|
ಎಷ್ಟು ದಿನದಿಂದ ಹೇಳಬೇಕೆಂದರೂ
ಸಾಧ್ಯವಾಗಿರಲಿಲ್ಲ.
ಮಾತನಾಡುವಾಗಲೆಲ್ಲ,
ನಾನು ವಿಚಾರಕ್ಕೆ ಬರುವ ಹೊತ್ತಿಗೆ,
ನೀನು ಎತ್ತೆತ್ತಲೋ ತಿರುಗಿಸಿ ಮಾತಿನ ದಾರಿಯನ್ನೇ
ಬೇರೆ ಮಾಡುತ್ತಿದ್ದೆ.
ನನಗೋ ಏನಾದರೂ ಹೇಳಿದರೆ ಎಲ್ಲಿ ಬೈದು ಬಿಡುತ್ತೀಯೋ ಎಂಬ
ಭಯ ಬೇರೆ.
ಅದೇನೋ ಒಂದು ರೀತಿಯ ಅಳುಕು.
ಈಗ ನೀನು ನನ್ನಿಂದ ದೂರ ಹೋಗಿ ಬದುಕುತ್ತಿದ್ದೀಯ.
ನನಗೋ ಹೇಳಿಕೊಳ್ಳಲೇಬೇಕಾಗಿದೆ.
ಹ್ಞಾಂ,
ಇರಲಿ,
ನೀನು
'ಹೋಗಿದ್ದೇನೆ'
ಎಂದು ತಿಳಿದುಕೊಂಡಿದ್ದೀಯ.
ನನಗಂತೂ ನೀನು ಹೋದ ಮೇಲೆ,
ಅದೇ'Present I
flee you; absent you are near'
ಇನ್ನೂ ಹತ್ತಿರವಾಗಿದ್ದೀಯ.
ಹ್ಞೂಂ,
ಹೇಳಿಬಿಡುತ್ತೇನೆ.
ಅದಕ್ಕಿಂತ ಮುಂಚೆ ನನ್ನಳಲೇನು ಗೊತ್ತೆ:
ನಾನು ಸುಂದರವಾಗಿ ಮೂಡಿಸಿಕೊಂಡ ಕಥೆಯಲ್ಲಿ
ಕೆತ್ತಿಟ್ಟುಕೊಂಡ ನನ್ನ ಪ್ರಫುಲ್ಲ ಯಾವನೋ ಒಬ್ಬನ ಹೆಂಡತಿಯಾಗಿದ್ದಾಳೆ.
ಸಾವಿರ ದೇವರಿಗೆ ಹರಕೆ ಹೊತ್ತು ಕ್ರೋಡೀಕರಿಸಿದ,
ನನ್ನ ಪ್ರೀತಿಯ ಬ್ರೂಣ ಹೊತ್ತಿದ್ದ ನನ್ನ ಕಥೆ
ಬಹಿಷ್ಠೆಯಾದಷ್ಟು ಸುಲಭವಾಗಿ ಸೋರಿಹೋಗಿದೆ.
ಹೀಗಾಗುತ್ತಿರುವುದು ಇದೇ ಮೊದಲಲ್ಲ.
ನಿನಗೆ ಹೇಳದೇ ಎಷ್ಟೋ ಬಾರಿ ಹೀಗಾಗಿದೆ.
ನಿನಗೆ ಹೇಳಿ ಬೈಸಿಕೊಳ್ಳುವುದೇತಕ್ಕೆಂದು ನಾನು
ಎಷ್ಟೋ ಬಾರಿ ಸುಮ್ಮನಾಗಿದ್ದೇನೆ.
ಆದರೆ ಇತ್ತೀಚಿನ ನನ್ನ ಮಹದಾಸೆಗಳನ್ನು ಹೊತ್ತ ಕಥೆ
ಬಹಿಷ್ಠೆಯಾದಷ್ಟು ಸುಲಭವಾಗಿ ಸೋರಿ ಹೋದಾಗ ಗಳಗಳನೆ,
ಒಬ್ಬನೆ ಕುಳಿತು,
ಅತ್ತು ಬಿಟ್ಟೆ.
ಅದನ್ನು ನಾನೇ ಕೂತು ತಿರುಗಾಮುರುಗಾ ಮಾಡಿ ಮಹದಾಸೆ
ಹೊತ್ತು ಕೆತ್ತಿದ್ದೆ.
ಇಲ್ಲ,
ಖಂಡಿತವಾಗಿ ಹೇಳುತ್ತೇನೆ ಕೇಳು,
ನನ್ನ ಹೃದಯದ ತಿಪ್ಪೆಯಲ್ಲೇ ಬಿದ್ದಿದ್ದ
ಗೊಬ್ಬರದಿಂದಾಗಿದ್ದದು.
ಯಾವ ಕೆರೆಯ ಮಣ್ಣನ್ನೂ ತಂದು ನಯವಾಗಿ ಮಾಡಿಟ್ಟಿದ್ದಲ್ಲ.
ಇನ್ನೊಂದು...
ಅಲ್ಲ,
ನಾನೇನಾದರೂ ಬರೆಯುತ್ತೇನೆಂದರೆ ಅದೇತಕ್ಕೆ ನಿನಗೆ
ಅಷ್ಟೊಂದು ಸಿಟ್ಟು?
ನೀನು ಬಳಿಯಲ್ಲಿದ್ದಾಗ ನಾನೆಂದೂ ಈ ಪ್ರಶ್ನೆಯನ್ನು ನಿನಗೆ
ಕೇಳಿಲ್ಲ.
ಈಗಲೂ ನನಗೆ ನಾನೇ ಕೇಳಿಕೊಳ್ಳುತ್ತೇನೆ.
ನೀನು ಉತ್ತರ ಹೇಳುವುದೂ ಬೇಡ.
ಅಲ್ಲ,
ತಪ್ಪು-
ತಪ್ಪು ಭಾವನೆಗಳನ್ನು ಬರೆಯುತ್ತೇನೆ ಅಂತಲೋ?
ಮತ್ತೇನೋ.
ನಾನು ಮಾಡಿದ ತಪ್ಪುಗಳನ್ನು ನಿನ್ನವೇ ಅಂದುಕೊಂಡು
ನೀನು ಪಡುತ್ತಿದ್ದ ವ್ಯಥೆ ನಿನ್ನನ್ನು ಅತೀ ಹತ್ತಿರಕ್ಕೆ ಹೃದಯದಾಳಕ್ಕೆ
ಅಂಟುಹಾಕಿ ಬಿಟ್ಟಿತು.
ಅದೇತಕ್ಕೆ ಹೀಗೆ?
ಹೆಂಡ ಕುಡಿದ ಕೋತಿಯ ತರಹದ ಮನಸ್ಸು ನನ್ನದು.
ಒಂದು ನಿಮಿಷವಿದ್ದದ್ದು ಇನ್ನೊಂದು
ನಿಮಿಷಕ್ಕಿಲ್ಲ.
ಇಷ್ಟೊಂದು ಅವ್ಯವಸ್ತ,
ಅಸ್ತವ್ಯಸ್ತ ಮನುಷ್ಯನ ಜೊತೆ ನಿನಗೆ ಹೇಗೆ ಸಲಿಗೆ
ಬಂತೋ ದೇವರಿಗೇ ಗೊತ್ತು.
ನಿನಗೆ ಹೇಳದಂತೆ ನಾನೊಂದು ಹೊಸ ಕಥೆ ಬರೆದೆ.
ಈಗಲೂ ಹೇಳುತ್ತಿದ್ದೇನೆ,
ಇದು ನನ್ನ ಓದಿನ ಬಿಡುವಿನ ವೇಳೆಯಲ್ಲಿ ಬರೆದದ್ದು.
ಅತೀ ಕಾಡಿದ್ದರಿಂದಲೇ ಬರೆದೆ.
ಸಮಯ ಹಾಳು ಮಾಡಿಕೊಳ್ಳಬೇಡ ಎಂದು ಬೈಯಬೇಡ.
ನಾನು ಈ ಕಥೆಯ ಬಗ್ಗೆ ಆಗಲೇ ನಿನ್ನ ಹತ್ತಿರ
ಮಾತಾಡಿದ್ದೆ.
ಆದರೆ ಕಥೆ ಬರೆಯುತ್ತೇನೆಂದರೆ ನೀನು ಬಾಯಿ
ಮುಚ್ಚಿಸಿಬಿಡುತ್ತಿದ್ದೆಯಾದ್ದರಿಂದ ಯಾರದೋ ಜೀವನದಲ್ಲಿ ನಡೆದ ಘಟನೆಯೆಂಬಂತೆ
ಹೇಳಿದ್ದೆ.
ನೀನೋ ಬಾಯಿಬಿಟ್ಟು ಕೇಳಿಕೊಂಡು
'ಆಗಬಹುದು,
ಜೀವವೆಂದರೆ ತತ್ವಗಳಲ್ಲ,
ಬದುಕಿರುವುದಕ್ಕೆ ಶಕ್ತಿ ಬೇಕು.
ಶಕ್ತಿಯಿದ್ದವನ ತತ್ವಗಳನ್ನು ಎಲ್ಲರೂ
ಒಪ್ಪುತ್ತಾರೆ'
ಅಂತ ಹೇಳಿ,
'ದುನಿಯಾ
ಜುಕ್ತಾ ಹೈ ಜುಕಾನೆವಾಲ ಚಾಹಿಯೆ'
ಅಂತ ಸ್ವಲ್ಪ ಹೆಚ್ಚಿಗೆ ಎನಿಸುವಷ್ಟು ಹೇಳಿದ್ದೆ.
ನೆನಪಿಗೆ ಬಂತಾ?
ಹೌದು,
ಅದೇ ಕಥೆ.
ಅದೇ ಕಾಲೇಜು ಹುಡುಗಿ ಇದ್ದಳು ಅಂತ ಅಂದು ಕಥೆ
ಹೇಳಿದ್ದೆನಲ್ಲ,
ಹ್ಞಾಂ,
ಆ ಹುಡುಗಿಗೆ ನನ್ನ ಕಥೆಯಲ್ಲಿ ನಾನು ಪ್ರೀತಿಯಿಂದ
ಕೊಟ್ಟ ಹೆಸರು ಪ್ರಫುಲ್ಲ.
ನಿನಗೆ ಕಥೆ ಹೇಳುವಾಗ ಸ್ವಲ್ಪ ಕಡಿಮೆ ಹೇಳಿದ್ದೆ.
ಆದರೆ ಬರೆಯುವಾಗ ನನ್ನೆಲ್ಲ ಆಸೆಗಳನ್ನು ತುಂಬಿ
ಕಲ್ಪನೆಗಳನ್ನು ಬೆಸೆದು'ಐಡಿಯಲ್'
ಹುಡುಗಿಯೊಬ್ಬಳಿಗೆ ರೂಪಕೊಟ್ಟಿದ್ದೆ.
ಕಥೆಯಲ್ಲಿ ಮಾತ್ರ ಯಾವುದೇ ಬದಲಾವಣೆಯಿಲ್ಲ.
ಅಂದರೇ ಅದೇ:
ತನ್ನ ತಾಯಿಯ ಅಕ್ರಮ ವ್ಯವಹಾರಗಳನ್ನು ತನ್ನ
ಕಣ್ಮುಂದೇ ನೋಡಿದ ಜೀವನದ ಆ ಭಾವಗಳನ್ನೇ ತೀವ್ರವಾಗಿ ತಿರಸ್ಕರಿಸಿದ,
ಭಾವನಾತ್ಮಕವಾಗಿ ಒಬ್ಬನಿಗೆ ಸೋತ,
ಮಾನವ ಸಹಜ ಸಂಬಂಧಕ್ಕೆ ಹೇಗೋ ತನ್ನನ್ನು ತಾನು
ತೆರೆದುಕೊಂಡ-
ಕೊನೆಗೆ ಅಸಹಾಯಕಳಾಗಿ ಅವನಿಂದ ದೂರವಾಗಿ ಇನ್ನೊಬ್ಬನ ಕೈ
ಹಿಡಿದ-
ನಂತರ ವಿಲವಿಲ ಒದ್ದಾಡಿದಾಕೆಯದು.
ನಿನಗೋ ಇಷ್ಟು ಸವಿಸ್ತಾರವಾಗಿ(!)
ಹೇಳಿದರೂ ಸಾಕು,
ಓಹೋ ನಿನ್ನ ಕಥೆ
'ಮುದಿಯ
ರಾಮಗೌಡ'
ಕವನದಿಂದ ಪ್ರೇರಿತ ಎಂದು ಬಿಡುತ್ತೀ.
ಆದರೆ ನನ್ನನ್ನು ಕಾಡಿದ ಪ್ರಶ್ನೆಯ ಉಗಮ,
ವಿಕಾಸ,
ವ್ಯಾಪ್ತಿಯಲ್ಲೂ,
ಅದರ ಹುಟ್ಟಿಗೆ ಈ ಯಾವುದಕ್ಕೂ ಸಂಬಂಧವಿಲ್ಲವೇ
ಇಲ್ಲ.
ಅಯ್ಯೋ ನಾನೇ ಹೇಳುತ್ತಿದ್ದೇನೆ ನಂಬು.
ನಿನಗೋ ನಾನು ಕಾಪಿ ಹೊಡೆಯುತ್ತೇನೆ ಅಂತ,
ನನಗೋ ನನ್ನ ಪ್ಯೂರ್ ಕಲ್ಪನೆ ಬರೆಯುತ್ತೇನೆ ಅಂತ.
ಇನ್ನೊಂದು ವಿಷಯ ಇಲ್ಲಿಯೇ ಹೇಳಿಬಿಡುತ್ತೇನೆ.
ನಾನೆಂಥ ಸ್ವಾರ್ಥಿ ಕೇಳು:
ನನ್ನ ಪ್ರಫುಲ್ಲ,
ಅಂದರೆ ಕಥೆಯ ಪ್ರಫುಲ್ಲ ಭಾವನಾತ್ಮಕವಾಗಿ
ಮೆಚ್ಚಿಕೊಂಡ ಪಾತ್ರವಿತ್ತಲ್ಲವೇ,
ಅದನ್ನು ನಿಶ್ಚಲವಾಗಿ ಅಮುಖ್ಯವಾಗಿ ಮಾಡಿಕೊಂಡೆ.
ಗಂಡನಾಗಿ ಬರುವ ಪಾತ್ರದಲ್ಲಿ ನಾನೇ ಕೂತೆ.
ನಾನು ಕಣ್ತುಂಬಾ,
ಮನ ತುಂಬಾ ಚಿತ್ರಿಸಿಕೊಂಡ ನನ್ನ ಪ್ರಫುಲ್ಲ
ಕಥೆಯಲ್ಲಿಯೂ ನನ್ನ ಕೈಲೇ ಇರುವಂತೆ ನನ್ನನ್ನು ಭದ್ರಪಡಿಸಿಕೊಂಡೆ.
ಮನುಷ್ಯ ಹಾಗೇ ಅಲ್ಲವೇ,
ತನ್ನ ಕೈಗೆ ಸಿಗುವ ವ್ಯಾಪ್ತಿಯಲ್ಲಿ ಸಿಂಹದಂತೆ
ಅಧಿಕಾರ ಚಲಾಯಿಸುತ್ತಾನೆ.
ಛೇ,
ನನ್ನನ್ನು ನಾನು ಹೀಗೆ ಗುರ್ತಿಸಿಕೊಳ್ಳದಿದ್ದರೇ
ಚೆನ್ನಾಗಿತ್ತು.
ಏನೋ ಹೇಳುವುದಕ್ಕೆ ಹೊರಟೆ,
ಎಲ್ಲಿಗೋ ಹೋಯ್ತು.
ಆದರೆ ಮುಖ್ಯ ವಿಷಯವದಲ್ಲ.
ಕಥೆ ಬರೆದು ಮೂರ್‍ನಾಲ್ಕು ದಿನ ಕಳೆಯಲಿಲ್ಲ,
ಎಂದೂ ಪತ್ರಿಕೆಗಳಲ್ಲಿ ಕಥೆಗಳನ್ನು ಓದದ ನಾನು
ಸ್ನೇಹಿತನೊಬ್ಬನ ಮನೆಗೆ ಹೋಗಿದ್ದಾಗ ಅವನ ಅನುಪಸ್ಥಿತಿಯಲ್ಲಿ
ಕುಳಿತುಕೊಳ್ಳಲೇಬೇಕಾದ್ದರಿಂದ ಪತ್ರಿಕೆಯೊಂದರಲ್ಲಿನ ಕಥೆಯ ಮೇಲೆ
ಕಣ್ಣಾಡಿಸಿದೆ.
ಕಥೆಯ ಮೊದಲ ಪದವೇ ಪ್ರಫುಲ್ಲ ಅಂತ ಪ್ರಾರಂಭವಾದದ್ದರಿಂದ
ಓದತೊಡಗಿದೆ.
ಓದಿದಂತೆ ಓದಿದಂತೆ ಬೆಚ್ಚಿಬಿದ್ದುಬಿಟ್ಟೆ.
ಇದು ಹೇಗೆ ಸಾಧ್ಯ,
ಒಬ್ಬಳೇ ಪ್ರಫುಲ್ಲಳ ಬಗ್ಗೆ ಇಬ್ಬರು ಬರೆಯುವುದು!?
ಇಲ್ಲ ಈಗಲೂ ಹೇಳುತ್ತೇನೆ ಕೇಳು ನಾನು ನನ್ನ
ಕಥೆಯಲ್ಲಿ ಹಿಡಿದಿಟ್ಟಿದ್ದು ನನ್ನ ಸುಪ್ತ ಮನಸ್ಸಿನಲ್ಲಿದ್ದ ನನ್ನ ಅಮೂರ್ತ
ಭಾವ ನನ್ನ ಪ್ರಫುಲ್ಲಳನ್ನ.
ಎರಡು ಕಥೆಗಳಲ್ಲಿ ಒಂದೇ ವ್ಯತ್ಯಾಸ.
ಅವನ ಕಥೆಯಲ್ಲಿ-
ಅವನ ಹೆಸರು ನೆನಪಿಲ್ಲ.
ನೋಡಲಿಲ್ಲ ಅನ್ನು,
ಅವನ ಫೋಟೋ ನೋಡಿದೆ.
ದಪ್ಪ ಕನ್ನಡಕದ ಗಿರಿಜಾಮೀಸೆಯ ನಲ್ವತ್ತರ
ಆಸುಪಾಸಿನವನು-
ಗಂಡನನ್ನು ಸೇರಿದ ಪ್ರಫುಲ್ಲ ವಿಚಲಿತಳಲ್ಲ.
ಆದರೆ ಗಂಡ ಮಾತ್ರ ಮಹಾ ಕೆಡುಕ.
ನಾನು ನನ್ನ ಕಥೆಯಲ್ಲಿ ಗಂಡನ
ಪಾತ್ರದಲ್ಲಿದ್ದುಕೊಂಡು ಬರೆದ ಎಲ್ಲ ಭಾವನೆಗಳೂ ಇಲ್ಲಿ ಅವಳ ಸ್ನೇಹಿತನ
ಗುಣಗಳಾಗಿವೆ.
ರಾಜು ಇವಳೂ ನನ್ನವಳೇ ಪ್ರಫುಲ್ಲ.
ಆದರೆ ನೋಡು,
ನನ್ನ ಸುಡುತ್ತಿರುವ ಭಾವನೆ.
ನಾನು ಸುಂದರವಾಗಿ ಮೂಡಿಸಿಕೊಂಡು ಕಥೆಯಲ್ಲಿ
ಕೆತ್ತಿಟ್ಟುಕೊಂಡ'ನನ್ನ
ಪ್ರಫುಲ್ಲ'
ಯಾವನೋ ಒಬ್ಬನ ಹೆಂಡತಿಯಾಗಿದ್ದಾಳೆ.
ನನ್ನ ಪ್ರಫುಲ್ಲಳ ಎಲ್ಲ ಭಾವನೆಗಳೂ ಬರೆದು
ಪ್ರಕಟಗೊಂಡ ಕಥೆ ಕಣ್ಮುಂದಿರುವಾಗ ನನ್ನೊಳಗಿನ ಪ್ರಫುಲ್ಲ ಸತ್ತೇ ಹೋಗಿದ್ದಾಳೆ!
ಇದಿಷ್ಟೇ ಅಲ್ಲ.
ಕಥೆ ಬರೆಯುವಾಗ ನಾನೊಂದು ವಿಶೇಷತೆಯ ಹೊರಮೈ ಕೂಡ
ಹೊಂದಿಸಿಕೊಂಡಿದ್ದೆ.
ಸಿನಿಮಾ ಸ್ಲೈಡ್ ಮಾದರಿಯಲ್ಲಿ ಸ್ಟಿಲ್ ಷಾಟ್‌ಗಳನ್ನು
ಹಿಡಿದು ಕಥೆ ಹೇಳುವವನ ರೀತಿ.
ಥೇಟ್ ಇದೇ ಹೊರಮೈ-
ಒಂದು ಕೈಯೋ ಕಾಲೋ ಅಳತೆ ಹೆಚ್ಚೂ ಕಡಿಮೆ ಆ
ಗಿರಿಜಾಮೀಸೆಯವನೂ ಬಳಸಿದ್ದಾನೆ.
ಸಂಪೂರ್ಣವಾಗಿ ನಾಶವಾಗಿದ್ದೇನೆ ನಾನು.
ನನ್ನ ಬ್ರೂಣ ಹೊತ್ತಿದ್ದ ಕಥೆ ಬಹಿಷ್ಠೆಯಾದಷ್ಟು
ಸಹಜವಾಗಿ ಎಲ್ಲ ಸೋರಿ ಹೋಗಿದೆ.
ಬೇರೆ ಕಥೆಗಳು ಬರೆಯುವ ಮುನ್ನವೇ ಏನೇನೂ ಆಗಿ
ನಿಲ್ಲುತ್ತಿದ್ದವು.
ಈಗ ಪೂರ್ಣ ಬೆಳೆದು ಕೈಕಾಲು ಮೂಡಿಸಿಕೊಂಡು,
ಪೂರ್ಣ ಪ್ರಮಾಣದ ಆರೋಗ್ಯವಂತ ಮಗುವಾಗಿ ಹೊರಗೆ
ಬರುವ,
ತಾಯಿಯಿಂದ ಬೇರ್ಪಟ್ಟು ತನ್ನ ಅಸ್ತಿತ್ವವನ್ನು
ಜಗತ್ತಿನಲ್ಲಿ ಸ್ಥಾಪಿಸಿಕೊಳ್ಳುವ ಈ ಹೊತ್ತಿನಲ್ಲಿ
'ಹೀಗೆ'
ಗರ್ಭಪಾತವಾಗಬೇಕೆ!
ನನ್ನ ನೋವು ನಿನಗೆ ಅರ್ಥವಾಗುವುದಿಲ್ಲ ರಾಜು.
ನಾನೆಲ್ಲಿ ಬಂಜೆಯಾಗಿ ಬಿಡುತ್ತೇನೋ ಎಂಬ ಭಯ ನನಗೆ.
ನಿನಗೋ ಏನಾದರೂ ಹೇಳಿದರೆ ಬೈಯುವುದು ಬಿಟ್ಟು
ಬೇರೇನೂ ಬರದು.
ಈ ಕಥೆ ಬರೆಯುವುದಕ್ಕೆ ಕಾರಣವಾದ ಮುಖ್ಯ ಘಟನೆ
ನನ್ನ ಜೀವನದಿಂದ ಬಂದದ್ದು ಎಂದರೆ ನಿನಗೆ ಆಶ್ಚರ್ಯವಾಗಬಹುದಲ್ಲವೆ?
ಹೌದು.
ಮೂಲ,
ಮೊದಲ ಪ್ರೇರಕ ಘಟನೆ.
ಅದೇ-
ತಾಯಿಯ ಪಾತ್ರದ ಹೆಂಗಸು ನಡೆಸುವ ಅವ್ಯವಹಾರ.
ಇದೇನು ತನ್ನ ತಾಯಿಯಾದವಳ ಬಗ್ಗೆ ಹೀಗೆಲ್ಲಾ
ಬರೆದುಕೊಳ್ಳುತ್ತಿದ್ದಾನೆ ಅಂದುಕೊಂಡೆಯಾ?
ಇದನ್ನೇ ರಾಜು ನಿನಗೆ ಮೊದಲೇ ಹೇಳಿ,
ನನ್ನನ್ನು ನಿನ್ನ ಹತ್ತಿರ
ಹಂಚಿಕೊಳ್ಳಬೇಕೆಂದಿದ್ದೆ.
ನೀನೋ
'ಬುದ್ಧಿಜೀವಿ'
ನಿನಗೆ ನೀನು ಮಾತನಾಡುವುದು ಬಿಟ್ಟು ಬೇರೆಯವರ ಮಾತಿನ ಲಕ್ಷ್ಯವೇ ಇಲ್ಲ.
ಇದು ಸರಿ ಈ ಪಾತ್ರ ಬಿಡು.
ನಾನೂ ಹಿಂಬದಿಗೆ ಸರಿಸಿದ್ದೆ.
ಅವ್ವ ಬದುಕಿದ್ದಾಗ ಅವಳು ಹೀಗೆ ಹಾದರ
ಮಾಡುತ್ತಿದ್ದಳು ಎಂದು ಕೇಳಿದ್ದೆ.
ಈಗ ಇವಳು ಪ್ರಫುಲ್ಲ
-ಆ ಕಥೆಯಲ್ಲಿ-
ಮಾಡುತ್ತಿರುವುದು ಏನು?
ಗಂಡನನ್ನು ಸೇರಿ ವಿಚಲಿತಳಲ್ಲ ಅಂದರೆ,
ಅವನನ್ನು ಸಂಪೂರ್ಣವಾಗಿ ಒಪ್ಪಿಕೊಂಡಂತಾಗಿ
ಮಾನಸಿಕ ವ್ಯಭಿಚಾರಿಯಾಗಲಿಲ್ಲವೇ!!?
ಛೇ,
ಬಿಡು ಇದನ್ನ.
ಆಗ ಅವ್ವನ ಬಗ್ಗೆ ನನಗೆ ಏನೂ ಅನ್ನಿಸಿರಲಿಲ್ಲ.
ಏನಾದರೂ ಅನ್ನಿಸುವ ಮುಂಚೆ ಆಕೆಯೇ ಕಣ್ಣು
ಮುಚ್ಚಿದ್ದಳಲ್ಲ!
ಇದನ್ನೆಲ್ಲಾ ಮೀರಿ ಅವಳ ಬಗ್ಗೆ ನನ್ನಲ್ಲಿ ನಿರ್ಮಲ
ಅಂತಃಕರಣವಿದೆ.
ರಾಜು,
ಗುಬ್ಬಚ್ಚಿಯಂತೆ ನನ್ನ ಹೃದಯದಲ್ಲಿ ಮನೆ ಮಾಡಿದ್ದ ನನ್ನ
ಪ್ರಫುಲ್ಲ ಇನ್ನೊಬ್ಬನ ಹೆಂಡತಿಯಂದರೆ...
ನನಗೆ ಜಗತ್ತಿನ ಭಯವಿದೆ.
ಯಾಕೋ ಏನೋ ಎಲ್ಲೋ ಒಬ್ಬರ ಜೀವನ ಇನ್ನೊಬ್ಬರ
ಜೀವನದಲ್ಲಿ ಬೆರೆತು ಹೋಗಿದೆ.
ಎಲ್ಲರೂ ಎಲ್ಲೋ ಒಂದು ಕೊಂಡಿಯಿಂದ ಸಿಕ್ಕಿಸಿದ
ಸರಪಳಿಗಳಾಗಿದ್ದೇವೆ,
ಬಿಡಿಸಬರದಾಗಿದ್ದೇವೆ.
ಎನಿಸಿದೆ.
ಈಗ ನಿನ್ನ-
ನನ್ನನ್ನೇ ತಗೊ,
ಇಂಥ ಮಾತುಗಳನ್ನ ಹೇಳಿದರೆ ನೀನು ಬೈಯುತ್ತೀಯೆಂದು
ಗೊತ್ತು.
ಆದರೆ ಈ ಭಯ ತುಂಬಿದ ಮನಸನ್ನು ಯಾರ ಬಳಿ ಬಿಚ್ಚಲಿ?
ರಾಜು ನನ್ನ ಮನಸ್ಸನ್ನು ಅರ್ಥಮಾಡಿಕೊಂಡ
ನಿನ್ನನ್ನು ನನ್ನ ಜೀವಮಾನದಲ್ಲಿ ಬಿಡಲಾರೆ.
ನೀನು ನೂರಾರು ಮೈಲಿ ದೂರದಲ್ಲಿದ್ದರೂ ಸದಾ
ಪಕ್ಕದಲ್ಲಿದ್ದಂತೆಯೇ ಭಾಸವಾಗುತ್ತದೆ ನನಗೆ.
ನನ್ನ ತಪ್ಪುಗಳನ್ನು ನೀನು ತಿದ್ದುತ್ತಿದ್ದ ರೀತಿ
ನನಗೆ ಬಹು ಮೆಚ್ಚಿಗೆ.
ಬಿಡು ನನ್ನ ಕಥೆ ಅಷ್ಟೇ.
ನನ್ನ ಕಲ್ಪನೆ ಬೇರೆಯವರ ಮಾಳಿಗೆಯಲ್ಲಿ ಸೋರುತ್ತದೆ.
ನಾನು ನಿಧಾನಿಸಿ.
ನಿಧಾನಿಸಿ ಅರ್ಧಂಬರ್ಧ ಬರೆಯುವ ಹೊತ್ತಿಗೆ
ಯಾರಾದರೂ ಬರೆದಿರುತ್ತಾರೆ.
ಭಾರಿ ಭಾರವಾಗಿತ್ತು ಮನಸ್ಸು ಅದಕ್ಕೇ ಬರೆದೆ.
ಎಲ್ಲವನ್ನೂ ಬಿಟ್ಟುಬಿಡಬೇಕೆಂದಿದ್ದ ನನಗೆ
ನೀನೆಲ್ಲಿಂದ ಜೊತೆಯಾಗಿದ್ದೆ.
ಹ್ಞಾಂ,
ಹೋದಾಗಿನಿಂದ ಪತ್ರವೇ ಬರೆದಿಲ್ಲ ಬೇಗ ಪತ್ರ ಬರೆ.
ನಿನ್ನ,
ಚಂದ್ರು.
***
ನನ್ನ ಚಂದ್ರು ಕಥೆ ಬರೆಯುವ ನೆಪದಲ್ಲಿ
ಅವನನ್ನೇ ತಿಳಿಸಿದ್ದಾನೆ.
ಮನಸ್ಸನ್ನು ಬಿಚ್ಚುವಾಗ ಈ ಹುಡುಗ ಅದೇಕೆ
ಇಷ್ಟೊಂದು ಹಿಂಜರಿಯುತ್ತಾನೆ.
ಅಂತೂ ಹೇಳಿದ.
ಅಸಹ್ಯ ಪಟ್ಟುಕೊಳ್ಳಲೇ ಕೂಡದ,
ಹೆಮ್ಮೆ ಪಡಲಾರದ,
ಸುಮ್ಮನಿರಲಾರದ ಭಾವನೆಯನ್ನು ಎಷ್ಟು ಚೊಕ್ಕಟವಾಗಿ
ಬಣ್ಣ ಕಲಸಿ-
ಬೇರ್ಪಡಿಸಿ ಪತ್ರದಲ್ಲಿ ಹೇಳಿದ್ದಾನೆ.
ಭೂತ-ವರ್ತಮಾನಗಳನ್ನಂತೂ
ಕಲಸಿಬಿಟ್ಟಿದ್ದಾನೆ.
ಅವನ ಹಿಂದಿನ ಜೀವನದ ಬಗ್ಗೆ ಏನಾದರೂ ಹೇಳಲೇ?
ನೀನೆಷ್ಟೇ ಮುಚ್ಚಿಟ್ಟರೂ ನಿನ್ನ ಪ್ರಫುಲ್ಲ ನನಗೆ
ಗೊತ್ತಾಗಿದ್ದಳು ಅನ್ನಲೇ?
ಹುಚ್ಚಪ್ಪ ಜೀವನ ಅಂದರೆ ನಿನಗೆ ಗೊತ್ತಿರುವುದಷ್ಟೇ
ಅಲ್ಲ,
ಕಣ್ಣು ಬಿಟ್ಟು ನೋಡು ಅನ್ನೋಣವೇ?
ಅವನ ಈ ಪರಿಸ್ಥಿತಿಯಲ್ಲಿ ಬೇಡ.
ನನ್ನ ಚಂದ್ರು ನಾನು ಇಬ್ಬರೇ ಇರಬಹುದಾದ ಒಂದು
ಜಾಗ ಸಿಕ್ಕರೆ?
ಅವನ ಪ್ರಫುಲ್ಲಳೂ ಬರಲಿ ಬೇಕಾದರೆ...
ಛೆ,
ಛೇ...
ಏನಿದು ಅಸಂಬದ್ಧ ಯೋಚನೆ!
ಅವನ ಪತ್ರ ಓದಿ ಸುಮ್ಮನೆ ಕುಳಿತು ಯೋಚಿಸಿದೆ.
ನಾನು ನನ್ನ ಚಂದ್ರುಗೆ ಕೆಲವೇ ಸಾಲು ಪತ್ರ ಬರೆದೆ:
ಪ್ರೀತಿಯ ಚಂದ್ರು,
ನನ್ನನ್ನು ಕ್ಷಮಿಸು.
ಚಂದ್ರು ನಿನ್ನ ಮನಸನ್ನು ಪತ್ರದ ಮೂಲಕ
ಅರಿಯುವಂತಾಗಿದ್ದಕ್ಕೆ ಕ್ಷಮೆಯಿರಲಿ.
ನಾನೊಬ್ಬ ಬಾಯಿಬಡುಕ.
ನೀನು ಪ್ರತೀ ಬಾರೀ ಏನಾದರೂ ಬರೆದಾಗಲೂ ನನ್ನ
ಚಂದ್ರು ದೊಡ್ಡದು,
ಉತ್ತಮವಾದದ್ದನ್ನು ಬರೆಯಬೇಕೆಂಬುದೇ ನನ್ನ
ಬಯಕೆಯಾಗಿದ್ದರಿಂದ ಹಾಗೆ ನಿನಗೆ ಅನ್ನುತ್ತಿದ್ದೆ.
ಮನಸ್ಸು ಎಲ್ಲದಕ್ಕೂ ಬಲಿಯಬೇಕು ನೋಡು.
ನಿನ್ನ ಕಥೆ ಈ ಬಾರಿ ಬಹಿಷ್ಠೆಯಾದದ್ದೇ ಸರಿ.
ನಿನ್ನ ಜೀವನ ಇನ್ನೊಬ್ಬನ ಕೈಲಿ ಓದುವ
ಕಥೆಯಾಗುವುದು ನನಗಂತೂ ಸುತಾರಾಂ ಇಷ್ಟವಿಲ್ಲ.
ಸದ್ಯದ ದಿನಗಳಲ್ಲೇ ನಿನ್ನನ್ನು ಖುದ್ದು
ಭೇಟಿಯಾಗುತ್ತೇನೆ.
ಪ್ರೀತಿಯಿಂದ,
ರಾಜು.
ಟಿಎಸ್‌ಐ
|