ಇದು ನಮ್ಮ ವಿಶೇಷ ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
 
 
ಪತ್ರ ಚರಿತ್ರೆ
ನೆಹರೂಗೆ ಮೌಂಟ್ ಬ್ಯಾಟನ್ ಪತ್ರ
 

ಜಮ್ಮು-ಕಾಶ್ಮೀರದ ಬುಡಕಟ್ಟು ಜನಾಂಗದ ದಾಳಿಯ ಸಂದರ್ಭದಲ್ಲಿ ಲಾರ್ಡ್ ಮೌಂಟ್ ಬ್ಯಾಟನ್ ಅವರು ಆಗಿನ ಪ್ರಧಾನಿ ಜವಹರಲಾಲ್ ನೆಹರೂ ಅವರಿಗೆ ಬರೆದ ಪತ್ರ ಇಲ್ಲಿದೆ. ಭಾರತದ ಗವರ್ನರ್ ಜನರಲ್ ಆಗಿದ್ದ ಮೌಂಟ್ ಬ್ಯಾಟನ್ ಅವರು ಬುಡಕಟ್ಟು ದಾಳಿ ಮತ್ತು ಪಾಕಿಸ್ತಾನ ಇದಕ್ಕೆ ನೀಡಿದ ರಹಸ್ಯ ಬೆಂಬಲದ ಕುರಿತು ಚರ್ಚಿಸಲು ಪಾಕಿಸ್ತಾನ ಪ್ರಧಾನಿ ಲಿಯಾಖತ್ ಅಲಿ ಖಾನ್ ಅವರನ್ನು ಭೇಟಿಯಾಗಿದ್ದರು. ಆದರೆ ಮೌಂಟ್ ಬ್ಯಾಟನ್ ಭಾರತದ ಪರ ವಹಿಸಿ ಅಮೃತಸರ ಹಾಗೂ ಗುರುದಾಸ್‌ಪುರ್ ಜಿಲ್ಲೆಗಳು ಪಾಕಿಸ್ತಾನಕ್ಕೆ ಸೇರದಂತೆ ಮಾಡಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಲಿಯಾಖತ್ ಅಲಿ ಖಾನ್ ಅವರಿಂದಾಗಿ ಮಾತುಕತೆ ವಿಫಲವಾಯಿತು. ಶಾಂತಿ ಸ್ಥಾಪನೆ ಅಸಾಧ್ಯ ಎನ್ನಿಸಿ ಭಾರತ ವಿಶ್ವಸಂಸ್ಥೆ ಮೊರೆ ಹೋಯಿತು. ಅದು ಯಥಾಸ್ಥಿತಿ ಕಾಪಾಡಿಕೊಳ್ಳಿ ಎಂದು ಎರಡೂ ದೇಶಗಳಿಗೆ ಸೂಚಿಸಿತು.

2 ನವೆಂಬರ್ 1947, ನವದೆಹಲಿ

ಆತ್ಮೀಯ ಪ್ರಧಾನ ಮಂತ್ರಿಯವರೇ,

ಲಿಯಾಖತ್ ಅಲಿ ಖಾನ್ ಹಾಗೂ ಜಿನ್ನಾ ಅವರೊಂದಿಗೆ ಜಂಟಿ ಮಾತುಕತೆಯನ್ನು ಸಾಧ್ಯವಾದಷ್ಟು ಪಾರದರ್ಶಕವಾಗಿ ಪುನರ್ ವ್ಯವಸ್ಥೆಗೊಳಿಸಲು ನಾನು ಮತ್ತು ಇಸ್ಮಾಯ್ ದಿನದ ಬಹಳ ಸಮಯವನ್ನು ವ್ಯಯಿಸುತ್ತಿದ್ದೇವೆ. ಜಿನ್ನಾ ಅವರ ಜೊತೆಗೆ ಮೂರು ಗಂಟೆಗೂ ಮೀರಿ ಮಾತುಕತೆ ನಡೆಸಿದ್ದೇವೆ. ನೀವು ಉಪ ಪ್ರಧಾನಮಂತ್ರಿ ಅವರಿಗೆ ಈ ವರದಿ ತೋರಿಸಿದಲ್ಲಿ ಸಂತೋಷವೇ, ಆದರೆ ನನ್ನನ್ನು ಸಂಪರ್ಕಿಸದೆ ಇನ್ನಾರಿಗೂ ವರದಿ ತೋರಿಸದಿದ್ದರೆ ಒಳಿತು. ಏಕೆಂದರೆ ನಮ್ಮ ಸಂಪೂರ್ಣ ಮಾತುಕತೆಯೇ ಅನಧಿಕೃತ. ಪಾಕಿಸ್ತಾನ ಸರ್ಕಾರದ ಪ್ರತಿನಿಧಿ ನಿಶ್ತಾರ್ ಮತ್ತು ಸಂಪೂರ್ಣ ಜೆ.ಡಿ.ಸಿ. ಪಾಕಿಸ್ತಾನ ಪ್ರಧಾನಮಂತ್ರಿಗಳ ನಿವಾಸಕ್ಕೆ ತೆರಳಿ ಅವರ ಮಲಗುವ ಕೊಠಡಿಯಲ್ಲೇ ಮಾತುಕತೆ ಮುಂದುವರಿಸಿದ್ದರಿಂದಾಗಿ ಯೋಜನೆಯಲ್ಲಿದ್ದ 26 ಅಂಶಗಳಲ್ಲಿ 24ನ್ನು ಕೈ ಬಿಡಬೇಕಾಯಿತು. ತಮ್ಮ ಮಂಡಿಯ ಮೇಲೆ ರಗ್ಗು ಹೊದ್ದುಕೊಂಡಿದ್ದ ಲಿಯಾಖತ್ ಇನ್ನೂ ಗುಣಮುಖರಾದಂತೆ ಕಾಣುತ್ತಿರಲಿಲ್ಲ.

