ಇದು ನಮ್ಮ ವಿಶೇಷ ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಮುಖಾಮುಖಿ
“ಸ್ವಾತಂತ್ರ್ಯವೇ ಮುಖ್ಯ ಪ್ರಶ್ನೆ''
 

ಕಾಶ್ಮೀರ ವಿಷಯ ಪರಿಹಾರವಾಗುವವರೆಗೆ ಜನಮತಗಣನೆ ಪ್ರಸ್ತುತತೆ ಕಳೆದುಕೊಳ್ಳಲಾರದು ಎನ್ನುತ್ತಾರೆ ಸಾಜದ್ ಘನಿ ಲೋನ್. ಅವರು ಟಿಎಸ್‌ಐನ ಜುಬೇರ್ ದಾರ್ ಜೊತೆಗಿನ 'ಮುಖಾಮುಖಿ'ಯಲ್ಲಿ ಮಾತನಾಡಿದ್ದು ಹೀಗೆ...
 

ಜಮ್ಮುವಿನ ಪ್ರತಿರೋಧಕ್ಕೆ ಕಾಶ್ಮೀರದ ಹಿಂಸೆ ಪ್ರತ್ಯುತ್ತರವೇ?

ಇಲ್ಲ. ಇವೆರಡಕ್ಕೂ ಸಂಬಂಧವಿಲ್ಲ. ಕಾಶ್ಮೀರದಲ್ಲಿ ಮೊದಲು ನಡೆದ ಪ್ರತಿಭಟನೆಗಳು ಅಮರನಾಥ ದೇವಾಲಯದ ಭೂಮಿ ಪರಭಾರೆಗೆ ಸಂಬಂಧಿಸಿದ್ದವು. ಆದರೆ ಈಗ ಭೂಮಿ ವಿಷಯವನ್ನೂ ಮೀರಿ ಜನರ ಪ್ರತಿಭಟನೆ ಕಾಶ್ಮೀರದ ಮೂಲ ಬೇಡಿಕೆಯ ಕಡೆ ತಿರುಗಿದೆ. ಹೋರಾಟ ಈಗ ಸ್ವಾತಂತ್ರ್ಯದ ಪ್ರಶ್ನೆಯಾಗಿದೆ. ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕಾಶ್ಮೀರದ ಸಮಸ್ಯೆಗೆ ಒಂದು ಸರ್ವಸಮ್ಮತ ಪರಿಹಾರಕ್ಕಾಗಿ ಜನತೆ ಆಗ್ರಹಿಸುತ್ತಿದ್ದಾರೆ. ಇನ್ನು ಜಮ್ಮು ಪ್ರತಿಭಟನೆಯ ಕುರಿತು ಹೇಳಬೇಕೆಂದರೆ, ನಾವು ಕಳೆದ 20 ವರ್ಷಗಳಿಂದ ಅನುಭವಿಸಿದ ನೋವಿನ ರುಚಿ ಒಂದಿಷ್ಟು ಅವರಿಗೂ ತಿಳಿಯಲಿ ಬಿಡಿ. ಆದರೆ ಈ ಹಂತದ ನಂತರ ಭೂಮಿಯ ವಿಚಾರವನ್ನು ಯಾರೂ ತೀರಾ ಗಂಭೀರವಾಗಿ ಪರಿಗಣಿಸುವುದಿಲ್ಲ ಎನ್ನುವುದು ನನ್ನ ಅನಿಸಿಕೆ.

ಕಾಶ್ಮೀರದ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲಾಗಲೀ, ಅಥವಾ ಆ ವಿಷಯದಲ್ಲಿ ಜನಮತ ಸಂಗ್ರಹಕ್ಕಾಗಲೀ ಇದು ಸೂಕ್ತ ಸಮಯವೇ?

ಜನತೆಯ ಆಶಯವನ್ನು, ಅವರಿಗೆ ಯಾವ ದೇಶದ ಕಡೆ ಒಲವಿದೆ ಎಂಬುದನ್ನು ತಿಳಿಯಲು ಇರುವ ಏಕೈಕ ನ್ಯಾಯೋಚಿತ ಮಾರ್ಗವೆಂದರೆ ಅದು ಜನಮತ ಗಣನೆ. ಕಾಶ್ಮೀರ ಸಮಸ್ಯೆ ಎಲ್ಲಿಯವರೆಗೆ ಜೀವಂತವಾಗಿರುತ್ತದೆಯೋ ಅಲ್ಲಿಯವರೆಗೂ ಜನಮತಗಣನೆ ಪ್ರಸ್ತುತವಾಗಿಯೇ ಇರುತ್ತದೆ. ನನ್ನ ಪ್ರಕಾರ ಕಾಶ್ಮೀರ ಎಂದಿಗೂ ಭಾರತದ ಅವಿಭಾಜ್ಯ ಅಂಗವಾಗಿರಲಿಲ್ಲ. ಆ ವಿಷಯದಲ್ಲಿ ಅಲ್ಲಿನ ಜನತೆಗೇ ಒಮ್ಮತವಿಲ್ಲ ಎಂಬುದಕ್ಕೆ ಜನಮತಗಣನೆಯೇ ಮಾನದಂಡ. ಇದೀಗ ವಿಷಯ ಭಾರತದ ವಿವೇಚನೆಗೆ ಬಿಟ್ಟದ್ದು. ಕಾಶ್ಮೀರಿಗಳು, ಪಾಕಿಸ್ತಾನಿಯರು ಮತ್ತು ಭಾರತೀಯರ ಆಶೋತ್ತರಗಳಿಗೆ ಸ್ಪಂದಿಸಿ ಮೂವರಿಗೂ ಸರ್ವಸಮ್ಮತವಾದ ಒಂದು ಹೊಂದಾಣಿಕೆ ಸೂತ್ರಕ್ಕೆ ಬಂದರೆ ಎಲ್ಲವೂ ಸುಸೂತ್ರವಾಗಿರುತ್ತದೆ. ಇಲ್ಲದಿದ್ದರೆ, ವಿಶ್ವಸಂಸ್ಥೆಯ ತೀರ್ಮಾನಕ್ಕೆ ತಲೆಬಾಗಬೇಕಾಗುತ್ತದೆ.

ನಿಮ್ಮ 'ಪ್ರತ್ಯೇಕ ರಾಷ್ಟ್ರ ಸ್ಥಾನಮಾನ'ಕ್ಕೆ ಸಂಬಂಧಪಟ್ಟ ಪ್ರಸ್ತಾವನೆಗಳ ಬಗ್ಗೆ ಈಗ ಹೆಚ್ಚು ಕೇಳಿಬರುತ್ತಿದೆಯಲ್ಲವೇ?

ಅದು ನನಗೆ ನಿಜಕ್ಕೂ ಸಂತಸ ತಂದಿದೆ. ಆ ಪ್ರಸ್ತಾವನೆಗಳ ವಿಚಾರದಲ್ಲಿ ಬಹಳ ಶ್ರಮವಹಿಸಿದ್ದೇನೆ. ಹಲವರು ನನ್ನೊಂದಿಗೆ ಮಾತನಾಡಿ ಪ್ರಸ್ತಾವನೆ ಹೆಚ್ಚು ಪ್ರಸ್ತುತವಾಗಿದೆ ಎಂದು ಅಭಿಪ್ರಾಯಪಟ್ಟರು. ಮುಂದಿನ ದಿನಗಳಲ್ಲಿ ಅದು ಇನ್ನಷ್ಟು ಪ್ರಸ್ತುತತೆ ಪಡೆದುಕೊಳ್ಳಲಿವೆ ಎಂಬ ಭರವಸೆ ನನಗಿದೆ. ಏಕೆಂದರೆ, ಈಗ ನಡೆಯುತ್ತಿರುವ ಹೆಚ್ಚಿನ ವಿಷಯಗಳನ್ನು ನಾವು ಮೊದಲೇ ಊಹಿಸಿದ್ದೆವು ಮತ್ತು ಅದನ್ನು ನಾವು ಸಾರ್ವಜನಿಕವಾಗಿ ಹೇಳಿದ್ದೆವು ಕೂಡ. ಹಾಗೇ, ಭಾರತ ಸರ್ಕಾರ ಮುಷರಫ್ ಜೊತೆ ಮಾತುಕತೆ ನಡೆಸದೇ ಒಂದು ಅಮೋಘ ಅವಕಾಶವನ್ನು ಕಳೆದುಕೊಂಡಿದೆ ಎಂಬುದನ್ನು ಭಾರತೀಯರಿಗೆ- ಭಾರತೀಯ ಸರ್ಕಾರ ಮತ್ತು ಭಾರತೀಯರ ನಡುವಿನ ವ್ಯತ್ಯಾಸದ ಅರಿವು ನನಗಿದೆ- ಈ ಮೂಲಕ ಮನವರಿಕೆ ಮಾಡಿದ್ದೇನೆ ಎಂದುಕೊಂಡಿದ್ದೇನೆ. ಕಾಶ್ಮೀರ ವಿಷಯದಲ್ಲಿ ವಿಳಂಬ ಮಾಡಿದಷ್ಟೂ ಅದಕ್ಕಾಗಿ ತೆರಬೇಕಾದ ಬೆಲೆ ಏರುತ್ತಲೇ ಇರುತ್ತದೆ ಎಂಬುದು ಭಾರತಕ್ಕೆ ಗೊತ್ತಿರಲಿ.

ಮತಾಂಧ ಶಕ್ತಿಗಳನ್ನು ನಿಯಂತ್ರಿಸುವುದು ಹೇಗೆ?

ಇಲ್ಲಿ ಒಂದು ವಿಚಾರವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ; ಕಾಶ್ಮೀರದ ಜನತೆಗೆ ಜಮ್ಮುವಿನ ವಿರುದ್ಧ ಯಾವ ದ್ವೇಷವೂ ಇಲ್ಲ. ಅಲ್ಲಿನ ಭೂಮಿ ಪರಭಾರೆಯನ್ನು ನಾವು ವಿರೋಧಿಸಿದ್ದಕ್ಕೆ ಕಾರಣವೇನೆಂದರೆ, ಜಮ್ಮುವಿನ ಭೂಮಿಯನ್ನು ಹೊರರಾಜ್ಯದ ವಿಚಾರಗಳಿಗೆ ಬಳಸುವಂತಿಲ್ಲ. ಅದನ್ನು 'ನಾವು ಒಪ್ಪಿಕೊಳ್ಳದ' ಭಾರತದ ಸಂವಿಧಾನವೇ ಹೇಳಿದೆ. ಹಾಗಾಗಿ ನಾವು ಪ್ರತಿಭಟಿಸುತ್ತಿರುವುದು ಜಮ್ಮು ಜನತೆಯ ವಿರುದ್ಧ ಅಲ್ಲ. ಬದಲಿಗೆ ನಮ್ಮ ವಿರೋಧವಿರುವುದು ಅಸಾಂವೈಧಾನಿಕವಾದ ಮತ್ತು ಕಾನೂನು ಬಾಹಿರ ಕ್ರಮಗಳ ಕುರಿತು. ಇದು ಹಿಂದೂಗಳ ಹಕ್ಕಿನ ಪ್ರಶ್ನೆಯಾಗಿದ್ದರೆ ಮಹಾರಾಷ್ಟ್ರ, ದೆಹಲಿ, ಗುಜರಾತ್‌ನಲ್ಲಿರುವವರು ಹಿಂದೂಗಳಲ್ಲವೇ? ಅವರು ಏಕೆ ಪ್ರತಿಭಟಿಸುತ್ತಿಲ್ಲ? ಪ್ರತಿಭಟನೆ ಮಾಡುತ್ತಿರುವವರು ಜಮ್ಮುವಿನ 2 ಜಿಲ್ಲೆಗಳ ಜನತೆ ಮಾತ್ರ ಏಕೆ?

ಕಾಶ್ಮೀರ ಬಂಡಾಯ ಇದೀಗ ಹಿಂಸೆಯಿಂದ ಅಹಿಂಸಾ ಮಾರ್ಗದ ಕಡೆ ಮಹತ್ತರ ಬದಲಾವಣೆ ಕಂಡಿದೆ ಎನಿಸುವುದಿಲ್ಲವೇ?

ಜನರು ಶಾಂತಿಯುತವಾಗಿ ಪ್ರತಿಭಟಿಸುತ್ತಿರುವುದು ಸಂತಸದ ವಿಷಯ. 1990ರಲ್ಲಿ ಇದೇ ಬಗೆಯ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಅದು ಬಾಹ್ಯಶಕ್ತಿಗಳ ಪ್ರೇರಣೆಯಿಂದ ಉಂಟಾದ ಸಮಸ್ಯೆ, ಪಾಕಿಸ್ತಾನ ಕುಮ್ಮಕ್ಕು ನೀಡುತ್ತಿದೆ ಎಂದು ಭಾರತ ಸರ್ಕಾರ ದೂರಿತು. ಈಗ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ಅದು ಸಂಪೂರ್ಣ ಸ್ಥಳೀಯರ ಪ್ರತಿರೋಧ ಎಂಬುದು ರುಜುವಾತಾಗಿದೆ. ಆದರೆ, ಇಷ್ಟೆಲ್ಲಾ ಆದ ಮೇಲೆ ಈಗ ಭಾರತ ಯಾವ ನೆಪವನ್ನೂ ಮುಂದೊಡ್ಡುವುದು ಸಾಧ್ಯವಿಲ್ಲ ಎನಿಸುತ್ತದೆ. ಶಾಂತಿಯುತ ಪ್ರತಿಭಟನೆ ಜಗತ್ತಿನಾದ್ಯಂತ ಒಪ್ಪಿತ ಪ್ರತಿರೋಧ. ನನ್ನ ಪ್ರಕಾರ ಈ ಬಗೆಯ ಹೋರಾಟ ಕಾಶ್ಮೀರದ ಮಹದಾಸೆಗೆ ಬಹಳಷ್ಟು ನೆರವಾಗಲಿದೆ.

 ಟಿಎಸ್‌ಐ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .