇ ಪಾಕಿಸ್ತಾನದ ಸಾರ್ವಭೌಮತೆಯನ್ನು ರಕ್ಷಿಸುವ ಅಗತ್ಯ ಕಂಡು ಬಂದದ್ದರಿಂದ ಸೇನೆಯ ಉಚ್ಛಸ್ಥಾನದಲ್ಲಿದ್ದ ವ್ಯಕ್ತಿ ಪಾರದರ್ಶಕ ಚುನಾವಣೆ ನಡೆಯುವ ಅನಿವಾರ್ಯತೆಯನ್ನು ಕಂಡುಕೊಂಡಿದ್ದರು.

ಮುಷರಫ್ ಪರವಾಗಿದ್ದ ಪಾಕಿಸ್ತಾನ್ ಮುಸ್ಲಿಂ ಲೀಗ್ (ಕ್ಯೂ) ಚುನಾವಣೆಯಲ್ಲಿ ಹೀನಾಯ ಸೋಲು ಕಂಡರೆ ಪಿಪಿಪಿ ಮತ್ತು ಪಾಕಿಸ್ತಾನ ಮುಸ್ಲಿಂ ಲೀಗ್ (ನವಾಜ್ ಶರೀಫ್) ಮತ್ತು ಜಾತ್ಯತೀತ ಅವಾಮಿ ನ್ಯಾಷನಲ್ ಪಾರ್ಟಿ ಜಯಭೇರಿ ಭಾರಿಸಿತು. ಆ ಸಂದರ್ಭದಲ್ಲಿ ಜಾತ್ಯತೀತ ಮನೋಭಾವ ಮತ್ತು ಶಿಸ್ತಿನ ಸಿಪಾಯಿ ಎನ್ನಲಾಗಿರುವ ಜನರಲ್ ಅಷ್ಫಖ್ ಪರ್ವೇಜ್ ಖಯಾನಿ ನೇತೃತ್ವದ ಸೇನೆ ತಟಸ್ಥ ನೀತಿ ಅನುಸರಿಸಿತು. ಹೀಗೆ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂತು. ಹಾಗೇ ಮುಷರಫ್ ಸಂವಿಧಾನದ 58-2(ಬಿ) ವಿಧಿಯನ್ನು ಬಳಸಿ ಸಭೆಯನ್ನು ವಿಸರ್ಜಿಸಲು ಪ್ರಯತ್ನಿಸಿ ವಿಫಲವಾದಾಗ ಸೇನೆಯ ತಟಸ್ಥ ನೀತಿ ಇನ್ನೂ ಸ್ಪಷ್ಟವಾಗಿತ್ತು.

"ಸರ್ಕಾರಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಮಧ್ಯಪ್ರವೇಶಿಸದೆ ಇರುವುದಕ್ಕೆ ಅಮೆರಿಕದ ಒತ್ತಡ ಇದ್ದುದರಿಂದ ಸೇನೆ ತಟಸ್ಥವಾಗಿತ್ತು. ಕಾಬೂಲ್‌ನಲ್ಲಿ ಭಾರತೀಯ ರಾಯಭಾರಿ ಕಚೇರಿ ಮೇಲೆ ಬಾಂಬ್ ದಾಳಿ ನಡೆಸಿರುವುದರಲ್ಲಿ ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‌ಐ ಕೈವಾಡ ಇರುವ ಬಗ್ಗೆ ಅಮೆರಿಕ, ಭಾರತ ಮತ್ತು ಅಫ್ಘಾನಿಸ್ತಾನ ಆರೋಪ ಹೊರಿಸಿದ ನಂತರ ಸೇನೆ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ" ಎನ್ನುತ್ತಾರೆ ಕರಾಚಿ ಉರ್ದು ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಹಾಗೂ ಪ್ರಮುಖ ರಾಜಕೀಯ ವಿಶ್ಲೇಷಕ ತೌಸೀಫ್ ಅಹಮದ್ ಖಾನ್. "ಇತ್ತೀಚೆಗೆ ಮುಷರಫ್ ಅವರು ಮುತ್ತಾಹಿದಾ ಕ್ವಾಮಿ ಮೂವ್‌ಮೆಂಟ್ (ಎಂಕ್ಯುಎಂ) ಹೆಗ್ಗಳಿಕೆಯನ್ನು ಮಿತಿಮೀರಿ ಬಳಸುತ್ತಿದ್ದಾರೆ ಎನ್ನುವ ಭಾವನೆ ಪಂಜಾಬ್‌ನಲ್ಲಿ ಗಾಢವಾಗುತ್ತಿದೆ. ಪಾಕಿಸ್ತಾನದ ಅಧಿಕಾರದ ಸುಭದ್ರ ನೆಲೆಯಾಗಿರುವ ಪಂಜಾಬ್ ಪ್ರಾಂತದ ಜನಾಂಗೀಯ ರಾಜಕೀಯದಿಂದಾಗಿ ನಿರ್ಲಕ್ಷ್ಯದ ಭಾವನೆ ಅಲ್ಲಿ ಗಾಢವಾಗಿದೆ. ದೆಹಲಿಯಿಂದ ವಲಸೆ ಹೋದ ಉರ್ದು ಬಲ್ಲ ನಿರಾಶ್ರಿತ ಮುಷರಫ್ ಎಂಕ್ಯುಎಂನ ಎಲ್ಲಾ ಹಂತಗಳಲ್ಲೂ ಭಾರೀ ಬೆಂಬಲ ಪಡೆದಿದ್ದರು" ಎನ್ನುತ್ತಾರೆ ಅವರು.

ಬದ್ಧವೈರಿ ಮತ್ತು ಎರಡು ಬಾರಿ ಪ್ರಧಾನ ಮಂತ್ರಿಯಾಗಿದ್ದ ನವಾಜ್ ಶರೀಫ್ ಅವರು ಮುಷರಫ್ ವಿರೋಧಿ ಅಭಿಯಾನದ ಮುಂಚೂಣಿಯಲ್ಲಿದ್ದರೆ, ಪಿಪಿಪಿ ಮತ್ತು ವಕೀಲರು ಅದಕ್ಕೆ ಆವೇಗ ನೀಡಿದ್ದರು. ತಾವಾಗಿಯೇ ರಾಜೀನಾಮೆ ನೀಡಿದಲ್ಲಿ ಎಲ್ಲಾ ಆರೋಪಗಳಿಂದ ಮುಕ್ತರಾಗಿ ಸುರಕ್ಷಿತವಾಗಬಹುದು ಎಂಬ ಅಭಯವನ್ನು ಸೌದಿ ಅರೇಬಿಯ, ಅಮೆರಿಕ ಮತ್ತು ಇಂಗ್ಲೆಂಡ್ ಸರ್ಕಾರಗಳು ಮುಷರಫ್ ಅವರಿಗೆ ನೀಡಿದ್ದವು. ದೋಷಾರೋಪಣೆಯಿಂದಾಗುವ ಅವಮಾನ ತಪ್ಪಿಸುವುದು ಮತ್ತು ನಂಬಿಕಸ್ತ ಸ್ನೇಹಿತನಿಗೆ ಸಹಾಯಹಸ್ತ ಚಾಚುವ ನಿಟ್ಟಿನಲ್ಲಿ ಸೌದಿ ಗುಪ್ತಚರ ಸಂಸ್ಥೆಯ ಮುಖ್ಯಸ್ಥರು ಕೂಡ ಪಾಕಿಸ್ತಾನಕ್ಕೆ ನೇರವಾಗಿ ತಾಕೀತು ಮಾಡಿದ್ದರು ಎಂಬ ಮಾಧ್ಯಮ ವರದಿಗಳು ಇದ್ದರೂ ಸರ್ಕಾರ ಅದನ್ನು ತಳ್ಳಿ ಹಾಕಿದೆ. ಶರೀಫ್ ಅವರಿಗೆ ಕರೆ ಮಾಡಿರುವ ಪಾಕಿಸ್ತಾನದ ಅಮೆರಿಕ ರಾಯಭಾರಿ ಕೂಡ ಮುಷರಫ್ ಅವರಿಗೆ ಸುರಕ್ಷಿತ ದಾರಿ ಸಿದ್ಧಪಡಿಸಿದ್ದರು ಎನ್ನುವ ವಾದವೂ ಕೇಳಿ ಬರುತ್ತಿದೆ.

ಮಾಜಿ ಸೇನಾ ಮುಖ್ಯಸ್ಥ ಇದೀಗ ಪದತ್ಯಾಗದ ನಂತರ ರಾಜಧಾನಿ ಇಸ್ಲಾಮಾಬಾದ್‌ನ ಚಕ್ ಶಾಜಾದ್‌ನಲ್ಲಿರುವ 5 ಎಕರೆ ಜಮೀನಿನಲ್ಲಿ ಕಟ್ಟಿಸುತ್ತಿರುವ ವೈಭವೋಪೇತ ಬಂಗಲೆಯಲ್ಲಿ ನೆಲೆಸುತ್ತಾರೆಯೇ ಅಥವಾ ಅಮೆರಿಕ, ಇಂಗ್ಲೆಂಡ್, ಟರ್ಕಿ ಅಥವಾ ಸೌದಿ ಅರೇಬಿಯಾಗಳಲ್ಲಿ ಆಶ್ರಯ ಪಡೆಯುತ್ತಾರೆಯೇ ಎಂಬುದನ್ನು ಕಾದುನೋಡಬೇಕು. ಆದರೆ ಪಾಕಿಸ್ತಾನದಲ್ಲಿ ನೆಲೆಸುವ ಸವಾಲನ್ನು ಅವರು ಸ್ವೀಕರಿಸಿದರೆ ಅಲ್-ಖೈದಾ ಮತ್ತು ಪಾಕಿಸ್ತಾನದ ಮೂಲಭೂತವಾದಿ ಶಕ್ತಿಗಳಿಂದ ಅವರ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಕನಿಷ್ಠ ಎರಡು ಬಾರಿ ಅವರು ತಮ್ಮ ಮೇಲೆ ನಡೆದ ಮಾರಕ ಪ್ರಹಾರಗಳಿಂದ ಕೂದಲೆಳೆಯ ಅಂತರದಿಂದ ತಪ್ಪಿಸಿಕೊಂಡಿದ್ದಾರೆ. ಅಲ್-ಖೈದಾ ಮತ್ತು ತಾಲಿಬಾನ್ ಅವರ ಮೇಲೆ ಮುಯ್ಯಿ ತೀರಿಸಿಕೊಳ್ಳಲು ಕಾಯುತ್ತಿರುವುದು ಗುಟ್ಟಾಗಿಯೇನೂ ಉಳಿದಿಲ್ಲ. ಇತ್ತೀಚೆಗೆ ಅಮೆರಿಕ ಸರ್ಕಾರವೂ ಅವರಿಂದ ಸಾಕಷ್ಟು ಅಂತರ ಕಾಯ್ದುಕೊಂಡಿದೆ. ಮುಷರಫ್ ಅವರಿಗೆ ಆಶ್ರಯ ನೀಡುವ ಬಗ್ಗೆ ಯೋಚಿಸಿಲ್ಲ ಎಂದು ಹೇಳಿಕೆ ನೀಡುವ ಎದೆಗಾರಿಕೆಯನ್ನು ಈಗಾಗಲೇ ಅಮೆರಿಕ ಕಾರ್ಯದರ್ಶಿ ಕಾಂಡೊಲಿಸಾ ರೈಸ್ ಪ್ರದರ್ಶಿಸಿದ್ದಾರೆ.