ಎರಡು ವಿವಾದಾತ್ಮಕ ಅಂಶಗಳು ಇತ್ಯರ್ಥವಾದ ನಂತರ ಲಿಯಾಖತ್ ಅಲಿ ಖಾನ್, ಲಾರ್ಡ್ ಇಸ್ಮಾಯ್ ಮತ್ತು ನನ್ನನ್ನು ಹೊರತು ಪಡಿಸಿ ಎಲ್ಲರೂ ಕೋಣೆಯಿಂದ ಹೊರ ನಡೆದರು. ನಾನು ಕಾಶ್ಮೀರದಲ್ಲಾದ ಘಟನಾವಳಿಗಳ ಕುರಿತು ಭಾರತೀಯ ಸೇನಾ ಮುಖ್ಯಸ್ಥರು ನೀಡಿದ ಹೇಳಿಕೆಗಳನ್ನು ಅವರೆದುರು ಹೇಳಲಾರಂಭಿಸಿದೆ. ಲಿಯಾಖತ್ ಅಲಿ ಖಾನ್ ವಾದದ ಸಾರಾಂಶ ಎಂದರೆ, ಮಹಾರಾಜ ಅವರು ಪಾಕಿಸ್ತಾನದೊಂದಿಗೆ ಯಾವುದೇ ವಿಧದ ಮಾತುಕತೆ ಅಥವಾ ಚರ್ಚೆ ನಡೆಸಲು ನಿರಾಕರಿಸಿದ್ದಾರೆ. ಅಲ್ಲದೆ ಹಿಂದೂಗಳು ಮತ್ತು ಬಹುಮುಖ್ಯವಾಗಿ ರಾಜ್ಯದ ಸೇನಾಬಲ ಬಳಸಿಕೊಂಡು ಪೂಂಚ್, ಮೀರ್‌ಪುರ್ ಮತ್ತು ಜಮ್ಮುವಿನ ಗಡಿಯಾಚೆ ಮುಸ್ಲಿಮರ ಹತ್ಯಾಕಾಂಡಕ್ಕೆ ಇಳಿದಿರುವುದು ಗಂಭೀರ ಬಿಕ್ಕಟ್ಟು ಸೃಷ್ಟಿಸಿದೆ. ಬುಡಕಟ್ಟು ಜನಾಂಗ ಇದನ್ನು ಸಹಿಸಲಿಲ್ಲ ಮತ್ತು ಶ್ರೀನಗರ ದಾಳಿಗೆ ಇದೇ ಮೂಲ. ಪಾಕಿಸ್ತಾನ ಸರ್ಕಾರದ ಅರಿವಿಗೇ ಬರದಂತೆ ಅಫ್ರಿದಿ ಮತ್ತು ಮಹಸೂದರು ಪೇಶಾವರದಾಚೆಯಿಂದ ಇಲ್ಲಿಗೆ ಪ್ರವೇಶಿಸಿದ್ದಾರೆ ಎಂಬುದನ್ನು ನಾವು ನಂಬಬೇಕೆ ಎಂಬ ಪ್ರಶ್ನೆ ಕೇಳಿದೆ. ತಮಗೆ ಇದರ ಅರಿವಿತ್ತು ಎಂಬ ಅಂಶವನ್ನು ಅವರು ಅಲ್ಲಗಳೆಯಲಿಲ್ಲ. ಆದರೆ ಹೀಗೆ ಮಧ್ಯಪ್ರವೇಶವಾಗದಿದ್ದಲ್ಲಿ ಬುಡಕಟ್ಟು ಜನಾಂಗದ ನೇತೃತ್ವದಲ್ಲಿ ನಡೆದ ಹೋರಾಟ ಇನ್ನೂ ತೀವ್ರ ಸ್ವರೂಪ ತಾಳುತ್ತಿತ್ತು ಎಂದು ಸಮರ್ಥಿಸಿಕೊಂಡರು. ಜನಮತದ ಬಗ್ಗೆ ನಾನು ನಮ್ಮ ಸರ್ಕಾರದ ಪ್ರಾಮಾಣಿಕ ನಿಲುವನ್ನು ವಿವರಿಸಿದ್ದಲ್ಲದೆ, ಜುನಾಗಢ್ ಪ್ರದೇಶವನ್ನೂ ಒಳಗೊಂಡ ಕರಡು ಪ್ರತಿ ತೋರಿಸಿದೆ.

ಲಿಯಾಖತ್ ಮತ್ತು ಜಿನ್ನಾ ಅವರ ಮಾತುಕತೆಯಿಂದ ಒಂದು ವಿಚಾರ ನಮಗೆ ಸ್ಪಷ್ಟವಾಯಿತು. ಕಾಶ್ಮೀರದ ಮೇಲಿನ ಹಕ್ಕುದಾರಿಕೆಗೆ ಸುದೀರ್ಘ ಕಾರ್ಯತಂತ್ರಗಳ ಬಳಿಕ ರೂಪಿಸಿದ ದೊಡ್ಡ ಹುನ್ನಾರವಿದು ಎಂಬ ಭಾವನೆ ಅವರಿಬ್ಬರಲ್ಲೂ ಇತ್ತು. ಈ ಭ್ರಮೆಯನ್ನು ದೂರ ಸರಿಸಲು ನಾವು ಬಹಳ ಪ್ರಯತ್ನಪಟ್ಟೆವಾದರೂ, ಎಷ್ಟರಮಟ್ಟಿಗೆ ಯಶಸ್ಸು ಸಾಧಿಸಿದೆವು ಎಂದು ಹೇಳುವುದು ಕಷ್ಟ. ನಾನು ಮಾತುಕತೆಯ ತಳಹದಿಯಾಗಬಹುದಾದ ಒಂದು ಟಿಪ್ಪಣಿಯನ್ನು ಈ ಪತ್ರದ ಜೊತೆ ಇರಿಸಿದ್ದೇನೆ. ಹಾಗೆಯೇ ಈ ಪೈಪೋಟಿ ನಿಲ್ಲಿಸುವಂತೆ ಟೆಲಿಗ್ರಾಂ ಮೂಲಕ ನೀವು ಲಿಯಾಖತ್ ಅವರಿಗೆ ಪ್ರಸ್ತಾಪ ಕಳುಹಿಸಿ ಎಂಬ ಸಲಹೆ ನೀಡಲಿಚ್ಛಿಸುತ್ತೇನೆ. ನಾಳೆ ಬೆಳಿಗ್ಗೆ ರಕ್ಷಣಾ ಸಮಿತಿ ಜೊತೆ ಚರ್ಚೆ ನಡೆಸಿದ ನಂತರ ನೀವು ಮತ್ತು ಉಪ ಪ್ರಧಾನಿ ಈ ಕುರಿತು ನಿರ್ಧರಿಸಬಹುದು.

ಈಗಷ್ಟೇ ನಾನು ನಿಮ್ಮ ರೇಡಿಯೋ ಭಾಷಣ ಓದಿದೆ. ಜಿನ್ನಾ ಅವರ ಹೇಳಿಕೆಗೆ ವ್ಯತಿರಿಕ್ತವಾಗಿದ್ದ ನಿಲುವನ್ನು ಕೇಳಿ ಮೆಚ್ಚುಗೆಯಾಯಿತು. ಇದಕ್ಕಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ.

ನಿಮ್ಮ ವಿಶ್ವಾಸಿ,
ಮೌಂಟ್ ಬ್ಯಾಟನ್

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .