ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ದೇಸಿ ದನಿ
 
 

ಹಾಪ್‌ಕಾಮ್ಸ್: ಆಧುನೀಕರಣ

ಬದಲಾವಣೆಯ ಹೊಸ್ತಿಲಲ್ಲಿ ಹಾಪ್‌ಕಾಮ್ಸ್

ಖಾಸಗಿ ಕಂಪನಿಗಳ ತೀವ್ರ ಸ್ಪರ್ಧೆಯ ನಡುವೆ ಗೆಲುವು ಸಾಧ್ಯವೇ?

ಮನೆ ಪಕ್ಕದಲ್ಲೇ ಇರುವ ಹಾಪ್‌ಕಾಮ್ಸ್ ಜಾಗದಲ್ಲಿ ಸಂಪೂರ್ಣ ಹವಾನಿಯಂತ್ರಿತ ಹೈ ಟೆಕ್ ಕಟ್ಟಡವೊಂದು ಸದ್ಯದಲ್ಲೇ ಎದ್ದು ನಿಂತೀತು! ಹಾಗಂತ ಹಾಪ್‌ಕಾಮ್ಸ್‌ಗಳ ಜಾಗದಲ್ಲಿ ಯಾವುದೋ ಶಾಪಿಂಗ್ ಮಾಲ್ ಬರುತ್ತಿದೆ ಅಂದುಕೊಂಡೀರಾ ಮತ್ತೆ! ಹಾಪ್‌ಕಾಮ್ಸ್ (ಹಾರ್ಟಿಕಲ್ಚರಲ್ ಪ್ರೊಡ್ಯೂಸ್ ಕೋ-ಅಪರೇಟೀವ್ ಮಾರ್ಕೆಟಿಂಗ್ ಸೊಸೈಟಿ) ತರಕಾರಿ ಮತ್ತು ಹಣ್ಣಿನ ಅಂಗಡಿಗಳು ಸಂಪೂರ್ಣ ಬದಲಾಗುತ್ತಿವೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಕೊನೆಗೂ ಸ್ಪರ್ಧಾತ್ಮಕ ಮಾರುಕಟ್ಟೆಯ ಯುಗಕ್ಕೆ ತೆರೆದುಕೊಳ್ಳುವತ್ತ ಹಾಪ್‌ಕಾಮ್ಸ್‌ಗಳು ಹೆಜ್ಜೆ ಹಾಕುತ್ತಿವೆ. ಹಣ್ಣು ತರಕಾರಿಗಳನ್ನು ಮಾರುವುದರ ಜೊತೆ ಗ್ರಾಹಕರನ್ನು ಸೆಳೆಯುವ ತಂತ್ರಗಳೂ ಅತ್ಯಗತ್ಯ ಎಂಬುದು ಸರ್ಕಾರಕ್ಕೆ ಮನವರಿಕೆಯಾದಂತಿದೆ!

ಆಗಸ್ಟ್ 12ರಂದು ನಡೆದ ಸಭೆಯಲ್ಲಿ ಈ ವಿಷಯ ತಿಳಿಸಿದ ಮಾಜಿ ತೋಟಗಾರಿಕಾ ಸಚಿವ ಎಸ್.ಕೆ. ಬೆಳ್ಳುಬ್ಬಿ "ರೈತರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಹಾಗೂ ಗ್ರಾಹಕರಿಗೆ ತಾಜಾ ಹಣ್ಣು ತರಕಾರಿಗಳು ಇದು ಹಾಪ್‌ಕಾಮ್ಸ್ ನವೀಕರಣದ ಗುರಿ" ಎಂದರು. ಹಾಪ್‌ಕಾಮ್ಸ್ ಮಾಲೀಕರು ಖುದ್ದಾಗಿ ರೈತರ ಮನೆ ಬಾಗಿಲಿಗೆ ಹೋಗಿ ಉತ್ಪನ್ನಗಳನ್ನು ಖರೀದಿಸುತ್ತಾರೆ. ಅಂದರೆ ಮಧ್ಯವರ್ತಿಗಳಿಗೆ ಇಲ್ಲಿ ಅವಕಾಶವೇ ಇಲ್ಲ. ಹಾಪ್‌ಕಾಮ್ಸ್‌ಗಳಿಗೆ ಸದಸ್ಯರಾಗುವ ಮೂಲಕ ರೈತರು ತಮ್ಮ ಉತ್ಪನ್ನಗಳನ್ನು ಮಾರಬಹುದು. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ ಜಿಲ್ಲೆಗಳಲ್ಲಿ 15,000ದಷ್ಟು ರೈತರು ಸದಸ್ಯರಾಗಿದ್ದರೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವ ಸದಸ್ಯರ ಸಂಖ್ಯೆ 8,000 ಮಾತ್ರ. ಅದಾಗಲೇ ಸರ್ಕಾರ 5 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿಯೂ ಆಗಿದೆ. ಹಾಪ್‌ಕಾಮ್ಸ್‌ನ ಹೊಸ ಬೆಳವಣಿಗೆಯ ಬಗ್ಗೆ ಟಿಎಸ್‌ಐ ಜೊತೆ ಮಾತನಾಡಿದ ತೋಟಗಾರಿಕಾ ಇಲಾಖೆ ನಿರ್ದೇಶಕ ಡಾ. ವಸಂತ್ ಕುಮಾರ್ "ಬದಲಾವಣೆಯ ಜೊತೆಗೆ ಹೆಜ್ಜೆ ಹಾಕುವುದು ಅತ್ಯಗತ್ಯ. ಅದರ ಜೊತೆಗೆ ರೈತರಿಗೂ ಲಾಭವಾಗಬೇಕು. ಹಿಂದೆ ಜನ ಹಣ ಹಾಗೂ ಕೊಂಡುಕೊಳ್ಳುತ್ತಿರುವ ಸಾಮಗ್ರಿಗಳ ಬಗ್ಗೆ ಹೆಚ್ಚು ಜಾಗೃತರಾಗಿದ್ದರು. ಆದರೆ ಈಗ ಉತ್ತಮ ಸಾಮಗ್ರಿಯ ಜೊತೆ ಆಕರ್ಷಕ ಮಳಿಗೆಗಳು ಕೂಡ ಗ್ರಾಹಕರ ಪ್ರಮುಖ ಆಯ್ಕೆ. ಹಲವು ಖಾಸಗಿ ಸಂಸ್ಥೆಗಳು ಅದಾಗಲೇ ಮಾರುಕಟ್ಟೆಯಲ್ಲಿರುವುದರಿಂದ ಸ್ಪರ್ಧೆಗೆ ತೆರೆದುಕೊಳ್ಳುವುದು ಅತ್ಯಗತ್ಯ. ಸ್ಪರ್ಧೆಗೆ ತೆರೆದುಕೊಂಡಾಗಲೇ ಮುಂದುವರಿಯಲು ಸಾಧ್ಯ" ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

300ಕ್ಕೂ ಅಧಿಕವಿರುವ ಹಾಪ್‌ಕಾಮ್ಸ್ ಮಳಿಗೆಗಳನ್ನು ನವೀಕರಿಸಿ, 100 ಹೊಸ ಮಳಿಗೆಗಳನ್ನು ತೆರೆಯುವುದು ಸದ್ಯದ ಯೋಜನೆ. ಅದೇ ಅಲ್ಲದೆ ಮನೆ ಬಾಗಿಲಿಗೆ ಹಣ್ಣು ತರಕಾರಿಗಳನ್ನು ಮಾರಾಟಮಾಡುವ ಹೊಸ ಯೋಜನೆಯೂ ಇಲ್ಲಿದೆ. ರಿಲಯನ್ಸ್ ಮುಂತಾದ ಖಾಸಗಿ ಸಂಸ್ಥೆಗಳು ಅದಾಗಲೇ ಮಾರುಕಟ್ಟೆಯಲ್ಲಿ ಛಾಪು ಒತ್ತಿ, ಗ್ರಾಹಕರನ್ನು ಸೆಳೆದಿರುವಾಗ ಇನ್ನೂ ಅಂಬೆಗಾಲಿಡದ ಹಾಪ್‌ಕಾಮ್ಸ್‌ಗೆ ಇದು ಕೊಂಚ ಕಷ್ಟಸಾಧ್ಯ ಎಂದು ಎನಿಸಬಹುದು. ಹಾಪ್‌ಕಾಮ್ಸ್ ವ್ಯವಸ್ಥಾಪಕ, ಡಿ.ಎಂ. ಸುಬ್ಬಣ್ಣ, "ಖಾಸಗಿ ಮಳಿಗೆಗಳಿಂದ ಹಾಪ್‌ಕಾಮ್ಸ್‌ಗಳಿಗೇನೂ ನಷ್ಟವಾಗಿಲ್ಲ" ಎಂದಿದ್ದರೂ ಹಾಪ್‌ಕಾಮ್ಸ್ ಮಳಿಗೆಗಳ ಬದಲಾವಣೆ ಈ ಕ್ಷಣದ ಅವಶ್ಯಕತೆಯೇ. ಅಲ್ಲದೆ ಅತ್ಯಾಕರ್ಷಕ ಮಳಿಗೆಗಳು, ತಾಜಾ ಹಣ್ಣು ತರಕಾರಿಗಳು, ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡ ಖಾಸಗಿ ಮಳಿಗೆಗಳು ಮಾರುಕಟ್ಟೆಗೆ ಬಂದ ಮೇಲೆ ಹಾಪ್‌ಕಾಮ್ಸ್‌ಗಳಿಗೆ ತೆರಳುವ ಗ್ರಾಹಕರ ಸಂಖ್ಯೆ ಕಡಿಮೆಯಾಗಿದ್ದು ಸುಳ್ಳಲ್ಲ.

ಡಾ. ವಸಂತ್ ಕುಮಾರ್ ಅವರೇ ಹೇಳುವ ಪ್ರಕಾರ ಮಾರುಕಟ್ಟೆಯಲ್ಲಿ ಸರ್ಕಾರಿ, ಖಾಸಗಿ ಕಂಪನಿಗಳ ಆರೋಗ್ಯಕರ ಸ್ಪರ್ಧೆ ಇದ್ದರೆ ಮಾತ್ರ ಸಂಸ್ಥೆ ಬೆಳೆಯಲು ಸಾಧ್ಯ. ಅದರ ಜೊತೆಗೆ ಸ್ಪರ್ಧಾತ್ಮಕ ಮನೋಭಾವ ಗ್ರಾಹಕರಿಗೆ ಉತ್ತಮ ಸಾಮಗ್ರಿಗಳನ್ನು ಒದಗಿಸುವುದರಲ್ಲೂ ಸಹಕಾರಿ.

ಪ್ರಸ್ತುತ ಹಾಪ್‌ಕಾಮ್ಸ್‌ಗಳು ದಿನಕ್ಕೆ 90 ಟನ್ ಹಣ್ಣು ಮತ್ತು ತರಕಾರಿಗಳ ಮಾರಾಟ ಮಾಡುತ್ತವೆ. ಸೋಮವಾರದಂದು ಮಾರಾಟ ಹೆಚ್ಚಿರುವುದರಿಂದ ಅಂದಿನ ಮಾರಾಟ 110 ಟನ್‌ಗಳಿಗೇರುತ್ತದೆ. ಅಲ್ಲದೆ ಹಾಪ್‌ಕಾಮ್ಸ್‌ಗಳು ದಿನಕ್ಕೆ 18ರಿಂದ 20 ಲಕ್ಷದಷ್ಟು ವಹಿವಾಟು ನಡೆಸುತ್ತವೆ. 2007-08ರಲ್ಲಿ ಸುಮಾರು 60 ಕೋಟಿ ರೂಪಾಯಿಗಳ ವಹಿವಾಟು ನಡೆಸಿದ್ದು ನವೀಕರಣದ ನಂತರ ಅದು ದುಪ್ಪಟ್ಟಾಗುತ್ತದೆ ಎಂಬುದು ಇಲಾಖೆಯ ಅಧಿಕಾರಿಗಳ ಅಂಬೋಣ.

ತೋಟಗಾರಿಕಾ ಇಲಾಖೆಯದ್ದು ಶ್ಲಾಘನೀಯ ಪ್ರಯತ್ನವೇ ಆದರೂ ಹಲವು ಖಾಸಗಿ ಕಂಪನಿಗಳು ಮಾರುಕಟ್ಟೆಯಲ್ಲಿ ಯಶೋಗಾಥೆ ಬರೆದು ಅದೆಷ್ಟೋ ದೂರ ಸಾಗಿರುವಾಗ ಸರ್ಕಾರಕ್ಕೆ ಎಚ್ಚರವಾಗಿದ್ದು ಕೊಂಚ ತಡವಾಗಿಯೇ. ಖಾಸಗಿ ಕಂಪನಿಗಳ ನಾಗಾಲೋಟದ ಮುಂದೆ ಹಾಪ್‌ಕಾಮ್ಸ್ ಗೆಲ್ಲುತ್ತದೆಯೇ ಎಂಬ ಪ್ರಶ್ನೆಯ ಉತ್ತರ ಯೋಜನೆ ಎಷ್ಟರಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತದೆ ಎಂಬುದರಲ್ಲಿ ಅಡಗಿದೆ.

ಟಿಎಸ್‌ಐ

ಕೆ. ದಿವ್ಯದರ್ಶಿನ

ರಾಜಸ್ತಾನ: ರಾಜಕೀಯ

ಬಿಎಸ್‌ಪಿ ಕನಸಿಗೆ ನಟವರ್ ಸಾರಥ್ಯ

ಮುಸ್ಲಿಂ ಮತ ಸೆಳೆಯಲೂ ಬಿಎಸ್‌ಪಿ ತಂತ್ರ ರೂಪಿಸಿದೆ

"ದಲಿತರ ಮಹಾನ್ ನಾಯಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನಿಮ್ಮಲ್ಲಿ ಎಷ್ಟು ಮಂದಿ ನೋಡಿದ್ದೀರಿ?"

ರಾಜಸ್ತಾನದಲ್ಲಿ ಆಗಸ್ಟ್ 21ರಂದು ನಡೆದ ಬಹುಜನ ಸಮಾಜ ಪಕ್ಷ(ಬಿಎಸ್‌ಪಿ) ಬೃಹತ್ ಸಮಾವೇಶದಲ್ಲಿ ಭಾಗವಹಿಸಿದ್ದ ಯುವಕರನ್ನು ಕುನ್ವರ್ ನಟವರ ಸಿಂಗ್ ಕೇಳಿದ ಪ್ರಶ್ನೆ ಇದು. 'ಯಾರೂ ನೋಡಿಲ್ಲ' ಎಂಬುದು ನಿರೀಕ್ಷಿತ ಉತ್ತರವಾಗಿತ್ತು. "ನೀವು ನೋಡಿಲ್ಲ, ಆದರೆ ನಾನು ಹಲವು ಬಾರಿ ನೋಡಿದ್ದೇನೆ" ಎಂದು ತುಂಬಿದ ಸಭೆಯಲ್ಲಿ ಸಿಂಗ್ ಅವರು ಹೆಮ್ಮೆಯಿಂದ ಹೇಳಿಕೊಂಡರು. ಅದರ ಜೊತೆಗೆ ಮುಂಬರುವ ರಾಜಸ್ತಾನ ಚುನಾವಣೆಯಲ್ಲಿ ತಾನು ಸ್ಪರ್ಧಿಸುವುದಿಲ್ಲ ಎಂಬುದನ್ನು ಬಹಳ ಸೂಚ್ಯವಾಗಿ ಘೋಷಿಸಿದ ಸಿಂಗ್, ಮುಖ್ಯಮಂತ್ರಿ ಸ್ಥಾನಕ್ಕೆ ತಾನು ಆಕಾಂಕ್ಷಿಯಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದರು. ಇಂತಹ ದಿಟ್ಟ ಹೇಳಿಕೆಗಳ ಮೂಲಕ ತಮ್ಮ ಬಗ್ಗೆ ಬಿಎಸ್‌ಪಿ ಪಕ್ಷದ ಬೆಂಬಲಿಗರಲ್ಲಿ ಆರಂಭದಲ್ಲಿದ್ದ ಅಪನಂಬಿಕೆಗಳಿಗೆ ಇತಿಶ್ರೀ ಹಾಡಿದರು.

ಈ ಕುರಿತು ಟಿಎಸ್‌ಐ ಜೊತೆ ಮಾತನಾಡಿದ ರಾಜ್ಯ ಬಿಎಸ್‌ಪಿ ಕಾರ್ಯದರ್ಶಿ ಧರ್ಮವೀರ್ ಅಶೋಕ್, "ನಟವರ್ ಸಿಂಗ್ ಅವರು ಬಿಎಸ್‌ಪಿ ಪರ ಪ್ರಚಾರ ಮಾಡುತ್ತಿರುವುದರ ಅರ್ಥ ಸಮಾಜದ ಕೆಳವರ್ಗಗಳಷ್ಟೇ ಅಲ್ಲದೆ ಉನ್ನತ ವರ್ಗಗಳೂ ಪಕ್ಷವನ್ನು ಬೆಂಬಲಿಸಲಿದೆ ಎಂದೇ. ಇದರಿಂದ ಪಕ್ಷಕ್ಕೆ ಲಾಭವಾಗಲಿದೆ" ಎನ್ನುತ್ತಾರೆ. ಅಷ್ಟೇ ಅಲ್ಲದೆ ಪಕ್ಷವು ಗುಜ್ಜಾರ್ ಮತ್ತು ಜಾಟ್ ಸಮುದಾಯಗಳು ಹಾಗೂ ಮುಸ್ಲಿಮರನ್ನೂ ಸೆಳೆಯಲು ತಂತ್ರ ರೂಪಿಸಿದೆ.

ರಾಜ್ಯ ಬಿಎಸ್‌ಪಿ ಉಪಾಧ್ಯಕ್ಷರೂ ಆಗಿರುವ ನಟವರ್ ಸಿಂಗ್ ಅವರ ಪುತ್ರ ಜಗತ್ ಸಿಂಗ್ ಅವರು ಟಿಎಸ್‌ಐ ಜೊತೆಗೆ ಮಾತನಾಡಿ, "ದಲಿತ ಯುವಜನರಿಗೆ ಆದ್ಯತೆ ನೀಡುವುದು ಪಕ್ಷದ ಉದ್ದೇಶ. ಬರುವ ಸೆಪ್ಟೆಂಬರ್ ತಿಂಗಳೊಳಗೆ ರಾಜ್ಯ ವಿಧಾನಸಭೆ ಚುನಾವಣೆಗೆ ಒಟ್ಟು 200 ಅಭ್ಯರ್ಥಿಗಳ ಪೈಕಿ 150 ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗುವುದು" ಎಂದಿದ್ದಾರೆ.

ಚುನಾವಣೆಯನ್ನು ಬಿಎಸ್‌ಪಿ ಆತ್ಮವಿಶ್ವಾಸದಿಂದ ಎದುರಿಸಿ, ಜಯಗಳಿಸಬೇಕಾದರೆ, ಪಕ್ಷದ ಮುಂಚೂಣಿ ನಾಯಕರು, ಉನ್ನತ ವರ್ಗದ ಪೊಲೀಸ್ ಅಧಿಕಾರಿಗಳು ಮತ್ತು ಪ್ರಭಾವಿ ರಾಜಕಾರಣಿಗಳಿಂದಾಗಿ ತಮ್ಮೊಳಗೆ ಒಡಮೂಡಿದ ಅವ್ಯಕ್ತ ಅಂಜಿಕೆಯನ್ನು ತೊರೆಯಬೇಕು. ಅದಕ್ಕಾಗಿಯೇ, ಸಿಂಗ್ ಮತ್ತು ಅಶೋಕ್ ಪಕ್ಷದ ವತಿಯಿಂದ ಜಂಟಿ ಸಮಾವೇಶ ಹಮ್ಮಿಕೊಂಡಿದ್ದರು. "ರಾಜಸ್ತಾನದಲ್ಲಿ ಬಿಎಸ್‌ಪಿ ಅಧಿಕಾರಕ್ಕೆ ಬಂದರೆ, ಉತ್ತರ ಪ್ರದೇಶದಲ್ಲಿರುವ ಮಾದರಿಯಲ್ಲೇ ಇಲ್ಲಿಯೂ ಕಾನೂನು ಜಾರಿಗೊಳಿಸಲಾಗುತ್ತದೆ. ಒಂದು ಸಣ್ಣ ದೂರು ನೀಡಿದರೂ ಸಾಕು ಯಾವುದೇ ಜಾತಿ, ಜನಾಂಗದ ಭೇದವಿಲ್ಲದೆ ತಪ್ಪಿತಸ್ಥರಿಗೆ ಶಿಕ್ಷೆ ನೀಡುವಂತಹ ಕಾನೂನು ಅದು" ಎನ್ನುತ್ತಾರೆ.

"ರಾಜ್ಯದಲ್ಲಿ ಇಲ್ಲಿಯವರೆಗೆ ಅದೇಕೆ ಒಬ್ಬ ದಲಿತರೂ ಮುಖ್ಯಮಂತ್ರಿ ಸ್ಥಾನ ಏರಿಲ್ಲ?" ಎಂದು ಪ್ರಶ್ನಿಸುವ ನಟವರ್ ಸಿಂಗ್, "ಈ ಬಾರಿ ಬಿಎಸ್‌ಪಿಗೆ ಮತ ನೀಡಿ ಅಧಿಕಾರದಲ್ಲಿ ನೀವೂ ಭಾಗಿಯಾಗಿ" ಎಂದು ದಲಿತ ಯುವಕರಿಗೆ ಸಲಹೆ ಮಾಡುತ್ತಾರೆ.

"ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡೂ ನಮ್ಮ ಎದುರಾಳಿಗಳು. ಈ ಎರಡೂ ಪಕ್ಷಗಳು ಅನುಕ್ರಮವಾಗಿ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿವೆ. ಆದರೆ ಈ ಬಾರಿ ನಮ್ಮ ಸರದಿ. ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ಹೊಸ ಇತಿಹಾಸ ಸೃಷ್ಟಿಸಲಿದೆ" ಎನ್ನುವುದು ನಟವರ್ ಸಿಂಗ್ ಅವರ ಅಭಿಮತ. ಆದರೆ ಈ ಹೇಳಿಕೆಯನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಎಸ್.ಪಿ. ಜೋಶಿ ಗೇಲಿ ಮಾಡುತ್ತಾರೆ.

"ಅವರದು ಬರೀ ಹಗಲುಗನಸು. ನೋಡುತ್ತಿರಿ, ಚುನಾವಣೆಯಲ್ಲಿ ಕಾಂಗ್ರೆಸ್ ಜಯ ಸಾಧಿಸಲಿದೆ; ಬಿಜೆಪಿ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲಿದೆ" ಎಂದು ಭವಿಷ್ಯ ನುಡಿಯುತ್ತಾರೆ.

ಟಿಎಸ್‌ಐ

ಪ್ರಮೋದ್ ಕುಮಾರ್

ಅಸ್ಸಾಂ: ಚಳವಳಿ

ಅಕ್ರಮ ವಲಸೆ ವಿರುದ್ಧ ಆಂದೋಲನ

ಎಂಟು ಲಕ್ಷ ದಾಟಿದ ಬಾಂಗ್ಲಾದೇಶಿ ಅಕ್ರಮ ವಲಸೆಗಾರರ ಸಂಖ್ಯೆ

ಅಖಿಲ ಅಸ್ಸಾಂ ವಿದ್ಯಾರ್ಥಿಗಳ ಒಕ್ಕೂಟ (ಎಎಎಸ್‌ಯು) 1979ರಲ್ಲಿ ಬಾಂಗ್ಲಾದೇಶದಿಂದ ಅಕ್ರಮವಾಗಿ ನುಸುಳಿದ ವಲಸಿಗರ ವಿರುದ್ಧ ಬೀದಿಗಿಳಿದಾಗ ಅವರ ಪರ ಯಾರೊಬ್ಬರೂ ನಿಲ್ಲಲಿಲ್ಲ. ಬದಲಿಗೆ ಬಹುತೇಕ ರಾಷ್ಟ್ರೀಯ ರಾಜಕೀಯ ಪಕ್ಷಗಳು ಅವರ ಮೇಲೆ 'ಪಕ್ಷಪಾತೀಯ, ರಾಷ್ಟ್ರವಿರೋಧಿ ಮತ್ತು ಕೋಮುವಾದಿ' ಹಣೆಪಟ್ಟಿ ಕಟ್ಟಿದವು. ಆದರೆ ಈಗಿನ ಪರಿಸ್ಥಿತಿಯೇ ಬೇರೆ. ಅಕ್ರಮ ವಲಸಿಗರ ಪರವಾಗಿದ್ದ 1983ರ ಕಾಯ್ದೆಯ ವಿರುದ್ಧ ಇತ್ತೀಚೆಗೆ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ ಮೇಲೆ; ಜೊತೆಗೆ ಗುವಾಹತಿ ಮತ್ತು ದೆಹಲಿ ಹೈಕೋರ್ಟ್‌ಗಳು ಅಕ್ರಮ ವಲಸಿಗರ ವಿರುದ್ಧ ತೀರ್ಪು ನೀಡಿದ ಮೇಲೆ ಎಎಎಸ್‌ಯು ಚಳವಳಿಗೆ ಕಾನೂನು ಬೆಂಬಲ ಸಿಕ್ಕಂತಾಗಿದೆ. ಹೀಗಾಗಿ, 1985ರಲ್ಲಿ ಸ್ಥಗಿತಗೊಂಡಿದ್ದ ವಿದ್ಯಾರ್ಥಿ ಚಳವಳಿ ಮರುಕಳಿಸುವ ಸಾಧ್ಯತೆ ಇದೆ.

"1985ರ ಅಸ್ಸಾಂ ಒಪ್ಪಂದ ಅನುಷ್ಠಾನಗೊಳ್ಳಲು 23 ವರ್ಷ ಕಾದಿದ್ದೇವೆ" ಎನ್ನುತ್ತಾರೆ ಎಎಎಸ್‌ಯು ಸಲಹೆಗಾರ ಸಮುಜ್ಜಲ್ ಭಟ್ಟಾಚಾರ್ಯ. "ಬಾಂಗ್ಲಾದೇಶಿಯರೊಬ್ಬರು ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಲು ನಾವು ಎಂದಿಗೂ ಅವಕಾಶ ನೀಡುವುದಿಲ್ಲ. ಹಾಗಂತ ಪ್ರತಿಭಟನೆಗೆ ಶಸ್ತ್ರಾಸ್ತ್ರಗಳ ಮೊರೆ ಹೋಗಲಾರೆವು. ಚಳವಳಿಯೇ ನಮ್ಮ ಪ್ರತಿಭಟನೆಯ ಏಕೈಕ ಅಸ್ತ್ರ" ಎನ್ನುವುದು ಸಮುಜ್ಜಲ್ ನುಡಿ. ದಿನೇ ದಿನೇ ರಾಜ್ಯದಲ್ಲಿ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚುತ್ತಿರುವುದನ್ನು ಅಂಕಿ-ಅಂಶಗಳೇ ಸ್ಪಷ್ಟಪಡಿಸಿವೆ. ಈ ಕುರಿತು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಪ್ರಕಾಶ್ ಜೈಸ್ವಾಲ್ ಅವರೇ ಅಸ್ಸಾಂನಲ್ಲಿ 5 ದಶಲಕ್ಷ ಅಕ್ರಮ ವಲಸಿಗರಿದ್ದಾರೆ ಎಂದು ಸಂಸತ್ತಿಗೆ ಮಾಹಿತಿ ನೀಡಿದ್ದಾರೆ. ಆದರೆ ಅಸ್ಸಾಂನ ಮಾಜಿ ರಾಜ್ಯಪಾಲ ಎಸ್.ಕೆ. ಸಿನ್ಹಾ ಅವರ ಪ್ರಕಾರ ಅಕ್ರಮ ವಲಸಿಗರ ಸಂಖ್ಯೆ 8 ದಶಲಕ್ಷ ದಾಟಿದೆ.

ಒಂದು ಅಂದಾಜಿನಂತೆ ಬಾಂಗ್ಲಾದೇಶದ 20 ದಶಲಕ್ಷ ಅಕ್ರಮ ವಲಸಿಗರು ದೇಶದಲ್ಲಿ ನೆಲೆಸಿದ್ದಾರೆ. ಒಟ್ಟಾರೆ ಇಡೀ ದೇಶಕ್ಕೆ ಹೋಲಿಸಿದರೆ ಅಸ್ಸಾಂನಲ್ಲಿ ಬಾಂಗ್ಲಾದೇಶಿ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಿದೆ. 1979ರಲ್ಲಿ ಏಕಾಂಗಿಯಾಗಿ ಹೋರಾಟಕ್ಕಿಳಿದಿದ್ದ ಎಎಎಸ್‌ಯು ಪರ ಈ ಬಾರಿ ರಾಜ್ಯದ ವಿವಿಧ ಸಂಘಟನೆಗಳು ಕೈಜೋಡಿಸಿ, ಅಕ್ರಮ ವಲಸಿಗರ ವಿರುದ್ಧ ದನಿ ಎತ್ತಿವೆ.

ಅಕ್ರಮ ವಲಸಿಗರನ್ನು ಪತ್ತೆಹಚ್ಚಿ ಪೊಲೀಸರ ಕೈಗೊಪ್ಪಿಸುವ ಆಂದೋಲನ ರೂಪಿಸಿರುವ 'ಅಸ್ಸಾಂ ಜಾತೀಯತಾಬಾದಿ ಯುವ ಛಾತ್ರ ಪರಿಷತ್' (ಎಜೆವೈಸಿಪಿ) ಸಂಘಟನೆಯ ಮುಖಂಡ ಮನೋಜ್ ಬೌರಾ, "ಅಕ್ರಮ ವಲಸೆ ತಡೆಯಲು ಸರ್ಕಾರ ಸಕಾಲದಲ್ಲಿ ಸೂಕ್ತ ಕ್ರಮ ಕೈಗೊಂಡರೆ, 80ರ ದಶಕದ ಚಳವಳಿ ಪುನರಾವರ್ತಿಸದು" ಎನ್ನುತ್ತಾರೆ. ಅಷ್ಟೇ ಅಲ್ಲ, ಎಎಎಸ್‌ಯು ವಿರೋಧಿ ಧೋರಣೆಯುಳ್ಳ ಅಸ್ಸಾಂನ ಕಾಂಗ್ರೆಸ್ ಸರ್ಕಾರ ಕೂಡ ಅಕ್ರಮ ವಲಸಿಗರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿರುವುದು ವಿಶೇಷ. ಇನ್ನು ಅಸ್ಸಾಂ ಮುಸ್ಲಿಂ ಸಮುದಾಯ ಕೂಡ ಅಕ್ರಮವಾಗಿ ಅಸ್ಸಾಂಗೆ ನುಸುಳಿರುವ ಬಾಂಗ್ಲಾದೇಶಿಗಳ ವಿರುದ್ಧ ಬೀದಿಗಿಳಿಯಲು ಮುಂದಾಗಿದೆ. "ಬಾಂಗ್ಲಾದೇಶಿ ಜನರು ಎಂದಿಗೂ ಅಸ್ಸಾಮಿ ಜನರಾಗಲು ಸಾಧ್ಯವಿಲ್ಲ" ಎನ್ನುತ್ತಾರೆ ಗುವಾಹತಿಯ ಹಿರಿಯ ವಕೀಲ ನೆಕಿಬುರ್ ಝಮಾನ್. ಅಸ್ಸಾಂನಲ್ಲಿ ಬಾಂಗ್ಲಾ ದೇಶದ ಅಕ್ರಮ ವಲಸಿಗರ ವಿರುದ್ಧ ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿರುವಾಗ ನಿರೀಕ್ಷೆಯಂತೆ, ಅಸ್ಸಾಂಯೇತರ 'ಅಲ್ಪಸಂಖ್ಯಾತರ ಸಮುದಾಯ' ಪ್ರಸಕ್ತ ಚಳವಳಿಯ ವಿರುದ್ಧ ದನಿಯೆತ್ತಿದೆ. "1980ರ ಅಸ್ಸಾಂ ಚಳವಳಿ ಸಂಪೂರ್ಣ ವಿಫಲವಾಗಿತ್ತು. ಹೀಗಾಗಿ ಅದು ಮರುಕಳಿಸದು" ಎನ್ನುತ್ತಾರೆ 'ಅಸ್ಸಾಂ ಯುನೈಟೆಡ್ ಡೆಮಾಕ್ರೆಟಿಕ್ ಫ್ರಂಟ್' ಸಂಚಾಲಕ ಮೌಲಾನಾ ಫಜ್ಲೂಲ್ ಕರೀಂ ಕಾಸಿಮಿ.

ಆದರೆ 855 ಎಎಎಸ್‌ಯು ವಿದ್ಯಾರ್ಥಿಗಳನ್ನು ಬಲಿತೆಗೆದುಕೊಂಡ 1980ರ 'ದುರಂತ ಚಳವಳಿ' ಇನ್ನೂ ಜನಮನದಿಂದ ಮಾಸಿಲ್ಲ.

ಟಿಎಸ್‌ಐ

ಮೊನಾಲಿಸಾ ಗೊಗೋಯಿ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .