|
| ಅರಿಂದಮ್ ಚೌಧುರಿ, |
ಪ್ರಧಾನ ಸಂಪಾದಕರು,
ದ ಸಂಡೆ ಇಂಡಿಯನ್
|
ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಅವರ
ಅಧಿಕಾರಾವಧಿ ಮುಕ್ತಾಯ ಕಾಣಲು ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ.
ಈ ಸಂದರ್ಭದಲ್ಲಿ ಮಾಧ್ಯಮ, ಬ್ಲಾಗ್
ಮತ್ತಿತರ ಎಲ್ಲಾ ಕಡೆ ಪತ್ರಕರ್ತರು,
ಅಂಕಣಕಾರರು, ವಿದೇಶಾಂಗ ನೀತಿ ಪರಿಣಿತರು
ಮತ್ತು ವಿವಿಧ ನಾಯಕರು ಬುಷ್ ಆಡಳಿತದ ಬಗ್ಗೆಯೇ ಚರ್ಚಿಸತೊಡಗಿದ್ದಾರೆ.
ವಾಸ್ತವವೇನೆಂದರೆ, ಬಹುಶಃ
ಅಮೆರಿಕದ ಯಾವ ಅಧ್ಯಕ್ಷರೂ ತಮ್ಮ ಅಧಿಕಾರವಧಿಯಲ್ಲಿ ಎದುರಿಸದಿರುವಷ್ಟು
ಟೀಕೆಗಳು ಇದೀಗ ಬುಷ್ ಮೇಲೆ ಎಲ್ಲಾ ಕಡೆಯಿಂದ ಎರಗುತ್ತಿವೆ.
ಕೆಲವು ಪತ್ರಿಕೆಗಳಂತೂ ದೇಶ ಕಂಡ ಅತ್ಯಂತ ಕೆಟ್ಟ ಅಧ್ಯಕ್ಷ ಎಂಬ
ಕುಖ್ಯಾತಿ ಹೊತ್ತು ಬುಷ್ ಅಮೆರಿಕ ಇತಿಹಾಸದ ಪುಟ ಸೇರಲಿದ್ದಾರೆ ಎಂದೂ
ಭವಿಷ್ಯ ನುಡಿದಿವೆ. ಅಮೆರಿಕದ ಮಹಾ
ಆರ್ಥಿಕ ಬಿಕ್ಕಟ್ಟಿನ ಅವಧಿಯ ಅಧ್ಯಕ್ಷ ಹಾರ್ಡಿಂಗ್ ಅವರಿಗಿಂತ ತೀರಾ
ನಿಕೃಷ್ಟ ಎಂದರೆ ಅದು ಬುಷ್ ಅವರಿಗೆ ಸರಿಯಾಗಿ ಹೊಂದಿಕೆಯಾಗುವ
ಹೋಲಿಕೆಯಾಗುತ್ತದೆ ಎನ್ನುವ ಮಟ್ಟಿಗೂ ಕೆಲವರು ಅವರನ್ನು ಟೀಕಿಸಿದ್ದಾರೆ.
ಆದರೆ, ಈ ಎಲ್ಲದರ ನಡುವೆಯೂ
ಫಾರಿನ್ ಅಫೇರ್‍ಸ್,
ದ ಎಕನಾಮಿಸ್ಟ್ ಮತ್ತಿತರ
ಜಾಗತಿಕ ಮಟ್ಟದ ಪತ್ರಿಕೆಗಳಲ್ಲಿನ ಕೆಲವು ಲೇಖನಗಳು ನನ್ನ ಗಮನ ಸೆಳೆದವು.
ಬೇರಾವುದೇ ಕಾರಣಕ್ಕಾಗಿಯಲ್ಲ,
ಬದಲಾಗಿ ಅಲ್ಲಿ ಅಂಕಣಕಾರರು ಬುಷ್ ವಿಷಯದಲ್ಲಿ ವ್ಯಕ್ತಪಡಿಸಿರುವ ಧೋರಣೆ
ಮತ್ತು ಅವರ ವಿಭಿನ್ನ ದೃಷ್ಟಿಕೋನಕ್ಕಾಗಿ ಅವು ಗಮನಾರ್ಹ ಎನಿಸಿದವು.
ದೃಷ್ಟಿಕೋನ ಹೊಸ ಬಗೆಯದು ಮಾತ್ರವಲ್ಲ,
ಬುಷ್ ಅವರನ್ನು ಕ್ರೂರಿ, ಕೌಬಾಯ್
ಅಥವಾ ಪ್ರಕ್ಷುಬ್ಧ ವ್ಯಕ್ತಿತ್ವ ಎಂದು ಮನಬಂದಂತೆ ಜರೆದ ಜಗತ್ತನ್ನು
ಮತ್ತೊಮ್ಮೆ ಯೋಚನೆಗೆ ಹಚ್ಚುವಂತೆ ಅವರು ಬರೆದಿದ್ದಾರೆ.
ಅಧಿಕಾರದಿಂದ ಸದ್ದಿಲ್ಲದೆ ಇಳಿಯುತ್ತಿರುವ ಬುಷ್ ಅವರಿಗೆ ನಾವು
ಶಹಬ್ಬಾಸ್‌ಗಿರಿ ನೀಡಬಹುದಾದ ಕೆಲವಾದರೂ ಕೆಲಸಗಳು ಕಣ್ಣಿಗೆ ಕಾಣುತ್ತವೆಯೇ
ಅವಲೋಕಿಸೋಣ.
ುಷ್ ಅನುಸರಿಸಿದ ಮಾರ್ಗ, ಅದರಲ್ಲೂ
ವಿದೇಶಾಂಗ ನೀತಿಯಂತಹ ಜಾಗತಿಕ ಮಹತ್ವದ ವಿಷಯಗಳಲ್ಲಿ ತೀರಾ ಉದ್ಧಟತನದ್ದು
ಮತ್ತು ಬೆದರಿಕೆ ತಂತ್ರದಿಂದ ಕೂಡಿತ್ತು ಎಂಬುದರಲ್ಲಿ ಯಾವುದೇ
ಅನುಮಾನವಿಲ್ಲ. ಆದರೆ,
ಅದೇ ಹೊತ್ತಿಗೆ ಬುಷ್ ಮತ್ತು ಅವರ ಆಡಳಿತ ಕೆಲವು ನಿರ್ಣಾಯಕ
ಕಾರ್ಯನೀತಿಗಳ ವಿಷಯದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ಪಡೆಯುವ
ಪ್ರಯತ್ನವನ್ನೂ ಮಾಡಿತು ಎಂಬುದನ್ನು ಮರೆಯುವಂತಿಲ್ಲ.
ಒಬ್ಬ ಭಾರತೀಯನಾಗಿ ನಾನು, ನಮ್ಮ
ಕಡೆಯಿಂದ ಬಂದ ಟೀಕೆಗಳ ಹೊರತಾಗಿಯೂ ನಮ್ಮ ದೇಶಕ್ಕೆ
(ಚೀನಾಕ್ಕೆ ಕೂಡ) ಎಲ್ಲಾ
ವಿಷಯಗಳಲ್ಲೂ ನ್ಯಾಯಯುತವಾಗಿ ಸಲ್ಲಬೇಕಾದ ಮಾನ್ಯತೆಯನ್ನು ನೀಡಿದರು
ಎಂಬುದನ್ನು ತಳ್ಳಿಹಾಕಲಾರೆ. ಸ್ಥಳೀಯವಾಗಿ
ಅಷ್ಟೆಲ್ಲಾ ವಿರೋಧವಿದ್ದಾಗ್ಯೂ ಬುಷ್ ಅಮೆರಿಕದಿಂದ ಭಾರತ ಪಡೆಯುತ್ತಿದ್ದ
ಹೊರಗುತ್ತಿಗೆ ವ್ಯವಹಾರವನ್ನು ಬೆಂಬಲಿಸಿದ್ದಷ್ಟೇ ಅಲ್ಲ,
ಅದು ಅಬಾಧಿತವಾಗಿ ಮುಂದುವರಿಯುವಂತೆ ನೋಡಿಕೊಂಡರು.
ಹಾಗೇ ಅಣು ಇಂಧನ ಕ್ಷೇತ್ರದಲ್ಲಿ ಭಾರತಕ್ಕೆ ಸಿಗಬೇಕಾದ ಮಾನ್ಯತೆ
ನೀಡುವ ನಿಟ್ಟಿನಲ್ಲಿ ಬುಷ್ ನೀಡಿದ ಅಚಲ ಬೆಂಬಲ ಅವರ ಪ್ರಬಲ ಇಚ್ಛಾಶಕ್ತಿಗೆ
ನಿದರ್ಶನ. ಚೀನಾದೊಂದಿಗಿನ ಮುಸುಕಿನ
ಗುದ್ದಾಟದ ಹೊರತಾಗಿಯೂ ಆ ದೇಶಕ್ಕೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ
ನೀಡಬೇಕಾದ ಸ್ಥಾನ-ಮಾನಗಳನ್ನು ಗೌರವಿಸದೇ
ಇದ್ದರೆ ಅದು ಭವಿಷ್ಯದಲ್ಲಿ ದುಬಾರಿಯಾಗಿ ಪರಿಣಮಿಸಲಿದೆ ಎಂಬುದನ್ನೂ ಅವರು
ನೆನಪಿಟ್ಟುಕೊಂಡಿದ್ದರು. ಜಾಗತಿಕ ಅರ್ಥ
ವ್ಯವಸ್ಥೆಯ ಹಿತಕ್ಕಾಗಿ ಚೀನಾದ ಉದ್ಧಟತನವನ್ನು (ಗಡಿ
ವಿವಾದಗಳಿರಲಿ ಅಥವಾ ಆಫ್ರಿಕಾಕ್ಕೆ ಬೇಷರತ್ ಬೆಂಬಲ ನೀಡಿದ್ದಾಗಲೀ)
ಸಹಿಸಿಕೊಂಡಿರುವುದು ಮುಖ್ಯ ಎಂದು ಬುಷ್ ಆಡಳಿತ ಅರಿತಿತ್ತು
ಎನ್ನುವುದು ಅದರ ಕಾರ್ಯನೀತಿಗಳಲ್ಲೇ ವ್ಯಕ್ತವಾಗುತ್ತದೆ.
ಹಾಗೆ ನೋಡಿದರೆ, ಟಿಬೆಟ್
ಸಮಸ್ಯೆಯ ವಿಷಯದಲ್ಲಿ ಅಮೆರಿಕಕ್ಕೆ ತನ್ನದೇ ಆದ ಅಭಿಪ್ರಾಯಗಳಿದ್ದಾಗ್ಯೂ
ಬುಷ್ ಒಲಿಂಪಿಕ್ಸ್ ಸಂದರ್ಭದಲ್ಲಿ ಅದಾವುದನ್ನೂ ತೋರಗೊಡದೆ ಸಾಧ್ಯವಾದಷ್ಟು
ಸಹಜವಾಗೇ ನಡೆದುಕೊಂಡರು. ಏಕೆಂದರೆ,
ಚೀನಾದೊಂದಿಗೆ ಸಂಬಂಧ ಸುಧಾರಣೆಯ ಉತ್ತಮ ಮಾರ್ಗವೆಂದರೆ ಅದನ್ನು
ಒಂದಲ್ಲಾ ಒಂದು ರೀತಿಯಲ್ಲಿ ಕಾರ್ಯಮಗ್ನವಾಗಿ ಇರುವಂತೆ ನೋಡಿಕೊಳ್ಳುವುದು
ಎಂಬುದನ್ನವರು ಚೆನ್ನಾಗಿ ಬಲ್ಲರು.
ಭಯೋತ್ಪಾದನೆ ವಿರುದ್ಧದ ಸಮರ ಸೇರಿದಂತೆ ಬುಷ್ ಆಡಳಿತದ ಹಲವು ಕ್ರಮಗಳು
ತೀರಾ ಭಯಾನಕವಾಗಿದ್ದವು ಎಂಬುದಲ್ಲಿ ಯಾವ ಅನುಮಾನವೂ ಇಲ್ಲ.
ಆ ಬಗ್ಗೆ ನಮ್ಮ ಸಮೂಹದ ಪತ್ರಿಕೆಗಳಲ್ಲಿ ಪ್ರಮುಖವಾಗಿ
ಚರ್ಚಿಸಿದ್ದೇವೆ. ಆಫ್ಘಾನಿಸ್ತಾನ್ ಮತ್ತು
ಇರಾಕಿನಲ್ಲಿನ ಅಮೆರಿಕ ಕಾರ್ಯಾಚರಣೆ ಮತ್ತು ಅದರ ಪರಿಣಾಮಗಳ
ಹಿನ್ನೆಲೆಯಲ್ಲಿ ಬುಷ್ ಅವರ ಆ ಕ್ರಮಗಳು ಎಂದಿಗೂ ಕ್ಷಮಾರ್ಹವಲ್ಲ ಎಂಬುದರ
ಜೊತೆಗೇ ಅಮೆರಿಕದಲ್ಲಿ ಮತ್ತೊಂದು ಸೆಪ್ಟೆಂಬರ್ 11ರ
ದುರಂತ ಸಂಭವಿಸಲಿಲ್ಲ ಎಂಬುದನ್ನು ಮರೆಯಲಾಗದು.
ಆಲ್‌ಖೈದಾ ಮತ್ತು ಅದರ ಸಹ ಸಂಘಟನೆಗಳನ್ನು ಹದ್ದುಬಸ್ತಿನಲ್ಲಿಡುವ
ನಿಟ್ಟಿನಲ್ಲಿ ಬುಷ್ ಕ್ರಮ ಕೈಗೊಳ್ಳದೇ ಇದ್ದಿದ್ದರೆ ಜಗತ್ತು ಬಿನ್ ಲಾಡೆನ್‌ನ
ಸರ್ವಾಧಿಕಾರಿ ಮನೋಭಾವ ಮತ್ತು ಸ್ವೇಚ್ಛೆಯ ಕೊಲೆಗಳಿಂದಾಗಿ ಇನ್ನಷ್ಟು
ಭೀಕರ ದಿನಗಳನ್ನು ಕಾಣುತ್ತಿತ್ತು ಎಂಬುದನ್ನು ಕೂಡ ಅಲ್ಲಗಳೆಯಲಾಗದು.
ಇರಾನ್ ಮತ್ತು ಉತ್ತರ ಕೊರಿಯಾ ವಿರುದ್ಧ ತಮ್ಮ ಹಠಮಾರಿ ತಾರತಮ್ಯ
ನೀತಿಯ ಕಾರಣದಿಂದಾಗಿಯೂ ಬುಷ್ ಸಾಕಷ್ಟು ಟೀಕೆಗಳನ್ನು ಎದುರಿಸಿದರು.
ಈ ಎರಡೂ ದೇಶಗಳು ಇತರ ದೇಶಗಳಂತೆಯೇ ತಮ್ಮನ್ನು ತಾವು
ರಕ್ಷಿಸಿಕೊಳ್ಳುವ ಹಕ್ಕು ಹೊಂದಿವೆ ಎಂಬುದನ್ನು ಒಪ್ಪಲೇಬೇಕು.
ಆದರೆ, ಶ್ವೇತಭವನದಿಂದ ಆ
ಪ್ರಮಾಣದ ಒತ್ತಡ ಬರದೇ ಇದ್ದಿದ್ದರೆ ಉತ್ತರ ಕೊರಿಯಾ ತನ್ನ ಅಣ್ವಸ್ತ್ರ
ಕಾರ್ಯಕ್ರಮವನ್ನು ಕೈಬಿಡುವ ಪ್ರಶ್ನೆಯಾಗಲೀ,
ಆ ಮೂಲಕ ಅದರ ರಾಜಧಾನಿ ಪಿಯಾಂಗಯಾಂಗ್‌ನಿಂದ ಜಪಾನ್ ಮತ್ತು
ದಕ್ಷಿಣ ಕೊರಿಯಾಕ್ಕೆ ಇದ್ದ ನಿರಂತರ ಅಪಾಯಕ್ಕೆ ಇತಿಶ್ರೀ ಹಾಡುವುದಾಗಲೀ
ಸಾಧ್ಯವಾಗುತ್ತಿರಲಿಲ್ಲ. ಹಾಗೇ ಇರಾನ್
ಕೂಡ ಇಷ್ಟರಲ್ಲಾಗಲೇ ಇಸ್ರೇಲ್ ಒಂದು ತುಂಡುಭೂಮಿಯಾಗಿ ಅಸ್ತಿತ್ವ
ಕಂಡುಕೊಳ್ಳುವಂತೆ ಮಾಡದೇ ಇರುತ್ತಿರಲಿಲ್ಲ ಎಂಬುದು ಕೂಡ ಅಷ್ಟೇ ಸತ್ಯ.
ಕೊನೆಗೆ ಇಸ್ರೇಲ್ ಮೇಲೆ ಇರಾನ್ ಅಣ್ವಸ್ತ್ರ ದಾಳಿ ನಡೆಸುವ ಮೂಲಕ
ಮಧ್ಯಪ್ರಾಚ್ಯ ಶಾಂತಿ ಪ್ರಕ್ರಿಯೆಗೆ ಶಾಶ್ವತ ಪೂರ್ಣವಿರಾಮವೂ ಬೀಳುವ
ಸಾಧ್ಯತೆ ಇತ್ತು.
ರಷ್ಯಾ ಈಗಲೂ ಒಂದು ಗಣನೀಯ ಶಕ್ತಿ ಮತ್ತು ಇತರ ಅಭಿವೃದ್ಧಿಶೀಲ
ರಾಷ್ಟ್ರಗಳಂತೆ ಅದನ್ನು ಪರಿಗಣಿಸಲಾಗದು ಎಂಬುದನ್ನು
ಅರ್ಥಮಾಡಿಕೊಂಡದ್ದಕ್ಕಾಗಿ ಬುಷ್ ಅವರನ್ನು ಅಭಿನಂದಿಸಲೇಬೇಕು.
ಹಿಂದಿನ ಇತಿಹಾಸವನ್ನು ಗಮನಿಸಿದರೆ ಒಬ್ಬ ಅಮೆರಿಕ ಅಧ್ಯಕ್ಷರಿಗೆ
ರಷ್ಯಾದ ವಿಷಯದಲ್ಲಿ ಅಂತಹ ನಿರ್ಧಾರಕ್ಕೆ ಬರುವುದು ಸುಲಭವೇನೂ ಆಗಿರಲಿಲ್ಲ.
ಹಾಗೇ ಯಾರ ಗಮನಕ್ಕೂ ಬರದ ಮತ್ತೊಂದು ಅಂಶವೆಂದರೆ ಬುಷ್
ಆಡಳಿತಾವಧಿಯಲ್ಲಿ ಆಫ್ರಿಕಾಕ್ಕೆ ನೀಡಿದ ನೆರವಿನ ಪ್ರಮಾಣ ಹಿಂದಿನ
ಅವಧಿಗಳಿಗಿಂತ ಮೂರುಪಟ್ಟು ಹೆಚ್ಚಾಗಿದ್ದು. 2001ರ
ಹೊತ್ತಿಗೆ 1.5 ಶತಕೋಟಿ ಅಮೆರಿಕನ್ ಡಾಲರ್
ಇದ್ದ ನೆರವಿನ ಪ್ರಮಾಣ ಬುಷ್ ಅವಧಿಯಲ್ಲಿ ಮೂರು ಪಟ್ಟು ಹೆಚ್ಚಾಯಿತು.
ಇನ್ನು ಮಾನವ ಅಭಿವೃದ್ಧಿ ಕಾರ್ಯಗಳಿಗೆ ನೀಡುವ ಅನುದಾನ-
ಈಗಲೂ ತೀರಾ ಕಡಿಮೆ ಎನಿಸಿದರೂ-
ನಾಲ್ಕು ಶತಕೋಟಿ ಅಮೆರಿಕನ್ ಡಾಲರ್‌ಗೆ ಏರಿತು.
ಅವರ ಸಜ್ಜನಿಕೆಯ ಕಾರಣಕ್ಕಾಗಿಯೂ ಜಗತ್ತು ಬುಷ್‌ರನ್ನು ನೆನಪಿಟ್ಟುಕೊಳ್ಳದೇ
ಇರಲಾರದು. ಜಿ-೮
ರಾಷ್ಟ್ರಗಳ ಸಭೆಗಳ ಸಂದರ್ಭದಲ್ಲಂತೂ ಆಫ್ರಿಕಾದ ಹಲವು ಬಡ ರಾಷ್ಟ್ರಗಳ
ನಾಯಕರ ಜೊತೆಗೆ ಸಾಧ್ಯವಾದಷ್ಟು ಸರಳತೆ ಮತ್ತು ಸಜ್ಜನಿಕೆಯಿಂದಲೇ ಅವರು
ನಡೆದುಕೊಂಡರು. ಜೊತೆಗೆ ತನ್ನ
ಪೂರ್ವಿಕರಂತಲ್ಲದೆ ಅಮೆರಿಕ ಹೊರತುಪಡಿಸಿದ ಜಗತ್ತು ಆ ದೇಶದ ಮೇಲೆ
ಸಂಪೂರ್ಣ ಅವಲಂಬಿತವಾಗದೇ ಸಾಧ್ಯವಾದಷ್ಟು ತನ್ನ ಕಾಲ ಮೇಲೆ ತಾನು
ನಿಲ್ಲುವಂತೆ ಮಾಡಿದ ಕಾರಣಕ್ಕಾಗಿಯೂ ಬುಷ್ ಅವರನ್ನು ಮರೆಯುವುದು
ಸಾಧ್ಯವಿಲ್ಲ. ಅವರ ಅವಧಿಯಲ್ಲಿ ಅಮೆರಿಕದ
ಮೇಲೆ ಅವಲಂಬಿತವಾಗುವುದು ಇತರ ರಾಷ್ಟ್ರಗಳಿಗೆ ಅಂತಹ ಲಾಭದಾಯಕವಾಗೇನೂ
ಆಗಿರಲಿಲ್ಲ ಎಂಬುದು ಬೇರೆ ಮಾತು. ಈ
ವಿಷಯದಲ್ಲಿ ಜಾರ್ಜಿಯಾಕ್ಕಿಂತ ಹೆಚ್ಚಿನ ಅನುಭವ ಇನ್ನಾರಿಗೆ ಇದೆ?!
|