ಇದು ನಮ್ಮ ವಿಶೇಷ ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ದೂರದೂರಿಂದ
 
 

ಥಾಯ್ಲೆಂಡ್: ಸಮಸ್ಯೆ

ಮತ್ತೆ ಕಾಡುತ್ತಿರುವ ರಾಜಕೀಯ ಬಿಕ್ಕಟ್ಟು

ಸದ್ಯಕ್ಕೆ ಉಳಿದಿರುವುದು ಎಲ್ಲವೂ ಸರಿಯಾಗಲಿದೆ ಎಂಬ ಆಶಾವಾದ

ಹಿಂದೆಂದೂ ಕಾಣದ ರಾಜಕೀಯ ಸಂಕಷ್ಟಕ್ಕೆ ಥಾಲೆಂಡ್ ಸಿಲುಕಿದೆ. ಸರ್ಕಾರದ ವಿರುದ್ಧ ಸಾವಿರಾರು ಪ್ರತಿಭಟನಾಕಾರರು ಬೀದಿಗಿಳಿದು ಘೋಷಣೆ ಕೂಗುತ್ತಿದ್ದಾರೆ. ಈ ಹಿಂದೆ ಪ್ರಧಾನಮಂತ್ರಿ ಥಾಕ್ಸಿನ್ ಶಿನಾವಾತ್ರಾ ಅವರನ್ನು ಪದಚ್ಯುತಗೊಳಿಸಿದ ಪ್ರತಿಭಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪ್ರತಿಭಟನಾಕಾರರ ಮೈತ್ರಿ ಕೂಟ ‘ಪೀಪಲ್ಸ್ ಅಲೆಯನ್ಸ್ ಫಾರ್ ಡೆಮಾಕ್ರಸಿ’ (ಪಿಎಡಿ) ಈಗಿನ ಪ್ರತಿಭಟನೆಯ ನೇತೃತ್ವವನ್ನೂ ವಹಿಸಿದೆ. ಪ್ರಧಾನಮಂತ್ರಿ ಸಮಕ್ ಸುಂದರವೇಜ್ ಅವರ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿರುವ ಪಿಎಡಿ ಇನ್ನೂ ಅಲ್ಲಿಂದ ಕದಲಿಲ್ಲ. ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಸಮಕ್ ಅವರು ರಾಜೀನಾಮೆ ನೀಡಬೇಕೆಂದು ಪ್ರತಿಭಟನಾಕಾರು ಒತ್ತಾಯ ಹೇರಿದ್ದಾರೆ.

ಆದರೆ ಇದುವರೆಗೆ ಯಾವುದೇ ದೊಡ್ಡ ಗಲಭೆಗಳಾದ ವರದಿಗಳು ದೊರೆತಿಲ್ಲವಾದರೂ, ಪೊಲೀಸರ ಜೊತೆಗಿನ ಸಣ್ಣ ಪುಟ್ಟ ಹೊಡೆದಾಟದಲ್ಲಿ ಸುಮಾರು 126 ಮಂದಿ ಗಾಯಗೊಂಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ದೇಶದೆಲ್ಲೆಡೆ ನಡೆದಿರುವ ಮುಷ್ಕರದಿಂದಾಗಿ ಸುಮಾರು 98 ರೈಲುಗಳು, 118 ವಿಮಾನಗಳ ಸಂಚಾರ ರದ್ದಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಒಂದೆಡೆ ಥಾಲೆಂಡ್‌ನಲ್ಲಿ ಬಿಕ್ಕಟ್ಟು ಸೃಷ್ಟಿಗೆ ಕಾರಣವಾಗಿರುವ ಪಿಎಡಿ, ಪ್ರಧಾನಿ ಸಮಕ್ ಅವರನ್ನು ಹಿಂದಿನ ಪ್ರಧಾನಿ ಶಿನಾವಾತ್ರಾ ಅವರ ಸೂತ್ರದ ಬೊಂಬೆ ಎಂದು ಆರೋಪಿಸಿ ಅಧಿಕಾರದಿಂದ ಕೆಳಗಿಳಿಯಲು ಒತ್ತಾಯಿಸಿದೆ. ಮತ್ತೊಂದೆಡೆ ಸಮಕ್ ಅವರು ಪಿಎಡಿಯನ್ನು ಅನಧಿಕೃತ ಸಂಘಟನೆ ಎಂದು ಜರೆದಿದ್ದಾರೆ. ಪ್ರಸ್ತುತ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸಮಕ್ ಅವರು ತುರ್ತು ಪರಿಸ್ಥಿತಿಯನ್ನೂ ಘೋಷಿಸಿದ್ದಾರೆ. ಸರ್ಕಾರದ ಕುತ್ತಿಗೆ ಮೇಲೆ ಕುಳಿತಿರುವ ಪ್ರತಿಭಟನಾಕಾರರನ್ನು ಹೊಡೆದೋಡಿಸಲು ಸೇನೆಯನ್ನು ಬಳಸಿಕೊಳ್ಳುವ ಯೋಚನೆಯಲ್ಲಿರುವ ಅವರು, ತುರ್ತು ಸಂಸತ್ ಅಧಿವೇಶನ ಕರೆದಿದ್ದರು. ಆದರೆ ಅದರಿಂದ ಯಾವುದೇ ಲಾಭವಾಗಿಲ್ಲ. "ಸಂಸತ್ತಿನ ವಿಶೇಷ ಅಧಿವೇಶನ ಯಾವುದೇ ಪರಿಹಾರ ಕಂಡುಕೊಳ್ಳದೆ ಅಂತ್ಯವಾಗಿರುವುದಕ್ಕೆ ನಮಗೆ ನಿರಾಶೆಯಾಗಿದೆ. ಸರ್ಕಾರದ ಮೇಲೆ ಇನ್ನಷ್ಟು ಒತ್ತಡ ಹೇರುವ ಹೊರತಾಗಿ ನಮ್ಮ ಬಳಿ ಇನ್ಯಾವ ದಾರಿಯೂ ಉಳಿದಿಲ್ಲ" ಎಂದು ಸಂಸದೀಯ ಸಭೆ ವಿರುದ್ಧ ಪ್ರತಿಕ್ರಿಯಿಸಿರುವ ಪಿಎಡಿ ನೇತಾರ ಸೋಮ್ಸಕ್ ಕೊಸಾಯ್ಸುಕ್ ಹೇಳಿದ್ದಾರೆ.

ಸದ್ಯದ ಥಾಲೆಂಡ್ ಬಿಕ್ಕಟ್ಟನ್ನು ಪರಿಹರಿಸುವುದು ಸುಲಭದ ಮಾತೇನಲ್ಲ. ಸಮಕ್ ಅವರು ಕ್ಷಿಪ್ರ ಚುನಾವಣೆಗೆ ಕರೆ ನೀಡಲು ಸಂಸತ್ತನ್ನು ವಿಸರ್ಜಿಸಿದರೂ, ಈಗಾಗಲೇ ಸಾಕಷ್ಟು ಒತ್ತಡದ ಪರಿಸ್ಥಿತಿಯನ್ನು ಎದುರಿಸಿರುವ ಅವರ ‘ಪೀಪಲ್ ಪವರ್ ಪಕ್ಷ’ ಸೋಲುಣ್ಣುವುದು ಖಚಿತ. ಇದು ಪ್ರತಿಭಟನೆಗೆ ಇನ್ನಷ್ಟು ತುಪ್ಪ ಸುರಿಯಬಹುದು. ಹಾಗೆಯೇ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದೆ ಇದ್ದಲ್ಲಿ ಮತ್ತು ಪ್ರತಿಭಟನಾಕಾರರ ಹತ್ಯೆ ನಡೆದಲ್ಲಿ ಸೇನೆ ಮತ್ತೊಮ್ಮೆ ಬಂಡಾಯ ಏಳುವ ಸಾಧ್ಯತೆ ಇದೆ. ಹಾಗಾದಲ್ಲಿ 2006ರಲ್ಲಿ ಥಾಕ್ಸಿನ್ ಶಿನಾವಾತ್ರಾ ಅವರನ್ನು ಒತ್ತಾಯಪೂರ್ವಕವಾಗಿ ಅಧಿಕಾರದಿಂದ ಇಳಿಸಿದ ರೀತಿ ಪುನರಾವರ್ತನೆಯಾಗಲಿದೆ.

ಇಲ್ಲಿ ರಾಜ ಭೂಮಿಬೋಲ್ ಅದುಲ್ಯಾಡೆಜ್ ಅವರ ಮಧ್ಯಪ್ರವೇಶ ನಿರ್ಣಾಯಕವೆನಿಸಲಿದೆ. ಈ ಹಿಂದೆ ಹಲವು ಬಾರಿ ಅವರು ಮುಂದೆ ಬಂದು ಅನೇಕ ಚುನಾಯಿತ ಸರ್ಕಾರ ಅಥವಾ ಸೇನಾ ಆಡಳಿತದ ಪರವಾಗಿ ನಿಂತ ಉದಾಹರಣೆಗಳಿವೆ. ಆದರೆ ಅದೂ ಸದ್ಯದ ಆಡಳಿತ ಸರ್ಕಾರಕ್ಕೆ ಪ್ರತಿಕೂಲವಾಗಿ ಪರಿಣಮಿಸಬಹುದು. ಏಕೆಂದರೆ ಈಗಾಗಲೇ ರಾಜ ಸರ್ಕಾರದ ಆರ್ಥಿಕ ನೀತಿ ಬಗ್ಗೆ ಹಾಗೂ ಹಣದುಬ್ಬರ ಪರಿಸ್ಥಿತಿಯನ್ನು ಬ್ಯಾಂಕ್ ಆಫ್ ಥಾಲೆಂಡ್ ನಿಭಾಯಿಸುತ್ತಿರುವ ರೀತಿಗೆ ಅವರು ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಸದ್ಯದ ಮಟ್ಟಿಗೆ ಉಳಿದಿರುವುದು ಎಲ್ಲವೂ ಸರಿಯಾಗಬಹುದು ಎನ್ನುವ ಆಶಾವಾದ ಮಾತ್ರ!

ಟಿಎಸ್‌ಐ

ಶಶಾಂಕ್ ತ್ರಿಪಾಠಿ

ಆಫ್ರಿಕಾ: ಸಂಘರ್ಷ

ಬೇಗುದಿಗೆ ತುಪ್ಪ ಸುರಿವ ನಿರ್ಧಾರ

ಸೇನೆ ಹಿಂತೆಗೆತ ಇಂಗಿತ ವ್ಯಕ್ತಪಡಿಸಿದ ಇಥಿಯೋಪಿಯ ಸರ್ಕಾರ

Farpavilion- The Sunday Indian- Kannada

ಆಫ್ರಿಕಾದ ಬೇಗುದಿಗೆ ಇಥಿಯೋಪಿಯದ ಇತ್ತೀಚಿನ ರಾಜತಾಂತ್ರಿಕ ನಿರ್ಧಾರ ತುಪ್ಪ ಸುರಿಯುವ ಲಕ್ಷಣಗಳಿವೆ. ಯುದ್ಧಪೀಡಿತ ಸೊಮಾಲಿಯದ ಮಧ್ಯಂತರ ಸರ್ಕಾರ ಇನ್ನೂ ಸ್ಥಿರವಾಗಿ ನೆಲೆಯೂರುವ ಮುನ್ನವೇ ಇಥಿಯೋಪಿಯ ತನ್ನ ಸೇನೆಯನ್ನು ವಾಪಸು ಕರೆಸಿಕೊಳ್ಳುವ ನಿರ್ಧಾರ ಪ್ರಕಟಿಸಿದೆ. ಹಾಗೆಯೇ ಆಫ್ರಿಕಾ ಒಕ್ಕೂಟ ಈ ಪ್ರಾಂತದಲ್ಲಿ ಪೂರಕ ಶಾಂತಿಸ್ಥಾಪನಾ ಪಡೆಗಳನ್ನು ನಿಯೋಜಿಸುವವರೆಗೆ ತನ್ನ ಸೇನೆ ಅಲ್ಲಿಯೇ ಇರುವಂತೆ ನೋಡಿಕೊಳ್ಳಲಾಗುವುದು ಎಂದೂ ಇಥಿಯೋಪಿಯ ಸ್ಪಷ್ಟಪಡಿಸಿದೆ. ಈ ನಿಟ್ಟಿನಲ್ಲಿ ಇಥಿಯೋಪಿಯ ಪ್ರಧಾನಿ ಮೆಲೆಸ್ ಜೆನವಿ ತಮ್ಮ ನಿಲುವನ್ನು ಈಗಾಗಲೇ ಪ್ರಕಟಿಸಿದ್ದಾರೆ. "ಈ ಕಾರ್ಯಾಚರಣೆ ಅತೀ ದುಬಾರಿ ಎನಿಸಿದೆ. ಹೀಗಾಗಿ ನಾವು ಒಂದು ಕಡೆ ಆಂತರಿಕ ಒತ್ತಡವನ್ನೂ ಸಹಿಸಿಕೊಳ್ಳಬೇಕಾಗಿದೆ. ಮತ್ತೊಂದು ಕಡೆ ಸೊಮಾಲಿಯದಲ್ಲಿನ ಪರಿಸ್ಥಿತಿಯ ಒತ್ತಡವನ್ನೂ ನಿಭಾಯಿಸಬೇಕಿದೆ. ಹಾಗಾಗಿ ಒಂದು ಸಮತೋಲಿತ ನಿರ್ಧಾರಕ್ಕೆ ಬರಲು ಪ್ರಯತ್ನಿಸುತ್ತಿದ್ದೇವೆ" ಎಂದು ಜೆನವಿ ಹೇಳಿದ್ದಾರೆ.

ಆಫ್ರಿಕಾ ಒಕ್ಕೂಟದಿಂದ ಸಿಕ್ಕ ಅಲ್ಪ- ಸ್ವಲ್ಪ ನೆರವಿನಿಂದ ಸೊಮಾಲಿಯಾದ ಬಂಡುಕೋರರ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗದೆ ಇಥಿಯೋಪಿಯ ಸೇನೆ ಪರದಾಡುತ್ತಿದೆ. ಕಳೆದ ವಾರ ಅನಿರೀಕ್ಷಿತ ದಾಳಿ ನಡೆಸಿದ ಬಂಡುಕೋರರು ತೀರಾ ಆಯಕಟ್ಟಿನ ಬಂದರು ಪಟ್ಟಣ ಕಿಸ್ಮಯೋ ಮೇಲೆ ನಿಯಂತ್ರಣ ಸಾಧಿಸಲು ಯಶಸ್ವಿಯಾಗಿದ್ದರು. ಆ ಹಿನ್ನೆಲೆಯಲ್ಲಿ ಅಲ್ಲಿನ ಪರಿಸ್ಥಿತಿಯನ್ನು ಒಂಟಿಯಾಗಿ ನಿಭಾಯಿಸುವುದು ಕಷ್ಟಸಾಧ್ಯ. ಹಾಗಾಗಿ, ತನಗೆ ಈ ಹೋರಾಟವನ್ನು ಮುಂದುವರಿಸಿಕೊಂಡುಹೋಗುವಲ್ಲಿ ಯಾವ ಆಸಕ್ತಿಯೂ ಇಲ್ಲ ಎಂದು ಇಥಿಯೋಪಿಯ ಆಫ್ರಿಕಾ ಒಕ್ಕೂಟಕ್ಕೆ ಸ್ಪಷ್ಟಪಡಿಸಿದೆ.

ಸೊಮಾಲಿಯ ಸರ್ಕಾರ ಮತ್ತು ಕೆಲವು ವಿರೋಧಿ ಮುಕ್ತ ಮನಸ್ಸಿನ ಮುತ್ಸದ್ದಿಗಳು ಕೊನೆಗೂ ಶಾಂತಿ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದಾರೆ. ಇಸ್ಲಾಮಿಕ್ ಬಂಡುಕೋರ ಪಡೆ ‘ಅಲ್ ಶಬಾಬ್’ ಅದಕ್ಕೆ ಮಾನ್ಯತೆ ನೀಡಲು ನಿರಾಕರಿಸಿದೆ. ಇಥಿಯೋಪಿಯ ಪಡೆಗಳು ಆಡಿಸ್ ಅಬಾಬಕ್ಕೆ ಮರಳಿದ ಬಳಿಕವಷ್ಟೇ ಶಾಂತಿ ಮಾತುಕತೆಗೆ ಮುಂದಾಗುವುದಾಗಿ ‘ಅಲ್ ಶಬಾಬ್’ ಪಡೆಗಳು ಈ ಮೊದಲೇ ದೃಢಪಡಿಸಿದ್ದವು. "ಈ ಕಾರ್ಯಾಚರಣೆ ಕುರಿತು ಇಥಿಯೋಪಿಯ ಆತಂಕ ವ್ಯಕ್ತಪಡಿಸಿದ್ದು, ಈ ವಿಚಾರದಲ್ಲಿ ಸರ್ಕಾರ ಒಮ್ಮತಾಭಿಪ್ರಾಯಕ್ಕೆ ಬರಲು ಇನ್ನೂ ಸಾಧ್ಯವಾಗಿಲ್ಲ. ಇದಕ್ಕೆ ಪೂರಕ ಒತ್ತಡಗಳೆಂಬಂತೆ ಇತ್ತೀಚಿನ ವಾರಗಳಲ್ಲಿ ಬಂಡುಕೋರರ ದಾಳಿ ವಿಪರೀತವಾಗಿದೆ" ಎನ್ನುತ್ತಾರೆ ಟಿಎಸ್‌ಐ ಜೊತೆ ಮಾತನಾಡಿದ ‘ಸೆಂಟರ್ ಫಾರ್ ಪಾಲಿಸಿ ರೀಸರ್ಚ್ ಆಂಡ್ ಡೈಲಾಗ್’ನ ತಜ್ಞ ಡಾ. ಕಸಾಹುನ್ ಬರ್ಹಾನು.

ಯೂನಿಯನ್ ಆಫ್ ಇಸ್ಲಾಮಿಕ್ ಕೋರ್ಟ್ಸ್‌ನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಇಥಿಯೋಪಿಯ 2006ರಲ್ಲಿ ನೆರೆಯ ಸೊಮಾಲಿಯಕ್ಕೆ ತನ್ನ ಪಡೆಗಳನ್ನು ಕಳುಹಿಸಿತ್ತು. ಅಲ್-ಖೈದಾದಿಂದ ಹೊರಬಂದ ಬಂಡುಕೋರರಿಗೆ ಯೂನಿಯನ್ ಆಫ್ ಇಸ್ಲಾಮಿಕ್ ಕೋರ್ಟ್ಸ್ ಆಶ್ರಯ ನೀಡುತ್ತಿದೆ ಎನ್ನುವ ಆರೋಪ ಹೊರಿಸಿದ ಮಿತ್ರ ರಾಷ್ಟ್ರ ಅಮೆರಿಕ ಬಂಡುಕೋರರ ವಿರುದ್ಧ ಹೋರಾಟಕ್ಕೆ ಇಥಿಯೋಪಿಯಕ್ಕೆ ಕುಮ್ಮಕ್ಕು ನೀಡಿತ್ತು. ಇರಾಕ್ ಸಮಸ್ಯೆಯಲ್ಲೇ ಮುಳುಗಿ ಹೋಗಿರುವ ಅಮೆರಿಕದ ಅಸಹಾಯಕತೆಯಿಂದಾಗಿ ಈಗ ಇಥಿಯೋಪಿಯ ಕೂಡಾ ಆಫ್ರಿಕಾದಲ್ಲಿ ಹೋರಾಟ ಮುಂದುವರಿಸಲು ಇಚ್ಛಿಸುತ್ತಿಲ್ಲ.

ಟಿಎಸ್‌ಐ

ಸೌರಭ್ ಕುಮಾರ್ ಶಾಹಿ

ರಷ್ಯಾ: ವಿದೇಶಾಂಗ ನೀತಿ

ಮಧ್ಯ ಏಷ್ಯಾದಲ್ಲಿ ರಷ್ಯಾ ಪ್ರಾಬಲ್ಯ

ಪ್ರಾಂತೀಯ ಬೆಂಬಲ ಖಚಿತಪಡಿಸಿದ ಜಂಟಿ ಒಪ್ಪಂದ

Farpavilion- The Sunday Indian- Kannada

ಅಂತರ್ ರಾಷ್ಟ್ರೀಯ ರಾಜಕಾರಣವೇ ಹಾಗೆ. ಪರಸ್ಪರ ಕತ್ತಿಮಸೆಯುತ್ತಿರುವ ನಾಯಕರು ರಾಜತಾಂತ್ರಿಕ ಪರಿಭಾಷೆ ಮತ್ತು ನುಡಿಗಟ್ಟುಗಳನ್ನು ಬಳಸಿಕೊಂಡು ಒಪ್ಪಂದಗಳಿಗೆ ಬದ್ಧರಾಗುತ್ತಾ ಪ್ರತಿಸ್ಪರ್ಧಿಯ ಮೇಲೆ ತಾಂತ್ರಿಕವಾಗಿ ಜಯಗಳಿಸುತ್ತಾರೆ. ಕಳೆದ ವಾರ ನಡೆದ ‘ಷಾಂಗೈ ಕಾರ್ಪೊರೇಷನ್ ಆರ್ಗನೈಸೇಷನ್’ (ಎಸ್‌ಸಿಒ) ಸಭೆಯೂ ಇದಕ್ಕೆ ಹೊರತಾಗಿರಲಿಲ್ಲ. ಸಭೆಯಲ್ಲಿ ನಿರ್ಣಯವಾಗಿರುವ ವಿಚಾರ ಏನೇ ಆಗಿರಲಿ, ರಷ್ಯಾ ಮತ್ತು ಪಾಶ್ಚಾತ್ಯರು ಕಾರ್ಯತಾಂತ್ರಿಕ ವಿಜಯ ಸಾಧಿಸಿದ ಹೆಮ್ಮೆಯಲ್ಲಿದ್ದಾರೆ. ಎರಡೂ ಪಕ್ಷಗಳ ಪರವಾಗಿರುವ ಮಾಧ್ಯಮಗಳು ಪರಸ್ಪರರ ಜಯದ ಬಗ್ಗೆ ನಗಾರಿ ಬಾರಿಸುತ್ತಿವೆ.

ಚೀನಾ ಮತ್ತು ಹಿಂದಿನ ಸೋವಿಯತ್ ಒಕ್ಕೂಟದ ಸದಸ್ಯರಾಗಿದ್ದ ನಾಲ್ಕು ಮಧ್ಯ ಏಷ್ಯಾ ದೇಶಗಳು ಕಳೆದ ವಾರ ಕಾಕಸಸ್ ಪ್ರಾಂತದ ಮೇಲಿನ ರಷ್ಯಾದ ಹಿಡಿತಕ್ಕೆ ಸಂಬಂಧಿಸಿದಂತೆ ಒಪ್ಪಂದವೊಂದಕ್ಕೆ ಸಹಿ ಹಾಕಿದವು. ಜೊತೆಯಲ್ಲೇ ಈ ದೇಶಗಳು ಜಾರ್ಜಿಯಾ ಸಂಘರ್ಷದ ಬಗ್ಗೆ ತೀವ್ರ ಕಳವಳವನ್ನೂ ವ್ಯಕ್ತಪಡಿಸಿವೆ ಮತ್ತು ಆ ವಿಷಯದಲ್ಲಿ ಸೂಕ್ತ ಮಾತುಕತೆ ಮೂಲಕ ನಿರ್ಣಯವೊಂದಕ್ಕೆ ಬರಲು ಕರೆ ನೀಡಿವೆ. ಚೀನಾ, ರಷ್ಯಾ, ಕಿರ್ಜಿಸ್ತಾನ್, ತಜಕಿಸ್ತಾನ್, ಕಜಖ್‌ಸ್ತಾನ್ ಮತ್ತು ಉಜ್ಬೇಕಿಸ್ತಾನ್ ದೇಶಗಳು ಪ್ರಕಟಿಸಿರುವ ಜಂಟಿ ಹೇಳಿಕೆಯಲ್ಲಿ "ಪ್ರಾಂತದಲ್ಲಿ ಶಾಂತಿ ಮತ್ತು ಸಹಕಾರಕ್ಕೆ ಪ್ರಯತ್ನಿಸುತ್ತಿರುವ ರಷ್ಯಾಗೆ ಸಂಪೂರ್ಣ ನೆರವು ನೀಡುವ" ಘೋಷಣೆ ಮಾಡಿವೆ. ಆದರೆ ಜಾರ್ಜಿಯಾದಿಂದ ಬೇರ್ಪಟ್ಟ ದಕ್ಷಿಣ ಒಸೆಟಿಯಾ ಮತ್ತು ಅಬ್ಖಜಿಯಾ ಪ್ರಾಂತಕ್ಕೆ ಅಧಿಕೃತ ಮನ್ನಣೆ ನೀಡಿರುವ ರಷ್ಯಾದ ನಿಲುವಿನ ಬಗ್ಗೆ ಎಸ್‌ಸಿಒ ಸದಸ್ಯ ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿವೆ. "ದಕ್ಷಿಣ ಒಸೆಟಿಯಾ ಪ್ರಾಂತಕ್ಕೆ ಸಂಬಂಧಿಸಿದಂತೆ ಎದ್ದಿರುವ ಪ್ರಶ್ನೆಗಳು ಸಂಘರ್ಷಕ್ಕೆ ಹಾದಿಮಾಡಿಕೊಡುವ ಕಳವಳವಿದೆ. ಈ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಪರಿಹರಿಸಬೇಕು" ಎಂದು ಕರೆ ನೀಡಿವೆ. ಕ್ರಾಂತಿಯ ಕಹಳೆ ಊದಿರುವ ಪ್ರಾಂತಗಳಿಗೆ ಮನ್ನಣೆ ಕೊಡುವ ರಷ್ಯಾದ ಅಭಿಪ್ರಾಯವನ್ನು ಈ ದೇಶಗಳು ಸಂಪೂರ್ಣ ಬೆಂಬಲಿಸಿಲ್ಲ ಎನ್ನುವುದೇನೋ ನಿಜ.

ಆದರೆ, ಈ ಒಡಂಬಡಿಕೆ ಜಾರ್ಜಿಯಾ ಸಂಘರ್ಷದ ಕುರಿತಂತೆ ‘ಒಮ್ಮತಾಭಿಪ್ರಾಯದ ಪ್ರತೀಕ’ ಎಂದು ರಷ್ಯಾ ಅಧ್ಯಕ್ಷ ಮಿಟ್ರಿ ಮೆಡ್ವೆಡೆವ್ ಅವರು ಹೇಳಿದ್ದಾರೆ. "ಈವರೆಗೂ ತೆರೆಮರೆಯಲ್ಲೇ ಕಾರ್ಯನಿರ್ವಹಿಸುತ್ತಿದ್ದ ರಷ್ಯಾಗೆ ದೊರೆತ ಅತೀ ದೊಡ್ಡ ವಿಜಯ ಎಸ್‌ಸಿಒ ಹೇಳಿಕೆ. ರಷ್ಯಾವನ್ನು ಒಂಟಿಯಾಗಿಸುವ ಕಾರ್ಯಯೋಜನೆಗಳನ್ನು ಸಿದ್ಧಪಡಿಸಿದವರ ಮುಖಕ್ಕೆ ಮಂಗಳಾರತಿಯಾಗಿದೆ. ಈ ಪ್ರಾಂತದಲ್ಲಿ ರಷ್ಯಾ ಮತ್ತೆ ತನ್ನ ಪ್ರಭಾವವನ್ನು ಸಾಬೀತುಪಡಿಸಿದೆ" ಎನ್ನುತ್ತಾರೆ ಟಿಎಸ್‌ಐ ಜೊತೆ ಮಾತನಾಡಿದ ಸೇಂಟ್ ಪೀಟರ್‍ಸ್‌ಬರ್ಗ್‌ನ ತಟಸ್ಥ ವಿದೇಶಾಂಗ ವ್ಯವಹಾರ ವಿಶ್ಲೇಷಕ ಫಿಯೋದರ್ ಲಕಿಯನೊವ್.

ಎಸ್‌ಸಿಒ ನಿರ್ದೇಶನಗಳ ಪ್ರಕಾರ ಪ್ರತಿಯೊಂದು ನಿರ್ಧಾರಗಳನ್ನು ಒಮ್ಮತಾಭಿಪ್ರಾಯದಿಂದ ಮಾತ್ರ ನಿರ್ಣಯಿಸಬೇಕು ಮತ್ತು ಪ್ರತಿ ಸದಸ್ಯರೂ ವಿಟೋ ಮೂಲಕ ತಮ್ಮ ಅಧಿಕಾರವನ್ನು ಪ್ರಯೋಗಿಸಬಹುದು. ಹಾಗಾಗಿ ಈ ಬಾರಿ ಎಲ್ಲಾ ಸದಸ್ಯ ರಾಷ್ಟ್ರಗಳೂ ರಷ್ಯಾದ ಹಾದಿಯನ್ನೇ ತುಳಿದಿವೆ ಎನ್ನಬಹುದು. ಈ ಸಂಘಟನೆಗೆ ಮಧ್ಯ ಏಷ್ಯಾದಲ್ಲಿ ದೃಢವಾದ ಭೌಗೋಳಿಕ ಹರವು ಇದೆ. ಈ ಪ್ರಾಂತೀಯ ಪ್ರಾಮುಖ್ಯವನ್ನು ಅರಿತ ಕಾರಣದಿಂದಲೇ ಚೀನಾ ಮತ್ತು ರಷ್ಯಾ ಅದರ ಸದಸ್ಯತ್ವ ಪಡೆದಿದ್ದಾರೆ.

ಎಸ್‌ಸಿಒನಲಿ ಪ್ರಾಬಲ್ಯ ಮೆರೆದ ಮೇಲೆ ರಷ್ಯಾ ಮತ್ತೊಂದು ಕ್ರೆಮ್ಲಿನ್ ಪ್ರಭಾವವಿರುವ ಪ್ರಾಂತೀಯ ಸಭೆಗೆ ವ್ಯವಸ್ಥೆ ಮಾಡಿಕೊಳ್ಳುತ್ತಿದೆ. ‘ಕಲೆಕ್ಟಿವ್ ಸೆಕ್ಯುರಿಟಿ ಟ್ರೀಟಿ ಆರ್ಗನೈಸೇಷನ್’ (ಸಮಗ್ರ ಭದ್ರತಾ ಒಪ್ಪಂದ ಸಂಘಟನೆ) ಜೊತೆಗೂ ಜಂಟಿ ಒಪ್ಪಂದವೊಂದಕ್ಕೆ ಸಹಿ ಹಾಕುವ ತರಾತುರಿಯಲ್ಲಿದೆ. ಈ ಸಂಘಟನೆಯಲ್ಲಿ ಎಲ್ಲಾ ಮಧ್ಯ ಏಷ್ಯಾ ರಾಷ್ಟ್ರಗಳು ಮತ್ತು ಬೆಲಾರಸ್ ಹಾಗೂ ಅರ್ಮೆನಿಯಗಳು ಸದಸ್ಯತ್ವ ಪಡೆದಿವೆ. ಇಲ್ಲಿ ವಿಜಯ ಸಾಧಿಸುವುದು ರಷ್ಯಾಗೆ ನೀರು ಕುಡಿದಷ್ಟು ಸುಲಭ. ಪ್ರಸ್ತುತ ಈ ಸಂಘಟನೆಯ ಅಧ್ಯಕ್ಷ ಸ್ಥಾನದಲ್ಲಿರುವ ಬೆಲಾರಸ್ ಮೊದಲಿನಿಂದಲೇ ರಷ್ಯಾಗೆ ನಂಬಿಕಸ್ಥ ಮಿತ್ರ ರಾಷ್ಟ್ರ. ಹಾಗೆಯೇ ಅಜರ್‌ಬಾಯ್‌ಜಾನ್ ಸಂಘರ್ಷದಲ್ಲಿ ಕಾರ್ಯತಾಂತ್ರಿಕ ಮತ್ತು ನೈತಿಕ ಬೆಂಬಲ ನೀಡಿದ ರಷ್ಯಾ ಅರ್ಮೆನಿಯಾಗೆ ಮಿತ್ರ ರಾಷ್ಟ್ರವೇ. ಹಾಗಿದ್ದರೆ ರಷ್ಯಾದ ಮುಂದಿನ ಗುರಿ ಯಾವುದು? ಇರಾನ್?!

ಟಿಎಸ್‌ಐ

 ಸೌರಭ್ ಕುಮಾರ್ ಶಾಹಿ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .