ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಅಮೆರಿಕ ಚುನಾವಣೆ
 
ಚಾರಿತ್ರ್ಯವಧೆ ಗೆಲುವು ತರಬಲ್ಲುದೇ?
 

ಚುನಾವಣೆ ಪಕ್ಷಗಳ ನಡುವಿನ ಸ್ಪರ್ಧೆಯಾಗದೇ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಾದರಷ್ಟೇ ಮೆಕೈನ್ ಗೆಲ್ಲುವ ಸಾಧ್ಯತೆ

ಪಾಲ್ ಕ್ರುಗ್ಮನ್

ಅರ್ಥಶಾಸ್ತ್ರಜ್ಞ,
’ದ ನ್ಯೂಯಾರ್ಕ್ ಟೈಮ್ಸ್’ ಅಂಕಣಕಾರ

ತಾನು ಹೊಂದಿರುವ ಮನೆಗಳ ಸಂಖ್ಯೆಯನ್ನೇ ಅರಿಯದ ಜಾನ್ ಮೆಕೈನ್ ಅವರ ವಿರುದ್ಧ ಟೀಕೆ ಮಾಡುವ ಮೂಲಕ ಬಾರಕ್ ಒಬಾಮ ಅವರ ಚುನಾವಣಾ ಪ್ರಚಾರ ವೈಯಕ್ತಿಕ ನಿಂದನೆಯ ಸ್ವರೂಪ ಪಡೆದಿದೆ. ಈ ಬೆಳವಣಿಗೆ ತೀರಾ ತ್ವರಿತವಾಗೇನೂ ಬಂದಿಲ್ಲ.

'ಬಂದೂಕು ಕಾಳಗಕ್ಕೆ ನಮ್ಮ ಅಭ್ಯರ್ಥಿ ಖಡ್ಗ ಹಿಡಿದು ಬಂದನೇ?' ಇಂಥದೊಂದು ಅನುಮಾನ ಕಳೆದ ಕೆಲವು ದಿನಗಳಿಂದ ಡೆಮಾಕ್ರೆಟಿಕ್ ಮುಖಂಡರನ್ನು ಕಾಡುತ್ತಿದೆ. ಡೆಮಾಕ್ರೆಟಿಕ್ ಅಭ್ಯರ್ಥಿಯ ಚಾರಿತ್ರ್ಯ್ರವಧೆಗೆ ಮುಂದಾಗಿರುವ ರಿಪಬ್ಲಿಕನ್ ಪಕ್ಷದ ವಿರುದ್ಧ ಪ್ರತಿದಾಳಿ ನಡೆಸಲು ಬಾರಕ್ ಒಬಾಮ ಅವರು ಸಿದ್ಧರಾಗೇ ಇಲ್ಲ. ಒಂದೊಮ್ಮೆ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಚುನಾವಣೆಯಲ್ಲಿ ಒಬಾಮ ಸಾಧಿಸಿದ ಮುನ್ನಡೆ ಕಳೆದ ವಾರದ ಹೊತ್ತಿಗೆ ಹಿಂಜರಿಕೆಯ ಹಾದಿ ಹಿಡಿದಿದೆ.

ಒಬಾಮ ಅವರ ಮಸುಕಾಗುತ್ತಿರುವ ಜನಪ್ರಿಯತೆ 2004ರ ಚುನಾವಣಾ ಪ್ರಚಾರದ ಕೆಲವು ಕಹಿ ಘಟನೆಗಳನ್ನು ನೆನಪಿಸುತ್ತದೆ. ರಿಪಬ್ಲಿಕನ್ ಅಭ್ಯರ್ಥಿಗಳು ಮಾಡುವ ವ್ಯಕ್ತಿತ್ವ ನಿಂದನೆಗೆ ಯಾವುದೇ ಮಿತಿಗಳಿಲ್ಲ ಎಂಬುದನ್ನೂ ಈ ಸಂಗತಿ ಮನವರಿಕೆ ಮಾಡಿಕೊಡುತ್ತದೆ.

ಉದಾಹರಣೆಗೆ, ರಕ್ಷಣಾ ಪಡೆಗಳಿಗೆ ಬೆಂಬಲ ನೀಡುವ ಪಕ್ಷವೊಂದು ಯುದ್ಧ ವೀರರ ಮಿಲಿಟರಿ ದಾಖಲೆಗಳನ್ನು ಟೀಕಿಸಲು ಹಿಂಜರಿಯಬಹುದು ಎಂದು ಯಾರಾದರೂ ಎಣಿಸಬಹುದು. ಆದರೆ 2004ರಲ್ಲಿ ರಿಪಬ್ಲಿಕನ್ ಪಕ್ಷದ ಕಾರ್ಯಕರ್ತರು ಸ್ವಿಫ್ಟ್ ಬೋಟ್ ಕುರಿತಾದ ಸುಳ್ಳುಗಳನ್ನೇ ಅಸ್ತ್ರ ಮಾಡಿಕೊಳ್ಳುವ ಮೂಲಕ ಆಗಿನ ಅಭ್ಯರ್ಥಿ ಜಾನ್ ಕೆರ್ರಿ ತಮ್ಮ ಆತ್ಮಚರಿತ್ರೆಯ ಮೂಲಕ ಪಡೆದುಕೊಳ್ಳಬಹುದಾಗಿದ್ದ ರಾಜಕೀಯ ಲಾಭಕ್ಕೆ ಕಲ್ಲು ಹಾಕಿದ್ದರು.

ಶ್ರೀಮಂತರಿಗೆ ತೆರಿಗೆ ವಿನಾಯಿತಿ ಸೌಲಭ್ಯ ನೀಡುವ ಪಕ್ಷ, 'ವರ್ಗ ಸಂಘರ್ಷ'ವನ್ನು ಸತತವಾಗಿ ಹೀಗಳೆಯುವ ಪಕ್ಷ, ಡೆಮಾಕ್ರೆಟಿಕ್ ಪಕ್ಷದ ಶ್ರೀಮಂತಿಕೆಯನ್ನು ಟೀಕಿಸುವ ಗೋಜಿಗೆ ಹೋಗುವುದಿಲ್ಲ. ಆದರೆ ಕೆರ್ರಿ ಅವರನ್ನು ಕುರಿತ ಟೀಕೆಗಳಲ್ಲಿ ಅಸೂಯೆಯ ಪಾತ್ರ ದೊಡ್ಡದು. ರುಷ್ ಲಿಂಬಾ ಅವರು ಕೆರ್ರಿ ಅವರನ್ನು 'ಗಿಗೋಲ್'(ಪುರುಷ ವೇಶ್ಯೆ) 'ಶುಗರ್ ಡ್ಯಾಡಿ ವೈಫ್' ಎಂದೆಲ್ಲಾ ಅಶ್ಲೀಲ ಶಬ್ದಗಳಲ್ಲಿ ನಿಂದಿಸಿದ್ದರು.

ಒಬಾಮ ಕೊನೆಗೆ ಈ ರೀತಿಯ ವಾಗ್ದಾಳಿ, ಚಾರಿತ್ರ್ಯ್ರವಧೆಗೆ ಬಲಿಯಾಗುತ್ತಾರೆ ಎಂಬ ಸಂಗತಿಯನ್ನು ಮೊದಲೇ ಊಹಿಸಬಹುದು. ಅವುಗಳಲ್ಲಿ ಬಹುಪಾಲು ಅರ್ಥವಿಲ್ಲದ ಕ್ಷುಲ್ಲಕ ವಿಚಾರಗಳು: ಉದಾಹರಣೆಗೆ, ಒಬಾಮ ತನ್ನ ರಜಾದಿನಗಳನ್ನು ಹವಾಯಿಯಲ್ಲಿರುವ ಅಜ್ಜಿಯ ಮನೆಯಲ್ಲಿ ಕಳೆಯುತ್ತಾರೆ. ಆದ್ದರಿಂದ ಅವರು ನಿಜ ಅರ್ಥದ ಅಮೆರಿಕನ್ ಅಲ್ಲ ಎಂಬ ಆಪಾದನೆ. ತಮ್ಮ ಇಂತಹ ಆಪಾದನೆಗಳೆಲ್ಲಾ ಹುರುಳಿಲ್ಲದವುಗಳು ಎಂಬ ನಿರಾಕರಣೆಯಾಗಲೀ ಅಥವಾ ತನ್ನ ಅಭ್ಯರ್ಥಿ ಸಜ್ಜನ ಮತ್ತು ಶ್ರೇಷ್ಠ ವ್ಯಕ್ತಿತ್ವ ಹೊಂದಿದವನು ಎಂಬ ಸ್ಪಷ್ಟೀಕರಣವಾಗಲೀ ಈ ಕ್ಷಣದಲ್ಲಿ ಉಪಯೋಗಕ್ಕೆ ಬರುವುದಿಲ್ಲ. ಆದ್ದರಿಂದ ಈಗ ಒಬಾಮ ಅವರ ಪ್ರಚಾರ ಕೂಡ ಚಾರಿತ್ರ್ಯವಧೆಯನ್ನೇ ತನ್ನ ಪ್ರತಿಕ್ರಿಯೆಯ ಅಸ್ತ್ರವಾಗಿಸಿಕೊಂಡಿದೆ. ಆದರೆ ಮೆಕೈನ್ ಬಹಳಷ್ಟು ಮನೆಗಳನ್ನು ಹೊಂದಿದ್ದಾರೆ ಎಂಬ ಟೀಕೆ ಸಾಧುವೇ?

ಒಂದು ಆದರ್ಶ ವ್ಯವಸ್ಥೆಯಲ್ಲಿ ರಾಜಕಾರಣಿ ಎನ್ನಿಸಿಕೊಂಡವನ ಸಾಮರ್ಥ್ಯ ಆತ ಮಾಡಿದ ಕೆಲಸಗಳ ಮೇಲೆ ನಿರ್ಧಾರವಾಗಬೇಕೇ ವಿನಾ ಆತನ ಆಸ್ತಿಪಾಸ್ತಿ, ಆತ ಹೊಂದಿದ ವಸ್ತುಗಳ ಮೇಲೆ ಅಲ. ಫ್ರಾಂಕ್ಲಿನ್ ಡಿ ರೂಸ್‌ವೆಲ್ಟ್ ಅವರು ಹುಟ್ಟುತ್ತಲೇ ಆಗರ್ಭ ಶ್ರೀಮಂತ. ಆದರೂ ಅಮೆರಿಕದ ಕಾರ್ಮಿಕ ವರ್ಗಕ್ಕೆ ಹಿಂದಿನ ಯಾವುದೇ ಅಧ್ಯಕ್ಷರೂ ಮಾಡಲಾರದಷ್ಟು ಸುಧಾರಣಾ ಕ್ರಮಗಳನ್ನು ಕೈಗೊಂಡರು. ಅವರ ಈ ಇಚ್ಛಾಶಕ್ತಿಗೆ ಶ್ರೀಮಂತಿಕೆ ಎಂದೂ ಅಡ್ಡಿಯಾಗಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ 2005ರ ಮಾರಕ ಬ್ಯಾಂಕ್ರಪ್ಟ್ಟ್ಸಿ ಮಸೂದೆಗೆ ಬೆಂಬಲ ಸೂಚಿಸಲು ಬಡತನದಲ್ಲೇ ಬೆಳೆದು ಬಂದ ಜೋಸೆಫ್ ಬಿಡನ್ ಅವರಿಗೆ ಯಾವುದೇ ಅಡ್ಡಿಯಾಗಲಿಲ್ಲ.

ಆದರೆ ಕಾರ್ಪೋರೇಟ್ ಪರ ಇರುವ, ಅಸಮಾನತೆ ಹೆಚ್ಚಿಸುತ್ತಿರುವ ರಿಪಬ್ಲಿಕನ್ ಪಕ್ಷದವರು ಹೇಳುವುದೆಂದರೆ, ನಾವು ವಾಸ್ತವವಾಗಿ ಸುಲಭ ಸಂಪರ್ಕಕ್ಕೆ ಸಿಗುವಂಥವರು. ನಮ್ಮೊಂದಿಗೆ ನೀವು ಬೇಕಾದರೆ ಬಿಯರ್ ಕುಡಿಯಬಹುದು. ಆದ್ದರಿಂದ ನೀವು ನಮಗೆ ಮತ ನೀಡಲೇಬೇಕು ಎನ್ನುತ್ತಾರೆ. ಇದಲ್ಲದೆ ಶ್ರೀಮಂತರ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಿ, ಆರೋಗ್ಯ ಸೇವೆ ವಿಸ್ತರಿಸಿ, ಕನಿಷ್ಠ ದಿನಗೂಲಿ ಹೆಚ್ಚಿಸುವ ಯೋಜನೆಗಳನ್ನು ಹೊಂದಿರುವ ಡೆಮಾಕ್ರೆಟ್‌ಗಳನ್ನು ಕೈಗೆ ನಿಲುಕದ 'ಪ್ರತಿಷ್ಠಿತ ವರ್ಗ' ಎಂದು ಹೀಗಳೆಯುತ್ತಾರೆ.

ಆದರೆ ಕೆರ್ರಿ ವಿರುದ್ಧ ರುಷ್ ಲಿಂಬಾ ಅವರು ಹೇಳಿದ ಪ್ರತಿ ಮಾತು ಕೂಡ ಮೆಕೈನ್‌ಗೆ ಅನ್ವಯಿಸುತ್ತದೆ. ಏಕೆಂದರೆ ಮೆಕೈನ್ ಬದುಕುತ್ತಿರುವ ಪ್ರಪಂಚ ಸಾಮಾನ್ಯ ಅಮೆರಿಕನ್ನರ ಊಹೆಗೆ ನಿಲುಕದ್ದು. ಸರಿ, ಒಬಾಮ ತನ್ನ ರಜಾದಿನಗಳನ್ನು ಹವಾಯಿಯಲ್ಲಿ ಕಳೆಯಬಹುದು. ಆದರೆ ಜಾನ್ ಮೆಕೈನ್ ಅವರ ಪತ್ನಿ ಸಿಂಡಿ ಮೆಕೈನ್ ಹೇಳುವುದನ್ನೂ ಗಮನಿಸಿ: "ಅರಿಜೋನಾದಿಂದ ಹೊರಗೆ ಹೋಗಲು ಲಭ್ಯವಿರುವ ಏಕೈಕ ವಾಹನವೆಂದರೆ ಚಿಕ್ಕ ಖಾಸಗಿ ವಿಮಾನ".

ಒಬಾಮ ಅವರ ಪ್ರತಿದಾಳಿಯಿಂದ ರಿಪಬ್ಲಿಕ್ ಪಕ್ಷದವರು ಎಷ್ಟರ ಮಟ್ಟಿಗೆ ಆತಂಕಕ್ಕೀಡಾಗಿದ್ದಾರೆ ಎಂಬುದು ವಿಶ್ಲೇಷಕರ ಅರಚಾಟದಿಂದ ಬಿಂಬಿತವಾಗುತ್ತದೆ. 2004ರಲ್ಲಿ 'ಫಾಕ್ಸ್ ನ್ಯೂಸ್' ಜಾನ್ ಕೆರ್ರಿ ಅವರನ್ನು 'ಬಿಲಿಯನೇರ್ ಪತ್ನಿ'ಯನ್ನು ಹೊಂದಿದ 'ಉಳ್ಳವರಲ್ಲಿ ಒಬ್ಬ' ಎಂದು ಕರೆದಿತ್ತು. ಈಗ ಇದು ಮೆಕೈನ್ ಅವರ ಮನೆಗಳ ಸಂಖ್ಯೆಗೆ ಸಂಬಂಧಿಸಿದ ವಿವಾದದ ಕುರಿತು 'ಅಮೆರಿಕ ಕನಸಿನ ಮೇಲಾದ ಪ್ರಹಾರ' ಎಂದು ಕರೆಯಬಹುದು. ಇತ್ತ ಮೆಕೈನ್ ಕೂಡಾ ತಮ್ಮ ಟೀಕಾ ವೈಖರಿಯನ್ನು ಬದಲಾಯಿಸಿದ್ದಾರೆ. ಈ ಮುನ್ನ ಒಬಾಮ ಅವರು 'ಅರುಗುಲಾ' ಹೇಗೆ ತಿನ್ನುತ್ತಾರೆ ಎಂಬ ಬಗ್ಗೆ ಲೇವಡಿ ಮಾಡುತ್ತಿದ್ದ ಮೆಕೈನ್ ಈಗ ದಿಢೀರನೇ, ನೀವು ಆ ಅಭ್ಯರ್ಥಿಯನ್ನು ನಿಂದಿಸುವಂತಿಲ್ಲ ಏಕೆಂದರೆ ಅವರು 'ಯುದ್ಧಕೈದಿ'ಯಾಗಿದ್ದವರು ಎನ್ನುತ್ತಿದ್ದಾರೆ. ಒಬಾಮ ಅವರ ಬೆಂಬಲಿಗರನ್ನು, ನೈತಿಕವಾಗಿ ಕಟ್ಟಿಹಾಕುವುದು, ಅವರು ಯುದ್ಧಕೈದಿಯಾಗಿದ್ದ ಸಂಗತಿಯತ್ತ ಗಮನ ಸೆಳೆಯುವುದು ಈ ಪ್ರಚಾರದ ಉದ್ದೇಶವಾಗಿರಬಹುದು. ಯುದ್ಧದಲ್ಲಿ ಭಾಗವಹಿಸಿ ಸೆರೆಯಾಳಾಗುವುದು ಧೀರೋದ್ದಾತ ವಿಚಾರವಿರಬಹುದು ಆದರೆ ಅದು ವೆಸ್ಲೆ ಕ್ಲಾರ್ಕ್ ವಿಷಯದಲ್ಲಾದಂತೆ ಅಧ್ಯಕ್ಷ ಸ್ಥಾನಕ್ಕೆ ಅರ್ಹತೆ ಆಗಲಾರದು.

ಒಬಾಮ ಅವರ ಪ್ರಚಾರದ ಓಘಕ್ಕೆ 'ಯುದ್ಧಕೈದಿ' ವಿಷಯ ಯಾವುದೇ ರೀತಿಯ ಭಂಗ ಉಂಟುಮಾಡುವುದಿಲ್ಲ ಎಂದುಕೊಂಡರೂ ಒಬಾಮ ಅವರಿಂದ ಪ್ರತಿದಾಳಿ ನಿರೀಕ್ಷಿಸಬಹುದೆ? ಪ್ರಾಯಶಃ ಇಲ್ಲ. ಅಲ್ಲದೆ ಹಾಗೆ ಪ್ರತಿದಾಳಿ ನಡೆಸಲೇಬೇಕೆಂದೇನೂ ಇಲ್ಲವಲ್ಲ.

ಈ ವರ್ಷದ ಮುಖ್ಯ ಸಂಗತಿಯೆಂದರೆ ಜನರಲ್ಲಿ ರಿಪಬ್ಲಿಕನ್ ಪಕ್ಷದ ಕುರಿತ ಅಸಮಾಧಾನ ಭುಗಿಲೆದ್ದಿದೆ. ಹೀಗಾಗಿ ಪ್ರಸಕ್ತ ಚುನಾವಣೆ ಎರಡು ಪಕ್ಷಗಳ ನಡುವಿನ ಸ್ಪರ್ಧೆಯಾಗದೇ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಾದರೆ ಮಾತ್ರ ಮೆಕೈನ್ ಗೆಲ್ಲುವ ಕನಸನ್ನು ಕಾಣಬಹುದು. ಒಬಾಮ ವ್ಯಕ್ತಿತ್ವದ ಕುರಿತು ಜನತೆಯಲ್ಲಿ ಅನುಮಾನ ಬಿತ್ತಿದರೆ ಮತ್ತು ತನ್ನ ಕುರಿತಾಗಿ ಸದಭಿಪ್ರಾಯವನ್ನು ಮೂಡಿಸಿದರೆ ಮಾತ್ರ ಅವರ ದಾರಿ ಸುಗುಮವಾಗಬಹುದು.

ಅತ್ತ ಒಬಾಮ ಅವರಿಗೆ ಜನರನ್ನು ಈ ಪರಿಯಾಗಿ ಒಲಿಸಿಕೊಳ್ಳಬೇಕಾದ ಅನಿವಾರ್ಯತೆ ಇಲ್ಲ. ತಾನು ಸಭ್ಯ ಮತ್ತು ಮೆಕೈನ್ ದುರುಳ ಎಂಬ ಅಭಿಪ್ರಾಯ ಮೂಡಿಸಲು ಅವರೇನೂ ಪ್ರಯತ್ನಿಸಬೇಕಾಗಿಲ್ಲ. ವೈಯಕ್ತಿಕ ಸ್ಪರ್ಧೆಯ ಬದಲಿಗೆ ಚುನಾವಣೆಯನ್ನು ರಿಪಬ್ಲಿಕನ್ ಮತ್ತು ಡೆಮಾಕ್ರೆಟಿಕ್ ಪಕ್ಷಗಳ ನಡುವಿನ ಸ್ಪರ್ಧೆಯನ್ನಾಗಿಸಿಬಿಟ್ಟರೆ ಸಾಕು. ಅದು ಡೆಮಾಕ್ರೆಟಿಕ್ ಪಕ್ಷದ ಗೆಲುವಿನ ಹಾದಿಯನ್ನು ಸುಗಮಗೊಳಿಸುತ್ತದೆ...

ಟಿಎಸ್‌ಐ

 

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .