ಇದು ನಮ್ಮ ವಿಶೇಷ ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ದೇಸಿ ದನಿ
 
 

ಮೂಲಸೌಕರ್ಯ: ಹಂಪಿ

ಕೋಟಿ ಸುರಿದರೂ ಕೊಂಪೆಯೇ!

ವಿಶ್ವ ಪಾರಂಪರಿಕ ತಾಣ ಹಂಪಿಯ ಐತಿಹಾಸಿಕ ಸ್ಮಾರಕಗಳು ಮುಂಬರುವ ದಶಕದಲ್ಲಿ ಕಣ್ಮರೆಯಾಗಲಿವೆಯೇ? ಹಂಪಿ ಸಂರಕ್ಷಣೆ, ಅಭಿವೃದ್ಧಿ ಕುರಿತು ಪುಂಖಾನುಪುಂಖವಾಗಿ ಬರುತ್ತಿರುವ ಭಾಷಣಗಳ ಮಧ್ಯೆ ಈ ಪ್ರಶ್ನೆ ಅಪ್ರಸ್ತುತವೇನಲ್ಲ.

ವಿಶ್ವದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುವ ಹಂಪಿಯಲ್ಲಿ ಪ್ರವಾಸಿಗರಿಗೆ ರಸ್ತೆ, ವಸತಿ ಮುಂತಾದ ಮೂಲಸೌಕರ್ಯಗಳು ಕೂಡ ಗಗನಕುಸುಮವಾಗಿವೆ. 1986ರಲ್ಲಿ ವಿಶ್ವಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡ ಹಂಪಿ, ಮುಂದಿನ ದಿನಗಳಲ್ಲಿ ಈ ಸ್ಥಾನವನ್ನು ಉಳಿಸಿಕೊಳ್ಳಲು ತೀರಾ ಹೆಣಗಾಡಿತ್ತು. ಹಾಗೇ ಹಂಪಿಯನ್ನು ’ಅಪಾಯದ ಅಂಚಿನಲ್ಲಿರುವ ಅಪರೂಪದ ತಾಣ’ ಎಂಬುದಾಗಿ ಯುನೆಸ್ಕೊ ಬ್ರಾಂಡ್ ಮಾಡಿದಾಗ ಈ ಲೇಬಲ್ ತೆಗೆದುಹಾಕಲು ಹರಸಾಹಸಪಡಬೇಕಾಯಿತು. ಅಂತೂ ಹೇಗೋ ಹಂಪಿ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಇದೀಗ ಭದ್ರ ಸ್ಥಾನ ಪಡೆದುಕೊಂಡಿದೆ. ಆದರೆ, ಮೂಲಸೌಲಭ್ಯಗಳ ವಿಷಯದಲ್ಲಿ ಮಾತ್ರ ಹಂಪಿ ಇಂದಿಗೂ ಹಾಳು ಕೊಂಪೆಯೇ!

ಹಂಪಿಯ ಐತಿಹಾಸಿಕ ಸ್ಥಳ ಮತ್ತು ಸ್ಮಾರಕ ಅಭಿವೃದ್ಧಿಗೆ ರಾಜ್ಯ ಪುರಾತತ್ವ ಇಲಾಖೆ 2006- 2007 ಮತ್ತು 2007- 2008ನೇ ಸಾಲಿಗೆ ರಾಜ್ಯ ಸರ್ಕಾರದಿಂದ ಪಡೆದ ಅನುದಾನ ಕ್ರಮವಾಗಿ ರೂ. 75 ಲಕ್ಷ ಮತ್ತು ರೂ. 73 ಲಕ್ಷ. ಪ್ರಸಕ್ತ ವರ್ಷ ರಾಜ್ಯ ಪುರಾತತ್ವ ಇಲಾಖೆ ರೂ. 95 ಲಕ್ಷ ಅನುದಾನ ಪಡೆದಿದೆ. ಆದರೆ, ನೀವು ಹಂಪಿಗೆ ಭೇಟಿ ನೀಡಿದರೆ, ಇಂತಹ ಅನುದಾನ ಬಳಕೆಯಾದ ಯಾವ ಕುರುಹುಗಳೂ ಅಲ್ಲಿ ಸಿಗಲಾರವು. ಚಿತ್ರದುರ್ಗದಿಂದ ಹಂಪಿಗೆ ಹೋಗುವ 140 ಕಿ.ಮೀ. ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಸಾವಿರಾರು ಅತಿಭಾರದ ಗಣಿ ಲಾರಿಗಳು ಹಗಲು- ರಾತ್ರಿ ಸಂಚರಿಸುತ್ತವೆ. ಪರಿಣಾಮವಾಗಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸಾಮಾನ್ಯ ವಾಹನಗಳೂ ಸಂಚರಿಸಲಾಗದ ದುಸ್ಥಿತಿಯಿದೆ.

ಮೂರು ವರ್ಷಗಳ ಹಿಂದೆ ಹಂಪಿಯ ಅಭಿವೃದ್ಧಿಗಾಗಿಯೇ ಅಸ್ತಿತ್ವಕ್ಕೆ ಬಂದಿರುವ ಹಂಪಿ ಅಭಿವೃದ್ಧಿ ಪ್ರಾಧಿಕಾರ ಈಗಾಗಲೇ ರೂ. 93 ಕೋಟಿ ರೂ. ವೆಚ್ಚದ ‘ಮಾಸ್ಟರ್ ಪ್ಲಾನ್’ ಕೈಗೆತ್ತಿಕೊಂಡಿದೆ. ‘ರಾಜ್ಯ ಸರ್ಕಾರ ಈಗಾಗಲೇ ಮಾಸ್ಟರ್ ಪ್ಲಾನ್‌ಗೆ ರೂ. 12 ಕೋಟಿ ಬಿಡುಗಡೆ ಮಾಡಿದ್ದು, ಕೇಂದ್ರ ಸರ್ಕಾರಕ್ಕೆ ಉಳಿದ ರೂ. 81 ಕೋಟಿ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಸ್ತೆ ಅಭಿವೃದ್ಧಿ, ಪ್ರವಾಸಿಗರಿಗೆ ಮೂಲಸೌಕರ್ಯ ವ್ಯವಸ್ಥೆ, ಭದ್ರತಾ ವ್ಯವಸ್ಥೆಯನ್ನು ಸಮರ್ಪಕ ರೀತಿಯಲ್ಲಿ ಒದಗಿಸಲು ಪ್ರಯತ್ನಿಸಲಾಗುವುದು" ಎನ್ನುತ್ತಾರೆ ಪ್ರಾಧಿಕಾರದ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ಬಿ. ಶಿವಪ್ಪ. “ಏಷ್ಯನ್ ಡೆವಲಪ್‌ಮೆಂಟ್ ಪ್ರಾಜೆಕ್ಟ್’ ಅಡಿ ಹಂಪಿ ಅಭಿವೃದ್ಧಿಗೆ ರೂ. 2.4 ಕೋಟಿ ಅನುದಾನ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸದ್ಯದಲ್ಲಿಯೇ ಈ ಹಣವೂ ಬಿಡುಗಡೆಯಾಗಲಿದೆ” ಎನ್ನುತ್ತಾರೆ ಅವರು.

ಆದರೆ, ಹಂಪಿಯ ಸಮೀಪದ ಕಮಲಾಪುರದಲ್ಲಾಗಲೀ, ಹೊಸಪೇಟೆಯಲ್ಲಾಗಲೀ ಉತ್ತಮ ವಸತಿಗೃಹಗಳ ಲಭ್ಯತೆ ತೀರಾ ವಿರಳ. ಜಾಗತಿಕ ಮಹತ್ವದ ಈ ತಾಣಕ್ಕೆ ಆಗಮಿಸುವ ಪ್ರವಾಸಿಗರಿಗೆ ಇಲ್ಲಿಗೆ ತಲುಪುವುದು ದುಸ್ತರವಾದರೆ, ವಾಸ್ತವ್ಯಕ್ಕೆ ಮತ್ತೆ ಪರದಾಡಬೇಕಾದ ಸ್ಥಿತಿ.

ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರಿಗೆ ಅನುಕೂಲವಾಗುವಂತೆ ಸಮರ್ಪಕ ಹೊಟೇಲ್, ವಸತಿ ಗೃಹ, ಐಷಾರಾಮಿ ರೈಲುಗಳನ್ನು ಒದಗಿಸುವುದಾಗಿ ಹೇಳಿದ್ದರೂ, ಅದಿನ್ನೂ ಭರವಸೆಯಾಗೇ ಉಳಿದಿದೆ. ಸಿಬ್ಬಂದಿಗಳ ಕೊರತೆಯಿಂದಾಗಿ ಹಂಪಿಯಲ್ಲಿ ವಿಗ್ರಹ ಧ್ವಂಸ ಪ್ರಕರಣಗಳೂ ಇತ್ತೀಚೆಗೆ ಹೆಚ್ಚುತ್ತಿವೆ. ಇನ್ನು ಕುಡಿದು ತೂರಾಡುತ್ತಾ, ಇಸ್ಪೀಟ್ ಆಡುತ್ತಾ ಪ್ರವಾಸಿಗರಿಗೆ ಕಿರಿಕಿರಿಯುಂಟುಮಾಡುವುದು ಇಲ್ಲಿನ ವಿಶೇಷವಾಗಿಬಿಟ್ಟಿದೆ! ಕರ್ನಾಟಕದಲ್ಲಿ ಅತಿ ಹೆಚ್ಚು ಮಂದಿ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ತಾಣವಾಗಿರುವ ಹಂಪಿಯ ಅವ್ಯವಸ್ಥೆಗಳ ಪಟ್ಟಿ ಹೀಗೆ ಬೆಳೆಯುತ್ತಲೇ ಹೋಗುವುದು ಜಾಗತಿಕ ಪ್ರವಾಸೋದ್ಯಮ ನಕ್ಷೆಯಲ್ಲಿ ರಾಜ್ಯವನ್ನು ಗುರುತಿಸುವ ಮಾತನಾಡುವ ಸರ್ಕಾರ ಮತ್ತು ಪ್ರವಾಸೋದ್ಯಮ ಸಚಿವರ ಕಣ್ಣು ತೆರೆಸಿದಂತೆ ಕಾಣುತ್ತಿಲ್ಲ. ಹಂಪಿ ಆಡಳಿತ ಮಂಡಳಿ ನಿರ್ವಹಣೆಗೆ ಹಂಪಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಈ ಬಾರಿ ರೂ. 28 ಲಕ್ಷ, ಕಳೆದ ವರ್ಷ ರೂ. 25 ಲಕ್ಷ ಮತ್ತು ಡಿಆರ್‌ಪಿಯಡಿಯಲ್ಲಿ ರಾಜ್ಯ ಸರ್ಕಾರ ಮತ್ತು ಪ್ರವಾಸೋದ್ಯಮ ಇಲಾಖೆ 495 ಲಕ್ಷವನ್ನು ನಿರ್ವಹಣೆಗಾಗಿಯೇ ನೀಡಿದೆ. ಹೀಗಿದ್ದರೂ ಇಲ್ಲಿ ಭದ್ರತಾ ವ್ಯವಸ್ಥೆ ಇದೆ ಎಂಬುದೇ ಕಣ್ಣಿಗೆ ಕಾಣದು.

ಇಂತಹ ಅವ್ಯವಸ್ಥೆಯ ನಡುವೆಯೇ, ಪ್ರತಿ ವರ್ಷದಂತೆ ಮುಂದಿನ ನವೆಂಬರ್ ಮೊದಲ ವಾರದಲ್ಲಿ ನಡೆಯಲಿರುವ ಹಂಪಿ ಉತ್ಸವಕ್ಕೆ ಸರ್ಕಾರ ಒಂದು ಕೋಟಿ ರೂ ಬಿಡುಗಡೆ ಮಾಡಿದೆ. ರಾಜ್ಯ ಪ್ರವಾಸೋದ್ಯಮ ಇಲಾಖೆ ಸಚಿವ, ಜಿ. ಜನಾರ್ದನ ರೆಡ್ಡಿ, "ಪ್ರಸಕ್ತ ವರ್ಷದ ಹಂಪಿ ಉತ್ಸವವನ್ನು ಮೈಸೂರಿನ ದಸರಾ ಮಾದರಿಯಲ್ಲೇ ಅದ್ದೂರಿಯಾಗಿ ನಡೆಸಲಾಗುವುದು. ವಿಶ್ವ ಪಾರಂಪರಿಕ ತಾಣವನ್ನು ಅಭಿವೃದ್ಧಿಗೊಳಿಸಲು ಸರ್ಕಾರ ಯೋಜನೆ ಕೈಗೊಳ್ಳಲಿದೆ" ಎಂದಿದ್ದಾರೆ.

ಆದರೆ, ಪ್ರತಿ ವರ್ಷ ಉತ್ಸವಕ್ಕೆ ರೂ. 1 ಕೋಟಿ ಬಿಡುಗಡೆ ಮಾಡಿ ಕೈತೊಳೆದುಕೊಳ್ಳುವ ರಾಜ್ಯ ಸರ್ಕಾರ, ಹಂಪಿಯ ಮೂಲಸೌಕರ್ಯಗಳ ಕೊರತೆ ಕುರಿತೂ ಒಂದಿಷ್ಟು ತಲೆಕೆಡಿಸಿಕೊಂಡಿದ್ದರೆ ಪರಿಸ್ಥಿತಿ ಹೀಗಿರುತ್ತಿರಲಿಲ್ಲ.

ಟಿಎಸ್‌ಐ

ಚಿತ್ರಾ ಕರ್ಕೇರಾ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .