ಇದು ನಮ್ಮ ವಿಶೇಷ ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
 
ಹೆಜ್ಜೆಗಳು

ನಿಮ್ಮ ರಕ್ಷಣೆ ನಿಮ್ಮ ಕೈಯಲ್ಲಿ
 

 
 
Prashantho Banerjee
ಪ್ರಶಾಂತೊ ಬ್ಯಾನರ್ಜಿ
ನುಡಿಚಿತ್ರ ಸಂಪಾದಕ
ದ ಸಂಡೆ ಇಂಡಿಯನ್

ಈ ಬರಹ ಅರುಣಾ ಶಾನಬಾಗ್ ಕುರಿತದ್ದಲ್ಲ. ಆದರೂ ಇದನ್ನು ಪ್ರಾರಂಭಿಸುವ ಮುನ್ನ ಅವರ ಕಥೆಯನ್ನೊಮ್ಮೆ ಹೇಳಿಬಿಡುತ್ತೇನೆ.

ಅರುಣಾಗೆ ಈಗ 60 ವರ್ಷ. ಆದರೆ, ಲೆಕ್ಕ ಹಾಕಿದರೆ ಆಕೆ ತನ್ನ ಜೀವಿತದ ಬಹುಪಾಲನ್ನು ತನ್ನ ಕೊಠಡಿಯ ಚಾವಣಿಯನ್ನು ದಿಟ್ಟಿಸುತ್ತಾ ಕಳೆದಿದ್ದಾಳೆ. ತೆರೆದುಕೊಂಡೇ ಇರುವ ಆಕೆಯ ಕಣ್ಣುಗಳಲ್ಲೀಗ ಕನಸುಗಳು ಸತ್ತು ಕೇವಲ ಭೀತಿ ಮಡುಗಟ್ಟಿದೆ. ಮುನ್ಸಿಪಲ್ ಆಸ್ಪತ್ರೆಯ ಹಾಸಿಗೆಯ ಮೇಲೆಯೇ ಅರುಣಾಳ ಬದುಕಿನ ಅತ್ಯಮೂಲ್ಯ 35 ವರ್ಷ ಸವೆದುಹೋಗಿವೆ. 35 ವರ್ಷಗಳ ಹಿಂದಿನ ಕಥೆ ಇದು. ಮುಂಬಯಿಯ ಆಸ್ಪತ್ರೆಯೊಂದರಲ್ಲಿ ದಾದಿಯಾಗಿ ಕೆಲಸ ನಿರ್ವಹಿಸುತ್ತಿದ್ದ 25ರ ಹರೆಯದ ಅರುಣಾ ಪಾಲಿಗೆ ಬದುಕು ಆ ದಿನದವರೆಗೆ ಸುಂದರವಾಗಿತ್ತು. ಏಕೆಂದರೆ ಮುಂದಿನ ಕೆಲವೇ ದಿನಗಳಲ್ಲಿ ತಾನು ಪ್ರೀತಿಸಿದ ವ್ಯಕ್ತಿಯೊಂದಿಗೆ ಹಸೆಮಣೆ ಏರಲಿದ್ದ ಅರುಣಾ ತನ್ನ ಕೆಲಸಕ್ಕೆ ರಜೆ ಹಾಕಿ ಊರಿಗೆ ತೆರಳುವವಳಿದ್ದಳು. ಆಸ್ಪತ್ರೆಯ ನೆಲ ಅಂತಸ್ತಿನಲ್ಲಿದ್ದ ಪ್ರಯೋಗಶಾಲೆಯಲ್ಲಿ ಸಮವಸ್ತ್ರವನ್ನು ಬದಲಿಸುತ್ತಿದ್ದ ಅರುಣಾ ತನ್ನ ಕುತ್ತಿಗೆಗೆ ತಣ್ಣಗಿನ ವಸ್ತುವೊಂದು ತಾಗಿದಂತಾಗಿ ಬೆಚ್ಚಿ ಬಿದ್ದಳು. ಏನಾಗುತ್ತಿದೆ ಎಂದು ಅರಿವಾಗುವುದರೊಳಗೆ ನಾಯಿ ಸರಪಳಿ ಕುತ್ತಿಗೆಯನ್ನು ಬಿಗಿಯತೊಡಗಿತ್ತು. ಆ ಸರಪಳಿಯ ಹಿಂದಿದ್ದ ಕೈ ಸೋಹನ್‌ಲಾಲ್‌ನದು. ಅದೇ ಆಸ್ಪತ್ರೆಯಲ್ಲಿ ಕಸಗುಡಿಸುವ ಕೆಲಸ ಮಾಡಿಕೊಂಡಿದ್ದ ಸೋಹನ್ ಲಾಲ್ ಹಿಂದಿನ ದಿನವಷ್ಟೇ ಆಸ್ಪತ್ರೆಯ ಅವ್ಯವಹಾರ ಸಂಬಂಧವಾಗಿ ಅರುಣಾಳಿಂದ ಬೈಸಿಕೊಂಡಿದ್ದ. ಸೇಡು, ರೊಚ್ಚಿನಲ್ಲಿ ಆತ ಅಕ್ಷರಶಃ ಮೃಗವಾಗಿದ್ದ. ಅವನ ಹಿಡಿತದಿಂದ ತಪ್ಪಿಸಿಕೊಳ್ಳಲು ಒದ್ದಾಡುತ್ತಿದ್ದ ಅರುಣಾಳ ಮೇಲೆ ದಾರುಣವಾಗಿ ಅತ್ಯಾಚಾರವೆಸೆಗಿದ ಸೋಹನ್‌ಲಾಲ್ ನಂತರ ಆಕೆ ಸತ್ತಳೆಂದು ಭಾವಿಸಿ ತಲೆಮರೆಸಿಕೊಂಡಿದ್ದ. ಇದೀಗ ದೇಹ ಮತ್ತು ಚೇತನಗಳೆರಡೂ ಊನವಾಗಿ ಆಕೆ ನಿಸ್ತೇಜವಾಗಿ ಮಲಗಿದ್ದರೆ, ಅತ್ತ ಸೋಹನ್ ಏಳು ವರ್ಷಗಳ ನ್ಯಾಯಾಲಯದ ಶಿಕ್ಷೆ ಅನುಭವಿಸಿ, ಆರಾಮವಾಗಿ ಅಡ್ಡಾಡಿಕೊಂಡಿದ್ದಾನೆ. ಕೆಲವರ ಪ್ರಕಾರ ಆತ ದೆಹಲಿಯ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ! ಹೆಚ್ಚೆಂದರೆ ಹೆಸರು ಬದಲಾಗಿರಬಹುದು ಅಷ್ಟೆ!

ಇದು ನಿಷ್ಠಾ(ಹೆಸರು ಬದಲಿಸಲಾಗಿದೆ) ಕುರಿತ ಲೇಖನವಲ್ಲ. ಲೇಖನ ಮುಗಿಸುವ ಮುನ್ನ ಅವಳ ಕಥೆಯನ್ನೂ ಹೇಳುತ್ತೇನೆ.

ಇದು ಕೆಲವೇ ವರ್ಷಗಳ ಹಿಂದೆ ನಡೆದದ್ದು. 20ರ ಹರೆಯದ ನಿಷ್ಠಾ ದೆಹಲಿಯ ಮಬ್ಬುಗತ್ತಲೆಯಲ್ಲಿ ಒಬ್ಬಳೇ ನಡೆದು ಬರುತ್ತಿದ್ದಳು. ಅವಳು ಹೋಗಿದ್ದ ಮಾಲ್ ಮನೆಯಿಂದ ತೀರಾ ದೂರವಿರಲಿಲ್ಲ. ಹಿಂಬಾಲಿಸಿಕೊಂಡು ಬರುತ್ತಿದ್ದ ಹುಡುಗರ ಗುಂಪೊಂದು ಅನಾಮತ್ತಾಗಿ ಅವಳನ್ನು ಪಕ್ಕದಲ್ಲಿದ್ದ ಇಟ್ಟಿಗೆಯ ಗೋಡೆಯೊಂದಕ್ಕೆ ಅವಚಿ ಹಿಡಿದರು. ಒಬ್ಬ ಕೊರಳಿಗೆ ಕೈಹಾಕಿ ಒತ್ತಿ ಹಿಡಿದಿದ್ದ. ಉಳಿದವರು ಅವಳ ಬಟ್ಟೆ ಬಿಚ್ಚತೊಡಗಿದರು. ಐದು ನಿಮಿಷಗಳ ನಂತರ, ಹಲವು ಚೀತ್ಕಾರಗಳ ನಂತರ ಕಟ್ಟಡದ ಕೆಲಸಗಾರರು ಗುಂಪೊಂದು ಅಲ್ಲಿ ನೆರೆಯಿತು. ನಿಷ್ಠಾ ಉಸಿರಾಡಲು ಪ್ರಯಾಸ ಪಡುತ್ತಿದ್ದಳು. ಕೆಳ ತುಟಿ ಒಡೆದು ರಕ್ತ ತೊಟ್ಟಿಕ್ಕುತ್ತಿತ್ತು. ತನ್ನ ಮೊಣಕಾಲಿನ ಮೇಲೆ ಕೈ ಇಟ್ಟುಕೊಂಡು ನಿಂತುಕೊಂಡಿದ್ದ ಆಕೆಯ ಕಾಲು 30 ವಯಸ್ಸಿನ ವ್ಯಕ್ತಿಯೊಬ್ಬನ ಕಿಬ್ಬೊಟ್ಟೆಯ ಮೇಲಿತ್ತು. ಆತನ ಮುಖ ರಕ್ತಮಯವಾಗಿತ್ತು. ಕೆಲವರ ಪ್ರಕಾರ ಅವರು ಕೇಳಿದ್ದು ನಿಷ್ಠಾಳ ಕೂಗಲ್ಲ ಬದಲಿಗೆ ಆ ವ್ಯಕ್ತಿಯ ಕೂಗು. "ಕೋಪದಲ್ಲಿ ಕುದಿಯುತ್ತಿದ್ದ ಅವಳು ಆಕ್ರಮಣಕಾರಿಯಾಗಿ ಕಾಣುತ್ತಿದ್ದಳು. ಒಬ್ಬ ಹುಡುಗಿ ಆ ಮಟ್ಟದಲ್ಲಿ ಆಕ್ರಮಣಶಾಲಿಯಾಗಬಹುದು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ" ಎಂದು ಪ್ರತ್ಯಕ್ಷದರ್ಶಿಯೊಬ್ಬರು ಆಶ್ಚರ್ಯ ವ್ಯಕ್ತಪಡಿಸಿದ್ದರು.

ಕೆಲವು ದಿನಗಳಿಂದ ನಿಷ್ಠಾ 'ಕ್ರಾವ್ ಮಗ' ಎಂಬ ಸ್ವಯಂ-ರಕ್ಷಣಾ ಕಲೆಯಲ್ಲಿ ತರಬೇತಿ ಪಡೆಯುತ್ತಿದ್ದಳು. ಇದು ಅವಳೊಬ್ಬಳ ಕಥೆಯಲ್ಲ. ಇದು ನಿಮ್ಮ ಕಥೆಯೂ ಆಗಿರಬಹುದು ಮತ್ತು ನೀವು ಇಷ್ಟ ಪಡುವ, ಹಾರೈಸುವ ಎಲ್ಲಾ ಹೆಣ್ಣುಗಳ ಕಥೆಯೂ ಆಗಿರಬಹುದು. ಇದು ನಿಷ್ಠಾ ಕಲಿತಿದ್ದ 'ಡೋಜೋ'(ಕದನ ಕಲೆ)ವನ್ನು ನಾನು ಕಲಿಯಲು ಹೋದ ಕಥೆ. ಅಲ್ಲಿಯೇ ನನಗೆ ನಿಷ್ಠಾಳ ಸಾಹಸದ ಬಗ್ಗೆ ಉಳಿದ ವಿದ್ಯಾರ್ಥಿಗಳ ಮೂಲಕ ತಿಳಿದದ್ದು. ಅಲ್ಲಿಯೇ ನಾನು ನೋಡಲು ತೆಳ್ಳಗಿದ್ದರೂ ಲೀಲಾಜಾಲವಾಗಿ 'ಪಂಚ್' ಮಾಡುತ್ತಿದ್ದ ಮತ್ತು ಸೈನಿಕರಂತೆ ಅಸಾಮಾನ್ಯವಾಗಿ ತನ್ನ ದೇಹವನ್ನು ದಂಡಿಸುತ್ತಿದ್ದ ಬೇರೊಬ್ಬ ಮಹಿಳೆಯ ಸಾಹಸಕ್ಕೆ ಸಾಕ್ಷಿಯಾಗಿದ್ದು. ಅಲ್ಲಿ ನಾನು ಸ್ವಲ್ಪ ಸಮಯವನ್ನು ಮಾರ್ಷಲ್ ಆರ್ಟ್ಸ್ ಕಲಿಯಲು ವಿನಿಯೋಗಿಸಿದ್ದೆ. ಅಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಅಗತ್ಯ ಸೌಲಭ್ಯಗಳೆಲ್ಲವೂ ಇದ್ದವು. ಆದರೆ ಅವೆಲ್ಲಾ ಅಪಾರ ದೈಹಿಕ ಸಾಮರ್ಥ್ಯ, ಕೌಶಲ್ಯ ಮತ್ತು ಏರೋಬಿಕ್ ದೇಹದಾರ್ಢ್ಯವನ್ನು ಬೇಡುತ್ತವೆ. ಜೊತೆಗೆ ಇವು ನಮ್ಮ ಸಾಮಾನ್ಯ ಮಹಿಳೆಯರ ಕೈಗೆಟಕುವುದಿಲ್ಲ. ಇದಕ್ಕೆ ವಿರುದ್ಧವೆಂಬಂತೆ 'ಕ್ರಾವ್ ಮಗ' ಬಲಿಷ್ಠ, ದೊಡ್ಡ ಆಕ್ರಮಣಕಾರರನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ದೇಹದ ಜೊತೆಗೆ, ಮನಸ್ಸನ್ನೂ ಸದೃಢವನ್ನಾಗಿಸುತ್ತದೆ.

ನೀವು ತುಂಬ ಕೋಮಲ, ಸಭ್ಯ, ಸದಭಿರುಚಿಯ ವ್ಯಕ್ತಿಯಾಗಿದ್ದರೆ ಏನು ಯೋಚಿಸಬಲ್ಲಿರಿ ಎಂದರೆ... (ಇಲ್ಲಿ ನಾನು ಮುಖ್ಯವಾಗಿ ಮಹಿಳೆಯರನ್ನೇ ಉದ್ದೇಶಿಸಿ ಮಾತನಾಡುತ್ತಿದ್ದೇನೆ). 'ಇದು ನನಗೇಕೆ ಬೇಕು? ನನ್ನ ಪ್ರಯಾಣದ ಬಗ್ಗೆ ನಾನು ತಲೆಕೆಡಿಸಿಕೊಳ್ಳಬೇಕಿಲ್ಲ. ಡ್ರೈವರ್ ಇದ್ದಾನೆ. ಹೊರಗಡೆ ಕಾವಲುಗಾರನಿದ್ದಾನೆ. ಸರಿ, ಆದರೆ ಒಂದು ಮಾತು, 14 ವರ್ಷದ ಹೀತಲ್ ಪರೇಕ್‌ಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಧನಂಜಯ ಚಟರ್ಜಿ ಒಬ್ಬ ಕಾವಲುಗಾರ ಎಂಬುದನ್ನು ನೀವು ಮರೆಯಬಾರದು.

ಹಲವು ಸಮೀಕ್ಷೆಗಳು, ಶಿಕ್ಷೆಗೊಳಗಾದ ಅತ್ಯಾಚಾರಿಗಳಲ್ಲಿ ಬಹಳಷ್ಟು ಜನ, ಅಮಾಯಕ ಮತ್ತು ಅಸಹಾಯಕ, 'ಸಾಫ್ಟ್ ಟಾರ್ಗೆಟ್'ಗಳನ್ನು ತಮ್ಮ ಗುರಿಯಾಗಿಟ್ಟುಕೊಂಡಿದ್ದರು ಎಂಬ ಅಘಾತಕಾರಿ ಅಂಶವೊಂದನ್ನು ಹೊರಹಾಕಿವೆ. ಆದರೆ 'ಕ್ರಾವ್ ಮಗ' ತರಬೇತಿಯನ್ನು ಪಡೆದ ಯಾವುದೇ ಮಹಿಳೆ ಕೇವಲ ಮೂರು ತಿಂಗಳಲ್ಲಿ ಇಂತಹ ಮೃಗಗಳನ್ನು ಎದುರಿಸುವ ಸಾಮರ್ಥ್ಯವನ್ನು ಪಡೆದಿರುತ್ತಾಳೆ. ಹಾಗಾದರೆ ನಮ್ಮಂತಹ ಸಂಭಾವಿತ ಗಂಡಸರಿಗೆ ಇದರಿಂದ ಉಪಯೋಗವಿದೆಯೇ ಎಂದು ನೀವು ಕೇಳಬಹುದು. ನನ್ನ ತರಬೇತುದಾರರನ್ನು ಇದೇ ಪ್ರಶ್ನೆಯನ್ನು ಕೇಳಿದೆ. "ಐಸಿ814 ನೆನಪಿಸಿಕೊಳ್ಳಿ. ಒಂದು ವೇಳೆ ನಾನು ನನ್ನ ಹಿರಿಯ ವಿದ್ಯಾರ್ಥಿಗಳೊಂದಿಗೆ ಆ ವಿಮಾನದಲ್ಲಿದ್ದರೆ, ನಮ್ಮ ಮಾತು ಆ ಕಡೆಗಿರಲಿ, ವಿಮಾನ ಅಪಹರಣಕಾರರು ಮಾತ್ರ ತಮ್ಮ ಕಾರ್ಯದಲ್ಲಿ ಖಂಡಿತ ಯಶಸ್ವಿಯಾಗುತ್ತಿರಲಿಲ್ಲ(ವಿಮಾನದ ಮಾರ್ಷಲ್‌ಗಳು ಸಾಮಾನ್ಯವಾಗಿ 'ಕ್ರಾವ್ ಮಗ'ದ ತರಬೇತಿಯನ್ನು ಪಡೆದಿರುತ್ತಾರೆ). ಈ ಕಥೆಯ ನೀತಿ; ನೀವು ಪುರುಷರಾಗಿದ್ದರೆ ಕ್ಷಣವೊಂದರಲ್ಲಿಯೇ ಹೀರೋ ಆಗಿ ಹೊರಹೊಮ್ಮಬಹುದು. ಮಹಿಳೆಯಾಗಿದ್ದರೆ, ನಿಮ್ಮ ಜೀವವನ್ನು ನೀವು ಯಾವುದೇ ಅಂಜಿಕೆ ಇಲ್ಲದೆ, ಗೌರವಕ್ಕೆ ಕುಂದುಂಟಾಗದಂತೆ, ಕಾಪಾಡಿಕೊಳ್ಳಬಹುದು.

ಐಐಪಿಎಂ
ಥಿಂಕ್ ಟ್ಯಾಂಕ್

ಹರಿವಿನ ಬದಿ ಸಮರ ಕಲೆಯ ಸುತ್ತ

ತೀರಾ ಇತ್ತೀಚಿನ ಸಮರ ಕಲೆ ಕ್ರಾವ್ (ಯುದ್ಧ) ಮಗ (ಸಂಧಿಸು) ಇಸ್ರೇಲ್‌ನ ಒಂದು ವಿಧದ ಸಮರ ಕಲೆ. 1930ರಲ್ಲಿ ಹಂಗೇರಿ ಮತ್ತು ಝೆಕೋಸ್ಲೊವಾಕಿಯದಲ್ಲಿ ಇಮಿ ಲಿಚೆನ್‌ಫೆಲ್ಡ್ ಅವರು ಹಗನಾಹ್ ಎಂಬ ಯಹೂದ್ಯ ಭೂಗತ ಸೇನೆಗೆ ಈ ಕಲೆಯ ಮೂಲಕ ಕೈ-ಕೈ ಹಿಡಿದು ಯುದ್ಧ ಮಾಡುವುದನ್ನು (ಇದು ಇತರ ಸಮರ ಕಲೆಗಳಿಂದ ಎರವಲು ಪಡೆದ ತಂತ್ರ) ಕಲಿಸಿದರು.

ಆಯಾ ಕಾಲಕ್ಕೆ ತಕ್ಕಂತೆ ತನ್ನ ರೂಪುರೇಷೆಗಳನ್ನು ಬದಲಾಯಿಸುತ್ತಾ ಬೆಳೆದ ಕ್ರಾವ್ ಮಗ ಸಮರ ಕಲೆ ನಂತರ ಇಸ್ರೇಲ್ ರಕ್ಷಣಾ ಪಡೆ, ಇಸ್ರೇಲ್ ಪೊಲೀಸ್, ಇತರ ಇಸ್ರೇಲಿ ಭದ್ರತಾ ಹಾಗೂ ಗುಪ್ತಚರ ಸಂಸ್ಥೆಗಳ ಅಧಿಕೃತ ಯುದ್ಧ ಮತ್ತು ರಕ್ಷಣಾ ವ್ಯವಸ್ಥೆಯೇ ಆಯಿತು. ನಿಜಹೇಳಬೇಕೆಂದರೆ ಇಸ್ರೇಲಿ ಸೇನೆಯ ಪ್ರತಿಯೊಬ್ಬ ಯೋಧನೂ ಈ ಸಮರ ಕಲೆಯಲ್ಲಿ ತರಬೇತಿ ಪಡೆದೇ ಪಡೆಯುತ್ತಾನೆ. ಇಲ್ಲಿ ಒಂದು ಕುತೂಹಲಕರ ವಿಚಾರವೆಂದರೆ ಕ್ರಾವ್ ಮಗ ಸಮರ ಕಲೆ ಇಸ್ರೇಲ್‌ನ ಹೊರ ಜಗತ್ತಿಗೆ ಪರಿಚಯವಾಗಿದ್ದು 1980ರ ಕೊನೆಯ ಭಾಗದಲ್ಲಷ್ಟೆ. ಬಹುಮುಖ್ಯವಾಗಿ ಅಮೆರಿಕದಲ್ಲಿ ಅದು ಪ್ರಸಿದ್ಧಿ ಪಡೆಯುತ್ತಾ ಹೋಯಿತು. ಸಮರ ಕಲೆಯಲ್ಲಿ ಪರಿಣತಿ ಪಡೆದ ಇಸ್ರೇಲ್‌ನ ತರಬೇತುದಾರರು ಅಮೆರಿಕದ 'ಎಫ್‌ಬಿಐ ಫೀಲ್ಡ್ ಆಫೀಸ್' ಮತ್ತು ಕ್ವಾಂಟಿಕೋದಲ್ಲಿದ್ದ ಮುಖ್ಯ ತರಬೇತಿ ಕೇಂದ್ರದಲ್ಲಿ ತರಬೇತಿ ನೀಡಿದರು.

ಪ್ರಸ್ತುತ ಬಹಳಷ್ಟು ರಾಷ್ಟ್ರಗಳಲ್ಲಿ ಕ್ರಾವ್ ಮಗ ಸಮರಕಲೆ ರಕ್ಷಣಾಪಡೆಗಳ ನೆಚ್ಚಿನ ಆಯ್ಕೆಯಾಗಿದೆ. ಇದರಲ್ಲಿನ ಪ್ರಾಯೋಗಿಕ ಸೌಲಭ್ಯಗಳು ಹಾಗೂ ಯಾವುದೇ ವಿಧದ ಸಿದ್ಧ ಸೂತ್ರ ಅಥವಾ ಉಡುಗೆ, ಸಮವಸ್ತ್ರ, ಸ್ಪರ್ಧೆಗಳು ಇಲ್ಲದಿರುವುದೇ ಇದಕ್ಕೆ ಮುಖ್ಯ ಕಾರಣ!

ಟಿಎಸ್‌ಐ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .