ಇದು ನಮ್ಮ ವಿಶೇಷ ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಮುಖಪುಟ ಲೇಖನ
ಆಪರೇಷನ್ ಕಮಲ: ರಾಜಕೀಯ ಅಧಃಪತನ
 
ರಾಜಕೀಯ ಮೌಲ್ಯಗಳು ಕುಸಿದು ಬಿದ್ದಾಗ...

ಪ್ರಕ್ಷುಬ್ಧತೆ ಕೊನೆಗಾಣಿಸಲು ಒಕ್ಕೊರಲ ದನಿಯೆತ್ತಿ

ಎಂ.ಪಿ. ಪ್ರಕಾಶ್
ಮಾಜಿ ಉಪ ಮುಖ್ಯಮಂತ್ರಿ ಹಿರಿಯ ರಾಜಕಾರಣಿ

ಭಾರತದ ಒಕ್ಕೂಟದಲ್ಲಿ, ತನ್ನ ಸರಳ ಮತ್ತು ಸಜ್ಜನಿಕೆಯ ರಾಜಕಾರಣಕ್ಕೆ ಹೆಸರು ಮಾಡಿದ ಕನ್ನಡ ನಾಡು ಇಂದು ತನ್ನ ರಾಜಕೀಯ ದೊಂಬರಾಟದಿಂದ ಆಭಾಸಕ್ಕೆ ಗುರಿಯಾಗಿದೆ. ತೀರಾ ಹಾಸ್ಯಾಸ್ಪದ ರೀತಿಯಲ್ಲಿನ ರಾಜಕಾರಣಿಗಳ ವರ್ತನೆ ಕಂಡು ದೇಶ ಮಾತ್ರವಲ್ಲ ಕರ್ನಾಟಕದ ಮತದಾರ ಕೂಡ ರೋಸಿಹೋಗಿದ್ದಾನೆ. ಕಳೆದ ಹತ್ತು ತಿಂಗಳಿಂದ ನಡೆದ ರಾಜಕೀಯ ಕಲಸುಮೇಲೋಗರ ಹೇಸಿಗೆ ಹುಟ್ಟಿಸುವಂತಿತ್ತು. ಅದಾದ ಮೇಲೆ, ಹೊಸದಾಗಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಸರ್ಕಾರ 'ಆಪರೇಷನ್ ಕಮಲ' ಮೂಲಕ ಸಾರ್ವಜನಿಕ ಬದುಕಿನಲ್ಲಿ ಎಲ್ಲ ಮೌಲ್ಯಗಳು ಕುಸಿದು ಬೀಳುವಂತೆ ಮಾಡಿದೆ. ಬಹಿರಂಗವಾಗಿ ಪಕ್ಷಾಂತರಿಗಳನ್ನು ಪ್ರೋತ್ಸಾಹಿಸುವುದರ ಮೂಲಕ ಮತದಾರರಿಗೆ ಅಪಮಾನ ಮಾಡುವ ರೀತಿಯಲ್ಲಿ ಕೃತ್ರಿಮ ಬಹುಮತಕ್ಕೆ ಪ್ರಯತ್ನ ಮಾಡುತ್ತಿವೆ. ಈ ಮೂಲಕ ಪೂರ್ಣ ಪ್ರಮಾಣದ ಅಬಾಧಿತ ಬಿಜೆಪಿ ಸರ್ಕಾರವನ್ನು ನಡೆಸಬಹುದು ಎಂದು ಮುಖ್ಯಮಂತ್ರಿಗಳು ಭಾವಿಸಿದ್ದಾರೆ. ಅದೇ ಭ್ರಮೆಯಲ್ಲಿ ಅವರಿದ್ದಾರೆ.

ಗಾಂಧೀಜಿಯನ್ನು ಬಿಜೆಪಿ ಸಂಪೂರ್ಣವಾಗಿ ಮರೆತಿರಬೇಕು. ಗಾಂಧೀಜಿ ಪ್ರತಿಪಾದಿಸಿದ ಅಂತಿಮ ಗುರಿಯಷ್ಟೇ, ಅದನ್ನು ಸಾಧಿಸುವ ಮಾರ್ಗವು ಪವಿತ್ರವಾಗಿರಬೇಕು ಎನ್ನುವುದು ರಾಜಕಾರಣಕ್ಕೂ ಅನ್ವಯಿಸುತ್ತದೆ. ಮೂಲತಃ ಅಂತಹ ಮೌಲ್ಯಗಳಿಗೆ ಕಟ್ಟು ಬಿದ್ದಿದ್ದೇವೆ ಎಂದು ಹೇಳಿಕೊಳ್ಳುವ ಬಿಜೆಪಿ ಈಗ ಅಧಿಕಾರಕ್ಕೆ ಅಂಟಿಕೊಳ್ಳುವುದೇ ಮುಖ್ಯ ಉದ್ದೇಶ ಎಂದುಕೊಂಡಿದೆ. ಅದಕ್ಕೆ ಎಲ್ಲ ತರಹದ ವಾಮಮಾರ್ಗ ಅನುಸರಿಸುತ್ತಿದ್ದಾರೆ. ಇನ್ನೂ ತಮಾಷೆಯೆಂದರೆ ನಮ್ಮ ಮುಖ್ಯಮಂತ್ರಿಗಳು ಜನರು ದಡ್ಡರು ಎನ್ನುವ ರೀತಿಯಲ್ಲಿ ಇಂತಹ ಅಸಂಬದ್ಧವಾದ ನಡವಳಿಕೆಗಳನ್ನು ಸಮರ್ಥಿಸುತ್ತಿದ್ದಾರೆ. "ನಮ್ಮ ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಯಾರೂ ಬಂದರೂ, ಅವರಿಗೆ ಸ್ವಾಗತವಿದೆ. ಅವರು ಶಾಸಕ ಪದವಿಗೆ ರಾಜೀನಾಮೆ ನೀಡುತ್ತಿದ್ದಾರೆ. ನಾವು ಯಾವುದೇ ತರಹದ ಆಸೆ-ಆಮಿಷಗಳನ್ನು ಒಡ್ಡುವುದಿಲ್ಲ" ಎಂದು ಒಂದು ಕಡೆ ಹೇಳುತ್ತಿದ್ದಾರೆ. ಇನ್ನೊಂದೆಡೆ ಅವರ ಪಕ್ಷದ ಶಾಸಕರು- ಸಚಿವರಿಗೆ ತ್ಯಾಗಕ್ಕೆ ಸಿದ್ಧರಾಗಿ ಎನ್ನುತ್ತಿದ್ದಾರೆ. ನಿನ್ನೆ ರಾಜೀನಾಮೆ ನೀಡಿದ ವ್ಯಕ್ತಿಯನ್ನು ಇಂದು ಸಚಿವರನ್ನಾಗಿಸುವುದು ಆಮಿಷವಲ್ಲದೇ ಇನ್ನೇನು. ಇಂತಹ ಪ್ರಲೋಭಗಳು ಕೂಡ ಆಮಿಷವಾಗಿರದೇ ಇನ್ನೇನಾಗಿರುತ್ತವೆ? ಪ್ರಲೋಭನೆಯ ಮೂಲಕವೇ ಜೀವನ ಮಾಡುವುದೇ ಅವರ ಗುರಿಯಾಗಿದ್ದಲ್ಲಿ, ಬಿಜೆಪಿ ಪಕ್ಷದ ತತ್ವ ಸಿದ್ಧಾಂತಗಳನ್ನೇ ಪ್ರಶ್ನಿಸಬೇಕಾಗುತ್ತದೆ. ತಮ್ಮ ನಡೆವಳಿಕೆಗಳು ಎಷ್ಟರ ಮಟ್ಟಿಗೆ ಸಮರ್ಥನೀಯ ಎಂದು ಬಿಜೆಪಿ ಮುಖಂಡರು ಆತ್ಮಾವಲೋಕನ ಮಾಡಿಕೊಳ್ಳಬೇಕು.

ಪಕ್ಷಾಂತರ, ರಾಜಕೀಯಕ್ಕೆ ಅಂಟಿದ ಹೊಸ ಪಿಡುಗೇನೂ ಅಲ್ಲ. ಈ ಹಿಂದೆ ಕೂಡ ಅನೇಕ ಬಾರಿ ಚುನಾಯಿತ ಪ್ರತಿನಿಧಿಗಳು ತಮ್ಮ ಆತ್ಮಸಾಕ್ಷಿಗೆ ಅನುಗುಣವಾದ ರೀತಿಯಲ್ಲಿ ಪಕ್ಷಗಳನ್ನು ಬಿಟ್ಟದ್ದು, ಅಥವಾ ಸಚೇತರು ಕೊಟ್ಟ ವಿಪ್ ಉಲ್ಲಂಘಿಸಿದ್ದು ಇದೆ. ಆಗ ಅವರಲ್ಲಿ ಬದ್ಧತೆ ಇತ್ತು. ಅಥವ ವೈಯಕ್ತಿಕ ವೈಭವೀಕರಣ ಹಾಗೂ ಸ್ಥಾನಮಾನದ ಬಯಕೆ ಇರಲಿಲ್ಲ. ಅಂತಹ ಅನೇಕ ಉದಾಹರಣೆಗಳನ್ನು ಈ ಸಂದರ್ಭದಲ್ಲಿ ನೀಡಬಹುದು. ಆದರೆ, ಎಲ್ಲ ವಿಷಯಗಳು ಗೊತ್ತಿರುವ ಬಿಜೆಪಿ ಮುಖಂಡರು ಕೇವಲ ಅಧಿಕಾರ ಗಟ್ಟಿ ಮಾಡಿಕೊಳ್ಳಬೇಕು ಎಂಬ ಏಕಮೇವ ಕಾರಣದಿಂದ ಅಂತಹ ಉದಾಹರಣೆಗಳ ಬಗ್ಗೆ ಜಾಣ ಮರೆವು ತೋರಿಸುತ್ತಿದ್ದಾರೆ. ಸಚಿವ ಪದವಿ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದರೆ ಮಾತ್ರ ನಿಮ್ಮ ಪಕ್ಷಕ್ಕೆ ಸೇರುತ್ತೇನೆ ಎನ್ನುವ ವ್ಯಕ್ತಿಗಳು ಯಾವ ತತ್ವ ಸಿದ್ಧಾಂತಕ್ಕೆ ಬದ್ಧರಾಗಿರುತ್ತಾರೆ? ಇವರು ನಾಳೆ ಮತ್ತೊಂದು ಪಕ್ಷದವರು ಇದೇ ರೀತಿಯ ಆಮಿಷ ತೋರಿಸಿದಲ್ಲಿ ಆಗ ಕೂಡ ವಿಶ್ವಾಸ ದ್ರೋಹ ಮಾಡದೇ ಇರಲಾರರೇನು? ನಮ್ಮ ರಾಜ್ಯದ ನೂತನ ಮುಖ್ಯಮಂತ್ರಿಗಳು ಅವರದೇ ಆದ ಲೆಕ್ಕಾಚಾರದಲ್ಲಿ ಇದ್ದಾರೆ. ಈಗ ಪಕ್ಷ ಬಿಟ್ಟು ಹೊರಗೆ ಬಂದಿರುವ 7 ಶಾಸಕರ ಜೊತೆಗೆ ಇನ್ನೂ ಐದಾರು ಮಂದಿ ಬರಬಹುದು ಎನ್ನುವ ನಿರೀಕ್ಷೆ. ೧೨೫ ಶಾಸಕರ ಸಂಖ್ಯೆಯ ಮೂಲಕ ಸುಭದ್ರ ಸರ್ಕಾರ ನೀಡಬಹುದು ಎನ್ನುವ ಭ್ರಮಾತ್ಮಕ ನಿಲುವು, ನಿಜಕ್ಕೂ ಅವರ ಅವಜ್ಞೆಯ ಬಗ್ಗೆ ಕನಿಕರ ಮೂಡುತ್ತಿದೆ. ಹೆಚ್ಚಿನ ಶಾಸಕರ ಮೂಲಕ ಸರ್ಕಾರ ಸುಭದ್ರವಾಗಿ ಉಳಿಯುವುದಿಲ್ಲ ಎನ್ನುವ ಬಗ್ಗೆ, ಜನತಾ ದಳ, ಕಾಂಗ್ರೆಸ್ ಸರ್ಕಾರ ರಚನೆ ಮಾಡಿದಾಗ ಪಕ್ಷ ಹೋಳಾಗಿ ಸರ್ಕಾರ ಅಧಃಪತನವಾಗಿರುವ ಇತಿಹಾಸ ಕೂಡ ಇದೆ. ಚುನಾವಣೆ ಸಂದರ್ಭದಲ್ಲಿ ಮತದಾರರು ಅಂತಹ ಪಕ್ಷಗಳಿಗೆ ಪಾಠ ಕಲಿಸಿರುವುದು ಇತಿಹಾಸ. ಈ ದೃಷ್ಟಿಕೋನದಿಂದ ತಮ್ಮ ಪಕ್ಷದ ಶಾಸಕರನ್ನು ಅವಗಣಿಸಿ, ತ್ಯಾಗದ ಕರೆ ನೀಡುವುದು ಸಮಂಜಸವಲ್ಲ. ಯಾರೇ ತ್ಯಾಗ ಮಾಡುತ್ತೇನೆ ಎಂದು ರಾಜೀನಾಮೆ ಕೊಡಲು ಮುಂದೆ ಬಂದರೂ, ಅಂತರಾಳದಲ್ಲಿ ಅಸಮಾಧಾನದ ಬೇಗುದಿಯನ್ನು ಇಟ್ಟುಕೊಂಡೇ ಇರುತ್ತಾರೆ. ಉದಾಹರಣೆಗೆ ಬೆಳ್ಳುಬ್ಬಿಯವರು ಪಕ್ಷದ ವರಿಷ್ಠರ ಮಾತಿಗೆ ನಾನು ಎದುರಾಡುವುದಿಲ್ಲ, ರಾಜೀನಾಮೆ ಕೊಡುತ್ತೇನೆ ಎಂದರೂ ಅವರ ಹಿಂಬಾಲಕರು ಬಿಜಾಪುರ, ಬಾಗಲಕೋಟೆ ಜಿಲ್ಲೆಯಲ್ಲಿ ನಡೆಸುತ್ತಿರುವ ಪ್ರತಿಭಟನೆಗಳು ಏನನ್ನು ಪ್ರತಿಬಿಂಬಿಸುತ್ತದೆ? ನಾನು ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದ್ದ ಮುಜರಾಯಿ ಸಚಿವರು ಯಡಿಯೂರಪ್ಪ ಹೇಳಿದರೆ ವಿಷ ಕುಡಿಯುತ್ತೇನೆ ಎಂದು ಹೇಳಿದ್ದರಲ್ಲಿ ಎಷ್ಟು ಪ್ರಾಮಾಣಿಕತೆ ಇದೆ? ಇಂತಹುದೇ ಆದ ವರ್ಗ ಜಾಸ್ತಿಯಾದಾಗ ಬಿಜೆಪಿ ಶಾಸಕಾಂಗ ಪಕ್ಷದಲ್ಲಿ ಅಸಮಾಧಾನ ಏಳಲಾರದು ಎನ್ನುವ ಅಥವಾ ಬದಲಾವಣೆ ತರಬೇಕು ಎಂದು ಹೇಳುವವರ ಗುಂಪು ಮೇಲಾದರೆ, ರಾಜಕೀಯ ಅಸ್ಥಿರತೆ ಉಂಟಾಗಲಾರದೇ? ಇಂತಹ ಅನೇಕ ಪ್ರಶ್ನೆಗಳು ಮತದಾರರನ್ನು ಕಾಡುತ್ತಿವೆ. ನೈತಿಕತೆಯನ್ನು ಕಳೆದುಕೊಂಡ ನಮ್ಮ ರಾಜಕೀಯ ನಿಲುವು, ನಮ್ಮ ಕಳೆದ ಪ್ರಾಬಲ್ಯದ ಮೂಲಕ ಅಥವಾ ಅಧಿಕಾರದ ಪ್ರಾಬಲ್ಯದ ಮೂಲಕ ಮತದಾರರನ್ನು ಕೊಂಡುಕೊಳ್ಳಬಹುದು ಎಂದು ಎಣಿಸಿದ್ದರೆ ಅದೊಂದು ಭ್ರಮೆ. ಬುದ್ಧಿಜೀವಿಗಳು, ದೇಶದ ಹಿತಚಿಂತನೆ ಮಾಡುವವರು, ಧಾರ್ಮಿಕ ಮುಖಂಡರು ಅವರದ್ದೇ ಆದ ರಾಜಕೀಯ ನಿಲುವುಗಳು ಏನೇ ಇದ್ದರೂ, ಎಲ್ಲ ರಾಜಕೀಯ ಪಕ್ಷಗಳು ಕಾಲ-ಕಾಲಕ್ಕೆ ತಪ್ಪು ಮಾಡಿವೆ ಎಂದು ಮನವರಿಕೆಯಾಗಿದ್ದರೂ ಈ ಸಂದರ್ಭದಲ್ಲಿ ಅವರು ಹೊರಬರಬೇಕು. ಇಂತಹ ನೈತಿಕ ಅಧಃಪತನವನ್ನು ಮತ್ತು ಪ್ರಜಾಪ್ರಭುತ್ವದ ಆರೋಗ್ಯಕರ ಬೆಳವಣಿಗೆಗೆ ವಿದಾಯ ಹೇಳಬೇಕೆನ್ನುವುದರಿಂದ ಹೊರಬಂದು ತೀವ್ರವಾಗಿ ಜನಜಾಗೃತಿ ಮಾಡುವುದು ಉಳಿದಿರುವ ಏಕಮೇವ ದಾರಿ.

ಈ ಸಂದರ್ಭದಲ್ಲಿ ಜಾತ್ಯತೀತ ಜನತಾ ದಳದ ಮುಖಂಡರ ಕೆಲವು ನಿರ್ಧಾರ ಮತ್ತು ನಿಲುವುಗಳ ಬಗ್ಗೆ ಭಿನ್ನಾಭಿಪ್ರಾಯಪಟ್ಟು ಹೊರಬಂದ ಕೆಲವರು ಯಾವುದೇ ತಾತ್ವಿಕ ಬದ್ಧತೆಯ ಮೇಲೆ ರಾಜಕೀಯ ನಿರ್ಣಯಗಳನ್ನು ಕೈಗೊಳ್ಳುತ್ತಿಲ್ಲ. ಆ ಕಾರಣದಿಂದಾಗಿ ಅವರ ನಿಲುವುಗಳಲ್ಲಿ ಗೊಂದಲ ಇದೆ. ಇನ್ನೂ ಕೆಲವರು ಚುನಾವಣೆಯಲ್ಲಿ ಸೋತ ಕಾರಣಕ್ಕೋ, ತಾವು ಸೇರಿದ ಹೊಸ ಪಕ್ಷದಲ್ಲಿ ಯಾವುದೇ ಮಾನವೀಯ ಸಂಬಂಧಗಳು ಮತ್ತು ಜವಾಬ್ದಾರಿ ಇಲ್ಲ ಎನ್ನುವ ಕಾರಣದಿಂದ ನಿರಾಸಕ್ತರಾಗಿರುವುದು ಅಪಾಯದ ಸಂಗತಿ. ವಿರೋಧ ಪಕ್ಷಗಳಲ್ಲಿ ಇರುವವರು ಕೂಡ ಇಂತಹ ನಿರಾಸಕ್ತಿಯಿಂದ ಹೊರಬಂದು ಇಂದು ಕರ್ನಾಟಕದಲ್ಲಿ ಉಂಟಾಗಿರುವ ಪ್ರಕ್ಷುಬ್ಧತೆಯ ಬಗ್ಗೆ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು.

ಕರ್ನಾಟಕ ಇಂದು ರಾಜಕೀಯ ಅಧಃಪತನದ ಸಂಕೇತವಾಗಿ ನಿಂತಿದೆ. ಒಂದು ಕಾಲದಲ್ಲಿ ರಾಜಕೀಯ ಪ್ರಬುದ್ಧತೆಯ ಕೇಂದ್ರವಾಗಿ ದೇಶದ ಗಮನ ಸೆಳೆಯುತ್ತಿದ್ದ ನಮ್ಮ ರಾಜ್ಯ ಧರೆಗುರುಳಿದೆ. ಇಂತಹ ಸಂದಿಗ್ಧದ ಸ್ಥಿತಿಯಲ್ಲಿ ರಾಜಕೀಯ ಮುತ್ಸದ್ದಿಗಳು ಮತ್ತು ರಾಜ್ಯದ ಹಿತಚಿಂತಕರು ಬೀದಿಗಿಳಿದು ಮತದಾರರನ್ನು ಮೂರ್ಖರನ್ನಾಗಿಸುವ ಈ ದೊಂಬರಾಟದ ವಿರುದ್ಧ ಜನಜಾಗೃತಿ ಮಾಡುವ ಕಾಲ ಹತ್ತಿರವಾಗಿದೆ. ಈ ಮಾತನ್ನು ನಾನು ಕಾಂಗ್ರೆಸ್ ಪಕ್ಷದ ಮುಖಂಡನಾಗಿ ಹೇಳುತ್ತಿಲ್ಲ. ಬದಲಾಗಿ ಒಬ್ಬ ಜವಾಬ್ದಾರಿಯುತ ರಾಜಕಾರಣಿಯಾಗಿ ಹೇಳುತ್ತಿದ್ದೇನೆ. ರಾಜ್ಯದಲ್ಲಿನ ಇಂದಿನ ರಾಜಕೀಯ ಅವನತಿಗೆ ನಮ್ಮ ರಾಜ್ಯದಲ್ಲಿನ ಮೂರೂ ಪಕ್ಷಗಳ ಕಾಣಿಕೆಗಳೂ ಇವೆ. ಆದರೂ, ಹಿಂದಿನ ವಿಷಯಗಳನ್ನು ಮರೆತು, ಮತ್ತೊಮ್ಮೆ ಕರ್ನಾಟಕವನ್ನು ರಾಜಕೀಯ ಪ್ರಬುದ್ಧತೆಯ ಶಕ್ತಿಸ್ಥಲವಾಗಿ ಮಾಡೋಣ. ಈ ನಿಟ್ಟಿನಲ್ಲಿ ಪ್ರಜ್ಞಾವಂತರೂ ಒಕ್ಕೊರಲಿನ ದನಿಯೆತ್ತಲು ಇದು ಸಕಾಲ.

ಟಿಎಸ್‌ಐ

ಮುಖಪುಟ ಲೇಖನದಲ್ಲಿ ಇನ್ನೇನಿದೆ

....

  ಆಪರೇಷನ್ ಕಮಲ: ರಾಜಕೀಯ ಅಧಃಪತನ

  ಹರಾಜುಕಟ್ಟೆ ರಾಜಕೀಯ ಫಸಲು

  ರಾಜಕೀಯ ಮೌಲ್ಯಗಳು ಕುಸಿದು ಬಿದ್ದಾಗ...: ಎಂ.ಪಿ. ಪ್ರಕಾಶ್

  ನಿರ್ವೀರ್ಯರ ಪಕ್ಷಾಂತರ ಪ್ರಹಸನ : ಪ್ರೊ. ರವಿವರ್ಮ ಕುಮಾರ್

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .