ಇದು ನಮ್ಮ ವಿಶೇಷ ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಬಣ್ಣದ ಲೋಕ
 
 

ಮಾತು ಕೇಳಿ ಮಕ್ಳಾ...

ಶೆಟ್ಟಿ ಸೋದರಿಯರಂತೂ ಈಗೀಗ 'ಅವಳಿ ಸಿಂಡ್ರೆಲಾ' ಆಗಿದ್ದಾರಪ್ಪಾ. ಎಲ್ಲೇ ನೋಡಿ ಇಬ್ರೂ ಜೊತೆ-ಜೊತೆಗೇ ಇರುತ್ತಾರೆ. ಈಗ 29ರ ಶಮಿತಾ ಮತ್ತು 33ರ ಹರೆಯದ ಶಿಲ್ಪಾ ತಂದೆ ಇಬ್ಬರಿಗೂ ಮೂಗು ದಾರ ಹಾಕುವ ಹೊಸ ಯೋಜನೆ ಕೈಗೆತ್ತಿಕೊಂಡಿದ್ದಾರೆ! ಮಿಸ್ಟರ್ ಶೆಟ್ಟಿ ಅವರಿಗೆ ತಮ್ಮ ಮುದ್ದು ಮಕ್ಕಳು ಹೊತ್ತಲ್ಲದ ಹೊತ್ತಲ್ಲಿ ಮನೆಗೆ ಬರೋದು, ಬೇಕೆಂದಾಗ ಹೊರಗೆ ನಡೆಯೋದು ಇಷ್ಟವಿಲ್ಲ. ಎಲ್ಲಾ ಅಪ್ಪಂದಿರೂ ಅದನ್ನೇ ತಾನೆ ಬಯಸೋದು? ಮದುವೆ ಆಗೋವರೆಗೂ ನನ್ ಮಾತು ಕೇಳ್ರಮ್ಮಾ ಅಂತಿದಾರೆ. ಈಗ್ಲೇ ಹೀಗೆ, ಇನ್ನು ಮದುವೆ ಆದ್ಮೇಲೆ ಹೇಗೋ? ನೀವುಂಟು, ನಿಮ್ಮ ಗಂಡಂದಿರು ಉಂಟು ಅಂತಿದಾರೆ ಈ ಮಾಡರ್ನ್ ಸಿಂಡ್ರೆಲಾರ ಅಪ್ಪ!

ನಾನು ಅಂಥವನಲ್ಲ

2007ರಲ್ಲಿ ಆಸ್ಕರ್ ಪ್ರಶಸ್ತಿ ಗಳಿಸಿದ ನಂತರ ಎಲ್ಲಾ ನಿರ್ದೇಶಕರೂ ಜೇವಿಯರ್ ಬಾರ್ಡೆಮ್ ಎಂಬ ಅದ್ಭುತ ನಟನ ಬೆನ್ನು ಹತ್ತಿದ್ದಾರೆ. ಶ್ರೇಷ್ಠ ನಿರ್ದೇಶಕ ವೂಡಿ ಅಲೆನ್ ಅವರ 'ವಿಕಿ ಕ್ರಿಸ್ಟಿನಾ ಬಾರ್ಸಿಲೋನ' ಚಿತ್ರದಲ್ಲಿ ನಟಿಸಿಯೂ ಆಗಿದೆ. ಜೇವಿಯರ್ ಈ ಚಿತ್ರದಲ್ಲಿ ಹುಡುಗಿಯರ ಬಳಿ ಹರಟುವ ಚುರುಕು ಹುಡುಗನ ಪಾತ್ರದಲ್ಲಿ ನಟಿಸಿದ್ದಾನೆ. ಆದರೆ ಜೇವಿಯರ್ ವ್ಯಕ್ತಿತ್ವ ಇದಕ್ಕೆ ತದ್ವಿರುದ್ಧವಂತೆ. ಹಾಗಲ್ಲದಿದ್ದರೆ ನಮಗೇನಾಗಬೇಕು? 'ಆನಿ ಹಾಲ್'ನಂತಹ ಹಾಸ್ಯ ಹಾಗೂ ಅಷ್ಟೇ ಸಂಕೀರ್ಣ ಚಿತ್ರ ನಿರ್ದೇಶಿಸಿದ 'ರಿಲೇಶನ್‌ಶಿಪ್ ಗುರು' ವೂಡಿ ಜೊತೆ ಇನ್ನೊಂದು ಚಿತ್ರದಲ್ಲಿ ನಟಿಸಿದರೆ ಎಲ್ಲವೂ ಸರಿಯಾಗುತ್ತದೆ ಬಿಡಿ!

ಇಷ್ಟು ಬೇಗ ಮದ್ವೇನಾ?

ಮತ್ತೆ ಕತ್ರಿನಾ ಕೈಫ್-ಅಕ್ಷಯ್ ಕುಮಾರ್ ಜಾದೂ ಚಲ್ ಗಯಾ ಆಗಿ ಇಬ್ರೂ 'ಬಲ್ಲೆ ಬಲ್ಲೆ' ಎಂದು ಭಾಂಗ್ರಾ ಕುಣಿಯುತ್ತಿದ್ದಾರೆ. ಅಕ್ಷಯ್ ಹಾಸ್ಯ ಮತ್ತು ನಮ್ಮ ಮೋಹಕ ಚೆಲುವೆ ಕತ್ರಿನಾ ಇರುವಿಕೆಯಿಂದಲೇ 'ಸಿಂಗ್ ಈಸ್ ಕಿಂಗ್' ಗೆದ್ದಿದೆ ಎಂಬುದೇನೋ ನಿಜ. ಆದರೆ ಯಶಸ್ಸಿನ ತುತ್ತತುದಿಯಲ್ಲಿರೋ ಕತ್ರಿನಾಳನ್ನು ಮದುವೆ ಆಗುವ ಸಲ್ಮಾನ್ ಖಾನ್ ಆಸೆ ಕೈಗೂಡಲು ಸಾಧ್ಯವೆ? ಪಾಪ... ಸಲ್ಮಾನ್ ಇಟ್ಟಿರೋ ಮದುವೆ ಪ್ರಸ್ತಾಪಕ್ಕೆ ನಕಾರ ಗ್ಯಾರಂಟಿ. ತನ್ನ ಗರ್ಲ್‌ಫ್ರೆಂಡ್ ಜೊತೆ ತೆರೆಯ ಮೇಲೆ ಇನ್ನ್ಯಾರೋ ರೊಮ್ಯಾಂಟಿಕ್ ಸನ್ನಿವೇಶಗಳಲ್ಲಿ ಅಭಿನಯಿಸುವುದನ್ನು ನೋಡಿದರೆ ಯಾವ ಹುಡುಗ ತಾನೇ ಸುಮ್ಮನಿದ್ದಾನು? ಅದೂ ಮಿಸ್ಟರ್ ಸಲ್ಲೂ ಅಂತ ಸಲ್ಲೂ ಭಾಯ್! ಕತ್ರಿನಾ ಎಚ್ಚರ ಕಣೇ..

ಯಶ್ ಜೋಶ್

'ಪ್ರೀತಿ ಇಲ್ಲದ ಮೇಲೆ', 'ಮಳೆಬಿಲ್ಲು' ಮೊದಲಾದ ಧಾರಾವಾಹಿಗಳಿಂದ ಮನೆಮಾತಾಗಿದ್ದ ಯಶ್ ಈಗ ಗಾಂಧಿನಗರದಲ್ಲೂ ಚಮಕ್ ತೋರಿಸೋ ಜೋಶ್‌ನಲ್ಲಿದ್ದಾನೆ. 'ಜಂಭದ ಹುಡುಗಿ' ಮೂಲಕ ಸಿನಿಮಾರಂಗ ಪ್ರವೇಶಿಸಿದ ಯಶ್‌ಗೆ 'ಮೊಗ್ಗಿನ ಮನಸು' ಚಿತ್ರದ ನಂತರ ಮಹಿಳಾ ಅಭಿಮಾನಿಗಳ ಸಂಖ್ಯೆ ದಿಢೀರನೆ ಏರಿರುವ ಬಗ್ಗೆ ಹೆಮ್ಮೆ ಇದೆ. ಆದರೆ ಇಷ್ಟಕ್ಕೇ ತೃಪ್ತಿಯಾಗಿಲ್ಲ. ಸ್ಯಾಂಡಲ್‌ವುಡ್‌ನಲ್ಲಿ 'ಹೀರೋ' ಎನಿಸಿಕೊಳ್ಳೋ ಆಕಾಂಕ್ಷೆ ಇತ್ತಲ್ಲ! ಈಗ ಯಶ್ ನಾಯಕನಾಗಿರೋ ಹೊಸ ಚಿತ್ರ 'ರಾಕಿ' ಬಿಡುಗಡೆಗೆ ಸಿದ್ಧವಾಗಿದೆ. ಹುಡುಗಿಯರ ಹೃದಯಕ್ಕೆ ಲಗ್ಗೆ ಹಾಕೋ ಕನಸು ಈ ಪೋರನದು. ನಾವೂ ಜೈ ಅನ್ನೋಣ!

ನವತಾರೆ ಲಿಖಿತಾ

ಹೆಸರು ಲಿಖಿತಾ. 'ಸಾಚಾ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಡುತ್ತಿರೋ ಕೊಡಗಿನ ಬಾಲೆ. ನಟನೆಯ ನೀರು ಕುಡಿದಾಗಿದೆ. ಹೌದು, ಈ ಹಿಂದೆಯೇ ಎರಡು ತಮಿಳು ಚಿತ್ರಗಳಲ್ಲಿ ನಟಿಸಿದ ಅನುಭವ ಬೆನ್ನಿಗಿದೆ. ಆದರೆ ಕನ್ನಡ ಚಿತ್ರರಂಗದ ಪರಿಸರ ಹೊಸದು. 'ಸಾಚಾ' ಚಿತ್ರದಲ್ಲಿ ಈಕೆಗೆ ಹಳ್ಳಿ ಹುಡುಗಿ ಪಾತ್ರ. ಆದರೆ ಅಭಿನಯಕ್ಕೆ ಅವಕಾಶವಿರೋ ಪಾತ್ರ. ಹಳ್ಳಿ ಹುಡುಗಿಯಾದರೇನು ಮಾಡರ್ನ್ ಉಡುಪುಗಳನ್ನು ತೊಡುವ ಅವಕಾಶವೂ ಇದೆ ಎಂದು ಹಿಗ್ಗಿ ಹೀರೇಕಾಯಿ ಆಗಿದ್ದಾಳೆ ಈ ಬೆಡಗಿ. ಈಗ ಕನ್ನಡ ಚಿತ್ರರಂಗಕ್ಕೆ ನಿತ್ಯ ಹೊಸ ಹುಡುಗಿಯರ ಆಗಮನ ಸಾಮಾನ್ಯ. ಇವೆಲ್ಲದರ ನಡುವೆ ಈ ಬೆಡಗಿಯ ಅದೃಷ್ಟವೂ ಖುಲಾಯಿಸಲಿ ಅನ್ನೋದೆ ನಮ್ಮ ಹಾರೈಕೆ.

ಜಿಂಕೆಮರಿ ಓಟ

'ನಂದ ಲವ್ಸ್ ನಂದಿತ' ಚಿತ್ರದಿಂದ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಜಿಂಕೆಮರಿ ಇಲ್ಲೇ ಭದ್ರವಾಗಿ ನೆಲೆಯೂರಲು ಕಸರತ್ತು ಮಾಡುತ್ತಿದ್ದಾಳೆ. 'ಜಿಂಕೆ ಮರೀನಾ...' ಹಾಡಿನಿಂದಾಗಿ ಚೊಚ್ಚಲ ಚಿತ್ರದಲ್ಲೇ ಜನಪ್ರಿಯತೆ ಪಡೆದ ಬಳುಕುವ ಬಳ್ಳಿ ನಂದಿತಾ, ನಂತರ ಬಂದ ಸಾಲು ಸಾಲು ಅವಕಾಶಗಳನ್ನು ಒಪ್ಪಿಕೊಂಡಿರಲಿಲ್ಲ. ಈಗ ಶರಣ್ ನಿರ್ದೇಶನದ 'ಚಾಮರಾಜಪೇಟೆ'ಗೆ ನಾಯಕಿಯಾಗೋ ಅವಕಾಶ ಸಿಕ್ಕಿದ್ದಕ್ಕೆ ಈ ಬಾಲೆ ಭಾರೀ ಖುಷಿಯಾಗಿದಾಳೆ. ಜೊತೆಗೆ ಸಿಂಹಾದ್ರಿ ಪ್ರೊಡಕ್ಷನ್ ಅವರ ಮತ್ತೊಂದು ಚಿತ್ರವೂ ಕೈ ಹಿಡಿದಿದೆ. ಕನ್ನಡದ ಪ್ರತಿಭಾವಂತ ಬೆಡಗಿಯರಿಗೆ ಅವಕಾಶಗಳೇ ಸಿಗುತ್ತಿಲ್ಲ ಎನ್ನುವ ಆರೋಪಕ್ಕೆ ಅಪವಾದವಾಗುತ್ತಿದ್ದಾಳೆ. ಭೇಷ್!

 

ಸೆಲಿನಾ 'ಸೌಂದರ್ಯ' ಪುರಾಣ

ಸೆಲಿನಾ ಲಂಡನ್‌ನ ಹೀತ್ರೊ ವಿಮಾನ ನಿಲ್ದಾಣದಲ್ಲಿ ಅನುಭವಿಸಿದ ಕಷ್ಟ ಆ ಭಗವಂತನಿಗೇ ಪ್ರೀತಿ! ಸೆಲಿನಾ ಜೇಟ್ಲಿ ತನ್ನ ಹ್ಯಾಂಡ್ ಬ್ಯಾಗ್‌ನಲ್ಲಿ ತುಂಬಿಕೊಂಡ ಸೌಂದರ್ಯವರ್ಧಕ ಕ್ರೀಮ್‌ಗಳನ್ನು ನೋಡಿದ ಭದ್ರತಾ ಸಿಬ್ಬಂದಿ ಮನದಲ್ಲಿ ಆಕೆ ಅಷ್ಟೊಂದು ಕ್ರೀಮ್‌ಗಳನ್ನು ಎಲ್ಲಿ ಹಚ್ಚುತ್ತಾಳೆ ಎಂಬ ಸಂಶಯ ಬಂದಿತ್ತು! ಅಷ್ಟೇ ಆಗಿದ್ದರೆ ಪರ್‍ವಾಗಿಲ್ಲ. ಆಕೆಗೆ ಮದುವೆ ಆಗಿದ್ಯೋ ಇಲ್ಲವೋ ಎಂದು ವೈಯಕ್ತಿಕ ವಿಷಯಕ್ಕೇ ಆತ ಕೈ ಹಾಕಬೇಕೆ? ಆ ಭದ್ರತಾ ಸಿಬ್ಬಂದಿ ಮೇಲೆ ಮೇಲ್ವಿಚಾರಕರು ಕ್ರಮ ಕೈಗೊಳ್ಳುವವರೆಗೆ ತಾನು ಕೈ ಹಾಕಿದ್ದು ಹಾವಿನ ಹುತ್ತಕ್ಕೆ ಎಂಬ ವಿಚಾರ ಆತನಿಗೆ ಹೊಳೆದೇ ಇರಲಿಲ್ಲ. ಸೆಲಿನಾ ಹಿಂದೆ ಏಕೆ ಬಿದ್ಯೋ ಮಾರಾಯ?

 

 

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .