ಇದು ನಮ್ಮ ವಿಶೇಷ ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ದೂರದೂರಿಂದ
 
 

ಫಿಲಿಪ್ಪೀನ್ಸ್: ಬಂಡುಕೋರರು

ಪ್ರತ್ಯೇಕ ರಾಷ್ಟ್ರದ ಬೇಡಿಕೆ ತಿರಸ್ಕೃತ

ಮತ್ತೆ ಹಿಂಸಾಚಾರಕ್ಕೆ ಇಳಿದ ಎಂಐಎಲ್‌ಎಫ್ ಬಂಡುಕೋರರು

ಕೆಲ ದಿನಗಳ ಹಿಂದೆ ಫಿಲಿಪ್ಪೀನ್ಸ್ ಸರ್ಕಾರ 'ಮೊರೊ ಇಸ್ಲಾಮಿಕ್ ಲಿಬರೇಷನ್ ಫ್ರಂಟ್' (ಎಂಐಎಲ್‌ಎಫ್) ಜೊತೆಗಿನ ವಿವಾದಾತ್ಮಕ ಶಾಂತಿ ಒಪ್ಪಂದವೊಂದಕ್ಕೆ ಸಹಿ ಹಾಕಲು ನಿರಾಕರಿಸಿತು. ಇದಕ್ಕೆ ತೀವ್ರ ಪ್ರತಿಭಟನೆ ವ್ಯಕ್ತವಾಗಿದ್ದು, ದೇಶದ ದಕ್ಷಿಣ ಭಾಗದಲ್ಲಿ ನಡೆದ ಭೀಕರ ಹಿಂಸಾಚಾರಕ್ಕೆ ಅನೇಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹನ್ನೊಂದು ವರ್ಷಗಳಿಂದ ಎರಡೂ ಪಕ್ಷಗಳು ಮಾತುಕತೆ ನಡೆಸುತ್ತಿದ್ದ ಶಾಂತಿ ಒಪ್ಪಂದ ಫಲ ನೀಡುತ್ತಿದ್ದಲ್ಲಿ ಮಿನ್‌ಡಾನವೋ ಸುತ್ತಮುತ್ತ ಇರುವ 700ಕ್ಕೂ ಅಧಿಕ ಹಳ್ಳಿಗಳು ಸೇರಿದ ಪ್ರತ್ಯೇಕ ಮುಸ್ಲಿಂ ರಾಷ್ಟ್ರ ನಿರ್ಮಾಣವಾಗುತ್ತಿತ್ತು ಮತ್ತು ಸರ್ಕಾರ ಹಾಗೂ ಮುಸ್ಲಿಂ ಬಂಡುಕೋರರ ನಡುವಿನ 40 ವರ್ಷಗಳಷ್ಟು ಹಳೇ ದ್ವೇಷಕ್ಕೆ ಅಂತಿಮ ಅಧ್ಯಾಯ ಬರೆದಂತಾಗುತ್ತಿತ್ತು.

ಈಗ ಅಲ್ಲಿನ ಪರಿಸ್ಥಿತಿ ನಿಯಂತ್ರಣ ಮೀರಿದೆ. ಆದರೆ ಅಧ್ಯಕ್ಷರ ವಕ್ತಾರೆ ಲೊರೆಲೈ ಫಾಜರ್ಡೋ ಶಾಂತಿ ಒಪ್ಪಂದ ತಿರಸ್ಕರಿಸಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.

"ಪೂರ್ವಜರ ಪ್ರಾಂತದ ಕುರಿತ ಷರತ್ತುಗಳನ್ನೊಳಗೊಂಡ ಒಪ್ಪಂದವನ್ನು ರದ್ದು ಪಡಿಸಿರುವುದು ದುಃಖದ ವಿಚಾರ. ಆದರೆ ಯಾವುದೇ ಒಪ್ಪಂದಕ್ಕಾಗಿ ಎಂಐಎಲ್‌ಎಫ್ ಪಡೆಗಳು ಸಂಘರ್ಷದ ಹಾದಿ ಹಿಡಿದು ಸರ್ಕಾರದ ಮೇಲೆ ಒತ್ತಡ ಹೇರಲು ಅಧ್ಯಕ್ಷರು ಅವಕಾಶ ಕೊಡಲಾರರು" ಎನ್ನುತ್ತಾರೆ ಫಾಜರ್ಡೋ. ಎಂಐಎಲ್‌ಎಫ್ ಪಡೆಗಳ ನೇತಾರರೂ ಭವಿಷ್ಯದಲ್ಲಿ ಸರ್ಕಾರದ ಜೊತೆಗೆ ಇನ್ಯಾವುದೇ ರೀತಿಯ ಮಾತುಕತೆ ನಡೆಸುವುದಿಲ್ಲ ಎಂದಿದ್ದಾರೆ.

ಪ್ರಸ್ತುತ ಹೋರಾಟ ಆಗಸ್ಟ್ 4ರಂದು ಫಿಲಿಪ್ಪೀನ್ಸ್‌ನ ಸುಪ್ರೀಂ ಕೋರ್ಟ್ ನೀಡಿದ ಆದೇಶದ ಪರಿಣಾಮ ಎನ್ನಲಾಗಿದೆ. ಸುಪ್ರೀಂಕೋರ್ಟ್ 'ಷರತ್ತುಗಳನ್ನೊಳಗೊಂಡ ಒಪ್ಪಂದ'ವನ್ನು ತಾತ್ಕಾಲಿಕವಾಗಿ ತಡೆ ಹಿಡಿಯುವ ಆದೇಶ ನೀಡಿತ್ತು. ಇದರಿಂದ ಪ್ರಚೋದನೆಗೊಳಗಾದ ಮುಸ್ಲಿಂ ಬಂಡುಕೋರರು ಸ್ಥಳೀಯ ಕ್ರಿಶ್ಚಿಯನ್ ನಾಗರಿಕರ ಹತ್ಯೆಗೈದದ್ದಲ್ಲದೆ, ಅವರ ಆಸ್ತಿಪಾಸ್ತಿಗಳನ್ನು ಲೂಟಿ ಮಾಡಿ ಮನೆಗಳಿಗೆ ಬೆಂಕಿ ಹಚ್ಚಿದ್ದರು. ಅಧಿಕೃತ ಅಂಕಿ- ಅಂಶಗಳ ಪ್ರಕಾರ ಈ ಹಿಂಸಾಚಾರದಲ್ಲಿ ಸುಮಾರು ಒಂದು ಲಕ್ಷ ಮಂದಿ ಮನೆ- ಮಠ ಕಳೆದುಕೊಂಡಿದ್ದಾರೆ.

ಗಲಭೆಯನ್ನು ನಿಗ್ರಹಿಸಲು ಸರ್ಕಾರ ಈ ಮಾರಣಹೋಮದ ನೇತೃತ್ವ ವಹಿಸಿದ್ದ ಎಂಐಎಲ್‌ಎಫ್ ನಾಯಕರಾದ ಕಾಟೋ ಮತ್ತು ಅಬ್ದುರಹಮಾನ್ ಮಾಕಪಾರ್ ಅವರನ್ನು ಹಿಡಿದು ಕೊಟ್ಟವರಿಗೆ 10 ಮಿಲಿಯ ಫಿಲಿಪ್ಪೀನ್ಸ್ ಡಾಲರ್‌ಗಳ ಬಹುಮಾನ ಘೋಷಿಸಿದೆಯಾದರೂ ಪರಿಸ್ಥಿತಿಯಲ್ಲೇನೂ ಬದಲಾವಣೆಯಾಗಿಲ್ಲ.

'ಮೊರೊ ಇಸ್ಲಾಮಿಕ್ ಲಿಬರೇಷನ್ ಫ್ರಂಟ್' ಮುಸ್ಲಿಂ ಪ್ರತ್ಯೇಕತಾವಾದಿ ಬಂಡುಕೋರ ಸಂಘಟನೆ. ಫಿಲಿಪ್ಪೀನ್ಸ್‌ನ ಬಂಗ್ಸಮೊರೊ ಮತ್ತು ಮಿನ್‌ಡಾನವೋ ಪ್ರಾಂತದ ದಕ್ಷಿಣ ಭಾಗ, ಸುಲು ಅರ್ಖಿಪಿಲಾಗೊ, ಪಲವಾನ್, ಬಾಸಿಲನ್ ಮತ್ತು ಸಮೀಪದ ದ್ವೀಪಗಳಲ್ಲಿ ಕ್ರಿಯಾಶೀಲವಾಗಿದೆ. ಫಿಲಿಪ್ಪೀನ್ಸ್‌ನಲ್ಲಿ ಸುಮಾರು 4.5 ದಶಲಕ್ಷ ಮುಸ್ಲಿಮರಿದ್ದು, ಬಹುತೇಕ ಮಂದಿ ಈ ದ್ವೀಪಗಳಲ್ಲೇ ನೆಲೆಸಿದ್ದಾರೆ. 1960ರ ದಶಕದ ಕೊನೆಯಲ್ಲಿ ಜಬೀದಾ ನರಮೇಧದ ಬಳಿಕ ಆರಂಭವಾದ ಎಂಐಎಲ್‌ಎಫ್, ಕಳೆದ 25 ವರ್ಷಗಳಿಂದ ಪ್ರತ್ಯೇಕ ಮೊರೊ ರಾಷ್ಟ್ರ ನಿರ್ಮಾಣದ ಬೇಡಿಕೆ ಈಡೇರಿಸಲು ಹೋರಾಡುತ್ತಿದೆ. ಸಾಂಸ್ಕೃತಿಕ ಮತ್ತು ಆದರ್ಶಗಳಲ್ಲಿನ ವ್ಯತ್ಯಾಸಗಳಿಂದಾಗಿ ಈಗಾಗಲೇ ಫಿಲಿಪ್ಪೀನ್ಸ್‌ನಲ್ಲಿ ಸಾಕಷ್ಟು ವಿಧ್ವಂಸಕ ಕೃತ್ಯಗಳಾಗಿವೆ ಎನ್ನುವುದು ನಿಜವೇ. ಆದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದೆ ಇದ್ದಲ್ಲಿ ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಆತಂಕ ಸೃಷ್ಟಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಟಿಎಸ್‌ಐ

ಶಶಾಂಕ್ ತ್ರಿಪಾಠಿ

ಜಮೈಕಾ: ಒಲಿಂಪಿಕ್ಸ್ ಯಶಸ್ಸು

ಅಮೆರಿಕ ನಾಗಾಲೋಟಕ್ಕೆ ತಡೆ

ಹಳೇ ಹುಲಿಗಳನ್ನು ಹಿಂದಿಕ್ಕಿದ ಯುವ ಕ್ರೀಡಾಳುಗಳ ಪಡೆ

Farpavilion- The Sunday Indian- Kannada

ಕೆನಡಾದ ಬೆನ್ ಜಾನ್ಸನ್, ಗ್ರೇಟ್ ಬ್ರಿಟನ್‌ನ ಲಿನ್‌ಫೋರ್ಡ್ ಕ್ರಿಸ್ಟೀ ಮತ್ತು ಕೆನಡಾದ ಡೊನೊವನ್ ಬೈಲಿ ನಡುವೆ 100ಮೀ. ಓಟದಲ್ಲಿ ವಿಶ್ವದಾಖಲೆ ಸೃಷ್ಟಿಸಿರುವುದು ಬಿಟ್ಟರೆ ಇನ್ನೇನು ಸಾಮ್ಯತೆ ಇದೆ? ಹೌದು, ಇವರೆಲ್ಲರೂ ಕೆರಿಬಿಯನ್ ದ್ವೀಪದ ಪುಟ್ಟ ದೇಶ ಜಮೈಕಾಗೆ ಸೇರಿದವರು. ಈಗಾಗಲೇ ಜನಜನಿತವಾದಂತೆ ಮೊದಲ ಬಾರಿ ಜಮೈಕಾ ಒಂದು ದೇಶವಾಗಿ ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮೆರೆದಿದೆ ಎಂದು ಹೇಳುವುದು ಸುಲಭ. ಜಾರ್ಜ್ ಹೆಡ್ಲಿ, ಮೈಕೆಲ್ ಹೋಲ್ಡಿಂಗ್, ಕೋರ್ಟ್ನಿ ವಾಲ್ಷ್, ಜೆಫ್ರಿ ಡೂಜನ್ ಮತ್ತು ಜ್ಯಾಕ್ ಹ್ಯಾಂಡ್ರಿಕ್ಸ್, ಅವರಂತಹ ಮಹಾನ್ ಕ್ರಿಕೆಟ್ ಕಲಿಗಳನ್ನು ಕಾಣಿಕೆಯಾಗಿತ್ತ ದೇಶ ಮುಂದೊಂದು ದಿನ ಜಾಗತಿಕ 'ಟ್ರ್ಯಾಕ್ ಆಂಡ್ ಫೀಲ್ಡ್'ನಲ್ಲೂ ಇಂತಹ ಸಾಧನೆ ತೋರಬಲ್ಲದು ಎಂಬುದನ್ನು ಬಹುಶಃ ಯಾರೂ ಊಹಿಸಿರಲಾರರು. ಬೆಂಬಲಿಗರ ಜೊತೆಗೆ ಪ್ರತಿ ಬಾರಿ ಹೀಗಳೆಯುವವರು ಕೂಡಾ ಬೀಜಿಂಗ್ ಒಲಿಂಪಿಕ್ಸ್‌ನ್ನು 'ಜಮೈಕನ್ನರ ಒಲಿಂಪಿಕ್ಸ್' ಎಂದು ಕರೆಯುವಂತಹ ಸಾಧನೆ ಅದು ಮಾಡಲಿದೆ ಎಂದು ಯಾರು ನಿರೀಕ್ಷಿಸಿರಲಾರರು.

ಅಮೆರಿಕನ್ನರ ಸ್ವತ್ತಾಗಿದ್ದ 'ಟ್ರ್ಯಾಕ್ ಆಂಡ್ ಫೀಲ್ಡ್' ವಿಭಾಗ ಈ ಬಾರಿ ಜಮೈಕನ್ನರ ಪಾಲಾಗಿದೆ. ಹೌದು, ಈ ಅಮೋಘ ಸಾಧನೆಯ ಹೀರೋ ಉಸೈನ್ ಬೋಲ್ಟ್. 'ಥಂಡರ್‌ಬೋಲ್ಟ್' ಎಂಬ ತಮ್ಮ ಅನ್ವರ್ಥನಾಮವನ್ನು ವಸ್ತುಶಃ ಸಾಕ್ಷೀಕರಿಸಿದ ಉಸೈನ್ 100 ಮೀ. ಮತ್ತು 200 ಮೀ. ಓಟ ವಿಭಾಗಗಳೆರಡರಲ್ಲೂ ಪ್ರಥಮಸ್ಥಾನ ಪಡೆದಿದ್ದಾರೆ. ಮಾತ್ರವಲ್ಲ, ಈ ದೂರವನ್ನು ದಾಖಲೆ ಸಮಯದಲ್ಲಿ ಕ್ರಮಿಸಿ ಮೈಕೆಲ್ ಜಾನ್ಸನ್ ಅವರ ಹೆಸರಲ್ಲಿದ್ದ ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ. 4x100 ಮೀ. ರಿಲೇ ಓಟದಲ್ಲಿ ಮತ್ತೆ ಜಮೈಕಾ ಚಿನ್ನ ಬಾಚುವಲ್ಲಿ ಯಶಸ್ವಿಯಾಗಲು ಉಸೈನ್ ಪರಾಕ್ರಮವೇ ಅಧಿಕ. ಇದು ಸಾಲದೆಂಬಂತೆ ಜಮೈಕಾ ಮಹಿಳೆಯರೂ ಅಮೆರಿಕದ ಬೆವರಿಳಿಸಿಬಿಟ್ಟರು. 200 ಮೀ. (ಕ್ಯಾಂಪ್‌ಬೆಲ್ ಬ್ರೌನ್ ವೆರೊನಿಕಾ), 100 ಮೀ. (ಫ್ರೇಸರ್ ಶೆಲ್ಲಿ ಆನ್) ಮತ್ತು 400 ಮೀ. ಹರ್ಡಲ್ಸ್‌ನಲ್ಲಿ ಅಮೆರಿಕ ನೆಲಕಚ್ಚುವಂತೆ ಮಾಡಿದರು. ವಿಶ್ವ ಚಾಂಪಿಯನ್ ಆಗಿದ್ದರೂ 100ಮೀ. ಓಟದ ಜಮೈಕಾ ತಂಡದಲ್ಲಿ ಸ್ಥಾನ ಪಡೆದುಕೊಳ್ಳಲು ಜಮೈಕಾ ಓಟಗಾರ ಕ್ಯಾಂಪ್‌ಬೆಲ್ ಬ್ರೌನ್ ವಿಫಲರಾಗಿದ್ದು ಪರಿಗಣಿಸಿದಲ್ಲಿ ಆ ತಂಡದ ಸಾಮರ್ಥ್ಯದ ಆಳ ಅರಿತುಕೊಳ್ಳಬಹುದು.

ಹಾಗಿದ್ದಲ್ಲಿ 2.8 ದಶಲಕ್ಷ ಜನಸಂಖ್ಯೆ ಇರುವ ದೇಶವೊಂದರ ಕ್ರೀಡಾಳುಗಳು ಪ್ರಬಲ ಅಮೆರಿಕದ ನಾಗಾಲೋಟಕ್ಕೆ ತಡೆ ಒಡ್ಡಿದ್ದಾದರೂ ಹೇಗೆ? ಕಾರಣಗಳನ್ನು ಹೇಳುತ್ತಾ ಹೋದರೆ ಪಟ್ಟಿ ಉದ್ದವಾಗಬಹುದು. ಜಮೈಕಾ ತನ್ನ ಕ್ರೀಡಾಳುಗಳನ್ನು ವಿಶ್ವದರ್ಜೆಯ ತರಬೇತಿ ನೀಡಲು ಅಮೆರಿಕಕ್ಕೆ ಕಳುಹಿಸಿ ಕೊಡುತ್ತದೆ. ಜೊತೆಗೆ ಜಮೈಕಾದಲ್ಲೂ ಅಂತಹುದ್ದೇ ತರಬೇತಿ ನೀಡಲಾಗುತ್ತದೆ. ಇತ್ತೀಚೆಗೆ ಹೆಚ್ಚಿನ ಜಮೈಕಾದ ಕ್ರೀಡಾಳುಗಳು ದೇಶದಲ್ಲೇ ಉಳಿಯಲು ಬಯಸುತ್ತಿದ್ದಾರೆ. ಈ ಕ್ರೀಡಾಳುಗಳಿಗೆ ತರಬೇತಿ ನೀಡಿದ ಜಮೈಕಾ ತಾಂತ್ರಿಕ ವಿಶ್ವವಿದ್ಯಾನಿಲಯದ ಕ್ರೀಡಾ ಯೋಜನೆಯ ನಿರ್ದೇಶಕರಾದ ಆಂಥೋನಿ ಡೇವಿಸ್ ಟಿಎಸ್‌ಐ ಜೊತೆ ಮಾತನಾಡುತ್ತಾ, "ನಮ್ಮ ಯೋಜನೆಯೊಂದರಲ್ಲಿ ಪ್ರೌಢಶಾಲಾ ಮಟ್ಟದಲ್ಲಿ ವಿಶಿಷ್ಟ ಪ್ರತಿಭೆ ಮೆರೆದ ಕ್ರೀಡಾಳುಗಳನ್ನು ಎಲ್ಲಾ ವಿಧದ ಕ್ರೀಡಾ ತರಬೇತಿಗೆ ಆಯ್ಕೆ ಮಾಡಲಾಗುತ್ತದೆ. ಪ್ರಸಿದ್ಧಿ ಪಡೆದ ಕ್ರೀಡಾಳುಗಳಿಗಿಂತ ಸಾಮಾನ್ಯ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದೇ ಸುಲಭದ ಕಾರ್ಯ" ಎಂದರು. ಎಳೆವೆಯಲ್ಲಿಯೇ ಪ್ರತಿಭೆ ಗುರುತಿಸುವ ಜಮೈಕಾದ ಕಾರ್ಯ ನಿಜಕ್ಕೂ ಮೆಚ್ಚಿಕೊಳ್ಳಬೇಕಾದದ್ದು.

ಟಿಎಸ್‌ಐ

ಸೌರಭ್ ಕುಮಾರ್ ಶಾಹಿ

ರಷ್ಯಾ: ರಾಜತಾಂತ್ರಿಕ ಸಂಬಂಧ

ಅಮೆರಿಕ-ರಷ್ಯಾ ನಡುವೆ ಮತ್ತೆ ಮೇಲಾಟ

ಶೀತಲ ಸಮರಕ್ಕೆ ಇಂಬು ನೀಡಿದ ಸಿರಿಯಾ-ರಷ್ಯಾ ರಕ್ಷಣಾ ಒಪ್ಪಂದ

Farpavilion- The Sunday Indian- Kannada

ರಷ್ಯಾ ಮತ್ತು ಅಮೆರಿಕ ನಡುವೆ ಅದೊಂಥರಾ ವಿಚಿತ್ರ ಸಂಬಂಧವಿದೆ. ಕಳೆದ ಶತಮಾನದಲ್ಲಿ ರಷ್ಯಾ-ಅಮೆರಿಕ ನಡುವಿನ ರಾಜತಾಂತ್ರಿಕ ಸಂಬಂಧ ಹದೆಗೆಟ್ಟಾಗ ಇಡೀ ಜಗತ್ತಿಗೇ ಅದರ ಬಿಸಿ ತಟ್ಟಿತ್ತು. ಭವಿಷ್ಯದಲ್ಲೂ ಇಂತಹ ಪರಿಸ್ಥಿತಿ ಮುಂದುವರಿಯುವ ಎಲ್ಲಾ ಸೂಚನೆಗಳೂ ಕಾಣಿಸುತ್ತಿವೆ. "ಎರಡು ಬಲಿಷ್ಠ ಆನೆಗಳು ಜಗಳವಾಡಲಿ ಅಥವಾ ಪ್ರೀತಿಸಲಿ ನಲುಗುವುದು ಅವುಗಳ ಕಾಲ ಕೆಳಗಿನ ಹುಲ್ಲು ಮಾತ್ರ" ಎಂಬ ಆಫ್ರಿಕಾದ ನಾಣ್ಣುಡಿ ಶೀತಲ ಸಮರ ಮತ್ತು ನಂತರದ ದಿನಗಳಲ್ಲಿ ಅಮೆರಿಕ ಮತ್ತು ರಷ್ಯಾ ಎಂಬ ಎರಡು ದೈತ್ಯ ರಾಷ್ಟ್ರಗಳ ಸಂಬಂಧ ಮತ್ತು ಅದರ ಜಾಗತಿಕ ಪರಿಣಾಮಕ್ಕೆ ಕನ್ನಡಿ ಹಿಡಿಯುತ್ತದೆ. ಈ ರಾಷ್ಟ್ರಗಳ ಸಂಬಂಧ ಸುಧಾರಿಸಿದ್ದ ಸಂದರ್ಭದಲ್ಲಿ ಚೆಚೆನ್ಯಾ ಮೇಲೆ ರಷ್ಯಾ ಆಕ್ರಮಿಸಿದಾಗ ಅಮೆರಿಕ ಪ್ರತಿಕ್ರಿಯಿಸದೆ ಸುಮ್ಮನಾಗಿತ್ತು. ಈಗ ಅವೆರಡರ ನಡುವಿನ ಸಂಬಂಧ ಹದಗೆಟ್ಟಾಗ ಮತ್ತೊಂದು ಪುಟ್ಟ ರಾಷ್ಟ್ರ ಜಾರ್ಜಿಯಾ ಭಾರೀ ಬೆಲೆ ತೆತ್ತಿದೆ. ಆದರೆ ವಿಷಯ ಇಲ್ಲಿಗೇ ಮುಕ್ತಾಯವಾಗುವ ಯಾವ ಲಕ್ಷಣಗಳೂ ಕಂಡುಬರುತ್ತಿಲ್ಲ. ಬದಲಿಗೆ, ಪರಿಸ್ಥಿತಿ ದಿನೇ ದಿನೇ ವಿಷಮಿಸುತ್ತಿದೆ.

ಕಾಕಾಸಸ್‌ನಲ್ಲಿ ನಡೆದ ಯುದ್ಧವೊಂದರಿಂದ ಎದ್ದ ಜ್ವಾಲೆ ತನ್ನೆಲ್ಲಾ ಪ್ರಖರತೆಯೊಂದಿಗೆ ಮಧ್ಯಪ್ರಾಚ್ಯಕ್ಕೂ ವಿಸ್ತರಿಸುತ್ತಿದೆ. ಸಿರಿಯಾ ಅಧ್ಯಕ್ಷ ಬಷರ್ ಅಲ್ ಅಸದ್ ಶೀತಲ ಸಮರದ ನಂತರ ಪ್ರಾಮುಖ್ಯತೆ ಕಳೆದುಕೊಂಡಿದ್ದ ತನ್ನ ಮತ್ತು ಮಾಸ್ಕೋ ನಡುವಿನ ಯುದ್ಧ ಸಹಕಾರಕ್ಕೆ ಮರುಜೀವ ನೀಡುವ ನಿಟ್ಟಿನಲ್ಲಿ ಮುಂದಡಿ ಇಟ್ಟಿದ್ದಾರೆ. ಸೋಚಿಯಲ್ಲಿ ನಡೆದ ಉಭಯ ರಾಷ್ಟ್ರಗಳ ಅಧ್ಯಕ್ಷರ ಮಾತುಕತೆ ಯುದ್ಧದ ಹಿನ್ನೆಲೆಯಲ್ಲಿ ಪ್ರಾರಂಭವಾಗಿರುವ ಅಂತರ್ ರಾಷ್ಟ್ರೀಯ ಧ್ರುವೀಕರಣವನ್ನು ಸ್ಪಷ್ಟಗೊಳಿಸಿದೆ. ಮಾತುಕತೆ ಮುಖ್ಯವಾಗಿ ಯುದ್ಧ ವಿಮಾನ ವಿರೋಧಿ ಮತ್ತು ಟ್ಯಾಂಕರ್ ವಿರೋಧಿ ಕ್ಷಿಪಣಿ ವ್ಯವಸ್ಥೆಯ ಸಹಕಾರದ ಕುರಿತಾಗಿತ್ತು ಎಂದು ಕ್ರೆಮ್ಲಿನ್‌ನ ಮೂಲವೊಂದು ಟಿಎಸ್‌ಐಗೆ ಸ್ಪಷ್ಟ ಪಡಿಸಿದೆ. ಈ ರಕ್ಷಣಾ ಸಂಬಂಧಿ ಮಾತುಕತೆ ಸಿರಿಯಾ ಮತ್ತು ಇಸ್ರೇಲ್ ನಡುವಿನ ಅಪನಂಬಿಕೆಯನ್ನು ಇನ್ನಷ್ಟು ಹೆಚ್ಚಿಸಿದೆ. ಸಿರಿಯಾ ಅಧ್ಯಕ್ಷರ ಭೇಟಿ ಅಮೆರಿಕ ಪಾಳೆಯದಲ್ಲಿ ಕಸಿವಿಸಿ ಉಂಟು ಮಾಡಿದ್ದು, ಮಿತ್ರ ರಾಷ್ಟ್ರ ಇಸ್ರೇಲ್ ಬಷರ್ ಭೇಟಿಯ ಪರಿಣಾಮಗಳನ್ನು ಎಚ್ಚರಿಕೆಯಿಂದ ವೀಕ್ಷಿಸುತ್ತಿರುವುದಾಗಿ ಹೇಳಿದೆ. ರಷ್ಯಾ ತಯಾರಿಸಿದ ಭೂಮಿಯಿಂದ ಆಕಾಶಕ್ಕೆ ಜಿಗಿಯುವ ಎಸ್-300 ಕ್ಷಿಪಣಿ ಮತ್ತು ಭೂಮಿಯ ಮೇಲೆ ಅತ್ಯಧಿಕ 170 ಕಿ.ಮೀ ಚಿಮ್ಮುವ ಸಾಮರ್ಥ್ಯವುಳ್ಳ ಇಸ್ಕಂದರ್-ಇ ಕ್ಷಿಪಣಿ ಇಸ್ರೇಲಿ ರಕ್ಷಣಾಧಿಕಾರಿಗಳ ನಿದ್ದೆಗೆಡಿಸಿವೆ.

ರಕ್ಷಣಾ ವಿಶ್ಲೇಷಕ ಅಲೆಕ್ಸಾಂಡರ್ ಗೋಲ್ಟ್ಸ್ ಟಿಎಸ್‌ಐ ಜೊತೆ ಮಾತನಾಡುತ್ತಾ, "ಮುಖ್ಯವಾಗಿ ಸಹಕಾರ ಒಪ್ಪಂದ ನಡೆದ ಸಂದರ್ಭವನ್ನು ಗಮನಿಸಬೇಕಿದೆ. ಜಾರ್ಜಿಯಾಕ್ಕೆ ನೈತಿಕ ಬೆಂಬಲ, ಶಸ್ತ್ರಾಸ್ತ್ರಗಳ ಸಹಕಾರ ಹಾಗೂ ಮಿಲಿಟರಿ ತರಬೇತಿ ನೀಡಿದೆ ಎಂಬ ಕಾರಣಕ್ಕೆ ರಷ್ಯಾ ಅಮೆರಿಕ ಕುರಿತು ಕ್ರುದ್ಧಗೊಂಡಿದೆ. ಅಮೆರಿಕ-ಪೋಲಂಡ್ ನಡುವಿನ ಮುರಿದು ಬಿದ್ದ ಕ್ಷಿಪಣಿ ಒಪ್ಪಂದ ಕೂಡ ರಷ್ಯಾದ ನಡೆಗೆ ಪ್ರಚೋದನೆಯಾಗಿರಬಹುದು' ಎನ್ನುತ್ತಾರೆ. ರಷ್ಯಾ ಇದನ್ನು ತಳ್ಳಿ ಹಾಕಿದ್ದು, ಸಿರಿಯಾದೊಂದಿಗಿನ ತನ್ನ ಮಾತುಕತೆಗೂ ಕಾಕಾಸಸ್‌ನಲ್ಲಿನ ಬೆಳವಣಿಗೆಗಳಿಗೂ ಯಾವುದೇ ಸಂಬಂಧವಿಲ್ಲ ಎಂದಿದೆ. ಆದರೆ ಕಾಕಾಸಸ್‌ನಲ್ಲಿ ನಡೆದ 6 ದಿನಗಳ ಯುದ್ಧದಲ್ಲಿ ಅಮೆರಿಕ ಜಾರ್ಜಿಯಾದ ಪ್ಯಾಟ್ರಿಯಾಟ್ ಕ್ಷಿಪಣಿಗಳಿಗೆ ಬ್ಯಾಟರಿ ಸರಬರಾಜು ಮಾಡಿದ್ದು ಜಗತ್ತಿಗೇ ತಿಳಿದ ಸಂಗತಿ.

ಮತ್ತೊಂದೆಡೆ ರಷ್ಯಾ ಸಿರಿಯಾದ ಮೇಲೆ ತನ್ನ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದು, ನೌಕಾ ಪಡೆಗೆ ಸಿರಿಯಾದ 2 ಬಂದರುಗಳ ಸಂಪರ್ಕಕ್ಕೆ ಅವಕಾಶ ನೀಡಬೇಕಾಗಿ ಬೇಡಿಕೆಯಿಟ್ಟಿದೆ. ಅಮೆರಿಕ-ಪೋಲಂಡ್ ನಡುವಿನ ರಕ್ಷಣಾ ಸಂಬಂಧಕ್ಕೆ ಪ್ರತಿಯಾಗಿ ರಷ್ಯಾ ಸಿರಿಯಾಕ್ಕೆ ತನ್ನ ಕ್ಷಿಪಣಿ ತಂತ್ರಜ್ಞಾನ ರವಾನಿಸಿರುವುದಾಗಿ ಈಗಾಗಲೇ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಸಿರಿಯಾದ ನೆಲದಲ್ಲಿ ರಷ್ಯಾ ತನ್ನ ಕ್ಷಿಪಣಿಗಳನ್ನು ನಿಯೋಜಿಸಿದಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಿಡಿಮದ್ದುಗಳ ಸದ್ದು ಕೇಳಿ ಬಂದರೆ ಆಶ್ಚರ್ಯವಿಲ್ಲ.

ಟಿಎಸ್‌ಐ

 ಸೌರಭ್ ಕುಮಾರ್ ಶಾಹಿ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .