|
| ಶಂಕರ್ ರಾಯ್
|
ಹಿರಿಯ ರಾಜಕೀಯ ವಿಶ್ಲೇಷಕ |
'ಫಾರ್
ಈಸ್ಟರ್ನ್ ಎಕನಾಮಿಕ್ ರಿವ್ಯೂ'ನ
ಮಾಜಿ ಸಂಪಾದಕ ಫಿಲಿಪ್ ಬೌರಿಂಗ್ ಪ್ರಕಾರ ಭಾರತಕ್ಕೆ ಕ್ರೀಡಾ ಸಂಸ್ಕೃತಿ
ಇಲ್ಲದಿದ್ದರೂ, ಅಥವಾ ಅದು ವೈಯಕ್ತಿಕ ಸ್ಪರ್ಧೆಗಿಂತ ಹಾಕಿ, ಕ್ರಿಕೆಟ್‌ನಂತಹ
ತಂಡದ ಪಂದ್ಯಗಳಿಗೇ ಹೆಚ್ಚು ಮಣೆ ಹಾಕಿದ್ದರೂ, ಫೆಲ್ಪ್ ಪಡೆದ
8 ಚಿನ್ನದ
ಪದಕಗಳು ಮತ್ತು ಭಾರತ ಪಡೆದ ಒಂದು ಚಿನ್ನದ ಪದಕ ಅಸಮರ್ಪಕ ಹಂಚಿಕೆಯಂತೆ ಕಂಡು
ಬರುವುದಿಲ್ಲ. ಬದಲಿಗೆ ಅದು ತಾರಕಕ್ಕೇರಿರುವ ರಾಷ್ಟ್ರೀಯವಾದಿ ಸ್ಪರ್ಧೆಯನ್ನು
ಪ್ರತಿಬಿಂಬಿಸುತ್ತದೆ. ಪದಕ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕು,
ಪ್ರಪಂಚದ ಹಲವೆಡೆ ಚಾಲ್ತಿಯಲ್ಲಿರುವ ಕೆಲವು ಜನಪ್ರಿಯ ಕ್ರೀಡೆಗಳಿಗೆ
ಒಲಿಂಪಿಕ್ಸ್‌ನಲ್ಲಿ ಸ್ಥಾನ ನೀಡಬೇಕು, ಜೊತೆಗೆ ದುಂದುವೆಚ್ಚದ ಸೌಲಭ್ಯವನ್ನು
ಕ್ರೀಡೆಯಿಂದ ಹೊರಗಿಡಬೇಕು ಎಂಬ ಅವರ ಸಲಹೆ ಮೆಚ್ಚತಕ್ಕದ್ದು.
ಒಲಿಂಪಿಕ್ಸ್‌ನಲ್ಲಿ
51 ಚಿನ್ನದ
ಪದಕಗಳನ್ನು ತನ್ನದಾಗಿಸಿಕೊಂಡ ಚೀನಾದ ಸಾಧನೆ ಮತ್ತು ಜಗತ್ತು ಹಿಂದೆಂದೂ
ಕಾಣದಂತಹ ಹೈಟೆಕ್ ಒಲಿಂಪಿಕ್ಸ್ ಕ್ರೀಡಾಕೂಟ ನಡೆಸಿಕೊಟ್ಟು
'ಕ್ರೀಡೋತ್ಸವವನ್ನು
ಹೀಗೂ ಮಾಡಬಹುದು'
ಎಂದು ಜಗತ್ತಿಗೆ ತೋರಿಸಿಕೊಟ್ಟಿದ್ದಕ್ಕೆ
ಚೀನಾ ಕಮ್ಯುನಿಸ್ಟ್ ಪಾರ್ಟಿಯ ಪ್ರಧಾನ ಕಾರ್ಯದರ್ಶಿ ಹು ಜಿಂಟಾಓ ಅವರನ್ನು
ಅಭಿನಂದಿಸಲೇಬೇಕು. ಆದರೆ, ಎಲ್ಲಾ ವೈಭವದ ಪರದೆಯ ಹಿಂದೆ ತನ್ನ ನೆಲದಲ್ಲಿ
ಏಳುವ ಪ್ರತಿಭಟನೆಯ ದನಿ ಅಡಗಿಸಲು ಚೀನಾ ಸರ್ಕಾರ ತೆಗೆದುಕೊಂಡ ಪೈಶಾಚಿಕ
ಕ್ರಮಗಳು ಕಂಡೂ ಕಾಣದಂತಿವೆ. ಸರ್ಕಾರ ಪ್ರತಿಭಟನಾಕಾರರನ್ನು ಹತ್ತಿಕ್ಕಲು
ಸುಸಜ್ಜಿತ ಮತ್ತು ಬಲಿಷ್ಠ ಸೇನೆಯನ್ನು ಬಳಸಿಕೊಂಡಿತ್ತು ಎಂದು ಎಡಪಂಥೀಯ
ವಿಶ್ಲೇಷಕ ಜಾನ್ ಗೋನ್ಸಾಲ್ವೀಸ್ ಅವರು ವಿಷಾದಿಸುತ್ತಾರೆ. ಚೀನಾ
'ಭಯೋತ್ಪಾದನೆ
ವ್ಯಾಪಾರ'ವನ್ನು
ಇಸ್ರೇಲ್‌ನಿಂದ ಪಡೆದುಕೊಂಡಿದೆ ಎಂದು ಅಮೆರಿಕ ಮೂಲದ ರಾಜಕೀಯ ಚಿಂತಕ ಐ.ಕೆ
ಶುಕ್ಲಾ ನನಗೆ ಕಳುಹಿಸಿದ ಇ-ಮೇಲ್‌ನಲ್ಲಿ ಅಭಿಪ್ರಾಯಪಡುತ್ತಾರೆ. ಅಮೆರಿಕದ
ಬೆಂಬಲದೊಂದಿಗೆ 1980ರಲ್ಲಿ
ಪ್ರಾರಂಭವಾದ ಕೊಲಂಬಿಯಾದ ಮೆಡೆಲಿನ್ ಐಲ್ಯಾಂಡ್‌ನಲ್ಲಿರುವ ಮಾದಕವಸ್ತು
ಭಯೋತ್ಪಾದನಾ ಘಟಕ ಈ ವಿಚಾರದಲ್ಲಿ ಚೀನಾಗಿಂತ ಮುಂದಿದೆ ಎಂಬುದು ಬೇರೆ ವಿಷಯ.
29ನೇ
ಒಲಿಂಪಿಕ್ಸ್ ಕ್ರೀಡೆಗಳ ಉದ್ಘಾಟನಾ ಸಮಾರಂಭದ ವೇಳೆ, ಜಾಹೀರಾತು ಫಲಕದ ಮೇಲೆ
'ಸ್ವತಂತ್ರ
ಟಿಬೆಟ್'
ಎಂಬ ಭಿತ್ತಿಪತ್ರ ಪ್ರದರ್ಶಿಸಿದ ಐವರು ವಿದೇಶಿ ಕಾರ್ಯಕರ್ತರನ್ನು ಬೀಜಿಂಗ್
ಗಡಿಪಾರು ಮಾಡಿದೆ. ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ, ಅತ್ಯಾಧುನಿಕ
ಕಣ್ಗಾವಲು ವ್ಯವಸ್ಥೆ ಮತ್ತು 'ಬ್ಯಾರಕ್
ಕಮ್ಯುನಿಸಂ'
ಇವೆಲ್ಲವೂ ತೀರಾ ಢಾಳಾಗಿ ಕಾಣುತ್ತಿದ್ದವು. ತೀವ್ರ ಎಚ್ಚರಿಕೆ ವಹಿಸಲಾಗಿದ್ದ
600
'ಸುರಕ್ಷಿತ'
ನಗರಗಳನ್ನು ಹೊರತು ಪಡಿಸಿ, ಬೀಜಿಂಗ್ ಒಂದರಲ್ಲಿಯೇ ಮೂರು ಲಕ್ಷ ರಹಸ್ಯ
ಕ್ಯಾಮರಾಗಳು ಮತ್ತು ಒಂದು ಲಕ್ಷ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಇದು
ಫ್ಯಾಸಿಸಂನ ಇನ್ನೊಂದು ಮುಖ. ಅಮಿ ಗುಡ್‌ಮನ್ ಅವರಿಗೆ ನೀಡಿದ ಸಂದರ್ಶನದಲ್ಲಿ
ಗೋನ್ಸಾಲ್ವೀಸ್ "ಚೀನಾದ ಆಂತರಿಕ ಸುರಕ್ಷತಾ ಉದ್ಯಮ ವ್ಯವಹಾರ ಮುಂದಿನ
ವರ್ಷದಲ್ಲಿ 33
ಬಿಲಿಯನ್ ಡಾಲರ್‌ನ ಗಡಿ ದಾಟುವ ನಿರೀಕ್ಷೆ ಇದೆ. ಆದರೆ ಇದರ ಫಲಾನುಭವಿಗಳು
ಮಾತ್ರ ಸಿಸ್ಕೋ, ಜನರಲ್ ಎಲೆಕ್ಟ್ರಿಕ್ ಮತ್ತು ಗೂಗಲ್‌ನಂತಹ ಅಮೆರಿಕದ ರಕ್ಷಣಾ
ನಿಧಿ ಮತ್ತು ಸಹಕಾರ ಸಂಸ್ಥೆಗಳು" ಎನ್ನುತ್ತಾರೆ.
ಜನತೆ ಒಂದು ಸಮುದಾಯವಾಗಿ ಬದುಕುತ್ತಾ ಹಸಿವು
ಮತ್ತು ಕ್ಷಾಮಗಳನ್ನು ಎದುರಿಸಲು ಅಕ್ಕಿಯ ಉಂಡೆಗಳನ್ನು ಸಂಗ್ರಹಿಸಿಟ್ಟುಕೊಂಡ
ಮಾವೊತ್ಸೆ ತುಂಗ್‌ನ ಕಾಲವನ್ನು ಮರೆತು ಚೀನಾ ಈಗ ಪ್ರದರ್ಶಿಸುತ್ತಿರುವ
'ಹುಸಿ
ಸಮಾಜವಾದ'ಕ್ಕೆ
ಬೆಂಬಲ ನೀಡಬೇಕಾ? ಕ್ಲೈನ್‌ನ ಪ್ರಕಾರ, ಚೀನಾದ
130 ಮಿಲಿಯನ್ ಜನಸಂಖ್ಯೆಯಲ್ಲಿ
ಹೆಚ್ಚಿನ ಪ್ರಮಾಣದ ಜನ ಅಲ್ಲಿನ ದೊಡ್ಡ ಯೋಜನೆಗಳ ಕಾರಣದಿಂದಾಗಿ
ನಿರ್ವಸತಿಗರಾಗಿದ್ದಾರೆ. ಅವರು ವಿಧಿಯಿಲ್ಲದೇ ಬೀಜಿಂಗ್, ಗ್ವಂಗ್‌ಜೋ ಮತ್ತು
ಶೆಂಜೆನ್ ಮುಂತಾದ ನಗರಗಳಿಗೆ ಗುಳೇ ಹೋಗಿ ಅಲ್ಲಿನ ಆರ್ಥಿಕ ಅನಿಶ್ಚತತೆಯ
ನೆರಳಿನಲ್ಲಿ ತಾತ್ಕಾಲಿಕ ವಲಸಿಗರಾಗಿ ಬದುಕು ಸಾಗಿಸುತ್ತಿದ್ದಾರೆ.
2005ರ
ಒಂದರಲ್ಲಿಯೇ ಸುಮಾರು 87,000
ಗಲಭೆಗಳು, ಪ್ರತಿಭಟನೆಗಳು ನಡೆದಿವೆ ಎಂಬ ಆಶ್ಚರ್ಯಕರ ಅಂಶವೊಂದನ್ನು ಕ್ಲೈನ್
ಹೊರಗೆಡುವುತ್ತಾರೆ. ಸಿಸಿಪಿ ಪಕ್ಷದ ಕಾಂಗ್ರೆಸ್‌ಗೆ
2007ರ
ಅಕ್ಟೋಬರ್‌ನಲ್ಲಿ ಸಲ್ಲಿಸಿದ ತಮ್ಮ 20,000
ಪದಗಳ ವರದಿಯಲ್ಲಿ ಹು ಅವರು ಈ ವಿಚಾರವಾಗಿ ಒಂದೇ ಒಂದು ಶಬ್ದವನ್ನೂ
ಪ್ರಸ್ತಾಪಿಸಿಲ್ಲ ಎನ್ನುವುದು ವಿಪರ್ಯಾಸ.
"ಜನರ ವಲಸೆಯಿಂದ ತೆರವಾದ ಸ್ಥಾನವನ್ನು
ತಂತ್ರಜ್ಞಾನ ತುಂಬುತ್ತಿದೆ. 'ಪೊಲೀಸ್
ಸ್ಟೇಟ್ 2.0'
ನಿಜ ಅರ್ಥದಲ್ಲಿ ಕಾವಲು ವ್ಯವಸ್ಥೆಯನ್ನು ಅಮೆರಿಕದ ಸಂಸ್ಥೆಗಳ ಸಹಕಾರದೊಂದಿಗೆ
ತಾಂತ್ರಿಕವಾಗಿ ಬಲಿಷ್ಠಗೊಳಿಸುವುದೇ ಆಗಿದೆ." ಎಂದು ಕ್ಲೈನ್ ವ್ಯಂಗ್ಯವಾಗಿ
ಹೇಳುತ್ತಾರೆ. ಸಲಕರಣೆಗಳಿಗೋಸ್ಕರವೇ ಚೀನಾ 43
ಬಿಲಿಯನ್ ಡಾಲರ್‌ಗಳನ್ನು ವೆಚ್ಚ ಮಾಡುತ್ತದೆ ಎಂದು ಕ್ಲೈನ್ ಮತ್ತು ಪೇರಂಟಿ
ಹೇಳುತ್ತಾರೆ. ಚೀನಾ ಸರ್ಕಾರಕ್ಕೆ ಧಾರ್ಮಿಕ ಅಂತರ್ಜಾಲ ತಾಣಗಳ ಬಗ್ಗೆ ಕೂಡ
ಅನುಮಾನ. ಅವುಗಳು ಕೂಡ ಸರ್ಕಾರದ ಕಣ್ಗಾವಲಿಗೆ ಒಳಪಡುತ್ತವೆ. ಮನೋರಂಜನೆಯ
ಆಟಗಳು, ಕರೋಕೆ ಬಾರ್‌ಗಳು ಮುಂತಾದ ಸಾರ್ವಜನಿಕ ಸ್ಥಳಗಳು ಕೂಡ ಸರ್ಕಾರದ
ಹದ್ದಿನ ಕಣ್ಣಿನಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ.
ಈ ರೀತಿಯ ಕಣ್ಗಾವಲು ಸಂಪರ್ಕ ಜಾಲದ
ಮೂಲವಿರುವುದು ಚೀನಾದಲ್ಲಿ 1960ರ
ದಶಕದಲ್ಲಿ ನಡೆದ 'ದ
ಗ್ರೇಟ್ ಪ್ರಾಲಿಟೇರಿಯನ್ ಕಲ್ಚರಲ್ ರೆವೊಲ್ಯೂಷನ್'ನಲ್ಲಿ
ಎಂದು ಪೇರೆಂಟಿ ಅಭಿಪ್ರಾಯ ಪಡುತ್ತಾರೆ. ಆದರೆ ಆಗ ದೆಂಗ್ ಪರ ಅಧಿಕಾರಿಗಳನ್ನು
ಜನತೆಯ ಆಕ್ರೋಶದಿಂದ ರಕ್ಷಿಸಲು ಬಳಸಲಾಗಿತ್ತು. ಚೀನಾದ ಆಂತರಿಕ
ಪ್ರಜಾಪ್ರಭುತ್ವ ಅತೀ ಹೆಚ್ಚು ತುಳಿತಕ್ಕೊಳಪಟ್ಟಿದ್ದು ಕಮ್ಯುನಿಸ್ಟ್
ಆಡಳಿತದಲ್ಲಿ ಮತ್ತು ಸಾಂಸ್ಕೃತಿಕ ಕ್ರಾಂತಿಯ ಪರಂಪರೆಯಲ್ಲಿ ಎಂದು ಪೇರೆಂಟಿ
ಹೇಳುತ್ತಾರೆ.
ಪೇರೆಂಟಿ ಪ್ರಕಾರ ಭೂಕಂಪ, ಒಲಿಂಪಿಕ್ಸ್‌ನಂತಹ
ಸಂದರ್ಭಗಳನ್ನು ಬಳಸಿಕೊಂಡು ರಾಷ್ಟ್ರೀಯ ಭಾವನೆಗಳನ್ನು ಹೆಣೆಯುವ ಮೂಲಕ
ಜನತೆಯ ಮನಸ್ಸಿನಲ್ಲಿ ಒಂದು ಬಗೆಯ ರಕ್ಷಣಾ ಮನೋಭಾವವನ್ನು ತುಂಬುವ
ಪ್ರಯತ್ನವನ್ನು ಚೀನಾ ಸರ್ಕಾರ ಮಾಡಿತು. ಆ ಮೂಲಕ ಸ್ಥಳೀಯ ಆಡಳಿತದ ವಿರುದ್ಧ
ಪ್ರತಿಭಟಿಸುತ್ತಿರುವ ಜನರ ಮನಸ್ಸಿನಲ್ಲಿ ಪಾಪಪ್ರಜ್ಞೆಯನ್ನು ಹುಟ್ಟು ಹಾಕುವ
ಪ್ರಯತ್ನವೂ ನಡೆಯಿತು.
ಚೀನಾದ ಗ್ರಾಮಾಂತರ ಪ್ರದೇಶ ತೀರಾ
ಹಿಂದುಳಿದಿದೆ. ಕಳೆದೆರಡು ದಶಕಗಳಿಂದ ಸ್ಥಳೀಯ, ರಾಷ್ಟ್ರೀಯ ಮತ್ತು ವಿದೇಶಿ
ಬಂಡವಾಳಶಾಹಿ ಮೂರೂ ಅಂಶಗಳನ್ನು ಒಳಗೊಂಡ ಹೈಬ್ರಿಡ್ ಟೌನ್‌ಶಿಪ್‌ಗಳು ಮತ್ತು
ಗ್ರಾಮಾಂತರ ಉದ್ಯಮಗಳು ಅತೀ ಕಡಿಮೆ ಸಂಬಳದ ಉದ್ಯೋಗಾವಕಾಶಗಳನ್ನು ಹೆಚ್ಚಿಸಿವೆ.
ಆದರೆ, ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುವ ಅಸಂಖ್ಯಾತ ಬಡ ಜನತೆ ದೊಡ್ಡ
ಪ್ರಮಾಣದ ಕೈಗಾರಿಕೀಕರಣದಿಂದಾಗಿ ತಮ್ಮ ನೆಲೆಗಳನ್ನು ಕಳೆದುಕೊಂಡಿದ್ದು
ಆರ್ಥಿಕ ಅಸ್ಥಿರತೆ, ಅನಿಶ್ಚಿತತೆಯನ್ನು ಅನುಭವಿಸುತ್ತಿದ್ದಾರೆ. ಅದರ ಫಲವಾಗಿ
ಜನತೆಯಲ್ಲಿ ಅಸಮಾಧಾನ ಹೆಚ್ಚುತ್ತಿದೆ. ಕಳೆದ ವರ್ಷ ಕೆಲವು ಹಳ್ಳಿಗಳು ಸಾಲ
ಮನ್ನಾಕ್ಕೆ ಒತ್ತಾಯಿಸಿ ಸರ್ಕಾರಕ್ಕೆ ತೆರಿಗೆ ಪಾವತಿಸಲು ನಿರಾಕರಿಸಿದ್ದರು.
17ನೇ
ಸಿಸಿಪಿ ಸಮಾವೇಶದಲ್ಲಿ ನೀಡಿದ ಭರವಸೆಯಂತೆ ಪಕ್ಷದ ಮುಂದಾಳತ್ವದಲ್ಲಿ ಎಲ್ಲಾ
ಸಮುದಾಯಗಳ ನೇತೃತ್ವದಲ್ಲಿ ಸುಧಾರಣಾ ಪ್ರಕ್ರಿಯೆಗಳು, ಸಮಾಜವಾದಿ ಆಧುನೀಕರಣ...
ಸಮಾಜವಾದಿ ಸಮಾಜವನ್ನು ಬಲಪಡಿಸುವ ಉದ್ದೇಶವನ್ನು ಹೊಂದಿವೆ. ಪೀಪಲ್ಸ್
ರಿಪಬ್ಲಿಕ್‌ನ ಸ್ಥಾಪನೆ, ರಾಷ್ಟ್ರೀಯ ಸ್ವಾಯತ್ತತೆ, ಅಭಿವೃದ್ಧಿ ಮತ್ತು
ಶಕ್ತಿಶಾಲಿ ರಾಷ್ಟ್ರದ ಘನೋದ್ದೇಶಕ್ಕಾಗಿ ಚೀನಾ ಜನತೆ ನಡೆಸಿದ ಹೋರಾಟ ಈಗ
ಸವಕಲು ಮಾತುಗಳಾಗಿಬಿಟ್ಟಿವೆ. ಆಧುನಿಕತೆಯ ಇನ್ನೊಂದು ಮುಖವೆಂಬಂತೆ ಸಮುದಾಯ
ಕೊನೆಯೇ ಇಲ್ಲದ ಸಮಸ್ಯೆಗಳಲ್ಲಿ ನರಳುತ್ತಿದೆ. ಬಂದೂಕಿನ ಸಿದ್ಧ ಉತ್ತರಗಳು
ಮತ್ತು ಪೊಲೀಸ್ ಪಡೆಗಳನ್ನೇ ನೆಚ್ಚಿಕೊಂಡಿರುವ ಚೀನಾ ಸರ್ಕಾರಕ್ಕೆ ಜನತೆಯ
ಅಸಮಾಧಾನಗಳನ್ನು ತಣಿಸುವ ಸಾಮರ್ಥ್ಯವಿದೆಯೇ?
ಟಿಎಸ್‌ಐ |