ಪಿಪಿಪಿ ನೇತೃತ್ವದ ಮೈತ್ರಿ ಸರ್ಕಾರ ಸಿದ್ಧಪಡಿಸಿದ ಆರೋಪಪಟ್ಟಿಯಲ್ಲಿ ಮುಷರಫ್ ಅವರು ಬಹಳ ವರ್ಷಗಳಿಂದ ಸಂವಿಧಾನವನ್ನು ಉಲ್ಲಂಘಿಸುತ್ತಾ, ವ್ಯವಸ್ಥೆಯ ಬುಡಮೇಲು ಕಾರ್ಯದಲ್ಲಿ ನಿರತರಾಗಿದ್ದರು ಎನ್ನಲಾಗಿದೆ. ಪ್ರಜಾಸತ್ತಾತ್ಮಕವಾಗಿ ಆರಿಸಿ ಬಂದ ಪ್ರಧಾನಿ ಶರೀಫ್ ವಿರುದ್ಧ ಕ್ಷಿಪ್ರ ಕಾರ್ಯಾಚರಣೆ ನಡೆಸಿ ದೇಶ ಬಿಟ್ಟು ಹೋಗುವಂತೆ ಒತ್ತಡ ಹೇರಿದ್ದಲ್ಲದೆ ಕಳೆದ ವರ್ಷ ನವೆಂಬರ್‌ನಲ್ಲಿ ತುರ್ತು ಪರಿಸ್ಥಿತಿ ಹೇರಿದ್ದು, ಸುಮಾರು 60 ನ್ಯಾಯಮೂರ್ತಿಗಳನ್ನು ಪದಚ್ಯುತಗೊಳಿಸಿದ್ದು (ಮುಖ್ಯ ನ್ಯಾಯಮೂರ್ತಿ ಇಫ್ತಿಖಾರ್ ಮೊಹಮ್ಮದ್ ಚೌಧುರಿ ಸೇರಿದಂತೆ), ಬಲೂಚ್ ನಾಯಕ ಅಕ್ಬರ್ ಬುಗ್ತಿ ಕೊಲೆ ಮತ್ತು ಬಲೂಚಿಸ್ತಾನ್‌ನಲ್ಲಿ ಸೇನಾ ಕಾರ್ಯಾಚರಣೆ ಆರಂಭಿಸಿದ್ದು ಹಾಗೂ ಶಂಕಿತ ಅಲ್-ಖೈದಾ ತೀವ್ರಗಾಮಿಗಳನ್ನು ಅಮೆರಿಕಕ್ಕೆ ಒಪ್ಪಿಸಿರುವ ಆರೋಪಗಳನ್ನು ಮುಷರಫ್ ಮೇಲೆ ಹೊರಿಸಲಾಗಿದೆ. ಚಿಲಿಯ ಜನರಲ್ ಪಿನೊಷೆಟ್ ಸರ್ಕಾರವನ್ನು ನೆನಪಿಸುವ ಆಡಳಿತ ನಡೆಸಿದ ಆರೋಪವೂ ಮುಷರಫ್ ಮೇಲಿದೆ. ಪಾಕಿಸ್ತಾನದಲ್ಲಿ ಅನೇಕ ಬಲೂಚಿಗಳು ಸೇರಿದಂತೆ ಸಾವಿರಾರು ರಾಜಕೀಯ ಕಾರ್ಯಕರ್ತರು ಕಣ್ಮರೆಯಾಗಿದ್ದರು ಮತ್ತು ಅವರನ್ನು ವಿವಿಧ ಗುಪ್ತ ಸ್ಥಳಗಳಲ್ಲಿ ಇಟ್ಟಿರುವ ಮಾಹಿತಿ ದೊರೆತಿತ್ತು. ಇದರಿಂದ ಮುಖ್ಯನ್ಯಾಯಮೂರ್ತಿ ಚೌಧುರಿ ಅವರು ಗುಪ್ತಚರ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು.

ವಿಪರ್ಯಾಸವೆಂದರೆ, ಈ ಹಿಂದೆ ಪ್ರಧಾನಮಂತ್ರಿ ಭುಟ್ಟೊ ಸರ್ಕಾರ ಅಧಿಕಾರದಲ್ಲಿದ್ದಾಗ ಪ್ರತಿ ಒಡಂಬಡಿಕೆಗೂ ಲಂಚ ಪಡೆದುಕೊಳ್ಳುತ್ತಿದ್ದ ಹೆಗ್ಗಳಿಕೆಗಾಗಿ 'ಮಿ. ಟೆನ್ ಪರ್ಸಂಟ್' ಎಂದು ಕರೆಸಿಕೊಂಡಿರುವ ಪಿಪಿಪಿ ಸಹ-ಅಧ್ಯಕ್ಷರು ಮುಷರಫ್ ಮೇಲೆ "ಭಯೋತ್ಪಾದನಾ ವಿರುದ್ಧ ಸಮರಕ್ಕಾಗಿ ಪಾಕಿಸ್ತಾನಕ್ಕೆ ಸಿಕ್ಕ 5.6 ಬಿಲಿಯನ್ ಡಾಲರ್‌ಗಳ ಸೇನಾ ಅನುದಾನದಿಂದ ಲಕ್ಷಗಟ್ಟಲೆ ಡಾಲರ್‌ಗಳನ್ನು ಕಬಳಿಸಿದ್ದಾರೆ" ಎನ್ನುವ ಆರೋಪವನ್ನು ಹೊರಿಸಿದ್ದಾರೆ.

ಮುಷರಫ್ ಈ ಆರೋಪಗಳನ್ನು ನಿರಾಕರಿಸಿದ್ದು, ಇವೆಲ್ಲಾ ಸುಳ್ಳಿನ ಕಂತೆ ಎಂದಿದ್ದಾರೆ. ರಾಜೀನಾಮೆ ಕೊಡುವ ಮುನ್ನ ಮಾಡಿದ ಭಾಷಣದಲ್ಲಿ ಅವರು ಪಿಪಿಪಿ ನೇತೃತ್ವದ ಮೈತ್ರಿ ಸರ್ಕಾರದ ಕೆಟ್ಟ ಅರ್ಥಿಕ ನಿರ್ವಹಣೆಯನ್ನು ಜರೆದಿದ್ದು, ಈ ಸರ್ಕಾರ ಹಿಂದೆಂದೂ ಕಾಣದಂತಹ ಹಣದುಬ್ಬರಕ್ಕೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ. "೯ ವರ್ಷಗಳ ಹಿಂದೆ ನಾನು ಅಧಿಕಾರ ಸ್ವೀಕರಿಸಿದಾಗ ಪಾಕಿಸ್ತಾನ ಭಯೋತ್ಪಾದಕ ರಾಷ್ಟ್ರವೆಂಬ ಹಣೆಪಟ್ಟಿ ಪಡೆಯುವ ಮತ್ತು ವಿಫಲ ಆಡಳಿತಕ್ಕೆ ಸಾಕ್ಷಿಯಾಗುವ ಸ್ಥಿತಿಯಲ್ಲಿತ್ತು. ಪಾಕಿಸ್ತಾನದ ಇತಿಹಾಸದಲ್ಲೇ ಕಂಡರಿಯದ ಸವಾಲುಗಳನ್ನು ಈ ೯ ವರ್ಷಗಳಲ್ಲಿ ಎದುರಿಸಬೇಕಾಗಿ ಬಂದಿತ್ತು. ಹಾಗಿದ್ದರೂ ಅವುಗಳನ್ನೆಲ್ಲಾ ಸಮರ್ಥವಾಗಿ ನಿಭಾಯಿಸಿರುವೆ" ಎಂದು ಮುಷರಫ್ ಹೇಳಿದ್ದಾರೆ. ತಾವು ಮಧ್ಯಮವರ್ಗದ ಕುಟುಂಬದಿಂದ ಬಂದವನಾದ್ದರಿಂದ ಜನಸಾಮಾನ್ಯರ ಸಮಸ್ಯೆಗಳನ್ನು ಚೆನ್ನಾಗಿ ಅರಿತಿದ್ದೇನೆ ಎಂದೂ ಅವರು ಹೇಳಿದ್ದರು.

ಒಂದು ರೀತಿಯಲ್ಲಿ ಅವರು ಹೇಳಿದ್ದು ನಿಜವೇ. ಅಮೆರಿಕದ ಮೇಲೆ ನಡೆದ ಸೆಪ್ಟೆಂಬರ್ 11ರ ಭಯೋತ್ಪಾದಕ ದಾಳಿಯ ನಂತರ ಭಯೋತ್ಪಾದಕರ ಬಗೆಗಿನ ಪಾಕಿಸ್ತಾನದ ನಿಲುವಿನಲ್ಲಿ ಸಂಪೂರ್ಣ ಬದಲಾವಣೆಯಾಗಿದ್ದರಿಂದ ರಾಷ್ಟ್ರದ ಅಗತ್ಯಗಳನ್ನು ಪೂರೈಸಲು ಅಮೆರಿಕದಿಂದ ಅನುದಾನ ಹರಿದುಬಂದಿತ್ತು. ಆ ಅನುದಾನ ಆರ್ಥಿಕ ಕುಸಿತದಿಂದ ಪಾಕಿಸ್ತಾನವನ್ನು ಪಾರುಮಾಡಿತ್ತು. ಮುಷರಫ್ ಮಾತುಗಳಲ್ಲಿ ಸುಳ್ಳೇನಿಲ್ಲ. ಪಾಕಿಸ್ತಾನದ ಒಟ್ಟು ರಾಷ್ಟ್ರೀಯ ಉತ್ಪನ್ನ ಶೇ. 7ರ ದರದಲ್ಲಿ ಪ್ರಗತಿಯ ಹಾದಿಯಲ್ಲಿದ್ದು, ಸುಮಾರು 180 ಬಿಲಿಯನ್ ಡಾಲರ್‌ಗಳಷ್ಟಿದೆ. ಇದರಲ್ಲಿ ವಿದೇಶಿ ವಿನಿಮಯದ ಪಾಲು ಶೇ. 17 ಬಿಲಿಯನ್ ಡಾಲರ್‌ಗಳು. ಇದೇ ರೀತಿ ಕಳೆದ ಎಂಟು ವರ್ಷಗಳಲ್ಲಿ ಡಾಲರ್ ಎದುರು ಪಾಕಿಸ್ತಾನಿ ರೂಪಾಯಿ ಮೌಲ್ಯ ರೂ. 60ರ ಆಸುಪಾಸಿನಲ್ಲಿತ್ತು. ಆದರೆ ಇಂದು ಈ ದರ ರೂ. 77ಕ್ಕೆ ತಲುಪಿದೆ.

ಅಧ್ಯಕ್ಷ ಸ್ಥಾನ ತೊರೆಯುವ ಮುನ್ನ ಮುಷರಫ್ ಅವರು ಭೂಸೇನಾ ಮುಖ್ಯಸ್ಥ ಜನರಲ್ ಖಯಾನಿ ಮತ್ತು ವಾಯುಸೇನಾ ಮುಖ್ಯಸ್ಥ ಏರ್‌ಮಾರ್ಷಲ್ ತನ್ವೀರ್ ಮೆಹಮೂದ್ ಅಹಮದ್ ಅವರನ್ನು ಭೇಟಿಯಾಗಿದ್ದರು. ಅಲ್ಲಿ ಅವರಿಗೆ ಸೇನಾ ಗೌರವದ ವಿದಾಯ ಕೂಡ ದೊರೆಯಿತು. ಮಾಜಿ ಸೇನಾ ಮುಖ್ಯಸ್ಥನಿಗೆ ಅವಮಾನವಾಗುವ ಪ್ರಸಂಗವನ್ನು ತಡೆಯಲು ಸೇನೆ ಸಾಕಷ್ಟು ಶ್ರಮವಹಿಸಿದ್ದಕ್ಕೆ ಅದು ನಿದರ್ಶನವಾಗಿತ್ತು. ಮುಷರಫ್ ಅವರ ರಾಜೀನಾಮೆ ನಂತರ ಸೆನೆಟ್ ಅಧ್ಯಕ್ಷ ಮೊಹಮ್ಮದಿಮಿಯಾನ್ ಸೂಮ್ರು ಅವರು ಉಸ್ತುವಾರಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. 30 ದಿನಗಳೊಳಗೆ ಹೊಸ ಅಧ್ಯಕ್ಷರನ್ನು ಆರಿಸುವ ಹೊಣೆ ಅವರ ಮೇಲಿದೆ. ಪಾಕಿಸ್ತಾನ ಸಂಸತ್ತಿನ ಎರಡು ಸದನಗಳು ಮತ್ತು ನಾಲ್ಕು ವಿಧಾನಸಭೆ ಸದಸ್ಯರು ಮತ ಹಾಕಿ ಅಧ್ಯಕ್ಷರನ್ನು ಆರಿಸಲಿದ್ದಾರೆ.

ಅಧ್ಯಕ್ಷರಾಗಿ ಯಾರು ಆಯ್ಕೆಯಾಗಬಹುದು ಎನ್ನುವುದು ಇನ್ನೂ ಅನಿಶ್ಚಿತವಾಗಿದೆ. ಪಿಎಂಎಲ್(ಎನ್) ನಾಯಕ ನವಾಜ್ ಶರೀಫ್, ಪಿಪಿಪಿ ಸಹ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ, ಬಲೂಚ್ ರಾಷ್ಟ್ರೀಯ ನಾಯಕ ಸರ್ದಾರ್ ಅತಾವುಲ್ಲಾ ಮೆಂಗಲ್, ಎಎನ್‌ಪಿ ನಾಯಕ ಅಸ್ಫಾಂದ್ಯಾರ್ ವಲಿ, ಪಿಪಿಪಿ ನಾಯಕ ಮತ್ತು ಅಮೆರಿಕದ ಮಾಜಿ ಪಾಕಿಸ್ತಾನಿ ರಾಯಭಾರಿ ಬೇಗಂ ಅಬಿದಾ ಹುಸೇನ್, ಆಸಿಫ್ ಅಲಿ ಜರ್ದಾರಿ ಅವರ ಸಹೋದರಿ ಫರ್ಯಾಲ್ ತಲ್ಪುರ್, ಮತ್ತು ಬೆನ್‌ಜೀರ್ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿದ್ದ ಅಫ್ತಾಬ್

ಶಾಬಾನ್ ಮಿರಾನಿ ಅಧ್ಯಕ್ಷ ಗಾದಿಯ ಸ್ಪರ್ಧೆಯ ಮುಂಚೂಣಿಯಲ್ಲಿದ್ದಾರೆ.  

ಟಿಎಸ್‌ಐ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .