|

ಆ ಕಳಾಹೀನ ಮುಖದಲ್ಲೇ ಆಕೆ ಗಂಭೀರವಾದ
ಸಮಸ್ಯೆಯ ಸುಳಿಗೆ ಸಿಲುಕಿದ್ದರ ಲಕ್ಷಣ ಗೋಚರಿಸುತ್ತಿತ್ತು .
37
ವರ್ಷದ ರಜನಿ ನಮ್ಮೊಂದಿಗೆ ತಡವರಿಸುತ್ತಲೇ ಮಾತನಾಡಿದರು.
ಒಂದು ಫೋಟೋ ತೆಗೆದುಕೊಳ್ಳುವುದಾಗಿ ಹೇಳಿದಾಗಲಂತೂ
ಅವರು ಜೋರಾಗಿ ಅಳತೊಡಗಿದರು.
ಫೋಟೋ ಇರಲಿ ನಮ್ಮ ಜೊತೆ ಮಾತನಾಡುವಂತೆ ಅವರನ್ನು
ಒಪ್ಪಿಸುವುದೇ ದುಸ್ತರವಾಯಿತು.
ಕುಖ್ಯಾತ ಅಪರಾಧಿಗಳನ್ನು ಬಂಧಿಸಿಡುವ ಚೆನ್ನೈನ
ಸರ್ಪಗಾವಲಿನ ಜೈಲಿನಲ್ಲಿ ಇತ್ತೀಚೆಗೆ ರಜನಿ
21 ದಿನ ಕಳೆದು
ಬಂದಿದ್ದರು.
ಆದರೆ ಅವರ ವಕೀಲರ ಪ್ರಕಾರ ರಜನಿ
'ಅಂಧ'
ಕಾನೂನು ವ್ಯವಸ್ಥೆಯ ಬಲಿಪಶು.
ಪೊಲೀಸರು ಮತ್ತು ಸಿಟಿ ಮ್ಯಾಜಿಸ್ಟ್ರೇಟರು
ಬ್ಯಾಂಕ್‌ಗಳ ಅನಧಿಕೃತ ಸಾಲ ವಸೂಲಿಗಾರರಂತೆ ವರ್ತಿಸಿದ್ದರ ಪರಿಣಾಮ ಅದು.
ಮದ್ರಾಸ್ ಹೈಕೋರ್ಟ್ ಸಕಾಲದಲ್ಲಿ ಮಧ್ಯೆ
ಪ್ರವೇಶಿಸಿದ್ದರಿಂದಾಗಿ ಅವರು ಬಿಡುಗಡೆ ಹೊಂದಿ ಹೊರಬಂದರು.
ಏಳು ವರ್ಷದ ಮಗನ ಭವಿಷ್ಯ ರೂಪಿಸುವ ಹೊಣೆ
ಹೊತ್ತ ತಾಯಿ ರಜನಿ ಅವರ ಈ ಪ್ರಕರಣ ಎಂಥವರನ್ನೂ ಗಾಬರಿಗೀಡು ಮಾಡುವಂಥದು .
ದೇಶದ ಕಾನೂನುಗಳು,
ರಿಸರ್ವ್ ಬ್ಯಾಂಕ್‌ನ ನಿಯಮಾವಳಿ ಮಾತ್ರವಲ್ಲ
ಕನಿಷ್ಠ ಸೌಜನ್ಯವನ್ನೂ ಮೀರಿ ಬ್ಯಾಂಕ್‌ಗಳು ಹೇಗೆ ಕೆಟ್ಟದಾಗಿ ವರ್ತಿಸುತ್ತವೆ
ಎಂಬುದಕ್ಕೆ ಉದಾಹರಣೆಯೇ ಈ ಪ್ರಕರಣ.
ಬ್ಯಾಂಕ್‌ಗಳು,
ಪೊಲೀಸರು ಮತ್ತು ಮ್ಯಾಜಿಸ್ಟ್ರೇಟರ ನಡುವಿನ ಇಂತಹ
'ಹೊಂದಾಣಿಕೆ'
ಕಾನೂನು ಅರಾಜಕತೆಗೆ ಕಾರಣವಾಗುತ್ತದೆ ಎಂದು ಚೆನ್ನೈ ಹೈಕೋರ್ಟ್ ಆತಂಕ
ವ್ಯಕ್ತಪಡಿಸಿರುವುದು ಸಕಾಲಿಕ.
ರಜನಿಯ ಪತಿ ರವಿ ಚೆನ್ನೈನಲ್ಲಿ ಒಂದು
ಕನ್ಸಲ್ಟೆನ್ಸಿ ಏಜೆನ್ಸಿ ನಡೆಸುತ್ತಿದ್ದರು .
2006ರಲ್ಲಿ
ದುರದೃಷ್ಟವಶಾತ್ ಕಾಯಿಲೆಗೆ ತುತ್ತಾದ ಅವರು ಮೃತಪಟ್ಟರು.
ಅಕಾಲಿಕ ವೈಧವ್ಯಕ್ಕೆ ತುತ್ತಾದ ರಜನಿ ಸಣ್ಣ
ಮಗುವಿನೊಂದಿಗೆ ತನ್ನ ಸಹೋದರನ ಆಶ್ರಯ ಪಡೆಯಬೇಕಾಯಿತು.
ಆದರೆ ಕೆಲವೇ ದಿನಗಳಲ್ಲಿ ಎಬಿಎನ್ ಆಮ್ರೋ ಬ್ಯಾಂಕ್‌ನ
ನುಂಗಂಬಾಕಂ ಶಾಖೆಯಿಂದ ಆಕೆಗೊಂದು ಪತ್ರ ಬಂತು.
ಮೃತ ರವಿ ಖಾತೆಯಲ್ಲಿ ಮ್ಯೂಚುವಲ್ ಫಂಡ್‌ನಿಂದ
ಗಳಿಸಿದ 16
ಲಕ್ಷ ರೂ.
ಬಾಕಿ ಇರುವುದಾಗಿ ಅದರಲ್ಲಿ ಮಾಹಿತಿ ಇತ್ತು.
ರಜನಿಯ ಹತಾಶ ಬದುಕಿನಲ್ಲೊಂದು ಆಶಾಕಿರಣ
ಚಿಮ್ಮಿದಂತಾಯಿತು;
ಸುಭದ್ರ ಜೀವನ,
ಮಗನ ವಿದ್ಯಾಭ್ಯಾಸ ಸಮಸ್ಯೆಯೆಲ್ಲಾ ಒಮ್ಮೆಲೇ
ಮಾಯವಾದಂತಾಯಿತು.
ಬ್ಯಾಂಕ್‌ನ ಸಲಹೆಯಂತೆ ತಾನೇ ಮೃತ ರವಿಯ ವಾರಸುದಾರ ಪತ್ನಿ
ಎಂಬುದಕ್ಕೆ ದಾಖಲೆ ಸಲ್ಲಿಸಿದರು.
ಆಕೆಗೆ ಹಣ ಪಾವತಿ ಮಾಡಲು ಬ್ಯಾಂಕ್ ಆರು ತಿಂಗಳ
ಅವಧಿ ತೆಗೆದುಕೊಂಡಿತು.
ಅಷ್ಟರಲ್ಲಿ ಬಾಕಿ ಹಣ ರೂ.22
ಲಕ್ಷಕ್ಕೇರಿತ್ತು.
ಈ ಹಣದಲ್ಲಿ ಒಂದಷ್ಟು ಸಾಲ ಬಾಕಿ ತೀರಿಸಿದ ಆಕೆ ಸುಭದ್ರ
ಜೀವನಕ್ಕೆ ಏನು ಮಾಡಬೇಕೆಂದು ಚಿಂತಿಸುತ್ತಿರುವಾಗಲೇ ಬರಸಿಡಿಲಿನಂತೆ ಬ್ಯಾಂಕ್‌ನ
ಮತ್ತೊಂದು ಆದೇಶ ಬಂದು ಅಪ್ಪಳಿಸಿತು!
ರಜನಿಗೆ ಹಣ ಬಿಡುಗಡೆ ಮಾಡಿ ಒಂದು ತಿಂಗಳಾದ
ಮೇಲೆ ತಾನು ಮಾಡಿದ ತಪ್ಪು ಎಬಿಎನ್ ಆಮ್ರೋ ಬ್ಯಾಂಕ್‌ಗೆ ಅರಿವಾಯಿತು .
ರಜನಿಗೆ ನೀಡಲಾದ ಹಣ ಅವರ ಮೃತ ಪತಿ
ರವಿಯದ್ದಾಗಿರದೆ ಅದೇ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದ ಮತ್ತೊಬ್ಬ
ರವಿಯದ್ದಾಗಿತ್ತು.
ಆದರೆ ಬ್ಯಾಂಕ್ ಮಾಡಿದ ಈ ತಪ್ಪಿಗೆ ಯಾರು ಹೊಣೆ?
ಬ್ಯಾಂಕ್ ಅಧಿಕಾರಿಗಳ ಪ್ರಕಾರ ಹಣ ಪಡೆದ ರಜನಿ!
ಹೀಗಾಗಿ ತಡ ಮಾಡದೆ ರಜನಿ ವಿರುದ್ಧ ನುಂಗಂಬಾಕಂ
ಪೊಲೀಸ್ ಠಾಣೆಗೆ ಬ್ಯಾಂಕ್ ದೂರು ನೀಡಿತು.
"ನನ್ನನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ
ಕರೆದೊಯ್ಯಲಾಯಿತು.
ಇದು ನನ್ನ ಪತಿಯ ಹಣವಲ್ಲ ಎಂಬುದಕ್ಕೆ ದಾಖಲೆ ತೋರಿಸಿ ಎಂದೆ;
ನನ್ನ ಬಳಿ ಪೂರ್ತಿ ಹಣ ಇಲ್ಲವೆಂದೆ;
ಆದರೆ ಅವರಿಗೆ ನನ್ನ ಮಾತು ಕೇಳುವ
ವ್ಯವಧಾನವಿರಲಿಲ್ಲ.
ನನ್ನಲ್ಲಿದ್ದ ಬಾಕಿ ಹಣ ೯.೯೮
ಲಕ್ಷ ರೂ.
ಹಿಂದಿರುಗಿಸುವಂತೆ ಒತ್ತಾಯದಿಂದ ಚೆಕ್‌ಗೆ ಸಹಿ
ಹಾಕಿಸಿಕೊಳ್ಳಲಾಯಿತು.
ಈ ಮುನ್ನ ಬ್ಯಾಂಕ್ ನನ್ನೊಂದಿಗೆ ಮಾಡಿದ್ದ ಪತ್ರ
ವ್ಯವಹಾರದ ದಾಖಲೆಗಳನ್ನೆಲ್ಲಾ ನನ್ನಿಂದ ಒತ್ತಾಯವಾಗಿ ಕಸಿದುಕೊಳ್ಳಲಾಯಿತು.
ಆನಂತರ ಉಳಿದ ಹಣ ನೀಡುವಂತೆ ಬ್ಯಾಂಕ್ ಮತ್ತು
ಪೊಲೀಸರು ಪದೇ ಪದೇ ಪೀಡಿಸಲಾರಂಭಿಸಿದರು.
ಸ್ವಲ್ಪ ಕಾಲಾವಕಾಶ ನೀಡುವಂತೆ ಕೇಳಿಕೊಂಡರೂ
ಒಪ್ಪದೇ ಕೂಡಲೇ ಹಣ ನೀಡುವಂತೆ ಒತ್ತಾಯಿಸತೊಡಗಿದರು..."
ಬ್ಯಾಂಕ್ ದೌರ್ಜನ್ಯದ ಕಥೆಯನ್ನು ರಜನಿ ಹೀಗೆ
ಹೇಳುತ್ತಲೇ ಹೋಗುತ್ತಾರೆ.
ಬ್ಯಾಂಕ್ ಮತ್ತು ಪೊಲೀಸರ ಕಾಟ ತಡೆಯಲಾರದೆ
ರಜನಿ ಹೈಕೋರ್ಟ್ ಮೊರೆ ಹೋದರು .
ಹೈಕೋರ್ಟ್ ಆಕೆಗೆ ನಿರೀಕ್ಷಣಾ ಜಾಮೀನು
ಮಾತ್ರವಲ್ಲದೆ ಬಾಕಿ ಹಣ ಪಾವತಿಗೆ ಕಾಲಾವಕಾಶ ನೀಡುವಂತೆಯೂ ಆದೇಶ ನೀಡಿತು.
ಆದರೆ ಹೈಕೋರ್ಟ್ ಆದೇಶವನ್ನೂ ಉಲ್ಲಂಘಿಸುವ
ಉದ್ಧಟತನಕ್ಕೆ ಬ್ಯಾಂಕ್ ಮುಂದಾಯಿತು.
ರಜನಿಗೆ ಹಣ ಪಾವತಿಸಲು ಕಾಲಾವಕಾಶ ನೀಡಿದ್ದರಿಂದ
ಅಪರಾಧ ಸಂಹಿತೆಯ 156(3)
ಸೆಕ್ಷನ್ ಅನುಸಾರ ಬ್ಯಾಂಕ್ ನಗರ ನ್ಯಾಯಾಧೀಶರ
(ಸಿಟಿ
ಮ್ಯಾಜಿಸ್ಟ್ರೇಟ್)
ಬಳಿ ದಾವೆ ಹೂಡಿತು.
ಪ್ರಕರಣವನ್ನು ಕೇಂದ್ರ ಅಪರಾಧ ವಿಭಾಗ
(ಸಿಸಿಬಿ)'ತನಿಖೆ'
ನಡೆಸಲು ಮ್ಯಾಜಿಸ್ಟ್ರೇಟರು ಅವಕಾಶ ನೀಡಿದರು.
ಒಂದು ದಿನ ರಜನಿ ತನ್ನ ಪುತ್ರನನ್ನು ಶಾಲೆಗೆ
ಕಳುಹಿಸಲು ಸಿದ್ಧ ಮಾಡುತ್ತಿರುವಾಗಲೇ ಆಕೆಯ ಮನೆಯ ಮುಂದೆ ಪೊಲೀಸರು ಹಾಜರಾದರು.
ಒತ್ತಾಯವಾಗಿ ಪೊಲೀಸ್ ಠಾಣೆಗೆ ಕರೆದೊಯ್ದು ಇಡೀ
ದಿನ 'ವಿಚಾರಣೆ'
ಮಾಡಿದರು.
ಸಂಜೆ ವೇಳೆಗೆ ಮ್ಯಾಜಿಸ್ಟ್ರೇಟರ ಎದುರು ಹಾಜರುಪಡಿಸಿದರು;
ನಂತರ ಅವರನ್ನು ಜೈಲಿಗೂ ಕಳುಹಿಸಿದರು.
ಮದ್ರಾಸ್ ಹೈಕೋರ್ಟ್ ಮಧ್ಯೆ ಪ್ರವೇಶಿಸದೇ
ಹೋಗಿದ್ದರೆ ಅವರು ಇನ್ನೆಷ್ಟು ದಿನ ಕಂಬಿಯ ಹಿಂದೆ ಕೊಳೆಯಬೇಕಿತ್ತೋ?
ರಜನಿಗೆ ದೊರಕಿದ ಮತ್ತೊಂದು ಸಹಾಯಹಸ್ತವೆಂದರೆ
ಈ ಪ್ರಕರಣದ ವಾದವನ್ನು ಸಮರ್ಥವಾಗಿ ನಿಭಾಯಿಸಿದ ಕ್ರಿಯಾತ್ಮಕ ವಕೀಲ ಎನ್ .
ರಾಜಾ ಸೆಂತೂರ್‌ಪಾಂಡಿಯನ್.
"ನಮ್ಮ ವಾದವನ್ನೆಲ್ಲಾ ಆಲಿಸಿದ ಹೈಕೋರ್ಟ್
ನ್ಯಾಯಮೂರ್ತಿಗಳು ಪ್ರಕರಣದ ಗಂಭೀರತೆ ಅರಿತರು.
ರಜನಿ ಅವರನ್ನು ಕೂಡಲೇ ಜೈಲಿನಿಂದ ಬಿಡುಗಡೆ
ಮಾಡುವಂತೆ ಆದೇಶ ನೀಡಿದರು.
ಅಷ್ಟೇ ಅಲ್ಲ,
ಕ್ರೆಡಿಟ್ ಕಾರ್ಡ್ ವಂಚನೆ ಮತ್ತು ಸಾಲ ಬಾಕಿ
ಕುರಿತ ಕ್ರಿಮಿನಲ್ ದಾವೆಗಳ ವಿವರಗಳನ್ನೆಲ್ಲಾ ಕೂಡಲೇ ನೀಡುವಂತೆ
ರಿಜಿಸ್ಟ್ರಾರ್ ಅವರಿಗೆ ಆದೇಶ ನೀಡಿದರು.
ರಿಜಿಸ್ಟ್ರಾರ್ ಅವರು ನೀಡಿದ ವಿವರಗಳಂತೂ ಗಾಬರಿ
ಹುಟ್ಟಿಸುವಂತಿದ್ದವು"
ಎನ್ನುತ್ತಾರೆ ವಕೀಲ ಎನ್.
ರಾಜಾ.
ಈ ದಾಖಲೆಗಳನ್ನೆಲ್ಲಾ ಪರಿಶೀಲಿಸಿದ
ನ್ಯಾಯಮೂರ್ತಿ ಆರ್ .
ರಘುಪತಿ ಮಹತ್ವದ ತೀರ್ಪು ನೀಡಿದರು.
"ದಾವೆ ಹೂಡುವ ಬ್ಯಾಂಕ್ ಮತ್ತು ಹಣಕಾಸು
ಸಂಸ್ಥೆಗಳೊಂದಿಗೆ ಕೈಜೋಡಿಸಿ ಕೆಲವು ಮ್ಯಾಜಿಸ್ಟ್ರೇಟರುಗಳು ಬ್ಯಾಂಕ್‌ಗಳ ಪರ
ತೀರ್ಪು ನೀಡುತ್ತಿದ್ದಾರೆ.
ಸಂಪೂರ್ಣ ಸಿವಿಲ್ ವಿಭಾಗಕ್ಕೆ ಸೇರುವ
ಪ್ರಕರಣಗಳನ್ನು 156
(3)
ಕ್ರಿಮಿನಲ್ ಕೋಡ್ ಅನುಸಾರ
'ಪೊಲೀಸರ
ತನಿಖೆ'ಗೆ
ಅವಕಾಶ ಕೊಟ್ಟು ಬ್ಯಾಂಕ್‌ಗಳಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ;
ಆ ಮೂಲಕ ನ್ಯಾಯಾಂಗ ಮತ್ತು ತಮ್ಮ ಅಧಿಕಾರವನ್ನು
ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ"
ಎಂದು ಅವರು ತಮ್ಮ ತೀರ್ಪಿನಲ್ಲಿ
ಅಭಿಪ್ರಾಯಪಟ್ಟಿದ್ದಾರೆ.
ಸಾಲ ವಸೂಲಿಗೆ ಬ್ಯಾಂಕ್ /
ಹಣಕಾಸು ಸಂಸ್ಥೆಗಳು ಅನುಸರಿಸುವ ಕ್ರಮಗಳನ್ನು
ಗಮನಿಸಿದರೆ ಪರಿಸ್ಥಿತಿಯ ಗಂಭೀರತೆ ಅರಿವಾಗುತ್ತದೆ.
ಕ್ರೆಡಿಟ್ ಕಾರ್ಡ್,
ಗೃಹ ಸಾಲ,
ಗ್ರಾಹಕ ಸಾಲ ಮತ್ತು ವೈಯಕ್ತಿಕ ಸಾಲಗಳಿಗೆ
ಸಂಬಂಧಪಟ್ಟ ವ್ಯಾಜ್ಯಗಳೆಲ್ಲಾ ಸಿವಿಲ್ ನ್ಯಾಯಾಲಯಕ್ಕೆ ಸಂಬಂಧಪಟ್ಟವು.
ಆದರೆ ಸಿವಿಲ್ ನ್ಯಾಯಾಲಯಕ್ಕೆ ಒಂದು ವ್ಯಾಜ್ಯ
ಹೋದರೆ ಅವು ವರ್ಷಗಟ್ಟಲೆ,
ದಶಕಗಟ್ಟಲೆ ಎಳೆದಾಡುವುದು ಎಲ್ಲರಿಗೂ ಗೊತ್ತು.
ಹೀಗಾಗಿ ಬಾಕಿ ವಸೂಲಿಗಾಗಿ ಬ್ಯಾಂಕ್‌ಗಳು
'ಏಜೆಂಟ್'ಗಳನ್ನು
ಅರ್ಥಾತ್ 'ಗೂಂಡಾ'ಗಳನ್ನು
ನೇಮಿಸಿಕೊಂಡಿರುತ್ತವೆ.
ಸಾಲ ಪಡೆದವರ ಮೇಲೆ ಈ ಗೂಂಡಾಗಳು ಹಲ್ಲೆ,
ದೌರ್ಜನ್ಯ ಎಸಗುವ ಸಂಗತಿ ಪತ್ರಿಕೆಗಳಲ್ಲಿ
ಸಾಮಾನ್ಯವಾಗಿಬಿಟ್ಟಿದೆ.
ಇಂಥ ದೌರ್ಜನ್ಯದ ವಿರುದ್ಧ ನಾಗರಿಕರ ಆಕ್ರೋಶ ಹೆಚ್ಚಾದಾಗ
ಕಾನೂನು ಉಲ್ಲಂಘಿಸುವ ಬ್ಯಾಂಕ್‌ಗಳ ಪ್ರವೃತ್ತಿಗೆ ಕಡಿವಾಣ ಹಾಕುವ
ನಿಯಮಾವಳಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ರೂಪಿಸಿತು.
ಇದರಿಂದಾಗಿ ಹಣಕಾಸು ಸಂಸ್ಥೆ/ಬ್ಯಾಂಕ್‌ಗಳು
ಪೊಲೀಸರು ಮತ್ತು ಮ್ಯಾಜಿಸ್ಟ್ರೇಟ್‌ಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು
ಅವರನ್ನೇ 'ವಸೂಲಾತಿ
ಏಜೆಂಟ್'ಗಳಂತೆ
ಮಾಡಿಕೊಳ್ಳುವ ತಂತ್ರ ಅನುಸರಿಸಿದವು.
ಹೀಗಾಗಿಯೇ ರಜನಿ
21 ದಿನಗಳ ಕಾಲ
ಜೈಲಿನಲ್ಲಿರಬೇಕಾಯಿತು.
ಬ್ಯಾಂಕ್‌ಗಳು ಅಪರಾಧ ಸಂಹಿತೆ
(ಕ್ರಿಮಿನಲ್
ಕೋಡ್)ಯ
ಅಡಿಯಲ್ಲೇ ಎರಡು ತಂತ್ರಗಳ ಮೂಲಕ ಕಾನೂನು ಮತ್ತು ಆರ್‌ಬಿಐ ನಿಯಮಾವಳಿಯನ್ನು
ಉಲ್ಲಂಘಿಸುತ್ತಿವೆ.
ಮೊದಲನೆಯದಾಗಿ ವರ್ಗ
200.
ಇದರ ಅಡಿಯಲ್ಲೇ ಬ್ಯಾಂಕ್‌ಗಳು ಮ್ಯಾಜಿಸ್ಟ್ರೇಟ್
ನ್ಯಾಯಾಲಯದಲ್ಲಿ ದಾವೆ ಹೂಡಿ ಪೊಲೀಸ್ ತನಿಖೆಯ ಆದೇಶ ಪಡೆಯುತ್ತಾರೆ.
ಆ ಮೂಲಕ ಸಾಲ ಪಡೆದವರ ಮೇಲೆ ದೌರ್ಜನ್ಯ ಎಸಗಿ
ಅವರನ್ನು ಜೈಲಿಗೆ ದೂಡಲು ಮುಂದಾಗುತ್ತಿದ್ದಾರೆ.
ಹೀಗೆ ಪೊಲೀಸರು ಮತ್ತು ಮ್ಯಾಜಿಸ್ಟ್ರೇಟರು
ಬ್ಯಾಂಕ್‌ಗಳ 'ವಸೂಲಾತಿ
ಏಜೆಂಟ್'
ಆದ 24,760
ಪ್ರಕರಣಗಳನ್ನು ಹೈಕೋರ್ಟ್ ರಿಜಿಸ್ಟ್ರಾರ್ ಪತ್ತೆ ಹಚ್ಚಿದ್ದಾರೆ.
ಸಮಾಧಾನದ ಸಂಗತಿ ಎಂದರೆ ವರ್ಗ
200 ಅಡಿಯ
ಪ್ರಕರಣಗಳ ಕುರಿತು ಸೂಕ್ತ ದಾಖಲೆ ಸಿಗುತ್ತವೆ.
ಆದರೆ ಬ್ಯಾಂಕ್‌ಗಳು ಅನುಸರಿಸುವ
2ನೇ
ತಂತ್ರದಲ್ಲಿ ನಿಮಗೆ ಸೂಕ್ತ ದಾಖಲೆಯೂ ಸಿಗುವುದಿಲ್ಲ.
ಅದು
156 (3)
ಕಾಯ್ದೆ.
ಈ ಕಾಯ್ದೆಯ ಅಡಿ ದಾಖಲಾದ ಪ್ರಕರಣಗಳಿಗೆ
ಮ್ಯಾಜಿಸ್ಟ್ರೇಟರು ದೂರು ಪತ್ರದ ಹಿಂಬದಿಯಲ್ಲೇ ಆದೇಶ ಬರೆದು ಕೊಡುತ್ತಾರೆ;
ನಂತರ ಪೊಲೀಸರು
'ವಿಚಾರಣೆ'
ಮುಂದುವರಿಸುತ್ತಾರೆ.
ಹೀಗೆ ಆದೇಶ ನೀಡಿದ್ದಕ್ಕೆ ಮ್ಯಾಜಿಸ್ಟ್ರೇಟ್
ನ್ಯಾಯಾಲಯಗಳಲ್ಲಿ ಯಾವುದೇ ದಾಖಲೆಯೂ ಇರುವುದಿಲ್ಲ.
ರಜನಿ ಬಲಿಪಶು ಆಗಿದ್ದು ಕೂಡಾ ಈ ಕಾಯ್ದೆ
ಅಡಿಯಲ್ಲೇ.
ಆಕೆಯ ವಕೀಲ ಎನ್.
ರಾಜಾ ಹೇಳುವಂತೆ ಈ ಕಾಯ್ದೆಯ ಅಡಿಯಲ್ಲಿ
ತಮಿಳುನಾಡು ರಾಜ್ಯವೊಂದರಲ್ಲೇ ಎರಡು ಲಕ್ಷ ಪ್ರಕರಣಗಳು ಬಾಕಿ ಇವೆ.
"ಈಗ ನೀಡಿರುವ ತೀರ್ಪಿನಿಂದಾಗಿ
ದೌರ್ಜನ್ಯಕ್ಕೊಳಗಾದ ಕುಟುಂಬಗಳೆಲ್ಲಾ ನಿರಾಳವಾಗಿವೆ.
ಸಿವಿಲ್ ನ್ಯಾಯಾಲಯ ವ್ಯಾಪ್ತಿಯ ಪ್ರಕರಣಗಳನ್ನು
ಕ್ರಿಮಿನಲ್ ನ್ಯಾಯಾಲಯದ ಅಡಿ ತರುವ ಕೆಟ್ಟ ಸಂಪ್ರದಾಯಕ್ಕೆ ಕೊನೆ ಹಾಡುವಂತಹ
ಮಹತ್ವದ ತೀರ್ಪು ಇದು.
ಇದು ಭಾರತದಾದ್ಯಂತ ಪರಿಣಾಮ ಬೀರಲಿದೆ"
ಎನ್ನುತ್ತಾರೆ ರಾಜಾ.
ಈ ಕಾಯ್ದೆಯ ಅಡಿ ದಾಖಲಾದ ಎಲ್ಲಾ ದಾವೆಗಳನ್ನೂ
ಅಧೀನ ನ್ಯಾಯಾಲಯಗಳಿಂದ ಹೈಕೋರ್ಟ್‌ಗೆ ವರ್ಗಾಯಿಸಬೇಕೆಂದೂ ನ್ಯಾಯಮೂರ್ತಿ
ರಘುಪತಿ ಅವರ ಆದೇಶದಲ್ಲಿ ಸೂಚಿಸಲಾಗಿದೆ .
ಈ ಪ್ರಕರಣಗಳಲ್ಲಿ ತನಿಖೆಗೆ ಆದೇಶ ನೀಡಿದ ಅಧೀನ
ನ್ಯಾಯಾಲಯಗಳ ಆರು ಮಂದಿ ನ್ಯಾಯಾಧೀಶರ ವಿರುದ್ಧ ಕ್ರಮ ಕೈಗೊಳ್ಳಲು ಹೈಕೋರ್ಟ್
ಮುಖ್ಯ ನ್ಯಾಯಮೂರ್ತಿಗಳ ಅನುಮತಿ ಪಡೆಯಬೇಕು;
ಅಲ್ಲದೆ ಮ್ಯಾಜಿಸ್ಟ್ರೇಟರ್ ಆದೇಶದ ಅನುಸಾರ
'ತನಿಖೆ'
ಕೈಗೆತ್ತಿಕೊಂಡ ಪೊಲೀಸ್ ಅಧಿಕಾರಿಗಳ ವಿರುದ್ಧವೂ ಪೊಲೀಸ್ ಮಹಾ ನಿರ್ದೇಶಕರು
ಕ್ರಮ ಕೈಗೊಳ್ಳಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.
"ಸಿವಿಲ್ ವ್ಯಾಜ್ಯಗಳನ್ನು ಪೊಲೀಸ್ ತನಿಖೆಗೆ
ಒಪ್ಪಿಸಬಾರದೆಂಬ ಬಗ್ಗೆ ಅರಿವಿದ್ದರೂ ಮ್ಯಾಜಿಸ್ಟ್ರೇಟರು ಉದ್ದೇಶಪೂರ್ವಕವಾಗಿ
ಸಿವಿಲ್ ವ್ಯಾಜ್ಯಗಳಿಗೆ ಕ್ರಿಮಿನಲ್ ರೂಪ ನೀಡಿದ್ದಾರೆ.
ಇಂತಹ ಕಾನೂನುಬಾಹಿರ ಆದೇಶ ನ್ಯಾಯಾಲಯಗಳ ಗೌರವಕ್ಕೆ
ಧಕ್ಕೆ ಉಂಟು ಮಾಡಿದೆ"
ಎಂದು ಅವರು ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದ್ದಾರೆ.
" ಕಾನೂನು
ರಕ್ಷಿಸಬೇಕಾದ ನ್ಯಾಯಾಲಯಗಳಲ್ಲೇ ಕಾನೂನಿನ ಕಗ್ಗೊಲೆ ನಡೆಯುತ್ತಿರುವುದಕ್ಕೆ
ರಜನಿ ಪ್ರಕರಣ ಒಂದು ಉದಾಹರಣೆ ಅಷ್ಟೇ.
ಸಾಲದ ಕಂತಿನ ಹಣ ಸಕಾಲಕ್ಕೆ ಕಟ್ಟದ
ವ್ಯಕ್ತಿಗಳನ್ನೆಲ್ಲಾ ಬಂಧಿಸುವುದು ಕಾನೂನುಬಾಹಿರವಷ್ಟೇ ಅಲ್ಲ;
ಗೂಂಡಾಗಿರಿ ಕೂಡ.
ಬ್ಯಾಂಕ್‌ಗಳು ಇಂತಹ ಪ್ರಕರಣಗಳನ್ನು ಸಿವಿಲ್
ನ್ಯಾಯಾಲಯಗಳ ವ್ಯಾಪ್ತಿಗೆ ತರಬೇಕು;
ಮತ್ತು ಇಂಥ ಪ್ರಕರಣಗಳನ್ನು ಬೇಗನೇ
ಇತ್ಯರ್ಥಪಡಿಸಲು ತ್ವರಿತ ನ್ಯಾಯಾಲಯಗಳಿರಬೇಕು"
ಎನ್ನುತ್ತಾರೆ ದೆಹಲಿಯ ಹಿರಿಯ ವಕೀಲ ಅಶೋಕ ಪಾಂಡೆ.
ಆದರೆ ನಿಯಮಾವಳಿಗೆ ಗಮನ ಕೊಡುವ ಬದಲು ಸಾಲ
ವಸೂಲಿಗೆ ಕಾನೂನುಬಾಹಿರವಾದ ಹಲವಾರು ತಂತ್ರಗಳನ್ನು ಅಳವಡಿಸುವುದರಲ್ಲೇ
ಬ್ಯಾಂಕ್‌ಗಳು ಮುಳುಗಿಬಿಟ್ಟಿವೆ .
ಪೊಲೀಸ್ ಅಧಿಕಾರಿಗಳೊಂದಿಗೆ ಒಪ್ಪಂದ ಮಾಡಿಕೊಂಡ
ಬ್ಯಾಂಕ್‌ಗಳು ಬಹುದೂರದ ನಗರಗಳಲ್ಲಿ ದಾವೆ ಹೂಡುತ್ತವೆ.
ಹೀಗಾಗಿ ನ್ಯಾಯಾಲಯದ ಆದೇಶ ಸಕಾಲದಲ್ಲಿ
ತಲುಪುವುದಿಲ್ಲ.
ಅದಕ್ಕೆ ಮುನ್ನವೇ ಅಧೀನ ನ್ಯಾಯಾಲಯಗಳಿಂದ
'ತನಿಖೆ'ಯ
ಆದೇಶವನ್ನು ಸ್ಥಳೀಯ ಪೊಲೀಸರು ಪಡೆಯಲು ಸಾಧ್ಯವಾಗುತ್ತದೆಂಬುದು ಅವುಗಳ
ಒಳತಂತ್ರ.
ಅದಕ್ಕೊಂದು ಉದಾಹರಣೆ ನೋಡಿ:
ಚೆನ್ನೈನ ಎಗ್ಮೋರ್ ನಿವಾಸಿ ಗಣೇಶ್ ಅವರು ಕೋಟಕ್
ಮಹೀಂದ್ರಾ ಬ್ಯಾಂಕ್‌ನಿಂದ 12
ಲಕ್ಷ ರೂ.
ಸಾಲ ಪಡೆದರು.
ಅವರು ಕಟ್ಟಬೇಕಾಗಿದ್ದ ಮಾಸಿಕ ಕಂತು
55,000
ರೂ.
ತುರ್ತು ಕಾರಣಗಳಿಂದ ಒಂದು ತಿಂಗಳು ತಡವಾಗಿ ಮಾಸಿಕ ಕಂತು ಕಟ್ಟಿದರು.
ಆದರೆ ಅವರಿಗೆ ನ್ಯಾಯಾಲಯದಿಂದ ಸಮನ್ಸ್ ಬಂತು.
ಎಲ್ಲಿಂದ ಗೊತ್ತೆ?
ಕೋಲ್ಕತ್ತಾದಿಂದ!
ಅಲ್ಲಿ ಹಾಜರಾಗದೇ ಹೋದಾಗ ಬಂಧನದ ವಾರಂಟ್
ನೀಡಲಾಯಿತು.
ಅವರನ್ನು ಬಂಧಿಸಲು ಪೊಲೀಸರು ಮನೆ ಬಾಗಿಲಿಗೆ ಬಂದೇ
ಬಿಟ್ಟರು. "ಬ್ಯಾಂಕ್
ಶಾಖೆ ಇರುವುದು ಚೆನ್ನೈನಲ್ಲಿ.
ನಾನು ಹಣ ಕಟ್ಟುತ್ತಿರುವುದೂ ಇಲ್ಲೇ.
ಹೀಗಿರುವಾಗ ಕೋಲ್ಕತಾದಲ್ಲೇಕೆ ಪ್ರಕರಣ
ದಾಖಲಿಸಲಾಯಿತು?
ಕಿರುಕುಳ ಕೊಡುವುದಕ್ಕಾಗಿಯೇ ವಿನಾ ಮತ್ತೇನಕ್ಕೂ ಅಲ್ಲ"
ಎನ್ನುತ್ತಾರೆ ಗಣೇಶ್.
ಕೇರಳದ ಕಣ್ಣೂರಿನ ಪ್ರಕರಣ ಗಮನ ಸೆಳೆಯುತ್ತದೆ .
ಅಲ್ಲಿನ ಐಪಿಎಸ್ ಅಧಿಕಾರಿಯೂ ಬ್ಯಾಂಕ್‌ಗಳ
ಕಿರುಕುಳ ಅನುಭವಿಸಿದ್ದಾರೆ.
ಕಣ್ಣೂರು ಪೊಲೀಸ್ ಅಧೀಕ್ಷಕ ಶ್ರೀಜಿತ್ ಅವರು
ಐಸಿಐಸಿಐ ಬ್ಯಾಂಕ್‌ನಿಂದ 25
ಲಕ್ಷ ರೂ.
ಸಾಲ ಪಡೆದರು.
ನಿಯಮಿತವಾಗಿ ಮಾಸಿಕ ಕಂತು ಕಟ್ಟುತ್ತಿದ್ದ ಅವರಿಗೆ
ಐಸಿಐಸಿಐ ಮುಂಬೈ ಶಾಖೆಯಿಂದ ಒಂದು ನೋಟಿಸ್ ಬಂತು.
ಕಂತು ಕಟ್ಟದಿದ್ದರೆ ಕಾನೂನು ಕ್ರಮ
ಕೈಗೊಳ್ಳುವುದಾಗಿ ಅದರಲ್ಲಿ ಎಚ್ಚರಿಸಲಾಗಿತ್ತು.
ತಾವು ನಿಯಮಿತವಾಗಿ ಕಟ್ಟುತ್ತಿರುವುದಾಗಿಯೂ,
ಅದು ಬ್ಯಾಂಕ್‌ನದೇ ತಪ್ಪೆಂದೂ ಶ್ರೀಜಿತ್ ಅವರು
ಸ್ಪಷ್ಟಪಡಿಸಿದಾಗ ಬ್ಯಾಂಕ್‌ಗಳು ಗೂಂಡಾಗಳನ್ನು ಅಟ್ಟಿದವು.
ಆದರೆ ಶ್ರೀಜಿತ್ ಅವರು ಐಪಿಎಸ್ ಅಧಿಕಾರಿ ಎಂದು
ಅರಿತಾಗ 'ಒಪ್ಪಂದ'ಕ್ಕೆ
ಮುಂದಾದವು.
ಶ್ರೀಜಿತ್ ಅವರು ಈಗ ಬ್ಯಾಂಕ್ ವಿರುದ್ಧ ದಾವೆ ಹೂಡಿದ್ದಾರೆ.
ಬ್ಯಾಂಕ್‌ಗಳ ಇಂತಹ ದೌರ್ಜನ್ಯದ ಬಗ್ಗೆ
ಪತ್ರಿಕೆಗಳಲ್ಲಿ ಪ್ರತಿನಿತ್ಯ ವರದಿಗಳನ್ನು ಕಾಣಬಹುದು .
ಆದರೆ ಅವುಗಳ ನಿಯಂತ್ರಣ ಪರಿಣಾಮಕಾರಿಯಾಗಿಲ್ಲ.
ದೌರ್ಜನ್ಯ ಎಸಗುವ ಇಂಥ ಬ್ಯಾಂಕ್‌ಗಳ ವಿರುದ್ಧ ಆರ್‌ಬಿಐ
ಕಠಿಣ ಕ್ರಮಗಳನ್ನು ಅನುಸರಿಸಬೇಕಿದೆ.
ವಕೀಲ ಬಿ.
ಸುಂದರರಾಜನ್ ಅವರು ಬ್ಯಾಂಕ್‌ಗಳ ದೌರ್ಜನ್ಯದ
ವಿರುದ್ಧ ಒಂದು ಆಂದೋಲನವನ್ನೇ ನಡೆಸುತ್ತಿದ್ದಾರೆ.
ಇದಕ್ಕಾಗಿ ಅವರು ಚೆನ್ನೈನಲ್ಲಿ
'ಸೆಂಟರ್ ಫಾರ್
ಎಕನಾಮಿಕ್ ಮತ್ತು ಸೋಷಿಯಲ್ ಜಸ್ಟೀಸ್'
ಎಂಬ ಸಂಸ್ಥೆ ನಡೆಸುತ್ತಿದ್ದಾರೆ.
ಅವರು ಹೇಳುವಂತೆ ಬ್ಯಾಂಕ್‌ಗಳ ಇಂಥ ದೌರ್ಜನ್ಯದ
ಬಗ್ಗೆ ಆರ್‌ಬಿಐಗೆ ಅರಿವಿದೆ.
ಹೀಗಾಗಿಯೇ ಅದು ಪ್ರತಿವರ್ಷ ಎಲ್ಲಾ ಬ್ಯಾಂಕ್‌ಗಳಿಗೆ
ನಿಯಮಾವಳಿಯ ಸುತ್ತೋಲೆ ಕಳುಹಿಸುತ್ತದೆ.
ಕ್ರೆಡಿಟ್ ಕಾರ್ಡ್ ಅಥವಾ ಸಾಲ ನೀಡುವಾಗ ಆ
ವ್ಯಕ್ತಿಯ ಸಾಲ ವಾಪಸಾತಿ ಸಾಮರ್ಥ್ಯ,
ಆರ್ಥಿಕ ಹಿನ್ನೆಲೆಯನ್ನೆಲ್ಲಾ ಪರಿಶೀಲಿಸಬೇಕು;
ಸಾಲದ ಷರತ್ತು-ವಿವರಣೆಗಳನ್ನು
ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲೂ ದೊಡ್ಡ ಅಕ್ಷರಗಳಲ್ಲಿ ಪ್ರಕಟಿಸಬೇಕು ಎಂಬ
ನಿಯಮವೂ ಇದೆ.
ಆದರೆ ಬ್ಯಾಂಕ್‌ಗಳು ಈ ನಿಯಮಗಳನ್ನು ಗಂಭೀರವಾಗಿ
ಪರಿಗಣಿಸಿಯೇ ಇಲ್ಲ.
" ಪ್ರಾದೇಶಿಕ
ಭಾಷೆಗಳಲ್ಲಿ ಸಾಲದ ಷರತ್ತು-ವಿವರಣೆ
ಪ್ರಕಟಿಸುವ ನಿಯಮವನ್ನು ಬ್ಯಾಂಕ್‌ಗಳು ಅನುಸರಿಸದೇ ಇರುವ ಬಗ್ಗೆ ನಾವು
2006ರಲ್ಲಿ
ಮದ್ರಾಸ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೆವು.
ಆಗ ಈ ಬಗ್ಗೆ ಪರಿಶೀಲಿಸುವುದಾಗಿ ಆರ್‌ಬಿಐ
ಪ್ರತಿಕ್ರಿಯೆ ನೀಡಿತ್ತು.
ಆದರೆ ಇಲ್ಲಿಯವರೆಗೂ ಯಾವುದೇ ಬದಲಾವಣೆಯಾಗಿಲ್ಲ.
ಹೀಗಾಗಿ ನಾವು ಮರು ಅರ್ಜಿ ಸಲ್ಲಿಸಲಿದ್ದೇವೆ"
ಎನ್ನುತ್ತಾರೆ ಸುಂದರರಾಜನ್.
ಅದಿರಲಿ.
20
ದಿನ ಜೈಲಿನಲ್ಲಿ ಬಂಧಿಯಾದುದಕ್ಕೆ ರಜನಿ ತನ್ನ ಉದ್ಯೋಗ ಕಳೆದುಕೊಂಡಿದ್ದಾರೆ.
ತನ್ನ
7 ವರ್ಷದ ಮಗನ ಶಿಕ್ಷಣದ್ದೇ ಈಗ ಆಕೆಗೆ ಚಿಂತೆ.
ಎಬಿಎನ್ ಆಮ್ರೋ ಬ್ಯಾಂಕ್ ಹೆಸರೆತ್ತಿದರೆ ಆಕೆ
ಬೆವರುತ್ತಾರೆ.
ಈ ಮಧ್ಯೆ ನ್ಯಾಯಮೂರ್ತಿ ರಘುಪತಿ ಅವರ ಆದೇಶದ ಕುರಿತು
ಟಿಎಸ್‌ಐ ಪ್ರತಿನಿಧಿಗಳು ಎಬಿಎನ್ ಆಮ್ರೋ ಬ್ಯಾಂಕ್‌ನ ಪ್ರತಿಕ್ರಿಯೆ ಕೇಳಿದರೆ
ಅಲ್ಲಿಂದ ಯಾವುದೇ ಉತ್ತರ ಬರಲಿಲ್ಲ.
ಟಿಎಸ್‌ಐ
ಕಾನೂನು ಏನು ಹೇಳುತ್ತದೆ?
ಅಪರಾಧ ಸಂಹಿತೆ, ಸೆಕ್ಷನ್ 156(3) - ಒಂದು ವೇಳೆ ಪೊಲೀಸರು ಎಫ್‌ಐಆರ್ ದಾಖಲಿಸಲು ನಿರಾಕರಿಸಿದರೆ ಒಬ್ಬ ವ್ಯಕ್ತಿ ಈ ಸೆಕ್ಷನ್‌ನ ಅನ್ವಯ ನ್ಯಾಯಾಲಯದ ಮೊರೆ ಹೋಗಬಹುದು. ನ್ಯಾಯಾಲಯಕ್ಕೆ ಪ್ರಕರಣ ಗಂಭೀರವಾದದ್ದು ಎಂದು ಮನವರಿಕೆಯಾದರೆ, ಎಫ್‌ಐಆರ್ ದಾಖಲಿಸಿಕೊಳ್ಳುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಬಹುದು.
ಅಪರಾಧ ಸಂಹಿತೆ, ಸೆಕ್ಷನ್ 200- ಈ ಸೆಕ್ಷನ್‌ನ ಅನ್ವಯ, ಎಫ್‌ಐಆರ್ ದಾಖಲಿಸಿಕೊಳ್ಳುವಂತೆ ಪೊಲೀಸರನ್ನು ಕೇಳಿಕೊಳ್ಳುವ ಬದಲು ಒಬ್ಬ ವ್ಯಕ್ತಿ ನೇರವಾಗಿ ನ್ಯಾಯಾಲಯದ ಮೊರೆ ಹೋಗಬಹುದು. ಅಂತೆಯೇ ಅಪರಾಧ ಸಂಹಿತೆ, ಸೆಕ್ಷನ್ 204ರ ಅನ್ವಯ ಪಿರ್ಯಾದುದಾರ ಒದಗಿಸಿದ ಸಾಕ್ಷ್ಯಗಳ ಆಧಾರದ ಮೇಲೆ ನ್ಯಾಯಾಲಯ ಆರೋಪಿಗಳ ವಿರುದ್ಧ ಸಮನ್ಸ್ ಜಾರಿಗೊಳಿಸಬಹುದು.
|