ಇದು ನಮ್ಮ ವಿಶೇಷ ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
 
ಸಂಪಾದಕೀಯ
ಧಾರ್ಮಿಕ ಉಗ್ರವಾದದ ನಾಚಿಕೆಗೇಡಿನ ನರ್ತನ
 
    
Arindam Choudhuri
ಅರಿಂದಮ್ ಚೌಧುರಿ,
ಪ್ರಧಾನ ಸಂಪಾದಕರು,
ದ ಸಂಡೆ ಇಂಡಿಯನ್

ಭಾರತೀಯ ಸಮಾಜದಲ್ಲಿ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವ ಅಪಾಯಕಾರಿ ಸಂಗತಿಗಳು ಕೆಲವೊಮ್ಮೆ ಯೋಚನೆಗೀಡು ಮಾಡುತ್ತವೆ. ಆ ಸಂಗತಿಗಳು ಎಷ್ಟು ಅಪಾಯಕಾರಿಯಾಗಿವೆ ಎಂದರೆ ಅವುಗಳನ್ನಷ್ಟಕ್ಕೇ ಬಿಟ್ಟು ಸುಮ್ಮನಾದರೆ ಇಡೀ ದೇಶದ ಪ್ರಜಾತಾಂತ್ರಿಕ ಮತ್ತು ಜಾತ್ಯತೀತ ವ್ಯವಸ್ಥೆಯನ್ನೇ ಬುಡಮೇಲು ಮಾಡಬಲ್ಲವು. ಅಷ್ಟರಮಟ್ಟಿಗೆ ಅವು ದೇಶದ ಉದ್ದಗಲಕ್ಕೂ ಪ್ರಬಲವಾಗಿವೆ. ಅದಕ್ಕಿಂತ ದೊಡ್ಡ ಆತಂಕವೆಂದರೆ ಸರ್ಕಾರ ಮತ್ತು ನಾಗರಿಕ ಸಮಾಜ(ಮೇಲ್ವರ್ಗ) ಎಷ್ಟರಮಟ್ಟಿಗೆ ತಮ್ಮೊಳಗೇ ತಾವು ಮುಳುಗಿವೆ ಎಂದರೆ ಇಂತಹ ಗಂಭೀರ ಅಪಾಯವನ್ನು ಅವು ಗಣನೆಗೇ ತೆಗೆದುಕೊಳ್ಳುತ್ತಿಲ್ಲ. ಈ ಸಂಗತಿಗಳು ನೇರವಾಗಿ ಅವುಗಳ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲವಾದ್ದರಿಂದ ಹಾಗಿರುವುದು ಅವುಗಳ ಪಾಲಿಗೆ ಸುರಕ್ಷಿತವಾಗಿದೆ ಕೂಡ. ಆದರೆ, ಈ ಪ್ರಭಾವಿ ವಲಯಗಳ ಮೌನದ ಹುನ್ನಾರ ಈ ದೇಶದ ಭವಿಷ್ಯದ ಬಗ್ಗೆ ಕಾಳಜಿ ಇರುವ ಯಾರಿಗಾದರೂ ಚಿಂತೆಗೀಡುಮಾಡುವ ಸಂಗತಿಯೇ. ಜೊತೆಗೆ ಅಂತಹ ಹುನ್ನಾರವೇ ಅಪಾಯಕಾರಿ ಶಕ್ತಿಗಳಿಗೆ ನಮ್ಮ ಪ್ರಜಾತಾಂತ್ರಿಕ ವ್ಯವಸ್ಥೆಯ ಪ್ರತಿಯೊಂದನ್ನೂ ಯಾವ ಹಿಂಜರಿಕೆಯೂ ಇಲ್ಲದೆ ಪ್ರಶ್ನಿಸುವ ಎದೆಗಾರಿಕೆಯನ್ನು ನೀಡುತ್ತಿದೆ. ಏಕೆಂದರೆ, ವ್ಯವಸ್ಥೆಯ ಪ್ರಭಾವಿ ಅಂಗಗಳಾದ ಸರ್ಕಾರ ಮತ್ತು ಮೇಲ್ವರ್ಗವೇ ಮೌನಕ್ಕೆ ಶರಣಾದರೆ ತಮಗೆ ಅಡ್ಡಿಪಡಿಸುವವರು, ಪ್ರಶ್ನಿಸುವವರು ಯಾರಿದ್ದಾರೆ ಎಂಬ ಉದ್ಧಟತನ ಅವರಿಗೆ ಬರದೇ ಇರದು. ಇಂತಹ ಸ್ಥಿತಿಯಲ್ಲಿ ಅವರು ತಮ್ಮ ಕೃತ್ಯಗಳನ್ನು ಹೆಚ್ಚು- ಹೆಚ್ಚು ಢಾಳಾಗಿ, ಯಾವ ಎಗ್ಗಿಲ್ಲದೆ ನಡೆಸುವ ಸಾಮರ್ಥ್ಯ ಪಡೆಯುತ್ತಿದ್ದಾರೆ ಕೂಡ. ಅಂದರೆ, ನಾನು ಈವರೆಗೆ ಹೇಳಿದ್ದು ದೇಶದಲ್ಲಿ ಹೆಚ್ಚುತ್ತಿರುವ ಧಾರ್ಮಿಕ ಉಗ್ರವಾದ ಮತ್ತು ಅದರ ಅತ್ಯಂತ ಅಪಾಯಕಾರಿ ಬಹುರೂಪಗಳಲ್ಲಿ ಒಂದಾದ ಸಾಮೂಹಿಕ ಹಿಂಸಾಚಾರ, ಗೂಂಡಾಗಿರಿಯ ಬಗ್ಗೆ.

ದುರಂತವೆಂದರೆ, ನಮ್ಮಲ್ಲಿನ ಅತ್ಯಂತ ಉತ್ಸಾಹಿ ಸಮೂಹ ಮಾಧ್ಯಮದ ಪರಿಣಾಮವಾಗಿ ಮತ್ತು ಅದನ್ನು ನಿಯಂತ್ರಿಸುವ ಯಾವುದೇ ವ್ಯವಸ್ಥೆ ಇಲ್ಲದೇ ಇರುವುದರಿಂದಾಗಿ ಇಂತಹ ಘಾತುಕ ಶಕ್ತಿಗಳ ಕೃತ್ಯಗಳು ಬಹುಬೇಗ ಪ್ರಚಾರ ಪಡೆಯುತ್ತಿವೆ. ಉಗ್ರವಾದಿ ಚಟುವಟಿಕೆ ಮತ್ತು ಸಂಘಟನೆಗಳಿಗೆ ಅನಗತ್ಯ ಪ್ರಮಾಣದ ಪ್ರಚಾರ ಸಿಗುತ್ತಿದೆ. ಅವರ ಕೃತ್ಯಗಳು ಕೆಲವೊಮ್ಮೆ ವಾಸ್ತವ ಪ್ರಮಾಣಕ್ಕಿಂತ ನೂರಾರು ಪಟ್ಟು ದೊಡ್ಡದಾಗಿ ಬಿಂಬಿತವಾಗುತ್ತಿವೆ. ಸುದ್ದಿಯನ್ನು ರಂಜನೀಯವಾಗಿ ಕೊಡುವ, ಆಕರ್ಷಕವಾಗಿ ಹೇಳುವ ಧಾವಂತದಲ್ಲಿ ಸುದ್ದಿ ಮಾಧ್ಯಮಗಳು ಇಂತಹ ವಿಷಯಗಳಿಗೆ ಅತಿಯಾದ ಪ್ರಚಾರ ನೀಡುವ ಅಪಾಯ ಗ್ರಹಿಸುವುದೇ ಇಲ್ಲ. ಆದರೆ, ಅದರಿಂದೆಲ್ಲಾ ಲಾಭವಾಗುತ್ತಿರುವುದು ಅಂತಹ ವಿದ್ರೋಹಿ ಶಕ್ತಿಗಳಿಗೇ.

ಸಾಮೂಹಿಕ ಗೂಂಡಾಗಿರಿ, ಹಿಂಸಾಚಾರದ ಇತ್ತೀಚಿನ ಒಂದೆರೆಡು ನಿದರ್ಶನಗಳನ್ನು ನಾನು ನಿಮಗೀಗ ನೆನಪಿಸಬಹುದು. ನವದೆಹಲಿಯ ರಫಿ ಮಾರ್ಗ್(ದೆಹಲಿಯ ಹೃದಯಭಾಗ)ದ ಕಾನ್‌ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ನಡೆದ ಚಿತ್ರಕಲಾ ಪ್ರದರ್ಶನದಲ್ಲಿ ಎಂ.ಎಫ್. ಹುಸೇನ್ ಅವರ ಏಳು ಕಲಾಕೃತಿಗಳನ್ನು 10-12 ಮಂದಿ ದುಷ್ಕರ್ಮಿಗಳು ನಾಶ ಮಾಡಿದ ಘಟನೆ ನಡೆಯಿತು. ಪ್ರಗತಿ ಮೈದಾನದಲ್ಲಿ ಇತ್ತೀಚೆಗೆ ನಡೆದ ಇಂಡಿಯಾ ಆರ್ಟ್ ಸಮಾವೇಶದಲ್ಲಿ ಹುಸೇನರ ಚಿತ್ರಗಳಿಗೆ ಅವಕಾಶ ನೀಡದೇ ಇರುವುದನ್ನು ಖಂಡಿಸಿ ಪ್ರತಿಭಟನಾರ್ಥವಾಗಿ ಅಲ್ಲಿ ಮೂರು ದಿನಗಳ ಕಾಲ ಆ ಚಿತ್ರಕಲಾ ಪ್ರದರ್ಶನ ಏರ್ಪಡಿಸಲಾಗಿತ್ತು. ವಿಚಿತ್ರ ಸಂಗತಿಯೆಂದರೆ ಆ ದುಷ್ಕರ್ಮಿಗಳು ದೆಹಲಿಯ ನಟ್ಟನಡುವೆಯೇ, ಹಾಡಹಗಲಿನಲ್ಲೇ ತಮ್ಮ ಗೂಂಡಾಗಿರಿ ವರ್ತನೆ ಮೆರೆದಿದ್ದಾರೆ. ಅದೂ ಚಿತ್ರಕಲಾ ಪ್ರದರ್ಶನ ವೀಕ್ಷಣೆಗೆ ಆಗಮಿಸಿದ್ದ ನೂರಾರು ಜನರ ಎದುರಿನಲ್ಲೇ! ಹುಸೇನ್ ಅವರ ಕೆಲವು ಚಿತ್ರಗಳು ಹಿಂದೂಗಳ ಭಾವನೆಗಳಿಗೆ ಘಾಸಿ ಉಂಟುಮಾಡಿವೆ ಎಂದು ಗಲಭೆ ಎಬ್ಬಿಸಿದ ಹಿನ್ನೆಲೆಯಲ್ಲಿ ಅವರು, ಕಳೆದ ಕೆಲವು ತಿಂಗಳಿಂದ ಗಡೀಪಾರಾಗಿ ವಿದೇಶಗಳಲ್ಲಿದ್ದಾರೆ. ಅಂದರೆ, ಬಹುಸಂಖ್ಯಾತ ಹಿಂದೂ ಉಗ್ರವಾದಿ ಸಂಘಟನೆಗಳು ಹುಸೇನರನ್ನು ಅವರದೇ ದೇಶದಿಂದ ಹೊರಗಟ್ಟಿದ್ದಷ್ಟೇ ಅಲ್ಲದೆ, ಅವರ ಕಲಾಕೃತಿಗಳನ್ನು ಸರ್ವನಾಶ ಮಾಡಲು ಹಠತೊಟ್ಟಂತೆ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿವೆ.

ನನ್ನ ಗಮನ ಸೆಳೆದ ಇಂತಹದ್ದೇ ಮತ್ತೊಂದು ಘಟನೆ ಎಂದರೆ, ಒರಿಸ್ಸಾದಲ್ಲಿ ನಡೆದ ಹಿಂಸಾಚಾರದ ವೇಳೆ ಕೆಲವು ದುಷ್ಕರ್ಮಿಗಳು ಕ್ರಿಶ್ಚಿಯನ್ ಅನಾಥಾಶ್ರಮವೊಂದರ ಮೇಲೆ ಹೇಯ ದಾಳಿ ನಡೆಸಿರುವುದು. ಆ ರಾಜ್ಯದಲ್ಲಿ ಇಂತಹ ಕೃತ್ಯ ನಡೆಯುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಆದರೆ, ಮುಂದಿನ ದಿನಗಳಲ್ಲಿ ಇಂತಹ ಮತ್ತಷ್ಟು ದಾಳಿಗಳು ನಡೆಯಬಹುದು ಎಂಬ ಅಪಾಯದ ಸೂಚನೆಯನ್ನು ಈ ಘಟನೆ ತೋರಿಸಿದೆ ಎಂಬುದನ್ನು ಮರೆಯುವಂತಿಲ್ಲ. ಹಾಗೇ ರಾಜ್ಯದಲ್ಲಿ ಇಂತಹ ಶಕ್ತಿಗಳು ಸಾಕಷ್ಟು ಬಲಶಾಲಿಗಳಾಗಿದ್ದಾರೆ ಮತ್ತು ಎಂತಹ ಪ್ರಮಾಣದ ಹಾನಿಯನ್ನಾದರೂ ಮಾಡಲು ಶಕ್ತರಾಗಿದ್ದಾರೆ ಎಂಬುದಕ್ಕೂ ಈ ಘಟನೆ ನಿದರ್ಶನವಾಗಿದೆ.

ವಿಶ್ವ ಹಿಂದೂ ಪರಿಷತ್ ಹಿರಿಯ ನಾಯಕರೊಬ್ಬರು ಮತ್ತು ಇತರ ನಾಲ್ವರು ಕಾರ್ಯಕರ್ತರ ಹತ್ಯೆಯ ಕೃತ್ಯಕ್ಕೆ ಪ್ರತೀಕಾರವಾಗಿ ಸಾಮೂಹಿಕ ಹಿಂಸಾಚಾರಕ್ಕೆ ಇಳಿದ ಹಿಂದೂ ಸಂಘಟನೆಗಳು, ಇಡೀ ಒರಿಸ್ಸಾದಲ್ಲಿ ಹಿಂದೂಯೇತರರಲ್ಲಿ ಭೀತಿ ಹುಟ್ಟಿಸಿದ್ದಾರೆ. ಹಿಂದೂಯೇತರರ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಿಂಸಾಚಾರ, ದೌರ್ಜನ್ಯಗಳು ಇಡೀ ದೇಶವನ್ನೇ ದಿಗ್ಮೂಢವನ್ನಾಗಿಸಿವೆ. ಮೃಗೀಯ ವರ್ತನೆಯ ದುಷ್ಕರ್ಮಿಗಳು ಅನಾಥಾಶ್ರಮಕ್ಕೆ ಬೆಂಕಿ ಇಟ್ಟು ಸುಟ್ಟದ್ದಷ್ಟೇ ಅಲ್ಲ, ಒಬ್ಬ ಮಹಿಳೆಯನ್ನು ಕೊಂದು, ಪಾದ್ರಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಇತ್ತೀಚಿನ ಈ ಎರಡು ಘಟನೆಗಳೊಂದಿಗೆ ಆಗಾಗ ನಿರಂತರವಾಗಿ ನಡೆಯುತ್ತಿರುವ ಇಂತಹ ಉಗ್ರವಾದಿ ಹಿಂಸೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಮಾತ್ರವಲ್ಲ, ದೇಶದ ರಾಜಧಾನಿ ದೆಹಲಿಯ ಹೃದಯಭಾಗದಲ್ಲೇ ತನ್ನ ಪೈಶಾಚಿಕ ಕೃತ್ಯವನ್ನು ಎಸಗಬಲ್ಲೆ ಎಂಬುದನ್ನು ತೋರುವ ಮಟ್ಟಿಗೆ ಶಕ್ತಿಶಾಲಿಯಾಗಿದೆ. ಈ ಹಿನ್ನೆಲೆಯಲ್ಲಿ ಎರಡು ವಿಷಯಗಳನ್ನಂತೂ ಸ್ಪಷ್ಟವಾಗಿ ಹೇಳಬಹುದು. ಅದರಲ್ಲಿ ಮೊದಲನೆಯದು; ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವವರೆಗೆ ಇಂತಹ ಹಿಂಸಾಚಾರವನ್ನು, ಅದರ ಹಿಂದಿರುವ ಗೂಂಡಾಗಿರಿ ಪಡೆಯನ್ನು ಬಗ್ಗುಬಡಿಯುವ ನಿಟ್ಟಿನಲ್ಲಿ ದಿಟ್ಟ ಮತ್ತು ತುರ್ತು ಕ್ರಮಗಳನ್ನು ನಿರೀಕ್ಷಿಸಲಾಗದು. ಮತ್ತೊಂದು ವಿಷಯವೆಂದರೆ; ಇತ್ತೀಚಿನ ವರ್ಷಗಳಲ್ಲಿ ಹಲವು ಸಂದರ್ಭದಲ್ಲಿ ಅತಿ ಕ್ರಿಯಾಶೀಲವಾದಂತೆ ವರ್ತಿಸಿರುವ ನ್ಯಾಯಾಂಗ ನಿಜವಾಗಿಯೂ ಕ್ರಿಯಾಶೀಲವಾಗಿ ನಡೆದುಕೊಳ್ಳಬೇಕಾಗಿರುವುದು ಇಂತಹ ವಿಷಯದಲ್ಲಿ ಎಂಬುದು.

ದಿಟ್ಟ ತೀರ್ಪುಗಳು ಮತ್ತು ಸ್ಪಷ್ಟ ನಿರ್ದೇಶನಗಳ ಮೂಲಕ ನಮ್ಮ ನ್ಯಾಯಾಂಗ ಇಂತಹ ವಿಷಯಗಳಲ್ಲಿ ಹೆಚ್ಚು ಕ್ರಿಯಾಶೀಲವಾಗಿರಬೇಕಾದ ಅಗತ್ಯವಿದೆ. ಭಾರತದಲ್ಲಿ ಇಂತಹ ವಿದ್ರೋಹಿ ಸಂಚುಗಳನ್ನು, ಸಾಮೂಹಿಕ ಹಿಂಸೆಯನ್ನು ಇನ್ನು ಮುಂದೆ ಲಘುವಾಗಿ ಪರಿಗಣಿಸಲಾಗದು ಎಂಬ ಸ್ಪಷ್ಟ ಎಚ್ಚರಿಕೆಯನ್ನು ನೀಡುವ ಮೂಲಕ ನ್ಯಾಯಾಂಗ ತನ್ನ ಕ್ರಿಯಾಶೀಲತೆಯನ್ನು ತೋರಿಸಬೇಕಾಗಿದೆ. ಅಷ್ಟಕ್ಕೂ ವಾಸ್ತವವಾಗಿ ಇಂತಹ ಎಲ್ಲಾ ಗೂಂಡಾಗಿರಿ ಮತ್ತು ಸಾಮೂಹಿಕ ಹಿಂಸಾಚಾರಕ್ಕೆ ಕಾರಣ ನಮ್ಮ ನ್ಯಾಯಾಂಗ ವ್ಯವಸ್ಥೆಯೇ ಪರೋಕ್ಷವಾಗಿ, ಕೆಲವೊಮ್ಮೆ ಇಚ್ಛಾಶಕ್ತಿಯ ಕೊರತೆಯಿಂದ ಅಪರಾಧ ವ್ಯವಸ್ಥೆಯನ್ನು ಪೋಷಿಸುತ್ತಿರುವುದೇ ಆಗಿದೆ. ಏಕೆಂದರೆ, ಆಮೆವೇಗದ ನ್ಯಾಯದಾನ ಪದ್ಧತಿಯಿಂದಾಗಿ ನ್ಯಾಯಾಂಗ ವ್ಯವಸ್ಥೆ ಎಂಬುದೇ ಸ್ಥಗಿತಗೊಂಡಂತಾಗಿದೆ. ಹಾಗಾಗಿ ದೇಶದಲ್ಲಿ ಅಪರಾಧಿಗಳು ಮತ್ತು ಗೂಂಡಾಗಳು ತಮ್ಮನ್ನು ಹಿಡಿಯುವವರು ಯಾರೂ ಇಲ್ಲ ಎಂಬ ಸೊಕ್ಕಿನಿಂದ ವ್ಯವಸ್ಥೆಯನ್ನು ಸಂಪೂರ್ಣ ತಮ್ಮ ಹಿಡಿತಕ್ಕೆ ಪಡೆದುಕೊಳ್ಳುವ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಇದು ಈ ದೇಶದ ಹೆಗ್ಗಳಿಕೆಯಾದ ಪ್ರಜಾತಾಂತ್ರಿಕ ಮತ್ತು ಜಾತ್ಯತೀತ ವ್ಯವಸ್ಥೆಗೆ ಎದುರಾಗಿರುವ ದೊಡ್ಡ ಅಪಾಯ!

 

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .