|

ಈಚಿನ ವರ್ಷಗಳಲ್ಲಿ ಬರೆಯುತ್ತಿರುವ ಹೊಸ
ತಲೆಮಾರಿನ ಕಥೆಗಾರ್ತಿಯರಲ್ಲಿ ಹೆಚ್ಚಿನ ಕುತೂಹಲ ಭರವಸೆಗಳನ್ನು ಮೂಡಿಸಿರುವ
ಸುನಂದಾ ಪ್ರಕಾಶ್ ಕಡಮೆಯವರ ಎರಡನೆಯ ಕಥಾ ಸಂಕಲನ,
'ಗಾಂಧಿ
ಚಿತ್ರದ ನೋಟು'.
ಈ ಸಂಕಲನದಲ್ಲಿ ಕಳೆದ ಎರಡು ಮೂರು ವರ್ಷಗಳಲ್ಲಿ
ಬರೆದಿರುವ ಹದಿಮೂರು ಕಥೆಗಳಿವೆ.
ಇವುಗಳಲ್ಲಿ ಎರಡು ಬಗೆ.
ತೆಕ್ಕೆಗೊಗ್ಗಿದ ಅನುಭವ ವಿಚಾರಗಳು ಯಾವುದೇ
ಉಪದ್ವ್ಯಾಪ ಇಲ್ಲದೆ ಮನುಷ್ಯ ಸ್ವಭಾವ ಸಹಜ ರೀತಿಯಲ್ಲಿ ಅಚ್ಚುಕಟ್ಟಾಗಿ
ಅಭಿವ್ಯಕ್ತಿ ಪಡೆದ ಕಥೆಗಳು ಕೆಲವು;
ಮತ್ತೆ ಕೆಲವು ಪ್ರಯೋಗಶೀಲ ನೆಲೆಯ,
ಅಸ್ಪಷ್ಟತೆ ಗೊಂದಲಗಳ,
ಬೌದ್ಧಿಕ ಮೇಲಾಟದ ಕಥೆಗಳು.
ಸೃಜನಶೀಲ ಶಕ್ತಿಯ ದೊಡ್ಡ ಸಮಸ್ಯೆಯೆಂದರೆ,
ತನ್ನ ಅಸ್ಮಿತೆಯ ಛಾಪು ಮೂಡಿಸಿಯೂ ತಾನು
ನೇಪಥ್ಯದಲ್ಲೇ ಉಳಿದು 'ಸೃಷ್ಟಿ'ಯನ್ನು
ಬೆಳೆಯಗೊಡುವುದು ಹೇಗೆ ಎಂಬುದು.
ಸುನಂದಾ ಅವರನ್ನೂ ಈ ಸಮಸ್ಯೆ ಕಾಡಿದೆ
ಎಂಬುವುದಕ್ಕೆ 'ಚೌಕ
ಮತ್ತು ಗೋಲ',
'ನಿನ್ನದೊಂದು
ನೋಟ ಬೇಕು',
'ಕೋಲು
ಸಂಪಿಗೆ ಮರ',
'ಕಾಯದೊಳಗಣ
ಆತ್ಮ',
ಕಥೆಗಳು ನಿದರ್ಶನ.
ಕಥೆಗಾರ್ತಿಯಾಗಿ ಸುನಂದಾ ಅವರ ಅಸ್ಮಿತೆಯ ಛಾಪು
ಸ್ಪಷ್ಟವಾಗಿ ಗೋಚರಿಸುವ,
'ಪತ್ರೊಡೆ',
'ಚಿನ್ನಿದಾಂಡು',
'ತೆಂಕಿ',
'ಮಳೆ
ಹೊಯ್ದು ನಿಂತ ಕ್ಷಣ',
ಪ್ರಕೃತಿ ಸಹಜ ಕ್ರಿಯೆಯಂತೆ ಹುಟ್ಟಿರುವ ಕಥೆಗಳು.
ಇವು ತಮ್ಮೊಳಗಿನ ಅಂತಃಸತ್ತ್ವದಿಂದಾಗಿ ಹಾಗೂ ಸಾಚಾ
ನಿರೂಪಣೆಯಿಂದಾಗಿ ನೇರ ನಮ್ಮ ಮನಸ್ಸು ಹೃದಯಗಳನ್ನು ಮುಟ್ಟುತ್ತವೆ.
ಸತ್ತವರೊಡನೆ ಸಂಬಂಧ,
ವರ್ತಮಾನದೊಡನೆ ಸಂಬಂಧ ಇವೆರಡನ್ನೂ ಏಕಕಾಲಕ್ಕೆ
ಶ್ರದ್ಧೆಯ ನಿಕಷಕ್ಕೆ ಒಡ್ಡುವ ತಿಥಿ ಸಂದರ್ಭದಲ್ಲಿ ಹುಟ್ಟುವ
'ಪತ್ರೊಡೆ'ಯಲ್ಲಿ
ಅತ್ತೆ-ಸೊಸೆ,
ಸತ್ತ ಸವತಿ,
ಗಂಡ,
ಈ ಪಾತ್ರಗಳ ರಿಂಗಣದಲ್ಲಿ ನರಳುತ್ತಿರುವ ಸಂಬಂಧಗಳ
ಕೊರಗು,
ಪ್ರತಿಭಟನೆಗಳು,
ಮನುಷ್ಯ ಸಹಜ ದೌರ್ಬಲ್ಯಗಳು,
ಬಾಯಿರುಚಿಯ ಆಸೆಗಳು ಅತ್ಯಂತ ಸಹಜವಾಗಿ ಮತ್ತು
ತಾರ್ಕಿಕವಾಗಿ ಮೂಡಿ ಒಟ್ಟಂದದಲ್ಲಿ ಕಥೆಯನ್ನು ಒಂದು ಸಾವಯವ ಶಿಲ್ಪದ
ಹತ್ತಿರಕ್ಕೆ ತಂದು ನಿಲ್ಲಿಸಿದೆ.
ಬಾಲ್ಯದ ನೆನಪಿನೊಳಗಿಂದ ಮೂಡುವ
'ಚಿನ್ನಿದಾಂಡು'
ಕುಟುಂಬ ಸಂಬಂಧದ ಹೊಣೆಗಾರಿಕೆ,
ಅದರ ಜಟಿಲತೆಗಳು,
ಗಂಡು ಹೆಣ್ಣಿನ ಅವ್ಯಕ್ತ ಭೀತಿ ಸಂಬಂಧಗಳು,
ಮುಜಗರಗಳು,
ನೈತಿಕ ಭಯ ಇವೆಲ್ಲವನ್ನೂ ಎಳೆಎಳೆಯಾಗಿ ಒಂದು
ಸಂಸಾರದ ಚೌಕಟ್ಟಿನೊಳಗೆ ಅನಾವರಣಗೊಳಿಸುತ್ತದೆ.
ತಂದೆಯನ್ನು ಕಳೆದುಕೊಂಡ ಕಿಶೋರಿಯೊಬ್ಬಳು,
ಇನ್ನೊಬ್ಬಳು ತಂದೆಯ ಪ್ರೀತಿ ಪಾತ್ರಳಾದ ಕಿಶೋರಿ,
ಇವರಿಬ್ಬರ ಮಧ್ಯದ ಬದುಕಿನೊಳಗಿನ ತಾಯಿ,
ಅಜ್ಜಿ,
ಅಪ್ಪ,
ದೊಡ್ಡಮ್ಮ,
ಅಣ್ಣ ಇವರುಗಳ ಸಂಬಂಧಗಳ ಅನಿವಾರ್ಯತೆಯಲ್ಲಿ
ಕೂಡಿಕೊಳ್ಳುವ ಕಥೆ.
ಆಟದ ಸ್ಫೋಟ ಹಂತ ತಲುಪಿದಾಗಲೂ ಗದ್ದಲ,
ರಂಪಾಟಗಳಲ್ಲಿ ಆಸ್ಫೋಟಗೊಳ್ಳದೆ ಸಹಜ ಅರಳುವಿಕೆ
ಮತ್ತು ದಮನಗಳ ತಣ್ಣನೆಯ ಅನುಭವವನ್ನು ಕಟ್ಟಿಕೊಡುವುದರಲ್ಲಿ ಯಶಸ್ವಿಯಾಗಿದೆ.
ಆರೋಪಿತ ಏಯ್ಡ್ಸ್ ಸೋಂಕಿನ
'ತೆಂಕಿ',
ಮಾರಕ ರೋಗವೊಂದು,
ದೇಹಗತವಾಗಿಯಷ್ಟೇ ಅಲ್ಲದೆ ಮಾನಸಿಕ ಮತ್ತು
ಸಾಮಾಜಿಕ ಸ್ವಾಸ್ಥ್ಯಗಳಿಗೂ ತಗುಲುವ ಅಪಾಯದ ಒಂದು ಮಾರ್ಮಿಕ ಚಿತ್ರ.
ಸಾವಿನ ಹೆಡೆಯ ಅಡಿಯ ಈ ಸಂಸಾರದ ಬದುಕಿನಲ್ಲಿ
ಪ್ರೀತಿ,
ಭೀತಿ,
ಆತಂಕ,
ಛಲ,
ಉತ್ಸಾಹಗಳಿಗೇನೂ ಕೊರತೆ ಇಲ್ಲ.
ತಾಯಿಯ ಪ್ರೀತಿ ಕಕ್ಕುಲಾತಿ,
ಯಾರ ಹಂಗೂ ಇಲ್ಲದೆ ಬದುಕುವ ಛಲದ ಅಕ್ಕ-
ತಮ್ಮನಿಂದಾಗಿ ನೌಕರಿಗೆ ಬಂದ ಸಂಚಕಾರ,
ಎಂಥದೋ ಹುಚ್ಚು ಕೆರಳಿಸುವ ಗೆಳೆಯನ ಹೆಂಡತಿಯ
ಮೈಮಾಟ,
ಈ ಪರಿಯ ಜೀವನೋತ್ಸಾಹದಿಂದಾಗಿ ಸಾವನ್ನು ಸೆರಗಿನಲ್ಲಿ
ಕಟ್ಟಿಕೊಂಡ ಇಲ್ಲಿನ ಜೀವಪರ ಆಸಕ್ತಿ ನಮ್ಮನ್ನು ಹಿಡಿದಿಡುತ್ತದೆ.
'ಮಳೆ
ಹೊಯ್ದು ನಿಂತ ಕ್ಷಣವೂ',
ಒಂದು ಕುಟುಂಬದ ತೀರದ ಬವಣೆಗಳು,
ಕಷ್ಟ ಕಾರ್ಪಣ್ಯಗಳು,
ಮುಖ ತೋರಿಸಿ ಹೋಗುವ ಸಾವು ಈ ಎಲ್ಲ ತಲ್ಲಣಗಳ
ಮಧ್ಯೆಯೂ ಬತ್ತದ ಬದುಕಿನ ಪ್ರೀತಿಯಿಂದಾಗಿ ಸಹಜವಾಗುತ್ತದೆ.
ಚೌಕ ಮತ್ತು ಗೋಲ,
ನಿನ್ನದೊಂದು ನೋಟ ಬೇಕು,
ಕೋಲು ಸಂಪಿಗೆ ಮರ,
'ಗಾಂಧಿ
ಚಿತ್ರದ ನೋಟು'ಗಳಲ್ಲಿ
ಬದುಕಿನ ಈ ಅಂತಃಸತ್ತ್ವ,
ಸಹಜತೆಗಳು ಕಾಣದೆ ಅಪೇಕ್ಷಿತ ಅಥವಾ ಆರೋಪಿತ
ಗುಣದೋಷಗಳಿಂದಾಗಿ ಇವುಗಳಲ್ಲಿ ಬೌದ್ಧಿಕ ಕಸರತ್ತು ಮೇಲುಗೈ ಪಡೆದಂತೆ
ಭಾಸವಾಗುತ್ತದೆ.
'ಚೌಕ ಮತ್ತು
ಗೋಲ'ದಲ್ಲಿ
ಸಂದಿಗ್ಧತೆಯ ಸಂಕೇತ ಸ್ಪಷ್ಟ.
ಆಕರ್ಷಣೆಗೆ,
ಆಸಕ್ತಿಗಳಿದ್ದಾಗ್ಯೂ ಕಾರಣ ತಿಳಿಯದೆ
'ಬ್ಯಾಕ್ ಟು
ಸ್ಕ್ವೇರ್ ಒನ್'ನಂಥ
ಸ್ಥಿತಿಯಲ್ಲೇ ಕಥೆ ಗಿರಕಿ ಹೊಡೆಯುತ್ತದೆ.
'ಕೋಲು
ಸಂಪಿಗೆ ಮರ'
ಬರಹಗಾರರ ನೈತಿಕ ಕಾಳಜಿ ಎಳೆಯ ಬಿಗಿತದ ಕಥೆಯೂ ಆಗದೆ ಚಿಂತನೆಯೂ ಆಗದೆ
ಸಹೃದಯನೆಂಬ ಬಲಿಪಶುವನ್ನು ಅರಸುವುದರಲ್ಲಿ ಸಮಾಧಾನ ಕಂಡುಕೊಳ್ಳುತ್ತದೆ.
'ಗಾಂಧಿ
ಚಿತ್ರದ ನೋಟು'
ಕಥೆಯಲ್ಲಿ ಮನುಷ್ಯ ಸಹಜವಾದ ಆಸೆ,
ಉಳ್ಳವರ ದರ್ಪ,
ಸಣ್ಣತನಗಳು.
ಇಲ್ಲದವರ ದೈನ್ಯ ಇವೆಲ್ಲ ಸಹಜ ಸ್ಥಿತಿಯಲ್ಲೇ
ಒಡಮೂಡಿವೆಯಾದರೂ ಸುಧಿಯನ್ನು ಬಡವರಪರ ಸುಧಾಕರನ್ನಾಗಿ,
ಉಳಿದವರನ್ನು ದುಷ್ಟರನ್ನಾಗಿ ಬಿಂಬಿಸುವ
ಸುಪ್ತಪ್ರಜ್ಞೆಯ ಹುನ್ನಾರ ಕಾಡಿದಂತೆನಿಸಿ ಕಥೆ ಒಂದು ಒಳ್ಳೆಯ
ರೂಪಕವಾಗಬಹುದಾದ್ದು ಕೇವಲ ಕಪ್ಪು-
ಬಿಳುಪಿನದಾಗಿ ಪೆಚ್ಚೆನ್ನಿಸುತ್ತದೆ.
ಕಥೆಯೊಂದರ ಪ್ರಸವ ಪ್ರಕ್ರಿಯೆಯಾದ
'ಕಾಯದೊಳಗಣ
ಆತ್ಮ'ವೂ
ಸೃಷ್ಟಿಪೂರ್ವ ಗೊಂದಲಗಳ ನಂತರ ಪಾತ್ರಗಳು ಆತ್ಮವಾಗಬೇಕೆಂಬ ನಿಲುಗಡೆಗೆ ಬಂದರೂ
ಅದು ಕಥೆಗಾರ್ತಿಗೆ ಇನ್ನೂ ಪೂರ್ತಿಯಾಗಿ ಕರಗತವಾಗಿಲ್ಲವೆನ್ನಲು ಮೇಲಿನ
ಕಥೆಗಳಿವೆ.
ಜರಿಯಂಚಿನ ಫ್ರಾಕು,
ನನ್ನ ಪೊರೆವ ತೊಟ್ಟಿಲು,
ಪ್ರಗತಿಶೀಲರ ಕಥೆಗಳನ್ನು ನೆನಪಿಸಿದರೆ,
'ಅಪ್ಪಿ'
ತಮ್ಮಿಚ್ಛೆ,
ಆಸೆ-
ದುರಾಸೆಗಳಿಗೆ ಮಕ್ಕಳನ್ನು ಮಣಿಸುವ ಇಂದಿನ ತಂದೆ-ತಾಯಿಗಳ
ತೆವಲಿನ ವ್ಯಂಗ್ಯವಾಗಿ ಚುಚ್ಚುತ್ತದೆ.
ವಸತಿಶಾಲೆಗೆ ದೂಡಲ್ಪಟ್ಟ
'ಅಪ್ಪಿ'
ಎಲ್ಲವನ್ನೂ ಮರೆತು ತನ್ನದೇ ಲೋಕಕ್ಕಿಳಿದು ವಿಮುಖಿಯಾಗುವ ಪರಿಣಾಮದಿಂದ ನಮ್ಮ
ಮನಸ್ಸನ್ನು ಪ್ರಕ್ಷುಬ್ಧಗೊಳಿಸುತ್ತದೆ.
ಸುನಂದಾ ಅವರಿಗೆ ಒಂದು ಮಾತೂ ಪೋಲಾಗದಂತೆ
ಭಾಷೆಯನ್ನು ಬಳಸುವ ಸಾಮರ್ಥ್ಯವಿದೆ.
ಆದರೆ ಅಭಿವ್ಯಕ್ತಿಗೆ ಗ್ರಾಂಥಿಕ ಭಾಷೆ ಒಲಿದಷ್ಟು
ಸುಲಭವಾಗಿ ಆಡುಮಾತು ದಕ್ಕಿದೆ ಎನ್ನಿಸುವುದಿಲ್ಲ.
'ನಿದ್ದೆ
ಬಿದ್ದವರಂತೆ ಮುಗಿದ',
'ಸ್ನಾನ
ಹಾಕಿ ಬಿಡೋಣವೆ?'
ಇವು ಎಲ್ಲಿಯ ಕನ್ನಡ?
'ನೈವೇಧ್ಯ',
'ಉಚ್ಛರಿಸದಷ್ಟು',
'ವ್ಯವದಾನ',
'ರೋಧಿಸಿದ'...
ಇಂಥವನ್ನು ತಪ್ಪಿಸಬಹುದಾಗಿತ್ತು.
ಸುನಂದಾ ಅವರು ಬೆಳೆಯುವ ಇಂಗಿತದ ಕಥೆಗಾರ್ತಿ
ಎಂಬುದಕ್ಕೆ ಈ ಸಂಕಲನದಲ್ಲಿ ಸಾಕಷ್ಟು ಸಾಕ್ಷಿ-ಪುರಾವೆಗಳಿರುವುದರಿಂದ
ಈ ಕೆಲವನ್ನು ಎತ್ತಿತೋರಿಸಬೇಕಾಯಿತಷ್ಟೆ.
ಟಿಎಸ್‌ಐ
ಜಿ.ಎನ್. ರಂಗನಾಥ
ರಾವ್
ಕೃತಿಯ ಪುಟಗಳಿಂದ..
...ಐಶ್ವರ್ಯಾರೈನ
ಆ ನೃತ್ಯದ ಭಂಗಿ ಯಾವಾಗಲೂ ಅಪ್ಪಿಗೆ ತುಂಬಾ ಇಷ್ಟ.
ಇದೀಗ ಆ ಚಿತ್ರ ಅಪ್ಪಿಯನ್ನು
ತಡೆದು ನಿಲ್ಲಿಸಿದೆ.
ಐಶೂನ ನೃತ್ಯದ ತೋಳುಗಳಿಗೂ ಹಾರುತ್ತಿರುವ
ಅವಳ ಡ್ರೆಸ್ಸಿಗೂ ಚೂರೂ ಕತ್ತರಿ ತಾಗಬಾರದು.
ಅಲ್ಲಿಂದ ಮುಂದೆ ಒಂದು ಸುಂದರ
ಚಿರತೆಯ ಚಿತ್ರಕ್ಕೆ ಮಾರುಹೋಗಿದ್ದಾಳೆ.
ಅದರ ಬಾಲದ ತುದಿಗೂದಲುಗಳೂ ಸಹ ಒಂಚೂರೂ
ಕೊಂಕದಂತೆ,
ಕತ್ತರಿಯ ಆ ಕರಕರ ಸದ್ದಿಗೇ ಮೋಹಿತಳಾದಂತೆ
ಮುಳುಗಿಹೋದಳು ಅಪ್ಪಿ... |