|
ಜೆಸ್ಸಿಕಾ ದೃಢಚಿತ್ತ
ಜೆಸ್ಸಿಕಾ ಅಲ್ಬಾ ಅಮ್ಮನಾಗಿ ಹೆಚ್ಚು ದಿನವೇನೂ ಆಗಿಲ್ಲ. ಆಗಲೇ ತನ್ನ ಮೈಮಾಟದ ಕಡೆ ಗಮನ ಹರಿಸಿದ್ದಾಳೆ. ಆಕೆಯ ಬಾಣಂತನ ಸಂದರ್ಭದಲ್ಲಿ ತುಂಬಿಕೊಂಡಿದ್ದ ಬೊಜ್ಜು ಕರಗಿಸಲು ಹಗಲಿರುಳೆನ್ನದೆ ಶ್ರಮ ಪಡುತ್ತಿದ್ದಾಳೆ. ಆಕೆಯ ಶ್ರಮಕ್ಕೆ ತಕ್ಕ ಪ್ರತಿಫಲವೂ ಸಿಕ್ಕಿದೆ ಬಿಡಿ. ಹೌದು ಸ್ವಾಮಿ! ಆಕೆ ಈಗಾಗಲೇ 25 ಪೌಂಡ್‌ಗಳಷ್ಟು ತೂಕ ಇಳಿಸಿಕೊಂಡಿದ್ದಾಳೆ. ಅದೂ ಕೇವಲ ಎರಡೇ ತಿಂಗಳಲ್ಲಿ! ದೈಹಿಕ ತರಬೇತುದಾರನಂತೂ ಆಕೆಯ ದೃಢಚಿತ್ತವನ್ನು ಹಾಡಿ ಹೊಗಳುತ್ತಿದ್ದಾನೆ. ಜೆಸ್ಸಿಕಾಳ ಮೊದಲ ಆದ್ಯತೆ ಮಗುವಿಗೇ ಆಗಿದ್ದರೂ, ಮಾದಕ ಮೈಮಾಟಕ್ಕೆ ಕುಂದು ಬರುವುದಕ್ಕೆ ಬಿಡಲೊಲ್ಲಳು. ಈ ಬದ್ಧತೆಯಿಂದಲೇ ಜೆಸ್ಸಿ ಸೈಜ್ ಎಂಟರಿಂದ ಸೈಜ್ ನಾಲ್ಕಕ್ಕೆ ಇಳಿದಿದ್ದಾಳೆ.
ಜೀರೋ ಸೈಜ್ ಬೇಡ

ಗೋತಾ ಹೊಡೆದ 'ಇಂತಿ ನಿನ್ನ ಪ್ರೀತಿಯ' ಖ್ಯಾತಿಯ ನಟಿ ಸೋನು ಅನ್ನ ಸಾಂಬಾರ್ ಪ್ರಿಯೆ. ಶಿಸ್ತಿನ ಆಹಾರ ಸೇವಿಸಿ ಬೊಜ್ಜು ಕರಗಿಸಬೇಕು ಎಂಬ ಆಸೆಯೇನೋ ಇದೆ. ಆದರೆ ಮಧ್ಯಾಹ್ನ ಊಟ ಮಾತ್ರ ಬಿಟ್ಟಿಲ್ಲ. ಚಪಾತಿ ಗಿಪಾತಿ ಏನಿದ್ದರೂ ಬೆಳಗ್ಗೆ- ಸಂಜೆಗೆ ಮೀಸಲು. ಜೀರೋ ಸೈಜ್ ಕ್ರೇಜ್ ಇನ್ನೂ ತಟ್ಟಿಲ್ಲ ಎನ್ನುವ ಈ ಬೆಡಗಿ ಸದ್ಯ 'ಗುಲಾಮ' ಮತ್ತು 'ಪರಮೇಶ ಪಾನ್‌ವಾಲ' ಚಿತ್ರಗಳಲ್ಲಿ ಬ್ಯುಸಿ. ಏನೇ ಆಗಲಿ 'ಇಂತಿ...'ಯಲ್ಲಿ ದುಂಡು ದುಂಡಗಿದ್ದ ಸೋನು ಈಗ ಬಳುಕುವ ಬಳ್ಳಿಯಾಗಿದ್ದು ನೋಡಿದಲ್ಲಿ ನಟಿ ಕಳೆ ಸಕತ್ತಾಗಿ ಅಂಟಿದೆ ಎನ್ನುವುದು ಮಾತ್ರ ಗ್ಯಾರಂಟಿ.
ಸಾರ್ಥಕ ಸೇವೆ
ಲಾರಾದತ್ತ ಸಕತ್ ಖುಷಿಯಲ್ಲಿದ್ದಾಳೆ. ಯಾಕಿಲ್ಲ ಹೇಳಿ? ಹಾಲಿವುಡ್‌ನ ಮೇಗನ್ ಫಾಕ್ಸ್ ಅವರ ಸಾಹಸ ಚಿತ್ರ 'ಬ್ಲೂ' ಅವಕಾಶ ಲಪಟಾಯಿಸಿದ್ದಾಳಲ್ಲಾ! ಈಜುಡುಗೆ ತೊಟ್ಟು ಮಾದಕ ಮೈಮಾಟ ಪ್ರದರ್ಶಿಸುವ ಲಾರಾಳನ್ನು ಕಾಣುವ ಪಡ್ಡೆ ಹುಡುಗರ ಆಸೆಯೂ ಕೈಗೂಡಲಿದೆ. ಅಷ್ಟೇ ಅಲ್ಲ, 2001ರಿಂದೀಚೆಗೆ ವಿಶ್ವಸಂಸ್ಥೆಯ ವಿವಿಧ ಯೋಜನೆಗಳಲ್ಲಿ ಪಾಲ್ಗೊಂಡಿದ್ದು ಸಾರ್ಥಕವಾಗಿದೆ. ರಾಜೀವ್ ಗಾಂಧಿ ಪ್ರತಿಷ್ಠಾನ ಲಾರಾಳ ಸಮಾಜ ಸೇವೆಗೆ ಪ್ರಶಸ್ತಿ ನೀಡಿ ಗೌರವಿಸಿದೆ. ಅಬ್ಬಾ, ಒಬ್ಬ ಸೌಂದರ್ಯ ರಾಣಿಯಾದರೂ ಸೇವೆ ಸಲ್ಲಿಸಲು ತೊಟ್ಟ ಶಪಥವನ್ನು ಪೂರೈಸಿದ್ದಾಳೆ. ಭೇಷ್!
ರಜಾ ಸುಂದರಿ...

'ಚೆಲುವಿನ ಚಿತ್ತಾರ'ದ ಬಾಲೆ ಅಮೂಲ್ಯ ಒಂದು ವರ್ಷದ ಬಳಿಕ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲು ಸಿದ್ಧವಾಗುತ್ತಿದ್ದಾಳೆ. ಈ ಹದಿನಾರರ ಪೋರಿ ಮತ್ತೆ ಬಣ್ಣ ಹಚ್ಚಿದ್ದು ನಿರ್ದೇಶಕ ಎಸ್. ನಾರಾಯಣ್ ಮಗ ಪಂಕಜ್ ನಾಯಕನಾಗಿರೋ 'ಚೈತ್ರದ ಚಂದ್ರಮ'ಕ್ಕೆ. ಗೋಲ್ಡನ್ ಸ್ಟಾರ್ ಗಣೇಶನನ್ನು ಮೀರಿಸಿದ ಅಭಿನಯದಿಂದ ಐಶೂ ಎಂದೇ ಕನ್ನಡ ನಾಡಲ್ಲಿ ಜನಪ್ರಿಯಳಾಗಿದ್ದ ಅಮೂಲ್ಯ ವಿದ್ಯಾಭ್ಯಾಸ ಮತ್ತು ವಯಸ್ಸಿನ ಕಾರಣದಿಂದಾಗಿ ಚಿತ್ರರಂಗದಲ್ಲಿ ಸಕ್ರಿಯವಾಗಿರಲಿಲ್ಲ. ಮೊದಲ ಚಿತ್ರಕ್ಕೆ ಮಹಿಳಾ ಮಣಿಗಳ ಆಪಾದನೆಗಳನ್ನು ಕೇಳಿದ ನಂತರ ಪೆಚ್ಚಾಗಿ ಶಾಲೆ ಹಾದಿಯನ್ನು ಗಟ್ಟಿ ಮಾಡಿಕೊಂಡಳು ಈ ಹುಡುಗಿ. ಆದರೆ ರಜಾ ಅವಧಿಯಲ್ಲೇ ಶೂಟಿಂಗ್ ಮುಗಿಸಿ ಶಾಲೆ ಮತ್ತು ನಟನೆ ಎರಡರಲ್ಲೂ ಗಟ್ಟಿಗಿತ್ತಿಯಾಗುತ್ತಿದ್ದಾಳೆ. ಭಲೇ!!
ಮಾತು ತಪ್ಪಿದ ಪ್ರೇಮ್ 
ಯಶಸ್ಸಿನ ಉತ್ತುಂಗದಲ್ಲಿದ್ದಾಗ ಉಲಿದ ಮಾತುಗಳೆಲ್ಲ ಸೋಲಿನ ಸುಳಿಯಲ್ಲಿ ಸಿಕ್ಕಾಗ ಮರೆತು ಹೋಗುತ್ತವೆ!! ಹೌದು, ಈ ಮಾತು ನಟ ಪ್ರೇಮ್‌ಗೆ ಸಕತ್ ಮ್ಯಾಚಿಂಗೋ ಮ್ಯಾಚಿಂಗ್. ಹ್ಯಾಟ್ರಿಕ್ ಹಿಟ್‌ಗಳ ಸರದಾರ ಪ್ರೇಮ್ ಈಗ ಮಾತು ತಪ್ಪಿದ ಯುವಕ!! ಗೆಲುವಿನ ಕಮಾಲ್‌ನಲ್ಲೋ ಏನೋ 'ರಿಮೇಕ್ ಚಿತ್ರಗಳಲ್ಲಿ ನಟಿಸಲ್ಲ' ಎಂದು ಘಂಟಾಘೋಷವಾಗಿ ಸಾರಿದ್ದ ಪ್ರೇಮ್ ಈಗ ತಮಿಳಿನ 'ಆಹಾ' ಚಿತ್ರದ ರಿಮೇಕು 'ಗೌತಮ್' ಎಂಬ ಚಿತ್ರದಲ್ಲಿ ನಟಿಸಲು 'ಎಸ್' ಎಂದಿದ್ದಾರೆ. 'ನೆನಪಿರಲಿ', ಪಲ್ಲಕ್ಕಿ', 'ಜೊತೆ ಜೊತೆಯಲಿ' ಯಶಸ್ವೀ ಚಿತ್ರಗಳ ಬಳಿಕ ಕಳೆದ ವರ್ಷವಿಡೀ ಸೋಲಿನ ಕಹಿಯನ್ನು ಉಂಡ ಪ್ರೇಮ್ ವಚನಭಂಗ ಮಾಡಿದ್ದರಲ್ಲಿ ಆಶ್ಚರ್ಯವೇನಿಲ್ಲ ಬಿಡಿ.
ಪ್ರೀತಿಯ ಉಡುಗೊರೆ

ಸಿನಿಮಾ ಗೆದ್ದ ಖುಷಿಯಲ್ಲಿ ಕಾರು ಉಡುಗೊರೆ ಪಡೆಯುವಂತಾದರೆ? ಬಚ್ಚನ್ ಮತ್ತು ಖಾನ್‌ಗಳ ಮನೆ ಮುಂದೆ ಕಾರುಗಳು ಸಾಲುಗಟ್ಟಿ ನಿಂತಿರುತ್ತಿದ್ದವೇನೋ!! ಆದರೆ ನಮ್ಮ ರಣಬೀರ್ ಕಪೂರ್ ದೆಸೆ ನೋಡಿ. ಮಗನ ಏಳಿಗೆಯನ್ನು ಕಾಣುವ ಕಾತುರದಲ್ಲಿ ಹೆತ್ತವರು ಉಡುಗೊರೆಗಳ ಮಹಾಪೂರ ಹರಿಸಿ ಪ್ರೋತ್ಸಾಹಿಸುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ 'ಬಚ್‌ನಾ ಏ ಹಸೀನೋ' ಚಿತ್ರದಲ್ಲಿ ಓರ್ವ ನಟನಾಗಿ ರಣಬೀರ್ ಸಾಮರ್ಥ್ಯ ಸಾಬೀತಾಗಿದ್ದಕ್ಕೆ ಖುಷಿಯಾದ ರಿಷಿಕಪೂರ್ ಆತನಿಗೆ ಎಸ್‌ಯುವಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ! ಯಶಸ್ಸಿನ ಉತ್ತುಂಗದಲ್ಲಿರುವ ಈ ಪೋರ ನಿಜಕ್ಕೂ ಅದೃಷ್ಟ ಮಾಡಿರಬೇಕು...
ಸ್ಲಂ ಬಾಲೆ

ಸಿನಿಮಾ ಹುಚ್ಚು ಹಿಡಿಸಿಕೊಂಡು ಅತಿರೇಕಕ್ಕೆ ಹೋಗುವವರಿಗೇನು ಕೊರತೆ ಇಲ್ಲ. ಆದರೆ ಈಗ ನಮ್ಮ 'ಖಲ್ಲಾಸ್' ಹುಡುಗಿ ಇಶಾ ಮಾತ್ರ ಇವರೆಲ್ಲರನ್ನೂ ಮೀರಿಸಿದ್ದಾಳೆ. ರಾಮ್ ಗೋಪಾಲ್ ವರ್ಮಾ ಅವರ ಹೊಸ ಚಿತ್ರ 'ಶಬ್ರಿ'ಯ ಸ್ಲಂ ಹುಡುಗಿ ಪಾತ್ರಕ್ಕಾಗಿ ಇಶಾ ಥೇಟ್ ಸ್ಲಂ ಬಾಲೆಯಾಗಿದ್ದಾಳೆ! ಇಶಾ ಈಗ ಸೌಂದರ್ಯವರ್ಧಕಗಳತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ. ಅದು ಸಾಲದು ಎಂಬಂತೆ ವ್ಯಾಕ್ಸಿಂಗ್ ಅಥವಾ ಹುಬ್ಬುಗಳಿಗೆ ಶೇಪ್ ಕೊಡೋದನ್ನೂ ಬಿಟ್ಟು ಬಿಟ್ಟಿದ್ದಾಳೆ. ಇಷ್ಟೇ ಅಲ್ಲ ಸ್ವಾಮಿ, ಕಸದ ಬುಟ್ಟಿ ಸಮೀಪವೇ ಕುಳಿತು ತಿಂಡಿ ತಿನ್ನುತ್ತಿದ್ದಾಳೆ!! ಅಬ್ಬಾ, ನೈರ್ಮಲ್ಯ ಎಂದು ಸಾಯುತ್ತಿದ್ದ ಇಶಾ ಹೀಗೂ ಬದಲಾದಳೇ?
|