|
ಪಕ್ಷಾಂತರ ಎಂಬ ಪದ ರಾಜಕೀಯಕ್ಕೆ ಹೊಸದೇನೂ
ಅಲ್ಲ.
ಈ ಹಿಂದೆ ಕೂಡ ಹಲವಾರು ಸಂದರ್ಭಗಳಲ್ಲಿ ಯಾವುದೋ ಪಕ್ಷ,
ಅದರ ಸಿದ್ಧಾಂತ ಹಾಗೂ ಬಲದ ಮೇಲೆ ಗೆದ್ದು ಬಂದ
ನಂತರ 'ಕೈ'ಕೊಟ್ಟು
ಹೋದ ಜನಪ್ರತಿನಿಧಿಗಳು ಹಲವರಿದ್ದಾರೆ.
ಹಾಗೆ ಕೈಕೊಟ್ಟದ್ದರಿಂದಲೇ ಹಲವಾರು ಹೊಸ
ಸರ್ಕಾರಗಳು ಅಸ್ತಿತ್ವಕ್ಕೆ ಬಂದಿವೆ.
ನೂರಾರು ಸರ್ಕಾರಗಳು ಕುಸಿದು ಕೂಡ ಬಿದ್ದಿವೆ.
ಆ ಕಾರಣಗಳಿಂದಲೇ ಪಕ್ಷಾಂತರಕ್ಕೆ ಕಡಿವಾಣ
ಹಾಕಬೇಕು ಎನ್ನುವ ಉದ್ದೇಶದಿಂದ ನಮ್ಮ ದೇಶದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ
ಜಾರಿಗೆ ಬಂತು.
ಆದರೀಗ ಪಕ್ಷಾಂತರ ನಿಷೇಧ ಕಾಯ್ದೆಯೆಂಬ ರಂಗೋಲಿಯ ಕೆಳಗೆ
ತೂರುವ ಚಾಣಾಕ್ಷ ಪ್ರಕ್ರಿಯೆ ಆರಂಭವಾಗಿದೆ.
ಅದಕ್ಕೆ ಒಬ್ಬೊಬ್ಬರು ಒಂದೊಂದು ಚಾಣಾಕ್ಷ ಮಾರ್ಗ
ಕಂಡುಕೊಳ್ಳುತ್ತಿದ್ದಾರೆ.
ಆ ನಿಟ್ಟಿನಲ್ಲಿ ಎಲ್ಲವನ್ನೂ ಮೀರಿಸಿದ ಮಾರ್ಗ
ಕಂಡುಕೊಂಡ 'ಕು'ಖ್ಯಾತಿ
ಈಗ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.
ಯಡಿಯೂರಪ್ಪ ಮತ್ತು ಅವರ ಸಂಗಡಿಗರಿಗೆ ಸೇರಬೇಕು.
"ರಾಜಕೀಯವಾಗಿ ಇದೊಂದು ಹೊಸ ರೀತಿಯ ನಿರ್ವಹಣಾ
ಮಾದರಿ.
ಅಯ್ಕೆಯಾದ 40
ದಿನಗಳಲ್ಲಿಯೇ ತನ್ನ ಮೂಲ ಪಕ್ಷ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ,
ಗೆದ್ದೆತ್ತಿನ ಬಾಲ ಹಿಡಿಯುವ ಈ ಪ್ರಕ್ರಿಯೆ ದೇಶದ
ರಾಜಕೀಯ ಇತಿಹಾಸದಲ್ಲಿಯೇ ಒಂದು ಕಪ್ಪು ಚುಕ್ಕೆ.
ಇದಕ್ಕೆ ಕುಮ್ಮಕ್ಕು ನೀಡುತ್ತಿರುವ ಬಿಜೆಪಿ
ರಾಜ್ಯದಲ್ಲಿ ರಾಜಕೀಯದ ಸಮಾಧಿ ಮಾಡಲು ಹೊರಟಿದೆ"
ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿ(ಎಸ್)
ಮುಖಂಡ ಎಚ್.ಡಿ.
ಕುಮಾರಸ್ವಾಮಿ ಟಿಎಸ್‌ಐ ಜೊತೆ ವಿಷಾದ
ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ ತನ್ನ ಸರ್ಕಾರ
ಗಟ್ಟಿಮಾಡಿಕೊಳ್ಳುವ ಸಲುವಾಗಿ ಬಿಜೆಪಿ ನಡೆಸುತ್ತಿರುವ
'ಆಪರೇಷನ್ ಕಮಲ'
ರಾಜಕೀಯ ಮತ್ತು ರಾಜಕಾರಣಿಗಳು ಎಷ್ಟು ತಳಮಟ್ಟಕ್ಕೆ ಇಳಿಯಬಹುದು ಎನ್ನುವುದರ
ದುರಂತಮಯ ಸಂಕೇತ.
ಸ್ವತಃ ಯಡಿಯೂರಪ್ಪ ಅವರೇ
"ಈ
ಕಾರ್ಯಾಚರಣೆ ನಮಗೇನೂ ಸಮಾಧಾನ ತಂದಿರುವ ಸಂಗತಿಯೇನಲ್ಲ.
ಪಕ್ಷದ ಬಲಸಂವರ್ಧನೆಯ ಕಾರಣ ಅನಿವಾರ್ಯವಾಗಿ ಈ
ಕಾರ್ಯಾಚರಣೆ ಮಾಡಬೇಕಾಯಿತು"
ಎಂದು ಟಿಎಸ್‌ಐ ಬಳಿ ಒಪ್ಪಿಕೊಂಡಿದ್ದಾರೆ.
ಯಡಿಯೂರಪ್ಪ ಅವರ ಭಾವನೆಗಳನ್ನು ವ್ಯಕ್ತಪಡಿಸಿದ
ರೀತಿಯನ್ನು ಗಮನಿಸಿದರೆ,
ಇದು ಮೂಲತಃ ಅವರ ಮನದಲ್ಲಿ ಮೂಡಿದ ಯೋಜನೆಯಲ್ಲ ಎನ್ನುವುದು
ಅರ್ಥವಾಗುತ್ತದೆ.
ಹಣ ಹಾಗೂ ಸದ್ಯ ಅಧಿಕಾರದ ಮದದಿಂದ ಮೆರೆಯುತ್ತಿರುವ
ಬಳ್ಳಾರಿ ರೆಡ್ಡಿ 'ಗ್ಯಾಂಗ್'
ಈ ಅರ್ಥಹೀನ,
'ಅರ್ಥ'ವತ್ತಾದ
ಯೋಜನೆಯ ರೂವಾರಿಗಳು.
ಸದ್ಯದ ಮಟ್ಟಿಗೆ ಕರ್ನಾಟಕದಲ್ಲಿ ಬಿಜೆಪಿಯನ್ನು
ಗಟ್ಟಿಗೊಳಿಸುವ ಗುತ್ತಿಗೆ ಹೊತ್ತಿರುವ ರೆಡ್ಡಿ ಬ್ರದರ್ಸ್ ಅದಕ್ಕಾಗಿ ನೈತಿಕ
ರಾಜಕೀಯದ ಚಿತೆಗೆ ಬೆಂಕಿ ಹಚ್ಚಲು ಮುಂದಾಗುತ್ತಿದ್ದಾರೆ.
ಬಿಜೆಪಿ
110
ಸ್ಥಾನಗಳನ್ನು ಗಳಿಸಿದ ಸಂದರ್ಭದಲ್ಲಿ ಕೂಡ,
ಬಹುಮತಕ್ಕೆ ಬೇಕಿದ್ದ
3 ಶಾಸಕರಿಗಾಗಿ
ಯಶಸ್ವಿ ಕುದುರೆ ವ್ಯಾಪಾರ ಮಾಡಿದವರು ಬಳ್ಳಾರಿಯ ಧಣಿಗಳೇ.
ರೇಸ್‌ಕೋರ್ಸ್ ರಸ್ತೆಯ ಪಂಚತಾರಾ ಹೊಟೇಲ್‌ನಲ್ಲಿ
'ಅರ್ಥ'ವತ್ತಾದ
ಸಂಧಾನ ನಡೆಸಿ,
ಮೂವರು ಶಾಸಕರನ್ನು ಸೆಳೆದುಕೊಂಡು ಬಂದು ಪಕ್ಷ
ಅಧಿಕಾರಕ್ಕೆ ಬರುವಂತೆ ಮಾಡಿದವರೂ ಅವರೇ.
ಅದಾದ ನಂತರ ಎರಡನೇ ಹಂತದ ಕಾರ್ಯಾಚರಣೆಯ ಮೂಲ ಕೂಡ
ಅವರೇ ಆಗಿದ್ದಾರೆ. "ಇದು
ಮಕ್ಕಳಾಟ,
ದುರಹಂಕಾರ,
ಉಡಾಫೆಯ ರಾಜಕಾರಣ.
ಏಕೆಂದರೆ ಒಬ್ಬ ಶಾಸಕ ತಾನು ಆಯ್ಕೆಯಾದ
40
ದಿನಗಳಲ್ಲಿಯೇ,
ಅವನು ಪ್ರತಿನಿಧಿಸಿದ ಪಕ್ಷದ ತತ್ವ-ಸಿದ್ಧಾಂತಗಳ
ಬಗ್ಗೆ ನಂಬಿಕೆ ಕಳೆದುಕೊಳ್ಳುತ್ತಾನೆಂದರೆ,
ಅದನ್ನು ಯಾರು ನಂಬಲು ಸಾಧ್ಯ?
ಈಗ ಜೆಡಿ(ಎಸ್)
ಮತ್ತು ಕಾಂಗ್ರೆಸ್ ಪಕ್ಷ ಬಿಟ್ಟು,
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಯಾವೊಬ್ಬ
ಶಾಸಕನಿಗೂ ರಾಜಕೀಯ ತತ್ವ-ಸಿದ್ಧಾಂತಗಳ
ಬಗ್ಗೆ ಗೌರವವಿಲ್ಲ.
ರಾಜಕೀಯ ಎನ್ನುವುದು ಅವರಿಗೆ ದಂಧೆ.
ಬಿಜೆಪಿ ಕೂಡ ಎಲ್ಲವನ್ನೂ ಮರೆತು,
ಕೇವಲ ಅಧಿಕಾರದ ಆಸೆಯಿಂದ ಇಂತಹ ಅನೈತಿಕ ರಾಜಕೀಯ
ನಡೆಸಲು ಮುಂದಾಗಿದೆ"
ಎಂಬ ಕುಮಾರಸ್ವಾಮಿ ಮಾತಿನಲ್ಲಿ ಅತಿಶಯೋಕ್ತಿಯೇನೂ ಇಲ್ಲ.
ಸದ್ಯ ಕಾಂಗ್ರೆಸ್‌ನ ಮೂವರು ಹಾಗೂ ಜೆಡಿ(ಎಸ್)ನ
ನಾಲ್ವರು ಶಾಸಕರು ರಾಜೀನಾಮೆ ನೀಡಿ,
ಬಿಜೆಪಿಯ
'ತತ್ವ-ಸಿದ್ಧಾಂತ'ಗಳಿಗೆ
ಮನಸೋತು ಆ ಪಕ್ಷವನ್ನು ಸೇರಿದ್ದಾರೆ.
ಟಿಎಸ್‌ಐ ಜೊತೆ ದೂರವಾಣಿಯಲ್ಲಿ ಮಾತನಾಡಿದ
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಡಿ.ವಿ.
ಸದಾನಂದ ಗೌಡ,
"ನಾವು ಅವರಿಗೆ ಯಾವುದೇ ಆಸೆ-
ಆಮಿಷಗಳನ್ನು ಒಡ್ಡಿರಲಿಲ್ಲ"
ಎಂದು ಮುಖ್ಯಮಂತ್ರಿಗಳ ಹೇಳಿಕೆಯ ಕಂಠಪಾಠವನ್ನು
ಒಪ್ಪಿಸಿದರು.
ಇದೇ ವೇಳೆ ನಮ್ಮ ಪತ್ರಿಕೆ,
ಬಿಜೆಪಿ ಸೆಳೆಯಲು ಪ್ರಯತ್ನಿಸಿದ ಕಾಂಗ್ರೆಸ್‌ನ
ಶಾಸಕರೊಬ್ಬರನ್ನು ಸಂಪರ್ಕಿಸಿತ್ತು.
ಬೆಂಗಳೂರು ಮೂಲದ ಆ ಪ್ರಭಾವಿ ಲಿಂಗಾಯತ ಶಾಸಕ
(ದಯವಿಟ್ಟು
ನನ್ನ ಹೆಸರು ಪ್ರಕಟಿಸಬೇಡಿ ಎಂದು ಕೇಳಿಕೊಂಡಿದ್ದಾರೆ),
"ಬಿಜೆಪಿ ನನ್ನಂತಹುದೇ ಹಲವಾರು ಸಂಭಾವ್ಯ
ಶಾಸಕರನ್ನು ಸಂಪರ್ಕಿಸಿದೆ.
ಸ್ವತಃ ಮುಖ್ಯಮಂತ್ರಿಯವರೇ ನನ್ನನ್ನು ಕರೆಸಿ
ಮಾತನಾಡಿಸಿದ್ದು ನಿಜ.
ಆನಂತರ ನಾನಿಟ್ಟ ಬೇಡಿಕೆಗಳು ಅವರಿಗೆ ಇಷ್ಟವಾಗಲಿಲ್ಲ.
ಅವರು ನನ್ನ ಮುಂದಿಟ್ಟ ಪ್ರಸ್ತಾಪ ಕೂಡ ನನಗೆ
ಸೇರಲಿಲ್ಲ.
ಕೊನೆಗೆ ಈ ಸಂಧಾನ ಏರ್ಪಡಿಸಿದ್ದ ಮಧ್ಯವರ್ತಿಯ ಮುಂದೆ
ನನ್ನ ಮನದಲ್ಲಿ ಇದ್ದುದನ್ನು ಹೇಳಿ ಹೊರಬಂದೆ"
ಎಂದು ವಿವರ ನೀಡಿದರು.
ಬಿಜೆಪಿ ಮೂಲಗಳ ಪ್ರಕಾರ ಈ ಕಾರ್ಯಾಚರಣೆಯ ಮೂಲಕ
ಕನಿಷ್ಠ 20
ಶಾಸಕರನ್ನು ಸೆಳೆಯುವ ಮೂಲ ಉದ್ದೇಶವಿತ್ತು.
ಈಗ 7
ಮಿಕಗಳು ಬಲೆಗೆ ಬಿದ್ದಾಗಿವೆ.
ಇನ್ನೂ
13
ಮಿಕಗಳಿಗಾಗಿ ಹುಡುಕಾಟ ಮುಂದುವರಿದಿದೆ.
ಮಾತುಕತೆ ಕೂಡ ನಡೆದಿದೆ.
ಮಾತುಕತೆಯ ಸಂದರ್ಭದಲ್ಲಿ ಜಾತಿ-ಮತ-ಪಂಗಡ-ಹುದ್ದೆ
ಎಲ್ಲದರ ಲೆಕ್ಕಾಚಾರವೂ ನಡೆಯುತ್ತಿದೆ.
ಸದ್ಯ ವಿದೇಶದಲ್ಲಿರುವ ರೆಡ್ಡಿ ಗ್ಯಾಂಗ್ ವಾಪಸು
ಬಂದ ಮೇಲೆ ಕಾರ್ಯಾಚರಣೆಗೆ ಪುನರ್ ಜೀವ ನೀಡಲಾಗುವುದು.
ಅವರ ಲೆಕ್ಕಾಚಾರದ ಪ್ರಕಾರ ಉಪಚುನಾವಣೆಯಲ್ಲಿ ಈ
20ರ
ಪೈಕಿ ಹತ್ತು ಜನ ಗೆದ್ದರೂ ಬಿಜೆಪಿ ಶಾಸಕರ ಸಂಖ್ಯೆ
120 ಆಗುತ್ತದೆ.
ಆಮೇಲೆ ನಿಶ್ಚಿಂತೆಯಿಂದ ಪೂರ್ಣಾವಧಿ ಸರ್ಕಾರ
ನಡೆಸುವುದು ಎನ್ನುವ ಉದ್ದೇಶವಿದೆ.
ಸ್ವತಃ ಮುಖ್ಯಮಂತ್ರಿ ಅವರೇ
"ಆಪರೇಷನ್ ಕಮಲ
ಇನ್ನು ಮುಂದುವರಿಯುವುದಿಲ್ಲ"
ಎಂದು ಹೇಳಿದ್ದರೂ,
ಒಳಗೊಳಗೆ ಕುದುರೆ ವ್ಯಾಪಾರ ಮುಂದುವರಿಯುವುದು
ಗ್ಯಾರಂಟಿ. "ನಮ್ಮ
ಪಕ್ಷದ ಬಾಗಿಲು ಸದಾ ತೆರೆದಿರುತ್ತದೆ.
ಯಾರು ಬೇಕಾದರೂ ನಮ್ಮ ಪಕ್ಷಕ್ಕೆ ಬಂದು ಸೇರಬಹುದು"
ಎಂಬ ಸದಾನಂದ ಗೌಡ ಅವರ ಹೇಳಿಕೆಯೇ ಇದಕ್ಕೆ
ಸಾಕ್ಷಿ.
ಟಿಎಸ್‌ಐ ಜೊತೆ ಮಾತನಾಡಿದ ಸದಾನಂದ ಗೌಡರ ಬಳಿ,
"ಯಾವುದೇ ಒಬ್ಬ ಶಾಸಕ ಕೇವಲ
40 ದಿನಗಳಲ್ಲಿ
ಒಂದು ಪಕ್ಷದ ತತ್ವ-ಸಿದ್ಧಾಂತಗಳನ್ನು
ಅರೆದು ಕುಡಿದು,
ಇದರಿಂದ ಪ್ರಯೋಜನವಿಲ್ಲ ಎಂದು ಈ ರೀತಿಯ ಅಡ್ಡದಾರಿ
ಹಿಡಿದು ಮತ್ತೊಂದು ಪಕ್ಷಕ್ಕೆ ಸೇರುವುದು ಎಷ್ಟು ಉಚಿತ?"
ಎಂದು ಕೇಳಿದಾಗ,
"ಅದರಲ್ಲೇನು ತಪ್ಪಿದೆ.
ಒಬ್ಬ ಚುರುಕಾದ ವ್ಯಕ್ತಿ ಒಂದೇ ದಿನದಲ್ಲಿ ಒಂದು
ಪಕ್ಷದ ತತ್ವ-ಸಿದ್ಧಾಂತಗಳನ್ನು
ಅರ್ಥ ಮಾಡಿಕೊಳ್ಳಬಲ್ಲ"
ಎಂಬ ಸಮರ್ಥನೆ ನೀಡಿದರು.
"ಈ ರೀತಿ
ಇದ್ದಕ್ಕಿದ್ದಂತೆ ರಾಜೀನಾಮೆ ನೀಡಿ,
ಬೇರೆ ಪಕ್ಷಕ್ಕೆ ಸೇರುವ ಮೂಲಕ ಮಾಜಿ ಶಾಸಕರು
ಅವರವರ ಕ್ಷೇತ್ರದ ಮತದಾರರಿಗೆ ಮೋಸ ಮಾಡಿದಂತಾಗಿಲ್ಲವೇ?"
ಎಂಬ ಪ್ರಶ್ನೆಗೆ ಅವರು
"ಶಾಸಕ
ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯನ್ನು ಸೇರಿದ ಪ್ರತಿಯೊಬ್ಬ ಮುಖಂಡನೂ,
ಅಂತಹ ನಿರ್ಧಾರ ತೆಗೆದುಕೊಳ್ಳುವ ಮೊದಲು ಅವರವರ
ಕ್ಷೇತ್ರದ ಮತದಾರರನ್ನು ಸಂಪರ್ಕಿಸಿ,
ಅವರ ಒಪ್ಪಿಗೆ ಪಡೆದೇ ರಾಜೀನಾಮೆ ನೀಡುವ ನಿರ್ಧಾರ
ಮಾಡಿದ್ದು"
ಎಂಬ ಸಮಜಾಯಷಿ ನೀಡಿದರು.
ಬಿಜೆಪಿ ಸೇರಿದ ಏಳು ಮಾಜಿ ಶಾಸಕರ ಉದ್ದೇಶಗಳನ್ನು
ಗಮನಿಸಿದಾಗ,
ಮೇಲಿನ ಮಾತು ಎಷ್ಟರ ಮಟ್ಟಿಗೆ ಸತ್ಯ ಎಂದು ಅರ್ಥವಾದೀತು.
ಆ ಏಳು ಮಂದಿಯಲ್ಲಿ ಯಾರಿಗೆ ಎಷ್ಟು ಜನಪರ ಕಾಳಜಿ
ಇದೆ ಎನ್ನುವುದು,
ಆಯಾ ಕ್ಷೇತ್ರದ ಮತದಾರರಿಗೆ ಮತ್ತು ರಾಜ್ಯದ ಜನತೆಗೆ
ಸ್ಪಷ್ಟವಾಗಿ ಗೊತ್ತಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ
ಮತದಾರರನ್ನೇ ಮೂರ್ಖರನ್ನಾಗಿಸಲು ಹೊರಟಿರುವ ಈ ರಾಜಕೀಯ ನಡೆಯಿಂದ
ಬಿಜೆಪಿಯಲ್ಲಿಯೇ ಬಂಡಾಯದ ಅಲೆ ಏಳುವ ಸಾಧ್ಯತೆ ಕೂಡ ಇಲ್ಲದಿಲ್ಲ.
ಇದಕ್ಕೆ ಬೆಳ್ಳುಬ್ಬಿ ರಾಜೀನಾಮೆ ಪ್ರಹಸನ,
ಅವರ ಕ್ಷೇತ್ರದಲ್ಲಿ ನಡೆದ ದಾಂಧಲೆಯೇ ಉದಾಹರಣೆ.
'ಆಪರೇಷನ್ ಕಮಲ'ದ
ಮೂಲಕ ಪಕ್ಷ ಪ್ರವೇಶಿಸಿದ ಹೊಸ ಮುಖಗಳಿಗೆ ನೇರವಾಗಿ ಸಚಿವ ಪದವಿ,
ನಿಗಮ-
ಮಂಡಳಿಗಳ ಅಧ್ಯಕ್ಷ-
ಉಪಾಧ್ಯಕ್ಷ ಪದವಿ ಲಭ್ಯವಾಗುತ್ತಿದೆ.
ಅದೇ,
ಕಳೆದ ಒಂದೆರಡು ದಶಕಗಳಿಂದ ಬಿಜೆಪಿಯಲ್ಲಿದ್ದೇ,
ಪಕ್ಷದ ಏಳು-ಬೀಳುಗಳೊಂದಿಗೆ
ಒಂದಾಗಿ ಸಾಗಿದ ಶಾಸಕರಿಗೆ ಇನ್ನೂ ಯಾವುದೇ ಮಾನ್ಯತೆ ಸಿಕ್ಕಿಲ್ಲ ಎಂಬ ಕೊರಗೂ
ಇದೆ.
ಬಂಡಾಯದ ಅಲೆಯೇಳುವ ಸೂಚನೆ ಸಿಕ್ಕಿದ ಕೂಡಲೇ ಸ್ವತಃ ಮುಖ್ಯಮಂತ್ರಿಗಳೇ ಅಂತಹ
ಕೆಲವು 'ಅಪಾಯಕಾರಿ'
ಶಕ್ತಿಗಳನ್ನು ಕರೆದು ಮಾತನಾಡಿಸಿದ್ದಾರೆ.
ಸಚಿವ ಪದವಿಯ ಆಸೆಯಿಟ್ಟುಕೊಂಡಿದ್ದ ಮಲೆನಾಡಿನ
ಒಬ್ಬ ಹಾರ್ಡ್‌ಕೋರ್ ಬಿಜೆಪಿ ಶಾಸಕರಂತೂ,
ಕೆಂಡದಂತೆ ಉರಿದಿದ್ದು ನಿಜ ಎಂದು ಬಿಜೆಪಿ
ಮೂಲಗಳೇ ಒಪ್ಪಿಕೊಳ್ಳುತ್ತವೆ.
ಕೊನೆಗೆ ಬಹಿರಂಗ ಸಭೆಯಲ್ಲಿ ಪಕ್ಷದ ಏಳಿಗೆಗಾಗಿ
ಬಿಜೆಪಿ ಶಾಸಕರು ತ್ಯಾಗ ಮಾಡಬೇಕು ಎಂಬ ಉದಾತ್ತ ಭಾಷಣ ಕೂಡ ಮಾಡಿದ್ದಾರೆ.
ಈಗ ಬಿಜೆಪಿ ಮತ್ತು ರೆಡ್ಡಿ ಗ್ಯಾಂಗ್
ನಡೆದುಕೊಳ್ಳುತ್ತಿರುವ ರೀತಿಯನ್ನು ಕಂಡಾಗ,
ಮುಂದೊಂದು ದಿನ ಪಕ್ಷದ ಉದ್ಧಾರಕ್ಕಾಗಿ ಸ್ವತಃ
ಯಡಿಯೂರಪ್ಪ ಅವರೇ ತ್ಯಾಗ ಮಾಡಬೇಕಾದ ಸಂದರ್ಭ ಕೂಡ ಎದುರಾಗಬಹುದು!
ಹಾಗಾದಲ್ಲಿ ಶಿಕಾರಿಪುರದ ಹೋರಾಟಗಾರ ತಮ್ಮ ಭಾಷಣದ
ಪದಗಳನ್ನು ತಾವೇ ನುಂಗಬೇಕಾಗುತ್ತದೆ!
ಇನ್ನೂ ಮುಖ್ಯವಾದ ವಿಷಯವೆಂದರೆ,
'ಆಪರೇಷನ್
ಕಮಲ'ದ
ರೀತಿ-ರಿವಾಜುಗಳು
ಮೂಲತಃ ದೆಹಲಿಯಲ್ಲಿನ ಬಿಜೆಪಿ ನಾಯಕರಿಗೆ ಅಷ್ಟೇನೂ ಪಥ್ಯವಾಗಿಲ್ಲ.
ಆದರೆ,
ಸದ್ಯದ ಮಟ್ಟಿಗೆ ಕರ್ನಾಟಕದಲ್ಲಿನ ಬಿಜೆಪಿ ಘಟಕ
ಹಾಗೂ ಯಡಿಯೂರಪ್ಪ ಪಡೆಯನ್ನು ಎದುರು ಹಾಕಿಕೊಳ್ಳುವ ಮನಸ್ಸು ಪಕ್ಷದ
ಹೈಕಮಾಂಡ್‌ಗೆ ಇಲ್ಲ.
ಏಕೆಂದರೆ,
ಇನ್ನೊಂದು ವರ್ಷದಲ್ಲಿ ಲೋಕಸಭಾ ಚುನಾವಣೆ
ನಡೆಯಲಿದೆ.
ದೇಶದ ಮುಂದಿನ ಪ್ರಧಾನಿಯಾಗಬೇಕು ಎಂದು ಹಾತೊರೆಯುತ್ತಿರುವ
ಲಾಲ್‌ಕೃಷ್ಣ ಅಡ್ವಾಣಿ ಮತ್ತು ಅವರ ಗುಂಪಿನ ಪ್ರಕಾರ,
ಕರ್ನಾಟಕದಲ್ಲಿ ಬಿಜೆಪಿ ಕನಿಷ್ಠ
20 ಲೋಕಸಭಾ
ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದಲ್ಲಿ ಹೆಚ್ಚು ಅನುಕೂಲವಾಗಲಿದೆ.
ಆ ಉದ್ದೇಶದ ಹಿನ್ನೆಲೆಯಲ್ಲಿ
"ನೀವು ಏನು
ಬೇಕಾದರೂ ಮಾಡಿಕೊಳ್ಳಿ.
ನಮಗಿಷ್ಟು ಕ್ಷೇತ್ರಗಳನ್ನು ಗೆದ್ದುಕೊಡಿ"
ಎಂದು ಹೇಳಿರುವ ಹೈಕಮಾಂಡ್ ಕಣ್ಣು ಮುಚ್ಚಿ
ಕುಳಿತಿದೆ.
ಇಂತಹ ನೈತಿಕತೆಗೆ ಮಾರಕವಾದ ಕೀಳು ರಾಜಕೀಯ ನಡೆ ಮುಂದೊಂದು
ದಿನ ಹೇಗೆ ಕರ್ನಾಟಕದಲ್ಲಿ ಬಿಜೆಪಿಗೇ ಮಾರಕವಾಗಲಿದೆ ಎನ್ನುವುದರ ಅರಿವು
ಸ್ವತಃ ಯಡಿಯೂರಪ್ಪ ಅವರಿಗೂ ಇಲ್ಲ.
ಈಗ ಯಡಿಯೂರಪ್ಪ ಅವರ ಬೆಂಗಾವಲು ಶಕ್ತಿಯಾಗಿ
ಮೆರೆಯುತ್ತಿರುವ ಬಳ್ಳಾರಿಯ ಗಣಿ ಧಣಿಗಳಿಗೆ ಯಾವುದೇ ರಾಜಕೀಯ ತತ್ವ-
ಸಿದ್ಧಾಂತಗಳು ಇಲ್ಲ.
ಕರ್ನಾಟಕದಲ್ಲಿ ಬಿಜೆಪಿ ಅವರಿಗೆ ರಾಜಕೀಯ ನೆಲೆ.
ಅದೇ ಪಕ್ಕದ ಆಂಧ್ರದಲ್ಲಿ ಕಾಂಗ್ರೆಸ್ ಅವರ
ವ್ಯಾಪಾರಿ ನೆಲೆ!
ಬಳ್ಳಾರಿ ಧಣಿಗಳ ರಾಜಕೀಯ ಹಾಗೂ ವೈಯಕ್ತಿಕ ಇತಿಹಾಸ
ಗೊತ್ತಿರುವ ಪ್ರತಿಯೊಬ್ಬರಿಗೂ ಈ ವಿಷಯ ತಿಳಿದೇ ಇದೆ.
ಅದೂ,
ಅಲ್ಲದೇ
"ನಮಗೆ ಯಾವುದೇ
ರಾಜಕೀಯ ಮಹತ್ವಾಕಾಂಕ್ಷೆ ಇಲ್ಲ"
ಎಂದು ಹೇಳುವ ಜನಾರ್ದನ ರೆಡ್ಡಿ ಮತ್ತು ಅವರ
ಸಂಗಡಿಗರಿಗೆ ಪ್ರತಿಯೊಬ್ಬ ಮನುಷ್ಯನಿಗೆ ಇರುವ ಎಲ್ಲ ಆಸೆ-ಆಕಾಂಕ್ಷೆಗಳು
ಇವೆ.
ಏನೂ ಬೇಡ,
ಏನೂ ಬೇಡ...
ಎನ್ನುತ್ತಲೇ ಅವರ ಪೈಕಿ ಮೂವರು ಸಚಿವರಾಗಿ
ಯಡಿಯೂರಪ್ಪ ಸಂಪುಟವನ್ನು ಆಕ್ರಮಿಸಿರುವುದೇ ಇದಕ್ಕೆ ಸಾಕ್ಷಿ.
ಮುಂದೊಂದು ದಿನ ಇದೇ ಗುಂಪು ಯಡಿಯೂರಪ್ಪ ಮುಂದೆ
ಭಸ್ಮಾಸುರ ಪಡೆಯಾಗಿ ನಿಂತಲ್ಲಿ ಅಚ್ಚರಿ ಪಡಬೇಕಿಲ್ಲ.
ಎಲ್ಲವೂ ಪಕ್ಷದ ಏಳಿಗೆಗಾಗಿ ಸ್ವಾಮಿ!
ನೀವು ಜಾಗ ಖಾಲಿ ಮಾಡಿ ಎಂದರೆ!
ಹೈಕಮಾಂಡ್ ಕೂಡ
'ಯಸ್'
ಎಂದರೆ?
ಕರ್ನಾಟಕದ ದುರಂತವೆಂದರೆ ಬಿಜೆಪಿಯ ಈ ಆಂತರಿಕ
ಅಧಃಪತನದ ಲಾಭ ಪಡೆಯಲು ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿ(ಎಸ್)
ವಿಫಲವಾಗುತ್ತಿರುವುದು.
ಕಾಂಗ್ರೆಸ್ ಪಕ್ಷವಂತೂ ಪ್ರಭಾವಿ ನಾಯಕತ್ವವಿಲ್ಲದ,
ಒಂದು ಸಂತ್ರಸ್ತರ ಕಾಲೋನಿಯಾಗಿ ನಿಂತಿದೆ.
ಹೈಕಮಾಂಡ್ ಸಂಸ್ಕೃತಿಯಡಿ ನರಳುತ್ತಿರುವ ಆ
ಪಕ್ಷದಲ್ಲಿ ಸಮರ್ಥರಿಗೆ ಕುರ್ಚಿಯಿಲ್ಲ.
ಕುರ್ಚಿಯಲ್ಲಿ ಕೂತವರಿಗೆ ಮೇಲೆದ್ದು ನಡೆಯುವ
ಶಕ್ತಿಯಿಲ್ಲ.
ಈ ನಡುವೆ ತೆರೆಮರೆಯಲ್ಲಿ ಜನತಾ ಪರಿವಾರವನ್ನು
ಒಗ್ಗೂಡಿಸುವ ಯತ್ನ ಕೂಡ ಆರಂಭವಾಗಿದೆ.
ಜೆಡಿ(ಎಸ್)
ರಾಜ್ಯಾಧ್ಯಕ್ಷ ಮೆರಾಜುದ್ದೀನ್ ಪಟೇಲ್ ಈಗಾಗಲೇ
ಪಕ್ಷ ತೊರೆದಿದ್ದ ಮಾಜಿ ಮುಖಂಡರನ್ನು ಸಂಪರ್ಕಿಸಲಾರಂಭಿಸಿದ್ದಾರೆ.
ಆ ಮುಖಂಡರು ಕೂಡ ಎಲ್ಲವೂ ಸರಿ ಹೊಂದಿದಲ್ಲಿ ಜೆಡಿ(ಎಸ್)ಗೆ
ಮರಳುವ ಸಾಧ್ಯತೆ ಹೆಚ್ಚಿದೆ.
ಆದರೆ,
ಜೆಡಿ(ಎಸ್)
ಅನಭಿಷಿಕ್ತ ದೊರೆ,
ಮಾಜಿ ಪ್ರಧಾನಿ ಎಚ್.ಡಿ.
ದೇವೇಗೌಡ ಅವರ ಮೇಲೆ ಯಾರಿಗೂ ನಂಬಿಕೆ ಉಳಿದಿಲ್ಲ.
"ದೊಡ್ಡ ಗೌಡರು ತೆರೆಮರೆಗೆ ಸರಿದರೆ,
ಜೆಡಿ(ಎಸ್)ಗೆ
ಮರಳಿ ಹೋಗಲು ನಮಗೆ ತೊಂದರೆಯಿಲ್ಲ.
ಕುಮಾರಸ್ವಾಮಿ ಉತ್ತಮ ನಾಯಕರು,
ಅವರ ಮೇಲೆ ನಮಗೆ ನಂಬಿಕೆಯಿದೆ.
ಕರ್ನಾಟಕದ ರಾಜಕೀಯ ಇತಿಹಾಸವನ್ನು ಗಮನಿಸಿದರೆ,
ಖಂಡಿತ ಇಲ್ಲಿ ತೃತೀಯ ಹಾಗೂ ಪ್ರಾದೇಶಿಕ
ಪಕ್ಷಕ್ಕೆ ಹೆಚ್ಚಿನ ಅವಕಾಶ ಇದೆ.
ಅದು ನಾವೆಲ್ಲ ಒಂದಾಗಿದ್ದಲ್ಲಿ ಮಾತ್ರ
ಎನ್ನುವುದು ಕೂಡ ಈಗಾಗಲೇ ಸ್ಪಷ್ಟವಾಗಿ ಹೋಗಿದೆ"
ಎಂದು ಮಾತುಕತೆ ನಡೆಸಿದ ಒಬ್ಬರು ನಾಯಕರು
ಟಿಎಸ್‌ಐ ಬಳಿ ಇಂಗಿತ ವ್ಯಕ್ತಪಡಿಸಿದ್ದಾರೆ.
ಸ್ವತಃ ಕುಮಾರಸ್ವಾಮಿ ಅವರೇ
"ನನಗೂ ಮತ್ತು
ಸಿದ್ದರಾಮಯ್ಯ ಅವರಿಗೂ ಹೊಂದಾಣಿಕೆಯಾಗುವುದಿಲ್ಲ.
ಆದ್ದರಿಂದ ಅವರನ್ನು ಮತ್ತೆ ಪಕ್ಷಕ್ಕೆ ಕರೆತರುವ
ಯತ್ನ ಇಲ್ಲವೇ ಇಲ್ಲ.
ಉಳಿದಂತೆ ಎಲ್ಲರೂ ಪಕ್ಷಕ್ಕೆ ಮರಳಬಹುದು"
ಎಂಬ ಸ್ಪಷ್ಟನೆ ಕೂಡ ನೀಡಿದ್ದಾರೆ.
ಆಂತರಿಕ ಸಮಸ್ಯೆಗಳು ಏನೇ ಇದ್ದರೂ,
ಕರ್ನಾಟಕದ ರಾಜಕೀಯ ವ್ಯವಸ್ಥೆಯನ್ನು ಕಾಪಾಡುವ
ನೈತಿಕ ಜವಾಬ್ದಾರಿ ನಮ್ಮದು ಎನ್ನುವುದನ್ನು ಕಾಂಗ್ರೆಸ್ ಮತ್ತು ಜೆಡಿ(ಎಸ್)
ಅರಿತುಕೊಳ್ಳಲು ಇದು ಸಕಾಲ.
ಕೇವಲ ಆ ವಿಷಯವನ್ನು ಅರಿತುಕೊಂಡರೆ ಸಾಲದು.
ಬದಲಾಗಿ ರಾಜ್ಯದಲ್ಲಿನ ರಾಜಕೀಯ ಅಧಃಪತನವನ್ನು
ತಡೆಯುವ ನಿಟ್ಟಿನಲ್ಲಿ ಈ ಎರಡೂ ವಿರೋಧ ಪಕ್ಷಗಳು ನೈತಿಕ ಹೋರಾಟಕ್ಕೆ
ಮುಂದಾಗಬೇಕಿದೆ.
ಕನಿಷ್ಠ ಮುಂದಿನ ಉಪ ಚುನಾವಣೆಗೆ ಮೊದಲು ಆ ಹಂತಕ್ಕೆ
ಕಾಂಗ್ರೆಸ್ ಮತ್ತು ಜೆಡಿ(ಎಸ್)
ಏರಬೇಕು.
ಇಲ್ಲವಾದಲ್ಲಿ ಹಣ-
ಅಧಿಕಾರದ ಮದವನ್ನೆ ಆಧರಿಸಿದ ಬಿಜೆಪಿಯ ಈ ಅನೈತಿಕ
ರಾಜಕೀಯ ಕರ್ನಾಟಕದ ಪಾಲಿಗೆ ಮುಳುವಾಗಲಿದೆ.
ಟಿಎಸ್‌ಐ
|