|
ಪರಂಪರೆಯ ಪ್ರಭಾವ ಅರಗಿಸಿಕೊಂಡು ತನ್ನದೇ ಆದ
ಅಸ್ಮಿತೆಯನ್ನು ಛಾಪಿಸುವ ಹೆಣಗಾಟ ಕಾವ್ಯರಚನೆಯ ಆರಂಭದಲ್ಲಿ ಸಹಜವಾದದ್ದು.
ನಕ್ಷತ್ರಕೆ ಪಾತಿ ಕವನ ಸಂಕಲನದ
ಆರ್. ಪವಿತ್ರ ಪ್ರಿಯಭಾಷಿಣಿ ಅವರೂ ಇದಕ್ಕೆ
ಹೊರತಲ್ಲ. ಮೊದಲಿಗೆ,
ಸಂಕಲನದ ಹೆಸರೇ ಇದು ಬರಿದೇ
ನಕ್ಷತ್ರ ಲೋಕಕ್ಕೆ ರೈಲು ಬಿಡುವುದಲ್ಲ ಎಂಬ
ಸೂಚನೆಯೊಂದಿಗೇ ಮಹತ್ತನ್ನು ಸಾಧಿಸುವ ಆಕಾಂಕ್ಷೆಯ ದನಿಯಂತೆಯೂ ಕೇಳಿಸಿ ನಮ್ಮ
ಲಕ್ಷ್ಯವನ್ನು ಸೆಳೆಯುತ್ತದೆ; ಕುತೂಹಲ ಉಂಟು
ಮಾಡುತ್ತದೆ; ಇಂಥಾ ಕುತೂಹಲ ತಣಿಸುವ ಕೆಲವು
ರಚನೆಗಳಿದ್ದು ಪ್ರಯೋಗಶೀಲ ಹೊಸ ದನಿಯಿಂದಾಗಿ ಗಮನಾರ್ಹವಾಗಿದೆ.
ಕನ್ನಡ ಕಾವ್ಯ ಪರಂಪರೆಯಲ್ಲಿ ಭೂಮಿ-
ಆಕಾಶ, ನೆಲ-
ಮುಗಿಲುಗಳ ಆಕರ್ಷಣೆ, ಸೆಳೆತಗಳು
ಲೌಕಿಕವೂ ಆಧ್ಯಾತ್ಮಿಕವೂ ಆಗಿ ಅಭಿವ್ಯಕ್ತಿ ಪಡೆದಿರುವ ಪರಿ ಹಲವು ಬಗೆಯದು.
ಎರಡು ವಿಭಿನ್ನ ಜಗತ್ತುಗಳನ್ನು ಸಂಧಿಸುವ,
ಸಂಬಂಧಿಸುವ ಕಾವ್ಯಾನುಶೀಲದಲ್ಲಿ ಕವಿಯ ಪ್ರವೃತ್ತಿ ಮತ್ತು
ಸಂವೇದನೆಗಳು ಮುಖ್ಯವಾಗುತ್ತವೆ.
ನಕ್ಷತ್ರಕ್ಕೆ ನೆಲದಲ್ಲಿ ಪಾತಿ ಕಟ್ಟಿ ಅದನ್ನು ಭೂಮಿಯಲ್ಲಿ ಸ್ಥಾಪಿಸುವ
ಆಲೋಚನೆಯೇ ಆದರ್ಶವಾದುದರ ರೂಪಕವಾಗಿ ಭಲೇ
ಎಂದು ಉದ್ಗರಿಸುವಂತೆ ಆಗುತ್ತದೆಯಾದರೂ ಪವಿತ್ರ ಅವರ ಬಹುತೇಕ
ರಚನೆಗಳಲ್ಲಿ ನಮಗೆ ತಾಕುವುದು ನೆಲದ ಕಟು ವಾಸ್ತವ ಜಗತ್ತು.
ಚೊಚ್ಚಲ ಪ್ರಯತ್ನಗಳಲ್ಲಿ ಸಹಜವಾಗಿ ಕಂಡುಬರುವ
ಬೆರಗು- ದಿಗ್ಭ್ರಾಂತಿಗಳು,
ಅವಸ್ಥಾಂತರದ ನೋವು- ಈ ಸಂಕಲನದ
ಕೆಲವು ಕವನಗಳಲ್ಲಿ ಪಿಸುಗುಟ್ಟುವ ನುಡಿಯಲ್ಲೂ ಜೋರಾಗಿಯೇ ಕೇಳಿಬರುತ್ತದೆ.
ರೂಪಾಂತರ, ಪ್ರಶ್ನೆ ಅಂದರೆ
ಇದೇನಾ..., ರತ್ತೋ ರತ್ತೋ ರಾಯನ ಮಗಳೆ,
ಹೀಗೊಂದು ಬದಲಾವಣೆ ಇಂಥ ರಚನೆಗಳು.
ಇಲ್ಲೆಲ್ಲ ಚಿಪ್ಪೊಡೆದು ಬಂದ ಅನುಭವ ಬೆರಗಾಗಿ,
ದಿಗ್ಭ್ರಾಂತಿಯಾಗಿ, ನೋವಾಗಿ
ಹಿಂಡುವ ಪರಿಯಲ್ಲೇ ಕಟುವಾಸ್ತವದ ಮೊನೆ ತಾಕುತ್ತದೆ.
ಚಿನ್ನಾಟವಾಡುವ ಅಕ್ಕ- ತಂಗಿಯರು
ಆಟವಾಡುತ್ತಲೇ, ಮತ್ತೊಂದು ಮಜಲ ಬೆಳಕಿಗೆ
ಬೋಗಸೆಯೊಡ್ಡಿ ನಿಂತಿರುವ ಉತ್ಸಾಹದಲ್ಲೇ ತಾಕುವುದು-
ಸಾಯಂಕಾಲ
ದಿಗ್ಭ್ರಮೆಗೊಂಡರು
ಅಳುವ ಅಮ್ಮನ ಮೇಲೆ ಕೂತು.
ಇಂಥ ರೂಪಾಂತರ ದಿಗ್ಭ್ರಾಂತಿಯದಾದರೂ ಅದು
ಕ್ಷಣಿಕ, ವಾಸ್ತವ ಕಲಿಸುವುದು ಛಲಗಾರಿಕೆಯದು:
ನೀರಿಗೆ ಬಿದ್ದ ಮೇಲೆ
ಚಳಿಯೋ ಮಳೆಯೋ
ಈಜು ಬರಲೇ ಬೇಕು
ಎನ್ನುವುದು ಭಂಡತನ
ಆದರೂ ನಿಜ- ಆ
ಕ್ಷಣ ಈ ಕ್ಷಣ
ಹೀಗೆ ಆಟ-
ನೆನಪು- ಕನಸುಗಳ ಪಯಣದ ಮಧ್ಯದಲ್ಲೇ
ವಾಸ್ತವಕ್ಕೆ ಹೊರಳುವಾಗಿನ ನೋವು-
ದಿಗ್ಭ್ರಮೆಗಳಲ್ಲೂ ಹೊಸತನದ ಧಾವಂತದಲ್ಲೂ ಸಂಸ್ಕೃತಿ ಮತ್ತು ಪರಂಪರೆಗಳ
ತುಡಿತವಿದೆ. ಶ್ರಾವಣವೆ ಮೈದಳೆದರೆ...,
ನಮ್ಮ ಹಿತ್ತಲು, ಬುವಿಯ ಸ್ಪರ್ಶ,
ಅಂಜಲೀ ಬದ್ಧ ಕವಿತೆಗಳನ್ನು
ಮೇಲಿನ ಮಾತಿಗೆ ನಿದರ್ಶನವಾಗಿ ನೋಡಬಹುದು.
ಹಬ್ಬ ಸಾಲಿನ ಶ್ರಾವಣವೆಂದರೆ ಸಾಂಸ್ಕೃತಿಕ
ಮೈಪುಳಕದ ಕಾಲವೊಂದಿತ್ತು. ಆದರೆ ಈಗ ಅದೆಲ್ಲ-
ಅಕ್ಕರೆಯ ಬೆಲ್ಲದಂಥ
ಮಾತೆಲ್ಲ ವಲಸೆ ಹೋಗಿವೆ
ಹಿಂತಿರುಗದ ಬೆಳ್ಳಕ್ಕಿಯಂತೆ
ಇಂಥ ವಿಷಾದದಲ್ಲೂ ಅರಿಕೆಯೊಂದು
ಮೊಳಕೆಯೊಡೆಯುತ್ತದೆ: ನೋವೆಲ್ಲ ಹಾಡಾಗಿ...
ಒಂಟಿತನ ಮಸುಕಾಗಿ ನಲಿವ ಶ್ರಾವಣ
ಮೈತಳೆಯಲೆಂದು.
ಕನ್ನಡದ ಸುಪ್ರಸಿದ್ಧ ಕವಿತೆಗಳಾದ
ಗಂಗಾವತರಣ
ಮತ್ತು ಮೋಹನ ಮುರಳಿಯನ್ನು
ಏಕಕಾಲಕ್ಕೆ ನೆನಪಿಗೆ ತರುವ (ಹೋಲಿಕೆ
ಇಲ್ಲಿಗೇ ನಿಲ್ಲುತ್ತದೆ) ಬುವಿಯ ಸ್ಪರ್ಶ
ಬೆಟ್ಟದಿಂದಿಳಿದು ಬರುವ ದೇವಿಯ ಉತ್ಸವವನ್ನೂ ಬೆಟ್ಟ ಸಾಲು ಮಳೆಯನ್ನೂ
ಒಟ್ಟಿಗೆ ಚಿತ್ರಿಸುತ್ತಲೇ-
"ಉಧೋ ಉಧೋ ಉಧೋ
ಬಂದಳೋ ದೇವಿ
ಅಂತೋ ಇಂತೋ ಎಂತೋ"
...........
ಮತ್ತೆ ಅವರವರೆ ಅವರವರ ಒಳಗೆ:
ಉನ್ಮತ್ತ ತಪ್ತ ಜೀವಾತ್ಮ
ಸುಡುಗುಡು ನಿಡುಸುಯ್ವ ಧರೆ
ಏನೋ ತೀಡಿ ಏನೋ ಬೇಡಿ ಪಡೆದ ಸುಖಿ"
ಧನ್ಯತೆಯ ಭಾವಕ್ಕೆ ಮುಟ್ಟಿಸುತ್ತದೆ.
ಅದೂ ಹೇಗೆ?
"ದೀಪ ಕಂಬದ ಕೆಳಗೆ
ಚಿಗುರಿತ್ತು ಹುಲ್ಲು ಗರಿಕೆ!"
ಇದು ಪರಂಪರೆ ಮೀರುವ ಹೊಸ ರೂಪಕವಾಗಿ
ಗಮನಸೆಳೆಯುತ್ತದೆ.
ನಮ್ಮ ಸಂಸ್ಕೃತಿಯ ಕಾಲ ಕೋಶವೆನ್ನಬಹುದಾದ
ನಮ್ಮ ಹಿತ್ತಲು
ಕವನದಲ್ಲಿ ಭವ್ಯತೆಯ ರೊಮ್ಯಾಂಟಿಕ್ ಖುಷಿಯಲ್ಲೂ,
"ಕೆಂಪು ಮಣ್ಣು ಮೈದಡವಿ
ಹದ ಮಾಡಬೇಕಿಲ್ಲಿ"
ಎಂಬ ಎಚ್ಚರದ ಪ್ರಜ್ಞೆ ಮೆಚ್ಚುವಂಥಾದ್ದು.
ರೂಪಕಗಳಲ್ಲಿ ಕಾವ್ಯ ಕಟ್ಟುವ ಸೃಜನಶೀಲ
ಪ್ರತಿಭೆ ಪವಿತ್ರ ಅವರಲ್ಲಿದೆ ಎಂಬುದಕ್ಕೆ ಮತ್ತೊಂದು ನಿದರ್ಶನ
ಮೌನ ಮಾತು.
ಎಚ್ಚಸ್ವಿ ಅವರು ಹೇಳಿರುವಂತೆ,
ರೂಪಕವಾಗಿ ಮಾತು ಮೌನದಲ್ಲೆ ಸಂಭವಿಸಿ ಬೇರೆ ಬೇರೆ ಅರ್ಥಗಳ ನೆಲೆಗೆ
ಚಾಚಿಕೊಳ್ಳುವುದು ಪ್ರತಿಭಾ ಸಾಹಸವೇ.
ಆದರೆ ಇದೇ ಮಾತನ್ನು ಸಾರಾಸಗಟಾಗಿ ಸಂಕಲನದ ಎಲ್ಲ ಕವನಗಳಿಗೂ
ಅನ್ವಯಿಸಲಾಗದು. ಅರ್ಥದ ನೆಲೆಗಳನ್ನು
ಕೂಡಿಸುವ, ಕಾವ್ಯಶಿಲ್ಪವಾಗಿಸುವ ಅಂತರ್ಗತ
ತಂತುಗಳು ಕಾಣದೆ ಎಷ್ಟೋ ಕವನಗಳು ಬಿಡಿ- ಬಿಡಿ
ರೂಪಕಗಳಾಗಿಯೇ ಉಳಿದು ಬಿಡುತ್ತವೆ. ಹೀಗಾಗಿಯೇ
ಇಡಿ ಕವನಗಳಿಗಿಂತ, ಮೌನ-
ಜೀವ, ಕಣ್ಣಾ ಮುಚ್ಚಾಲೆ,
ಬಿಂಬ ಇಂಥ ಬಿಡಿ ರೂಪಕಗಳು ಹೆಚ್ಚು
ಅರ್ಥಪೂರ್ಣವಾಗಿ ಥಟ್ಟನೆ ನಮ್ಮನ್ನು ಸೆರೆಹಿಡಿಯುತ್ತವೆ,
ಭರವಸೆ ಹುಟ್ಟಿಸುತ್ತವೆ..
ಟಿಎಸ್‌ಐ
ಜಿ.ಎನ್. ರಂಗನಾಥ
ರಾವ್
ಕೃತಿಯ ಪುಟಗಳಿಂದ...
... ಮೌನ-
ಜೀವ
ನೀರವತೆ ಹೀರಿ ಕುಡಿಯ
ಸೊಡರು ಉರಿಯುತಿದೆ.
ಕಟ್ಟು ಗೊದ್ದ
ಪುಳಕ್ ಪುಳಕ್ ಅಂತ ಜಾರುವ
ಪಚ್ಚೆ ಹಸಿರ ಗೋಪುರದಲಿ
ಕೆಂಡ ಸಂಪಿಗೆ
ಧಿಗ್ಗನೆಂದು ಹೊತ್ತಿದೆ!
ಸಂತತನ
ನೀಲಿ ನಕ್ಷತ್ರ
ಹಸಿರು ಹೂವು
ಕೆಂಪು ಹಳದಿ ಪಟ್ಟೆ ಜಿಂಕೆ
ಬೂದಿ ಕಣ್ಣ ಗೊರವಯ್ಯ
ಕುಣಿಯುತ್ತಾ ಉಸಿರುದೇಕಿದರು
ಅಜ್ಜಿ ಹೆಣೆಯುವ ಹುಟ್ಟುಗಳಲಿ
ಕತೆ ಮಾತ್ರ ಬಿಮ್ಮನೆ
ಮೌನಿ |